ಕೊನೆ ಅವಕಾಶಕ್ಕೆ ಕಾದಿರುವ ಅಡ್ವಾಣಿ

7

ಕೊನೆ ಅವಕಾಶಕ್ಕೆ ಕಾದಿರುವ ಅಡ್ವಾಣಿ

Published:
Updated:
ಕೊನೆ ಅವಕಾಶಕ್ಕೆ ಕಾದಿರುವ ಅಡ್ವಾಣಿ

ಬಿಜೆಪಿಯೊಳಗೆ ಎಲ್.ಕೆ.ಅಡ್ವಾಣಿ ಅವರಿಗೆ ಬಂದಿ­ರುವ ಸ್ಥಿತಿ ಬೇರೆ ಯಾರಿಗಾದರೂ ಬಂದಿ­ದ್ದರೆ ರಾಜಕಾರಣ ಸಾಕೆಂದು ಕೈಮುಗಿದು ಮನೆ ಸೇರಿಬಿಡುತ್ತಿದ್ದರು. ಈ ಹಿರಿಯ ನಾಯಕ ಎಲ್ಲವನ್ನೂ ಸಹಿಸಿಕೊಂಡು ಮೌನವಾಗಿದ್ದಾರೆ. ಪ್ರತಿ­ಯೊಬ್ಬ ರಾಜಕಾರಣಿ ಜೀವನದಲ್ಲೂ ಏಳು­ಬೀಳು ಸಹಜ. ಅಡ್ವಾಣಿ ಅವರ ರಾಜಕೀಯ ಬದು­ಕಿನಲ್ಲಿ  ಬೀಳುಗಳೇ ಹೆಚ್ಚು. 2009ರ ಲೋಕ­ಸಭೆ ಚುನಾವಣೆ ಬಳಿಕ ಅವರ ಅದೃಷ್ಟ ಕೈಕೊಟ್ಟಿದೆ.ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಜನಪ್ರಿಯತೆಗೆ ಜೋತು ಬಿದ್ದ ಮೇಲೆ ಅಡ್ವಾಣಿ ಬಿಜೆಪಿಗೆ ಬೇಡವಾಗಿದ್ದಾರೆ. ಸಂದರ್ಭ ಬಂದಾಗ­ಲೆಲ್ಲ ಪರೋಕ್ಷವಾಗಿ ಪಕ್ಷ ಅದನ್ನು ಹೇಳುತ್ತಲೇ ಬಂದಿದೆ. ಅಡ್ವಾಣಿ ಪ್ರತಿರೋಧದ ನಡುವೆಯೂ ಗೋವಾ ಕಾರ್ಯಕಾರಿಣಿ ಮೋದಿ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಿಸಿತು. ಇದಾದ ಮೂರು ತಿಂಗಳಲ್ಲಿ ‘ಪ್ರಧಾನಿ ಅಭ್ಯರ್ಥಿ’ ಎಂದು ಬಿಂಬಿಸಲಾಯಿತು. ಅದಕ್ಕೂ ಹಿರಿಯ ನಾಯಕನ ಒಪ್ಪಿಗೆ ಇರಲಿಲ್ಲ. ಆದರೂ ಪಕ್ಷ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಕಷ್ಟ­ಪಟ್ಟು ಪಕ್ಷ ಕಟ್ಟಿದ ಹಿರಿಯ ನಾಯಕನೊಬ್ಬನಿಗೆ ಬಿಜೆಪಿಯಲ್ಲಿ ಬೆಲೆಯೇ ಇಲ್ಲದಂತಾಗಿದೆ.ಅಡ್ವಾಣಿ ಅವರಷ್ಟೇ ಅಲ್ಲ, ಆ ತಲೆಮಾರಿನ ಎಲ್ಲ ನಾಯಕರು ಬಿಜೆಪಿಗೆ ಅಪಥ್ಯವಾಗಿದ್ದಾರೆ. ಒಂದು ದಶಕದಿಂದ ಅಧಿಕಾರವಿಲ್ಲದೆ ಕೊರಗು­ತ್ತಿ­ರುವ ಬಿಜೆಪಿ, ಮೋದಿ ಹಿಂದೆ ಹೊರಟಿದೆ. ಹೇಗಾ­ದರೂ ಮಾಡಿ ಅಧಿಕಾರಕ್ಕೆ ಬರಬೇಕೆಂದು ಪ್ರಯತ್ನಿಸುತ್ತಿದೆ. ಅಬ್ಬರ–ಆರ್ಭಟದೊಂದಿಗೆ ಮುನ್ನು­ಗ್ಗುತ್ತಿರುವ ಮೋದಿ ತಮ್ಮ ದಾರಿಗೆ ಅಡ್ಡ ಬಂದವರನ್ನು ರಾಜಕೀಯವಾಗಿ ಮುಗಿಸುತ್ತಿ­ದ್ದಾರೆ.  ಗುಜರಾತ್‌ ಚುನಾವಣೆ ಬಳಿಕ ಅವರು ಪ್ರಬಲವಾಗಿ ಬೆಳೆದಿದ್ದಾರೆ.ಎಷ್ಟರಮಟ್ಟಿಗೆಂದರೆ ವ್ಯಕ್ತಿಗಿಂತ ತತ್ವ– ಸಿದ್ಧಾಂತ ಮುಖ್ಯ ಎಂದು ಹೇಳುವ ಪಕ್ಷಕ್ಕೆ ಮೋದಿ ಅನಿವಾರ್ಯ­ವಾಗಿ­ದ್ದಾರೆ. ಇದನ್ನು ಚೆನ್ನಾಗಿ ಅರಿತಿರುವ ಮೋದಿ ಎಲ್ಲ ನಾಯಕರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾರೆ.ಆರ್‌ಎಸ್‌ಎಸ್‌ ಮುಖಂಡ ಮೋಹನ್‌ ಭಾಗ­ವತ್‌, ಬಿಜೆಪಿ ಅಧ್ಯಕ್ಷ ರಾಜನಾಥ್‌ ಸಿಂಗ್‌ ಅವರು ಮೋದಿ ಹೇಳಿದ್ದಕ್ಕೆಲ್ಲ  ತಲೆಯಾಡಿಸು­ತ್ತಿದ್ದಾರೆ. ಪಕ್ಷದೊಳಗೆ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿರುವ ಗುಜರಾತ್‌ ಮುಖ್ಯ­ಮಂತ್ರಿ, ಉತ್ತರ ಪ್ರದೇಶದ ವಾರಾಣಸಿ ಬೇಕೆಂದರು. ಹಿಂದು–ಮುಂದು ನೋಡದೆ ಪಕ್ಷದ ಚುನಾವಣಾ ಸಮಿತಿ ಒಪ್ಪಿತು. ಇದರಿಂದ ಹಿರಿಯ ನಾಯಕ ಮುರಳಿಮನೋಹರ ಜೋಷಿ  ಮನಸಿಗೆ ನೋವಾಗಬಹುದೆಂದು ಕೂಡಾ ಆಲೋ­ಚಿಸಲಿಲ್ಲ. ವಾರಾಣಸಿ ಜೋಷಿ ಅವರ ಕ್ಷೇತ್ರ. ಕಳೆದ ಚುನಾವಣೆಯಲ್ಲಿ ಇಲ್ಲಿಂದಲೇ ಅವರು ಆಯ್ಕೆಯಾಗಿದ್ದು. 17,400 ಮತಗಳ ಅಂತರದಿಂದ ಚುನಾಯಿತರಾದರು. ಅದು ಬೇರೆ ವಿಷಯ. ಜೋಷಿ ಅವರನ್ನು ಸೌಜನ್ಯಕ್ಕಾದರೂ ಒಂದು ಮಾತು ಕೇಳಲಿಲ್ಲ. ‘ಸ್ವತಃ ಮೋದಿ ಕೇಳಿ­ದ್ದರೆ, ಸಂತೋಷದಿಂದ ಕ್ಷೇತ್ರ ಬಿಟ್ಟುಕೊಡುತ್ತಿದ್ದೆ. ಯಾವ ಮನಸ್ತಾಪಕ್ಕೂ ಅವಕಾಶ ಇರುತ್ತಿರ­ಲಿಲ್ಲ’ ಎಂದು ಜೋಷಿ ಆಪ್ತ ವಲಯದಲ್ಲಿ ಹೇಳಿ­ಕೊಂಡಿದ್ದಾರೆ. ಬೇಡವೆಂದರೂ ಕೇಳದೆ ಅವ­ರನ್ನು ಕಾನ್ಪುರಕ್ಕೆ ಅಟ್ಟಲಾಗಿದೆ. ವಡೋದರ­ದಿಂದಲೂ ಮೋದಿ ಸ್ಪರ್ಧಿಸುತ್ತಿದ್ದಾರೆ. ಅದಕ್ಕೂ ಪಕ್ಷ  ಸಮ್ಮತಿಸಿದೆ.‘ಮಧ್ಯಪ್ರದೇಶದ ಭೋಪಾಲ್‌ ಅಡ್ವಾಣಿಗೆ ಕೊಡುವುದು ಬೇಡ. ಗಾಂಧಿನಗರದಿಂದಲೇ ಅವರು ಸ್ಪರ್ಧಿಸಲಿ’ ಎಂದು ಮೋದಿ ಸೂಚಿಸಿ­ದ್ದಾರೆ. ಅದಕ್ಕೂ ಚುನಾವಣಾ ಸಮಿತಿ ಬೇಡವೆನ್ನ­ಲಿಲ್ಲ. ಯಾವ ದಿಕ್ಕಿನಲ್ಲಿ ಬಿಜೆಪಿ ಸಾಗುತ್ತಿದೆ. ಯಾರ ಅಣತಿಯಂತೆ ನಡೆಯುತ್ತಿದೆ ಎನ್ನುವು­ದಕ್ಕೆ ಇಂಥ ಅನೇಕ ಉದಾಹರಣೆಗಳನ್ನು ಕೊಡ­ಬಹುದು. ದೊಡ್ಡ ಪಕ್ಷವೊಂದು ವ್ಯಕ್ತಿ ವರ್ಚಸ್ಸಿಗೆ ಇನ್ನಿಲ್ಲದಂತೆ ದುಂಬಾಲು ಬಿದ್ದಿದೆ.1991ರಿಂದ ಗಾಂಧಿನಗರದಿಂದ ಆಯ್ಕೆಯಾ­ಗು­ತ್ತಿರುವ  ಅಡ್ವಾಣಿ ಕಡೇ ಗಳಿಗೆಯಲ್ಲಿ ಭೋಪಾಲ್‌ ಕೇಳಿದರು. ಮಧ್ಯಪ್ರದೇಶ ಬಿಜೆಪಿ ಘಟಕವೂ ಅವರ ಹೆಸರನ್ನು ಶಿಫಾರಸು ಮಾಡಿತ್ತು. ಆದರೆ, ಪಕ್ಷ, ಹಿರಿಯ ನಾಯಕನ ಮನವಿಗೆ ಕಿವಿಗೊಡಲಿಲ್ಲ. ಗಾಂಧಿನಗರದಿಂದಲೇ ಹೆಸರು ಪ್ರಕಟಿಸಿತು. ‘ರಾಜನಾಥ್‌ ಸಿಂಗ್‌ ಅವ­ರಿಗೆ ಲಖನೌ, ಅರುಣ್‌ ಜೇಟ್ಲಿ ಅವರಿಗೆ ಅಮೃತ­ಸರವನ್ನು ಅವರ ಇಷ್ಟದಂತೆ ಕೊಡಲಾಗಿದೆ. ನನಗ್ಯಾಕೆ ಈ ಅವಕಾಶ ನಿರಾಕರಿಸಲಾಗಿದೆ’ ಎಂದು ಅಡ್ವಾಣಿ ಪ್ರಶ್ನಿಸಿದರು. ಅಡ್ವಾಣಿ ಅವರ ಪ್ರಶ್ನೆಗೆ ಯಾರೂ ಸೂಕ್ತ ಉತ್ತರ ಕೊಡಲಿಲ್ಲ. ಅವರು ದೊಡ್ಡದನ್ನೇನೂ ಕೇಳಲಿಲ್ಲ. ಹಿರಿಯ ನಾಯಕನಿಗೆ ಅಷ್ಟೂ ಗೌರವ ಕೊಡದಿದ್ದರೆ ಹೇಗೆ?ಅಡ್ವಾಣಿ, ಜೋಷಿ ಸೇರಿದಂತೆ ಅನೇಕ ಹಿರಿಯ­ರನ್ನು ರಾಜ್ಯಸಭೆಗೆ ಸಾಗಿಹಾಕಲು ಬಿಜೆಪಿ ಚಿಂತಿ­ಸಿತ್ತು. ಅದು ಹೇಗೋ ಬಿಜೆಪಿ ತಂತ್ರ ಬಯಲಾ­ಯಿತು. ‘ಮೇಲ್ಮನೆಗೆ ನಾನು ಹೋಗುವುದಿಲ್ಲ. ಸ್ಪರ್ಧೆ ಏನಿದ್ದರೂ ಲೋಕಸಭೆಗೆ’ ಎಂದು ಅಡ್ವಾಣಿ ಸ್ಪಷ್ಟಪಡಿಸಿದರು. ಮೊದಲಿಂದಲೂ ಗಾಂಧಿನಗರದಿಂದಲೇ ಸ್ಪರ್ಧೆ ಮಾಡುವುದಾಗಿ ಹೇಳಿಕೊಂಡು ಬಂದಿದ್ದರೂ, ಕಡೇ ಗಳಿಗೆಯಲ್ಲಿ ಕ್ಷೇತ್ರ ಬದಲಾವಣೆ ಆಲೋಚನೆ ಹರಿಬಿಟ್ಟರು. ಬಿಜೆಪಿ ಚುನಾವಣಾ ಸಮಿತಿ ಒಪ್ಪಲಿಲ್ಲ.ಅಡ್ವಾಣಿ ಪಕ್ಷದ ಆದೇಶ ಒಪ್ಪಿಕೊಳ್ಳಬೇಕು ಎಂದು ತಾಕೀತು ಮಾಡಿತು. ಮೋದಿ ಜತೆ ಸಂಬಂಧ ಹಳಸಿರುವುದರಿಂದ ಗಾಂಧಿನಗರ ಸುರಕ್ಷಿತ­ವಲ್ಲ­ವೆಂಬ ಭಾವನೆ ಅಡ್ವಾಣಿ ಅವರಿಗೆ ಬಂದಿರ­ಬಹುದು. ಗುಜರಾತಿನ ‘ಅಖಾಡ’ದಲ್ಲಿ  ಮುಗ್ಗ­ರಿ­ಸುವ ಆತಂಕ ತಲೆಯೊಳಗೆ ಕೊರೆದಿರ­ಬ­ಹುದು. ಪಕ್ಷದ ಸ್ಥಳೀಯ ನಾಯಕರು, ಕಾರ್ಯ­ಕರ್ತರು ಅಡ್ವಾಣಿ ಅವರು ತಮ್ಮ ನಾಯಕನ ಹಾದಿಗೆ ಅಡ್ಡಿಯಾಗಬಹುದು ಎಂದು ಭಾವಿಸಿ­ದರೆ ಎಂಬ ಅನುಮಾನ ಹುಟ್ಟಿರಬಹುದು. ಆ ಉದ್ದೇ­ಶದಿಂದಲೇ ಭೋಪಾಲ್‌ಗೆ ವಲಸೆ ಹೋಗುವ ಆಲೋಚನೆ ಮಾಡಿದ್ದರೇನೊ?ಮೋದಿ ತಮ್ಮ ರಾಜಕೀಯ ಎದುರಾಳಿ­ಗ­ಳನ್ನು ಬಗ್ಗುಬಡಿಯುತ್ತಲೇ ಬಂದಿದ್ದಾರೆ. ಗುಜ­ರಾ­ತಿನಲ್ಲಿ ಅವರಿಗೆ ತಿರುಗಿಬಿದ್ದ ಮಾಜಿ ಮುಖ್ಯ­ಮಂತ್ರಿಗಳಾದ ಕೇಶುಭಾಯ್‌ ಪಟೇಲ್‌, ಶಂಕರ­ಸಿಂಗ್‌ ವಘೇಲಾ ಸೇರಿದಂತೆ ಅನೇಕ ನಾಯಕ­ರನ್ನು ತಲೆ ಎತ್ತದಂತೆ ನೋಡಿಕೊಂಡಿದ್ದಾರೆ. ಅವರು ಸೋತು– ಸೊರಗಿ ಶರಣಾದ ಮೇಲೆ ಮತ್ತೆ ಪಕ್ಷಕ್ಕೆ ಪ್ರವೇಶ ನೀಡಿದ್ದಾರೆ. ಮೋದಿ ಅವರ ಈ ಸಾಮರ್ಥ್ಯ ಬಿಜೆಪಿಯೊಳಗೆ ಎಲ್ಲರಿಗೂ ಗೊತ್ತಿರುವ ಸತ್ಯ. ಮೋದಿ ಬೇರೆಯ­ವ­ರನ್ನು ರಾಜಕೀಯವಾಗಿ ಮುಗಿಸಿದಂತೆ ಅಡ್ವಾಣಿ ಅವರನ್ನೂ ಮುಗಿಸಬಹುದು ಎಂಬ ಅಳುಕು ಈ ಹಿರಿಯ ನಾಯಕನ ಕ್ಯಾಂಪಿಗಿರು­ವುದು ಸುಳ್ಳೇನಲ್ಲ.ಅಡ್ವಾಣಿ ಅವರಿಗೆ ಮಧ್ಯಪ್ರದೇಶ ಮುಖ್ಯ­ಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌, ಛತ್ತೀಸಗಡ ಮುಖ್ಯ­ಮಂತ್ರಿ ರಮಣ್‌ ಸಿಂಗ್‌ ಅವರ ಜತೆ ಉತ್ತಮ ಬಾಂಧವ್ಯವಿದೆ.  ಅವಕಾಶ ಸಿಕ್ಕಾಗಲೆಲ್ಲ ಅಡ್ವಾಣಿ ಇಬ್ಬರೂ ಮುಖ್ಯಮಂತ್ರಿ­ಗಳ ಬೆನ್ನು ತಟ್ಟಿದ್ದಾರೆ. ಇವೆರಡೂ ರಾಜ್ಯಗಳು ಯಾವ ರೀತಿಯಲ್ಲೂ ಗುಜರಾತಿಗಿಂತ ಹಿಂದಿಲ್ಲ ಎಂದು ನಿಷ್ಠುರವಾಗಿ ಮಾತನಾಡಿ ಮೋದಿ ಅವರನ್ನು ಕೆರಳಿಸಿದ್ದಾರೆ. ರಾಜಕೀಯ ಲಾಭ–ನಷ್ಟಗಳನ್ನು ಲೆಕ್ಕ ಹಾಕಿ­ಕೊಂಡೇ ಅಡ್ವಾಣಿ ಮಾತನಾಡಿದ್ದಾರೆ. ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವ ತೀರ್ಮಾನ ಮಾಡುವಾಗಲೂ ಅಡ್ವಾಣಿ ಮಧ್ಯ­ಪ್ರದೇಶ ಮತ್ತು ಛತ್ತೀಸಗಡ ಚುನಾವಣೆ ಮುಗಿ­ಯಲಿ ಎಂದಿದ್ದರು. ಚುನಾ­ವಣೆ ಮುಗಿಯು­ವರೆಗೂ ಕಾದಿದ್ದರೆ, ಮೋದಿ ಅವರಿಗೆ ಪ್ರಬಲ­ವಾದ ಪ್ರತಿಸ್ಪರ್ಧಿಗಳು ಹುಟ್ಟಿ­ಕೊಳ್ಳು­ತ್ತಿದ್ದರು. ಪಕ್ಷಕ್ಕೆ ಅದು ಬೇಕಿರಲಿಲ್ಲ. ಅದ­ರಿಂದಾಗಿಯೇ ತರಾತುರಿ ನಿರ್ಧಾರ ಕೈಗೊಂಡಿತು.ಇಷ್ಟಾದರೂ ಅಡ್ವಾಣಿ ಅವರಿಗೆ ಪ್ರಧಾನಿ ಹುದ್ದೆ ಮೇಲಿನ ಮೋಹ ಕಡಿಮೆ ಆಗಿಲ್ಲ. ತಮ­ಗಿನ್ನೂ ಅವಕಾಶ ಸಿಗಬಹುದು ಎಂಬ ಭಾವನೆ ಮನಸಿನ ಆಳದಲ್ಲಿ ಎಲ್ಲೋ ಇದ್ದಂತಿದೆ. ಅದೇ ಉದ್ದೇಶದಿಂದ ಅವರು ಮಧ್ಯಪ್ರದೇಶದ ಕಡೆ ಮುಖ ಮಾಡಿದ್ದು. ಎಲ್ಲ ರೀತಿಯ ಅವಮಾನ­ಗ­ಳನ್ನು ಸಹಿಸಿಕೊಳ್ಳುತ್ತಿರುವುದು! ಈಗಿನ ಚುನಾ­ವಣೆ­ಯಲ್ಲಿ ಬಿಜೆಪಿ 180 ಸಂಖ್ಯೆ ದಾಟದಿದ್ದರೆ ಸರ್ಕಾರ ರಚನೆ ಮಾಡಲು ಹೆಚ್ಚು–ಕಡಿಮೆ ಇನ್ನೂ 95–100 ಸದಸ್ಯರ ಬೆಂಬಲ ಬೇಕಾಗು­ತ್ತದೆ. ಬೆಂಬಲ ಕೊಡಲು ಮುಂದೆ ಬರುವ ಪಕ್ಷಗಳು ಮೋದಿ ನಾಯಕತ್ವ ಬೇಡವೆಂದರೆ? ಪಕ್ಷ ತಮ್ಮ ನಾಯಕತ್ವ ಒಪ್ಪಿಕೊಳ್ಳಬಹುದೆಂಬ ಕೊನೆಯ ಆಸೆ 86 ವರ್ಷದ ಹಿರಿಯ ನಾಯಕನಿಗೆ ಇದ್ದಂತಿದೆ.ಲೋಕಸಭೆ ಚುನಾವಣೆಯಲ್ಲಿ ಏನು ಬೇಕಾ­ದರೂ ಆಗಬಹುದು. ಅಚ್ಚರಿ ಫಲಿತಾಂಶ ಹೊರ­ಬಂದು ಮೋದಿ ಅವರಿಗೆ ಅದೃಷ್ಟ ಕೈತಪ್ಪಿ, ಅಡ್ವಾಣಿ ಅವರಿಗೆ ಒಲಿಯಬಹುದು. ಈ ಇಬ್ಬರನ್ನೂ ಬಿಟ್ಟು ಮೂರನೆಯವರು ಪ್ರಧಾನಿ ಆಗಬಹುದು. ಎಲ್ಲ ಲೆಕ್ಕಾಚಾರಗಳು ತಲೆಕೆಳ­ಗಾಗಿ ಪ್ರಾದೇಶಿಕ ಪಕ್ಷಗಳು ಸೇರಿ ಸರ್ಕಾರ ಮಾಡ­ಬಹುದು. ಕರ್ನಾಟಕದ ಮುಖ್ಯಮಂತ್ರಿ ಆಗಲು ದೊಡ್ಡ ಹೋರಾಟ ಮಾಡಿದ್ದ ದೇವೇ­ಗೌಡರು 1996ರಲ್ಲಿ ಪ್ರಧಾನಿ ಆಗುತ್ತಾರೆಂದು ಯಾರು ತಾನೆ ಕನಸು ಕಂಡಿದ್ದರು.ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ತೀರಿಕೊಂಡಾಗ ಹಿರಿಯ ನಾಯಕ ಮೊರಾರ್ಜಿ ದೇಸಾಯಿ ಉತ್ತರಾಧಿಕಾರಿ ಆಗಬೇಕಿತ್ತು. ಆಗ ಅವರಿಗೆ ಅವಕಾಶ ಸಿಗಲಿಲ್ಲ. ಕಾಮರಾಜ್‌  ಮತ್ತಿತರ ಮುಖಂಡರು ಅವಕಾಶ ತಪ್ಪಿಸಿದರು. ಲಾಲ್‌ಬಹದ್ದೂರ್‌ ಶಾಸ್ತ್ರಿ ಅವರಿಗೆ ಅದೃಷ್ಟ ಒಲಿಯಿತು. ಶಾಸ್ತ್ರಿ ಬಳಿಕ ಮತ್ತೆ ಮೊರಾರ್ಜಿ ಹೆಸರು ಮುಂಚೂಣಿ­ಯಲ್ಲಿತ್ತು.ಆಗಲೂ ಕಾಲ ಕೂಡಿ ಬರಲಿಲ್ಲ. ಇಂದಿರಾ ಗಾಂಧಿ ಅವರಿಗೆ ಅಧಿಕಾರ ದಕ್ಕಿತು. ಮೊರಾರ್ಜಿ ಪ್ರಧಾನಿ ಆಗಲು 13 ವರ್ಷ ಕಾಯ­ಬೇಕಾಯಿತು. ಜೆ.ಪಿ. ಚಳವಳಿ ಬಳಿಕ ಅಧಿಕಾರಕ್ಕೆ ಬಂದ ಜನತಾ ಪರಿವಾರದ ಸರ್ಕಾರ­ದಲ್ಲಿ ಚರಣ್‌ ಸಿಂಗ್‌ ಮತ್ತು ಜಗಜೀವನರಾಂ ಸ್ಪರ್ಧೆಯಲ್ಲಿದ್ದರು. ಅಂತಿಮವಾಗಿ ಜಯ­ಪ್ರಕಾಶ್‌ ನಾರಾಯಣ್‌, ಆಚಾರ್ಯ ಕೃಪಲಾನಿ ಅವರು ಮೊರಾರ್ಜಿ ಪರವಾಗಿ ನಿಂತರು. ಆಗ ಮೊರಾರ್ಜಿ ಅವರಿಗೆ 81 ವರ್ಷ.ಬಿಜೆಪಿ ಈಗ ಮೋದಿ ಹೆಸರು ಜಪ ಮಾಡು­ತ್ತಿದೆ. ದೇಶದಲ್ಲಿ ಮೋದಿ ಅಲೆ ಇದೆ ಎಂದು ಪ್ರತಿ­ಪಾದಿಸುತ್ತಿದೆ. ಮಾಧ್ಯಮಗಳು ‘ಬಿಜೆಪಿ, ಉಳಿದೆಲ್ಲ ಪಕ್ಷಗಳಿಗಿಂತ ಹೆಚ್ಚು ಸೀಟು ಪಡೆದು ದೊಡ್ಡ ಪಕ್ಷವಾಗಲಿದೆ’ ಎಂದು ಭವಿಷ್ಯ ಹೇಳಿವೆ. ಆದರೂ ಬಿಜೆಪಿ ನಾಯಕರು ಭಯ ಬಿದ್ದು ಸುರಕ್ಷಿತ ಕ್ಷೇತ್ರಗಳನ್ನು ಹುಡುಕಿ­ಕೊಳ್ಳುತ್ತಿದ್ದಾರೆ.ಖುದ್ದು ನರೇಂದ್ರ ಮೋದಿ ಅವರೇ ವಾರಾಣಸಿ ಹಾಗೂ ವಡೋದರದಿಂದ ಸ್ಪರ್ಧೆ ಮಾಡುತ್ತಿ­ದ್ದಾರೆ. ಪ್ರಧಾನ ಮಂತ್ರಿ ರೇಸ್‌­ನಲ್ಲಿರುವ ನಾಯ­ಕರು ಎರಡು ಕ್ಷೇತ್ರಗಳಲ್ಲಿ ಕಣ­ಕ್ಕಿಳಿ­ಯುವುದು ಹೊಸ ವಿಷಯವಲ್ಲ. ಹಿಂದೆಯೂ ಅನೇಕ ನಾಯ­ಕರು ಎರಡು ಕಡೆ ಅದೃಷ್ಟ ಪರೀಕ್ಷೆಗೆ ಇಳಿ­ದಿದ್ದರು. ನಂತರ ಒಂದು ಕ್ಷೇತ್ರ ಉಳಿಸಿಕೊಂಡು ಮತ್ತೊಂದು ಕ್ಷೇತ್ರ ಖಾಲಿ ಮಾಡುತ್ತಿದ್ದರು. ಇದೊಂದು ದೊಡ್ಡ ಹೊರೆ. ಬಡ ಬೋರೇ­ಗೌಡನ ತೆರಿಗೆ ಹಣ ಹೀಗೂ ಪೋಲಾಗುತ್ತಿದೆ.ಮೋದಿ ಜನಪ್ರಿಯತೆ ಅಲೆ ಮೇಲೆ ತೇಲುತ್ತಿ­ರುವ ಬಿಜೆಪಿ ನಾಯಕರಿಗೆ ಆತ್ಮವಿಶ್ವಾಸದ ಕೊರತೆ. ಮೋದಿ ಎರಡು ಕಡೆ ಸ್ಪರ್ಧೆಗಿಳಿದ ಮೇಲೆ ಉಳಿದವರಿಗೆ ಹೇಗೆ ಗೆಲುವಿನ ಬಗ್ಗೆ ನಂಬಿಕೆ ಬರಲು ಸಾಧ್ಯ. ಇನ್ನು ಕಾಂಗ್ರೆಸ್‌ ನಾಯಕರ ಬಗ್ಗೆ ಹೇಳುವುದೇ ಬೇಡ. ಚುನಾ­ವಣೆಗೆ ಮೊದಲೇ ಅವರು ಸೋತು ಹೋಗಿ­ದ್ದಾರೆ.ಯುದ್ಧಕ್ಕೆ ಹೆದರಿ ಓಡಿಹೋಗುವ ಯೋಧ­ರಂತೆ ವರ್ತಿಸುತ್ತಿದ್ದಾರೆ. ಪಿ.ಚಿದಂಬರಂ ಮತ್ತಿತರರಿಗೆ ಚುನಾವಣೆ ಎದುರಿಸುವ ಧೈರ್ಯ­ವಿಲ್ಲ. ಇವರಿಗೆಲ್ಲ ಹೋಲಿಸಿದರೆ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರೇ ಮೇಲು. ‘ಮೂಲ ಅಖಾಡ’ದಲ್ಲೇ ಉಳಿದಿದ್ದಾರೆ.ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry