ಕೆಚ್ಚೆದೆಯ ಪತ್ರಿಕೋದ್ಯಮದ ನಿದರ್ಶನ

7

ಕೆಚ್ಚೆದೆಯ ಪತ್ರಿಕೋದ್ಯಮದ ನಿದರ್ಶನ

ಶೇಖರ್‌ ಗುಪ್ತ
Published:
Updated:

ಈ ವಾರ ರಾಜಕೀಯ ವಿದ್ಯಮಾನಗಳನ್ನು ಪಕ್ಕಕ್ಕೆ ಇಟ್ಟು, ಕೆಚ್ಚೆದೆಯ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಅಪೂರ್ವ ವಿದ್ಯಮಾನದ ಬಗ್ಗೆ ನಿಮ್ಮೊಂದಿಗೆ ಮಾಹಿತಿ ಹಂಚಿಕೊಳ್ಳಲು ಇಷ್ಟಪಡುವೆ. ವಾಷಿಂಗ್ಟನ್‌ ಪೋಸ್ಟ್‌ನ ಸಂಪಾದಕ ಮತ್ತು ಪ್ರಕಾಶಕರಾದ ಬೆಂಜಮಿನ್‌ ಬ್ರ್ಯಾಡ್ಲಿ ಮತ್ತು ಕ್ಯಾಥರೀನ್‌ ಗ್ರಹಾಂ ಅವರು ಕೆಚ್ಚೆದೆಯ ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಹೊಸ ಇತಿಹಾಸವನ್ನೇ ಬರೆದಿರುವುದನ್ನು ಮತ್ತು ಸಾಹಸ ಪತ್ರಿಕೋದ್ಯಮದಲ್ಲಿ ಹೊಸ ಮಾನದಂಡಗಳನ್ನೇ ಸೃಷ್ಟಿಸಿರುವುದನ್ನು ‘ದಿ ಪೋಸ್ಟ್‌’ ಚಲನಚಿತ್ರವು ಕಣ್ಣಿಗೆ ಕಟ್ಟಿ ಕೊಡುತ್ತದೆ.

ಪತ್ರಿಕೋದ್ಯಮವು ಹಲವು ಬಿಕ್ಕಟ್ಟಿನ ಸಂದರ್ಭಗಳಲ್ಲಿ ವ್ಯವಸ್ಥೆಯ ಜೊತೆ ರಾಜಿಯಾಗದೆ, ಕೆಚ್ಚೆದೆಯಿಂದ ವರದಿಗಳನ್ನು ಪ್ರಕಟಿಸಿದ್ದ ಕಥೆಯನ್ನು ಇದಕ್ಕೂ ಮೊದಲು ಪುಸ್ತಕ ರೂಪದಲ್ಲಿ ಹೇಳಲಾಗಿದೆ. ಗ್ರಹಾಂ ಮತ್ತು ಬ್ರ್ಯಾಡ್ಲಿ ಅವರು ತಮ್ಮ ಅನುಭವ ಕಥನವನ್ನು ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ. ವಾಟರ್‌ಗೇಟ್‌ ಮತ್ತು ಪೆಂಟಗನ್‌ ಪೇಪರ್ಸ್‌ ಹಗರಣಗಳು ಪತ್ರಿಕೋದ್ಯಮದ ದಿಟ್ಟತನಕ್ಕೆ ಜಾಗತಿಕ ಆದರ್ಶ ನಿದರ್ಶನಗಳಾಗಿವೆ. ಪತ್ರಿಕೋದ್ಯಮದ ಅನೇಕ ತಲೆಮಾರುಗಳು ಈ ವರದಿಗಳಿಂದ ಸ್ಫೂರ್ತಿಯನ್ನೂ ಪಡೆದಿವೆ.

ಅಮೆರಿಕವು ವಿಯೆಟ್ನಾಂ ಯುದ್ಧದಲ್ಲಿ ಎಸಗಿದ ಕೃತ್ಯಗಳು ಮತ್ತು ದೇಶಬಾಂಧವರಿಗೆ ನೀಡಿದ ತಪ್ಪು ಮಾಹಿತಿಗೆ ಸಂಬಂಧಿಸಿದಂತೆ ರಕ್ಷಣಾ ಇಲಾಖೆಯು ಸಿದ್ಧಪಡಿಸಿದ್ದ ವರದಿಯು ‘ಪೆಂಟಗನ್‌ ಪೇಪರ್ಸ್‌’ ಹೆಸರಿನಲ್ಲಿ ದಿ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಈ ವಿವಾದವು, 2006ರಲ್ಲಿ ಇಂಡಿಯನ್‌ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ನಾವು ಅಸಾಮಾನ್ಯ ರೀತಿಯಲ್ಲಿ ನಿರ್ಧಾರಕ್ಕೆ ಬರಲು ಹೇಗೆ ಸ್ಫೂರ್ತಿಯಾಯಿತು ಎನ್ನುವುದನ್ನು ನಾನು ಇಲ್ಲಿ ಹೇಳಲು ಬಯಸುತ್ತೇನೆ. ಇಂಡಿಯನ್ ಎಕ್ಸ್‌ಪ್ರೆಸ್‌ ಮತ್ತು ‘ದಿ ಹಿಂದೂ’ ಪತ್ರಿಕೆಗಳು ಹೇಗೆ ಪರಸ್ಪರ ಸಹಕರಿಸಿ ಸುದ್ದಿಯೊಂದು ಪ್ರಕಟಗೊಳ್ಳದ ಸಾಧ್ಯತೆಯನ್ನು ಸುಳ್ಳು ಮಾಡಿದ್ದವು.

ಇವೆರಡೂ ಪತ್ರಿಕೆಗಳು ಪರಸ್ಪರರ ಮಾರುಕಟ್ಟೆಯಲ್ಲಿ ನೇರ ಪ್ರತಿಸ್ಪರ್ಧಿಗಳಾಗಿಲ್ಲ. ಆದರೆ, ಎರಡೂ ಪತ್ರಿಕೆಗಳ ಧೋರಣೆ ಮತ್ತು ಚಿಂತನಾ ಕ್ರಮಗಳು ವಿಭಿನ್ನವಾಗಿದ್ದವು. ಅದರಲ್ಲೂ ವಿಶೇಷವಾಗಿ ಆರ್ಥಿಕ ಮತ್ತು ರಾಜಕೀಯ ವಿದ್ಯಮಾನಗಳ ಕುರಿತು ಇವೆರಡೂ ಪತ್ರಿಕೆಗಳ ನಿಲುವುಗಳು ಭಿನ್ನವಾಗಿದ್ದವು. ತಾತ್ವಿಕ ಮತ್ತು ಸೈದ್ಧಾಂತಿಕ ನೆಲೆಯಲ್ಲಿ ಈ ಎರಡೂ ಪತ್ರಿಕೆಗಳ ಧೋರಣೆಗಳು ಕೆಲಮಟ್ಟಿಗೆ ವಿರೋಧಾಭಾಸಗಳಿಂದ ಕೂಡಿದ್ದವು. ಎರಡೂ ಪತ್ರಿಕೆಗಳ ಸಂಪಾದಕೀಯ ನಿಲುವೂ ಭಿನ್ನವಾಗಿತ್ತು.

ಎನ್‌. ರಾಮ್‌ ಅವರ ಸಂಪಾದಕತ್ವದಲ್ಲಿನ ಅಂದಿನ ‘ದಿ ಹಿಂದೂ’, ಆರ್ಥಿಕ ಮತ್ತು ಇತರ ಪ್ರಮುಖ ವಿಚಾರಗಳಲ್ಲಿ ಎಡಪಂಥೀಯ, ಉದಾರ ಚಿಂತನೆ ಬಗ್ಗೆ ಒಲವು ಹೊಂದಿದ್ದರೆ, ನಾವು (ಇಂಡಿಯನ್‌ ಎಕ್ಸ್‌ಪ್ರೆಸ್‌) ಬಲಪಂಥದ ಪರ ನಿಲುವು ತಳೆದಿದ್ದೆವು. ಒಂದು ನಾಟಕೀಯ ವಿದ್ಯಮಾನವು ಇವೆರಡು ಪತ್ರಿಕೆಗಳು ಹೇಗೆ ಜತೆಯಾಗಿ ಕಾರ್ಯನಿರ್ವಹಿಸಿದವು ಎನ್ನುವುದನ್ನು ಹೇಳುವುದಕ್ಕೂ ಮುನ್ನ ಈ ವಿವರಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿತ್ತು. ಹೀಗಾಗಿ ಇದನ್ನೆಲ್ಲ ಇಲ್ಲಿ ವಿವರಿಸಬೇಕಾಯಿತು. ಈ ಘಟನೆಯಲ್ಲಿ ಎನ್. ರಾಮ್‌ ಮತ್ತು ದಿ ಹಿಂದೂ ಪತ್ರಿಕೆಯ ಪಾತ್ರ ಪ್ರಶಂಸನೀಯವಾಗಿತ್ತು ಎಂದೂ ನಾನು ಹೇಳಲು ಇಷ್ಟ ಪಡುವೆ. ಹಿಂದಿನ ವಾರ ಸುದ್ದಿ ಮಾಡಿದ್ದ ನ್ಯಾಯಮೂರ್ತಿಗಳ ನೇಮಕಾತಿ ಸಮಿತಿಯ (ಕೊಲಿಜಿಯಂ) ಹೆಸರು ಕೂಡ ಈ ವರದಿಯಲ್ಲಿ ಸೇರ್ಪಡೆಗೊಂಡಿತ್ತು.

ತನಿಖಾ ವರದಿಗಾರ್ತಿಯಾಗಿ ದೇಶಿ ಪತ್ರಿಕೋದ್ಯಮದಲ್ಲಿ ಹೆಸರು ಮಾಡಿದ್ದ ರೀತು ಸರೀನ್‌ ನೀಡಿದ್ದ ಎರಡು ಸಣ್ಣ ವರದಿಗಳು 2006ರ ನವೆಂಬರ್‌ನಲ್ಲಿ ಇಂಡಿಯನ್‌ ಎಕ್ಸ್‌ಪ್ರೆಸ್‌ನ ಮುಖಪುಟದಲ್ಲಿ ಪ್ರಕಟಗೊಂಡಿದ್ದವು. ಇವು, ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ವಿಜೇಂದರ್‌ ಜೈನ್‌ ಅವರನ್ನು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ನೀಡುವುದಕ್ಕೆ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರು ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ಸಂಬಂಧಿಸಿದ್ದವು. ಕೊಲಿಜಿಯಂನ ಕೆಲ ಸದಸ್ಯರು ಈ ಬಡ್ತಿಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಕಲಾಂ ಅವರು ಈ ನೇಮಕಕ್ಕೆ ಸಹಿ ಹಾಕಲು ಹಿಂದೇಟು ಹಾಕಿದ್ದರು.

ಈ ವಿಷಯದಲ್ಲಿ ಕಲಾಂ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವೈ. ಕೆ. ಸಭರ್‌ವಾಲ್‌ ಅವರನ್ನು ಸಂಪರ್ಕಿಸಬೇಕು ಎಂದು ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್ ಅವರು ಕೇಳಿಕೊಂಡಿದ್ದರು. ನ್ಯಾಯಮೂರ್ತಿ ಜೈನ್‌ ಅವರಿಗೆ ಬಡ್ತಿ ನೀಡುವುದಕ್ಕೆ ಸಭರ್‌ವಾಲ್‌ ಅವರೂ ಒಲವು ಹೊಂದಿದ್ದರು.

ಪಟ್ಟುಬಿಡದ ಕಲಾಂ ಅವರು, ಮೂರನೇ ಬಾರಿಗೆ ಕಡತ ಹಿಂತಿರುಗಿಸಿದ್ದರು. ಈ ಬಾರಿ ಅವರು ಹೊಸ ಮಾರ್ಗ ತುಳಿದಿದ್ದರು. ಈ ಹಿಂದೆ ಯಾವೊಬ್ಬ ರಾಷ್ಟ್ರಪತಿಯೂ ಮಾಡದ ಕೆಲಸಕ್ಕೆ ಕೈಹಾಕಿದ್ದರು. ಈ ನೇಮಕಾತಿ ಸಂಬಂಧ ಕಲಾಂ ಅವರು ಸಂಕ್ಷಿಪ್ತವಾಗಿ ತಮ್ಮ ವಿರೋಧ ಸೂಚಿಸಿದ್ದರು. ‘ನೇಮಕಾತಿ ಪ್ರಕ್ರಿಯೆಯಲ್ಲಿ, ಮೂವರು ಹಿರಿಯ ನ್ಯಾಯಮೂರ್ತಿಗಳು ಜೈನ್ ಅವರಿಗೆ ಬಡ್ತಿ ನೀಡುವ ಬಗ್ಗೆ ಕೆಲ ಅನುಮಾನಗಳನ್ನು ದಾಖಲಿಸಿದ್ದಾರೆ. ಆದಾಗ್ಯೂ ಈ ನೇಮಕಾತಿ ಕಾರ್ಯಗತಗೊಳಿಸುವ ಉದ್ದೇಶದಿಂದಲೇ ಕೊಲಿಜಿಯಂಗೆ ಇನ್ನೊಬ್ಬ ನ್ಯಾಯಮೂರ್ತಿಯನ್ನು ಸೇರ್ಪಡೆ ಮಾಡಲಾಗಿರುತ್ತದೆ’ ಎಂಬ ಕಲಾಂ ಅವರ ಟಿಪ್ಪಣಿ ಇರುವ ಮಾಹಿತಿ ತನಗೆ ಸಿಕ್ಕಿದ ಖುಷಿಯಲ್ಲಿ ಭರ್ಜರಿ ಸುದ್ದಿ ಬರೆದುಕೊಡುವ ಉಮೇದಿನಲ್ಲಿ ರೀತು ಸುದ್ದಿಮನೆಗೆ ಕಾಲಿಟ್ಟಿದ್ದಳು.

ಹಲವಾರು ಅನುಮಾನಗಳನ್ನು ಪರಿಹರಿಸಿಕೊಂಡ ನಂತರ ಈ ಅಪರೂಪದ ಸುದ್ದಿ ಪ್ರಕಟಿಸುವ ನಿರ್ಧಾರಕ್ಕೆ ಬಂದಿದ್ದೆವು. ಅಷ್ಟೊತ್ತಿಗೆ ಹಠಾತ್ತಾಗಿ ನಮಗೊಂದು ಗಂಡಾಂತರ ಎದುರಾಗಿದ್ದರಿಂದ ಕೈಕಟ್ಟಿ ಕುಳಿತುಕೊಳ್ಳಬೇಕಾಯಿತು.

2006ರ ನವೆಂಬರ್‌ ತಿಂಗಳಲ್ಲಿ ದೆಹಲಿಯಲ್ಲಿ ಅಕ್ರಮ ಕಟ್ಟಡಗಳ ವಿರುದ್ಧದ ಕಾರ್ಯಾಚರಣೆ ತೀವ್ರಗೊಂಡಿತ್ತು. ನ್ಯಾಯಮೂರ್ತಿ ಜೈನ್‌ ಅವರ ನೇತೃತ್ವದಲ್ಲಿನ ದೆಹಲಿ ಹೈಕೋರ್ಟ್‌ ಪೀಠವು ನಗರದಲ್ಲಿನ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಲು, ಕಟ್ಟಡಗಳ ಕಚೇರಿಗಳಿಗೆ ಬೀಗ ಹಾಕಲು ಸೂಚಿಸಿತ್ತು. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಯುತ್ತಿತ್ತು. ದಕ್ಷಿಣ ಭಾಗದಲ್ಲಿನ ಕುತುಬ್‌ ಇನ್‌ಸ್ಟಿಟ್ಯೂಷನಲ್‌ ಪ್ರದೇಶದಲ್ಲಿನ ಎರಡು ಕಟ್ಟಡಗಳಲ್ಲಿ ನಮ್ಮ ಪತ್ರಿಕೆ ಕಾರ್ಯನಿರ್ವಹಿಸುತ್ತಿತ್ತು. ಆ ಪ್ರದೇಶದಲ್ಲಿನ ಭೂಮಿಯನ್ನು ಸಾಂಸ್ಥಿಕ ಚಟುವಟಿಕೆ ನಡೆಸುವ ಉದ್ದೇಶಕ್ಕೆ ದತ್ತಿ ಸಂಸ್ಥೆಗಳು ಮತ್ತು ಟ್ರಸ್ಟ್‌ಗಳಿಗೆ ಅಗ್ಗದ ದರದಲ್ಲಿ ಹಂಚಿಕೆ ಮಾಡಲಾಗಿತ್ತು. ಆದರೆ, ಅನೇಕ ಟ್ರಸ್ಟ್‌ಗಳು ಈ ಭೂಮಿಯನ್ನು ಇನ್ನೊಬ್ಬರಿಗೆ ಪರಭಾರೆ ಮಾಡಿದ್ದವು ಅಥವಾ ಹೆಚ್ಚುವರಿ ಜಾಗ ಆಕ್ರಮಿಸಿಕೊಂಡು ಕಟ್ಟಡ ಕಟ್ಟಿದ್ದವು. ಹಣದಾಸೆಗಾಗಿ, ಅನುಮತಿ ನೀಡಿದ್ದಕ್ಕಿಂತ ಹೆಚ್ಚಿನ ಸ್ಥಳವನ್ನು ಬಾಡಿಗೆಗೆ ನೀಡಿದ್ದವು.

ನವೆಂಬರ್‌ 18ರ ಮಧ್ಯಾಹ್ನ, ಹೈಕೋರ್ಟ್‌ ನೇಮಿಸಿದ್ದ ಸಮಿತಿಯು ತನ್ನ ನಿರ್ಧಾರ ಜಾರಿಗೊಳಿಸಲು ಸ್ಥಳಕ್ಕೆ ಆಗಮಿಸಿತ್ತು. ಮಾಲೀಕತ್ವ ಬದಲಾದ 7 ಕಟ್ಟಡಗಳಿಗೆ ಬೀಗ ಜಡಿಯಲಾಯಿತು. ನಮ್ಮ ಪತ್ರಿಕಾಲಯ ಇದ್ದ ಕಟ್ಟಡಕ್ಕೂ ಬೀಗ ಹಾಕಲಾಯಿತು. ನಾವು ಹಠಾತ್ತಾಗಿ ಬೀದಿಗೆ ಬಿದ್ದಿದ್ದೆವು. ಇನ್ನೊಂದು ಕೆಟ್ಟಪ್ರತಿಕೂಲತೆಯೊಂದು ನಮಗೆ ಎದುರಾಗಿತ್ತು. ಕಲಾಂ ಅವರ ಟಿಪ್ಪಣಿ ಒಳಗೊಂಡ ವಿಶೇಷ ವರದಿಯನ್ನು ಪ್ರಕಟಿಸಲು ನಮಗೆ ಸಾಧ್ಯವಿಲ್ಲ ಎನ್ನುವುದು ನಿಧಾನವಾಗಿ ನಮ್ಮ ಅರಿವಿಗೆ ಬರತೊಡಗಿತು.

ಪತ್ರಿಕಾಲಯಕ್ಕೆ ಬೀಗ ಜಡಿಯಲು ಕಾರಣವಾದ ಆದೇಶ ನೀಡಿದ್ದ ನ್ಯಾಯಮೂರ್ತಿ ವಿರುದ್ಧದ ವರದಿಯನ್ನು ಪ್ರಕಟಿಸುವುದಾದರೂ ಹೇಗೆ ಎನ್ನುವ ಸಂದಿಗ್ಧತೆ ಎದುರಾಗಿತ್ತು. ನಾವು ದೇಶದ ಎಲ್ಲ ಪ್ರಮುಖ ವಕೀಲರನ್ನು ಸಂಪರ್ಕಿಸಿ ಸಲಹೆ ಕೇಳಿದೇವು. ಅವರಿಗೆಲ್ಲ ವಿಷಯ ಮನದಟ್ಟಾಗಿತ್ತು. ಆದರೆ, ನ್ಯಾಯಮೂರ್ತಿ ವಿರುದ್ಧದ ವರದಿ ಪ್ರಕಟಿಸಬೇಡಿ. ಅದು ಪ್ರತೀಕಾರದ ಆಯಾಮ ಪಡೆಯಬಹುದು ಮತ್ತು ನ್ಯಾಯಾಂಗ ನಿಂದನೆಗೂ ಅವಕಾಶ ಮಾಡಿಕೊಡಬಹುದು ಎಂದೇ ಅವರೆಲ್ಲ ಒಂದೇ ಬಗೆಯ ಸಲಹೆ ನೀಡಿದ್ದರು. ನಾವು ಬೀದಿಗೆ ಬಿದ್ದಿದ್ದರೂ, ಮನೆಯಿಂದಲೇ ಕೆಲಸ ನಿರ್ವಹಿಸಿದರೂ ನಮ್ಮ ಕೈಯಲ್ಲಿದ್ದ ವಿಶೇಷ ವರದಿ ಪ್ರಕಟಿಸಲಾಗದ ಅಸಹಾಯಕತೆ ನಮ್ಮದಾಗಿತ್ತು.

ಕಿರಿಯ ಪತ್ರಕರ್ತರಿಗೆ ಕೊಡುವ ಉದ್ದೇಶದಿಂದ ನಾನು, ಬೆಂಜಮಿನ್ ಬ್ರ್ಯಾಡ್ಲಿ ಅವರ ‘ಎ ಗುಡ್‌ ಲೈಫ್‌’ ಪುಸ್ತಕದ ಹಲವು ಪ್ರತಿಗಳನ್ನು ನನ್ನ ಬಳಿ ಇಟ್ಟುಕೊಂಡಿರುವೆ. ಹಾಗೇ ಸುಮ್ಮನೆ ಅರೆ ಮನಸ್ಸನಿಂದ ಈ ಪುಸ್ತಕದ ಹಾಳೆ ತಿರುವಿ ಹಾಕುವಾಗ ಪೆಂಟಗನ್‌ ಪೇಪರ್ಸ್‌ ವಿಷಯ ಗಮನ ಸೆಳೆಯಿತು. ಅದನ್ನು ಓದುತ್ತಿದ್ದಂತೆ ನನಗೊಂದು ಆಲೋಚನೆ ಹೊಳೆಯಿತು. ಅದನ್ನು ನನ್ನ ಸಹೋದ್ಯೋಗಿಗಳ ಜತೆ ಹಂಚಿಕೊಂಡೆ. ಅವರೂ ಅದಕ್ಕೆ ಸಮ್ಮತಿಸಿದರು. ನಮ್ಮ ಹಳೆಯ ಸುದ್ದಿ ಮನೆಗೆ ಹೋಗಿ ವರದಿ ಪ್ರಕಟಿಸುವ ಬದಲಿಗೆ ಬೇರೆ ಪತ್ರಿಕೆ ಮೂಲಕ ಈ ವರದಿ ಪ್ರಕಟಗೊಳ್ಳುವಂತೆ ಮಾಡುವ ಬಗ್ಗೆ ನಾವು ನಿರ್ಧಾರಕ್ಕೆ ಬಂದೇವು.

ಚೆನ್ನೈನಲ್ಲಿ ಇದ್ದ ಎನ್‌. ರಾಮ್‌ ಅವರಿಗೆ ಫೋನ್‌ ಮಾಡಿದೆ. ಉಭಯಕುಶಲೋಪರಿ ನಂತರ, ಪೆಂಟಗನ್‌ ಪೇಪರ್ಸ್‌ಗೆ ಸಂಬಂಧಿಸಿದಂತೆ ನೀಲ್‌ ಶೀಹನ್ ಅವರ ವಿಶೇಷ ವರದಿ ಪ್ರಕಟಿಸದಂತೆ ನ್ಯಾಯಾಧೀಶರೊಬ್ಬರು ದಿ ನ್ಯೂಯಾರ್ಕ್‌ ಟೈಮ್ಸ್‌ಗೆ ತಡೆಯಾಜ್ಞೆ ನೀಡಿದ್ದು ನಿಮಗೆ ನೆನಪಿದೇಯಾ ಎಂದು ಪ್ರಶ್ನಿಸಿದೆ. ‘ಆ ವಿಷಯ ನನಗೆ ಚೆನ್ನಾಗಿ ಗೊತ್ತು’ ಎಂದು ರಾಮ್‌ ಉತ್ತರಿಸಿದರು. ದಿ ನ್ಯೂಯಾರ್ಕ್‌ ಟೈಮ್ಸ್‌ ತನ್ನ ಬಳಿ ಇದ್ದ ದಾಖಲೆಗಳನ್ನು ದಿ ವಾಷಿಂಗ್ಟನ್‌ ಪೋಸ್ಟ್‌ಗೆ ಹಸ್ತಾಂತರಿಸಿತ್ತು. ಈ ವರದಿ ಪ್ರಕಟಿಸಲು ಆ ಪತ್ರಿಕೆಗೆ ಯಾವುದೇ ನಿರ್ಬಂಧ ಇದ್ದಿರಲಿಲ್ಲ. ನಾನು ಕೂಡ ಅಂತಹ ಇಕ್ಕಟ್ಟಿನ ಸ್ಥಿತಿಯಲ್ಲಿ ಇರುವುದನ್ನು ರಾಮ್‌ ಅವರ ಗಮನಕ್ಕೆ ತಂದೆ. ಅಪರೂಪದ ಸುದ್ದಿಯೊಂದು ಸುದ್ದಿಯಾಗದೇ ಹೋಗುವುದನ್ನು ತಡೆಯುವ ಉದ್ದೇಶಕ್ಕೆ ನಾವಿಬ್ಬರೂ ನಮ್ಮ ಸೈದ್ಧಾಂತಿಕ ಭಿನ್ನಮತ ಮರೆತು ಪರಸ್ಪರ ಕೈಜೋಡಿಸಲು ಮುಂದಾಗಿದ್ದೆವು.

ದೆಹಲಿಯಲ್ಲಿ ನಡೆಯಲಿದ್ದ, ಮಣಿಶಂಕರ ಅಯ್ಯರ್‌ ಅವರ ಮಗಳು ಯಾಮಿನಿಯ ಆರತಕ್ಷತೆ ಸಮಾರಂಭಕ್ಕೆ ತಾವು ಬರುತ್ತಿರುವುದಾಗಿ ಮಾಹಿತಿ ನೀಡಿದ ರಾಮ್‌, ಅಲ್ಲಿ ಭೇಟಿಯಾಗೋಣ ಎಂದು ಹೇಳಿದ್ದರು. ನಿಗದಿಯಂತೆ ಆರತಕ್ಷತೆಯ ದಿನ ನಾವಿಬ್ಬರು ಅಯ್ಯರ್‌ ಅವರ ಬಂಗ್ಲೆಯ ಹುಲ್ಲುಹಾಸಿನ ಮೇಲೆ ಭೇಟಿಯಾದೆವು. ನಾನು ನನ್ನ ಜಾಕೆಟ್‌ನಿಂದ ಮುದ್ರಿತ ಪ್ರತಿ ಹೊರ ತೆಗೆದು ರಾಮ್‌ ಅವರಿಗೆ ಹಸ್ತಾಂತರಿಸಿದೆ. ಪತ್ರಿಕೋದ್ಯಮದ ಕಟ್ಟುನಿಟ್ಟಿನ ಪರಿಭಾಷೆಯಲ್ಲಿ ಹೇಳುವುದಾದರೆ ಇದೊಂದು ದ್ರೋಹದ ಕೃತ್ಯವಾಗಿತ್ತು. ಪ್ರತಿಸ್ಪರ್ಧಿ ಪತ್ರಿಕೆಗೆ ಸುದ್ದಿ ನೀಡುವ ಅಪರಾಧಕ್ಕಿಂತ, ಪ್ರಕಟ ಮಾಡಲು ಸಾಧ್ಯವಿಲ್ಲದ ಕಾರಣಕ್ಕೆ ಸುದ್ದಿಯೊಂದನ್ನು ಸಾಯಿಸುವುದು ದೊಡ್ಡ ಅಪರಾಧ ಆಗಲಿದೆ ಎನ್ನುವುದು ನನ್ನ ನಿಲುವಾಗಿತ್ತು.

ಮರು ದಿನ ಈ ಸುದ್ದಿ ದಿ ಹಿಂದೂ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿತ್ತು. (http://www.thehindu.com/todays-paper/A-controversial-judicial-appointment/article15728178.ece). ಆ ಪತ್ರಿಕೆಯ ವರದಿಗಾರ ಆ ಸುದ್ದಿಗೆ ಮಾಹಿತಿ ಸೇರಿಸಿ ಮೌಲ್ಯವರ್ಧನೆ ಮಾಡಿದ್ದ. ಕೊಲಿಜಿಯಂನ ನ್ಯಾಯಮೂರ್ತಿಯೊಬ್ಬರು ಅನಾಮಧೇಯರಾಗಿ ತಮ್ಮ ಹೇಳಿಕೆ ನೀಡಿರುವುದನ್ನೂ ಆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಈ ವರದಿ ಪ್ರಕಟಗೊಂಡರೂ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯು ನ್ಯಾಯಮೂರ್ತಿ ಜೈನ್‌ ಅವರ ಬಡ್ತಿ ಪರವಾಗಿಯೇ ಗಟ್ಟಿಯಾಗಿ ನಿಂತಿದ್ದರು. ಆದರೆ, ಅದು ಕಲಾಂ ಮತ್ತು ಅವರಿಗೆ ಸಂಬಂಧಿಸಿದ ವಿಷಯವಾಗಿತ್ತು.

ಈ ನೇಮಕ ತಡೆಯುವುದೇ ನಮ್ಮ ಉದ್ದೇಶವಾಗಿರಲಿಲ್ಲ. ದಿ ಹಿಂದೂದಲ್ಲಿ ಪ್ರಕಟವಾದ ವರದಿಯು ಸುಪ್ರೀಂ ಕೋರ್ಟ್‌ ನಂತರದ ದಿನಗಳಲ್ಲಿ ರಚಿಸಿದ ಕೊಲಿಜಿಯಂನ ಆಯ್ಕೆ ಪ್ರಕ್ರಿಯೆ ಮೇಲೆ ಯಾವುದಾದರೂ ಪ್ರಭಾವ ಬೀರಿರುವುದು ಕೂಡ ನಮಗೆ ಗೊತ್ತಾಗಲಿಲ್ಲ.

ಅತ್ಯಂತ ಮಹತ್ವದ ಮತ್ತು ನೈಜ ಸುದ್ದಿಯೊಂದು ಪ್ರಕಟವಾಗಲೇಬೇಕು ಎನ್ನುವ ಹಂಬಲ ಮಾತ್ರ ನಮ್ಮನ್ನು ಸತತವಾಗಿ ಕಾಡುತ್ತಲೇ ಇರುತ್ತದೆ. ವಿಶಾಲ ಹೃದಯದ ಎನ್‌. ರಾಮ್‌ ಅವರಿಂದಾಗಿ ಮಾತ್ರ ಈ ಸುದ್ದಿ ಪ್ರಕಟಗೊಂಡಿತು. ಇಲ್ಲಿ ನಮಗೆ ಪೆಂಟಗನ್‌ ಪೇಪರ್ಸ್‌ ಪ್ರಚೋದನೆ ನೀಡಿರುವುದಕ್ಕಿಂತ ಸ್ಫೂರ್ತಿ ನೀಡಿದ್ದೇ ಹೆಚ್ಚು ಮುಖ್ಯವಾಗಿತ್ತು.

ದೇಶಿ ಪತ್ರಿಕೋದ್ಯಮದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು (ಎಫ್‌ಡಿಐ) ಮೊದಲ ಬಾರಿಗೆ ಕಾರ್ಯಗತಗೊಳಿಸಿದ ಹೆಗ್ಗಳಿಕೆ ‘ದೈನಿಕ ಜಾಗರಣ’ ಮಾಧ್ಯಮ ಸಮೂಹಕ್ಕೆ ಸಲ್ಲುತ್ತದೆ. ಅದರ ಮೊದಲ ಹೂಡಿಕೆದಾರರು ‘ಐರಿಷ್‌ ಇಂಡಿಪೆಂಡೆಂಟ್’ ಪತ್ರಿಕೆಯ ಒಡೆತನ ಹೊಂದಿದ್ದರು. 2007ರ ಆರಂಭದಲ್ಲಿ, ದೈನಿಕ ಜಾಗರಣ ಮಾಧ್ಯಮ ಸಮೂಹವು ಹೂಡಿಕೆದಾರರನ್ನು ಪರಿಚಯಿಸಲು ದೆಹಲಿಯಲ್ಲಿ ಔತಣಕೂಟ ಆಯೋಜಿಸಿತ್ತು. ಅಲ್ಲಿ ನಾನು ಎರಡು ಪರಿಚಿತ ಮುಖಗಳನ್ನು ಕಂಡೆ. ಅವರಲ್ಲೊಬ್ಬರು ಶಾನ್‌ ಕಾನರಿ ಆಗಿದ್ದರು. ಅವರು ಐರ‍್ಲೆಂಡ್‌ನವರಾಗಿದ್ದರು.

ಐರಿಷ್‌ ಇಂಡಿಪೆಂಡೆಂಟ್‌ನ ನಿರ್ದೇಶಕ ಮಂಡಳಿಯಲ್ಲಿ ಇದ್ದರು. ಇನ್ನೊಬ್ಬ ಗಣ್ಯ ವ್ಯಕ್ತಿಯತ್ತ ಸಾಗಿ, ‘ನೀವು ಬೆಂಜಮಿನ್‌ ಬ್ರ್ಯಾಡ್ಲಿ ಅವರಂತೆ ಕಾಣುತ್ತೀರಿ’ ಎಂದೆ. ‘ನಾನೇ ಬ್ರ್ಯಾಡ್ಲಿ’ ಎಂದು ಅವರು ಉತ್ತರಿಸಿದರು. ಅವರೂ ಕೂಡ ಐರ‍್ಲೆಂಡ್‌ನವರಾಗಿದ್ದರು. ಎಕ್ಸ್‌ಪ್ರೆಸ್‌ ಮತ್ತು ಹಿಂದೂ ಜತೆಯಾಗಿ ಸುದ್ದಿ ಪ್ರಕಟಿಸಿದ್ದನ್ನು, ಅದಕ್ಕೆ ಅವರೇ ಮುಖ್ಯ ಪ್ರೇರಣೆ ಆಗಿರುವುದನ್ನು ನಾನು ಅವರ ಗಮನಕ್ಕೆ ತಂದೆ. ಆನಂತರ ಎನ್‌ಡಿಟಿವಿಯ ‘ವಾಕ್‌ ದ ಟಾಕ್’ ಸಂದರ್ಶನಕ್ಕೆ ಅವರನ್ನು ಒಪ್ಪಿಸಿದೆ. ಅದೊಂದು ಅಷ್ಟೊಂದು ಜನಪ್ರಿಯ ಕಾರ್ಯಕ್ರಮ ಆಗಿರದಿದ್ದರೂ ತುಂಬ ಕಾಲ ನೆನಪಿನಲ್ಲಿ ಉಳಿದ ಸಂಭಾಷಣೆ ಅದಾಗಿತ್ತು.

(ಲೇಖಕ ‘ದಿ ಪ್ರಿಂಟ್‌’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry