ಶುಕ್ರವಾರ, ಫೆಬ್ರವರಿ 26, 2021
31 °C

ಕೇಳಬಾರದ ಕಥೆಯ ಕಟ್ಟಬಾರದು

ವಸು ಮಳಲಿ Updated:

ಅಕ್ಷರ ಗಾತ್ರ : | |

ಕೇಳಬಾರದ ಕಥೆಯ ಕಟ್ಟಬಾರದು

‘ಶತ್ರುಗಳು ಹೇಳುತ್ತಾ ಬಂದಿರುವ ಸುಳ್ಳು ಭರವಸೆಗಳಿಂದ ಜನ ಕುರುಡರಾಗಿ­ದ್ದಾರೆ. ಆ ಘಟನೆ­ಯಿಂದ ನಮ್ಮ ಸ್ವಾತಂತ್ರ್ಯ ಮತ್ತು ಸ್ವಾಭಿ­ಮಾನ ನಾಶವಾಗಿದೆ. ರಾಷ್ಟ್ರದ ಏಕತೆಗೇ ಇಂದು ಭಂಗ ಬಂದಿದೆ. ಜನರ ಬಡತನದ ವೇದನೆಯನ್ನು ನುಂಗುವುದು ಬಲು ಹಿಂಸೆ. ಒಂದು ಕಡೆ ಕಾರ್ಮಿಕರು ನಿರುದ್ಯೋಗ­ದಿಂದ ನರಳುತ್ತಿದ್ದರೆ, ಮತ್ತೊಂದು ಕಡೆ ಮಧ್ಯಮ ವರ್ಗ ಮತ್ತು ಕುಶ­ಲ­ಕರ್ಮಿಗಳು ನಲುಗಿ­ಹೋಗಿ­ದ್ದಾರೆ.

ಇದರಿಂದ ಈ  ರಾಷ್ಟ್ರ ನಾಶವಾಗಿದೆ. ಅಷ್ಟೇ ಅಲ್ಲ, 2,000 ವರ್ಷ­ಗಳ ಪರಂಪರೆ­ಯುಳ್ಳ ಮಾನವ ಸಂಸ್ಕೃತಿ ಮತ್ತು ನಾಗರಿಕತೆ ಕುಸಿದುಬೀಳುತ್ತಿದೆ. ಇದ­ಕ್ಕೆಲ್ಲಾ ಈ ರಾಷ್ಟ್ರವ­ನ್ನಾಳಿದ ನಮ್ಮ ಹಿಂದಿನ ಸರ್ಕಾರವೇ ಕಾರಣ. ಅವರಿಂದಾಗಿ ಕುಟುಂಬದ ಮೌಲ್ಯಗಳು ಮತ್ತು ನೈತಿಕತೆಯ ಅಡಿಪಾಯವೇ ಅಲುಗಾಡುತ್ತಿದೆ’.

ಈ ಭಾಷಣವನ್ನು ಆವೇಶಭರಿತ ಎನ್ನುವುದ­ಕ್ಕಿಂತ ಆರ್ಭಟದ  ಭಾಷಣ  ಎನ್ನುವುದೇ ಸರಿ. ಇಂದೋ ನೆನ್ನೆಯೋ ಕಿವಿಯಲ್ಲಿ  ಭೋರ್ಗರೆ­ದಂತೆ ಭಾಸವಾಗುತ್ತದೆ. ಆದರೆ, ಇದು ೮೦ ವರ್ಷ­ಗಳ ಹಿಂದೆ ಆಕ್ರೋಶದಿಂದ ಕಿರುಚಿಕೊಂಡು ಮಾಡುತ್ತಿದ್ದ ಭಾಷಣವಾಗಿತ್ತು. ಕೇಳುತ್ತಿದ್ದ ಜನ ಮುಗಿಲು ಮುಟ್ಟುವಂತೆ ಭಾವಾವೇಶದಿಂದ  ಕೂಗುತ್ತಿದ್ದರು. ಎಲ್ಲೆಲ್ಲೂ  ಸ್ವಾಸ್ತಿಕದ ಸಂಕೇತ­ವನ್ನು ಹೊತ್ತ ಬಾವುಟಗಳು ಹಾರಾಡುತ್ತಿದ್ದವು. ರಕ್ಷಕನಂತೆ ಕಂಡ ಆ ವ್ಯಕ್ತಿ; ಜಗತ್ತು ಹಿಂದೆಂದೂ ಕಾಣದ ಕ್ರೌರ್ಯವನ್ನು ಎಸಗಬಲ್ಲನೆಂದು ಯಾರೂ ಭಾವಿಸಿರಲಿಲ್ಲ.  ಜರ್ಮನ್‌ರು ತಮ್ಮ ಕಷ್ಟಗಳನ್ನು ಪರಿಹರಿಸಲು ಬಂದ ದೇವರೆಂದೇ ಭಾವಿಸಿದ್ದ  ವ್ಯಕ್ತಿ ಬೇರೆ ಯಾರೂ ಅಲ್ಲ, ಅಡಾಲ್ಫ್ ಹಿಟ್ಲರ್.

ಇವತ್ತಿಗೂ ಅವನ ಹೆಸರು ಜನರನ್ನು ಬೆಚ್ಚಿ­ಬೀಳಿಸುತ್ತದೆ. ಅಷ್ಟೇ ಏಕೆ, ಇಂದು  ಜರ್ಮನ್‌ರು ಅವನ ಹೆಸರನ್ನು ಹೇಳುವುದಿಲ್ಲ. ಯಾರಾದರೂ ಜರ್ಮನಿಗೆ ಹೋದಾಗ ಕುತೂಹಲದಿಂದ ಹಿಟ್ಲರನ ಬದುಕಿಗೆ ಸಂಬಂಧಪಟ್ಟ ನೆಲೆಗಳನ್ನೇನಾ­ದರೂ ನೋಡಬಯಸಿದರೆ ಜರ್ಮನ್‌ರು ನಾವು ಯಾವುದೋ ವಿಚಿತ್ರವಾದ ಪ್ರಶ್ನೆ ಕೇಳುತ್ತಿರು­ವಂತೆ ಮುಖ ಮಾಡುತ್ತಾರೆ. ಅವರ ಚರಿತ್ರೆಯ  ಪಠ್ಯಗಳಲ್ಲೂ ಹಿಟ್ಲರ್‌ನ ಗೈರುಹಾಜರಿ ಎದ್ದು­ಕಾಣು­ತ್ತದೆ. ಇಂದು ಅವರಿಗೆ ಅದು ಯಾರೂ ಕೇಳ­ಬಾರದ ಕಥೆಯಾಗಿದೆ. ನೆನಪುಗಳನ್ನು ಅಳಿಸಿಹಾಕುವ ಪ್ರಯತ್ನ ನಡೆದಿದೆ.

ಅಳಿಸಿಹಾಕಲಾರದ ಮನುಕುಲದ ದುರಂತ­ಗಳನ್ನು ಮೊದಲೇ ತಡೆಯಬೇಕಾದ ಜವಾಬ್ದಾರಿ  ಸಮಾಜಕ್ಕೆ ಇರುತ್ತದೆ. ಪ್ರಜಾಪ್ರಭುತ್ವದ ಮೌಲ್ಯ­ಗಳಲ್ಲಿ ನಂಬಿಕೆ ಇರಿಸಿ ಹೋಗಬೇಕಾಗಿ­ರುವ ಈ ಹೊತ್ತಿನಲ್ಲಿ ನಾವೇನಾದರೂ ಮತ್ತೊಮ್ಮೆ ಸರ್ವಾ­ಧಿ­ಕಾರಿಗಳ ಸುಳಿಗೆ ಸಿಕ್ಕಿಕೊಳ್ಳಬಹುದೇ ಎಂಬ ಆತಂಕ ರಾಜಕೀಯವಾಗಿ ಎಚ್ಚರವಾ­ಗಿ­ರುವ ಯಾವುದೇ ಸಮಾಜವನ್ನು ಕಾಡುತ್ತದೆ. ಇದು ಚರಿತ್ರೆಯಿಂದ ಕಲಿಯಲೇಬೇಕಾದ ಪಾಠವೂ ಆಗಿದೆ.

ಎರಡನೇ ಮಹಾಯುದ್ಧಕ್ಕೆ ಎಡೆಮಾಡಿದ ಹಿಟ್ಲರ್ ಮತ್ತು ಮುಸಲೋನಿಯ ನಂತರವೂ ಸರ್ವಾಧಿಕಾರಿಗಳು ಉದಯಿಸುತ್ತಲೇ ಇದ್ದಾರೆ. ೧೯೭೦ರ ದಶಕದಲ್ಲಿ ಬಂದ ಫಿಲಿಪ್ಪೀನ್ಸ್‌ನ ಫರ್ಡಿ­ನೆಂಡ್ ಮಾರ್ಕೋಸ್ ದೇಶದ ಸಂವಿಧಾ­ನಕ್ಕೆ ತಿಲಾಂಜಲಿಯನ್ನು ಹಾಡಿ ಸರ್ವಾಧಿ­ಕಾರಿ­ಯಾದ. ಕಾಂಬೋಡಿಯಾದ ಡಿಕ್ಟೇಟರ್  ಪೋಲ್‌­ಪಾಟ್ ನಡೆಸಿದ ನರಮೇಧ ಹಿಟ್ಲರ್‌ನ ಸಂತಾನ  ಕೊನೆಗೊಂಡಿಲ್ಲವೆಂದು ಸಾಬೀತು ಮಾಡಿತು. ಜಗತ್ತಿನಾದ್ಯಂತ ಹಲವು ರಾಷ್ಟ್ರ­ಗಳಲ್ಲಿ ಅಧಿಕಾರಕ್ಕೆ ಬಂದ ರಾಜಕೀಯ ನಾಯ­ಕರು ಸಂವಿಧಾನವನ್ನು ಹತ್ತಿಕ್ಕಿ ಸರ್ವಾಧಿಕಾರಿ­ಗಳಾಗಿದ್ದಾರೆ. ಧರ್ಮ, ಭಾಷೆ, ಜನಾಂಗ, ಜಾತಿ, ಬುಡಕಟ್ಟು ಯಾವುದೋ ನೆಪ ಹೂಡಿ ಜನರಲ್ಲಿ ದ್ವೇಷವನ್ನು ಹುಟ್ಟು­ಹಾಕಿದ್ದಾರೆ.

ಅಸಹಾಯಕರ ಕಗ್ಗೊಲೆ ಮಾಡಿ ರುದ್ರನರ್ತನ ಮಾಡಿದ್ದಾರೆ. ಆದ್ದರಿಂದ ಸಮಕಾಲೀನ ಸಂದರ್ಭದಲ್ಲಿ ಫ್ಯಾಸಿಸಂ ತಲೆ ಎತ್ತುವುದಿಲ್ಲವೆಂದೂ, ಎಲ್ಲರ ಒಳಿ­ತನ್ನು ಬಯಸುವ ಪ್ರಜಾಪ್ರಭುತ್ವದ ದೇಶದಲ್ಲಿ­ದ್ದೇ­ವೆಂದು ಮುಗ್ಧವಾಗಿ ಕೈಕಟ್ಟಿ ಕೂರಲು ಸಾಧ್ಯವಿಲ್ಲ.

ನಮ್ಮ ಸುತ್ತಲ ರಾಜಕೀಯ ಶಕ್ತಿಗಳಲ್ಲಿ  ಫ್ಯಾಸಿಸಂನ ಸ್ವರೂಪಗಳೇನಾದರೂ ಇವೆಯೇ ಎಂದೂ ಗಮನಿಸುತ್ತಲೇ ಇರಬೇಕಾಗುತ್ತದೆ. ಸರ್ವಾಧಿಕಾರಿಯಾಗಬಲ್ಲ ವ್ಯಕ್ತಿಯನ್ನು  ಧೀರೋ­ದಾತ್ತ ನಾಯಕನಾಗಿ ಮೆರೆಸಲಾಗುತ್ತದೆ.

ಎಲ್ಲೆಲ್ಲೂ ಕಟೌಟ್, ಬ್ಯಾನರ್‌ಗಳನ್ನು ಹಚ್ಚಿ ಜನರ ಮನದಾಳಕ್ಕೆ ಅಂತಹ ವ್ಯಕ್ತಿಯ ವ್ಯಕ್ತಿತ್ವ­­ವನ್ನು ಹೆಪ್ಪುಗಟ್ಟಿಸಲಾಗುತ್ತದೆ. ಪ್ರಚಾರ ಮೊದಲ ಮಂತ್ರ. ಅದರಲ್ಲಿ ಮಾಧ್ಯಮಗಳ ಪಾತ್ರ ಹಿರಿದಾಗಿರುತ್ತದೆ. ಟಿ.ವಿ. ಚಾನೆಲ್‌ಗಳಲ್ಲಿ ನಿರಂತರವಾಗಿ ಆ ವ್ಯಕ್ತಿಯನ್ನು ಬಿಂಬಿಸ­ಲಾಗು­ತ್ತದೆ. ಮಾಧ್ಯಮಗಳನ್ನು ತಮ್ಮ ಕೈಯಲ್ಲಿ ಇರಿಸಿ­ಕೊಳ್ಳಲಾಗುತ್ತದೆ. ಹಿಟ್ಲರನ ಕಾಲಕ್ಕೆ ರೇಡಿಯೊ ಭಾಷಣಗಳು ಹಾಗೂ ಸಾರ್ವಜನಿಕ  ಭಾಷಣ­ಗಳು ಜನರನ್ನು ತಲುಪಲು ಇದ್ದ ಪ್ರಮುಖ ಮಾರ್ಗವಾಗಿತ್ತು.

ಮಾಧ್ಯಮಗಳೇ ಮುಂದಾಗಿ ಮೊಳೆಯುವ ನಾಯಕನಿಗೆ ನೀರೆರೆಯುತ್ತವೆಂದು ಹೇಳಲಾಗುವುದಿಲ್ಲ. ಅವು ಒತ್ತಡಕ್ಕೆ ಇಲ್ಲವೇ ಆಮಿಷಕ್ಕೂ ಬಲಿಯಾಗುತ್ತವೆ. ಇಂದು ಟಿ.ವಿ. ಮಾಧ್ಯಮಗಳಲ್ಲದೆ ಕಂಪ್ಯೂಟರ್ ಜಾಲಗಳ ಮೂಲಕ  ಅಭಿಪ್ರಾಯವನ್ನು ರೂಪಿಸಲಾ­ಗು­ತ್ತಿದೆ. ತಾವೇ ಪ್ರತಿಕ್ರಿಯೆಗಳನ್ನೂ ನೀಡಿ ಜನಾ­ಭಿ­ಪ್ರಾಯವೆಂದು ನಂಬಿಸಲಾಗುತ್ತದೆ. ಇದನ್ನೆಲ್ಲಾ ರೂಪಿಸುವ ಉದ್ಯೋಗಗಳು ಹುಟ್ಟಿಕೊಂಡಿ­ರು­ವುದು ಹೊಸ ತಂತ್ರಜ್ಞಾನದ ಕೊಡುಗೆಯೇ ಸರಿ.

ಫ್ಯಾಸಿಸ್ಟ್ ನಾಯಕರ ವಿಶೇಷವೆಂದರೆ  ಆರಂಭದಲ್ಲಿ ಅವರ ವ್ಯಕ್ತಿತ್ವ ಎಲ್ಲರನ್ನೂ ಸೆಳೆ­ಯು­ವಂತಿರುತ್ತದೆ. ಅನುಯಾಯಿಗಳು ಪ್ರಶ್ನಾತೀತ­ವಾಗಿ ನಾಯಕತ್ವವನ್ನು ಒಪ್ಪಿಕೊಳ್ಳುತ್ತಾರೆ. ದೋಷ ಗುರುತಿಸುವ ಹೊತ್ತಿಗೆ ಕಾಲ ಮಿಂಚಿ­ರುತ್ತದೆ. ಕಣ್ಣ ಮುಂದೆಯೇ ಸರ್ವಾಧಿಕಾರಿ­ಯೊಬ್ಬ  ಭೂತಾಕಾರವಾಗಿ ಬೆಳೆದಾಗ ಕೈ ಹೊಸೆದುಕೊಳ್ಳಬೇಕಾಗುತ್ತದೆ.

ಸರ್ವಾಧಿಕಾರಿಗಳು ಬಿರುದು, ಬಾವಲಿಗ­ಳನ್ನು ಹಚ್ಚಿಕೊಳ್ಳಲು ಸದಾ ಬಯಸುತ್ತಾರೆ. ಸ್ವಯಂಘೋಷಿತ ವಿಶೇಷಣಗಳಿಂದ  ಹೊಗಳಿಸಿ­ಕೊಳ್ಳು­ತ್ತಾರೆ. ನಾಜಿ ಪಕ್ಷದ ನಾಯನಾಗಿದ್ದ  ಹಿಟ್ಲರ್‌ನನ್ನು ಜನ ‘ಫ್ಯೂರರ್’ ಎಂದು ಕರೆ­ಯು­ತ್ತಿದ್ದರು. ಅದೂ ಸ್ವಯಂಘೋಷಿತ ಬಿರುದೇ ಆಗಿತ್ತು. ತಾನು ಸರ್ವೋಚ್ಚ ಮಿಲಿಟರಿ ನಾಯ­ಕನೂ, ಸರ್ವಶ್ರೇಷ್ಠ ನ್ಯಾಯಾಧೀಶನೂ ಎಂದು ಕರೆದುಕೊಂಡಿದ್ದನು. ಅವನು ಬಳಸುತ್ತಿದ್ದ ಘೋಷ­ಣೆಗಳಲ್ಲಿ ‘ಒಂದು ಜನ, ಒಂದು ಸಾಮ್ರಾಜ್ಯ, ಒಬ್ಬ ನಾಯಕ’ ಎಲ್ಲೆಲ್ಲೂ ರಾರಾ­ಜಿ­ಸುತ್ತಿತ್ತು.

ಸಂವಿಧಾನ ಬದ್ಧವಾದ ಚುನಾವಣೆ ಮೂಲಕವೇ ಗೆದ್ದು ಬಂದರೂ ನಿಧಾನವಾಗಿ ತನ್ನ ಅಧಿಕಾರವನ್ನು ಹೆಚ್ಚಿಸಿ­ಕೊಳ್ಳುತ್ತಾ ಮುನ್ನಡೆ­ದನು. ಪಕ್ಷವಿದ್ದರೂ ಚುನಾ­ವಣೆಗಳಲ್ಲಿ ಅದು ಮರೆ­ಮಾಚಿರುತ್ತಿತ್ತು. ಅವ­ನೊಬ್ಬನನ್ನೇ ಫೋಕಸ್ ಮಾಡಲಾಗುತ್ತಿತ್ತು. ‘ಈ ಗಳಿಗೆ ಬರಬೇಕಾದರೆ ನಾನು ಸತತವಾಗಿ ಹದಿ­ನಾಲ್ಕು ವರ್ಷ ದುಡಿದಿದ್ದೇನೆ, ಅದೂ ನಿಮಗಾಗಿ’ ಎಂದು ಹೇಳುತ್ತಿದ್ದನು. ಏಳು ಜನರಿಂದ ಆರಂಭವಾದ ಪಕ್ಷ ದೇಶವನ್ನೇ ಆವರಿಸಿತ್ತು. ‘ಮುಂದಿನ ಭವಿಷ್ಯವೆಲ್ಲಾ ನಿಮ್ಮದೇ’ ಎಂದಾಗ ಜನ ಅವನನ್ನು ಬಲವಾಗಿ ನಂಬಿದ್ದರು.

ಫ್ಯಾಸಿಸ್ಟರು ರಾಷ್ಟ್ರೀಯತೆಯನ್ನು ಮುಂದಿಟ್ಟು, ಅದರ ಏಕತೆಗಾಗಿ ಆರ್ಥಿಕಾಭಿ­ವೃದ್ಧಿ­­ಯನ್ನು ಬಯಸುವುದಾಗಿ ಹೇಳುತ್ತಾರೆ. ರಾಷ್ಟ್ರೀಯತೆಯ ಸಮರ್ಥನೆಗೆ ಚರಿತ್ರೆ, ಧರ್ಮ, ಪುರಾಣಗಳನ್ನು ಬೆಸೆಯುತ್ತಾರೆ. ಜನಾಂಗ ಶ್ರೇಷ್ಠತೆಯ ಮಾತು ಸ್ವಾಭಿಮಾನವನ್ನೂ ಮೀರಿ ದುರಭಿಮಾನವನ್ನು ತುಂಬುತ್ತದೆ. ಈ ಎಲ್ಲಾ ವಿಚಾರಗಳೂ ಅತಾರ್ಕಿಕವಾದರೂ ಅದರ­ಲ್ಲೊಂದು ತರ್ಕವನ್ನು ಕಟ್ಟುತ್ತಾರೆ. ಜನರ

ಮನ­­ದಲ್ಲಿ ಅತೃಪ್ತ,  ಅಶಾಂತ ಪರಿಸ್ಥಿತಿಯಲ್ಲಿ ಬದು­ಕುತ್ತಿರುವಂತೆ ಭಾಸವಾಗುತ್ತದೆ.

ಆ ಗಳಿಗೆಯಲ್ಲಿ ಬಿಡುಗಡೆ ನೀಡುವ ಮಾಂತ್ರಿಕ­ನಾಗಿ ಆ ನಾಯಕ ಕಾಣಿಸಿಕೊಳ್ಳುತ್ತಾನೆ.  ಅರಾಜಕ ಪರಿಸ್ಥಿತಿಯನ್ನು ಹುಟ್ಟುಹಾಕುವುದೂ ಯೋಜನೆಯ ಭಾಗವಾಗಿ­ರುತ್ತದೆ. ರಾಷ್ಟ್ರೀಯ­ತೆಯ ಭಾಗವಾಗಿ ಸ್ವದೇಶಿ ಪರಿ­ಕಲ್ಪ­ನೆಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ವಾಸ್ತವದಲ್ಲಿ ವಿದೇಶಿ ಬಂಡವಾಳವೇ ಅವರ ಬಂಡವಾಳವಾಗಿರುತ್ತದೆ. ಇದು ಮಹಾ ಯುದ್ಧದ ನಂತರ ತಲೆ ಎತ್ತಿದ  ಸರ್ವಾಧಿ­ಕಾರಿ­ಗಳೆಲ್ಲರಲ್ಲೂ ಕಾಣುವ ಸಾಮಾನ್ಯ ಗುಣ. ವಿದೇಶಿ ಬಂಡವಾಳದ ಪುಂಗಿಯ ನಾದಕ್ಕೆ ಈ ಸರ್ವಾಧಿಕಾರಿಗಳು ತಲೆತೂಗುತ್ತಾರೆ. ಇದನ್ನು ನವ ಫ್ಯಾಸಿಸಂ ಎನ್ನಬಹುದು.

ಇದೊಂದು ವಿಚಿತ್ರವಾದ ಪರಿಸ್ಥಿತಿ. ಅಮೆರಿ­ಕದ ಸರ್ವಾಧಿಕಾರವನ್ನು ವಿರೋಧಿಸಿ ಸರ್ವಾ-­ಧಿಕಾರಿಗಳಾದವರೂ ಇದ್ದಾರೆ. ಹಾಗೆ ಬಂದ ಸದ್ದಾಂ ಹುಸೇನನನ್ನು ಅಮೆರಿಕವೇ ಮುಗಿಸಿತು. ಮೂರನೇ ವಿಶ್ವದ ಆರ್ಥಿಕ ರಾಜ­ಕೀಯದಲ್ಲಿ ಸದಾ ಕೈ ಹಾಕುವ ಅಮೆರಿಕ  ತನಗೆ ಅನುಕೂಲವಾಗುವವರೆಗೆ ಯಾವುದೇ ಸರ್ಕಾರ­ವನ್ನು ಬೆಂಬಲಿಸುತ್ತದೆ. ತಾನು ಹಾಕಿದ ಗೆರೆ­ಯನ್ನು ಮೀರಿದೆ ಎನಿಸಿದಾಗ ಆ ಸರ್ಕಾರ ಇಲ್ಲವೇ ಅದನ್ನು ಮುನ್ನಡೆಸುವ ವ್ಯಕ್ತಿ ಮೇಲೆ  ಗೂಬೆ ಕೂರಿಸತೊಡಗುತ್ತದೆ.

  ಸರ್ವಾಧಿಕಾರಿ­ಯಾಗಿ­ದ್ದ­ನೆಂದೂ ಪ್ರಜಾಪ್ರಭುತ್ವ ವಿರೋಧಿ ಎಂದೂ ಬಿಂಬಿಸಿ ಮಿಲಿಟರಿ ಕಾರ್ಯಾ­ಚರಣೆಯ ಮೂಲಕ ಪರಿಸ್ಥಿತಿಯನ್ನು ತನ್ನ ಹತೋಟಿಗೆ ತೆಗೆದು­­ಕೊಳ್ಳುತ್ತಾ ಬಂದಿದೆ. ಹಾಗಾಗಿ ಯಾವುದೇ ದೇಶದ ಚುನಾವಣೆಯಲ್ಲಿ ಅದರ ಲೆಕ್ಕಾಚಾರಗಳೂ ಕೆಲಸ ಮಾಡುತ್ತವೆ. ದೇಶದ ಒಳಗೆ ಫ್ಯಾಸಿಸ್ಟರಂತೆ ಕಾಣಿಸಿಕೊಂಡು ಹೊರಗಿನ ಶಕ್ತಿಗೆ ಅಡಿಯಾಳಾಗಿರುವುದು ಸಮಕಾಲೀನ ರಾಜಕೀಯ ಸ್ವರೂಪವಾಗಿದೆ.

ಸರ್ವಾಧಿಕಾರಿಯನ್ನು ಹುಟ್ಟು ಹಾಕುವ, ಮಟ್ಟ ಹಾಕುವ ದೊಡ್ಡ ಡಿಕ್ಟೇಟರ್ ಮೂಲದಲ್ಲಿ  ಧರ್ಮದ ನೆಲೆಯಲ್ಲಿ ಜನರ ಮನ­ಸ್ಸಿಗೆ ಲಗ್ಗೆ ಹಾಕುತ್ತಾನೆ. ಹಿಟ್ಲರ್‌ನ ಜನಾಂಗ ದ್ವೇಷಕ್ಕೆ ಧರ್ಮದ ಲೇಪನವೂ ಬೆರೆತು ಹದ­ಗೊಂಡಿತ್ತು. ಮೂಲಭೂತವಾದವೇ ಫ್ಯಾಸಿಸಂಗೆ ಅಡಿಪಾಯ. ಹಾಗಾಗಿ ಸಂಪ್ರದಾಯ, ಸನಾತನ ಸಂಸ್ಕೃತಿಯ ಹೆಸರಿನಲ್ಲಿ ಸಾಮಾಜಿಕ ಬೆಳವಣಿಗೆಗೆ ಮಾರಕ­ವಾಗುತ್ತದೆ. ಪುರುಷ ಪ್ರಾಧಾನ್ಯವನ್ನು ಎತ್ತಿಹಿಡಿ­ಯು­ತ್ತದೆ. ಹೆಣ್ಣೆಂದರೆ ತಾಯಿ, ಅಕ್ಕ ಇತ್ಯಾದಿ­ಯಾಗಿ ಹೇಳುತ್ತಾ ಬದುಕಿನ ಮೌಲ್ಯ­ಗಳನ್ನು ಕುಟುಂಬದ ಜೊತೆಗೆ ನೋಡಲು ಬಯ­ಸು­ತ್ತದೆ. ಇದ್ದರೂ ಆಕೆ ಕೆಳಗಿನ ಕೆಲಸಗಳಿಗೇ ಹೊರತು ಉನ್ನತ ಹುದ್ದೆಗಳಿಗಲ್ಲ.

ವೇದಿಕೆಗಳಲ್ಲಿ ಕಾರ್ಮಿಕರು ಮತ್ತು ಬಡವರ ಪರವಾಗಿ ಮಾತನಾಡಿದರೂ ವಾಸ್ತವದಲ್ಲ್ಲಿ ಬಂಡವಾಳಶಾಹಿ ಪರವಾದ ನಿಲುವೇ ಇರುತ್ತದೆ. ರಾಷ್ಟ್ರ ಕಟ್ಟುವ ಹೆಸರಿನಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತದೆ. ತಮ್ಮ ನಾಯಕನಿ­ಗಾಗಿ, ದೇಶಕ್ಕಾಗಿ ದುಡಿಯುತ್ತಿದ್ದೇವೆಂದು ನಂಬುವ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪ್ರತಿ­ಪಾದಿಸದೇ ಹೋಗುತ್ತಾರೆ. ದುಡಿಮೆ ಹೆಚ್ಚು­ತ್ತದೆ, ಬಂಡವಾಳಗಾರ ಮತ್ತಷ್ಟು ಕೊಬ್ಬು­ತ್ತಾನೆ. ಬಂಡವಾಳಶಾಹಿಗಳು ಪ್ರಜಾ­ಪ್ರಭುತ್ವ­ವಾದಕ್ಕಿಂತ ಸರ್ವಾಧಿಕಾರವನ್ನು ಬಯಸುತ್ತಾರೆ, ಅಲ್ಲಿ ಕಾರ್ಮಿಕ ಹೋರಾಟಗಳು ಮಣ್ಣು ಪಾಲಾ­ಗು­ತ್ತವೆ. ಅಧಿಕಾರದ ಚಾವಟಿ ಎಲ್ಲರನ್ನೂ ಹತೋ­ಟಿಯಲ್ಲಿರಿಸುತ್ತದೆ. ಊಳಿಗಮಾನ್ಯ ವ್ಯವ­ಸ್ಥೆ­ಯ ಹಳೆಯ ಮೌಲ್ಯಗಳು ಹುತ್ತವಾಗುತ್ತವೆ.

ಆಧುನಿಕ ಬಂಡವಾಳ ಪ್ರಭುಗಳಾದ ಬಹು­ರಾಷ್ಟ್ರೀಯ ಕಂಪೆನಿಗಳು ಸರ್ವಾಧಿಕಾರಿಗಳ ಬೆಂಬಲಕ್ಕೆ ನಿಲ್ಲುತ್ತವೆ. ಬಡತನ ವಿರೋಧಿಸುತ್ತಾ ಹುಟ್ಟುವ ಸರ್ವಾಧಿಕಾರ, ಆಳದಲ್ಲಿ ಬಡವನನ್ನು ದ್ವೇಷಿಸುತ್ತದೆ. ಸಮಾನತೆ, ಸಾಮಾಜಿಕ ನ್ಯಾಯ, ವ್ಯಕ್ತಿ ಸ್ವಾತಂತ್ರ್ಯ, ಮಾನವ ಹಕ್ಕುಗಳು ಗಾಳಿಗೆ ತೂರಿದ ತರಗೆಲೆಯಾಗುತ್ತವೆ. ಇಟಲಿಯ ಫ್ಯಾಸಿಸ್ಟ್ ನಾಯಕ ಮುಸಲೋನಿ ಮಾತುಗಳಲ್ಲಿ ಹೇಳುವುದಾದರೆ ‘ಜನರಿಗೆ ಬೇಕಾಗಿರುವುದು ಸ್ವಾತಂತ್ರ್ಯವಲ್ಲ, ಶಿಸ್ತು ಮತ್ತು ಕಾನೂನು. ವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಸತ್ತ ಶವ, ಅದನ್ನು ನಾನು ಒದ್ದು ಆಚೆಗೆ ಹಾಕಿದ್ದೇನೆ’.

ಸರ್ವಾಧಿಕಾರಿ ರೂಪಿಸುವ ನಿಯಮಗಳೇ ಅಂತಿಮ. ಮೀರಿದವರ ತಲೆಗಳನ್ನು ಚೆಂಡಾಡು­ತ್ತಾರೆ. ಎಲ್ಲೆಲ್ಲೂ ಭಯದ ವಾತಾವರಣ ಆವರಿ­ಸಿ­ರುತ್ತದೆ.  ಅಭಿವ್ಯಕ್ತಿ ಸ್ವಾತಂತ್ರ್ಯ ನೆಲಕಚ್ಚುತ್ತದೆ. ಹಾಗಾಗಿ ಬೌದ್ಧಿಕ ವರ್ಗ ಭೂಗತವಾಗುತ್ತದೆ. ಇಲ್ಲವೇ, ದೇಶ ಬಿಟ್ಟು ಪಲಾಯನ ಮಾಡುತ್ತದೆ.

ಫ್ಯಾಸಿಸ್ಟ್ ಬೆಂಬಲಿಗರು ಆರಂಭದಲ್ಲಿ ಪರಿ­ಸ್ಥಿತಿಯ ಲಾಭ ಪಡೆದು ತಮ್ಮ ಹಗೆ ತೀರಿಸಿ­ಕೊಳ್ಳು­ತ್ತಾರೆ, ಸಂಭ್ರಮಿಸುತ್ತಾರೆ, ಆ ನಂತರ­ದಲ್ಲಿ  ಜನಾಂಗ ದ್ವೇಷದಿಂದ ಕೊಲೆಯಾದ ಸಮು­­ದಾ­ಯವನ್ನು ಕಂಡು ಭಯಭೀತ­ರಾಗು­­ತ್ತಾರೆ. ತಮ್ಮ ಬಗೆಗೆ ತಾವೇ ಅಸಹ್ಯ ಪಡ­ತೊಡಗುತ್ತಾರೆ.

ಭಾರತದಂತಹ ದೇಶದಲ್ಲಿ ನೂರಕ್ಕೆ ನೂರು ಫ್ಯಾಸಿಸ್ಟ್‌ರಾಗಿ ಕಾಣದಿದ್ದರೂ ಮೆದುವಾದ ಫ್ಯಾಸಿಸಂ  ತನ್ನ ಅವಕಾಶಗಳಿಗಾಗಿ ಸದಾ

ಕಾಯು­­ತ್ತಿರುತ್ತದೆ. ಮೆದುವಾದ ಫಾಸಿಸಂ ಬಣ್ಣ ಬದಲಿ­ಸು­ವುದು ಸುಲಭ. ಹಾಗೆ ನೋಡಿದರೆ  ಸರ್ವಾ­ಧಿಕಾರಿ ಸ್ವಯಂಭುವಲ್ಲ, ಅವನನ್ನು ರೂಪಿಸು­ವಲ್ಲಿ ಪಕ್ಷದ ಯೋಜನೆಯೂ ಅಡಗಿರು­ತ್ತದೆ. ಸರ್ವಾಧಿಕಾರಿಗಳ ಗುರು ಅಮೆರಿಕ, ಭಾರತದ ಮಟ್ಟಿಗೆ ತನ್ನದೇ ಆದ ಲೆಕ್ಕಾಚಾರ­ಗಳನ್ನೂ ಹೊಂದಿದೆ.

ಭಾರತದ ಮೂಲಭೂತ­ವಾದ ಮುಸ್ಲಿಂ ವಿರೋಧವಾಗುವುದನ್ನು ಅಮೆರಿಕ ಒಪ್ಪುತ್ತದೆ. ಆ ಮಟ್ಟಕ್ಕೆ ಅದು ಬೆಂಬಲಕ್ಕೂ ನಿಲ್ಲು­ತ್ತದೆ.  ತನ್ನ ಬಂಡವಾಳ ಹೂಡಿಕೆಗೆ ಕಾರ್ಮಿ­ಕ­ರನ್ನು ತಹಬಂದಿಯಲ್ಲಿ ಇರಿಸುವುದನ್ನು ಮತ್ತಷ್ಟು ಬೆಂಬಲಿಸುತ್ತದೆ. ಕಮ್ಯುನಿಸ್ಟ್ ಬೆಂಬ­ಲಿತ ಸರ್ಕಾರವನ್ನು ವಿರೋಧಿಸುತ್ತದೆ. ತಳ ಸಮು­ದಾಯಗಳನ್ನು ಬೆಂಬಲಿಸುವ ಸಮಾಜ­ವಾದಿ ಸರ್ಕಾರಕ್ಕಿಂತ ಬಂಡವಾಳಶಾಹಿ ಪರ­ವಾದ ಧಾರ್ಮಿಕ ಮೂಲ­ಭೂತ­ವಾದವನ್ನು ಒಂದು ಹಂತದವರೆಗೆ ಬೆಂಬಲಿಸು­ತ್ತದೆ.

ಭಾರತದ ಜಾತಿ ಪದ್ಧತಿಯಿಂದ ಸಮಾಜದಲ್ಲಿ ನಿರಂತರ­ವಾದ ಅಸಹನೆ, ಅತೃಪ್ತಿ ಸ್ಥಾಯಿಯಾಗಿ­ರುತ್ತದೆ. ಒಳಗಿನ ಅಭದ್ರತೆ ಭಾರತ­ವನ್ನು ಎಂದೂ ಪ್ರಬಲವಾಗದಂತೆ ಕಾಯ್ದು­­ಕೊಳ್ಳು­ತ್ತದೆ. ನಮ್ಮೊಳಗಿನ ಸಂಕಟವನ್ನು ಕಂಡು ‘ದೊಡ್ಡಣ್ಣ’ ಮಾತ್ರವಲ್ಲ, ನೆರೆಹೊರೆ­ಯವರೂ ನಿರುಮ್ಮಳವಾಗುತ್ತಾರೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.