ಭಾನುವಾರ, ಮಾರ್ಚ್ 29, 2020
19 °C

ಕೆಪಿಎಸ್ ಗಿಲ್: ಮಹೋನ್ನತ ಪೊಲೀಸ್ ಅಧಿಕಾರಿ

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ಕೆಪಿಎಸ್ ಗಿಲ್: ಮಹೋನ್ನತ ಪೊಲೀಸ್ ಅಧಿಕಾರಿ

ಕನ್ವರ್ ಪಾಲ್ ಸಿಂಗ್ (ಕೆಪಿಎಸ್) ಗಿಲ್ ಅವರು ತಮ್ಮ ಮಹತ್ವಪೂರ್ಣವಾದ ತುಂಬು ಬದುಕಿಗೆ ವಿದಾಯ ಹೇಳಿದ್ದರೂ ನಮ್ಮ ಜ್ಞಾನ ಮತ್ತು ಸಿದ್ಧ ಮಾದರಿಯ ಪರಿಕಲ್ಪನೆಗಳಿಗೆ ಸವಾಲೆಸೆಯುತ್ತಲೇ ಇರುತ್ತಾರೆ. ಉದಾಹರಣೆಗೆ, ನಿಧನವಾರ್ತೆಯ ಬರವಣಿಗೆಯನ್ನು ಕಾಲಾನುಕ್ರಮವಾಗಿ ಎಂದಿಗೂ ಆರಂಭಿಸಬಾರದು ಅಥವಾ ಕೊನೆ ಗೊಳಿಸಬಾರದು ಎಂಬ ಮೂಲ ಪಾಠವನ್ನು ಪತ್ರಿಕೋದ್ಯಮದ ಯಾವ ಶಾಲೆಯಾದರೂ ನಮಗೆ ಕಲಿಸಿಯೇ ಇರುತ್ತದೆ. ಆದರೂ ಮಿಸ್ಟರ್ ಗಿಲ್ ಅಥವಾ ನಾವೆಲ್ಲರೂ ಕರೆಯುತ್ತಿದ್ದಂತೆ ‘ಗಿಲ್ ಸಾಬ್’ ಅವರ ಬಗ್ಗೆ ಬರೆಯುವಾಗ ಮಾತ್ರ, ಇಂತಹ ನಿಯಮಕ್ಕೆ ಹೇಗೆ ಬದ್ಧನಾಗಿರಬೇಕೆಂದೇ ನನಗೆ ತಿಳಿಯುತ್ತಿಲ್ಲ. ಏಕೆಂದರೆ ಅವರೊಂದಿಗಿನ ಮೊದಲ ಭೇಟಿ ನನ್ನ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದೆ.

1981ರ ಆರಂಭದಲ್ಲಿ, ಸಂಘರ್ಷಮಯವಾಗಿದ್ದ ದೇಶದ ಈಶಾನ್ಯಭಾಗದ ವರದಿಗಾರಿಕೆಗಾಗಿ ನಾನು ಆಗಷ್ಟೇ ಗುವಾಹಟಿಗೆ ಬಂದಿದ್ದೆ. ಅವರು ಆಗಿನ್ನೂ ಡಿಜಿಪಿ ಆಗಿರಲಿಲ್ಲ. ಹಲವಾರು ಐಜಿಪಿಗಳಲ್ಲಿ ಒಬ್ಬರಾಗಿದ್ದರಾದರೂ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆ ಹೊತ್ತಿದ್ದರು. ಬ್ರಹ್ಮಪುತ್ರ ನದಿ ತಟದಲ್ಲಿ ‘ಅಸ್ಸಾಂ ಮಾದರಿ’ಯ ಹಳೆಯ ಶೈಲಿಯ ಅವರ ಮನೆ ಇತ್ತು. ‘ಓಹೋ ನೀವೇ ಏನು ಶೇಖರ್ ಗುಪ್ತ’ ಎಂದು, ಸಮವಸ್ತ್ರದಲ್ಲಿದ್ದ ಅವರು ಕಣ್ಣಳತೆಯಲ್ಲೇ ನನ್ನನ್ನು ಅಳೆಯುವಂತೆ ನೋಡುತ್ತಾ ಕೇಳಿದರು. ಅವರು ಹಾಗೆ ಕೇಳಿದ್ದು ಕುತೂಹಲದಿಂದಲೋ ಅಥವಾ ಗೇಲಿ ಮಾಡುವ ರೀತಿಯಲ್ಲೋ ಎಂಬುದನ್ನು ಗ್ರಹಿಸಲು ಇಂದಿಗೂ ನನಗೆ ಸಾಧ್ಯವಾಗಿಲ್ಲ. ‘ಕುಳಿತುಕೊಳ್ಳಿ, ಬಹುಶಃ ಇಲ್ಲಿನ ನಿಮ್ಮ ಸುತ್ತಾಟವೆಲ್ಲ ಎನ್‌ಫೀಲ್ಡ್ ಮೋಟಾರ್‌ ಬೈಕ್‌ನಲ್ಲೇ ಇರಬೇಕಲ್ಲವೇ’ ಎಂದರು. ಅದಕ್ಕೆ ಪ್ರತಿಯಾಗಿ ನಾನು ಏನನ್ನಾದರೂ ಹೇಳುವ ಮೊದಲೇ ‘ಲೈಸೆನ್ಸ್ ಇದೆಯೇ’ ಎಂದು ಕೇಳಿದರು. ಕ್ಷಣಕಾಲ ನಾನು ದಿಗ್ಭ್ರಾಂತನಾದೆ. ತಕ್ಷಣವೇ ಇಬ್ಬರೂ ಪರಸ್ಪರ ಮುಖ ನೋಡಿಕೊಂಡು ನಕ್ಕುಬಿಟ್ಟೆವು. ನಂತರದ 36 ವರ್ಷಗಳಲ್ಲಿ ಇದೇ ಪ್ರಶ್ನೆಯನ್ನು ಅವರು ಹಲವಾರು ಬಾರಿ ನನಗೆ ಕೇಳಿದ್ದಿದೆ.

ಅಂದಿನಿಂದ ಆರಂಭವಾದ ನಮ್ಮ ವೃತ್ತಿಪರ ಸಂಬಂಧ, ಅಸ್ಸಾಂ ಮತ್ತು ಪಂಜಾಬ್ ನಡುವೆ ಜೊತೆಜೊತೆಗೇ ಮುಂದುವರಿಯಿತು. 1957ರಲ್ಲಿ ನಾನು ಜನಿಸುವ ವೇಳೆಗಾಗಲೇ ಅವರು ಐಪಿಎಸ್ ಪರೀಕ್ಷೆ ಪಾಸು ಮಾಡಿ ಅಸ್ಸಾಂ ಕೇಡರ್ ಸೇರಿ ಆಗಿತ್ತಾದರೂ ಅದರಿಂದ ನಮ್ಮ ಸಂಬಂಧಕ್ಕೆ ಯಾವ ತೊಡಕೂ ಆಗಲಿಲ್ಲ. ಗಿಲ್ ಸದಾಕಾಲ ನಮ್ಮೆಲ್ಲರಿಗಿಂತ ಅತ್ಯಂತ ಕಿರಿಯರಂತೆಯೇ ಇದ್ದರು ಮತ್ತು ಅತ್ಯುತ್ತಮ ದೇಹದಾರ್ಢ್ಯವನ್ನೂ ಹೊಂದಿದ್ದರು. ಜೊತೆಗೆ, ಅವರಂತೆ ಮದ್ಯ ಸೇವನೆಯನ್ನು ನಿಭಾಯಿಸಿದವರನ್ನು ಕೂಡ ನಾನು ಕಂಡಿಲ್ಲ. 1995ರಲ್ಲಿ ಗಿಲ್ ಅವರು ನಿವೃತ್ತರಾದ ಬಳಿಕ ನಮ್ಮದು ವೈಯಕ್ತಿಕ ಸ್ನೇಹವಾಗಿ ಮುಂದುವರಿಯಿತು. ಹಲವಾರು ವಿಷಯಗಳ ಬಗ್ಗೆ ಅವರು ಧ್ವನಿ ಎತ್ತುತ್ತಿದ್ದರು. ಒಳ್ಳೆಯ ಸಂಗತಿಗಳನ್ನು ನಾವು ಪರಸ್ಪರ ಹಂಚಿಕೊಳ್ಳುತ್ತಿದ್ದೆವು. ಅಷ್ಟೇ ಅಲ್ಲ, ಭಾರತೀಯ ಹಾಕಿ ಫೆಡರೇಷನ್‌ನ ಅವರ ಮುಂದಾಳತ್ವಕ್ಕೆ ಸಂಬಂಧಿಸಿದಂತೆ (ನನ್ನ ಪ್ರಕಾರ, ಅದು ಒತ್ತೆಯಾಗಿತ್ತು) ನಾವು ಕೊಂಚ ಮಟ್ಟಿಗೆ ಜಗಳವನ್ನೂ ಆಡುತ್ತಿದ್ದೆವು. ರಾಜಿಯಾಗದ ಅವರ ಮನೋಭಾವ ಆಟವನ್ನು ಹಾಳುಗೆಡವುತ್ತಿದೆ ಎಂಬುದು ನನ್ನ ಭಾವನೆಯಾಗಿತ್ತು.

ಅಸ್ಸಾಂನಲ್ಲಿ ಗಿಲ್ ಅವರ ಬಗ್ಗೆ ದಂತಕಥೆಗಳೇ ಇದ್ದವು. ಅವುಗಳಲ್ಲಿ ಕೆಲವು ಒಳ್ಳೆಯವಾದರೆ ಹಲವು ಕೆಟ್ಟವು. ಅಸ್ಸಾಂನ ಖರ್ಗೇಶ್ವರ್ ತಾಲ್ಲೂಕ್‌ದಾರ್ ಎಂಬ ಪ್ರತಿಭಟನಾಕಾರನನ್ನು ಒದ್ದು ಸಾಯಿಸಿದ ಆರೋಪ ಅವರ ಮೇಲಿತ್ತು. ಆ ದಿನಗಳಲ್ಲಿ ಪ್ರಕ್ಷುಬ್ಧವಾಗಿದ್ದ ಅಸ್ಸಾಂನಲ್ಲಿ ಯಾವ ವಕೀಲರೂ ಮತ್ತು ಸಾಕ್ಷಿಗಳೂ ಮುಂದೆ ಬಾರದ ಕಾರಣಕ್ಕೆ, ದೆಹಲಿ ಹೈಕೋರ್ಟ್‌ಗೆ ಸ್ಥಳಾಂತರಿಸಲಾಗಿದ್ದ ಈ ಪ್ರಕರಣ ಅಲ್ಲಿ ಖುಲಾಸೆಗೊಂಡಿತು. ಗಿಲ್ ತಮ್ಮ ಪರವಾಗಿ ವಾದಿಸಲು ಚಂಡೀಗಡದಿಂದ ಕೆಟಿಎಸ್ ತುಳಸಿ ಎಂಬ ವಕೀಲರನ್ನು ಕರೆತಂದಿದ್ದರು. ಅವರೀಗ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯರಾಗಿದ್ದಾರೆ. ಬಹು ದಿನಗಳ ನಂತರ ಗಿಲ್ ಅವರ ವ್ಯಕ್ತಿತ್ವದಲ್ಲಿನ ಒಂದು ಪ್ರಮುಖ ಅಂಶವನ್ನು ನಾನು ಗಮನಿಸಿದೆ. ಅವರು ಯಾರೊಬ್ಬರ ಮೇಲೂ ವೈಯಕ್ತಿಕವಾಗಿ ಹಿಂಸೆಗೆ ಇಳಿಯುತ್ತಿರಲಿಲ್ಲ ಮತ್ತು ಎಂದಿಗೂ ಬಂದೂಕನ್ನು ಜೊತೆಯಲ್ಲಿ ಒಯ್ಯುತ್ತಿರಲಿಲ್ಲ. ಹೆಚ್ಚೆಂದರೆ ಅವರ ಬಳಿ ಒಂದು ಲಾಠಿ ಇರುತ್ತಿತ್ತು ಅಷ್ಟೆ.

ಗಂಡಾಂತರಕಾರಿ ಸಮಯದಲ್ಲಿ ಗಿಲ್ ಅವರನ್ನು ತೀರಾ ಹತ್ತಿರದಿಂದ ನಾನು ನೋಡಿದಾಗಲೂ ಅವರಲ್ಲಿ ಒಂದು ರೀತಿಯ ಶಾಂತ ಸ್ವಭಾವ, ನಿರ್ಭೀತಿ ಹಾಗೂ ಸಂಕಷ್ಟ ಎದುರಿಸುವ ಕಲೆಗಾರಿಕೆ ಇದ್ದುದು ಸ್ಪಷ್ಟವಾಗಿ ಕಂಡುಬಂತು. ಆ ಸಮಯದಲ್ಲಿ ಸಹ ಅವರ ಬಳಿ ಇದ್ದದ್ದು ಲಾಠಿಯ ಅಸ್ತ್ರವೊಂದೇ. 1983ರ ಫೆಬ್ರುವರಿಯಲ್ಲಿ ಅಸ್ಸಾಂನಲ್ಲಿ ಚುನಾವಣೆ ನಡೆದಾಗ, ಗುವಾಹಟಿಯಿಂದ 70 ಕಿ.ಮೀ ದೂರದಲ್ಲಿರುವ ಮಂಗಳದಾಯಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಮತೀಯ ಗಲಭೆ ನಡೆದು ಬೆರಳೆಣಿಕೆಯಷ್ಟು ಮಂದಿ ಬಲಿಯಾದರು (ಆನಂತರದ ದಿನಗಳಲ್ಲಿ ಈ ಗಲಭೆ ವ್ಯಾಪಕಗೊಂಡು ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿತು). ಆತಂಕಕಾರಿಯಾಗಿದ್ದ ಗಲಭೆಯ ಆರಂಭದ ದಿನಗಳಲ್ಲಿ, ಸೇನಾಪಡೆಯ ಮೇಜರ್ ಜನರಲ್ ಅವರೊಟ್ಟಿಗೆ ಗಿಲ್ ಅವರು ಉನ್ನತ ಮಟ್ಟದ ಪರಿಶೀಲನಾ ಕಾರ್ಯ ನಡೆಸಿದರು. ಹೆದ್ದಾರಿ ತಡೆ ಇದ್ದುದರ ನಡುವೆಯೂ ನಾನು ಮತ್ತು ನನ್ನ ಸಹೋದ್ಯೋಗಿ ಸೀಮಾ ಗುಹಾ ಎನ್‌ಫೀಲ್ಡ್ ಬೈಕ್‌ನಲ್ಲಿ ನಿಗದಿತ ಸ್ಥಳ ತಲುಪಿದೆವು. ಸಭೆ ಮುಗಿಯುವ ಹೊತ್ತಿಗೆ ಅದಾಗಲೇ ಕತ್ತಲು ಆವರಿಸಿತ್ತು. ಗಿಲ್ ಮತ್ತು ಸೇನಾಧಿಕಾರಿ ತಮ್ಮ ಬೆಂಗಾವಲು ಸಿಬ್ಬಂದಿಯೊಂದಿಗೆ ಹೊರಟಾಗ ನಾವು ಅವರನ್ನು ಹಿಂಬಾಲಿಸಿದೆವು.

ಹಿಮಾಲಯದ ನದಿಯೊಂದಕ್ಕೆ ಕಟ್ಟಿದ್ದ ಮರದ ಸೇತುವೆಯನ್ನು ಪ್ರತಿಭಟನಾಕಾರರು ಸುಟ್ಟು ಹಾಕಿದ್ದುದು ದಾರಿಯಲ್ಲಿ ನಮಗೆ ಕಂಡುಬಂತು. ನಮಗೆ ಪರಿಸ್ಥಿತಿಯ ಅರಿವಾಗುವ ಮುನ್ನವೇ, ಆಚೆ ಬದಿಯಲ್ಲಿ ಗದ್ದಲ ಎಬ್ಬಿಸುತ್ತಿದ್ದ ದೊಡ್ಡ ಗುಂಪು ನಮಗೆ ಕಂಡಿತು. ಅವರುಗಳು ಹಿಡಿದಿದ್ದ ಕತ್ತಿ ಮತ್ತು ಭರ್ಜಿಗಳು ರಾತ್ರಿಯ ಬೆಳಕಿನಲ್ಲಿ ಮಿರುಗುತ್ತಿದ್ದವು. ಅತ್ಯಂತ ಸಣ್ಣ ಪ್ರಮಾಣದ ಬೆಂಗಾವಲು ಸಿಬ್ಬಂದಿಯೊಂದಿಗೆ ಬಂದಿದ್ದುದಕ್ಕೆ ಸೇನಾಧಿಕಾರಿ ಆಕ್ರೋಶಗೊಂಡಿದ್ದರು. ಆದರೆ ಶಾಂತಚಿತ್ತರಾಗಿದ್ದ ಗಿಲ್ ಮಾತ್ರ, ಇದ್ದ ಏಕೈಕ ಲಘು ಮಶೀನ್ ಗನ್ನನ್ನೇ ಸಿದ್ಧವಾಗಿಟ್ಟುಕೊಂಡು ಸನ್ನದ್ಧರಾಗುವಂತೆ ಬೆಂಗಾವಲು ಸಿಬ್ಬಂದಿಗೆ ಸೂಚಿಸಿದರು. ಆಗಲೂ ಅವರ ಬಳಿ ಇದ್ದದ್ದು ಬೆತ್ತದ ಅಸ್ತ್ರವೊಂದೇ.

ಭೀತನಾಗಿದ್ದ ನಾನು ‘ಏನು ಸಮಸ್ಯೆಯಾಗಿದೆ’ ಎಂದು ಕೇಳಿದೆ. ‘ನೀವುಗಳು ಇಲ್ಲಿರುವುದೇ ನಮಗೊಂದು ದೊಡ್ಡ ಸಮಸ್ಯೆಯಾಗಿದೆ’ ಎಂದು ಅವರು ನಗುತ್ತಾ ಉತ್ತರಿಸಿದರು. ಆಗಲೂ ಅವರು ಈ ಮಾತನ್ನು ಹೇಳಿದ್ದು ವಿಶ್ವಾಸದಿಂದಲೋ ಕುತೂಹಲದಿಂದಲೋ ಅಥವಾ ವ್ಯಂಗ್ಯವಾಗಿಯೋ ಎಂಬುದು ನನಗೆ ತಿಳಿಯಲೇ ಇಲ್ಲ. ಹೆಚ್ಚು ವಿವರ ನೀಡಲು ನಿರಾಕರಿಸಿದ ಅವರು, ಮುಂದೊಂದು ದಿನ ತಿಳಿಸುವುದಾಗಿ ಹೇಳಿದರು.

ಕೊನೆಗೆ ಅಂದಿನ ಆ ನಮ್ಮ ಸಾಹಸ ನಾಟಕೀಯವಾಗಿ ಕೊನೆಗೊಂಡಿತು. ಹೊಗೆಯಾಡುತ್ತಿದ್ದ ಸೇತುವೆಯನ್ನು ಸೂಕ್ಷ್ಮವಾಗಿ ಗಮನಿಸಿ ಬಂದ ಗಿಲ್, ಜಿಗಿದು ಜೀಪಿನೊಳಗೆ ಕುಳಿತುಕೊಂಡು, ಎಚ್ಚರಿಕೆಯಿಂದ ತೆರಳುವಂತೆ ಚಾಲಕನಿಗೆ ತಿಳಿಸಿದರು. ಬಳಿಕ, ಶಿಥಿಲವಾಗಿದ್ದ ಸೇತುವೆ ಮೇಲೆ ಮೊದಲು ಸೇನಾಧಿಕಾರಿ, ಆನಂತರ ನಾವು ಉಳಿದವರೆಲ್ಲ ಒಬ್ಬರ ನಂತರ ಒಬ್ಬರು ದಾಟಿ ಬಂದೆವು. ಆ ದಿನ ಸಂಜೆ ತಮ್ಮ ಓಲ್ಡ್ ಮಾಂಕ್ ರಮ್ ಸೇವನೆ ಸಮಯದಲ್ಲಿ ಎಂದಿನಂತೆ ವಿಚಾರ ವಿನಿಮಯಕ್ಕಾಗಿ ನಾವು ಸೇರಿದಾಗಲೂ, ನಮ್ಮ ಇರವು ಅವರಿಗೆ ಸಮಸ್ಯೆಯಾಗಿದ್ದೇಕೆ ಎಂಬುದನ್ನು ಮಾತ್ರ ಅವರು ಬಾಯಿಬಿಡಲಿಲ್ಲ.

ಅದಾದ ಎಷ್ಟೋ ದಿನಗಳ ಬಳಿಕ, ಪಂಜಾಬ್‌ನ ಸಿಆರ್‌ಪಿಎಫ್ ಐಜಿ ಆಗಿ ನಿಯೋಜನೆಗೊಂಡಾಗ ಅವರು ತಂಗಿದ್ದ ಅಮೃತಸರದ ಸರ್ಕೀಟ್ ಹೌಸ್‌ನಲ್ಲಿ ನಾನು ಅವರನ್ನು ಭೇಟಿ ಮಾಡಿದೆ. ಆಗ ಅವರು ಹಿಂದೆ ಆಡಿದ್ದ ತಮ್ಮ ಆ ಮಾತಿನ ಹಿಂದಿನ ಮರ್ಮವನ್ನು ಹೊರಗೆಡವಿದರು. ‘ಶಸ್ತ್ರಸಜ್ಜಿತರಾಗಿದ್ದ ಸಾವಿರಾರು ಮಂದಿಯ ಗುಂಪು ನಮ್ಮತ್ತ ಬರುತ್ತಿತ್ತು. ಐಜಿಪಿ ಮತ್ತು ಮೇಜರ್ ಜನರಲ್ ಅವರನ್ನು ಆ ಗುಂಪು ಕೊಲ್ಲಬಹುದಾಗಿದ್ದ ಸಾಧ್ಯತೆಯನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಆಗ ನಮ್ಮ ಬಳಿ ಇದ್ದದ್ದು 7 ರೈಫಲ್‌ಗಳು ಮತ್ತು ಒಂದು ಎಲ್‌ಎಂಜಿ ಮಾತ್ರ. ಒಂದು ವೇಳೆ ಅವರತ್ತ ನಾವೇನಾದರೂ ಗುಂಡು ಹಾರಿಸಿ ಕೆಲವರನ್ನು ಕೊಂದು ಹಾಕಿದ್ದರೆ, ಪತ್ರಕರ್ತರಿಬ್ಬರ ಸಮ್ಮುಖದಲ್ಲೇ ಅಂತಹ ಘಟನೆ ನಡೆಯುವುದು ನಮಗೆ ಬೇಕಿತ್ತು ಎಂದುಕೊಳ್ಳುವಿರಾ? ಅದೇ ನೋಡಿ ಆಗ ನಮಗೆ ಸಮಸ್ಯೆಯಾಗಿದ್ದುದು’ ಎಂದು ಅವರು ವಿವರಿಸಿದರು. ‘ವಾಕ್ ದಿ ಟಾಕ್’ ಕಾರ್ಯಕ್ರಮಕ್ಕಾಗಿ ನಾವು ಭೇಟಿಯಾಗುವುದಕ್ಕೆ ಒಂದು ವಾರದ ಮೊದಲೊಮ್ಮೆ ನಾವು ಸೇರಿದ್ದಾಗ, ಕಾಶ್ಮೀರದಲ್ಲಿ ಕಲ್ಲು ಎಸೆಯುವವರನ್ನು ಸಿಆರ್‌ಪಿಎಫ್ ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಗಿಲ್ ನಿಷ್ಠುರವಾಗಿ ಮಾತನಾಡಿದ್ದರು. ‘ಕಲ್ಲೆಸೆಯುತ್ತಿರುವ ಗುಂಪಿನತ್ತ ನೀವು ಗುಂಡು ಹಾರಿಸಲಾಗದು, ಕೆಲವೊಮ್ಮೆ ಹೊಸ ಬಗೆಯಲ್ಲಿ ಮತ್ತು ರಕ್ಷಣಾತ್ಮಕವಾಗಿ ನಾವು ಯೋಚಿಸಬೇಕಾಗುತ್ತದೆ’ ಎಂದಿದ್ದರು. ನೀವಿದನ್ನು ಒಪ್ಪಿ ಅಥವಾ ಬಿಡಿ, ಸಾಂಪ್ರದಾಯಿಕ ಮಾದರಿ ಮಾತ್ರ ಅವರಿಗೆ ಆಗಿಬರುತ್ತಿರಲಿಲ್ಲ.

ಸಿಖ್ಖರನ್ನು ವಿವೇಚನಾರಹಿತವಾಗಿ ಕೊಂದರು ಎಂದು ಗಿಲ್ ವಿರೋಧಿಗಳು ಅವರ ಬಗ್ಗೆ ಆರೋಪಿಸುತ್ತಾರೆ. ಆದರೆ ಅದು ಗಿಲ್ ಅವರ ಶೈಲಿಯಾಗಿರಲಿಲ್ಲ. 1991- 94ರ ನಡುವಿನ ಈ ಸಂಬಂಧದ ಅಂತಿಮ ಯುದ್ಧದಲ್ಲಿ ಗಿಲ್ ಯಶಸ್ವಿಯಾಗಿದ್ದಕ್ಕೆ, ಭಯೋತ್ಪಾದನೆಯ ತಳಮಟ್ಟದ ಕಾರ್ಯಕರ್ತರನ್ನು ಹೊರಗಿಟ್ಟು ಅವರು ಕಾರ್ಯತಂತ್ರ ರೂಪಿಸಿದ್ದೇ ಕಾರಣ. ಈ ಬಗೆಯ ನೆರವಿನಿಂದಾಗಿಯೇ ಅಂತಹವರೆಲ್ಲ ಹೆಸರು ಬದಲಿಸಿಕೊಂಡು ದೂರದ ರಾಜ್ಯಗಳಿಗೆ ಹೋಗಿ, ಟ್ರಕ್ ಉದ್ಯಮದಂತಹ ವಹಿವಾಟಿನಲ್ಲಿ ತೊಡಗಿ ಹೊಸ ನೆಲೆ ಕಂಡುಕೊಳ್ಳಲು ಸಾಧ್ಯವಾಯಿತು. ಇದಕ್ಕೆ ತಕ್ಕಂತೆ, ಸತ್ನಾಮ್ ಸಿಂಗ್ ಎಂಬಾತ ಸಂತೋಷ್ ಸಿಂಗ್ ಆಗಿ ಬದಲಾದಂತಹ ನಿದರ್ಶನಗಳು ಸಾಕಷ್ಟಿವೆ. ಆದರೆ ಇದಕ್ಕೆ ಪ್ರತಿಯಾಗಿ, ಅಂತಹವರ ನೆರವಿನಿಂದಲೇ ಅವರ ಕಮಾಂಡರ್‌ಗಳನ್ನು ಪೊಲೀಸರು ಹಿಡಿಯಲು ಸಾಧ್ಯವಾಯಿತು. ಗಿಲ್ ಅವರ ಸಿಬ್ಬಂದಿ, ಭಯೋತ್ಪಾದಕರನ್ನು ಎ ಇಂದ ಡಿ ವರೆಗೂ ವಿವಿಧ ವರ್ಗಗಳನ್ನಾಗಿ ವಿಂಗಡಿಸಿ ಪಟ್ಟಿಯೊಂದನ್ನು ಸಿದ್ಧಪಡಿಸಿದ್ದರು. ನಂತರ ಗಿಲ್ ಅವರು ನನಗೆ ತಿಳಿಸಿದಂತೆ (ಇದು ಅಧಿಕೃತ ಹೇಳಿಕೆಯಾಗಿದ್ದು, ಪ್ರಕಟಗೊಂಡಿದೆ) ‘ಒಬ್ಬ ಭಯೋತ್ಪಾದಕ ಎ ಪಟ್ಟಿಗೆ ಸೇರಿದನೆಂದರೆ ಆರು ತಿಂಗಳಿಗೂ ಹೆಚ್ಚು ಕಾಲ ಬದುಕುಳಿಯುವುದಿಲ್ಲ, ಆಗ ಭಯೋತ್ಪಾದನೆ ಕೊನೆಗೊಳ್ಳುತ್ತದೆ’ ಎಂದಿದ್ದರು. ಹಾಗೆಯೇ ಆಯಿತು ಕೂಡ.

1984 ಮತ್ತು 1995ರ ನಡುವಿನ ಅವಧಿಯಲ್ಲಿ ಗಿಲ್ ನಾಲ್ಕು ಬಾರಿ ಪಂಜಾಬ್‌ಗೆ ನಿಯೋಜನೆಗೊಂಡಿದ್ದರು. ಭಯೋತ್ಪಾದಕರೊಂದಿಗೆ ಗಾಢ ಅಪವಿತ್ರ ಮೈತ್ರಿ ಹೊಂದಿದ್ದ ರಾಜಕಾರಣಿಗಳಿಗೆ ಇವರ ಉಪಸ್ಥಿತಿ ತೊಡಕೆನಿಸಿದಾಗಲೆಲ್ಲಾ ಅವರು ಎತ್ತಂಗಡಿ ಆಗುತ್ತಿದ್ದರು. 1988ರಲ್ಲಿ ಗಿಲ್ ಅವರ ನೇತೃತ್ವದಲ್ಲಿ ನಡೆದ ಆಪರೇಷನ್ ಬ್ಲ್ಯಾಕ್ ಥಂಡರ್ (ಎನ್‌ಎಸ್‌ಜಿಯ ಬ್ಲ್ಯಾಕ್ ಕ್ಯಾಟ್‌ಗಳು ಮೊದಲ ಬಾರಿ ಕಾಣಿಸಿಕೊಂಡಿದ್ದು) ಈ ಮೊದಲು ನಡೆದಿದ್ದ ಆಪರೇಷನ್ ಬ್ಲೂ ಸ್ಟಾರ್‌ನಂತೆ ಇರಲಿಲ್ಲ. ಇಲ್ಲಿ ಮಾಧ್ಯಮಗಳ ಉಪಸ್ಥಿತಿಗೆ ಗಿಲ್ ಅವಕಾಶ ಕಲ್ಪಿಸಿದ್ದರು. ಕಾರ್ಯಾಚರಣೆಯನ್ನು ಅತ್ಯಂತ ಸನಿಹದಿಂದ ವೀಕ್ಷಿಸಲು ನಮಗೆ ಸಾಧ್ಯವಿತ್ತು. ಮೂರು ದಿನಗಳಿಗೂ ಹೆಚ್ಚು ಕಾಲ ನಡೆದ ಆ ಕಾರ್ಯಾಚರಣೆಯಲ್ಲಿ, ಸತತವಾಗಿ ಗಂಟೆಗಟ್ಟಲೆ ನಾವು ಎನ್‌ಎಸ್‌ಜಿ ಸೈನಿಕರ ಸಮೀಪದಲ್ಲೇ ಕುಳಿತು, ದೇವಾಲಯ ಸಂಕೀರ್ಣದಿಂದ 46 ಉಗ್ರರನ್ನು ಅವರು ಹೊರಗೆಳೆದು ತಂದದ್ದನ್ನು ನೋಡಬಹುದಾಗಿತ್ತು. ದೆಹಲಿಯಲ್ಲಿ ರಾಜೀವ್ ಗಾಂಧಿ ನೇತೃತ್ವದ ಸರ್ಕಾರ ಬದಲಾಗಿ ವಿ.ಪಿ.ಸಿಂಗ್ ಅವರ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಗಿಲ್ ಮತ್ತೆ ಎತ್ತಂಗಡಿಯಾದರು.

ವಿ.ಪಿ.ಸಿಂಗ್ ಅವರ ಆಡಳಿತಾವಧಿ ಮುಗಿದು, ಭಯೋತ್ಪಾದನೆ ಇನ್ನಷ್ಟು ಕ್ರೂರ ಸ್ವರೂಪದಲ್ಲಿ ಮರುಕಳಿಸಿದ್ದ ಸಂದರ್ಭದಲ್ಲಿ ಗಿಲ್ ಅವರನ್ನು ಪುನಃ ಅಲ್ಲಿಗೆ ನಿಯೋಜಿಸಲಾಯಿತು. ರಾಜ್ಯವು ಖಲಿಸ್ತಾನಿ ಗುಂಪುಗಳ ಹಿಡಿತಕ್ಕೆ ಸಿಲುಕಿತು. ವರದಿಗಾರರನ್ನು ಸಹ ರಾತ್ರಿ ವೇಳೆ ಗಡಿ ಜಿಲ್ಲೆಗಳ ‘ಭಯೋತ್ಪಾದಕರ ತಪಾಸಣಾ ಕೇಂದ್ರ’ಗಳ ಬಳಿಯೇ ತಡೆಹಿಡಿದು ಅಪಮಾನಿಸಲಾಗುತ್ತಿತ್ತು. 1992ರ ಹೊತ್ತಿಗೆ ಯುದ್ಧ ಏಕಪಕ್ಷೀಯವಾಗಿತ್ತು ಮತ್ತು ಆ ವರ್ಷ ಏನಿಲ್ಲವೆಂದರೂ ಕನಿಷ್ಠ 5,000 ಜನ ಬಲಿಯಾಗಿದ್ದರು.

ಇಂತಹುದನ್ನೆಲ್ಲ ಗಿಲ್ ಹೇಗೆ ನಿಭಾಯಿಸಿದರು ಎಂಬುದನ್ನೆಲ್ಲ ಸಂತಾಪ ಸೂಚನೆಯ ಈ ಸಂದರ್ಭದಲ್ಲಿ ಆಳವಾಗಿ ವಿಶ್ಲೇಷಿಸುವುದು ತರವಲ್ಲ. ಅಸ್ಸಾಂನಲ್ಲಿ ಅವರು ಮಾಡಿದ ಕೆಲಸಕ್ಕೆ ದಾಖಲಾತಿಗಳಿಲ್ಲ. ಆದರೆ ಪಂಜಾಬ್‌ನಲ್ಲಿ ಕೊನೆಯ ವರ್ಷಗಳಲ್ಲಿ ಅವರು ಮಾಡಿದ ಕೆಲಸ ದಾಖಲಾಗಿದೆ. ಸ್ಥಳೀಯ ಪೊಲೀಸರಷ್ಟೇ ಭಯೋತ್ಪಾದನೆಯ ವಿರುದ್ಧ ಹೋರಾಡಬಲ್ಲರು, ಸೇನೆ ಮತ್ತಿತರ ಪಡೆಗಳು ಬಾಹ್ಯ ಬೆಂಬಲ ನೀಡಬಹುದು ಎಂಬುದು ಗಿಲ್ ಅವರ ವಾದವಾಗಿತ್ತು.

‘ಪಂಜಾಬ್‌ನಲ್ಲಿ ಮಾತ್ರ ಒಳ್ಳೆಯ ಜಾಟರು ಕೆಟ್ಟ ಜಾಟರೊಂದಿಗೆ ಹೋರಾಡುವವರೆಗೂ ನಿಮಗೆ ಗೆಲುವು ಸಾಧ್ಯವಿಲ್ಲ. ನನ್ನ ಬಹುತೇಕ ಸಿಬ್ಬಂದಿ ಜಾಟರು’ ಎಂದವರು ಹೇಳುತ್ತಿದ್ದರು. ಆಗ ಕೇಂದ್ರದಲ್ಲಿ ಆಂತರಿಕ ಭದ್ರತೆಯ ರಾಜ್ಯ ಸಚಿವರಾಗಿದ್ದ ರಾಜೇಶ್ ಪೈಲಟ್ ಅವರ ಮೂಲಕ ನರಸಿಂಹರಾವ್ ಅವರ ನೇತೃತ್ವದ ಸರ್ಕಾರದ ಮೇಲೆ ಪ್ರಭಾವ ಬೀರಿ, ಅಗತ್ಯ ಸಂಪನ್ಮೂಲ ಒದಗಿಸುವ ಮೂಲಕ ತಮ್ಮ ಸಿಬ್ಬಂದಿಯನ್ನು ಗಿಲ್ ಹುರಿದುಂಬಿಸಿದರು. ಕೆಲವು ಅಧಿಕಾರಿಗಳು ಮುಂದಿನ ದಿನಗಳಲ್ಲಿ ಮಾನವ ಹಕ್ಕು ಪ್ರಕರಣಗಳಲ್ಲಿ ಸಿಲುಕಿಕೊಳ್ಳಬಹುದಾದ ಸಾಧ್ಯತೆ ಇದ್ದುದನ್ನು ಮೊದಲೇ ಗ್ರಹಿಸಿ, ಅವರ ಸಂರಕ್ಷಣೆಗಾಗಿ ಕಾನೂನು ಹೋರಾಟಕ್ಕೆ ಅಗತ್ಯವಾದ ಸಿದ್ಧತೆಯನ್ನೂ ಮಾಡಿಕೊಂಡಿದ್ದರು.

ಕಾಂಡೋಮ್ ಸಿದ್ಧಾಂತದ ಪಾಠವನ್ನು ಗಿಲ್ ನಮಗೆ ಹೇಳಿದ್ದರು. ‘ನೋಡು ತಮ್ಮಾ, ನಾವು ಸರ್ಕಾರಕ್ಕೆ ಕಾಂಡೋಮ್‌ಗಳಂತೆ ಬಳಕೆಯಾಗುತ್ತೇವೆ. ಕೆಲಸ ಮುಗಿದ ಮೇಲೆ ಅವರು ತೆಗೆದು ಬಿಸಾಡುತ್ತಾರೆ’ ಎಂದಿದ್ದರು. ಪಾನಗೋಷ್ಠಿಯೊಂದರಲ್ಲಿ ಮಹಿಳಾ ಐಎಎಸ್ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಶಿಕ್ಷೆಗೆ ಗುರಿಯಾದಾಗ, ಗಿಲ್ ಗಂಭೀರವಾದ ತೊಂದರೆಗೆ ಸಿಲುಕಿದ್ದರು. ಅಂತಿಮವಾಗಿ ಸುಪ್ರೀಂ ಕೋರ್ಟ್ ಅವರ ಶಿಕ್ಷೆಯನ್ನು ದಂಡಕ್ಕೆ ಇಳಿಸಿ, ಪಾರ್ಟಿಗಳಲ್ಲಿ ಕುಡಿಯದಂತೆ ಬುದ್ಧಿವಾದ ಹೇಳಿತ್ತು. ಈ ಸಲಹೆಯನ್ನು ಅವರು ಎಷ್ಟರ ಮಟ್ಟಿಗೆ ಪಾಲಿಸಿದರು? ಒಂದು ವೇಳೆ ಅವರು ಬದುಕಿದ್ದಾಗ ಕೋರ್ಟ್‌ನಲ್ಲಿ ಪ್ರಮಾಣ ಮಾಡಿಸಿ ನನ್ನನ್ನೇನಾದರೂ ಈ ಪ್ರಶ್ನೆ ಕೇಳಿದ್ದರೆ, ನಿಜಕ್ಕೂ ನಾನು ಇಕ್ಕಟ್ಟಿನಲ್ಲಿ ಸಿಲುಕುತ್ತಿದ್ದೆ.

‘ಒಮ್ಮೆ ನೀನು ನಿನ್ನ ನೆಚ್ಚಿನ ಪ್ರಾರ್ಥನೆ ಮಾಡಿ, ಸಂತ ಬುದ್ಧನನ್ನು ಗುಟುಕರಿಸಿದರೆ ಮುಗಿಯಿತು. ಅಲ್ಲಿಗೆ ನಿನ್ನ ಸಂದೇಹ, ಭಯ, ಸಂದಿಗ್ಧ ಎಲ್ಲವೂ ಮಟಾಮಾಯವಾಗಿ ಬಿಡುತ್ತವೆ’ ಎಂದು ಮದ್ಯಪಾನದ ಬಗ್ಗೆ ಗಂಭೀರವಾಗಿ ಮಾತನಾಡುವಾಗಲೊಮ್ಮೆ ಅವರು ಹೇಳಿದ್ದರು. ತಮ್ಮ ಅದೇ ಓಲ್ಡ್ ಮಾಂಕ್ ರಮ್ ಅನ್ನು ಉದ್ದೇಶಿಸಿ ಅವರಾಡಿದ ಮಾತಾಗಿತ್ತು ಅದು.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)