ಕೈ ಉತ್ಪನ್ನಗಳ ಪರವಾದ ಚಳವಳಿ ಏಕೆ ಬೇಕು?

7

ಕೈ ಉತ್ಪನ್ನಗಳ ಪರವಾದ ಚಳವಳಿ ಏಕೆ ಬೇಕು?

ಪ್ರಸನ್ನ
Published:
Updated:
ಕೈ ಉತ್ಪನ್ನಗಳ ಪರವಾದ ಚಳವಳಿ ಏಕೆ ಬೇಕು?

ಕಳೆದ ಕೆಲವು ತಿಂಗಳುಗಳಿಂದ ಕೈ ಉತ್ಪನ್ನಗಳ ಪರವಾದ ಚಳವಳಿಯೊಂದು ನಡೆದಿದೆ. ಚಳವಳಿಯ ಕೇಂದ್ರವು ಕರ್ನಾಟಕಕ್ಕೆ ಸೀಮಿತವಾಗಿದ್ದರೂ ಪರಿಣಾಮವು ದೇಶದಾದ್ಯಂತ ವ್ಯಾಪಿಸತೊಡಗಿದೆ. ಗ್ರಾಮ ಸೇವಾ ಸಂಘ ಎಂಬ ಹೊಸದೊಂದು ಸಂಸ್ಥೆ ಈ ಚಳವಳಿಯನ್ನು ಮುನ್ನಡೆಸಿಕೊಂಡು ಬರುತ್ತಿದೆ.

ಕೈ ಉತ್ಪನ್ನಗಳೆಂದರೆ, ಒಟ್ಟು ಉತ್ಪಾದನಾ ಪ್ರಕ್ರಿಯೆಯ ಮೂರನೆಯ ಒಂದು ಭಾಗಕ್ಕಿಂತ ಕಡಿಮೆ ಪ್ರಮಾಣದಲ್ಲಿ ಸ್ವಯಂಚಾಲಿತ ಯಂತ್ರಗಳ ಬಳಕೆ ಮಾಡಿಕೊಂಡು, ಮಿಕ್ಕಂತೆ ಮಾನವಶ್ರಮ, ಮಾನವ ಕೌಶಲ ಹಾಗೂ ಸರಳ ಉಪಕರಣಗಳನ್ನು ಬಳಸಿಕೊಂಡು ತಯಾರಿಸಿದ ಉತ್ಪನ್ನಗಳು ಎಂದರ್ಥ. ಕೈ ಉತ್ಪನ್ನಗಳು ಮೂಲತಃ ಬಡವರ ಉತ್ಪನ್ನಗಳಾಗಿವೆ. ಅದರಲ್ಲೂ ಗ್ರಾಮೀಣ ಬಡವರ ಉತ್ಪನ್ನಗಳಾಗಿವೆ.

ಕೈ ಉತ್ಪನ್ನಗಳ ಕ್ಷೇತ್ರ ತುಂಬ ವಿಶಾಲವಾದದ್ದು ಹಾಗೂ ಪಾರಂಪರಿಕವಾದದ್ದು ಹಾಗೂ ದೈವಿಕವಾದದ್ದು. ಉದಾಹರಣೆಗೆ, ಪಾರಂಪರಿಕ ಕೃಷಿ ಪದ್ಧತಿಯಿಂದ ತಯಾರಾದ ಎಲ್ಲ ಉತ್ಪನ್ನಗಳು, ಗುಡ್ಡಗಾಡು ಜನರು ಸಂಗ್ರಹಿಸಿ ತರುವ ಕಾಡಿನ ಉತ್ಪನ್ನಗಳು, ಕೈಮಗ್ಗ ಉತ್ಪನ್ನಗಳು, ಕರಕುಶಲ ವಸ್ತುಗಳು, ಪಾರಂಪರಿಕ ಮೀನುಗಾರಿಕೆಯ ಉತ್ಪನ್ನಗಳು, ಕುರುಬರು- ಕಾಡುಗೊಲ್ಲರು ಇತ್ಯಾದಿ ಪಶುಪಾಲಕ ಸಮುದಾಯಗಳ ಉತ್ಪನ್ನಗಳು, ಇತ್ಯಾದಿ ಎಲ್ಲವೂ ಕೈ ಉತ್ಪನ್ನಗಳೇ ಸರಿ. ಮಾತ್ರವಲ್ಲ, ಕೃಷಿ ಕಾರ್ಮಿಕರೂ ಸೇರಿದಂತೆ ಎಲ್ಲ ರೀತಿಯ ಸೇವಕರೂ ಕೈ ಉತ್ಪಾದಕರೇ ಸರಿ. ಆದರೆ, ತನ್ನೆಲ್ಲ ವೈಶಾಲ್ಯ, ತನ್ನೆಲ್ಲ ಪರಂಪರೆ ಹಾಗೂ ತನ್ನೆಲ್ಲ ದೈವಿಕತೆಗಳ ನಂತರವೂ ಕೈ ಉತ್ಪಾದನೆ ತೀವ್ರತರ ಅಸಡ್ಡೆಗೆ ಗುರಿಯಾಗಿದೆ.

ಜಗತ್ತಿನ ಒಟ್ಟು ಉತ್ಪಾದನೆಯಲ್ಲಿ ಪ್ರತಿಶತ ಅರವತ್ತರಿಂದ ಎಪ್ಪತ್ತು ಈಗಲೂ ಕೈ ಉತ್ಪಾದನೆಯೇ ಆಗಿದೆ. ಹಾಗೆಂದು ಇತ್ತೀಚೆಗೆ ಬಿಡುಗಡೆಯಾದ ವಿಶ್ವ ಬ್ಯಾಂಕಿನ ವರದಿ ಹೇಳಿದೆ. ಇದೊಂದು ಅದ್ಭುತ ಸಂಗತಿಯೇ ಸರಿ. ಯಂತ್ರನಾಗರಿಕತೆ ಇಷ್ಟೆಲ್ಲ ಆವರಿಸಿಕೊಂಡಿರುವಾಗಲೂ, ಅಂಗಡಿಗಳ ಗಾಜಿನ ಕಪಾಟಿನ ತುಂಬ ಯಂತ್ರ ಉತ್ಪನ್ನಗಳೇ ತುಂಬಿಕೊಂಡಿರುವಾಗಲೂ ಕೈ ಉತ್ಪಾದಕ ಕ್ಷೇತ್ರವೇ ಮಹತ್ತರವಾದದ್ದು ಎಂದು ಈ ಅಂಕಿ ಅಂಶ ಸಾರಿ ಹೇಳುತ್ತಿದೆ. ದುರಂತವೆಂದರೆ ನಾವು ಹಾಗೆ ಭಾವಿಸಿದಂತಿಲ್ಲ. ಕೈ ಉತ್ಪಾದನೆ ಮುಳುಗಲಿರುವ ಸೂರ್ಯ ಎಂದೇ ನಾವು ತಿಳಿದಿದ್ದೇವೆ. ಮಾತ್ರವಲ್ಲ, ಬೇಗ ಮುಳುಗಿಹೋಗಬಾರದೆ ಈ ಖೋಡಿ ಎಂಬ ಅಸಹನೆಯಿಂದ ಈ ಕ್ಷೇತ್ರವನ್ನು ಕಾಣುತ್ತಿದ್ದೇವೆ. ಯಂತ್ರ ಕ್ಷಮತೆಯ ಬಗೆಗಿನ ನಮ್ಮ ನಂಬಿಕೆ ಅಷ್ಟೊಂದು ದಟ್ಟವಾಗಿದೆ. ಇದು ದುರಂತವೇ ಸರಿ. ಏಕೆಂದರೆ ಯಂತ್ರವು ಮಾನವ ಸಭ್ಯತೆಯನ್ನು ಇಡಿಯಾಗಿ ಕಬಳಿಸಿ ಕೊಲ್ಲಲಿದೆ.

ಸೀಮಿತ ಮೌಲ್ಯಮಾಪನೆಯ ದುರಂತವಿದು. ಹಣ ಮಾತ್ರವೇ ಮೌಲ್ಯ ಎಂದು ತಿಳಿಯುವ ವ್ಯವಸ್ಥೆ ನಮ್ಮದು. ಈ ವ್ಯವಸ್ಥೆಯು ಯಂತ್ರ ಉತ್ಪನ್ನಗಳಿಗೆ ಅತಿಯಾದ ಬೆಲೆಯನ್ನೂ ಕೈ ಉತ್ಪನ್ನಗಳಿಗೆ ಅತಿ ಕಡಿಮೆ ಬೆಲೆಯನ್ನೂ ನಿಗದಿಪಡಿಸಿದೆ. ಹಾಗಾಗಿ, ಎಪ್ಪತ್ತು ಪ್ರತಿಶತ ಉತ್ಪಾದಕತೆಯು ನಗಣ್ಯವಾಗಿ, ಕೇವಲ ಮೂವತ್ತು ಪ್ರತಿಶತ ಉತ್ಪಾದಕತೆ ಅತಿಗಣ್ಯವಾಗಿ ಕಾಣತೊಡಗಿದೆ.

ಮೋಜಿನ ವಸ್ತುಗಳು ಮೇಲೆದ್ದು ಬಂದಿವೆ, ಅಗತ್ಯ ವಸ್ತುಗಳು ಬೆಲೆ ಕಳೆದುಕೊಂಡಿವೆ. ಉದಾಹರಣೆಗೆ, ವರ್ಷವಿಡೀ ದುಡಿದು, ಹಲವು ಕ್ವಿಂಟಲ್‌ ರಾಗಿ ಬೆಳೆದು ಮಾರಿದರೂ  ಒಂದು ಮೊಬೈಲು ಫೋನ್‌ ಕೊಳ್ಳಲಾಗದ ಪರಿಸ್ಥಿತಿ ಇಂದಿನದು. ಮೊಬೈಲುಗಳ ಉತ್ಪಾದಕನು ಕೋಟ್ಯಧಿಪತಿಯೂ ರಾಗಿ ಬೆಳೆಯುವ ರೈತನು ದರಿದ್ರನೂ ಆಗಿರುವಂತೆ ಮಾಡಿರುವ ಪರಿಸ್ಥಿತಿ.  ಸುಮಾರು ಎರಡುನೂರು ವರ್ಷಗಳ ಹಿಂದೆ ಈ ಪ್ರಕ್ರಿಯೆ ಆರಂಭವಾಯಿತು. ಕೈ ಉತ್ಪನ್ನಗಳನ್ನು ಹಿಂದಕ್ಕೊತ್ತಿ ಯಂತ್ರ ಉತ್ಪನ್ನಗಳು ಮುಂದೆ ಬಂದವು. ಯಂತ್ರಗಳು ಉತ್ಪಾದಕತೆಯನ್ನು ಹೆಚ್ಚಿಸಿದವು, ಅಸಹಜ ರೀತಿಯಿಂದ ಹೆಚ್ಚಿಸಿದವು. ಅಗಾಧ ಪ್ರಮಾಣದ ಶ್ರೀಮಂತಿಕೆಯನ್ನು ಸೃಷ್ಟಿಸಿದವು. ವಿಶ್ವ ಮಾರುಕಟ್ಟೆಯನ್ನು ಸ್ಥಾಪಿಸಿದವು. ಮಾರುಕಟ್ಟೆಗೆ ಮರುಳಾದ ಮನುಷ್ಯರು ನಾವು, ಸಭ್ಯತೆಯ ಮಿಕ್ಕೆಲ್ಲ ಆಯಾಮಗಳನ್ನೂ ಹಿಂದಿಕ್ಕಿ ಸಂಪತ್ತಿನ ಹಿಂದೆ ಓಡಿದೆವು. ತನ್ನ ಪ್ರಖ್ಯಾತ ಸಿನಿಮಾ ‘ಗೋಲ್ಡ್‌ರಷ್‌’ನಲ್ಲಿ ಚಾರ್ಲಿಚಾಪ್ಲಿನ್ ಈ ಬಗ್ಗೆ ತುಂಬ ಮಾರ್ಮಿಕ ಚಿತ್ರಣ ನೀಡಿದ್ದಾನೆ. ಬಂಗಾರದ ಮೋಹಕ್ಕೆ ಬಿದ್ದ ಮನುಕುಲವು ಮಾನವತೆ ಮರೆತು, ಹೇಗೆ ಹುಚ್ಚೆದ್ದು ಕುಣಿಯಿತು ಎಂದು ಅಲ್ಲಿ ಚಿತ್ರಿಸಿದ್ದಾನೆ.

ಸಂಪತ್ತಿನ ಮೋಹಕ್ಕೇನೋ ಬಿದ್ದೆವು. ಆದರೆ ನಮ್ಮೊಳಗಿರುವ ಜೀವ ಮಾತ್ರ ಯಂತ್ರ ಮೋಹಕ್ಕೆ ಬೀಳದೆ ಉಳಿಯಿತು. ಸಹಜತೆಯತ್ತ ತುಡಿಯುತ್ತಲೇ ಉಳಿಯಿತು ಅದು. ಹೀಗಾಗಿ, ಯಂತ್ರ ಸಂಪತ್ತು ಹಾಗೂ ಸಹಜತೆಗಳ ನಡುವಿನ ಹಗ್ಗ ಜಗ್ಗಾಟದಲ್ಲಿ ಸಿಲುಕಿ ನಾವು ಜರ್ಜರಿತರಾದೆವು. ಪಾಪಪ್ರಜ್ಞೆ ಕಾಡತೊಡಗಿತು. ಪಾಪಪ್ರಜ್ಞೆಯಿಂದಾಗಿ ಕೈ ಉತ್ಪಾದಕ ಬಡವರನ್ನು ನಾವು ಅನುಕಂಪದಿಂದ ಕಾಣತೊಡಗಿದೆವು. ಅವರಿಗೆ ಅಷ್ಟಿಷ್ಟು ಸಹಾಯ ಮಾಡತೊಡಗಿದೆವು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತಂದೆವು.

ಬಡವರ ವೋಟುಗಳು ತಮಗೆ ಅಗತ್ಯ ಎಂಬ ಕಾರಣವೂ ಇದ್ದೀತು. ಸರ್ಕಾರಗಳು ಕೈ ಉತ್ಪಾದಕರಿಗೆ ಹಲವು ರೀತಿಯ ಸಹಾಯಧನವನ್ನು ನೀಡುತ್ತಿವೆ, ಸಾಲ ನೀಡುತ್ತಿವೆ. ತೀರಿಸಲಾಗದ ಸಾಲವನ್ನು ಕಾಲಕಾಲಕ್ಕೆ ಮನ್ನಾ ಮಾಡುತ್ತಿವೆ ಸರ್ಕಾರಗಳು, ಅನೇಕ ವಸ್ತು ಹಾಗೂ ಸೇವೆಗಳನ್ನು ಉಚಿತವಾಗಿ ಹಂಚುತ್ತಿವೆ. ಒಟ್ಟಾರೆಯಾಗಿ, ತಿಳಿದೂ ತಿಳಿದೂ ತಪ್ಪು ಮಾಡುತ್ತ, ಮಾಡಿದ ತಪ್ಪಿಗಾಗಿ ಪ್ರಾಯಶ್ಚಿತ್ತವನ್ನೂ ಪಡುತ್ತ ಬದುಕಿದ್ದೇವೆ ಯಂತ್ರನಾಗರಿಕರು ನಾವು.

ಇಂದಿನ ವ್ಯವಸ್ಥೆ ಸೃಜನಶೀಲವಾಗಿ ಉಳಿದೇ ಇಲ್ಲ. ಹೇಗೆ ಉಳಿದೀತು ಹೇಳಿ? ಸಮಾಜದ ಎಪ್ಪತ್ತು ಪ್ರತಿಶತ ಜನರು ಭಿಕ್ಷುಕ ಮನೋವೃತ್ತಿಗೆ ಪಕ್ಕಾಗಿರುವಾಗ, ಮಿಕ್ಕ ಮೂವತ್ತು ಪ್ರತಿಶತ ಜನರು ಸುಲಭ ಬದುಕಿನ ಕಾಯಿಲೆಗೆ ಪಕ್ಕಾಗಿರುವಾಗ ಸೃಜನಶೀಲತೆ ಉಳಿದೀತಾದರೂ ಹೇಗೆ? ಸೃಜನಶೀಲತೆ ಎಂದರೆ ಅದೇನು ಐಷಾರಾಮಿ ಹೋಟೆಲ್ಲೇ ಅಥವಾ ಫ್ಯಾಷನ್ನೇ ಅಥವಾ ಮನರಂಜನಾ ಕಾರ್ಯಕ್ರಮ ಮಾತ್ರವೇ? ಅಲ್ಲ ತಾನೇ!

ಸ್ವಯಂಚಾಲಿತ ಯಂತ್ರಗಳು ಬೃಹತ್ ಪ್ರಮಾಣದ ಸಂಪತ್ತನ್ನೇನೋ ಗುಡ್ಡೆ ಹಾಕಿದವು, ಆದರೆ ಸಂಪತ್ತು ಬೆರಳೆಣಿಕೆಯ ಜನರಲ್ಲಿ ಉಳಿಯಿತು. ಶ್ರಮಜೀವಿಗಳು, ಸುಲಭಜೀವಿಗಳು ಇಬ್ಬರೂ ಯಂತ್ರ ವ್ಯವಸ್ಥೆಯ ಗುಲಾಮರಾದರು. ಯಾವುದನ್ನು ನಾವು ಪಾಳೆಯಗಾರಿ ವ್ಯವಸ್ಥೆಯ ಆಭಾಸಗಳು ಎಂದು ತಿಳಿದಿದ್ದೆವೋ ಅದು ನೂರಾರು ಪಟ್ಟು ಆಭಾಸಕಾರಿಯಾಗಿ ಇಂದಿನ ವ್ಯವಸ್ಥೆಯೊಳಗೆ ಕಾಣಿಸತೊಡಗಿದೆ.

ಕೆಡುಕು ಬಾಗಿಲಿಗೆ ಬಂದಿದೆ, ಬಾಗಿಲು ಬಡಿಯತೊಡಗಿದೆ. ಹಾಗಾಗಿ, ಕೊಂಚ ತಡವಾಗಿಯಾದರೂ ಸರಿ, ಕೈ ಉತ್ಪಾದನಾ ವ್ಯವಸ್ಥೆ ಮತ್ತೆ ನೆನಪಿಗೆ ಬರತೊಡಗಿದೆ. ಹೆಚ್ಚು ಆರೋಗ್ಯಕರವೂ ಹೆಚ್ಚು ಸುಸ್ಥಿರವೂ ಆದ ಪರ್ಯಾಯ ವ್ಯವಸ್ಥೆಯಾಗಿ ಅದು ನೆನಪಿಗೆ ಬರತೊಡಗಿದೆ. ಖ್ಯಾತ ಕೈಮಗ್ಗ ಕಾರ್ಯಕರ್ತೆ ಉಜ಼್ರಮ್ಮ ಹೇಳುವಂತೆ, ಹೊಸದೊಂದು ಕೈಗಾರಿಕಾ ಕ್ರಾಂತಿಯ ಹೊಸ್ತಿಲಿನಲ್ಲಿ ನಿಂತಿದ್ದೇವೆ ನಾವು. ಅದುವೆ ಕೈ ಉತ್ಪನ್ನಗಳ ಕ್ರಾಂತಿ.

ಕೈ ಉತ್ಪನ್ನಗಳ ಪರವಾದ ಚಳವಳಿಗೆ ಹಲವು ವಿಶೇಷತೆಗಳಿವೆ. ಅದು ಕೇವಲ ಬಡವರನ್ನೇ ಅಲ್ಲದೆ ಸಮಾಜದ ಎಲ್ಲ ವರ್ಗಗಳ ಜನರನ್ನೂ ಸೃಜನಶೀಲರನ್ನು ಆಗಿಸಬಲ್ಲುದಾಗಿದೆ. ಈವರೆಗೆ ಸರ್ಕಾರಿ ಕಚೇರಿಗಳ ಮುಂದೆ ಭಿಕ್ಷೆ ಬೇಡುತ್ತ ಎಡತಾಕುತ್ತಿದ್ದ ಕೈ ಉತ್ಪಾದಕರು ಇನ್ನು ಮುಂದೆ, ಸಿದ್ಧರು, ಭೈರಾಗಿಗಳು, ಅವಧೂತರಂತೆ ಕಂಗೊಳಿಸಲಿದ್ದಾರೆ. ಕೈ ಉತ್ಪನ್ನಗಳ ಚಳವಳಿಯು ಸಂತ ಪರಂಪರೆಯ ಮುಂದುವರೆದ ರೂಪವೇ ಆಗಿದೆ. ಅನುಮಾನವೇ ಬೇಡ. ಇಪ್ಪತೊಂದನೆಯ ಶತಮಾನದಲ್ಲಿ ದೇವರು ಒಂದೊಮ್ಮೆ ಅವತರಿಸಬಲ್ಲನಾದರೆ, ಅದು ಕೈ ಉತ್ಪಾದಕನ ರೂಪದಲ್ಲಿ ಮಾತ್ರ.

ಮಂಟೇಸ್ವಾಮಿಗಳು ಹದಿನೈದನೆಯ ಶತಮಾನದಲ್ಲಿ ಕಲ್ಯಾಣದ ಬಾಗಿಲಿನಲ್ಲಿ ಕಾಣಿಸಿಕೊಂಡದ್ದು ಹೀಗೆಯೇ ತಾನೆ? ಕೀವು ಸುರಿಸುತ್ತ, ಕುಡುಕನಾಗಿ, ದರಿದ್ರನ ರೂಪದಲ್ಲಿಯೇ ತಾನೆ ಆ ಸಂತ ಕಾಣಿಸಿಕೊಂಡದ್ದು? ಕೀವು ಸುರಿಸುತ್ತಿರುವ ಹಾಗೂ ಕುಡುಕನಾಗಿರುವ ಇಂದಿನ ದರಿದ್ರನು ಕೈ ಉತ್ಪನ್ನಗಳ ಚಳವಳಿಯಿಂದಾಗಿ ದೈವಾಂಶ ಸಂಭೂತನಾಗಲಿದ್ದಾನೆ, ಇತರರಿಗೂ ದೇವರ ದರುಶನದ ಲಾಭ ಒದಗಿಸಲಿದ್ದಾನೆ. ಕೈ ಉತ್ಪಾದಕರ ಚಳವಳಿಯು ಈ ಅರ್ಥದಲ್ಲಿ, ಲೌಕಿಕದ ಚಳವಳಿಯೂ ಹೌದು ಅಲೌಕಿಕದ ಚಳವಳಿಯೂ ಹೌದು.

ಚಳವಳಿ ಸಾಗಿ ಬಂದಿರುವ ದಾರಿ ಗಮನಾರ್ಹವಾದದ್ದು. 2014ರಲ್ಲಿ ಇದು ಕೈಮಗ್ಗ ನೇಕಾರರ ಸತ್ಯಾಗ್ರಹವಾಗಿ ಮೊದಲು ಮೂಡಿಬಂದಿತು. 2015ರಲ್ಲಿ, ಬದನವಾಳಿನಲ್ಲಿ ಸುಸ್ಥಿರ ಬದುಕಿನ ಸತ್ಯಾಗ್ರಹವಾಗಿ ಹೊಸ ರೂಪು ಪಡೆಯಿತು. 2017ರ ಜೂನ್ ತಿಂಗಳಿನಲ್ಲಿ, ಭಾರತ ಸರ್ಕಾರವು ಜಿ.ಎಸ್.ಟಿ. ಎಂಬ ಹೊಸದೊಂದು ಮಾರಾಟ ತೆರಿಗೆಯನ್ನು ಜಾರಿಗೆ ತಂದಾಗ, ಕರ ನಿರಾಕರಣೆ ಸತ್ಯಾಗ್ರಹವಾಗಿ ಮೂಡಿಬಂದಿತು. ಈಗ ಕೈ ಉತ್ಪಾದಕರ ಸಮಗ್ರ ಚಳವಳಿಯಾಗಿ ಇದು ರೂಪು ಪಡೆದಿದೆ.

ಎಲ್ಲ ಚಳವಳಿಗಳ ಅಂತರಂಗದಲ್ಲಿ ಒಂದು ಗಟ್ಟಿ ತಾತ್ವಿಕತೆ ಹುದುಗಿರುತ್ತದೆ, ಅದುವೇ ಚಳವಳಿಯ ಜೀವಾಳವಾಗಿರುತ್ತದೆ, ದೈವವಾಗಿರುತ್ತದೆ. ಕೈ ಉತ್ಪನ್ನಗಳ ಚಳವಳಿಯನ್ನು ಗಾಂಧಿವಾದಿ ಚಳವಳಿ ಎಂದು ಕೂಡ ಕರೆಯುವ ರೂಢಿಯಿದೆ. ಕೈ ಉತ್ಪಾದನಾ ವ್ಯವಸ್ಥೆ ಹಾಗೂ ಯಂತ್ರ ಉತ್ಪಾದನಾ ವ್ಯವಸ್ಥೆಗಳ ನಡುವಿನ ತೀವ್ರತರನಾದ ಅಸಮಾನತೆಯ ಫಲಶ್ರುತಿ ಯಂತ್ರನಾಗರಿಕತೆ ಎಂದು ಈ ಚಳವಳಿ ಪರಿಭಾವಿಸುತ್ತದೆ.

ಕೈ ಉತ್ಪನ್ನಗಳ ಚಳವಳಿಗೂ ಇತರೇ ಚಳವಳಿಗಳಿಗೂ ಒಂದು ವ್ಯತ್ಯಾಸವಿದೆ, ಪ್ರಮುಖ ವ್ಯತ್ಯಾಸವದು. ಸಂಘರ್ಷವನ್ನು ಹಿರಿದಾಗಿಸುವ ಚಳವಳಿಯಲ್ಲ, ಸಂಘರ್ಷವನ್ನು ನಿವಾರಿಸುವ ಚಳವಳಿ ಇದು. ಪಾಪದ ಹೊರೆಯನ್ನು, ಇದು, ವ್ಯವಸ್ಥೆಯ ಮೇಲೆ ಹೊರಿಸುತ್ತದೆಯೇ ಹೊರತು ವ್ಯಕ್ತಿಗಳ ಮೇಲೆ ಹೊರಿಸುವುದಿಲ್ಲ. ಯಂತ್ರ ಉತ್ಪಾದನೆಯನ್ನು ಬಲವಂತವಾಗಿ ಛಿದ್ರಗೊಳಿಸಲು ಬಯಸುವುದಿಲ್ಲ ಈ ಚಳವಳಿ.

ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸ್ವಂತ ಬದುಕಿನಲ್ಲಿ ಕೈ ಉತ್ಪನ್ನಗಳನ್ನು ಅಳವಡಿಸಿಕೊಳ್ಳುವಂತೆ, ಸ್ವತಃ ಕೈ ಉತ್ಪಾದಕನಾಗುವಂತೆ ಇದು ಪ್ರಚೋದನೆ ನೀಡುತ್ತದೆ. ಅರ್ಥಾತ್ ಒಳಿತಿನ ಪ್ರಚೋದನೆ ನೀಡುತ್ತದೆ. ಸರಳ ಬದುಕಿಗೆ, ಒತ್ತಡವಿಲ್ಲದ ಬದುಕಿಗೆ, ಹಂಚಿಕೊಂಡು ಬಾಳುವ ಬದುಕಿಗೆ, ವ್ಯಕ್ತಿ ಬದಲಾಗುವಂತೆ ಪ್ರೇರೇಪಿಸುವ ಚಳವಳಿ ಇದಾಗಿದೆ.

ಈ ರೀತಿಯ ಸಂಘರ್ಷರಹಿತ ಚಳವಳಿಯ ರೂಪುರೇಷೆಯನ್ನು ಮೊದಲು ಸಿದ್ಧಪಡಿಸಿದವರು ಗಾಂಧೀಜಿ. ಸತ್ಯ ಹಾಗೂ ಅಹಿಂಸೆ ತನ್ನೆರಡು ಧ್ಯೇಯಗಳು ಎಂದು ಅವರು ಭಾರತದ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಘೋಷಿಸಿದ್ದರು. ಕೈ ಉತ್ಪಾದನೆ ಸತ್ಯವಾದರೆ ಅದನ್ನು ತಲುಪುವ ಹಾದಿ ಅಹಿಂಸಾತ್ಮಕವಾಗಿರಬೇಕು ಎಂದು ಅವರು ಸೂಚಿಸಿದ್ದರು.

ವಿರುದ್ಧ ದಿಕ್ಕಿನ ಸಾಮಾಜಿಕ ಸೆಳೆತವನ್ನು ಚಳವಳಿ ಮಾನ್ಯ ಮಾಡುತ್ತದೆ. ಅರ್ಥಾತ್, ಬಡವರು ತಮ್ಮ ಜೀವನ ಶೈಲಿಯನ್ನು ಕಟ್ಟಿಕೊಳ್ಳಬೇಕು, ಶ್ರೀಮಂತರು (ಐಷಾರಾಮಿಯನ್ನು) ಕಳಚಿಕೊಳ್ಳಬೇಕು ಎಂದು ಚಳವಳಿಯು ಪ್ರತಿಪಾದಿಸುತ್ತದೆ. ಎಲ್ಲವೂ ಹೌದು. ಆದರೆ ಆದರ್ಶ ನಿಜವಾಗಬೇಕೆಂದರೆ ಕೈ ಉತ್ಪನ್ನಗಳಿಗೆ ಬೆಲೆ ಬರಬೇಕು.

ಬೆಲೆಗೆ ಹಲವು ಅರ್ಥಗಳಿವೆ. ಸೀಮಿತ ದೃಷ್ಟಿಯಿಂದ ನೋಡಿದಾಗ, ಕೈ ಉತ್ಪಾದನೆಗೆ ಉತ್ತಮ ದರವಾಗಿಯೂ ದೂರದೃಷ್ಟಿಯಿಂದ ನೋಡಿದಾಗ ಕೈ ಉತ್ಪಾದಕನಿಗೆ ಸಾಮಾಜಿಕ ಗೌರವವಾಗಿಯೂ ಅದು ಗೋಚರಿಸುತ್ತದೆ. ಎರಡೂ ರೀತಿಯ ಬೆಲೆಗಳೂ ಕೈ ಉತ್ಪನ್ನಗಳಿಗೆ ಇಲ್ಲದೆ ಹೋದರೆ ಸಮಾಜ ಉದ್ಧಾರವಾಗುವುದು ಕನಸಿನ ಮಾತೇ ಸರಿ. ಕೈ ಉತ್ಪನ್ನಗಳ ಚಳವಳಿಯೆಂದರೆ ಇದೆಲ್ಲ ಆಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry