ಕೃತ್ಯ ಹಾಗೂ ಭಯೋತ್ಪಾದನೆಯ ವ್ಯಾಖ್ಯಾನ

ಸೋಮವಾರ, ಜೂನ್ 17, 2019
26 °C

ಕೃತ್ಯ ಹಾಗೂ ಭಯೋತ್ಪಾದನೆಯ ವ್ಯಾಖ್ಯಾನ

Published:
Updated:
ಕೃತ್ಯ ಹಾಗೂ ಭಯೋತ್ಪಾದನೆಯ ವ್ಯಾಖ್ಯಾನ

ಅಮೆರಿಕದ ಲಾಸ್ ವೇಗಸ್ ನಗರದಲ್ಲಿ ಕೆಲವು ದಿನಗಳ ಹಿಂದೆ ವ್ಯಕ್ತಿಯೊಬ್ಬ 58 ಜನರನ್ನು ಹತ್ಯೆ ಮಾಡಿದ. ಜನರ ಗುಂಪಿನ ಮೇಲೆ ಮೆಷಿನ್‌ ಗನ್‌ನಿಂದ ಒಂದು ಗಂಟೆಗೂ ಹೆಚ್ಚು ಕಾಲ ಗುಂಡು ಹಾರಿಸಿದ ಆತ ಐನೂರಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ. ಈ ವ್ಯಕ್ತಿ ಏಕಾಂಗಿಯಾಗಿ ಇಂತಹ ಕೆಲಸ ಮಾಡಿರುವ ಕಾರಣ ಅದು ಭಯೋತ್ಪಾದನಾ ಕೃತ್ಯ ಅಲ್ಲ ಎಂದು ಅಮೆರಿಕದ ಪೊಲೀಸರು ಹೇಳಿದರು. ಇಲ್ಲಿ ಜನರನ್ನು ಹತ್ಯೆ ಮಾಡಿದ ವ್ಯಕ್ತಿ ಕ್ರೈಸ್ತ. ಆ ವ್ಯಕ್ತಿ ಒಂದು ವೇಳೆ ಮುಸ್ಲಿಮನಾಗಿದ್ದಿದ್ದರೆ ಪೊಲೀಸರು ಇದೇ ಮಾತು ಹೇಳುತ್ತಿದ್ದರೇ? ಇದೇ ಮಾತು ಹೇಳುತ್ತಿದ್ದರು ಎಂದು ನನಗಂತೂ ಅನಿಸುತ್ತಿಲ್ಲ.

ಜನರನ್ನು ಹತ್ಯೆ ಮಾಡಿದ ವ್ಯಕ್ತಿಯ ಬಗ್ಗೆಯಾಗಲಿ, ಅವನ ಉದ್ದೇಶಗಳ ಬಗ್ಗೆಯಾಗಲಿ ಹೆಚ್ಚು ವಿವರ ಲಭ್ಯವಿಲ್ಲ. ಹಾಗಾಗಿ ಆತ ಎಸಗಿದ್ದು ಭಯೋತ್ಪಾದನಾ ಕೃತ್ಯವಲ್ಲ ಎಂಬ ಮಾತು ಪರಿಶೀಲನೆಗೆ ಒಳಗಾಗಬೇಕು. ಇದರ ಜೊತೆಯಲ್ಲೇ, ನಾವು ಭಯೋತ್ಪಾದನೆಯನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತೇವೆ ಎಂಬ ಬಗ್ಗೆಯೂ ಅವಲೋಕನ ಆಗಬೇಕು.

ನನ್ನ ಬಳಿ ಇರುವ ಶಬ್ದಕೋಶವು ಭಯೋತ್ಪಾದನೆಯನ್ನು ‘ರಾಜಕೀಯ ಗುರಿ ಈಡೇರಿಸಿಕೊಳ್ಳಲು ಅಕ್ರಮವಾಗಿ ಹಿಂಸೆಗೆ ಇಳಿಯುವುದು ಹಾಗೂ ಭೀತಿ ಮೂಡಿಸುವುದು, ಅದರಲ್ಲೂ ಮುಖ್ಯವಾಗಿ ನಾಗರಿಕರ ಮೇಲೆ ಹಿಂಸೆ ನಡೆಸುವುದು, ಅವರಲ್ಲಿ ಭೀತಿ ಮೂಡಿಸುವುದು’ ಎಂದು ವ್ಯಾಖ್ಯಾನಿಸುತ್ತದೆ. ಕೋಮು ಹಿಂಸಾಚಾರಗಳು ಈ ವ್ಯಾಖ್ಯಾನಕ್ಕೆ ಸರಿಯಾಗಿ ಹೊಂದಿಕೆ ಆಗುತ್ತವೆ. ಏಕೆಂದರೆ ಅಂತಹ ಹಿಂಸಾಚಾರಗಳು ಅಕ್ರಮ, ಜನರಲ್ಲಿ ಭೀತಿ ಮೂಡಿಸುವ ಉದ್ದೇಶ ಹೊಂದಿರುತ್ತವೆ, ನಾಗರಿಕರನ್ನು ಗುರಿಯಾಗಿಸಿಕೊಂಡಿರುತ್ತವೆ ಮತ್ತು ರಾಜಕೀಯ ಉದ್ದೇಶವನ್ನು ಹೊಂದಿರುತ್ತವೆ.

ಆದರೆ ನಮ್ಮಲ್ಲಿ ಬಹುತೇಕರು ಕೋಮು ಹಿಂಸಾಚಾರವನ್ನು ಭಯೋತ್ಪಾದನೆ ಎಂದು ಕರೆಯುವುದಿಲ್ಲ. 1984ರಲ್ಲಿ ನಡೆದ ಸಿಖ್ ಹತ್ಯಾಕಾಂಡವನ್ನು ಗಲಭೆ ಎಂದು ಕರೆಯಲಾಯಿತು. ಮುಜಫ್ಫರ್‌ನಗರದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆದ ಹಿಂಸಾಚಾರ ಕೂಡ ಗಲಭೆ ಎಂದು ಕರೆಸಿಕೊಂಡಿತು. ಬಾಬ್ರಿ ಮಸೀದಿ ಧ್ವಂಸದ ನಂತರ ಮುಂಬೈನಲ್ಲಿ ನೂರಾರು ಮುಸ್ಲಿಮರು ಹತ್ಯೆಯಾದ ಹಿಂಸಾಚಾರ ಕೂಡ ಗಲಭೆ. ಆದರೆ, ಇದಾದ ನಂತರ ಪ್ರತೀಕಾರದ ರೂಪದಲ್ಲಿ ನಡೆದ ಬಾಂಬ್‌ ದಾಳಿಗಳನ್ನು ಭಯೋತ್ಪಾದನೆ ಎನ್ನಲಾಯಿತು. ಅಹಮದಾಬಾದ್‌ನ ನರೋಡಾ ಪಾಟಿಯಾದಲ್ಲಿ 2002ರಲ್ಲಿ ನಡೆದ 97 ಮುಸ್ಲಿಮರ ಹತ್ಯೆ ಒಂದು ಗಲಭೆ ಎಂದೂ, ಅದೇ ವರ್ಷ ಅಹಮದಾಬಾದ್‌ನ ಅಕ್ಷರಧಾಮದಲ್ಲಿ ನಡೆದ 30 ಹಿಂದೂಗಳ ಹತ್ಯೆಯನ್ನು ಭಯೋತ್ಪಾದನೆ ಎಂದು ಕರೆಯಲಾಯಿತು.

‘ನಾಗರಿಕರನ್ನು ಗುರಿಯಾಗಿಸಿಕೊಂಡಿದ್ದು’ ಎಂಬ ಸಾಲು ಎರಡನೆಯ ಸಮಸ್ಯೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಬಹುಪಾಲು ದಾಳಿಗಳು ಸಶಸ್ತ್ರ ಪಡೆಗಳನ್ನು ಗುರಿಯಾಗಿಸಿಕೊಂಡು ನಡೆಯುವಂಥವೇ ವಿನಾ ನಾಗರಿಕರನ್ನು ಗುರಿಯಾಗಿಸಿಕೊಂಡು ಅಲ್ಲ. ಆದರೆ ಆ ದಾಳಿಗಳನ್ನು ನಾವು ಭಯೋತ್ಪಾದಕರ ಕೃತ್ಯ ಎಂದು ಪರಿಗಣಿಸುತ್ತೇವೆ. ‘ರಾಜಕೀಯ ಅಥವಾ ಸಾಮಾಜಿಕ ಗುರಿಯನ್ನು ಸಾಧಿಸಿಕೊಳ್ಳಲು ಬಲ ಹಾಗೂ ಹಿಂಸೆಯನ್ನು ವ್ಯಕ್ತಿ ಅಥವಾ ಆಸ್ತಿಯ ಮೇಲೆ ಅಕ್ರಮವಾಗಿ ಬಳಕೆ ಮಾಡುವುದು, ಸರ್ಕಾರವನ್ನು, ನಾಗರಿಕ ಸಮೂಹವನ್ನು ಅಥವಾ ಅವುಗಳಿಗೆ ಸಂಬಂಧಿಸಿದ ಯಾವುದೇ ಗುಂಪನ್ನು ಬೆದರಿಸುವುದು ಅಥವಾ ಅದರ ಮೇಲೆ ಒತ್ತಡ ತರುವುದು’ ಭಯೋತ್ಪಾದನೆ ಎಂದು ಅಮೆರಿಕದ ಕಾನೂನು ವ್ಯಾಖ್ಯಾನಿಸುತ್ತದೆ.

ಈ ವ್ಯಾಖ್ಯಾನವು ಶಬ್ದಕೋಶದಲ್ಲಿ ಇರುವ ವ್ಯಾಖ್ಯಾನದ ಜೊತೆ ಬಹುತೇಕ ಹೊಂದಿಕೆ ಆಗುತ್ತದೆ. ನಾನು ಈ ಮೊದಲೇ ಹೇಳಿರುವಂತೆ, ಲಾಸ್ ವೇಗಸ್‌ನಲ್ಲಿ ದಾಳಿ ನಡೆಸಿದ ವ್ಯಕ್ತಿಯ ಬಗ್ಗೆ ಹೆಚ್ಚಿನ ವಿವರಗಳು ತಿಳಿದಿಲ್ಲ. ಇಂತಹ ಸ್ಥಿತಿಯಲ್ಲಿ, ಆ ದಾಳಿಯು ಭಯೋತ್ಪಾದನಾ ಕೃತ್ಯ ಅಲ್ಲ ಎಂದು ಪೊಲೀಸರು ಹೇಗೆ ತೀರ್ಮಾನಿಸಿದರು ಎಂಬುದು ಅಸ್ಪಷ್ಟವಾಗಿದೆ. ಏಕೆಂದರೆ, ಆ ವ್ಯಕ್ತಿಯ ರಾಜಕೀಯ ಅಥವಾ ಸಾಮಾಜಿಕ ಉದ್ದೇಶಗಳು ಏನಿದ್ದವು ಎಂಬುದು ಗೊತ್ತಾಗಿಲ್ಲ.

ಭಯೋತ್ಪಾದನೆಯ ವಿರುದ್ಧ ಭಾರತದಲ್ಲಿ ತಂದಿರುವ ಕಾನೂನನ್ನು ಪೋಟಾ (POTA) ಎಂದು ಕರೆಯಲಾಗುತ್ತದೆ. ಇದನ್ನು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ 2002ರಲ್ಲಿ ರೂಪಿಸಿತು. ನಮ್ಮಲ್ಲಿನ ಹಲವು ಕಾನೂನುಗಳಂತೆಯೇ, ಈ ಕಾನೂನನ್ನು ಕೂಡ ಅಷ್ಟೇನೂ ಪರಿಣಾಮಕಾರಿಯಾಗಿ ರೂಪಿಸಿಲ್ಲ. ‘ಯಾವುದೇ ವ್ಯಕ್ತಿ (ಎ) ಭಾರತದ ಏಕತೆ, ಸಮಗ್ರತೆ, ಭದ್ರತೆ ಅಥವಾ ಸಾರ್ವಭೌಮತ್ವವನ್ನು ಹಾಳು ಮಾಡುವ ಉದ್ದೇಶದಿಂದ, ಜನರ ಅಥವಾ ನಿರ್ದಿಷ್ಟ ಗುಂಪಿನ ಜನರ ಮನಸ್ಸಿನಲ್ಲಿ ಭೀತಿಯನ್ನು ಸೃಷ್ಟಿಸುವ ಉದ್ದೇಶದಿಂದ, ಬಾಂಬುಗಳು, ಡೈನಮೈಟ್ ಅಥವಾ ಇತರ ಯಾವುದೇ ಸ್ಫೋಟಕ ವಸ್ತುಗಳನ್ನು ಅಥವಾ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಅಥವಾ ಪಿಸ್ತೂಲು– ಬಂದೂಕುಗಳನ್ನು ಅಥವಾ ಜನರ ಸಾವಿಗೆ ಕಾರಣವಾಗುವ ಶಸ್ತ್ರಾಸ್ತ್ರಗಳನ್ನು ಅಥವಾ ವಿಷಕಾರಿ ವಸ್ತುಗಳನ್ನು ಅಥವಾ ಹಾನಿಕಾರಕ ಅನಿಲಗಳನ್ನು ಅಥವಾ ಇತರ ರಾಸಾಯನಿಕಗಳನ್ನು ಅಥವಾ ಅಪಾಯಕಾರಿಯಾದ ಇತರ ಯಾವುದೇ ವಸ್ತುಗಳನ್ನು (ಅದು ಜೈವಿಕ ವಸ್ತು ಆಗಿರಬಹುದು ಅಥವಾ ಇನ್ಯಾವುದೇ ಬಗೆಯದ್ದಾಗಿರಬಹುದು) ಅಥವಾ ಬೇರೆ ಯಾವುದೇ ವಸ್ತುಗಳನ್ನು ಯಾವುದೇ ರೀತಿಯಲ್ಲಿ ಜನರ ಅಥವಾ ವ್ಯಕ್ತಿಯ ಸಾವಿಗೆ ಕಾರಣವಾಗುವಂತೆ ಬಳಸಿದರೆ ಅಥವಾ ಬಳಸುವ ಉದ್ದೇಶ ಹೊಂದಿದ್ದರೆ, ಅವರಿಗೆ ಹಾನಿಯಾಗುವಂತೆ ಮಾಡಿದರೆ, ಸಮುದಾಯಕ್ಕೆ ಅಗತ್ಯವಾಗಿರುವ ಯಾವುದೇ ಸೇವೆ ಅಥವಾ ಪೂರೈಕೆಗಳಿಗೆ ಹಾನಿ ಮಾಡಿದರೆ, ಯಾವುದೇ ಆಸ್ತಿಗೆ ಹಾನಿ ಮಾಡಿದರೆ, ದೇಶದ ರಕ್ಷಣೆಗೆ ಬಳಸಿಕೊಳ್ಳಲಾಗುತ್ತಿರುವ ಹಾಗೂ ಬಳಸಿಕೊಳ್ಳುವ ಉದ್ದೇಶಕ್ಕೆ ಮೀಸಲಿಟ್ಟಿರುವ ಅಥವಾ ಕೇಂದ್ರ ಸರ್ಕಾರದ ಇನ್ಯಾವುದೇ ಉದ್ದೇಶದ ಆಸ್ತಿ ಅಥವಾ ಉಪಕರಣಕ್ಕೆ ನಷ್ಟ ಉಂಟುಮಾಡಿದರೆ, ರಾಜ್ಯ ಸರ್ಕಾರಗಳು ಹಾಗೂ ಅವುಗಳ ಸಂಸ್ಥೆಗಳಿಗೆ ಸೇರಿದ ಇಂತಹ ಆಸ್ತಿಗಳಿಗೆ ಹಾನಿ ಮಾಡಿದರೆ, ಸರ್ಕಾರ ಅಥವಾ ಯಾವುದೇ ವ್ಯಕ್ತಿ ನಿರ್ದಿಷ್ಟ ಕೆಲಸವೊಂದನ್ನು ಮಾಡುವಂತೆ ಅಥವಾ ಮಾಡದಂತೆ ಒತ್ತಡ ತರಲು ವ್ಯಕ್ತಿಯನ್ನು ಹಿಡಿದಿಟ್ಟುಕೊಂಡರೆ, ಆತನ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರೆ’ ಅದು ಭಯೋತ್ಪಾದನಾ ಕೃತ್ಯ ಎಂದು ಈ ಕಾನೂನು ವ್ಯಾಖ್ಯಾನಿಸಿದೆ.

ಇಷ್ಟೇ ಅಲ್ಲ, ಈ ಕಾನೂನು ಇನ್ನೂ ಕೆಲವು ಮಾತುಗಳನ್ನು ಹೇಳುತ್ತದೆ. ‘(ಬಿ) ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ - 1967ರ ಅಡಿ ಕಾನೂನುಬಾಹಿರ ಎಂದು ಘೋಷಿಸಲಾದ ಸಂಘಟನೆಯ ಸದಸ್ಯನಾಗಿದ್ದರೆ, ಇಂತಹ ಸಂಘಟನೆಗಳ ಉದ್ದೇಶವನ್ನು ಈಡೇರಿಸುವ ಅಥವಾ ಆ ಉದ್ದೇಶಕ್ಕೆ ಸಹಕಾರಿಯಾಗುವಂತಹ ಕೃತ್ಯವನ್ನು ಸ್ವಯಂಪ್ರೇರಣೆಯಿಂದ ಮಾಡಿದರೆ, ಸಮೂಹ ನಾಶಕವಾದ ಪರವಾನಗಿ ಇಲ್ಲದ ಶಸ್ತ್ರಾಸ್ತ್ರಗಳನ್ನು, ಮದ್ದು ಗುಂಡುಗಳನ್ನು, ಸ್ಫೋಟಕಗಳನ್ನು ಅಥವಾ ಇನ್ನಿತರ ವಸ್ತುಗಳನ್ನು ಹೊಂದಿದ್ದರೆ, ಜನರ ಸಾವಿಗೆ ಕಾರಣವಾಗುವಂತಹ ಅಥವಾ ಗಂಭೀರವಾಗಿ ಗಾಯಗೊಳ್ಳುವಂತಹ ಯಾವುದೇ ಕೃತ್ಯ ಎಸಗಿದರೆ, ಯಾವುದೇ ಆಸ್ತಿಗೆ ದೊಡ್ಡಮಟ್ಟದ ಹಾನಿ ಸಂಭವಿಸುವಂತೆ ಮಾಡಿದರೆ ಅದನ್ನು ಭಯೋತ್ಪಾದನಾ ಕೃತ್ಯ ಎನ್ನಬೇಕು’ ಎಂದು ಕಾನೂನು ಹೇಳುತ್ತದೆ.

ಈ ಕಾನೂನಿನಲ್ಲಿನ ಮುಖ್ಯವಾದ ಪದಗಳು ‘ಏಕತೆ, ಸಮಗ್ರತೆ, ಭದ್ರತೆ ಹಾಗೂ ಸಾರ್ವಭೌಮತ್ವ’. ಭಾರತ ಒಡೆದು ಚೂರಾಗಬಹುದು ಎಂದು ನಾವು ಆಧಾರವೇ ಇಲ್ಲದೆ ಬೆಳೆಸಿಕೊಂಡಿರುವ ಭೀತಿಯು ಈ ವ್ಯಾಖ್ಯಾನಕ್ಕೆ ಕಾರಣ. ಡೈನಮೈಟ್ ಎನ್ನುವ (ಇದನ್ನು ಬಳಸುವುದು ಗಣಿಗಾರಿಕೆಯಲ್ಲಿ, ಭಯೋತ್ಪಾದನಾ ಕೃತ್ಯಗಳಲ್ಲಿ ಇದನ್ನು ಬಳಸಿಲ್ಲ) ಸಂಬಂಧವೇ ಇಲ್ಲದ ಪದವನ್ನು ಈ ಕಾನೂನಿನಲ್ಲಿ ಏಕೆ ಬಳಸಲಾಯಿತು, ಆರ್‌ಡಿಎಕ್ಸ್‌ ಅಥವಾ ಸಿ14 ಪದಗಳನ್ನು ಏಕೆ ಬಳಸಲಿಲ್ಲ ಎಂಬುದು ಗೊತ್ತಿಲ್ಲ. ಈ ಕಾನೂನಿನ ಪಠ್ಯವನ್ನು ಬರೆದ ಅಧಿಕಾರಿಯು ಸ್ಫೋಟಕಗಳ ಬಗ್ಗೆ ಅರಿವನ್ನು ಬಾಲಿವುಡ್ ಸಿನಿಮಾ ವೀಕ್ಷಿಸುವ ಮೂಲಕ ಪಡೆದಿರಬೇಕು.

ಪೋಟಾ ಕಾಯ್ದೆ ನೀಡುವ ವ್ಯಾಖ್ಯಾನವು ತೀರಾ ವಿಸ್ತೃತವಾಗಿದೆ ಹಾಗೆಯೇ ತೀರಾ ಸಂಕುಚಿತ ಕೂಡ ಆಗಿದೆ. ಈ ಕಾನೂನು ರೂಪಿಸುವಾಗ ಹೆಚ್ಚು ಆಲೋಚನೆ ಮಾಡಿಲ್ಲ ಎಂಬುದನ್ನು ಇದು ಬಹಳ ಚೆನ್ನಾಗಿ ಸೂಚಿಸುತ್ತದೆ. ಸರಿಯಾಗಿ ರೂಪಿಸಿಲ್ಲದ ಕಾನೂನುಗಳು ನಮ್ಮಲ್ಲಿ ಹಲವಾರು ಇರುವ ಕಾರಣ ಇದು ನನಗೆ ಆಶ್ಚರ್ಯ ಮೂಡಿಸುವುದಿಲ್ಲ. ಇಂತಹ ಕಾನೂನುಗಳು ಎಲ್ಲ ರಾಜ್ಯಗಳಲ್ಲೂ ಇವೆ. ತಮಿಳುನಾಡು ಸರ್ಕಾರವು ಅಲ್ಲಿ ಜಾರಿಯಲ್ಲಿರುವ ಗೂಂಡಾ ಕಾಯ್ದೆಯ ಅಡಿ ವ್ಯಕ್ತಿಯೊಬ್ಬನನ್ನು ಆತ ಯಾವುದೇ ಅಪರಾಧ ಎಸಗದಿದ್ದರೂ ವಿಚಾರಣೆಯೇ ಇಲ್ಲದೆ ಒಂದು ವರ್ಷದ ಅವಧಿಗೆ ಜೈಲಿನಲ್ಲಿ ಇರಿಸಬಹುದು.

ವ್ಯಕ್ತಿಯೊಬ್ಬ ಅಪರಾಧ ಎಸಗುವುದು ಖಚಿತ ಅನಿಸಿದರೆ ಅಥವಾ ಅಪರಾಧ ಎಸಗಬಹುದು ಎಂಬ ಅನುಮಾನ ಮೂಡಿದರೆ ತಮಿಳುನಾಡು ಸರ್ಕಾರ ಆತನನ್ನು ಒಂದು ವರ್ಷದ ಅವಧಿಗೆ ಜೈಲಿನಲ್ಲಿ ಇರಿಸಬಹುದು. ವ್ಯಕ್ತಿಯೊಬ್ಬ ವಿಡಿಯೊಗಳನ್ನು ನಕಲು ಮಾಡಬಹುದು ಅಥವಾ ಮರಳಿನ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಬಹುದು ಎಂದು ಸರ್ಕಾರಕ್ಕೆ ಹೇಗೆ ಗೊತ್ತಾಗುತ್ತದೆ? ಇದನ್ನು ಗೊತ್ತು ಮಾಡಿಕೊಳ್ಳಲು ಸರ್ಕಾರವು ಜ್ಯೋತಿಷಿಗಳನ್ನು ನೇಮಕ ಮಾಡಿಕೊಂಡಿರಬಹುದು.

ಭಯೋತ್ಪಾದನೆಯನ್ನು ವ್ಯಾಖ್ಯಾನಿಸುವ ವಿಚಾರಕ್ಕೆ ಮರಳೋಣ. ಇಲ್ಲಿನ ನೈಜ ತರ್ಕ ಏನು ಎಂಬುದು ನಮಗೆಲ್ಲ ಗೊತ್ತಿದೆ ಎಂದು ಭಾವಿಸುವೆ. ವಿಶ್ವದೆಲ್ಲೆಡೆ ಅಮೆರಿಕ ನಡೆಸಿದ ದೌರ್ಜನ್ಯಗಳ ಬಗ್ಗೆ ಮಾತನಾಡುವಾಗ ಭಾಷಾತಜ್ಞ ಹಾಗೂ ಲೇಖಕ ನಾಮ್ ಚೋಮ್‌ಸ್ಕಿ ಹೀಗೆ ಹೇಳಿದ್ದಾರೆ: ‘ನಾವು ಮಾಡುವುದು ಭಯೋತ್ಪಾದನಾ ವಿರೋಧಿ ಕೆಲಸ. ಅವರು ಮಾಡುವುದು ಭಯೋತ್ಪಾದನಾ ಕೃತ್ಯ’. ಅದೇ ರೀತಿಯಲ್ಲಿ, ನಾವು ಮಾಡುವುದು ಗಲಭೆ ಅಥವಾ ವ್ಯಕ್ತಿ ಒಬ್ಬನೇ ಎಸಗುವ ಕೃತ್ಯ. ಅದನ್ನು ಮುಸ್ಲಿಮರು ಮಾಡಿದರೆ, ಅದು ಭಯೋತ್ಪಾದನೆ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry