ಶನಿವಾರ, ಮೇ 28, 2022
31 °C

ಕೇದಾರನಾಥದ ಮೇಘಸ್ಫೋಟ ಮತ್ತು ಸೀಳುನೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇದಾರನಾಥದ ಶಿವತಾಂಡವದ ಕಂಪನಗಳು 17 ದಿನಗಳ ನಂತರವೂ ಮಾಧ್ಯಮಗಳಲ್ಲಿ ಪ್ರತಿಧ್ವನಿಸುತ್ತಲೇ ಇವೆ. ಹಿಂದಿನ ಕೋಶಿ ದುರಂತ, ಲೇಹ್- ಲಡಾಖ್ ದುರಂತ, ಮಾಲ್ಪಾ ದುರಂತಗಳ ಹಾಗೆ ಇದೂ ಕೇವಲ ಹಳ್ಳಿಗರ ಗೋಳಾಗಿದ್ದಿದ್ದರೆ ಆ ಸುದ್ದಿ ಎಂದೋ ಕ್ಷೀಣವಾಗಿ ಪರ್ವತ ಕಣಿವೆಗಳಲ್ಲಿ ಲೀನವಾಗುತ್ತಿತ್ತು. ಈ ಬಾರಿ ಬಹುತೇಕ ಎಲ್ಲ ರಾಜ್ಯಗಳ ಪ್ರವಾಸಿಗರೂ ಅಲ್ಲಿ ಸಿಲುಕಿದ್ದರಿಂದ ಈ ದುರ್ಘಟನೆಗೆ ವಿಶೇಷ ಆದ್ಯತೆ ಸಿಕ್ಕಿದೆ.ಹಿಮಾಲಯದ ಐದು ಕೋಟಿ ವರ್ಷಗಳ ಚರಿತ್ರೆಯಲ್ಲಿ ಇಂಥ ಮಹಾಧಾರೆ, ಭೂಕುಸಿತ, ಹಿಮಕುಸಿತಗಳು ಲಕ್ಷಾಂತರ ಬಾರಿ ಸಂಭವಿಸಿವೆ. ಪ್ರತಿ ಕುಸಿತದ ನಂತರವೂ ಹಿಮಾಲಯ ಮತ್ತಷ್ಟು ಎತ್ತರಕ್ಕೇರಿದೆ. ಪ್ರಕೃತಿಗೆ ಅದೊಂದು ಆಟ. ಬಿಸಿಲು, ಮಳೆ, ಚಳಿ, ಗಾಳಿ, ಗುರುತ್ವಬಲ, ಮಂಜು, ಹಿಮ ಎಲ್ಲವನ್ನೂ ಸುತ್ತಿಗೆಯಂತೆ, ಚಾಣದಂತೆ, ಡೈನಮೈಟ್‌ನಂತೆ, ಬುಲ್‌ಡೋಝರಿನಂತೆ ಬಳಸಿಕೊಂಡು ಪರ್ವತಗಳನ್ನು ಕೆತ್ತಿ ಅದು ಕಣಿವೆಗಳನ್ನಾಗಿ ಮಾಡುತ್ತದೆ. ಪೃಥ್ವಿಯ ಉದರದ್ರವ ಇಡೀ ಭರತಖಂಡವೆಂಬ ಚಿಪ್ಪನ್ನೇ ಮೆಲ್ಲಗೆ ಚೀನಾದ ಕಡೆ ತಳ್ಳುತ್ತ, ಶಿಲಾಸ್ತರಗಳನ್ನು ಶಿವಧನುಸ್ಸಿನಂತೆ ಬಾಗಿಸುತ್ತ, ಮುರಿಯುತ್ತ, ಭೂಕಂಪನ, ಭೂಕುಸಿತಗಳನ್ನು ಕಡೆಗಣಿಸುತ್ತ ಹಿಮಾಲಯವನ್ನು ಎತ್ತರಕ್ಕೇರಿಸುತ್ತಿದೆ. ಈ ಘರ್ಷಣೆಯಲ್ಲಿ ಗಿಡಬಳ್ಳಿಗಳು, ಮುಗಿಲೆತ್ತರದ ಪೈನ್ ಮರಗಳು, ಹಿಮಚಿರತೆಗಳು, ಯಾಕ್‌ಗಳು ಯಾವುದೇ ಲೆಕ್ಕಕ್ಕಿಲ್ಲ. ಆ ಮಗ್ಗುಲಿನ ಚೀನಾ, ಈ ಮಗ್ಗುಲಿನ ಭಾರತದ ಯಾವ ಆಗುಹೋಗುಗಳೂ ಅದಕ್ಕೆ ಲೆಕ್ಕಕ್ಕಿಲ್ಲ.ಪ್ರಕೃತಿಯ ಈ ದೊಡ್ಡಾಟದಲ್ಲಿ ನಾವು ಪುಟ್ಟಾಟವಾಡುತ್ತೇವೆ. ಚೀನಾದ ಜತೆ ಪೈಪೋಟಿಗೆ ಬಿದ್ದಂತೆ ಅದೇ ಸಡಿಲಧರೆಯಲ್ಲಿ ಹಣದ ಹೊಳೆ ಹರಿಸುತ್ತಿದ್ದೇವೆ. ನಮ್ಮದೇ ಡೈನಮೈಟ್‌ಗಳನ್ನು, ಬುಲ್‌ಡೋಝರ್‌ಗಳನ್ನು ಬಳಸಿ ಕಟ್ಟಡಗಳನ್ನು, ಸೇತುವೆ- ಸುರಂಗಗಳನ್ನು, ಅಣೆಕಟ್ಟುಗಳನ್ನು, ವಿದ್ಯುದಾಗಾರಗಳನ್ನು ಕಟ್ಟುತ್ತ ಆಧುನಿಕ ಸೋಪಾನಗಳನ್ನು ನಿರ್ಮಿಸುತ್ತಿದ್ದೇವೆ. ಅಭಿವೃದ್ಧಿಯ ಈ ಪೈಪೋಟಿಯಲ್ಲಿ ಜನಸಾಮಾನ್ಯರು ಯಾವುದೇ ಲೆಕ್ಕಕ್ಕಿಲ್ಲ.ಈಗಿನ ದುರಂತಕ್ಕೆ ಜೂನ್ 16-17ರ ಮೇಘಸ್ಫೋಟವೇ ಕಾರಣವೆಂದು ಹೇಳಲಾಗುತ್ತಿದೆ. ಹಿಂದೆಲ್ಲ ಮೇಘಸ್ಫೋಟ ಎಂಬ ಪದವನ್ನೇ ಕೇಳಿರಲಿಲ್ಲ, ಈಚಿನ ವರ್ಷಗಳಲ್ಲಿ ಇದು ಪದೇ ಪದೇ ಸಂಭವಿಸಲು ಕಾರಣವೇನೆಂದು ಕೆಲವರು ಕೇಳುತ್ತಿದ್ದಾರೆ. ಮೇಘಸ್ಫೋಟ ಈ ಮೊದಲೂ ಆಗೊಮ್ಮೆ ಈಗೊಮ್ಮೆ ಆಗುತ್ತಿತ್ತು. ಹಿಮಾಲಯದ ಪಶ್ಚಿಮ ಬೆಟ್ಟಸಾಲುಗಳಲ್ಲಿ ಇದು ಈಗೀಗ ಪದೇ ಪದೇ ಆಗುತ್ತಿದೆ ಎಂಬುದನ್ನು ಬಿಟ್ಟರೆ ರಾಜಸ್ತಾನದ ಮರಳುಗಾಡಿನಲ್ಲೂ ಆದೀತು, ಮುಂಬೈಯಂಥ ಮಹಾನಗರದಲ್ಲೂ ಸಂಭವಿಸೀತು.ಮೇಘಸ್ಫೋಟವೆಂದರೆ ಅದು ಸ್ಫೋಟವೂ ಅಲ್ಲ, ಸಿಡಿತವೂ ಅಲ್ಲ. ಕೆಳಗಿನಿಂದ ಬಿಸಿಗಾಳಿ ಒತ್ತಿದ ಹಾಗೆಲ್ಲ ಮೋಡಗಳು ಮೇಲಕ್ಕೇರುತ್ತವೆ. ಅಪರೂಪಕ್ಕೆ ಕೆಲವೊಮ್ಮೆ ಒಂದು ಪದರದ ಮೋಡದ ಮೇಲೆ ಇನ್ನೊಂದು ಮತ್ತೊಂದು ಪದರದ ಮೋಡಗಳು ಒತ್ತಿ ಬರುತ್ತವೆ. ಮಳೆ ಸುರಿಸಲು ಅವು ಸಿದ್ಧವಾಗಿದ್ದರೂ ಕೆಳಗಿನಿಂದ ಬಿಸಿಗಾಳಿ ಒತ್ತುತ್ತಲೇ ಇರುತ್ತದೆ. ಆ ಒತ್ತುಬಲ ಚೆನ್ನಾಗಿದ್ದಷ್ಟು ಕಾಲ ಮಳೆ ಸುರಿಸಲು ಸಾಧ್ಯವಾಗದೆ ಮೋಡದ ಎಲ್ಲ ಪದರಗಳೂ ಮುಂದಕ್ಕೆ ಮೇಲಕ್ಕೆ ಸಾಗುತ್ತಲೇ ಇರುತ್ತವೆ. ನೆಲದಿಂದ ಹತ್ತು ಹದಿನೈದು ಕಿಲೊಮೀಟರ್ ಎತ್ತರಕ್ಕೂ ಏರಬಹುದು. ಅಲ್ಲಿನ ತಂಪಿನಲ್ಲಿ ಮೋಡಗಳು ಸಾಂದ್ರಗೊಳ್ಳುತ್ತವೆ. ನೀರಾವಿಯ ಕಣಗಳೆಲ್ಲ ಒಂದಕ್ಕೊಂದು ಬೆಸುಗೆಯಾಗಿ ಆಲಿಕಲ್ಲುಗಳಾಗುತ್ತವೆ. ಪ್ರಸವಕ್ಕೆ ಸಜ್ಜಾದ ಗಜಗರ್ಭದ ಹಾಗೆ. ತೂಕ ಹೆಚ್ಚಿದಂತೆ ಕೆಳಗಿನಿಂದ ಅವನ್ನು ಒತ್ತುತ್ತಿದ್ದ ಬೆಚ್ಚನ್ನ ಗಾಳಿ ಯಾವುದೋ ಕ್ಷಣದಲ್ಲಿ ಸೋತು ಕೈಚೆಲ್ಲುತ್ತದೆ. ದಪ್ಪ ಪದರದ ಮೋಡಗಳಲ್ಲಿ ಮಡುಗಟ್ಟಿದ್ದ ನೀರಿನ ಮೂಟೆ ಹಠಾತ್ ಕುಸಿಯುತ್ತದೆ.ಮೇಲಿನ ಹಾಸಿನಲ್ಲಿದ್ದ ಆಲಿಕಲ್ಲುಗಳೆಲ್ಲ ಕೆಳಗಿನ ಪದರದ ನೀರಾವಿಯ ಮೇಲೆ ಬೀಳುತ್ತ, ಇನ್ನಷ್ಟು ದಪ್ಪದ ಆಲಿಕಲ್ಲುಗಳಾಗಿ, ತನ್ನ ಕೆಳಗಿನ ಎಲ್ಲ ಹಾಸುಗಳನ್ನೆಲ್ಲ ತಂಪು ಮಾಡುತ್ತ, ನೀರಾವಿಯ ಕಣಗಳನ್ನು ಹೀರಿಕೊಳ್ಳುತ್ತ ಒನಕೆ ಗಾತ್ರದ ಹನಿಗಳಾಗಿ, ಜಲ್ಲಿಕಲ್ಲುಗಳ ಜಲಪಾತದಂತೆ ನೆಲಕ್ಕೆ ಅಪ್ಪಳಿಸುತ್ತವೆ. ನಾಲ್ಕಾರು ಗಂಟೆಗಳ ಕಾಲ ಜಿಟಿಜಿಟಿ ಸುರಿಯಬೇಕಿದ್ದ ಮಳೆ ಹತ್ತು ಹದಿನೈದು ನಿಮಿಷಗಳಲ್ಲಿ ಭಡಾರೆಂದು ಧುಮುಕುತ್ತದೆ. ಕೇಜಿಗಟ್ಟಲೆ ರವೆಯನ್ನು ಕಾಗದದ ಚೀಲದಲ್ಲಿ ತುಂಬಿಸಿ ತರುವಾಗ ಹಠಾತ್ ತಳಕಳಚಿ ಎಲ್ಲವೂ ಚೆಲ್ಲುವ ಹಾಗೆ. ಹಾಗೆ ಹೆಕ್ಟೇರ್‌ಗೆ ಹತ್ತು ಸಾವಿರ ಟನ್ ನೀರು ಒಂದೇ ರಾತ್ರಿಯಲ್ಲಿ ಬಿದ್ದರೆ ಏನಾದೀತು?ನಿರ್ಜನ ಪ್ರದೇಶದಲ್ಲಿ ಬಿದ್ದು ಅಲ್ಲೇ ಮಡುಗಟ್ಟಿ ನಿಂತಿದ್ದರೆ ಅದೇನೂ ದೊಡ್ಡ ಪ್ರಮಾದವಲ್ಲ. ಮುಂಬೈಯಲ್ಲಿ 2005ರಂದು ಬಿದ್ದು, ಮಡುಗಟ್ಟಿ ಐದಾರು ಸಾವಿರ ಜನರನ್ನೂ ಸಾವಿರಾರು ಎಮ್ಮೆದನಗಳನ್ನೂ ಮುಳುಗಿಸಿತ್ತು. ಅಲ್ಲಿ ಪ್ರವಾಹಕ್ಕೆ ಅವಕಾಶವಿರಲಿಲ್ಲ. ಪರ್ವತ ಪ್ರದೇಶಗಳಲ್ಲಿ ಕಡಿಮೆ ಜನಸಾಂದ್ರತೆ ಇದ್ದರೂ ಅಪಾಯ ಭೀಕರವಾಗುತ್ತದೆ; ಏಕೆಂದರೆ ಬಿದ್ದ ಅಷ್ಟೂ ನೀರು ಮಹಾಧಾರೆಯಾಗಿ ಕಣಿವೆಗಳ ಮೂಲಕ ಹರಿದು ಸಾಗುತ್ತ, ಬಂಡೆಗಳನ್ನು ದಿಮ್ಮಿಗಳನ್ನು ಉರುಳಿಸುತ್ತ ಉತ್ಪಾತಗಳನ್ನು ಸೃಷ್ಟಿಸುತ್ತ ಹೋಗುತ್ತದೆ. ಮಳೆಯಿಲ್ಲದ ಕಣಿವೆಯಲ್ಲೂ ಅನಿರೀಕ್ಷಿತ ನೆರೆ ನುಗ್ಗಿ ಮನೆಮಠ, ರಸ್ತೆ-ಸೇತುವೆಗಳನ್ನು ಕೊಚ್ಚೊಯ್ಯುತ್ತ ಸಾಗುತ್ತದೆ.ಪವನವಿಜ್ಞಾನಿಗಳ ಪ್ರಕಾರ ಗಂಟೆಗೆ 100 ಮಿಲಿಮೀಟರ್ ಅಥವಾ ಅದಕ್ಕೂ ಹೆಚ್ಚು ಮಳೆ ಸುರಿದರೆ ಅದು  ಮೇಘ ಸ್ಫೋಟ  ಎನ್ನಿಸಿಕೊಳ್ಳುತ್ತದೆ. 99 ಮಿ.ಮೀ ಮಳೆ ಸುರಿದರೆ ಅದು ಮೇಘಸ್ಫೋಟ ಅಲ್ಲವಂತೆ! ಕೇದಾರನಾಥದಲ್ಲಿ ಸಂಭವಿಸಿದ್ದು ಮೇಘಸ್ಫೋಟ ಅಲ್ಲವೆಂದೂ ವಿಶಾಲ ಪ್ರದೇಶದಲ್ಲಿ ದಿನವಿಡೀ ದೊಡ್ಡ ಮಳೆ ಸುರಿದಿದ್ದರಿಂದ ಪ್ರವಾಹ ಬಂತೆಂದೂ ತಜ್ಞರು ಹೇಳಿದ್ದಾರೆ. ಡಾಪ್ಲರ್ ರಡಾರ್ ಇದ್ದಿದ್ದರೆ ಮೋಡಗಳ ಸ್ಥಿತಿಗತಿಯನ್ನು ಮೊದಲೇ ಅಧ್ಯಯನ ಮಾಡಬಹುದಿತ್ತು ಎಂತಲೂ ಹೇಳಿದ್ದಾರೆ. ಸಾಮಾನ್ಯ ರಡಾರ್‌ಗಳು ದೂರದ ಆಕಾಶದಲ್ಲಿನ ವಿಮಾನಗಳಂಥ ಗಟ್ಟಿ ವಸ್ತುಗಳನ್ನು ಮಾತ್ರ ಪತ್ತೆ ಹಚ್ಚುತ್ತವೆ. ಡಾಪ್ಲರ್ ರಡಾರ್ ಹಾಗಲ್ಲ. ಇವು ಮೋಡಗಳ ಸಾಂದ್ರತೆ, ಗಾತ್ರ, ಚಲನೆಯ ವೇಗ, ಅದರಲ್ಲಿನ ನೀರಾವಿಯ ಸ್ಥಿತಿಗತಿ, ಮೋಡವನ್ನು ಎತ್ತಿ ಹಿಡಿದ ಗಾಳಿಯ ವೇಗ ಎಲ್ಲವನ್ನೂ ಕಂಪ್ಯೂಟರಿಗೆ ನಿಮಿಷ ನಿಮಿಷಕ್ಕೆ ತಿಳಿಸುತ್ತಿರುತ್ತವೆ. ಕಡಲತೀರದಲ್ಲಿ ಇವನ್ನು ಸ್ಥಾಪಿಸಿದರೆ ಸುಂಟರಗಾಳಿ, ಮಳೆಮೋಡಗಳ ದಟ್ಟಣೆಯನ್ನು ಅರಿತು ಸಮುದ್ರದಲ್ಲಿರುವ ಮೀನುಗಾರರಿಗೆ, ಕಡಲಂಚಿನ ನಿವಾಸಿಗಳಿಗೆ ಮುನ್ಸೂಚನೆ ನೀಡಬಹುದು. ಬದ್ರಿನಾಥ, ಕೇದಾರನಾಥದಂಥ ಪರ್ವತ ಕಣಿವೆಗಳಲ್ಲಿ ಮೋಡಚಲನೆಯ ಮಾಹಿತಿ ಸಿಕ್ಕರೂ ಫೋನ್ ಮೂಲಕ ಎಲ್ಲರಿಗೂ ತಿಳಿಸುವುದೇ ಕಷ್ಟ. ತಿಳಿಸಿದರೂ ಏನು ಮಾಡಲು ಸಾಧ್ಯ? ಗಜಗರ್ಭದ ಮೋಡಗಳನ್ನು ಚದುರಿಸಲು ಸಾಧ್ಯವಿಲ್ಲ. ವಿಮಾನಗಳ ಮೂಲಕ ಅಷ್ಟೆತ್ತರದ ಆಕಾಶಕ್ಕೆ ಏರಿ ಮೋಡಬಿತ್ತನೆ ಮಾಡುವುದು ಸಾಧ್ಯವೆ? ಒಂದುವೇಳೆ ಅವೆಲ್ಲ ಮಾಡಿ, ತಂತ್ರಜ್ಞಾನಿಗಳ ಕನಸಿನಂತೆ ಮೇಘಸ್ಫೋಟದ ತುಸು ಮುನ್ನವೇ ಮಳೆ ಸುರಿಸಿದರೂ ಪರ್ವತ ಪ್ರದೇಶದ ಸಾವಿರಾರು ಕೊಳ್ಳಗಳಲ್ಲಿ ಎಲ್ಲೇ ಮಳೆ ಸುರಿದರೂ ಮಂದಾಕಿನಿ, ಭಾಗೀರಥಿ, ಅಲಕನಂದಾ -ಯಾವುದೋ ಒಂದು ಕೊಳ್ಳದಲ್ಲಿ ನೆರೆನುಗ್ಗುವುದು ಖಾತ್ರಿ.ಈ ಡಾಪ್ಲರ್ ರಡಾರ್‌ಗಳ ಕತೆ ಬೇರೆಯೇ ಇದೆ. ಎರಡು ವರ್ಷಗಳ ಹಿಂದೆ 15 ಕೋಟಿ ರೂಪಾಯಿಗಳ ಒಂದು ಹೈಟೆಕ್ ರಡಾರನ್ನು ಮುಂಬೈಯ ಕೊಲಾಬಾದಲ್ಲಿ 15 ಮಹಡಿಗಳ ಕಟ್ಟಡದ ಮೇಲೆ ಸ್ಥಾಪಿಸಲಾಗಿದೆ. ಕಳೆದ ವರ್ಷ ಅಷ್ಟೊಂದು ಬಾರಿ ಮುಸಲಧಾರೆಯ ಮಳೆ ಸುರಿದರೂ ಅದು ಮುಂಬೈವಾಸಿಗಳಿಗೆ ಮುನ್ಸೂಚನೆ ನೀಡಿರಲಿಲ್ಲ. ಅದರ ಉಸ್ತುವಾರಿ ಸಿಬ್ಬಂದಿಗೆ ಸರಿಯಾದ ತರಬೇತಿ ಇರಲಿಲ್ಲವೊ, ರಡಾರೇ ಸರಿ ಇರಲಿಲ್ಲವೊ ಗೊತ್ತಿಲ್ಲ. ಗೋವಾದಲ್ಲಿ ಸ್ಥಾಪಿಸಲೆಂದು ಚೀನಾದಿಂದ ತರಿಸಿದ ರಡಾರ್ ಮೂರು ವರ್ಷಗಳಾದರೂ ಕೆಲಸ ಆರಂಭಿಸಿಲ್ಲ. ಅದರ ವೈಭವ ನೋಡಿಯೇ ಸರ್ಕಾರ ಇನ್ನೂ 12 ರಡಾರ್‌ಗಳನ್ನು ಖರೀದಿಸಿದೆ. ಅವನ್ನು ಎಲ್ಲೆಲ್ಲಿ ಸ್ಥಾಪಿಸಬೇಕು ಎಂಬುದು ನಿರ್ಧಾರವಾಗಿಲ್ಲ.ಈ ಮಧ್ಯೆ ಮುಂಬೈಯಲ್ಲಿದ್ದ ರಡಾರ್ ಕಳೆದ ಏಪ್ರಿಲ್ ತಿಂಗಳಲ್ಲಿ ಕೆಟ್ಟು ಕೂತಿತ್ತು. ಈಗ ಕೇದಾರನಾಥದ ದುರಂತದ ನಂತರ ಡಾಪ್ಲರ್ ರಡಾರ್ ಬೇಕು, ಹರಿದ್ವಾರಕ್ಕೆ ಬೇಕು, ಹೃಷಿಕೇಶಕ್ಕೆ ಬೇಕು ಎಂದು ಮಾಧ್ಯಮಗಳ ಮೂಲಕ ಯಾರೋ ದಲ್ಲಾಳಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಕೂಗು ಎತ್ತಿದ್ದಾರೆ. ಹಿಂದೆ ಬೆಂಗಳೂರಿನಲ್ಲಿ ಹಂದಿಜ್ವರದ ಆಕ್ರಂದನ ಎದ್ದಾಗ ಅವಸರದಲ್ಲಿ ಥರ್ಮಲ್ ಸೆನ್ಸರ್ ಉಪಕರಣಗಳಿಗೆ ಯಡಿಯೂರಪ್ಪನವರು ಆರ್ಡರ್ ಮಾಡಿದ್ದರು. ಅದೂ ರಡಾರ್ ಥರಾನೇ ಕೆಲಸ ಮಾಡಬೇಕಿತ್ತು. ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಪ್ರವಾಸಿಗರಿಗೆ ಜ್ವರ ಇದೆಯೆ ಎಂದು ದೂರದಿಂದಲೇ ಸ್ಕ್ಯಾನ್ ಮಾಡಬಲ್ಲ ಆ ಉಪಕರಣಗಳು ಒಂದು ದಿನವಾದರೂ ಕೆಲಸ ಮಾಡಿವೆಯೆ ಎಂದು ಯಾರಾದರೂ ತನಿಖೆ ನಡೆಸಬೇಕು.ಹವಾಮಾನ ವೈಪರೀತ್ಯದ ಅನಿರೀಕ್ಷಿತ ಘಟನೆಗಳು ಎಲ್ಲೆಲ್ಲೋ ಅನಿರೀಕ್ಷಿತ ಸ್ಥಳಗಳಲ್ಲಿ ಸಂಭವಿಸುತ್ತಿವೆ; ರಡಾರ್ ಎಲ್ಲೆಲ್ಲಿ ಸ್ಥಾಪಿಸುತ್ತೀರ? ಕಳೆದ ಜನವರಿ 31ರಂದು ಆಂಧ್ರಪ್ರದೇಶದ ರಂಗಾರೆಡ್ಡಿ ಜಿಲ್ಲೆಯ ಚೇವೆಲ್ಲಾ, ಮೊಯ್ನೊಬಾದ್ ಸುತ್ತಲಿನ ಹತ್ತಾರು ಹಳ್ಳಿಗಳ ಮೇಲೆ ಆಲೂಗಡ್ಡೆ, ಕುಂಬಳಕಾಯಿ ಗಾತ್ರದ ಆಲಿಕಲ್ಲುಗಳ ಸಮೇತ 20 ನಿಮಿಷಗಳ ಕಾಲ ಮಳೆ ಸುರಿದಿತ್ತು. ಬೆಳೆಗಳನ್ನು, ದನಗಳನ್ನು ನಾಶ ಮಾಡಿ ಒಂಬತ್ತು ಜನರನ್ನು ಬಲಿ ತೆಗೆದುಕೊಂಡು ಇಡೀ ಪ್ರದೇಶಕ್ಕೆ ಹಿಮಬಂಡೆಗಳ ಚಾದರವನ್ನೇ ಹೊದೆಸಿತ್ತು. ಮೋಡಗಳಿರಬಾರದ ಕಾಲದಲ್ಲಿ, ಹಿಮ ಬೀಳದ ಊರಿನಲ್ಲಿ ಜರುಗಿದ ಈ ಘಟನೆ ಹವಾಗುಣ ತಜ್ಞರನ್ನೂ ಕಕ್ಕಾಬಿಕ್ಕಿ ಮಾಡಿತ್ತು.ತಂತ್ರಜ್ಞಾನದಿಂದಲೇ ಎಲ್ಲವನ್ನೂ ಫಿಟ್ ಮಾಡಬಹುದು ಎಂಬ ನಮ್ಮ ಅಹಮ್ಮನ್ನು  ಪ್ರಕೃತಿ ಮತ್ತೆ ಮತ್ತೆ ಭಗ್ನ ಮಾಡುತ್ತಲೇ ಬಂದಿದೆ. ತೆಹ್ರಿ ಎಂಬಲ್ಲಿ ಕಟ್ಟಿದ ಅಣೆಕಟ್ಟೆಯನ್ನು ಕೆಲವರು ಹೊಗಳುತ್ತಿದ್ದಾರೆ. ಕೇದಾರನಾಥದಿಂದ ಹರಿದ ಚಂಡಧಾರೆ ಕೆಳಗೆ ತೆಹ್ರಿ ಅಣೆಕಟ್ಟೆಯವರೆಗೆ ಸಾಗಿ ಅಲ್ಲಿಗೇ ನಿಂತಿತೆಂದು ಹೇಳಲಾಗುತ್ತಿದೆ. ಅಣೆಕಟ್ಟು ಇಲ್ಲದಿದ್ದರೆ ಹೃಷಿಕೇಶ, ಹರದ್ವಾರದವರೆಗಿನ ಊರುಗಳೆಲ್ಲ ನಾಶವಾಗಬಹುದಿತ್ತು ಎಂತಲೂ ಹೇಳಲಾಗುತ್ತದೆ.ಹಿಮಾಲಯದ ಚರಿತ್ರೆಯಲ್ಲಿ ತೆಹ್ರಿಯಂಥ ಕಟ್ಟೆಗಳು ತಾತ್ಕಾಲಿಕ ತಡೆಗಳಷ್ಟೆ. ಈಗ ಹರಿದುಬಂದ ನೀರು ಭಾರೀ ಹೂಳನ್ನೂ ತಂದಿದೆ. ಅಣೆಕಟ್ಟೆಯ ಇಕ್ಕೆಲಗಳ ಶಿಲಾಸ್ತರಗಳಲ್ಲಿ ನೀರು ಒಳಸುರಿಯಾಗಿ ಒಸರುತ್ತ ಸಡಿಲಗೊಳಿಸುತ್ತ ಕ್ರಮೇಣ ಇನ್ನೂ ದೊಡ್ಡ ದುರಂತದತ್ತ ಜಾರಿಸುತ್ತದೆ. ನೀರನ್ನು ತಡೆಹಿಡಿಯುವ ಕೆಲಸವನ್ನು ಗಿಡಮರಗಳಿಗೆ, ಹಳ್ಳಿಯ ಜನರಿಗೆ ವಹಿಸಬೇಕೆ ವಿನಾ, ದೊಡ್ಡ ಯಂತ್ರಗಳು, ದೊಡ್ಡ ಕುಳಗಳು ಆ ಕೆಲಸವನ್ನು ಕೈಗೆತ್ತಿಕೊಂಡರೆ ಪ್ರಕೃತಿಯ ಕೈಗೆ ದುರಂತದ ದೊಡ್ಡ ಅಸ್ತ್ರವನ್ನೇ ಕೊಟ್ಟಂತಾಗುತ್ತದೆ.ಹಿಮಾಲಯವೆಂದರೆ ಪುರಾಣಕಾಲದ ತಪೋಭೂಮಿ, ಋಷಿಮುನಿಗಳ ಪುಣ್ಯಭೂಮಿ ಎಂದೆಲ್ಲ ಹೇಳಿ ಲಕ್ಷೋಪಲಕ್ಷ ಪ್ರವಾಸಿಗರನ್ನು ಅತ್ತ ಸೆಳೆಯುತ್ತಿದ್ದೇವೆ. ಹಿಂದಿರುಗಿ ಭವಲೋಕಕ್ಕೆ ಬರಬೇಕೆಂಬ ಆಸೆಯಿಲ್ಲದೆ ಹಿಂದಿನವರು ಅತ್ತ ಪಯಣ ಕೈಗೊಳ್ಳುತ್ತಿದ್ದರು. ಆದರೆ ಪ್ರವಾಸವೇ ಒಂದು ಉದ್ಯಮವಾಗಿ, ಚಾರಣ ಸಾಹಸಿಗರೂ ಅಲ್ಲದವರಿಗಾಗಿ ಹಿಮಾಲಯದಲ್ಲಿ ಏನೆಲ್ಲ ಆಕರ್ಷಣೆಗಳನ್ನು ಅದು ಸೃಷ್ಟಿಸಿದೆ. ಎಲ್ಲ ಸುರಕ್ಷಾ ನಿಯಮಗಳನ್ನೂ ಬದಿಗೊತ್ತಿ ನದಿ ದಡದಲ್ಲಿ ಕಟ್ಟಡಗಳು ತಲೆಯೆತ್ತಿವೆ. ಭದ್ರ ನೆಲೆಯೇ ಇಲ್ಲದಲ್ಲಿ ರಸ್ತೆ-ಸೇತುವೆಗಳನ್ನು ನಿರ್ಮಿಸಲಾಗಿದೆ. ಹಿಮಾಲಯ ಎಂದರೆ ಹಣ ಎಣಿಸುವವರ ಆಡುಂಬೊಲವಾಗುತ್ತಿದೆ.ನಕಾಶೆಯಲ್ಲಿ ಕೇದಾರನಾಥ ಎಂದರೆ ರುದ್ರನ ಮೂರನೆಯ ಕಣ್ಣಿನಂತೆಯೇ ಇದೆ. ಮಂದಾಕಿನಿ ನದಿ ಎರಡು ಟಿಸಿಲಾಗಿ ಮತ್ತೆ ಒಂದಾಗಿ ನಡುವಣ ದ್ವೀಪದಲ್ಲಿ ಶಿವಾಲಯ ಇದೆ. ಕಣ್ಣು ತೆರೆದು ಮುಚ್ಚುವುದರೊಳಗೆ ಸಂಭವಿಸಿದ ಈ ದುರಂತ ನಮ್ಮ ಪ್ರಭುತ್ವದ ಕಣ್ಣು ತೆರೆಸೀತೆ?

   ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.