ಕೊನೆ ಮೊದಲಿಲ್ಲದ ನ್ಯಾಯಾಂಗ, ಕಾರ್ಯಾಂಗ ಜಟಾಪಟಿ

7

ಕೊನೆ ಮೊದಲಿಲ್ಲದ ನ್ಯಾಯಾಂಗ, ಕಾರ್ಯಾಂಗ ಜಟಾಪಟಿ

ಕುಲದೀಪ ನಯ್ಯರ್
Published:
Updated:

ಪಾಕಿಸ್ತಾನದಲ್ಲಿ ಸೇನಾಡಳಿತ ಪದಚ್ಯುತಗೊಳಿಸಿ ಅಸ್ತಿತ್ವಕ್ಕೆ ಬಂದ ಪ್ರಜಾಸತ್ತಾತ್ಮಕ ಸರ್ಕಾರವು, ಸೇನಾಡಳಿತಗಾರರ ಕೃತ್ಯಗಳನ್ನು ರದ್ದುಪಡಿಸಲು ಇದುವರೆಗೂ ಮುಂದಾಗಿಲ್ಲ ಎಂದು ಅಲ್ಲಿನ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಮುಹಮ್ಮದ್ ಚೌಧರಿ ಅವರು ಹೇಳಿರುವುದು ಆಸಕ್ತಿದಾಯಕವಾಗಿದೆ. ಹೈದರಾಬಾದ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕಾನೂನು ಸಮ್ಮೇಳನದಲ್ಲಿ ಅವರು ಈ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಜನರಲ್ ಪರ್ವೇಜ್ ಮುಷರಫ್ ಅವರ  ಆಡಳಿತಾವಧಿಯಲ್ಲಿ ನ್ಯಾ. ಚೌಧರಿ ಅವರು ಸಾಕಷ್ಟು ಕಿರುಕುಳ ಅನುಭವಿಸಿದ್ದರು. ದೇಶದಾದ್ಯಂತ ನ್ಯಾಯವಾದಿಗಳು ನಡೆಸಿದ ಪ್ರತಿಭಟನೆಯ ಫಲವಾಗಿ ಚೌಧರಿ ಅವರನ್ನು ಪುನರ್ ನೇಮಕ ಮಾಡಲಾಗಿತ್ತು. ಸದ್ಯಕ್ಕೆ ಪಾಕಿಸ್ತಾನದ ನ್ಯಾಯಾಂಗವು ಸ್ವಾತಂತ್ರ್ಯ ಪಡೆದಿದೆ, ಆದರೆ, ಇಡೀ ನ್ಯಾಯಾಂಗ ವ್ಯವಸ್ಥೆಯೇ ಹಳಿ ತಪ್ಪುವಂತೆ ಮಾಡಿದವರನ್ನು ಶಿಕ್ಷಿಸಲು ಇದುವರೆಗೂ ಸಾಧ್ಯವಾಗಿಲ್ಲ. ನೆಲದ ಕಾನೂನನ್ನು ಗೌರವಿಸದವರನ್ನು ಶಿಕ್ಷಿಸದಿರುವುದರಿಂದ ಜನಸಾಮಾನ್ಯರ ಎದುರು ಯಾವುದೇ ಆದರ್ಶ  ಪ್ರದರ್ಶಿಸಲು  ಸಾಧ್ಯವಾಗುವುದಿಲ್ಲ.

ಇಂದಿರಾ ಗಾಂಧಿ ಅವರು ಸಂವಿಧಾನಕ್ಕೆ ತಿದ್ದುಪಡಿ ತಂದು ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಕೈಗೊಂಡ ಕಾನೂನುಬಾಹಿರ ಕ್ರಮಗಳನ್ನು ಜಾರಿಗೆ ತಂದ ಸಂದರ್ಭದಲ್ಲಿಯೂ ಭಾರತದಲ್ಲಿ ಇದೇ ಬಗೆಯ ಕಹಿ ಅನುಭವವಾಗಿತ್ತು.

ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಅಧಿಕಾರಕ್ಕೆ ಬಂದಿದ್ದ ಜನತಾ ಪಕ್ಷವು, ಇಂದಿರಾ ಗಾಂಧಿ ಜಾರಿಗೆ ತಂದಿದ್ದ ಬದಲಾವಣೆಗಳನ್ನೆಲ್ಲ ರದ್ದುಪಡಿಸಿತ್ತು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ದೌರ್ಜನ್ಯ ಎಸಗಿದ ಇಂದಿರಾ ಗಾಂಧಿ ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಮತ್ತು ವಿಧೇಯ ಅಧಿಕಾರಿಗಳನ್ನು ಶಿಕ್ಷಿಸಲು ವಿಫಲವಾಯಿತು.

ಪ್ರಮಾದಗಳನ್ನು ಪತ್ತೆ ಹಚ್ಚುವಲ್ಲಿ ಶಹಾ ಆಯೋಗವು ಗಮನಾರ್ಹವಾಗಿ ಕಾರ್ಯನಿರ್ವಹಿಸಿತ್ತು. ಅಪರಾಧ ಎಸಗಿದವರನ್ನೂ ಗುರುತಿಸಿತ್ತು. ಆರೋಪಿಗಳನ್ನು ನ್ಯಾಯಾಲಯಗಳು ಶಿಕ್ಷಿಸುವ ಮುನ್ನವೇ ಇಂದಿರಾ ಗಾಂಧಿ ಮರಳಿ ಅಧಿಕಾರಕ್ಕೆ ಬಂದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂವಿಧಾನೇತರ ಅಧಿಕಾರ ಚಲಾಯಿಸಿದ ತಮ್ಮ ಪುತ್ರ ಸಂಜಯ್ ಗಾಂಧಿ ಆದೇಶ ಪಾಲಿಸದವರ ವಿರುದ್ಧವೇ ಇಂದಿರಾ ಶಿಸ್ತಿನ ಕ್ರಮ ಕೈಗೊಂಡರು.

ಪ್ರಮಾದಗಳನ್ನು ಸರಿಪಡಿಸುವುದರಿಂದಷ್ಟೇ ಹೆಚ್ಚು ಪ್ರಯೋಜನವಾಗದು. ಅಪರಾಧಿಗಳನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸಲೇಬೇಕು. ಇಲ್ಲದಿದ್ದರೆ ಅವರು ಮತ್ತೆ ಸರ್ವಾಧಿಕಾರಿಗಳ ಕೈಗೊಂಬೆಯಾಗುವ ಸಾಧ್ಯತೆ ಇದ್ದೇ ಇರುತ್ತದೆ.  1980ರಲ್ಲಿ ಇಂದಿರಾ ಗಾಂಧಿ ಮತ್ತೆ ಅಧಿಕಾರಕ್ಕೆ ಮರಳಿದಾಗ ಇಂತಹ ಸಾಧ್ಯತೆ ನಿಜವಾಯಿತು. ತಮಗೆ ನಿಷ್ಠರಾದ ಅಧಿಕಾರಿಗಳು ಮತ್ತು ಕಳಂಕಿತ ಸಚಿವರನ್ನು ಇಂದಿರಾ ಅಧಿಕಾರಕ್ಕೆ ತಂದರು. ಅವರಲ್ಲಿನ ಕೆಲವರು ಈಗಲೂ ಮನಮೋಹನ್ ಸಿಂಗ್  ಸರ್ಕಾರದಲ್ಲಿ ಅಧಿಕಾರದ ರುಚಿ ಸವಿಯುತ್ತಿದ್ದಾರೆ.ಪಾಕಿಸ್ತಾನದಲ್ಲಿ ಸಂವಿಧಾನದಿಂದ ದೂರ ಸಾಗುತ್ತಿದ್ದ ಸರ್ಕಾರದ ಧೋರಣೆಗೆ ನ್ಯಾಯಾಂಗವೇ ಕೊನೆ ಹಾಡಿತಲ್ಲದೆ, ಕಾನೂನು ಸುವ್ಯವಸ್ಥೆ ಮರಳಿ ಸ್ಥಾಪಿಸಿತು  ಎಂದು ನ್ಯಾ. ಚೌಧರಿ ಅವರು ಅಭಿಪ್ರಾಯಪಟ್ಟಿರುವುದು ಸರಿಯಾಗಿಯೇ ಇದೆ.

ಪಾಕಿಸ್ತಾನದಲ್ಲಿ ಸದ್ಯಕ್ಕೆ ಇರುವ ಕಾನೂನು ವ್ಯವಸ್ಥೆ ಸಮರ್ಥಿಸಿಕೊಳ್ಳುವ ನ್ಯಾ. ಚೌಧರಿ ಅವರ ಧೋರಣೆ ಸಮರ್ಥನೀಯವೇ ಎನ್ನುವುದು ಚರ್ಚಾಸ್ಪದ. ಆದರೆ, ಪಾಕಿಸ್ತಾನದ ಕೆಲ ಭಾಗಗಳಲ್ಲಿ ಕಾನೂನು ಸುವ್ಯವಸ್ಥೆಯೇ ಇಲ್ಲದಿರುವುದು ಗಾಬರಿ ಮೂಡಿಸುವ ಸಂಗತಿ. ಆದಾಗ್ಯೂ, ಅವರು ಇದುವರೆಗೂ ಯಾರೊಬ್ಬರನ್ನೂ ಶಿಕ್ಷಿಸಿಲ್ಲ. ಹಿಂದಿನ ಸೇನಾಡಳಿತಗಾರ ಪರ್ವೇಜ್ ಮುಷರಫ್ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಿರಲಿಕ್ಕಿಲ್ಲ. ಮುಷರಫ್ ನಿರ್ವಹಿಸುತ್ತಿದ್ದ ಸೇನಾಡಳಿತಗಾರ ಹುದ್ದೆಗೆ ಶಿಕ್ಷೆಯಿಂದ ರಕ್ಷಣೆ ಇರುವುದೇ ಇದಕ್ಕೆ ಕಾರಣ ಇರಬಹುದು. ಆದಾಗ್ಯೂ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಮುಷರಫ್ ಅವರನ್ನು ನ್ಯಾಯಾಂಗದ ಕಟಕಟೆಗೆ ಎಳೆದು ತರಲು ಕೆಲ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಇದು ಭವಿಷ್ಯದ ಆಡಳಿತಗಾರರಿಗೆ ಎಚ್ಚರಿಕೆಯೂ ಆದೀತು.

ನ್ಯಾಯಮೂರ್ತಿ ಎ. ಕೆ. ಗಂಗೂಲಿ ಅವರು ಇತ್ತೀಚೆಗೆ ಪ್ರಕರಣವೊಂದರ ವಿಚಾರಣೆ ವೇಳೆಯಲ್ಲಿ, ‘ಯಾವುದೇ ಸರ್ಕಾರವು ನ್ಯಾಯಾಂಗವು ಬಲಿಷ್ಠವಾಗಿರುವುದನ್ನು ಬಯಸುವುದಿಲ್ಲ’ ಎಂದು ಕಟು ಸತ್ಯವನ್ನೇ ನುಡಿದಿದ್ದಾರೆ. ಕೋರ್ಟ್‌ಗಳಲ್ಲಿ ಕೆಲ ಪ್ರಕರಣಗಳನ್ನು ಉದ್ದೇಶಪೂರ್ವಕವಾಗಿ ಮುಂದೂಡುವ ಕೆಟ್ಟ ಸಂಪ್ರದಾಯದ ಬಗ್ಗೆಯೇ ಅವರು ತಮ್ಮ ಆಕ್ಷೇಪವನ್ನು ನೇರವಾಗಿಯೇ ದಾಖಲಿಸಿದ್ದಾರೆ.

ದೂರವಾಣಿ ಕದ್ದಾಲಿಕೆ ಪ್ರಕರಣವೊಂದರಲ್ಲಿ ನಾಲ್ಕು ವರ್ಷಗಳಲ್ಲಿ ಕೇವಲ ಒಬ್ಬನೇ ಒಬ್ಬ ಸಾಕ್ಷಿದಾರನನ್ನು ವಿಚಾರಣೆಗೆ ಗುರಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಟೀಕೆ ಸಕಾರಣವಾಗಿಯೇ ಇದೆ.

ಕೆಲ ನ್ಯಾಯಮೂರ್ತಿಗಳು ಸರ್ಕಾರದ ಅನುಗ್ರಹ ಪಡೆಯಲು ವರ್ತಿಸುವರೇನೊ ಎಂಬಂತೆ ಭಾಸವಾಗುತ್ತದೆ. ಇದು ನಿಜಕ್ಕೂ ತಪ್ಪು ಸಂದೇಶ ನೀಡುವಂತಹದ್ದು. ತಾವು ದೆಹಲಿಗೆ ಭೇಟಿ ನೀಡಿದಾಗೊಮ್ಮೆ ನ್ಯಾಯಾಂಗ ಸ್ಥಾಯಿ ಸಮಿತಿ ಸದಸ್ಯರನ್ನು ಭೇಟಿಯಾಗದೇ ಮರಳುತ್ತಿರಲಿಲ್ಲ ಎಂದು  ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಒಪ್ಪಿಕೊಂಡಿದ್ದರು. ಸದ್ಯಕ್ಕೆ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆಗಿದ್ದಾರೆ.

ನ್ಯಾಯಮೂರ್ತಿ ಎ. ಕೆ.  ಗಂಗೂಲಿ ಅವರು ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವ ವಿಲಾಸ್ ರಾವ್ ದೇಶಮುಖ್ ಅವರ ನಿಲುವನ್ನು ಎರಡು ಬೇರೆ ಬೇರೆ ಸಂದರ್ಭಗಳಲ್ಲಿ ಕಟುವಾಗಿ ಟೀಕಿಸಿರುವುದೂ ಸಮರ್ಥನೀಯವಾಗಿದೆ.  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಸೃಷ್ಟಿ ಯೋಜನೆಯ (ಎನ್‌ಆರ್‌ಇಜಿಎಸ್)  ಹಗರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮತ್ತು ಬೆಂಗಳೂರು ಹೈಕೋರ್ಟ್‌ಗಳಲ್ಲಿ ಇದ್ದ ಪ್ರಕರಣಗಳನ್ನು  ಒಟ್ಟುಗೂಡಿಸಿ   ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಸಬೇಕೆಂಬ ಕೋರಿಕೆಯನ್ನೂ  ನ್ಯಾ. ಗಂಗೂಲಿ ಅವರು ತಳ್ಳಿ ಹಾಕಿದ್ದಾರೆ.

ಈ ಹಿಂದೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ದೇಶಮುಖ್ ಅವರು, ಲೇವಾದೇವಿಗಾರರೊಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳದಿರಲು ಪೊಲೀಸರ ಮೇಲೆ ಒತ್ತಡ ಹೇರಿದ ಕಾರಣಕ್ಕೂ ಇದೇ ನ್ಯಾಯಮೂರ್ತಿಗಳಿಂದ ಟೀಕೆಗೆ ಗುರಿಯಾಗಿದ್ದರು.

ಅಧಿಕಾರ ದುರುಪಯೋಗ ಮಾಡಿಕೊಂಡ ಕಾರಣಕ್ಕೆ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದ್ದರೂ ದೇಶಮುಖ್ ಅವರನ್ನು ಕೇಂದ್ರದಲ್ಲಿ ಸಚಿವರನ್ನಾಗಿ ಮುಂದುವರೆಸಿರುವುದನ್ನು  ನ್ಯಾ. ಗಂಗೂಲಿ  ಕಟುವಾಗಿ ಟೀಕಿಸಿದ್ದಾರೆ. ಇಂತಹ ಗುರುತರ ಟೀಕೆಗಳ ಹೊರತಾಗಿಯೂ ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶಮುಖ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಅಚ್ಚರಿ ಮೂಡಿಸುತ್ತದೆ.

ಕಾರ್ಯಾಂಗ ಮತ್ತು ನ್ಯಾಯಾಂಗದ ಮಧ್ಯೆ ಹಗ್ಗ - ಜಗ್ಗಾಟಗಳು ನಡೆಯುತ್ತಿರುವುದು ಹೊಸ ಸಂಗತಿಯೇನಲ್ಲ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಕಾಲದಿಂದಲೂ ಇಂತಹ ಜಟಾಪಟಿ ನಡೆಯುತ್ತಲೇ ಇದೆ. ಜಮೀನುದಾರಿ ರದ್ದತಿ ಕಾಯ್ದೆ ನಿರ್ಧಾರವು ಅಧಿಕಾರದ ದುರ್ಬಳಕೆ ಎಂದು ಸುಪ್ರೀಂಕೋರ್ಟ್ ನೀಡಿದ ತೀರ್ಪು ಕಂಡು ನೆಹರೂ ಕನಲಿ ಕೆಂಡವಾಗಿದ್ದರು.

ಇತ್ತೀಚಿನ ತಾಜಾ ನಿದರ್ಶನ ಏನೆಂದರೆ, ಲೋಕಸಭಾಧ್ಯಕ್ಷರಾಗಿದ್ದ ಸೋಮನಾಥ ಚಟರ್ಜಿ ಅವರೂ ಸುಪ್ರೀಂಕೋರ್ಟ್‌ನ ಆದೇಶ ಸ್ವೀಕರಿಸಲು ನಿರಾಕರಿಸಿದ್ದರು. ಸಂಸತ್ತಿನ ವ್ಯಾಪ್ತಿಯಲ್ಲಿ ಬರುವ ವಿಷಯಗಳನ್ನು ಪರಿಶೀಲಿಸಲು ಕೋರ್ಟ್‌ಗೆ ಅಧಿಕಾರ ಇಲ್ಲ ಎನ್ನುವುದು ಅವರ ವಾದವಾಗಿತ್ತು.

ಮುಖ್ಯ ಜಾಗೃತ ಆಯುಕ್ತ ಪಿ.ಜೆ. ಥಾಮಸ್ ಅವರ ನೇಮಕಾತಿಯ ಅರ್ಹತೆ ಪರಿಶೀಲಿಸುವುದೂ ಸುಪ್ರೀಂಕೋರ್ಟ್‌ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೆಲ ವಾರಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರವು ಪ್ರತಿಪಾದಿಸಿತ್ತು. ಆದರೆ, ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ಕೈ ಮೇಲಾಗಿದೆ. ನ್ಯಾಯಾಂಗ ಪರಾಮರ್ಶೆಯ ತನ್ನ ಅಧಿಕಾರದ ಬಗ್ಗೆ ಕೋರ್ಟ್ ಖಚಿತ ನಿಲುವು ತಳೆದಿದೆ.

ಸರ್ಕಾರದ ಇತರ ಇಲಾಖೆಗಳ ನ್ಯಾಯಸಮ್ಮತ ಪಾತ್ರ ಮತ್ತು ಕಾರ್ಯನಿರ್ವಹಣೆ ನಾಶಮಾಡುವ ನಿಟ್ಟಿನಲ್ಲಿ ನ್ಯಾಯಾಂಗದ ಪರಾಮರ್ಶೆಯನ್ನು ಬಳಸದಂತೆ ಕಾಮನ್‌ವೆಲ್ತ್ ಕಾನೂನು ಸಮ್ಮೇಳನವು ಎಚ್ಚರಿಕೆ ನೀಡಿದೆ. ಜನರನ್ನು ಪ್ರತಿನಿಧಿಸುವ ಸಂಸತ್ತಿಗೆ ಪರಮಾಧಿಕಾರ ಇರುವುದು ಸುಳ್ಳಲ್ಲ. ಆದರೆ, ಪ್ರಜಾಸತ್ತಾತ್ಮಕ ಸಮಾಜದಲ್ಲಿ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದೂ ಸರಿಯಲ್ಲ.

ಸರ್ಕಾರಗಳು ನಿರಂಕುಶಾಧಿಕಾರತ್ವದ ಧೋರಣೆ ತಳೆದಿರುತ್ತವೆ. ನ್ಯಾಯಾಂಗಕ್ಕೆ ಅನುದಾನ ವಿತರಣೆ ಮಾಡುವಲ್ಲಿ ಅಧಿಕಾರಿಗಳು ಪೂರ್ವಗ್ರಹದಿಂದ ವರ್ತಿಸುವುದೂ ಕಂಡು ಬರುತ್ತದೆ. ಒಟ್ಟು ಬಜೆಟ್ ಮೊತ್ತದಲ್ಲಿ ನ್ಯಾಯಾಂಗಕ್ಕೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ನೆರವು ನಿಗದಿ ಮಾಡಲಾಗಿರುತ್ತದೆ. ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಹೆಚ್ಚು ಹೆಚ್ಚು ಕೋರ್ಟ್‌ಗಳನ್ನು ಸ್ಥಾಪಿಸಲು ನೆರವಾಗಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳು ಪದೇ ಪದೇ ಮನವಿ ಮಾಡಿಕೊಳ್ಳುತ್ತಲೇ ಇದ್ದಾರೆ. ಆದರೆ, ಇದಕ್ಕೆ ಕೇಂದ್ರ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ದೇಶದಲ್ಲಿನ 16 ಸಾವಿರ ಕೋರ್ಟ್‌ಗಳು 2.4 ಕೋಟಿಗಳಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸಲು ಹೇಗೆ ಸಾಧ್ಯವಾದೀತು?

ಭಾರತ ಉಪಖಂಡದಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿರುವ  ಸಬ್ಸಿಡಿ ವಿಷಯದಲ್ಲಿ ಪಾಶ್ಚಿಮಾತ್ಯ ದೇಶಗಳು ಅನುಸರಿಸುತ್ತಿರುವ ದ್ವಿಮುಖ ಧೋರಣೆ ಬಗ್ಗೆಯೂ ನ್ಯಾ. ಚೌಧರಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ)  ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನಿಯಂತ್ರಿಸುವ ಶ್ರೀಮಂತ ದೇಶಗಳು, ಕೃಷಿ ವಲಯಕ್ಕೆ ನೀಡುವ ಸಬ್ಸಿಡಿ ಬಗ್ಗೆ ಬಡ ದೇಶಗಳನ್ನು ತರಾಟೆಗೆ ತೆಗೆದುಕೊಳ್ಳುತ್ತವೆ. ಇನ್ನೊಂದೆಡೆ ಅಮೆರಿಕ, ಫ್ರಾನ್ಸ್ ಸೇರಿದಂತೆ ಹಲವಾರು ಅಭಿವೃದ್ಧಿ ಹೊಂದಿದ ದೇಶಗಳು ತಮ್ಮದೇ ರೈತರಿಗೆ ವರ್ಷಕ್ಕೆ ಕೋಟ್ಯಂತರ ಡಾಲರ್‌ಗಳಷ್ಟು ಸಬ್ಸಿಡಿ ನೀಡುತ್ತಿವೆ.

ಕಡು ಬಡವರ ಬದುಕು ಹಸನಾಗಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹೆಚ್ಚು  ಗಮನ ಹರಿಸುವುದು ಸದ್ಯದ ತುರ್ತು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್. ಎಚ್. ಕಪಾಡಿಯಾ ಅವರು, ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.  ಬಾಂಗ್ಲಾದೇಶದ ಖ್ಯಾತ ನ್ಯಾಯವಾದಿ ಕಮಾಲ್ ಹುಸೇನ್ ತಳೆದಿರುವ ನಿಲುವೂ ದೂರದೃಷ್ಟಿಯಿಂದ ಕೂಡಿದೆ. ಮಾನವ ಹಕ್ಕುಗಳನ್ನು ಜನರ ಜೀವನೋಪಾಯ ಹಕ್ಕಿನ ಜೊತೆ ಅವರು ತುಲನೆ ಮಾಡಿದ್ದಾರೆ. ಕಾನೂನು ಪಾಲನೆ ಆಧರಿಸಿದ ಬಲಿಷ್ಠವಾದ ಕಾಯ್ದೆ ವ್ಯವಸ್ಥೆಯು, ಒಟ್ಟಾರೆ ಆರ್ಥಿಕ ವ್ಯವಸ್ಥೆಯ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುವುದು ಎಂದು ಪ್ರಧಾನಿ ಮನಮೋಹನ್ ಸಿಂಗ್  ಅಭಿಪ್ರಾಯಪಟ್ಟಿರುವುದೂ ಸಮಯೋಚಿತವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry