ಕೆನ್ನಾಯಿ- ಆಕೆ ರ‌್ಯಾಂಕ್ ವಿದ್ಯಾರ್ಥಿನಿ, ನಾವು ಜಸ್ಟ್ ಪಾಸ್...

7

ಕೆನ್ನಾಯಿ- ಆಕೆ ರ‌್ಯಾಂಕ್ ವಿದ್ಯಾರ್ಥಿನಿ, ನಾವು ಜಸ್ಟ್ ಪಾಸ್...

Published:
Updated:
ಕೆನ್ನಾಯಿ- ಆಕೆ ರ‌್ಯಾಂಕ್ ವಿದ್ಯಾರ್ಥಿನಿ, ನಾವು ಜಸ್ಟ್ ಪಾಸ್...

ಆಗ ನಾವು ‘ಕೆನ್ನಾಯಿ’ ಎಂಬ ಹೆಣ್ಣು ಕಾಡುನಾಯಿಯನ್ನು ಹಿಂಬಾಲಿಸುತ್ತಿದ್ದೆವು. ಆಕೆಯ ತಾಯಿ, ಕೆಲವು ವರ್ಷಗಳ ಹಿಂದೆ ತನ್ನ ಮರಿಗಳಿದ್ದ ಗೂಡಿನ ಬಳಿ ಬಂದ ಹುಲಿಯನ್ನು ಓಡಿಸುವ ಯತ್ನದಲ್ಲಿ ಸಾವನ್ನಪ್ಪಿದ್ದಳು.ತಾಯಿಯ ಸಾವಿನ ಬಳಿಕ ಅಪ್ಪ ನೆರೆಯ ಗುಂಪಿನಿಂದ ಬೇರೊಬ್ಬಳನ್ನು ಕರೆತಂದ. ಬದಲಾದ ಸನ್ನಿವೇಶದಲ್ಲಿ ಕೆನ್ನಾಯಿ ಗುಂಪು ಬಿಟ್ಟು ತನ್ನ ಕನಸುಗಳೊಂದಿಗೆ ಹೊರನಡೆದಳು. ಆಗ ಆಕೆಗೆ ಹದಿನಾಲ್ಕು ತಿಂಗಳ ಪ್ರಾಯ.

ಅನೇಕ ತಿರುವುಗಳು ಹಾಗೂ ಹಲವಾರು ಉಪಕಥೆಗಳೊಂದಿಗೆ ಸಾಗಿದ ಆಕೆಯ ಬದುಕು ಒಂದು ಮಹಾಕಾವ್ಯದಂತೆ ಮುಂದುವರೆದಿತ್ತು. ಈ ಮಹಾಕಾವ್ಯದಲ್ಲಿ ಮೂಕ ಪ್ರೇಕ್ಷಕರಾಗಿ ಕಳೆದುಹೋಗಿದ್ದ ನಮಗೆ ಬಿದ್ದ ಸರ್ಕಾರಗಳ ಬಗ್ಗೆಯಾಗಲಿ, ಜೈಲು ಸೇರಿದ ನಾಯಕರ ಸುದ್ದಿಗಳಾಗಲಿ ತಿಳಿಯುವಷ್ಟರಲ್ಲಿ ವರ್ಷ ಉರುಳಿರುತ್ತಿತ್ತು.

‘ಕೆನ್ನಾಯಿ’ಯನ್ನು ಹಿಂಬಾಲಿಸುತ್ತಾ ನಾಲ್ಕು ವರ್ಷಗಳಾಗಿದ್ದರೂ, ಅವಳು ಮತ್ತೆ ಮತ್ತೆ ನಮ್ಮನ್ನು ಚಕಿತಗೊಳಿಸುತ್ತಲೇ ಇದ್ದಳು. ಈ ಬಾರಿಯೂ ಹಾಗೇ ಆಯಿತು. ಆಕೆ ಗೂಡು ಮಾಡಿ, ಮರಿ ಹಾಕಿ ಒಂದು ತಿಂಗಳು ಕಳೆದಿತ್ತು. ಆದರೆ, ಕಳೆದ ಹತ್ತು ದಿನಗಳಿಂದ ಅವುಗಳ ಸುಳಿವೇ ಇಲ್ಲ. ಗೂಡಿನ ಬಳಿ ಹುಲಿ ಬಂದುಹೋದ ಕುರುಹುಗಳಿತ್ತು. ಏನೋ ಚಕಮಕಿ ನಡೆದಿರಬಹುದು. ಚಿಕ್ಕ ಚಿಕ್ಕ ಮರಿಗಳನ್ನೆತ್ತಿಕೊಂಡು ಗೂಡು ತೊರೆದುಹೋಗಿದ್ದ ಗುಂಪು, ಯಾವ ದಿಕ್ಕಿಗೆ ಹೋಗಿರಬಹುದೆಂಬ ಸೂಚನೆ ಕೂಡ ಸಿಕ್ಕಿರಲಿಲ್ಲ.

ಆ ಹೊತ್ತಿಗೆ, ಕಾಡುನಾಯಿಗಳ ಎಷ್ಟೋ ತಲೆಮಾರುಗಳೊಂದಿಗೆ ಸಂಭಾಷಿಸಿದ್ದೆವು. ಹಾಗಾಗಿ ಕೆನ್ನಾಯಿಯ ಗುಂಪು ಮರಿಮಾಡುವ ಪೊಟರೆಗಳು, ವಿಶ್ರಮಿಸಲು ಬಳಸುವ ಗೌಪ್ಯ ಸ್ಥಳಗಳು ಎಲ್ಲವೂ ನಮಗೆ ತಿಳಿದಿದ್ದವು. ಅಷ್ಟೇ ಅಲ್ಲ, ಕೆನ್ನಾಯಿಯ ಗುಂಪನ್ನು ಬಿಟ್ಟು ಓಡಿಹೋಗಲು ಸಂಚು ಹೂಡುತ್ತಿದ್ದ ಅವಳ ಇಬ್ಬರು ಗಂಡುಮಕ್ಕಳ ಒಳಗುಟ್ಟು ಕೂಡ ನಮಗೆ ತಿಳಿದಿತ್ತು. ಹೀಗೆಲ್ಲ ನಾವು ಆತ್ಮವಿಶ್ವಾಸದಿಂದ ಬೀಗುತ್ತಿರುವಾಗ ‘ಯಾರ ಜಪ್ತಿಗೂ ಸಿಗದ’ ಜಾಯಮಾನ ತಮ್ಮದೆಂದು ನೆನಪಿಸಿ ಅವು ಕಣ್ಮರೆಯಾಗಿದ್ದವು.

ಇದೇನೂ ಹೊಸದಲ್ಲ. ಎದುರಾದಾಗಲ್ಲೆಲ್ಲ ಅವು ಹೊಸ ಹೊಸ ಪ್ರಶ್ನೆಗಳನ್ನು ಮುಂದಿಟ್ಟಿವೆ. ಮನೆಗೆ ಮರಳಿ, ಇಸ್ರೇಲಿನ ಬ್ಯಾಬ್ಲರ್ ಹಕ್ಕಿಗಳಿಂದ ಆಫ್ರಿಕಾ ದೇಶದ ಕಾಡುನಾಯಿಗಳವರೆಗೆ, ಗುಂಪಿನಲ್ಲಿ ಬದುಕುವ ಜೀವಿಗಳ ಬಗೆಗೆ ಪ್ರಕಟವಾಗಿರುವ ವೈಜ್ಞಾನಿಕ ಪ್ರಬಂಧಗಳನ್ನೆಲ್ಲ ತಿರುವಿಹಾಕಿ, ನುರಿತ ವಿಜ್ಞಾನಿಗಳೊಂದಿಗೆ ಚರ್ಚಿಸಿ, ಉತ್ತರ ಕಂಡುಕೊಂಡ ಹುಮ್ಮಸ್ಸಿನಿಂದ ವಾಪಾಸಾದಾಗ ಇನ್ನೆರಡು ಹೊಸ ಪ್ರಶ್ನೆಗಳನ್ನೆಸೆದು ಮಾಯವಾಗುತ್ತಿದ್ದವು.

ಗುಂಪಿನಲ್ಲಿ ವಾಸಿಸುವ ನಮ್ಮ ಕಾಡುನಾಯಿಗಳು ಅತ್ಯಂತ ಸೂಕ್ಷ್ಮಸ್ವಭಾವದ ಕಾಡುಜೀವಿಗಳು. ಚಿರತೆಗಳಂತೆ ಊರುಕೇರಿಗಳಲ್ಲಿ ಅವು ಕಾಣಿಸಿಕೊಳ್ಳುವುದಿಲ್ಲ. ಗುಂಪಿನ ನಡೆನುಡಿಗಳನ್ನೆಲ್ಲ ನಿರ್ಧರಿಸುವುದು, ನಿಯಂತ್ರಿಸುವುದು ಆ ಗುಂಪಿನ ನಾಯಕ ಮತ್ತು ನಾಯಕಿ.

ಸಂತಾನೋತ್ಪತ್ತಿಯ ಹಕ್ಕು ಕೂಡ ಇವೆರಡಕ್ಕೆ ಮಾತ್ರ. ಉಳಿದ ಸದಸ್ಯರೆಲ್ಲ ಗುಂಪಿನ ಏಳಿಗೆಗಾಗಿ ದುಡಿಯಬೇಕು. ಪ್ರತಿ ಸದಸ್ಯರಿಗೂ ಗುಂಪಿನಲ್ಲಿ ಹಿರಿತನ–ಕಿರಿತನದ ಪಟ್ಟವಿರುತ್ತದೆ. ಕಾಡಿನ ನಿರ್ದಿಷ್ಟ ವಲಯವನ್ನು ಗುರುತಿಸಿಕೊಂಡು ಸಾಮ್ರಾಜ್ಯ ನಡೆಸುವುದು ಇವುಗಳ ಸ್ವಭಾವ. ಇದಿಷ್ಟನ್ನು ದಾಟಿ ಅವುಗಳ ಅಂತರಂಗವನ್ನು ಅರ್ಥಮಾಡಿಕೊಳ್ಳಲು ಕೈ ಹಾಕಿದಾಗ, ಹಾದಿ ತಪ್ಪಿ ಜೀವಮಾನವಿಡೀ ಕಾಡಿನಲ್ಲಿ ಅಲೆಯುವುದು ದಿನಚರಿಯಾಗುತ್ತದೆ.

ಆ ದಿನ ಕೆನ್ನಾಯಿಯ ಗುಂಪನ್ನು ಹುಡುಕಿ ಸೋತು, ಹಣ್ಣಾಗಿ ಹಿಂದಿರುಗುವಾಗ ಕಾಡಿನಂಚಿನಲ್ಲಿದ್ದ ಗುಡ್ಡದತ್ತ ಬಂದೆವು. ಯಾವುದೋ ಸದ್ದು ಕೇಳಿದಂತಾಯಿತು. ಅದು ನಾವು ಕೇಳಿದ್ದ ಸದ್ದು, ಕಿವಿಗಳಿಗೆ ಪರಿಚಯವಿದ್ದ ಸದ್ದು. ಹಸಿದ ಮರಿಗಳು ಆಹಾರಕ್ಕಾಗಿ ಬೇಡಿಕೆ ಸಲ್ಲಿಸುತ್ತಿದ್ದ ಸದ್ದು.ಮಾರನೆಯ ದಿನ ಕೆನ್ನಾಯಿ ಆ ಗುಡ್ಡದಲ್ಲಿ ಗೂಡು ಮಾಡಿರುವುದನ್ನು ಖಾತ್ರಿಮಾಡಿಕೊಂಡೆವು. ಪಕ್ಕದಲ್ಲೇ ಜೇನು ಕುರುಬರ ಹಾಡಿಯೊಂದಿತ್ತು. ತುಸು ದೂರದಲ್ಲಿ ಒಂದು ಹಳ್ಳಿಯೂ ಇತ್ತು. ಅವು ಕುರುಬರ ಹಾಡಿಯ ಮಗ್ಗುಲಿಗೇ ಬಂದು ಮರಿಮಾಡಿರುವುದು ಒಗಟಾಗಿ ಕಂಡಿತ್ತು.

ಅವಳ ಈ ವಿಚಿತ್ರ ವರ್ತನೆಗೆ ಕಾರಣಗಳೇನಿರಬಹುದೆಂದು ಯೋಚಿಸುವುದಕ್ಕಿಂತ, ಗೂಡಿನ ಬಳಿ ಜನರಾರೂ ಹೋಗದಂತೆ ಯೋಜನೆ ರೂಪಿಸುವುದು ಆ ಹೊತ್ತಿನ ಮುಖ್ಯ ಕೆಲಸವಾಗಿತ್ತು. ಯಾರಾದರೂ, ಆಕಸ್ಮಿಕವಾಗಿ ಗೂಡಿನತ್ತ ತೆರಳಿದರು ಕೂಡ, ‘ಕೆನ್ನಾಯಿ’ ಮರಿಗಳನ್ನು ಕರೆದುಕೊಂಡು ಕಣ್ಮರೆಯಾಗುತ್ತದೆಂದು ನಮಗೆ ತಿಳಿದಿತ್ತು. ಮತ್ತೆ ಅವುಗಳನ್ನು ಹುಡುಕಿ ಕಾಡಿನಲ್ಲಿ ಅಲೆಯಲು ನಾವು ತಯಾರಿರಲಿಲ್ಲ.

ಈ ಹಿನ್ನೆಲೆಯಲ್ಲಿ ಗುಡ್ಡಕ್ಕೆ ಕಾವಲು ನೇಮಿಸುವುದೊಂದೇ ನಮಗಿದ್ದ ಏಕೈಕ ದಾರಿ. ಅತ್ತ ಬರುವ ಜನರನ್ನು ಗೂಡಿನತ್ತ ತೆರಳದಂತೆ ಉಪಾಯವಾಗಿ ದಾರಿತಪ್ಪಿಸುವುದಷ್ಟೆ ಅದರ ಉದ್ದೇಶವಾಗಿತ್ತು. ಇದೇನು ಅಷ್ಟು ಸುಲಭದ ಕೆಲಸವಾಗಿರಲಿಲ್ಲ.

ಮುಂಜಾನೆಯಿಂದ ಸಂಜೆಯವರೆಗೆ ಬೇರೇನನ್ನೂ ಮಾಡದೆ, ಯಾರಿಗೂ ಕಾಣದಂತೆ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ಕದ್ದು ಕುಳಿತು, ಗೂಡಿನತ್ತ ನೋಟವನ್ನು ಕೇಂದ್ರೀಕರಿಸಿ ನಾಯಿಗಳ ಚಲನವಲನಗಳನ್ನು ಗಮನಿಸುತ್ತಿರಬೇಕು. ಇದೊಂದು ಧ್ಯಾನದಂತೆ, ಇದನ್ನು ನಿರ್ವಹಿಸಲು ವಿಶೇಷ ಅನುವಂಶಿಕ ಗುಣಗಳೇ ಬೇಕಾಗಬಹುದು. ಇಂತಹ ಡಿ.ಎನ್.ಎ. ಇರುವ ಮಂದಿ ಯಾರಿರಬಹುದೆಂದು ಯೋಚಿಸಿದೆವು. ಖಂಡಿತವಾಗಿ ಪೇಟೆಯ ಹುಡುಗರಿಂದ ಈ ಕೆಲಸ ಸಾಧ್ಯವಿಲ್ಲವೆಂಬ ಅರಿವಿತ್ತು.

ನಾಲ್ಕು ವರ್ಷಗಳ ಹಿಂದೆ ಮುಂಬೈನ ತರುಣನೊಬ್ಬನನ್ನು ಇದೇ ಬಗೆಯ ಕೆಲಸಕ್ಕೆ ನಿಯೋಜಿಸಿಕೊಂಡಿದ್ದೆವು. ಆತ ಜೀವವಿಜ್ಞಾನದ ಅಧ್ಯಯನದಲ್ಲಿ ತರಬೇತಿ ಪಡೆದವನಾಗಿದ್ದ. ಕಾಡಿಗೆ ಬಂದಾಗ ಆತ ನಿಜಕ್ಕೂ ಭರವಸೆ ಮೂಡಿಸಿದ. ಕಾಡಿನ ಪರಿಸರದಲ್ಲಿ ಸೇರಿಹೋಗುವಂತಹ ಹಸಿರು ಬಣ್ಣದ ಬಟ್ಟೆ ತೊಟ್ಟಿದ್ದ. ಬಟ್ಟೆಯ ಮೇಲೆಲ್ಲ ಸಹಜವೆಂಬಂತೆ ಕಾಣುವ ಬಳ್ಳಿಯ ಚಿತ್ರಗಳಿದ್ದವು. ತಲೆಯ ಮೇಲಿದ್ದ ಅಗಲವಾದ ಟೋಪಿ ಮತ್ತು ಕೈಯಲ್ಲಿ ಹಿಡಿದಿದ್ದ ದುಬಾರಿ ಬೈನಾಕುಲರ್‌ಗಳು ನಮ್ಮ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದ್ದವು.

ಆದರೆ ನಮ್ಮೆಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಲು ಆತ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಕಾಡಿಗೆ ಕರೆದೊಯ್ದು, ಎಲ್ಲವನ್ನು ಪರಿಚಯಿಸಿ, ನಿರ್ವಹಿಸಬೇಕಾದ ಕೆಲಸಗಳನ್ನೆಲ್ಲ ವಿವರಿಸಿದೆವು.

ಆದರೆ ಆತ ಮಾಡಿದ್ದೇ ಬೇರೆ, ಹಂಟರ್ ಬೂಟ್ ಧರಿಸಿ, ನಾಯಿಗಳ ಗೂಡಿದ್ದ ಬಳಿ ಪೊಲೀಸಿನವರಂತೆ ಕವಾಯತು ನಡೆಸಿದ್ದ. ಬಹುಶಃ ಕಾಡುನಾಯಿಗಳು ಅವನ ವೇಷಭೂಷಣಗಳಿಗೆ ಮನಸೂರೆಗೊಳ್ಳಬಹುದೆಂದು ಭಾವಿಸಿದ್ದನೊ ಏನೋ? ಕೇವಲ ಆರ್ಧ ದಿನದಲ್ಲಿ ನಾಯಿಗಳು ಮರಿಗಳನ್ನು ಕರೆದುಕೊಂಡು ಕಾಡಿನಲ್ಲಿ ಮರೆಯಾಗಿದ್ದವು.

ಹಾಗೆ ನೋಡಿದರೆ ನಾವು ತರಬೇತಿ ನೀಡಿದ್ದ ಪಕ್ಕದ ಹಳ್ಳಿಯ ಹುಡುಗರಿಗೂ ಇಂತಹ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸುವುದು ಕಷ್ಟವಿತ್ತು. ಗಂಟೆಗಟ್ಟಲೆ ಒಂದೇ ವಿಷಯದಲ್ಲಿ ಏಕಾಗ್ರತೆಯಿಂದ ತೊಡಗಿಸಿಕೊಳ್ಳಲು, ಅವರ ಚಂಚಲ ಮನಸ್ಸುಗಳಿಗೆ ಸಾಧ್ಯವಾಗುತ್ತಿರಲಿಲ್ಲ. ಈ ಎಲ್ಲಾ ಕಾರಣಗಳಿಂದ ಆಗ ಮಾದ ನಮ್ಮ ನೆನಪಿಗೆ ಬಂದ. ಬೆಟ್ಟ ಕುರುಬರ ಮಾದ ನಮಗೆ ಹಳೆಯ ಪರಿಚಯ. ತುಂಡುಲುಂಗಿ ಸುತ್ತಿಕೊಂಡು, ಎಡಗೈಯಲ್ಲಿ ಮಚ್ಚು ಹಿಡಿದು ಒಬ್ಬಂಟಿಯಾಗಿ ಕಾಡು ಸುತ್ತುತ್ತಿದ್ದ ಆತ ಹೆಚ್ಚು ಮಾತನಾಡಿದ್ದನ್ನಾಗಲೀ ನಗುವುದನ್ನಾಗಲೀ ನಾವು ನೋಡಿರಲಿಲ್ಲ.

ಕಾಡಿನಲ್ಲಿ ಅನೇಕ ಬಾರಿ ಎದುರಿನಿಂದ ಪ್ರತ್ಯಕ್ಷಗೊಂಡಾಗ, ಕೇಳಿದ ಪ್ರಶ್ನೆಗೆ ‘ಹೌದು’ ಅಥವಾ ‘ಇಲ್ಲ’ ಎಂದಷ್ಟೇ ಹೇಳಿ ಕಾಡಿನ ಒಳದಾರಿಗಳಲ್ಲಿ ಅದೃಶ್ಯನಾಗುತ್ತಿದ್ದ. ವಿಶೇಷವೆಂದರೆ ಕಾಡಿನಲ್ಲಿ ತಾನು ಕಾಣಿಸಿಕೊಳ್ಳಬಾರದೆಂದು ತೀರ್ಮಾನಿಸಿದರೆ, ಯಾರ ಕಣ್ಣಿಗೂ ಗೋಚರಿಸದಂತೆ ದಿನಗಟ್ಟಲೆ ಕಳೆದುಹೋಗಬಲ್ಲ ಸಾಮರ್ಥ್ಯ ಆತನಿಗಿತ್ತು. ಈ ಎಲ್ಲಾ ಕಾರಣಗಳಿಂದ ಮಾದ ನಮಗೆ ಅರ್ಹ ವ್ಯಕ್ತಿಯಾಗಿ ಕಂಡ.

ಮಾದನನ್ನು ಹುಡುಕಿ ಹಾಡಿಯ ಬಳಿಹೋದಾಗ ಕ್ಯಾತ ಎದುರಾದ. ಕ್ಯಾತ ನಮಗೆ ಪರಿಚಯದ ಹುಡುಗ. ‘ಮಾದ ಎಲ್ಲಿದ್ದಾನೆ’ ಎಂದು ವಿಚಾರಿಸಿದೆವು. ಸ್ವಲ್ಪ ಯೋಚಿಸಿ ‘ಯಾವ ಮಾದ ಸಾ...’ ಎಂದು ಮರು ಪ್ರಶ್ನಿಸಿದ. ಆ ಹಾಡಿಯಲ್ಲಿರುವುದೇ ಎಂಟತ್ತು ಗುಡಿಸಲುಗಳು.

ಒಂದರಲ್ಲಿ ಕ್ಯಾತನೇ ವಾಸವಾಗಿದ್ದಾನೆ. ಉಳಿದ ಗುಡಿಸಲುಗಳೆಲ್ಲ ಅಕ್ಕಪಕ್ಕದಲ್ಲೇ ಇವೆ. ಹೀಗಿದ್ದಾಗ ಆತ ಯಾವ ಮಾದ ಎಂದು ವಿವರ ಕೇಳಿದ್ದು ನಮಗೆ ಸರಿಕಾಣಲಿಲ್ಲ. ಮುಂಬೈನಲ್ಲೋ ಬೆಂಗಳೂರಿನಲ್ಲೋ ಜನ ಹೀಗೆ ಕೇಳಿದ್ದರೆ ನಮಗರ್ಥವಾಗುತ್ತಿತ್ತು. ಆದರೆ, ಕ್ಯಾತ ನೆರೆಹೊರೆಯವರ ಪರಿಚಯವೇ ಇಲ್ಲದೆ ಬದುಕುವ ನಗರವಾಸಿಗಳಂತೆ ವರ್ತಿಸಿದ್ದು ಬೇಸರ ತರಿಸಿತು.

ಸ್ವಲ್ಪ ಸಮಾಧಾನದಿಂದ ‘ಕ್ಯಾತ... ನಮ್ಮ ಮಾದ ಕಣೋ’ ಎಂದು ನೆನಪಿಸಲೆತ್ನಿಸಿದೆವು. ಮತ್ತೆ ಸ್ವಲ್ಪ ಯೋಚಿಸಿದ ಕ್ಯಾತ, ಗುಡಿಸಿಲಿನಿಂದ ಗುಡಿಸಿಲಿಗೆ ಕಣ್ಣುಹಾಯಿಸುತ್ತಾ ‘ಇಲ್ಲಿ... ಮಾದ ಅಂತ ಏಳು ಆಳು ಇದ್ದಾರೆ ಸಾ...’ ಎಂದ.ಆಗಷ್ಟೇ, ನಮಗೆ ಕ್ಯಾತನ ಸಮಸ್ಯೆಯ ಅರಿವುಂಟಾಯಿತು.

ನಿಜ, ಈ ಕಾಡು ಕುರುಬರು ಸರಳವಾದ ಜನ. ಅವರಿಗೆ ಆಸ್ತಿ ಪಾಸ್ತಿಗಳ ಪ್ರಜ್ಞೆ ಇಲ್ಲ. ಅದು ಅವರಿಗೆ ಬೇಕಿಲ್ಲ. ಅದರ ಅವಶ್ಯಕತೆಯೂ ಇಲ್ಲ. ಆದರೆ ಬೇರೆ ಬೇರೆ ಹೆಸರನ್ನು ಇಟ್ಟುಕೊಂಡರೆ ಹೆಚ್ಚುವರಿ ಖರ್ಚೇನೂ ಆಗುವುದಿಲ್ಲವಲ್ಲ ಎಂದು ಯೋಚಿಸುತ್ತಿದ್ದಾಗ, ಗುಡಿಸಲೊಂದರಿಂದ ನಮ್ಮ ಮಾದ ಹೊರ ಬಂದ.

‘ಮಾದ, ನಿನ್ನ ಹೆಸರೇನು?’ ಎಂದು ಕೇಳಿದೆವು.

‘ಮಾದ ಸಾ...’ ಎಂದ.

ಕೂಡಲೆ ಕ್ಯಾತ ‘ಆ ಮನೆಯಲ್ಲಿರುವುದು ಮಾದ ಸಾ... ಇಲ್ಲಿರುವುದು ಕಿರಿ ಮಾದ ಸಾ... ಇವನು ನಡ್‌ಮಾದ ಸಾ...’ ಎಂದು ಬೇರೆ ಬೇರೆ ಗುಡಿಸಲುಗಳತ್ತ ಕೈ ತೋರಿ ವಿವರ ನೀಡಿದ.

‘ಮಾದ, ಎಲ್ಲಾದರು ಕೆಲಸಕ್ಕೆ ಹೋಗುತಿದ್ದೀಯ?’ ಎಂದಾಗ-

‘ಹೌದು ಸಾ...’

‘ಎಲ್ಲಿ...’

‘ಹೋಟೆಲ್ಲು ಸಾ...’

ಆಗ ನಾವು ಗೊಂದಲಕ್ಕೆ ಸಿಕ್ಕಿದೆವು. ನಮ್ಮ ಅರೆಕಾಲಿಕ ಕೆಲಸಕ್ಕೆ ಅವನ ಪರ್ಮನೆಂಟ್ ಕೆಲಸ ಬಿಡುವಂತೆ ಹೇಳುವುದು ಉಚಿತವೆನಿಸಲಿಲ್ಲ.

‘ಯಾಕೆ ಸಾ...’ ಎಂದ ಮಾದ. ಎಲ್ಲವನ್ನು ವಿವರಿಸಿ, ‘ಯಾರಾದರು ನಿನ್ನಂತಹವರು ಬೇಕಿತ್ತಲ್ಲೋ’ ಎಂದೆವು.

‘ನಾನೇ ಬರ್ತೀನಿ ಸಾ...’ ಎಂದ

‘ಅಲ್ಲವೊ ನೀನು ಕೆಲಸಮಾಡ್ತಾ ಇದಿಯಲ್ಲ...’

‘ಅದೇನೂ ಪರವಾಗಿಲ್ಲ ಸಾ... ಪ್ರಾಬ್ಲಮ್ ಇಲ್ಲ ಸಾ...’ ಎಂದು ಕೆಲಸಕ್ಕೆ ಬರಲು ಆಸಕ್ತಿ ತೋರಿದ.

ದೀರ್ಘಕಾಲ ಆದಿವಾಸಿಗಳೊಂದಿಗೆ ಒಡನಾಟ ಇರಿಸಿಕೊಂಡಿದ್ದ ನಮಗೆ ಹೋಟೆಲ್ ನೌಕರಿಯನ್ನು ದಿಢೀರ್ ಬಿಸಾಡಿ ಬಿಡುವ ಮಾದನ ತೀರ್ಮಾನ ಅಚ್ಚರಿ ಮೂಡಿಸಲಿಲ್ಲ. ಅವರ ಮನಸ್ಥಿತಿಯೇ ಭಿನ್ನವಾದದ್ದು. ದೈನಂದಿನ ಬದುಕಿಗೆ ಒಂದಿಷ್ಟು ಸಿಕ್ಕರೆ ಸಾಕು. ಉಳಿದ ಸಮಯ ಕಾಡಿನಲ್ಲಿ ಅಲೆಯಬೇಕು. ಕಂಡ ನೀರಿನಲ್ಲಿ ಮುಳುಗಿ, ಕಾಣದ ಮೀನುಗಳಿಗೆ ಗಾಳ ಬಿಸಾಡಿ, ಯೂರೋಪಿಯನ್ನರಂತೆ ಒಬ್ಬಂಟಿಯಾಗಿ ಕೂರಬೇಕು. ಇದು ಇವರ ಸಂಸ್ಕೃತಿ, ಹಾಗಾಗಿ ಅವರ ಮೊದಲ ಆಯ್ಕೆ ಕಾಡಿನೊಳಗೆ ಯಾವುದಾದರೊಂದು ಕೆಲಸ. ಅವರಿಗೆ ಮಂತ್ರಿಗಿರಿಯನ್ನಾಗಲಿ, ಡಿ.ಸಿ ಹುದ್ದೆಯನ್ನಾಗಲಿ ನೀಡಿದರೆ ಸುಖಿಗಳಾಗಿ ಇರಲಾರರು.

ನಮ್ಮ ಕಾರ್ಯ ಚಟುವಟಿಕೆಗಳನ್ನು ಅರಿತಿದ್ದ ಮಾದನಿಗೆ ಹೆಚ್ಚಿನದೇನನ್ನೂ ತಿಳಿಸಬೇಕಿರಲಿಲ್ಲ. ಆದರೂ ಪರಿಸ್ಥಿತಿಯ ಗಂಭೀರತೆಯನ್ನು ತಿಳಿಸಿ, ಗಮನಿಸಬೇಕಾದ ಅಂಶಗಳನ್ನು ಹಾಗೂ ಪ್ರತಿದಿನದ ಆಗುಹೋಗುಗಳನ್ನು ನಮಗೆ ತಿಳಿಸುವ ಬಗೆಗೆ ವಿವರಿಸಿ ಹಿಂದಿರುಗಿದೆವು. ಮೂರು ದಿನಗಳ ಕಾಲ ನಮ್ಮದೇ ಕೆಲಸಗಳ ಗಡಿಬಿಡಿಯಲ್ಲಿದ್ದಾಗ ಮಾದನ ನೆನಪೇ ಬರಲಿಲ್ಲ. ದಿನನಿತ್ಯ ವರದಿ ನೀಡಬೇಕಿದ್ದ ಮಾದನಿಂದ ಯಾವ ಸುದ್ದಿಯೂ ಬಂದಿರಲಿಲ್ಲ. ಒಪ್ಪಿಕೊಂಡ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸದ ಬಗ್ಗೆ ಬೇಸರಗೊಂಡು ಮಾದನನ್ನು ಹುಡುಕಿ ಕಾಡಿನತ್ತ ಹೊರಟೆವು. ಮಾದ ರಸ್ತೆಯ ಮಗ್ಗುಲಿನ ಗುಡಿಸಲಿನ ಹೋಟೆಲ್ ಬಳಿ ನಿಂತಿದ್ದ.

ಇಡೀ ದಿನ ನಾಯಿಗಳ ಗೂಡಿನ ಬಳಿಯೇ ಇರಬೇಕಿದ್ದ ಮಾದ ಹೋಟೆಲ್ ಮುಂದೆ ಕಾಲಹರಣ ಮಾಡಿ ನಿಂತಿರುವುದು ಬೇಸರ ತರಿಸಿತು. ನಮ್ಮನ್ನು ಕಂಡ ಕೂಡಲೆ ಮಾದ ತಲೆ ತಗ್ಗಿಸಿದ. ‘ಕಾಡಿಗೆ ಹೋಗಲಿಲ್ಲವಾ, ಮಾದ?’ ಎಂದಾಗ ತಡವರಿಸಿ ನಿಂತ. ‘ಏನಾಯಿತು ಮಾದ’ ಎಂಬ ಪ್ರಶ್ನೆಗೆ ‘ಸ್ವಲ್ಪ ಟ್ರಬಲ್ಲು ಸಾ...’ ಎಂದ.

ಮಾದನ ಉತ್ತರದಿಂದ ಆಗಿರಬಹುದಾದ ಅನಾಹುತಗಳನ್ನೆಲ್ಲ ಕಲ್ಪಿಸಿಕೊಂಡು, ‘ಅತಿ ಮುಖ್ಯವಾದ ಈ ಕೆಲಸಕ್ಕೆ ಮಾದನನ್ನು ನೇಮಿಸಿದ್ದೇ ತಪ್ಪಾಯಿತು. ಸಾಮಾಜಿಕವಾಗಿ ಮೇಲರಿಮೆ ಸಾಧಿಸುವ ಹಳ್ಳಿಗರು, ಕಾಡು ಕುರುಬ ಮಾದನನ್ನು ಬೆದರಿಸಿ ಅಲ್ಲಿಂದ ಹೊರ ಹಾಕಿರಬಹುದು. ಈ ಗದ್ದಲದಿಂದ ಮತ್ತೆ ಕೆನ್ನಾಯಿ ಮರಿಗಳನ್ನೆಳೆದುಕೊಂಡು ಬೇರೆಡೆಗೆ ಓಡಿ ಹೋಗಿರಬಹುದು’ ಎಂದೆಲ್ಲಾ ಯೋಚಿಸಿ ಚಿಂತೆಗೊಳಗಾದೆವು. ಹೀಗೆ ಯೋಚಿಸಲು ಕಾರಣಗಳಿದ್ದವು.

ಭಾರತವನ್ನು ಆಳಿದ ಬ್ರಿಟಿಷರು ನಮ್ಮ ಕಾಡುಗಳನ್ನು ಸಹ ಬಿಡಲಿಲ್ಲ, ಕಾಡಿನ ಸೌಂದರ್ಯವನ್ನು ಆನಂದಿಸುವುದರೊಂದಿಗೆ, ವನ್ಯಜೀವಿಗಳ ಬದುಕಿಗೆ ಭಂಗ ತಂದರು. ರಾಜ ಮಹಾರಾಜರಿಗೆ, ಶ್ರೀಮಂತರಿಗೆ ಬೇಟೆ ಭವ್ಯ ಕ್ರೀಡೆಯೆಂದು ಪರಿಚಯಿಸಿದರು.ಅವರಿಗೆ ಕಾಡುನಾಯಿಗಳು ಇಷ್ಟವಾಗಲಿಲ್ಲ. ಅವುಗಳನ್ನು ರಕ್ತಹೀರುವ ಕ್ರೂರಿಗಳೆಂದು ಜರಿದರು. ಅವರದೇ ಸರ್ಕಾರ. ಅವರದ್ದೇ ಕಾನೂನು. ಅವರ ತೀರ್ಮಾನವೇ ಕಾಯ್ದೆಯಾಯಿತು. ಕಾಡುನಾಯಿಗಳನ್ನು ಕಂಡಲ್ಲಿ ಕೊಲ್ಲಲು ಆಜ್ಞಾಪಿಸಿದರು. ಕೊಂದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿದರು. ಪಾಪದ ಕೆಲಸದಲ್ಲಿ ನೂರಾರು ಮಂದಿ ಭಾಗಿಯಾದರು. ಕಾಡುನಾಯಿಗಳ ಮಾರಣ ಹೋಮಕ್ಕೆ ಸ್ಪರ್ಧೆ ಏರ್ಪಟ್ಟಿತು. ಉಳ್ಳವರು ತುಪಾಕಿ ಸಿಡಿಸಿದರು. ಇಲ್ಲದವರು ವಿಷ ಉಣಬಡಿಸಿದರು. 

ಅಳಿದುಳಿದ ಕಾಡುನಾಯಿಗಳು ಮಾನವನ ಕ್ರೌರ್ಯಕ್ಕೆ ಬೆಚ್ಚಿ ತಲೆಮರೆಸಿಕೊಂಡವು. ಈ ನೆನಪುಗಳು ಇನ್ನೂ ಮಾಸಿಲ್ಲವೇನೊ – ಇಂದಿಗೂ ಅವು ಮಾನವನನ್ನು ನಂಬುವುದೇ ಇಲ್ಲ. ಅದರಲ್ಲೂ ಮರಿ ಮಾಡಿದಾಗ ಇನ್ನಷ್ಟು ಸೂಕ್ಷ್ಮವಾಗಿ ವರ್ತಿಸುತ್ತವೆ. ಅವುಗಳ ಗೂಡಿನ ಬಳಿ ಮಾನವ ಅಡ್ಡಾಡಿದ ವಾಸನೆ ಸಿಕ್ಕರೆ ಸಾಕು. ಮರಿಗಳನ್ನು ಕರೆದು ಅಡವಿಯಲ್ಲಿ ಕರಗಿಹೋಗುತ್ತವೆ. ಬಳಿಕ ಅವುಗಳ ಹೆಜ್ಜೆಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುವುದೇ ಇಲ್ಲ.

ಈ ಪೂರ್ವಾಪರಗಳನ್ನೆಲ್ಲ ಅರಿತಿದ್ದ ನಮಗೆ ಮಾದನ ಬೇಜವಾಬ್ದಾರಿತನ ಸಿಟ್ಟು ತರಿಸಿತು. ಆಗಿರಬಹುದಾದ ಅನಾಹುತಗಳನ್ನು ಊಹಿಸುತ್ತಾ, ‘ನಾವು ತಪ್ಪು ಮಾಡಿದೆವು. ಮಾದನ ಕೆಲಸವನ್ನು ನಾವೇ ನಿರ್ವಹಿಸಬೇಕಾಗಿತ್ತು’ ಎಂದು ಚಿಂತಿಸುತ್ತಾ, ‘ಏನಾಯಿತು ಮಾದ? ಕಾಡಿಗೆ ಹೋಗಲಿಲ್ಲವೇ?’ ಎಂದು ಪ್ರಶ್ನಿಸಿದೆವು.

‘ಅದೇ ಸಾ... ಸ್ವಲ್ಪ ಟ್ರಬಲ್ಲು’

‘ಅದೆಂಥ ಟ್ರಬಲ್ಲು, ಮಾದ...’

‘ಬೀಡಿ ಟ್ರಬಲ್ಲು ಸಾ...’

ಆ ಕ್ಷಣದಲ್ಲಿ ಬ್ರಿಟಿಷರು ಈ ದೇಶಕ್ಕೆ ಬರಬಾರದಿತ್ತು.

ಬಂದರೂ ಇಂಗ್ಲಿಷ್ ಬಿಟ್ಟು ಹೋಗಬಾರದಿತ್ತು ಎನಿಸಿತು. ಆ ಇಂಗ್ಲಿಷ್ ಈಗ ಎಷ್ಟು ಕಷ್ಟ ಕೊಡುತ್ತಿದೆ. ‘ಬೀಡಿ ಮುಗಿದಿತ್ತು. ಕೊಳ್ಳಲು ಅಂಗಡಿಗೆ ಬಂದಿದ್ದೇನೆ’ ಎಂದು ಹೇಳಿದ್ದರೆ ನಾವು ನೂರಾರು ವರ್ಷಗಳ ‘ಕಾಲಯಾನ’ ಕೈಗೊಳ್ಳುವ ಸಮಸ್ಯೆಯೇ ಉದ್ಭವಿಸುತ್ತಿರಲಿಲ್ಲ.‘ಟ್ರಬಲ್’ ಅಧ್ಯಾಯ ಮುಗಿದ ಮೂರು ದಿನಗಳ ಬಳಿಕ ಗುಡ್ಡದತ್ತ ತೆರಳಿದೆವು.

ಮಾದ ಅಲ್ಲೆಲ್ಲೂ ಕಾಣಲಿಲ್ಲ. ಸುತ್ತಲೂ ಕಣ್ಣಾಯಿಸಿ ಎಲ್ಲಿದ್ದೀಯ ಎಂದು ಪ್ರಶ್ನಿಸುವಂತೆ ಮೆಲ್ಲಗೆ ಸೀಟಿ ಹಾಕಿದೆವು. ಮಾದನಿಂದ ಉತ್ತರ ಬರಲಿಲ್ಲ. ಕಾಡಿನಲ್ಲಿ ನಾವು ಬಳಸುವ ಸಂಪರ್ಕ ಭಾಷೆಗಳ ಪರಿಚಯ ಅವನಿಗೆ ಇರಲಿಲ್ಲ, ಮಾದನ ಹೆಜ್ಜೆಯ ಜಾಡು ಹಿಡಿಯುವ ಪ್ರಯತ್ನದಲ್ಲಿ ತೊಡಗಿದೆವು.ಸ್ವಲ್ಪ ಸಮಯದ ಬಳಿಕ ನಾಯಿಬೀಟೆ ಮರದಡಿಯಲ್ಲಿ ಮುತ್ತುಗದ ಎಲೆಗಳು ಹಾಸಿರುವುದು ಗೋಚರಿಸಿತು. ಮಾದ ಮುಂಜಾನೆ ಅಲ್ಲಿ ಮಲಗಿದ್ದ ಸ್ಥಳದಂತೆ ಕಂಡಿತು. ಸ್ವಲ್ಪ ಮುಂದೆ, ಬಿದ್ದಿದ್ದ ಮುತ್ತಗದ ಎಲೆಯ ಮೇಲೆ ಒಂದು ಅನ್ನದ ಅಗುಳಿತ್ತು. ಮಾದ ಊಟ ಮುಗಿಸಿ ನೀರಿಗೆ ಹೋಗಿರಬಹುದೆಂದು ಯೋಚಿಸುತ್ತಾ ಹತ್ತಿರದಲ್ಲಿದ್ದ ಆ ಚಿಕ್ಕ ಕೆರೆಯ ಕಡೆ ಹೊರಟೆವು. ಆಗ ಮಾದ ಇದ್ದಕ್ಕಿದ್ದಂತೆ ಹಿಂಬದಿಯಿಂದ ಪ್ರತ್ಯಕ್ಷನಾದ.

‘ನಾಯಿಗಳಿದ್ದಾವಾ?’ ಎಂದು ಮಾತು ಆರಂಭಿಸಿದೆವು. ‘ಇದಾರೆ ಸಾ...’ ‘ನೀನು ನೋಡಿದೆಯಾ?’ ‘ನೋಡ್ದೆ ಸಾ... ಅವ್ವ, ಮಕ್ಕಳೆಲ್ಲ ಗುಡ್ಡ ಇಳಿದು ನೀರಿಗೆ ಬಂದಿದ್ರು ಸಾ... ಕೆನ್ನಾಯಿ ಮತ್ತದರ ಮರಿಗಳು ತನ್ನ ಕುಟುಂಬವೆಂಬಂತೆ ಆತ ಹೇಳಿದ. ‘ಯಾವಾಗ ಬಂದಿದ್ವು ಮಾದ?’ ‘ನಾನು ಅನ್ನ ಉಣ್ತಿದ್ನಲ್ಲ ಸಾ... ಆವಾಗ ಸಾ...’ ‘ನೀನು ಎಷ್ಟೊತ್ತಿಗೆ ಊಟ ಮಾಡಿದೆ ಮಾದ?’ ‘ಜಕ್ಕಳ್ಳಿ ಬಸ್ ಹೋಯ್ತಲ್ಲ ಸಾ... ಆವಾಗ ಸಾ...’ ಎರಡು ಕಿ.ಮೀ. ದೂರದಲ್ಲಿದ್ದ ಹಳ್ಳಿಯ ರಸ್ತೆಯಲ್ಲಿ, ದಿನದಲ್ಲಿ ಎರಡು ಮೂರು ಬಾರಿ ಬಸ್ಸೊಂದು ಓಡಾಡುತ್ತಿತ್ತು. ಆ ಸದ್ದು ಮಾದ ಕುಳಿತಿದ್ದ ಸ್ಥಳಕ್ಕೆ ಕೇಳುತ್ತಿತ್ತು.

ಇದೇ ನಮ್ಮ ದೊಡ್ಡ ಸಮಸ್ಯೆ. ಹೊಸ ಒಳನೋಟಗಳ ವೈಜ್ಞಾನಿಕ ಬರಹಗಳನ್ನು ಬರೆಯೋಣವೆಂದು ಕುಳಿತರೆ, ನಮಗರಿವಿಲ್ಲದಂತೆ ಅನೇಕ ಉಪಕಥೆಗಳು ನುಸುಳಿ, ಬರಹದ ಗಂಭೀರತೆಗೆ ಚ್ಯುತಿ ತರುತ್ತವೆ! ಕಾಡು ನಾಯಿಗಳ ಸ್ವಭಾವವನ್ನು ಸಂಶೋಧನೆ ಮಾಡಲು ಹೊರಟವರಿಗೆ ಬಸ್‌ಗಳ ವೇಳಾಪಟ್ಟಿ, ಕಾಡು ಕುರುಬರು ಅನ್ನ ಉಣ್ಣುವ ಸಮಯ ಎಲ್ಲವೂ ತಿಳಿದಿರಬೇಕಾಗಿರುತ್ತದೆ ಎಂದು ಹೇಳಿದರೆ ನಮ್ಮನ್ನು ಯಾರೂ ನಂಬುವುದಿಲ್ಲ. ಈ ಸಂಕೀರ್ಣ ಸಂಘಜೀವಿಗಳ ನಡವಳಿಕೆಯ ಒಗಟುಗಳನ್ನು, ವಿಕಾಸ ಸಿದ್ಧಾಂತದ ತಳಹದಿಯಲ್ಲಿ ವಿಶ್ಲೇಷಿಸುತ್ತಾ ಸಾಗಿದ್ದಾಗ ನಾವು ಕೂಡ ಆ ಪಥದಲ್ಲಿ ಕಳೆದುಹೋಗಿದ್ದೆವು. ಆದರು ಈ ಕಾಡುನಾಯಿಗಳು ಮತ್ತು ಕಾಡಿನ ಬುಡಕಟ್ಟು ಜನ ಮಾತ್ರ ಯಾವ ತರ್ಕಕ್ಕೂ ದಕ್ಕುವುದಿಲ್ಲ. ಬಹುಶಃ ನಾವು ಇನ್ನಷ್ಟು ವಿನಯದಿಂದ ನಾವೇ ಅವರಾಗಿ ಚಿಂತಿಸುವುದನ್ನು ರೂಢಿಸಿಕೊಳ್ಳಬೇಕೇನೋ...

ಈ ಎಲ್ಲಾ ಸವಾಲುಗಳೊಂದಿಗೆ ನಮ್ಮ ಕಾಡುನಾಯಿಗಳ ಅಧ್ಯಯನ ಮುಂದುವರಿದಿತ್ತು. ಆಗೊಮ್ಮೆ ಈಗೊಮ್ಮೆ ಹೊಸ ಹೊಸ ವಿಷಯಗಳು ತೆರೆದುಕೊಳ್ಳುತ್ತಲೇ ಇದ್ದವು. ಈಗಲೂ ಅಷ್ಟೆ. ಅಚ್ಚರಿ ಮೂಡಿಸುವಂತೆ ಕೆನ್ನಾಯಿಯ ಗುಂಪು ಹಳ್ಳಿಯ ಬದಿಗೇ ಬಂದಿತ್ತು. ಮನುಷ್ಯರಿಂದ ದೂರ, ಬಹುದೂರ ಸರಿದು ನಿಲ್ಲುತ್ತಿದ್ದ ಅವು, ಮನುಷ್ಯರ ವಾಸ್ತವ್ಯದ ಪಕ್ಕದ ಕಾಡಿನಲ್ಲೇ ತನ್ನ ಅಸಹಾಯಕ ಮರಿಗಳನ್ನು ತಂದಿರಿಸಿತ್ತು. ಇದು ನಿಜಕ್ಕೂ ಆಶ್ಚರ್ಯ!

ವಿಕಾಸದ ಹಾದಿಯಲ್ಲಿ ಹುಲಿ, ಚಿರತೆ ಮತ್ತು ಕಾಡುನಾಯಿಗಳು ಜೊತೆ ಜೊತೆಯಾಗಿ ಬೆಳೆದುಬಂದಿವೆ. ಒಂದೇ ರೀತಿಯ ಜೀವಪರಿಸರಕ್ಕೆ ಮತ್ತು ಒಂದೇ ಬಗೆಯ ಸಂಪನ್ಮೂಲಕ್ಕಾಗಿ ಸ್ಪರ್ಧಿಸುತ್ತಾ ಬಂದಿವೆ. ಈ ಸ್ಪರ್ಧೆ ಒಂದು ಪ್ರಾಣಿಯ ವೇಗವನ್ನು ವೃದ್ಧಿಸಿದ್ದರೆ ಇನ್ನೊಂದರ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸಿದೆ.

ಚಿರತೆ ತಾನು ಗಳಿಸಿದ ಬೇಟೆಯನ್ನು ಉಳಿಸಿಕೊಳ್ಳಲು ಮರದ ಮೇಲೆ ಅಡಗಿಸಿಡುವುದನ್ನು ಕಲಿತರೆ, ಕಾಡುನಾಯಿಗಳು ಗುಂಪಿನಲ್ಲಿ ಶಿಕಾರಿ ಮಾಡಿ ಬೇಗ ಬೇಗ ಕಬಳಿಸಿ ಜೀರ್ಣಿಸಿಕೊಳ್ಳಲು ವಿನ್ಯಾಸಗೊಂಡಿವೆ. ಎಷ್ಟೋ ನಡವಳಿಕೆಗಳು ಕಲಿತು ಅಳವಡಿಸಿಕೊಂಡಿದ್ದಾದರೆ, ಇನ್ನು ಹಲವು ವಿಕಸನ ಹೊಂದಿದ ಸ್ವಭಾವ ಲಕ್ಷಣಗಳಾಗಿರುತ್ತವೆ. ಈ ಸ್ಪರ್ಧೆ, ದೇಶ ದೇಶಗಳ ನಡುವೆ ಶಸ್ತ್ರಾಸ್ತ್ರ ಪೈಪೋಟಿ ನಡೆದಂತೆ, ಜೀವಿ ಜೀವಿಗಳ ನಡುವೆ ನಿರಂತರವಾಗಿ ನಡೆಯುತ್ತಿರುತ್ತದೆ.

ಮನುಷ್ಯನ ಚಟುವಟಿಕೆ ಹೆಚ್ಚಿರುವ ಸ್ಥಳಗಳಲ್ಲಿ, ಹುಲಿಗಳು ಹಗಲಿನಲ್ಲಿ ಅಲೆಯಲು ಹಿಂಜರಿಯುವುದನ್ನು ತಿಳಿದಿದ್ದ ಕೆನ್ನಾಯಿ, ಈ ಸನ್ನಿವೇಶದ ಲಾಭ ಪಡೆಯಲು ಕುರುಬರ ಹಾಡಿಯ ಮಗ್ಗುಲಿಗೇ ಬಂದಿತ್ತು!

ಈ ದೀರ್ಘ ಪಯಣದಲ್ಲಿ ‘ಕೆನ್ನಾಯಿ’ ತನ್ನ ಎಷ್ಟೋ ಖಾಸಗಿ ಕಥೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಳು. ಪ್ರಕೃತಿಯ ಹಲವಾರು ಪಾಠಗಳನ್ನು ಒಟ್ಟಿಗೇ ಕಲಿತಿದ್ದೆವು. ಒಬ್ಬೊಂಟಿಯಾಗಿ ಅಲೆದು, ಲೆಕ್ಕವಿಲ್ಲದಷ್ಟು ಅಡೆತಡೆಗಳನ್ನು ದಾಟಿ, ಹುಲಿಗಳನ್ನೆದುರಿಸಿ, ಸಂಸಾರ ಕಟ್ಟಿ, ಸಾಮ್ರಾಜ್ಯ ಸ್ಥಾಪಿಸಿದ್ದ ‘ಕೆನ್ನಾಯಿ’ಯ ಬದುಕೇ ಒಂದು ವೀರಗಾಥೆ. ಅಸಾಮಾನ್ಯ ಸನ್ನಿವೇಶದಲ್ಲಿ ಬದುಕುಳಿಯಲು ಆಕೆ ತಳೆದ ನಿರ್ಧಾರಗಳು, ಅಳವಡಿಸಿಕೊಂಡ ತಂತ್ರಳೆಲ್ಲವೂ ನಮ್ಮನ್ನು ಬೆರಗುಗೊಳಿಸಿದ್ದು ನಿಜ.

ಕಡೆಯಲ್ಲಿ ‘ಕೆನ್ನಾಯಿ’ಯ ಅಸಾಮಾನ್ಯ ಬದುಕನ್ನಾಧರಿಸಿ ಒಂದು ಚಲನಚಿತ್ರ ಮಾಡಿದೆವು. ಚಿತ್ರದಲ್ಲಿ ಕಾಡುನಾಯಿಗಳ ನಡವಳಿಕೆಗಳ ಬಗ್ಗೆ ಹೊಸ ವೈಜ್ಞಾನಿಕ ಒಳ ಹೊಳಹುಗಳಿದ್ದವು. ಪ್ರಪಂಚದಾದ್ಯಂತ, ವನ್ಯಜೀವಿ ಚಲನಚಿತ್ರ ಕ್ಷೇತ್ರದಲ್ಲಿ ಈ ಚಿತ್ರ ರೋಮಾಂಚನವನ್ನು ತಂದಿತ್ತು.

ಅನೇಕ ಪ್ರಶಸ್ತಿಗಳನ್ನು ದೋಚಿತ್ತು. ಆದರೆ, ಪ್ರಶಸ್ತಿ ಪುರಸ್ಕಾರಗಳ ಇತಿಮಿತಿಯ ಅರಿವು ಕೂಡ ನಮಗಿತ್ತು. ಏಕೆಂದರೆ, ‘ಕೆನ್ನಾಯಿ’ ನಮಗೆ ಹೇಳಿಕೊಟ್ಟ ವಿಷಯಗಳು ಅಪಾರ. ಅದರಲ್ಲಿ ನಾವು ಅರ್ಥಮಾಡಿಕೊಂಡು, ಚಿತ್ರದಲ್ಲಿ ತರಲಾದದ್ದು ಅತ್ಯಲ್ಪ ಮಾತ್ರ...ಎಷ್ಟಾದರೂ, ಪ್ರಕೃತಿಯ ಪಾಠಶಾಲೆಯಲ್ಲಿ ಆಕೆ ರ‌್ಯಾಂಕ್ ವಿದ್ಯಾರ್ಥಿನಿಯಾಗಿದ್ದರೆ, ನಾವು ಜಸ್ಟ್ ಪಾಸ್...

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry