ಕೊನೆಗೂ ಪಿಸ್ತೂಲ್ ಪರವಾನಗಿ ಸಿಕ್ಕಿತು

7

ಕೊನೆಗೂ ಪಿಸ್ತೂಲ್ ಪರವಾನಗಿ ಸಿಕ್ಕಿತು

Published:
Updated:

ನಾನು ರೌಡಿ ನಿಗ್ರಹ ದಳಕ್ಕೆ ಮೊದಲು ನಿಯೋಜಿತನಾದಾಗ ಕೊತ್ವಾಲ್ ರಾಮಚಂದ್ರನ ಬೆನ್ನುಹತ್ತಿದೆವು. ಕೊತ್ವಾಲನ ಬಗ್ಗೆ ಮಾಹಿತಿ ಕಲೆಹಾಕುತ್ತಾ ಹೋದಾಗ ಒಬ್ಬ ಪೊಲೀಸ್ ಅಧಿಕಾರಿಯ ಮಗನನ್ನೇ ದಸ್ತಗಿರಿ ಮಾಡಬೇಕಾಯಿತು. ಅವನ ಬಗ್ಗೆ ಈ ಹಿಂದೆಯೂ ನಾನು ಬರೆದಿದ್ದೇನೆ. ಅವನು ಕೊತ್ವಾಲ್ ರಾಮಚಂದ್ರನ ಚಾಲಕನಾಗಿದ್ದ.ವಿಚಾರಣೆಯ ಸಂದರ್ಭದಲ್ಲಿ ಕೊತ್ವಾಲ್ ರಾಮಚಂದ್ರ ನನ್ನನ್ನು ಮುಗಿಸುವ ಸಂಚು ಹೂಡಿದ್ದ ಎಂಬುದನ್ನು ಅವನೇ ಬಾಯಿಬಿಟ್ಟ. ನಾನು ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾಗ ಯೋಜಿಸಿದ್ದ ಸಂಚು ಅದು. ಮನೆಯಿಂದ ಠಾಣೆಗೆ ಹೋಗುವ ಮಾರ್ಗದಲ್ಲಿ ನನ್ನನ್ನು ಮಾಜಿ ಮಂತ್ರಿಯೊಬ್ಬರ ತಮ್ಮಂದಿರ ಮೂಲಕ ಜೀಪು ಹರಿಸಿ ಹತ್ಯೆ ಮಾಡುವಂತೆ ಕೊತ್ವಾಲ ಸೂಚಿಸಿದ್ದನಂತೆ. ಈಗ ಲೋಕಾಯುಕ್ತದಲ್ಲಿ ಶಿವಶಂಕರ್ ಎಂಬುವರು ಎಸ್ಪಿ ಆಗಿದ್ದಾರೆ. ಆಗ ಅವರ ಮನೆಯ ಮೇಲೆ ಪೆಟ್ರೋಲ್ ಬಾಂಬ್ ಹಾಕಲು ಕೂಡ ತೀರ್ಮಾನಿಸಲಾಗಿತ್ತಂತೆ. ಖಡಕ್ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದ ಯು.ಎನ್. ಮುದ್ದಯ್ಯ ನವರನ್ನು ಆಂಧ್ರದಿಂದ ಬಾಂಬ್ ತರಿಸಿ ಮುಗಿಸುವ ಹುನ್ನಾರವನ್ನು ಕೂಡ ಹೊಸೆದಿದ್ದನಂತೆ.

ಕೊತ್ವಾಲನ ಡ್ರೈವರ್ ಬಾಯಿಬಿಟ್ಟ ಈ ವಿಷಯಗಳನ್ನು ನಾವು ಕಮಿಷನರ್ ಹರ್ಲಂಕರ್ ಹಾಗೂ ಡಿಸಿಪಿ ಮರಿಸ್ವಾಮಿಯವರಿಗೆ ಹೇಳಿದೆವು. ರೌಡಿಗಳನ್ನು ಮಟ್ಟಹಾಕುವ ಕಾರ್ಯಾಚರಣೆ ಯಲ್ಲಿ ತೊಡಗಿದ್ದವರನ್ನು ಮುಗಿಸಲು ಕೊತ್ವಾಲ ಹುನ್ನಾರ ಹೂಡಿದ ವಿಷಯ ಗಂಭೀರವಾದದ್ದು.

 

ಹಾಗಾಗಿ ಹರ್ಲಂಕರ್ ಹಾಗೂ ಮರಿಸ್ವಾಮಿ `ವೆಪನ್~ ಇಟ್ಟುಕೊಳ್ಳದೆ ಓಡಾಡಬೇಡಿ ಎಂದು ನಮಗೆ ಸೂಚಿಸಿದರು. ಹರ್ಲಂಕರ್ ಅವರಂತೂ ನಮ್ಮನ್ನು ಎಲ್ಲಿ ಕಂಡರೂ ಕಾರು ಇಳಿದು ಬಂದು, `ವೆಪನ್ ಇದೆಯಾ? ತೋರಿಸಿ~ ಎನ್ನುತ್ತಿದ್ದರು. ನಮ್ಮ ಬಳಿ `ವೆಪನ್~ ಇದೆ ಎಂಬುದು ಖಾತರಿಯಾದಾಗಲೇ ಅವರಿಗೆ ಸಮಾಧಾನ.ಒಮ್ಮೆ ಮರಿಸ್ವಾಮಿಯವರು ನನ್ನನ್ನು ಕರೆದು, ಇಲಾಖೆಯ ಪಿಸ್ತೂಲನ್ನು ಹೊರತುಪಡಿಸಿ ಖಾಸಗಿಯಾಗಿ ಯಾವುದಾದರೂ ಪಿಸ್ತೂಲ್ ಅಥವಾ ರಿಲಾಲ್ವರ್ ಇದೆಯೇ ಎಂದು ಕೇಳಿದರು. ನನ್ನ ಬಳಿ ಪಿಸ್ತೂಲ್ ಅಥವಾ ರಿವಾಲ್ವರ್ ಇಟ್ಟುಕೊಳ್ಳಲು ಪರವಾನಗಿ ಕೂಡ ಇರಲಿಲ್ಲ.ತಕ್ಷಣವೇ ಅವರು ಕಮಿಷನರ್ ಬಳಿಗೆ ನನ್ನನ್ನು ಕರೆದುಕೊಂಡು ಹೋದರು. ಕಮಿಷನರ್ ಹರ್ಲಂಕರ್ ಕೂಡ ಪರವಾನಗಿ ಪಡೆಯಲು ತಕ್ಷಣವೇ ಅರ್ಜಿ ಹಾಕುವಂತೆ ಸೂಚಿಸಿದರು. ಕೊತ್ವಾಲ ನಮ್ಮ ಮೇಲೆ ಕಣ್ಣಿಟ್ಟಿದ್ದರಿಂದ ಸದಾ `ವೆಪನ್~ ಇಟ್ಟುಕೊಳ್ಳುವುದು ಕ್ಷೇಮ ಎಂಬುದು ಅವರ ಕಳಕಳಿಯಾಗಿತ್ತು.ಕೊತ್ವಾಲ ಯಾವ್ಯಾವ ಪೊಲೀಸರ ಮೇಲೆ ಹುನ್ನಾರ ಹೂಡಿದ್ದನೋ ಎಲ್ಲರೂ ಪರವಾನಗಿಗೆಂದು ಅರ್ಜಿ ಸಲ್ಲಿಸಿದೆವು. ವೈಯಾಲಿ ಕಾವಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಾನು ವಾಸ ಮಾಡುತ್ತಿದ್ದೆ.ಹಾಗಾಗಿ ಕಮಿಷನರ್ ಕಚೇರಿಯಲ್ಲಿ ಸಲ್ಲಿಸಿದ ಅರ್ಜಿ ಅಲ್ಲಿಗೆ ಹೋಗಬೇಕಿತ್ತು. ಅದನ್ನು ಪರಿಶೀಲಿಸಿ ಶಸ್ತ್ರಾಸ್ತ್ರದ ಅಗತ್ಯ ಇದೆ ಎಂದು ಆ ಠಾಣೆಯವರು ಅನುಮೋದಿಸಿದ ನಂತರ ಸರ್ಕಲ್ ಇನ್ಸ್‌ಪೆಕ್ಟರ್, ಡಿಸಿಪಿ ಮೊದಲಾದವರ ಮೂಲಕ ಹಾದು ಅದು ಮತ್ತೆ ಕಮಿಷನರ್ ಕಚೇರಿ ತಲುಪಬೇಕಿತ್ತು.

 

ಅಲ್ಲಿ ಪರವಾನಗಿ ಮಂಜೂರಾಗಬೇಕು. ಅದು ನಿಯಮ. ನಾನು ಅರ್ಜಿ ಸಲ್ಲಿಸಿ ಹದಿನೈದು ದಿನಗಳಾದವು. ಆದರೆ, ಠಾಣೆಯವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. `ಎಸ್.ಎಸ್ ಫಂಡ್~ ಎಂದು ಪೊಲೀಸರ ನಿಧಿ ಇರುತ್ತದೆ. ಶಸ್ತ್ರಾಸ್ತ್ರ ಖರೀದಿಸಲು ಅದರಿಂದ ಒಂದಿಷ್ಟು ಹಣ ಸಹಾಯ ಪಡೆಯಬಹು ದೆಂಬುದನ್ನೂ ಸೂಚಿಸಿದ್ದ ಮರಿಸ್ವಾಮಿಯವರು ಪದೇಪದೇ ಪರವಾನಗಿ ಸಿಕ್ಕಿತೆ ಎಂದು ಕೇಳಲಾರಂಭಿಸಿದರು.

 

ಅರ್ಜಿ ಸಲ್ಲಿಸಿ ಹದಿನೈದು ದಿನಗಳಾದರೂ ಏನೂ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರಿಗೆ ಹೇಳಿದ್ದೇ ತಮ್ಮ ಕಚೇರಿಯ ಕಟ್ಟಡದಲ್ಲೇ ಇದ್ದ ಶಸ್ತ್ರಾಸ್ತ್ರ ವಿಭಾಗದ ಸಹಾಯಕರನ್ನು ಅಲ್ಲಿಗೆ ಕರೆಸಿದರು. ನಾನು ಸಲ್ಲಿಸಿದ್ದ ಅರ್ಜಿ ಎಲ್ಲಿದೆ ಎಂದು ಅವರನ್ನು ಕೇಳಿದರು. ಅದು ಎಲ್ಲೆಲ್ಲಿ ಹಾದು ಹೋಗಿ ಅನುಮೋದನೆ ಪಡೆಯಬೇಕು ಎಂಬುದನ್ನು ಆ ಸಹಾಯಕ ವಿವರವಾಗಿ ಹೇಳಲಾರಂಭಿಸಿದರು.ಅವರ ಬಳಿಯೇ ಅರ್ಜಿ ಇತ್ತೆಂಬುದನ್ನೂ ತಿಳಿಸಿ, ನಿಯಮಗಳ ಸಂಕೀರ್ಣತೆಯನ್ನು ಡಿಸಿಪಿಯವರ ಎದುರಲ್ಲೇ ಹೇಳಿ ನುಣುಚಿಕೊಳ್ಳಲು ನೋಡಿದರೆನ್ನಿಸುತ್ತದೆ. ಮರಿಸ್ವಾಮಿಯವರಿಗೆ ಬೇಸರವಾಯಿತು. ಒಬ್ಬ ಪೊಲೀಸ್ ಅಧಿಕಾರಿಗೇ ಇಷ್ಟು ವಿಳಂಬವಾದರೆ ಇನ್ನು ಜನ ಸಾಮಾನ್ಯರು ಶಸ್ತ್ರಾಸ್ತ್ರ ಪರವಾನಗಿ ಪಡೆಯುವುದು ಎಷ್ಟು ಕಷ್ಟ ಇರಬೇಕು ಎಂದರು. ನಾನು ಪಶ್ಚಿಮ ವಿಭಾಗದ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದೆ.ಮರಿಸ್ವಾಮಿಯವರು ಪೂರ್ವ ವಿಭಾಗಕ್ಕೆ ಡಿಸಿಪಿ ಆಗಿದ್ದರು. ಹಾಗಾಗಿ ನನ್ನ ಅರ್ಜಿ ನಿಯಮಾನುಸಾರ ಪಶ್ಚಿಮ ವಿಭಾಗದ ಡಿಸಿಪಿಯವರ ಅನುಮೋದನೆ ಪಡೆದೇ ಕಮಿಷನರ್ ಕಚೇರಿಯನ್ನು ತಲುಪಬೇಕಿತ್ತು. ಅವರು ಬ್ಯುಸಿ ಇದ್ದಾರೆ ಎಂದೆಲ್ಲಾ ಸಹಾಯಕರು ಸಬೂಬು ಹೇಳತೊಡಗಿದರು.

 

ತಕ್ಷಣ ಮರಿಸ್ವಾಮಿಯವರು ನನ್ನನ್ನು ಕಮಿಷನರ್ ಬಳಿಗೆ ಕರೆದುಕೊಂಡು ಹೋದರು. ಹದಿನೈದು ದಿನಗಳಾದರೂ ಇನ್ನೂ ಪರವಾನಗಿ ಮಂಜೂರಾಗಿಲ್ಲ ಎಂಬುದನ್ನೂ ಅದಕ್ಕಿದ್ದ ನಿಯಮಗಳ ತೊಡಕನ್ನೂ ಅವರು ಬಿಡಿಸಿ ಹೇಳಿದರು. ತುರ್ತಾಗಿ ನನಗೆ ಪಿಸ್ತೂಲ್ ಅಗತ್ಯವಿದೆ ಎಂದು ಖುದ್ದು ಕಮಿಷನರ್ ಹೇಳಿದ್ದರು. ಹಾಗಾಗಿ ಅವರು ಪ್ರಕ್ರಿಯೆಯನ್ನೆಲ್ಲಾ ಮೊಟಕುಗೊಳಿಸಿ ನೇರವಾಗಿ ನನಗೆ ಪರವಾನಗಿ ಮಂಜೂರು ಮಾಡಬೇಕೆಂದು ಅರ್ಜಿಗೆ ಸಹಿ ಹಾಕಿಕೊಟ್ಟರು. ನಿಯಮದ ಸಬೂಬು ಹೇಳುತ್ತಿದ್ದ ಸಹಾಯಕನ ಮುಖ ಇಷ್ಟಾಯಿತು.ಪರವಾನಗಿ ಸಿಕ್ಕಿದ ಮೇಲೆ ನಾನು ಹಣ ಹೊಂದಿಸಿಕೊಂಡು ಒಂದು ಪಿಸ್ತೂಲ್ ಖರೀದಿಸಲು ಹೋದೆ. ಪರವಾನಗಿ ನೋಡಿದ್ದೇ ಅದಕ್ಕೆ ಪಿಸ್ತೂಲ್ ಕೊಡಲು ಸಾಧ್ಯವಿಲ್ಲ; ರಿವಾಲ್ವರ್ ಮಾತ್ರ ಕೊಡಬಹುದು ಎಂದರು. ಪರವಾನಗಿ ಸಿಕ್ಕ ಖುಷಿಯಲ್ಲಿ ಅದು ಯಾವುದಕ್ಕೆ ಎಂಬುದನ್ನೇ ನಾನು ಗಮನಿಸಿರಲಿಲ್ಲ. ಪಿಸ್ತೂಲ್ ಎಂದು ಅದರಲ್ಲಿ ನಮೂದಿಸಿಯೇ ಇರಲಿಲ್ಲ. ಕೇವಲ ರಿವಾಲ್ವರ್ ಪರವಾನಗಿ ಅದಾಗಿತ್ತು. ಪಿಸ್ತೂಲ್‌ಗಿಂತ ರಿವಾಲ್ವರ್ ದುಬಾರಿ. ಅದನ್ನು ಕೊಳ್ಳುವಷ್ಟು ಹಣ ನನ್ನಲ್ಲಿ ಇರಲಿಲ್ಲ. ಪೆಚ್ಚಾದ ನಾನು ಮನೆಗೆ ಮರಳಿದೆ.ಮರಿಸ್ವಾಮಿಯವರು ಇನ್ನೊಮ್ಮೆ ಸಿಕ್ಕಾಗ `ಪಿಸ್ತೂಲ್ ಕೊಂಡಿರಾ~ ಎಂದು ಕೇಳಿದರು. ನಾನು ವಿಧಿಯಿಲ್ಲದೆ ಪರವಾನಗಿ ಇರುವುದು ಬರೀ ರಿವಾಲ್ವರ್‌ಗೆ ಎಂಬ ಸಂಗತಿಯನ್ನು ತಿಳಿಸಬೇಕಾಯಿತು. `ಪಿಸ್ತೂಲ್ ಅಥವಾ ರಿವಾಲ್ವರ್ ಎಂದೇ ನಮೂದಿಸಬೇಕಲ್ಲ~ ಎನ್ನುತ್ತಾ ಅವರು ಮತ್ತೆ ನನ್ನನ್ನು ತಮ್ಮ ಕಚೇರಿಗೆ ಕರೆದುಕೊಂಡು ಹೋದರು.ಆ ಸಹಾಯಕನನ್ನು ಕರೆಸಿ ವಿಚಾರಿಸಿದಾಗ, ಮತ್ತೆ ಸಲಹೆ ಪಡೆಯಲು ಅರ್ಜಿಯನ್ನು ಅಧಿಕಾರಿಗಳಿಗೆ ಕಳುಹಿಸಬೇಕೆಂಬ ಹಳೆಯ ರಾಗವನ್ನೇ ಹಾಡಿದರು. ಮರಿಸ್ವಾಮಿ ಕೋಪ ಮಾಡಿಕೊಳ್ಳುತ್ತಿದ್ದದ್ದೇ ಕಡಿಮೆ. ಅವತ್ತು ಅವರು ಸಿಟ್ಟಿಗೆದ್ದರು. ಕಮಿಷನರ್ ಹರ್ಲಂಕರ್ ಬಳಿಗೆ ಕರೆದುಕೊಂಡು ಹೋದರು. ಅವರಿಗೂ ಕೋಪ ಬಂತು. ಅದು ಯಾರ ಅಕ್ಷರ ಎಂಬುದು ಅವರಿಗೆ ಗೊತ್ತಿತ್ತು. ಅವರನ್ನೇ ಕರೆಸಿ, ರಿವಾಲ್ವರ್ ಪಕ್ಕದಲ್ಲಿ `ಪಿಸ್ತೂಲ್/~ ಎಂದು ಸೇರಿಸುವಂತೆ ಅದೇಶಿಸಿದರು.ಪರವಾನಗಿ ಮಂಜೂರು ಮಾಡಲು ಇಷ್ಟೆಲ್ಲಾ ಆಟವಾಡಿಸಲು ನೋಡಿದ ಆ ಸಹಾಯಕರಿಗೆ ಆ ಕಾಲಘಟ್ಟದಲ್ಲಿ ನನಗೇಕೆ ಪಿಸ್ತೂಲ್‌ನ ಅಗತ್ಯವಿತ್ತು ಎಂಬುದು ಗೊತ್ತಿರಲಿಲ್ಲ. ಬಹುಶಃ ಅವರು ನಾನು ಖುದ್ದಾಗಿ ಅವರನ್ನೇ ಕಂಡು ಪರವಾನಗಿಗಾಗಿ ವಿನಂತಿಸಿಕೊಳ್ಳಬೇಕೆಂದು ಬಯಸಿದ್ದರೋ ಏನೋ?ಕಮಿಷನರ್ ಹಾಗೂ ಡಿಸಿಪಿ ಒತ್ತಾಯದಿಂದಾಗಿ ಕೊನೆಗೂ ನಾನು ಪಿಸ್ತೂಲ್ ಕೊಂಡುಕೊಂಡೆ. ಆಗ ಕೆಲವರು ನಾನು ಲಾಬಿ ಮಾಡಿ ಪರವಾನಗಿ ಪಡೆದಿದ್ದೇನೆ ಎಂದು ಟೀಕೆ ಮಾಡಿದರು. ವಿಧಾನಸೌಧಕ್ಕೇ ನುಗ್ಗಿ ಮುಖ್ಯಮಂತ್ರಿಯ ಕೊರಳಪಟ್ಟಿ ಹಿಡಿದುಕೊಂಡಿದ್ದ ಕೊತ್ವಾಲ್ ರಾಮಚಂದ್ರನನ್ನು ಹಿಡಿಯುವ ಕಷ್ಟವನ್ನು ನಾವು ಕೆಲವರು ಮೈಮೇಲೆ ಎಳೆದುಕೊಂಡಿದ್ದರ ಬಗ್ಗೆ ಅವರಿಗೆ ಗೊತ್ತಿರಲಿಲ್ಲ. ಸೂಕ್ಷ್ಮ ಸಂದರ್ಭಗಳಲ್ಲಿ ಸದಾ ಶಸ್ತ್ರಾಸ್ತ್ರ ಇಟ್ಟುಕೊಂಡೇ ಇರಬೇಕು ಎಂದು ಹರ್ಲಂಕರ್ ಹಾಗೂ ಮರಿಸ್ವಾಮಿಯವರು ಆವತ್ತು ಹೇಳಿಕೊಟ್ಟ ಪಾಠವನ್ನು ನಾನು ಇಂದಿಗೂ ನನ್ನ ಬದುಕಿನಲ್ಲಿ ಪಾಲಿಸಿಕೊಂಡೇ ಬಂದಿದ್ದೇನೆ.ಪೊಲೀಸ್ ಇಲಾಖೆಯಲ್ಲೇ ಕೆಲಸ ಮಾಡುತ್ತಿದ್ದ ನನಗೇ ಪರವಾನಗಿ ಪಡೆಯಲು ಇಷ್ಟು ಕಷ್ಟವಾಗಿತ್ತು. ಇನ್ನು ಜನ ಸಾಮಾನ್ಯರು ಪರವಾನಗಿ ಬಯಸಿ ಅರ್ಜಿ ಹಾಕಿದರೆ ಅವರನ್ನು ಎಷ್ಟೆಲ್ಲಾ ಆಟವಾಡಿಸಬಹುದು ಎಂದು ನನಗೂ ಆಗ ಅನ್ನಿಸಿತ್ತು. ಇವೆಲ್ಲಾ ನಮ್ಮ ವ್ಯವಸ್ಥೆಯ ಲೋಪಗಳು.ಮುಂದಿನ ವಾರ: ಜಯರಾಜನ ಮನೆ ಮೇಲೆ   ದಾಳಿ ಮಾಡಿದಾಗ...

ಶಿವರಾಂ ಅವರ ಮೊಬೈಲ್ ಸಂಖ್ಯೆ 94483 13066

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry