ಭಾನುವಾರ, ಸೆಪ್ಟೆಂಬರ್ 19, 2021
24 °C

ಕೆಂಪು ದೀಪ ಉರಿಸುವವರು...

ವಸು ಮಳಲಿ Updated:

ಅಕ್ಷರ ಗಾತ್ರ : | |

ಕೆಂಪು ದೀಪ ಉರಿಸುವವರು...

ಭಾರತದ ಆಕರ್ಷಕ ನಗರಗಳಲ್ಲಿ ಬೆಂಗಳೂರು ಎರಡು ಅಥವಾ ಮೂರನೆಯ ಸ್ಥಾನದಲ್ಲಿ ನಿಲ್ಲುತ್ತದೆ. ರಾತ್ರಿ ಹೊತ್ತಿನಲ್ಲಿ ಜಗಜಗಿಸುವ ದೀಪಗಳು, ಅದರಲ್ಲೂ ಮೇಲ್ಸೇತುವೆ ಮೇಲೆ ರಭಸವಾಗಿ ಸಾಗುವ ವಾಹನಗಳ ಬೆಳಕು ಕಣ್ಣು ಕೋರೈಸುವಾಗ ಭಾರತಕ್ಕೆಲ್ಲಿದೆ ಬಡತನ ಎನಿಸುತ್ತದೆ. ಹೀಗೇ ಎಂಟು ಗಂಟೆಯ ಹೊತ್ತಿನಲ್ಲಿ ಲಹರಿಯಲ್ಲಿ ಸಾಗುತ್ತಿರುವಾಗ ಟ್ರಾಫಿಕ್ ಸಿಗ್ನಲ್‌ನಲ್ಲಿ ಕೆಂಪು ದೀಪ ಹೊತ್ತಿತು. ಕಾರ್ ಬ್ರೇಕ್ ಒತ್ತಿದೆ. ಯಾರೋ ಹಿಂದಿನಿಂದ ಬಂದಂತಾಗಿ ತಿರುಗಿ ನೋಡಿದರೆ ಸೀರೆ ತೊಟ್ಟ ಗಂಡಸು, ಗಡ್ಡ ಮೀಸೆ ತೆಗೆದು ವೈಯಾರ ಮಾಡುತ್ತಾ ಚಪ್ಪಾಳೆ ತಟ್ಟುವುದು ಹೊಸದೇನೂ ಆಗಿರಲಿಲ್ಲ. ಬಡತನವೋ ಭಂಡತನವೋ ಗಂಡಸುತನಕ್ಕೆ ಕೊಟ್ಟ ಉತ್ತರವೋ? ಆದರೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾಯುವವರಿಗೆ ಮನರಂಜನೆ ಇಲ್ಲವೇ ಕಿರಿಕಿರಿ. ಅದಾವುದರ ಪರಿವೆ ಇಲ್ಲದವರಂತೆ ಅಥವಾ ಅದೆಲ್ಲವನ್ನೂ ಒಪ್ಪಿದವರಂತೆ ನಿಂತ ಪೊಲೀಸರು, ರಾಜ್ಯ ನೀತಿಯ ಪ್ರತೀಕವಾಗಿದ್ದರು. ದೀಪದ ಬಣ್ಣ ಬದಲಾಯಿತು. ವಾಹನಗಳು ಆತುರದಲ್ಲಿ ನುಗ್ಗಿ ಹೋದವು. ಎಷ್ಟೇ ವೇಗವಾಗಿ ಬಂದರೂ ತಡೆಯಲು ಸಿದ್ಧವಾಗಿತ್ತು ಕೆಂಪು ದೀಪ. ಆ ಬೆಳಕಿನಲ್ಲಿ ಚಂದದ ಲಂಗ (ಗಾಗ್ರ ಚೋಲಿ) ತೊಟ್ಟ ಹತ್ತು ವರ್ಷದ ಹುಡುಗಿ ವಾಹನಗಳ ನಡುವೆ ಸಾಗಿ ಬಂದಳು. ಇಷ್ಟು ಹೊತ್ತಿನಲ್ಲಿ ಒಬ್ಬಳ್ಳನ್ನೇ ಕಳಿಸಿದ್ದಾರಲ್ಲಾ ಎಂಬ ಪ್ರಶ್ನೆ ಮನಸಿನಲ್ಲಿ ಮೂಡಿತು. ಚುರುಕಾದ ಹುಡುಗಿ. ಅವಳ ಕುಣಿತದ ನಡಿಗೆಗೆ ಹೊಸ ಬಟ್ಟೆಯ ಸಂಭ್ರಮ ಕಾರಣವೇ ಎಂದುಕೊಳ್ಳುವ ಹೊತ್ತಿಗೆ, ಅವಳ ಚಲನೆಯನ್ನೇ ದಿಟ್ಟಿಸುತ್ತಾ ವ್ಯಕ್ತಿಯೊಬ್ಬ ಮರಕ್ಕೆ ಒರಗಿ ನಿಂತಿರುವುದು ಕಾಣಿಸಿತು. ನನ್ನ ಹಿಂದಿನ ಲಾರಿಯ ಚಾಲಕನ ಕಡೆ ಆ ಹುಡುಗಿ ನಗೆ ಬೀರಿದ್ದು ಕನ್ನಡಿಯಲ್ಲಿ ನನಗೆ ಕಾಣಿಸಿತು.ಹಸಿರು ದೀಪ ಹೊತ್ತಿತು. ಗಾಡಿಗಳು ಚಲಿಸಿದವು. ನನ್ನಲ್ಲಿ ವೈಚಾರಿಕತೆ ಜಾಗೃತವಾಗುವ ಹೊತ್ತಿಗೆ ಸರ್ಕಲ್ ದಾಟಿ ಮುಂದೆ ಬಂದಿದ್ದೆ. ಸರ್ಕಲ್‌ನಲ್ಲಿ ನಿಂತಿದ್ದ ಪೊಲೀಸರ ಹೊಗೆ ಕುಡಿದ ಕಣ್ಣುಗಳಿಗೆ ಏನೂ ಕಾಣುವಂತಿರಲಿಲ್ಲ. ಅನತಿ ದೂರದಲ್ಲಿ ನಿಂತಿದ್ದ ಪೊಲೀಸ್ ವಾಹನ, ಅದರಲ್ಲಿದ್ದ ಬಿಗುಮುಖದ ಪೊಲೀಸರು ಲಾರಿಗಳನ್ನು ಪಕ್ಕಕ್ಕೆ ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದರು. ಗಾಡಿ ನಿಲ್ಲಿಸಿ ಹಿಂದಿರುಗಿ ನೋಡುವಷ್ಟರಲ್ಲಿ ಆ ಹುಡುಗಿ ಅಲ್ಲಿರಲಿಲ್ಲ. ಅವಳ ಅಪ್ಪನೂ (?) ಅಲ್ಲಿ ಕಾಣಲಿಲ್ಲ. ಜುಗುಪ್ಸೆಯಿಂದ ಮನೆಗೆ ಮರಳಿದೆ.ಭಾರತದ ಸಂವಿಧಾನ, ಹ್ಯೂಮನ್ ಟ್ರಾಫಿಕಿಂಗ್ (ದೇಹ ಮಾರಾಟವನ್ನು) ನಿಷೇಧಿಸುತ್ತದೆ ಎಂದು ತರಗತಿಯಲ್ಲಿ ಪಾಠ ಮಾಡಿದೆ. ಮನಸ್ಸು ಮರಗಟ್ಟಿತ್ತು. ಕೆಲ ದಿನಗಳಲ್ಲಿ ಲೈಂಗಿಕ ಕಾರ್ಯಕರ್ತೆಯರಿಗಾಗಿ ಸಹಾಯವಾಣಿ ಬಿಡುಗಡೆ ಮಾಡಬೇಕೆಂದು ಕರೆ ಬಂದಿತು. ಹಿಂದೆ ಮುಂದೆ ನೋಡದೆ ಅದಕ್ಕೆ ಒಪ್ಪಿಕೊಂಡಿದ್ದೆ.ನನ್ನ ಓದು, ಲೈಂಗಿಕ ಕಾರ್ಯಕರ್ತರ ಬಗ್ಗೆ ಚಿತ್ರಣವೊಂದನ್ನು ಕಟ್ಟಿಕೊಟ್ಟಿತ್ತು. ಬುದ್ಧನ ಪಾದಕ್ಕೆ ಬಂದೆರಗಿದ ರಾಜನರ್ತಕಿ ಆಮ್ರಪಾಲಿ ತನ್ನ ವೇಶ್ಯಾವೃತಿಯನ್ನು ಬಿಟ್ಟು ಬಿಕ್ಕುವಾಗಿದ್ದಳು. ಅಂದರೆ 2,600 ವರ್ಷಗಳ ಹಿಂದೆಯೂ ಈ ವೃತ್ತಿಯನ್ನು ರಾಜ್ಯ ಪೋಷಿಸಿತ್ತು ಹಾಗೂ ಅದರಿಂದ ಬಿಡುಗಡೆಗೊಳಿಸುವುದು ಬುದ್ಧನ ಉದ್ದೇಶವೂ ಆಗಿರಬೇಕು. ಈ ಕಥೆಯನ್ನು ಆಧರಿಸಿ ಬಂದ ಸಿನಿಮಾ `ಆಮ್ರಪಾಲಿ'. ನಟಿ ಮೀನಾಕುಮಾರಿ ಅವರ ನಟನೆಯಿಂದ ಆ ಪಾತ್ರಕ್ಕೆ ಮತ್ತಷ್ಟು ಗಾಂಭೀರ್ಯ ಬಂದಿತ್ತು.ಇಂತಹದೇ ಪಾತ್ರ ಬೈಬಲ್‌ನಲ್ಲಿಯೂ ಕಾಣುತ್ತದೆ. ಮೇರಿ ಮ್ಯೋಕ್‌ಡಲೀನಳನ್ನು ಜನ ವ್ಯಭಿಚಾರಿಣಿ ಎಂದು ಕರೆದು ಕಲ್ಲು ತೂರಿದಾಗ ಅಲ್ಲಿಗೆ ಬಂದ ಜೀಸಸ್ ಪಾದಕ್ಕೆ ಅವಳು ಎರಗುತ್ತಾಳೆ. ಆಕೆ ತನ್ನ ಕಣ್ಣೀರಿನಿಂದ ಏಸುವಿನ ಪಾದವನ್ನು ತೊಳೆಯುತ್ತಾಳೆ. ಪ್ರಾಯಶ್ಚಿತ್ತದಿಂದ ಅವಳು ಪಾವನಳಾಗುತ್ತಾಳೆ. ಏಸುವಿನ ಶಿಷ್ಯರಲ್ಲಿ ಒಬ್ಬಳಾಗುತ್ತಾಳೆ.ಭಾರತೀಯ ಸಾಹಿತ್ಯದಲ್ಲಿ ಶೂದ್ರಕ ಕವಿಯ `ಮೃಚ್ಛಕಟಿಕ' ವೇಶ್ಯೆಯಾದ ವಸಂತಸೇನೆಯ ಬದುಕನ್ನು ಬಹು ಸೂಕ್ಷ್ಮವಾಗಿ ಚಿತ್ರಿಸುತ್ತದೆ. ಅವಳ ಪ್ರೇಮಿ ಚಾರುದತ್ತ, ಇವರ ಸುತ್ತ ಹೆಣೆದ ಕಥೆ. ದುರಂತ ಕಥೆಯೇ ಆದರೂ ಅದು ಅವಳ ಬದುಕಿನ ಬಗೆಗೆ ಜುಗುಪ್ಸೆ ಹುಟ್ಟಿಸುವುದಿಲ್ಲ. ಇದನ್ನು ಆಧರಿಸಿದ ಕಾರ್ನಾಡರ ಚಿತ್ರ `ಉತ್ಸವ್' ಸಹ ವಸಂತಸೇನೆ ಕುರಿತು ಮುಜುಗರವನ್ನೋ ಅಶ್ಲೀಲ ಭಾವನೆಯನ್ನೋ ಬಿತ್ತುವುದಿಲ್ಲ. `ಕೋಠಿ', `ಮಂಡಿ' ಇಂತಹ ಸಾಕಷ್ಟು ಸಿನಿಮಾಗಳು ಒಂದಷ್ಟು ವಾಸ್ತವ ಹಾಗೂ ರೋಚಕತೆಯೊಂದಿಗೆ ಅವರ ಬದುಕಿನ ಕಲ್ಪನೆಯನ್ನು ಕಟ್ಟಿಕೊಡುತ್ತವೆ.ಶಿವರಾಮ ಕಾರಂತರ `ಮೈಮನಗಳ ಸುಳಿಯಲ್ಲಿ', ಬರುವ ವೇಶ್ಯೆ ಹಾಡುಗಾರ್ತಿ. ಅವಳ ಮನದ ಒಳತೋಟಿಯನ್ನು ಹಿಡಿಯುವಾಗ ಕಾರಂತರು ಎಲ್ಲೂ ಎಚ್ಚರ ತಪ್ಪುವುದಿಲ್ಲ. ಓದುಗನಲ್ಲಿ ಒಂದು ವಿಷಾದದ ಭಾವನೆ ಮಾತ್ರ ಉಳಿಯುತ್ತದೆ.

ನೇರವಾಗಿ ಲೈಂಗಿಕ ಕಾರ್ಯಕರ್ತೆಯರನ್ನೇ ಸಂಬೋಧಿಸಬೇಕಾದುದು ಈಗ ನನ್ನ ಜವಾಬ್ದಾರಿಯಾಗಿತ್ತು. ಲೈಂಗಿಕ ಕಾರ್ಮಿಕರೆಂದು, ಅವರ ಬದುಕನ್ನು ಒಂದು ವೃತ್ತಿಯಾಗಿ ಪರಿಗಣಿಸಬೇಕೆಂದು ಒಂದು ವಾದ ಕೇಳಿಬರುತ್ತಿದೆ. ಅದರಲ್ಲೂ ಲೈಂಗಿಕ ಕಾರ್ಯಕರ್ತೆಯರ ಸಮಾವೇಶಗಳಲ್ಲಿ ಅವರ ಹಲವು ಸಮಸ್ಯೆಗಳಲ್ಲಿ ಈ ವಿಚಾರವನ್ನು ಮಂಡಿಸಲಾಗುತ್ತಿದೆ.ಅವರ ಒಳಿತಿಗಾಗಿ ದುಡಿಯುವ ಸಂಘಟನೆಗಳು ಇದನ್ನೇ ಸೂಚಿಸುತ್ತವೆ. ಈ ವಿಷಯದಲ್ಲಿ ನನ್ನ ಭಿನ್ನಮತವಿದೆ. ಅದನ್ನೊಂದು ಉದ್ಯೋಗವೆಂದು ಪರಿಗಣಿಸುವುದಾದರೆ ಮುಂದೆ ಅದೊಂದು ಉದ್ದಿಮೆಯಾಗಿಯೂ ಬೆಳೆಯುತ್ತದೆ. ಹಾಗಾದಲ್ಲಿ ಅತ್ಯಂತ ಶೋಷಣೆಗೆ ಒಳಗಾದ ಸಮುದಾಯವೆಂದು, ಲೈಂಗಿಕ ಸೇವೆಯಿಂದ ಅವರನ್ನು ಹೊರತರುವ ಆಲೋಚನೆಯೇ ತಪ್ಪಾಗುತ್ತದೆ. ದೇಹ ಮಾರಾಟವೆಂದು ಬಗೆದಲ್ಲಿ ಮಾತ್ರ ಅದು ಶೋಷಣೆಯಾಗಿ ಕಾಣುತ್ತದೆ. ಆ ಬದುಕು ಅವರ ಆಯ್ಕೆಯ ಬದುಕಾಗಿಲ್ಲ, ಬಡತನ ಅವರನ್ನು ಅಲ್ಲಿಗೆ ನೂಕಿದೆ. ಹಾಗಾಗಿ, ಅದನ್ನೊಂದು ಸಾಮಾಜಿಕ ಸಮಸ್ಯೆಯಾಗಿಯೇ ನೋಡಬೇಕಾಗಿದೆ. ಅದರಲ್ಲೂ ಸಾಮಾಜಿಕ ಮನ್ನಣೆಯನ್ನು ಪಡೆದ ಬದುಕನ್ನು ಸಾಗಿಸುತ್ತಾ ಉಳಿದವರ ಬಗೆಗೆ ಮಾತನಾಡುವುದರಲ್ಲಿ ಬೇರೆಯದೇ ಆದ ಹುನ್ನಾರುಗಳಿರುತ್ತವೆ ಎಂದು ಹೇಳಬೇಕೆಂದು ಅಲ್ಲಿಗೆ ಹೊರಟೆ.ಅಲ್ಲಿದ್ದ ನೂರಕ್ಕೂ ಹೆಚ್ಚು ಹೆಣ್ಣು ಮಕ್ಕಳನ್ನು ನೋಡಿದ ಕೂಡಲೇ ನನ್ನ ಓದು, ಚರಿತ್ರೆಯ ಪಾಠಗಳೆಲ್ಲಾ ಹೊಟ್ಟೆ ತೊಳಸಿ ಬಾಯಿಗೆ ಬರತೊಡಗಿತು. ತೀವ್ರ ಬಡತನದ ಹೊಗೆ ಅವರನ್ನು ಆವರಿಸಿತ್ತು. ಅಲ್ಲಿದ್ದ ಬಹುತೇಕ ಹೆಣ್ಣು ಮಕ್ಕಳು ದಲಿತರು. ಬಡತನ ಅವರಲ್ಲಿ ಸೌಂದರ್ಯ, ಆಕರ್ಷಣೆ, ಯೌವನ ಯಾವುದನ್ನೂ ಉಳಿಸಿರಲಿಲ್ಲ. ಪ್ರತಿಯೊಬ್ಬರ ಹಿಂದೆ ಒಂದೊಂದು ಭೀಕರ ಕಥೆ ಅಡಗಿತ್ತು. ಮಕ್ಕಳ ಊಟ ಬಟ್ಟೆಗಾಗಿ, ತಮ್ಮ ತಂಗಿಯ ಓದಿಗಾಗಿ, ಆಸ್ಪತ್ರೆ ಕರ್ಚಿಗಾಗಿ, ಕಳೆದುಕೊಂಡ ಗಂಡನ ಸಾಲ ತೀರಿಸಲು, ಮೋಸಕ್ಕೆ ಒಳಗಾಗಿ... ಹೀಗೆ ನೂರಾರು ಕಾರಣಗಳಿಗಾಗಿ ಅವರು ದೇಹ ಒತ್ತೆ ಇಟ್ಟಿದ್ದರು.ಅವರಿಗಾಗಿ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ, ಸ್ವಯಂ ಸೇವಾ ಸಂಸ್ಥೆಯೊಂದು ನಡೆಸಿದ ಕಾರ್ಯಾಗಾರದ ಕಡೆಯ ದಿನ ಅದಾಗಿತ್ತು. ನಾನು ಮಾತನಾಡಲು ಆರಂಭಿಸಿದ್ದೆ. ಇವತ್ತು ಊಟಕ್ಕೆ ನನಗೊಂದು ಉದ್ಯೋಗವಿದೆ. ಸೂರು ಇದೆ. ಆದ್ದರಿಂದ ದೊಡ್ಡ ಆದರ್ಶದ ಮಾತುಗಳನ್ನಾಡಲು ನನಗೆ ಯಾವ ನೈತಿಕತೆಯೂ ಇಲ್ಲ. ಆ ಎಲ್ಲಾ ಸೋದರಿಯರನ್ನು ನೋಡಿ ನನ್ನೊಳಗಿನ ಅಹಂ ಕರಗಿ ನೀರಾಗಿತ್ತು. ಅಪರಿಚಿತವಾದ ವ್ಯಕ್ತಿಗೆ ದೇಹವನ್ನು ಅರ್ಪಿಸುವ ಸ್ಥಿತಿ ದುರಂತವೇ ಸರಿ. ಲೈಂಗಿಕ ಕ್ರಿಯೆ ಕೇವಲ ದೇಹಕ್ಕೆ ಅನ್ವಯಿಸಿದ್ದಲ್ಲ. ಅದರ ಒಳಗೊಂದು ಮನಸ್ಸೂ ಅಡಗಿದೆ. ಹೀಗೆ ಹೇಳುತ್ತಾ ಹೋಗುವಾಗ ನನ್ನ ದನಿ ನಡುಗತೊಡಗಿತ್ತು. ಭಾವನೆಗಳು ಕಟ್ಟೆಯೊಡೆಯದಂತೆ ಸಹಿಸಿ ಮಾತು ಮುಂದುವರಿಸಿದ್ದೆ.ಪ್ರಾಚೀನ ಕಾಲದಿಂದ ರಾಜ್ಯ, ವೇಶ್ಯಾವಾಟಿಕೆಯನ್ನು ಪೋಷಿಸಿಕೊಂಡು ಬರುತ್ತಿದೆ. ರಾಜ್ಯದ ಬೇಹುಗಾರಿಕೆಗೆ ವೇಶ್ಯೆಯರನ್ನು ಬಳಸಲಾಗುತ್ತಿತ್ತು. ಮುದ್ರಾಮಂಜೂಷ ಎಂಬ ಕೃತಿ ಚಂದ್ರಗುಪ್ತ ಹಾಗೂ ಚಾಣಕ್ಯ, ರಾಜ್ಯ ವಿಸ್ತರಣೆ ಮಾಡಿದ ಬಗೆಯನ್ನು ರಂಜನೀಯವಾಗಿ ವಿವರಿಸುತ್ತದೆ. ತಮ್ಮ ಕಾರ್ಯ ಸಾಧನೆಗಾಗಿ ಹಲವು ರಾಜರನ್ನು ಕೊಲೆ ಮಾಡುತ್ತಾರೆ. ಹಾಗೆ ಕೊಲೆ ಮಾಡುವಾಗ ವಿಷಕನ್ಯೆಯನ್ನು ಬಳಸುತ್ತಾರೆ. ಅದೊಂದು ಖಚಿತ ಚಾರಿತ್ರಿಕ ದಾಖಲೆ ಅಲ್ಲದಿದ್ದರೂ ವಿಷಕನ್ಯೆಯ ಸುಳಿವನ್ನು ಆ ಕೃತಿ ನೀಡುತ್ತದೆ.

ರಾಜರು, ಸಾಮಂತರು, ಮುಂದೆ ಪಾಳೇಗಾರರು ಇವರಿಗೆಲ್ಲಾ ವೇಶ್ಯೆಯರನ್ನು ಇರಿಸಿಕೊಳ್ಳುವುದು ಹೆಗ್ಗಳಿಕೆಯ ವಿಚಾರವಾಗಿತ್ತು. ಹತ್ತನೆಯ ಶತಮಾನದ ಶಾಸನಗಳಲ್ಲಿ ರಾಜನೊಬ್ಬ ದೇವಾಲಯಕ್ಕೆ ಹೋದರೆ ಅವನ ಹಿಂದೆ ತಟ್ಟೆ, ತಾಂಬೂಲ, ಚಾಮರ ಹಿಡಿಯುವ ಸೂಳೆಯರಿರುತ್ತಿದ್ದರೆಂದು ಬರೆಯಲಾಗಿದೆ. ಒಂದೊಂದು ಕಂಬದ ಬಳಿಯೂ ಕಂಬದ ಸೂಳೆಯರು ನಿಲ್ಲುತ್ತಿದ್ದರು. ಈ ಹೊತ್ತಿಗಾಗಲೇ ದೇವಾಲಯ ಶಿಲ್ಪಗಳಲ್ಲಿ ಸುಂದರವಾದ ಹೆಣ್ಣಿನ ಶಿಲ್ಪಗಳನ್ನು ಕೆತ್ತತೊಡಗಿದ್ದರು. ಹೊಯ್ಸಳರ ಕಾಲಕ್ಕೆ ಅದು ಉತ್ಕರ್ಷವನ್ನು ತಲುಪಿತ್ತು. ದೇಗುಲಗಳಲ್ಲಿ ಕಾಣುವ ಮದನಿಕೆಯರಿಗೆ ರೂಪದರ್ಶಿಯಾಗಿದ್ದವರು ನೃತ್ಯಗಾತಿಯರು. ದೇವದಾಸಿಯರೆಂದು ಕರೆಸಿಕೊಳ್ಳುತ್ತಿದ್ದ ಇವರು ಸಂಗೀತ, ನೃತ್ಯಕಲೆಗಳನ್ನು ಮೈಗೂಡಿಸಿಕೊಂಡು ಪೋಷಕರ ಮನ ತಣಿಸುತ್ತಿದ್ದರು. ಸಾಮಾಜಿಕವಾಗಿ ಸಾಕಷ್ಟು ಗೌರವವನ್ನು ಹೊಂದಿದ್ದರು.ಸೂಳೇಕೆರೆ, ಬಂಗಾರದೊಡ್ಡಿ ನಾಲೆ ಇವುಗಳನ್ನು ಕಟ್ಟಿಸಿದವರು ವೇಶ್ಯೆಯರಾಗಿದ್ದರು. ಹೀಗೆ ಸಮಾಜದ ಅನುಕೂಲಕ್ಕಾಗಿ ಕೆಲಸ ಮಾಡಿ ಹೆಸರು ಮಾಡಿದ ಹೆಣ್ಣುಮಕ್ಕಳಿದ್ದಾರೆ. ವಿಜಯನಗರ ಕಾಲಕ್ಕೆ ಅವರ ರಾಜಧಾನಿಯಲ್ಲಿ ವೇಶ್ಯೆಯರ ಸಂಖ್ಯೆ ಹೆಚ್ಚಾಗಿತ್ತು. ಹಂಪಿಯಲ್ಲಿ ಅವರಿಗಾಗಿಯೇ ಮೀಸಲಾದ ಬೀದಿಯನ್ನು ಇಂದು ನೋಡಬಹುದು. ಇವರು ಹಂಪಿ ನಗರಕ್ಕೆ ಬರುತ್ತಿದ್ದ ವಿದೇಶೀಯರ ಮುಖ್ಯ ಆಕರ್ಷಣೆಯಾಗಿದ್ದರು. ವಿಜಯನಗರ ಸಾಮ್ರೋಟರು ಸೂಳೇದೆರೆ ಎಂದರೆ ಸೂಳೆಯರ ಮೇಲೆ ವಿಧಿಸುತ್ತಿದ್ದ ತೆರಿಗೆಯಿಂದ ಆದಾಯ ಗಳಿಸುತ್ತಿದ್ದರು. ಹಾಗಾದರೆ ಆ ಹೆಣ್ಣುಮಕ್ಕಳು ಯಾರು? ಯುದ್ಧಗಳಲ್ಲಿ ಸೋತ ರಾಜರಿಂದ ಪಡೆದ ಕಾಣಿಕೆಗಳಲ್ಲಿ ಹೆಣ್ಣುಮಕ್ಕಳೂ ಸೇರಿರುತ್ತಿದ್ದರು. ಇಲ್ಲವೇ ಆಕ್ರಮಣದ ಹೊತ್ತಿನಲ್ಲಿ ಸಿಕ್ಕ ಹೆಣ್ಣುಮಕ್ಕಳನ್ನು ಹೊತ್ತು ತರುತ್ತಿದ್ದರು. ವಂಶಪಾರಂಪರ್ಯವಾಗಿ ದೇವದಾಸಿಯರಾದವರೂ ಇರುತ್ತಿದ್ದರು.ಲೈಂಗಿಕ ಸೇವೆಯಲ್ಲಿ ತೊಡಗಿದ್ದ ಮಹಿಳೆಯರ ಸ್ಥಿತಿ ಅಧೋಗತಿಯನ್ನು ತಲುಪಿದ್ದು ಬ್ರಿಟಿಷರ ಕಾಲಕ್ಕೆ. ಇಂದು ಭಾರತದಲ್ಲಿ ವೇಶ್ಯಾವಾಟಿಕೆ ಕಾನೂನುಬಾಹಿರವಾದುದು. ಆದರೆ ಪರೋಕ್ಷವಾಗಿ ರಾಜ್ಯ ಅದರ ಪೋಷಣೆಯನ್ನೂ ಮಾಡುತ್ತಾ ಬಂದಿದೆ ಎಂದರೂ ತಪ್ಪಾಗಲಾರದು. ನಾಲ್ಕು ವರ್ಷಗಳ ಹಿಂದೆ ಬೆಂಗಳೂರನ್ನು ಥಾಯ್ಲೆಂಡ್ ಮಾಡುವ ಯೋಜನೆಯೂ ಇತ್ತೆಂದರೆ ಗಾಬರಿಯಾಗುತ್ತದೆ. ಬೆಂಗಳೂರು ಐ.ಟಿ ನಗರವಾಗಿ ಬೆಳೆದು ಆ ಹಿನ್ನೆಲೆಯಲ್ಲಿ ಇಲ್ಲಿಗೆ ಬರುವ ಜನರನ್ನು ತಣಿಸುವ ವರ್ಗವನ್ನು ಹುಟ್ಟುಹಾಕುವ ಯೋಜನೆ ನಡೆದೇ ಇದೆ.ಈ ಎಲ್ಲಾ ವಿಚಾರಗಳನ್ನು ಹೇಳುತಿದ್ದಂತೆ ವ್ಯವಸ್ಥಾಪಕರೊಬ್ಬರು ಎದ್ದು ನನ್ನ ಮಾತು ನಿಲ್ಲಿಸುವಂತೆ ಹೇಳಿದರು. ಅವರಿಗೆ ನಾನು ನೈತಿಕ ಬೋಧನೆ ಮಾಡುವುದು ಬೇಕಾಗಿರಲಿಲ್ಲ. ಆ ಕಸುಬಿನಲ್ಲೂ ಆತ್ಮವಿಶ್ವಾಸದಿಂದ ಬದುಕಲು ಕಲಿಸುವುದು ಅವರ ಉದ್ದೇಶವಾಗಿತ್ತು. ಸಭಿಕರಲ್ಲಿ ಕುಳಿತಿದ್ದವರೊಬ್ಬರು ಮಾತು ಮುಂದುವರಿಸಿ ಎಂದರು. ವ್ಯವಸ್ಥಾಪಕರೆಂದರು, `ನಮ್ಮ ದೇಹ ನಮ್ಮ ಹಕ್ಕು ಎಂದು ನಾವು ನಂಬಿದ್ದೇವೆ. ಇದಕ್ಕೆ ಪೂರಕವಾಗಿ ಮಾತನಾಡುವುದಾದರೆ ಮಾತು ಮುಂದುವರಿಸಿ'. ಹಾಗೆ ಆತ್ಮ ವಿಶ್ವಾಸ ತುಂಬಿ ಅವರ ಕಸುಬಿನಲ್ಲಿ ಹೆಚ್ಚು ಗಳಿಸುವಂತೆ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ನಾನು ಆ ಸೋದರಿಯರ ಪುನರ್ವಸತಿಯನ್ನು ಬಯಸುತ್ತೇನೆಂದು ಹೇಳಿ ಮಾತು ನಿಲ್ಲಿಸಿದೆ.ಸಹಾಯವಾಣಿಯ ಉದ್ದೇಶವೂ ಅವರೆಲ್ಲರ ಭಾವಚಿತ್ರ, ಮೊಬೈಲ್ ಸಂಖ್ಯೆಯನ್ನು ನೀಡಿ ಗಿರಾಕಿಗಳನ್ನು ಸುಲಭವಾಗಿ ಆನ್‌ಲೈನ್ ಮೂಲಕ ಪಡೆಯುವಂತೆ ಮಾಡುವುದಾಗಿತ್ತು. ಸಮಾಜ ಆಧುನಿಕವಾದರೆ ಪಿಡುಗುಗಳಿಗೆ ಆಧುನಿಕ ಸ್ವರೂಪ ಬರುತ್ತದೆ. ಆಧುನಿಕ ಸಲಕರಣೆಗಳು ಬಳಕೆಯಾಗುತ್ತವೆ. ಕೆಂಪು ದೀಪ ಸದಾ ಉರಿಯುವಂತೆ ನೋಡಿಕೊಳ್ಳಲು ಜಾಗತಿಕ ಮಾರುಕಟ್ಟೆ ಎಣ್ಣೆಯನ್ನು ಸಿದ್ಧಮಾಡುವುದರಲ್ಲಿ ಆಶ್ಚರ್ಯ ಏನಿದೆ!ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.