ಕೊಹ್ಲಿ: ಶ್ರೇಷ್ಠತೆ ಮೇಲೆ ಸೊಕ್ಕಿನ ನೆರಳು

7

ಕೊಹ್ಲಿ: ಶ್ರೇಷ್ಠತೆ ಮೇಲೆ ಸೊಕ್ಕಿನ ನೆರಳು

ರಾಮಚಂದ್ರ ಗುಹಾ
Published:
Updated:
ಕೊಹ್ಲಿ: ಶ್ರೇಷ್ಠತೆ ಮೇಲೆ ಸೊಕ್ಕಿನ ನೆರಳು

ವಿರಾಟ್‍ ಕೊಹ್ಲಿ 2016ರ ಮಾರ್ಚ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೊಡೆದ ಎರಡು ಸೊಗಸಾದ ಸ್ಕ್ವೇರ್‍ ಡ್ರೈವ್‍ ಕಂಡು ನಾನು ಹೀಗೆ ಟ್ವೀಟ್‍ ಮಾಡಿದ್ದೆ: ‘ನನ್ನ ಬಾಲ್ಯದ ಹೀರೊ, ಸಾರ್ವಕಾಲಿಕ ಭಾರತ ತಂಡದ ಜಿ.ಆರ್‍.ವಿಶ್ವನಾಥ್‍ ಆಟದಂತಿದೆ’. ಟಿ20 ವಿಶ್ವಕಪ್‍ನ ಕ್ವಾರ್ಟರ್‍ ಫೈನಲ್‍ನ ಪಂದ್ಯ ಗೆದ್ದುಕೊಟ್ಟ 82 ರನ್‍ಗಳಲ್ಲಿ ಆ ಎರಡು ಬೌಂಡರಿಗಳು ಸೇರಿದ್ದವು. ಕೊಹ್ಲಿಯ ಕ್ರಿಕೆಟ್‍ ಆಟದ ಶ್ರೇಷ್ಠತೆ ಆ ಎರಡು ಹೊಡೆತಗಳಲ್ಲಿ ನನಗೆ ದೃಢವಾಗಿತ್ತು. 2012ರಲ್ಲಿ ಬೆಂಗಳೂರಿನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಕೊಹ್ಲಿ ಹೊಡೆದ ಶತಕ, ಈತ ಎಂತಹ ಶ್ರೇಷ್ಠ ಆಟಗಾರ ಎಂಬ ಭಾವನೆಯನ್ನು ನನ್ನಲ್ಲಿ ಮೂಡಿಸಿತ್ತು.

ಉತ್ತಮ ತಂಡವಾಗಿದ್ದ ನ್ಯೂಜಿಲೆಂಡ್‍ ಎದುರು ಸಚಿನ್‍ ತೆಂಡೂಲ್ಕರ್‍ ಭಾರಿ ಸಾಮಾನ್ಯ ಎಂಬಂತೆ ಕಾಣಿಸಿಕೊಂಡಿದ್ದರೆ, ಅದರ ಹಿಂದಿನ ವರ್ಷ ಸಚಿನ್‍ ಅವರನ್ನು ಹೆಗಲ ಮೇಲೆ ಹೊತ್ತು ಕುಣಿದಾಡಿದ್ದ ವ್ಯಕ್ತಿಯ ಕೈಯಲ್ಲಿಯೇ ಸಂಪೂರ್ಣ ನಿಯಂತ್ರಣ ಇತ್ತು. ಬಳಿಕ, ಎರಡು ವರ್ಷಗಳ ನಂತರ, ಅಡಿಲೇಡ್‍ನಲ್ಲಿ ಅವರು ಗಳಿಸಿದ 141 ರನ್‍ಗಳ ಇನಿಂಗ್ಸ್‌ನಲ್ಲಿ ಅವರು ಅದ್ಭುತವಾಗಿ ಗಳಿಸಿದ ಒಂದೊಂದು ರನ್‍ ಅನ್ನೂ ಟಿ.ವಿ.ಯಲ್ಲಿ ನೋಡಿದ್ದೆ. ಟೆಸ್ಟ್‌ ತಂಡದ ನಾಯಕನಾದ ಬಳಿಕದ ಮೊದಲ ಪಂದ್ಯದಲ್ಲಿ ಅವರು ತಂಡವನ್ನು ಅಧಿಕಾರಯುತ ಗೆಲುವಿಗೆ ಕೊಂಡೊಯ್ದಿದ್ದರು. ಅವರ ಬಗೆಗಿನ ಅಭಿಮಾನ ಹೀಗೆ ನಿಧಾನವಾಗಿ ಏರುತ್ತಲೇ ಹೋಯಿತು. ರನ್‍ ನೀಡುವ ವಿಷಯದಲ್ಲಿ ಜಿಪುಣನಾದ ಜೇಮ್ಸ್‌ ಫಾಕ್ನರ್‍ ಎಸೆತಗಳಲ್ಲಿ ಅವರು ಆ ಟಿ20 ಪಂದ್ಯದಲ್ಲಿ ಬಾರಿಸಿದ ಎರಡು ಬೌಂಡರಿಗಳು ಬಾಲ್ಯ ಕಾಲದಲ್ಲಿ ನನಗೆ ಇದ್ದ ಭಾವನಾತ್ಮಕ ಒಲವನ್ನು ಮರೆಯಾಗಿಸುತ್ತಾ ಬಂತು. ನನ್ನ ಕಾಲ್ಪನಿಕ ತಂಡದಲ್ಲಿ ಸೆಹ್ವಾಗ್‍ ಮತ್ತು ಗಾವಸ್ಕರ್‍ ಓಪನಿಂಗ್‍ ಆಟಗಾರರಾದರೆ, ದ್ರಾವಿಡ್‍ ಮತ್ತು ಸಚಿನ್‍ ನಂತರ ಬರಬೇಕು. ಐದನೆಯ ಆಟಗಾರನಾಗಬೇಕಾದವರು ಕೊಹ್ಲಿಯೇ.

ಇದು ಎರಡು ವರ್ಷ ಹಿಂದಿನ ವಿಚಾರ. ಇತ್ತೀಚಿನ ಟೆಸ್ಟ್‌ನಲ್ಲಿ ಅವರು ಗಳಿಸಿದ ಅತ್ಯದ್ಭುತವಾದ 153 ರನ್‍ ಸೇರಿ ಎದುರಾಳಿಗಳು ತತ್ತರಿಸುವಂತಹ ಅವರ ಸರಣಿ ಇನಿಂಗ್ಸ್‌ ನನ್ನ ಅಭಿಮಾನವನ್ನು ಇನ್ನಷ್ಟು ಹೆಚ್ಚಿಸಿದೆ. ಕ್ರಿಕೆಟ್‍ನ ಎಲ್ಲ ಪ್ರಕಾರಗಳಲ್ಲಿ ಮತ್ತು ಯಾವುದೇ ಸನ್ನಿವೇಶದಲ್ಲಿ ವಿರಾಟ್‍ ಕೊಹ್ಲಿ ಈಗ ಭಾರತದ ಸಾರ್ವಕಾಲಿಕ ಅತ್ಯುತ್ತಮ ಬಾಟ್ಸ್‌ಮನ್‍. ಸಾಂಪ್ರದಾಯಿಕತೆ ಮತ್ತು ಪ್ರೌಢಿಮೆಯು ದ್ರಾವಿಡ್‍ ಮತ್ತು ಗಾವಸ್ಕರ್‌ಗೆ ಟೆಸ್ಟ್‌ನಲ್ಲಿ ಬಹಳ ನೆರವಾಗಿದೆ. ಆದರೆ ಸೀಮಿತ ಓವರ್‌ಗಳ ಕ್ರಿಕೆಟ್‍ನಲ್ಲಿ ಅದು ಅವರ ಮಿತಿಯೂ ಆಗಿತ್ತು. ಏಕದಿನ ಕ್ರಿಕೆಟ್‍ನಲ್ಲಿ ಅತ್ಯದ್ಭುತ ಎನಿಸುವಂತಹ ಸಾಧನೆಯನ್ನು ಸೆಹ್ವಾಗ್‍ ಮಾಡಲಾಗಿಲ್ಲ. ಪಂದ್ಯ ಗೆದ್ದುಕೊಡುವಂತಹ ಅವರ ಯಾವ ಇನಿಂಗ್ಸ್‌ ನಮ್ಮ ನೆನಪಿನಲ್ಲಿ ಇದೆ? ಸಚಿನ್‍ಗೆ ಟಿ20 ಕ್ರಿಕೆಟ್‍ನ ಸಾಮ್ರಾಟನಾಗಲು ಸಾಧ್ಯವಾಗಲಿಲ್ಲ. ಅವರು ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಅತ್ಯುದ್ಭುತ ಮತ್ತು ಅತ್ಯುತ್ಕೃಷ್ಟವಾಗಿದ್ದರು; ಆದರೆ ನಾಲ್ಕನೆಯ ಇನಿಂಗ್ಸ್ ಆಡುವಾಗ ಅವರನ್ನು ‍ಪೂರ್ಣವಾಗಿ ಅವಲಂಬಿಸಲು ಸಾಧ್ಯವಿರಲಿಲ್ಲ.

ಹಾಗೆಯೇ, 50 ಓವರ್‌ಗಳ ಆಟದಲ್ಲಿ ಎರಡನೆಯ ಇನಿಂಗ್ಸ್ ಆಡುವಾಗಲೂ ಅಷ್ಟೇ. ಅದಲ್ಲದೆ, ನಾಯಕನಾದ ಬಳಿಕ ಸಚಿನ್‍ ಅವರಲ್ಲಿ ಹಿಂಜರಿಕೆ ಕಾಣಿಸಿತು ಮತ್ತು ಅವರ ಬ್ಯಾಟಿಂಗ್ ಪ್ರಭಾವಶಾಲಿಯಾಗಿ ಇರಲಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ, ಕೊಹ್ಲಿ ಅವರಲ್ಲಿ ಮೊದಲೇ ಇದ್ದ ಆತ್ಮವಿಶ್ವಾಸವನ್ನು ನಾಯಕತ್ವ ಮತ್ತಷ್ಟು ಗಟ್ಟಿಗೊಳಿಸಿದೆ. ಅದಲ್ಲದೆ, ಚೇಸಿಂಗ್‍ನಲ್ಲಿಯಂತೂ ಅವರು ಉತ್ಕೃಷ್ಟವಾಗಿದ್ದಾರೆ.

ನಾನು ಕೊಹ್ಲಿ ಅವರನ್ನು ಒಮ್ಮೆ ಮಾತ್ರ ಭೇಟಿಯಾಗಿದ್ದೇನೆ. ಭಾರತದಲ್ಲಿ ಈಗ ಇರುವ ಮತ್ತು ಹಿಂದಿನ ಎಲ್ಲ ಶ್ರೇಷ್ಠಕ್ರೀಡಾಪಟುಗಳಲ್ಲಿ ಕೊಹ್ಲಿ ಅವರೇ ಅತ್ಯಂತ ಆಕರ್ಷಕ ವ್ಯಕ್ತಿತ್ವ ಹೊಂದಿದ್ದಾರೆ ಎಂಬುದು ಆ ಒಂದು ಸಂಭಾಷಣೆಯಿಂದ ಹಾಗೂ ಬೇರೆ ರೀತಿಯಲ್ಲಿ ನಾನು ಅವರನ್ನು ಕಂಡದ್ದರಿಂದ ನನಗೆ ಮನವರಿಕೆಯಾಗಿದೆ. ಅವರು ಬುದ್ಧಿವಂತಿಕೆ (ಕ್ರಿಕೆಟ್‍ನಲ್ಲಿ ಮಾತ್ರ ಅಲ್ಲ) ಮತ್ತು ಆತ್ಮಸ್ಥೈರ್ಯ ಇರುವ ವ್ಯಕ್ತಿ. ಗಾವಸ್ಕರ್‍ ಮತ್ತು ದ್ರಾವಿಡ್‍ ಸ್ಪಷ್ಟವಾಗಿ ಮತ್ತು ದೃಢವಾಗಿ ಮಾತನಾಡಬಲ್ಲರು. ಆದರೆ ಅವರಲ್ಲಿ ಕೊಹ್ಲಿಗೆ ಇರುವ ಆಕರ್ಷಣೆ ಇಲ್ಲ. ಕಪಿಲ್‍ದೇವ್‍ ಮತ್ತು ದೋನಿ ಕೂಡ ಪ್ರಭಾವಿ ವ್ಯಕ್ತಿತ್ವ ಹೊಂದಿದ್ದಾರೆ. ಆದರೆ ಕೊಹ್ಲಿಗೆ ಪದಗಳ ಮೇಲೆ ಇರುವ ಹಿಡಿತ ಅವರಿಗೆ ಇಲ್ಲ.

ಭಾರತೀಯ ಕ್ರಿಕೆಟ್‍ ಮಂಡಳಿಯಲ್ಲಿ (ಬಿಸಿಸಿಐ) ನಾನು ಇದ್ದ ನಾಲ್ಕು ತಿಂಗಳಲ್ಲಿ ಕೊಹ್ಲಿಯ ಸ್ಥೈರ್ಯದ ಆಳ-ಅಗಲವನ್ನು ಕಂಡಿದ್ದೇನೆ. ಕೇಂದ್ರ ಸಚಿವ ಸಂಪುಟವು ನರೇಂದ್ರ ಮೋದಿ ಅವರನ್ನು ಯಾವ ರೀತಿಯಲ್ಲಿ ಅತಿಯಾಗಿ ಆರಾಧಿಸುತ್ತದೆಯೋ ಅದಕ್ಕಿಂತ ಹೆಚ್ಚಿನ ರೀತಿಯಲ್ಲಿ ಬಿಸಿಸಿಐನ ಅಧಿಕಾರಿಗಳು ಕೊಹ್ಲಿಯ ಬಗ್ಗೆ ಅಭಿಮಾನ ಹೊಂದಿದ್ದಾರೆ. ಭಾರತೀಯ ಕ್ರಿಕೆಟ್‍ ತಂಡದ ನಾಯಕನ ವ್ಯಾಪ್ತಿಯಲ್ಲಿ ಇಲ್ಲದ ವಿಚಾರವನ್ನೂ ಅವರು ಕೊಹ್ಲಿಗೆ ಸಂಪೂರ್ಣವಾಗಿ ಬಿಟ್ಟುಕೊಡುತ್ತಾರೆ. ಭಾರತ ತಂಡದ ಪ್ರವಾಸ ಕಾರ್ಯಕ್ರಮ ಚರ್ಚಿಸುವಾಗ, ಕೊಹ್ಲಿ ಅವರ ಸಮ್ಮತಿ ಪಡೆದುಕೊಳ್ಳಲೇಬೇಕು ಎಂದು ಬಿಸಿಸಿಐನ ಕಾನೂನು ವಿಭಾಗ ಹೇಳಿತ್ತು. ರಾಷ್ಟ್ರೀಯ ಕ್ರಿಕೆಟ್‍ ಆಕಾಡೆಮಿಯ ಆಡಳಿತ ನಿರ್ವಹಣೆ ವಿಚಾರ ನಮ್ಮ ಮುಂದೆ ಬಂದಾಗ, ಈ ಸಂಸ್ಥೆಯನ್ನು ಹೇಗೆ ನಡೆಸಬೇಕು ಎಂಬುದರಲ್ಲಿ ಮೊದಲ ಮತ್ತು ಕೊನೆಯ ನಿರ್ಧಾರ ವಿರಾಟ್‍ ಅವರದ್ದೇ ಆಗಿರಬೇಕು ಎಂದು ಬಿಸಿಸಿಐನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಮಗೆ ಹೇಳಿದರು (ಕೊಹ್ಲಿ ಅವರನ್ನು ಉಲ್ಲೇಖಿಸುವಾಗ ಅವರ ಮೊದಲ ಹೆಸರನ್ನೇ ಬಿಸಿಸಿಐ ಅಧಿಕಾರಿಗಳು ಹೇಳುತ್ತಾರೆ; ಬಹುಶಃ ಇದು ಆತ್ಮೀಯತೆಯನ್ನು ತೋರಿಸುವುದಕ್ಕೆ ಆಗಿರಬಹುದು; ಹಾಗಿದ್ದರೂ ಅವರ ವರ್ತನೆ ನೋಡಿ ಹೇಳುವುದಾದರೆ, ಇವರದು ಒಡೆಯ- ಸೇವಕನ ಸಂಬಂಧವೇ ಆಗಿದೆ). ಭಾರತದ ಯಾವುದೇ ಕ್ಷೇತ್ರ ತೆಗೆದುಕೊಂಡರೂ- ಅದು ರಾಜಕೀಯ, ವ್ಯಾಪಾರ, ಶಿಕ್ಷಣ ಅಥವಾ ಕ್ರೀಡೆ ಆಗಿರಲಿ- ವ್ಯಕ್ತಿಯ ಗಟ್ಟಿತನದ ಜತೆಗೆ ಘನ ಸಾಧನೆಯೂ ಸೇರಿದ್ದರೆ ಅದು ಸಂಸ್ಥೆಯ ಮೇಲೆ ವ್ಯಕ್ತಿಯ ಪ್ರಾಬಲ್ಯಕ್ಕೆ ಕಾರಣವಾಗುತ್ತದೆ.

ವಾಸ್ತವ ಏನೆಂದರೆ, ಆಟದ ಮೈದಾನದಲ್ಲಿ ಮತ್ತು ಹೊರಗೆ, ಕೊಹ್ಲಿ ನಿಜಕ್ಕೂ ಪ್ರಭಾವಶಾಲಿ. ಭಾರತದ ಕ್ರೀಡೆಯ ಇತಿಹಾಸದಲ್ಲಿಯೇ ಕ್ರಿಕೆಟ್‍ ಆಟದ ಶ್ರೇಷ್ಠತೆ, ಮಾನಸಿಕ ದೃಢತೆ ಮತ್ತು ವೈಯಕ್ತಿಕ ಆಕರ್ಷಣೆಗಳೆಲ್ಲವೂ ಒಟ್ಟಾಗಿ ಇರುವ ಬೇರೊಬ್ಬ ವ್ಯಕ್ತಿ ಇಲ್ಲ. ಭಾರಿ ಅಂತರ ಇದ್ದರೂ ಇವರ ನಂತರ ಬರುವ ಇಂತಹ ವ್ಯಕ್ತಿ ಅನಿಲ್‍ ಕುಂಬ್ಳೆ. ಅವರು ಭಾರತ ಸೃಷ್ಟಿಸಿದ ಅತ್ಯುತ್ತಮ ಬೌಲರ್‍. ಆಟದ ಬಗ್ಗೆ ಅತ್ಯುತ್ತಮ ಚಿಂತನೆ ಇರುವ ವ್ಯಕ್ತಿ. ಸುಶಿಕ್ಷಿತ ಮತ್ತು ಸಾಕಷ್ಟು ಓದಿಕೊಂಡಿರುವ ಅವರಿಗೆ ಸಮಾಜ ಮತ್ತು ರಾಜಕೀಯದಲ್ಲಿ ಆಸಕ್ತಿ ಇದೆ. ತಮ್ಮ ಮಹತ್ವದ ಬಗ್ಗೆ ಅವರಿಗೆ ಅರಿವಿನ ಕೊರತೆಯೇನೂ ಇಲ್ಲ; ಹಾಗಿದ್ದರೂ ಪಂಜಾಬಿ ಶೈಲಿಯಂತಲ್ಲದೆ ಕನ್ನಡಿಗ ಶೈಲಿಯಲ್ಲಿ ಅವರು ತಮ್ಮನ್ನು ಬಿಂಬಿಸಿಕೊಂಡರು.

ಕ್ರಿಕೆಟಿಗನಾಗಿ ಮತ್ತು ಗಟ್ಟಿ ವ್ಯಕ್ತಿತ್ವದಲ್ಲಿ ಕೊಹ್ಲಿ ಅವರ ಸಾಲಿನಲ್ಲಿ ನಿಲ್ಲಬಲ್ಲ ಏಕೈಕ ವ್ಯಕ್ತಿ ಕುಂಬ್ಳೆ ಆಗಿರಬಹುದು. ಬಹುಶಃ ಈ ಕಾರಣಕ್ಕಾಗಿಯೇ ಈ ಇಬ್ಬರ ನಡುವೆ ಸಂಘರ್ಷ ನಡೆಯಿತು ಮತ್ತು ಕುಂಬ್ಳೆ ಹೊರನಡೆಯಬೇಕಾಯಿತು.

ಆದರೆ, ಕ್ರಿಕೆಟ್‍ ಸಾಧನೆ ಮತ್ತು ವ್ಯಕ್ತಿತ್ವದಲ್ಲಿ ತಂಡದ ನಾಯಕನಿಗಿಂತ ಬಹಳ ಕೆಳಗೆ ಇರುವ ವ್ಯಕ್ತಿಯೊಬ್ಬರನ್ನು ಕುಂಬ್ಳೆ ಅವರ ಸ್ಥಾನಕ್ಕೆ ಯಾಕೆ ನೇಮಿಸಲಾಯಿತು? ಯಾಕೆಂದರೆ, ಬಿಸಿಸಿಐನ ಕಾನೂನು ವಿಭಾಗ ಮತ್ತು ಬಿಸಿಸಿಐನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಹಾಗೆಯೇ ಸುಪ್ರೀಂ ಕೋರ್ಟ್‌ ನೇಮಿಸಿದ ಆಡಳಿತ ಮಂಡಳಿಯ ಅಧ್ಯಕ್ಷ ತಮ್ಮ ಸ್ವಾತಂತ್ರ್ಯವನ್ನು ಕೊಹ್ಲಿ ಅವರ ವ್ಯಕ್ತಿತ್ವದ ಬಲದ ಮುಂದೆ ಅರ್ಪಿಸಿದರು. ಕ್ರಿಕೆಟ್‍ ಆಯ್ಕೆ ಮಂಡಳಿಯೂ ಹಾಗೆಯೇ ಮಾಡಿದೆ. ನಾಯಕನ ವ್ಯಾಪ್ತಿ ಎಲ್ಲಿಗೆ ಕೊನೆಯಾಗುತ್ತದೆ ಎಂಬುದನ್ನು ಹೇಳುವ ಧೈರ್ಯ ವಿನೋದ್‍ ರಾಯ್‍, ಸಚಿನ್‍, ಗಂಗೂಲಿ ಮತ್ತು ಲಕ್ಷ್ಮಣ್‍ ಅವರಿಗೆ ಇಲ್ಲದಿದ್ದುದೇ ಟಾಮ್‍ ಮೂಡಿ ಮತ್ತು ಇತರ ಆಕಾಂಕ್ಷಿಗಳನ್ನು ಬಿಟ್ಟು ರವಿ ಶಾಸ್ತ್ರಿಯನ್ನು ಆಯ್ಕೆ ಮಾಡಲು ಕಾರಣ.

ತಾಯ್ನಾಡಿನಲ್ಲಿ ದುರ್ಬಲ ಎದುರಾಳಿಯ ವಿರುದ್ಧ ಆಡಿದಾಗ ಈ ನಿರ್ಧಾರದ ಅವಿವೇಕ ಕಾಣಿಸಲಿಲ್ಲ. ಆದರೆ ಈಗ ಅದನ್ನು ಮುಚ್ಚಿಡಲು ಸಾಧ್ಯವಿಲ್ಲ. ವ್ಯಾಪಾರಕ್ಕಿಂತ ಕ್ರಿಕೆಟ್‍ನ ಬಗ್ಗೆ ಬಿಸಿಸಿಐ ಹೆಚ್ಚು ಯೋಚನೆ ಮಾಡಿದ್ದರೆ ಒಂದೇ ಒಂದು ಅಭ್ಯಾಸ ಪಂದ್ಯ ಇಲ್ಲದೆ ದಕ್ಷಿಣ ಆಫ್ರಿಕಾದ ಈ ಸರಣಿಗೆ ಭಾರತ ತಂಡ ಹೋಗುತ್ತಿರಲಿಲ್ಲ. ಆಯ್ಕೆದಾರರು ವಿವೇಕಿಗಳಾಗಿದ್ದಿದ್ದರೆ ಅಥವಾ ದಿಟ್ಟತನ ತೋರಿದ್ದರೆ ಭಾರತ ಇಂದು 2-0 ಸೋಲಿನಲ್ಲಿ ನಿಲ್ಲುತ್ತಿರಲಿಲ್ಲ.

ಈ ಲೇಖನದ ಸಮಯದ ಬಗ್ಗೆ ಕೆಲವು ಕೊಹ್ಲಿ ‘ಭಕ್ತರು’ ಆಕ್ಷೇಪ ಎತ್ತಬಹುದು. ಭಾರತ ತಂಡದ ನಾಯಕ ಅತ್ಯುತ್ತಮ ಇನಿಂಗ್ಸ್ ಆಡಿದ ಬಳಿಕ ಈ ಅಂಕಣ ಬರೆಯಲಾಗಿದೆ. ಆದರೆ, ವೈಯಕ್ತಿಕ ಶ್ರೇಷ್ಠತೆ ಸಾಂಸ್ಥಿಕ ಘನತೆಯನ್ನು ಮರೆಮಾಚಲು ಅವಕಾಶ ಕೊಡಲೇಬಾರದು ಎಂಬುದನ್ನು ನೆನಪಿಸಿಕೊಳ್ಳಲು ಇದು ಸೂಕ್ತ ಸಮಯ. ಕ್ರಿಕೆಟ್‌ಗಾಗಿ ಕೊಹ್ಲಿ ಬಹಳಷ್ಟನ್ನು ಮಾಡಿದ್ದಾರೆ; ಆದರೆ ತಂಡದ ಆಟಗಳಲ್ಲಿ ವ್ಯಕ್ತಿಯ ಶಕ್ತಿಗೆ ಮಿತಿ ಇದೆ. ಅಜಿಂಕ್ಯ ರಹಾನೆ ಎರಡೂ ಟೆಸ್ಟ್‌ಗಳಲ್ಲಿ ಆಡಿದ್ದರೆ, ಭುವನೇಶ್ವರ್‌ ಕುಮಾರ್‌ ಎರಡನೇ ಟೆಸ್ಟ್‌ ತಂಡದಲ್ಲಿ ಇದ್ದಿದ್ದರೆ, ಶ್ರೀಲಂಕಾ ತಂಡದ ಜತೆ ಭಾರತದಲ್ಲಿ ‘ಗಲ್ಲಿ ಕ್ರಿಕೆಟ್‌’ ಆಡುವ ಬದಲು ಎರಡು ವಾರ ಮೊದಲೇ ತಂಡ ದಕ್ಷಿಣ ಆಫ್ರಿಕಾಕ್ಕೆ ಹೋಗಿದ್ದರೆ ಫಲಿತಾಂಶ ಬೇರೆಯೇ ಆಗಿರುತ್ತಿತ್ತು.

ಭಾರತವು ವಿಶ್ವ ಕ್ರಿಕೆಟ್‌ನ ಕೇಂದ್ರವಾಗಿದೆ ಎಂದು ಬಿಸಿಸಿಐ ಮತ್ತು ಅದರ ಭಟ್ಟಂಗಿಗಳು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಹಣದ ವಿಚಾರದಲ್ಲಿ ಇದು ಸತ್ಯ ಆಗಿರಬಹುದಾದರೂ ಆಟದ ವಿಚಾರದಲ್ಲಿ ಸತ್ಯ ಅಲ್ಲ. ಬಿಸಿಸಿಐಯೊಳಗೆ ಇದ್ದ ಸಂದರ್ಭದ ಅನುಭವದಲ್ಲಿ ನಾನು ಈ ಅಭಿಪ್ರಾಯ ರೂಪಿಸಿಕೊಂಡಿದ್ದೇನೆ: ಬ್ರೆಜಿಲ್‌ನಲ್ಲಿರುವ ಫುಟ್‌ಬಾಲ್‌ ಅಭಿಮಾನಿಗಳಿಗಿಂತ ಹತ್ತು ಪಟ್ಟು ಹೆಚ್ಚು ಕ್ರಿಕೆಟ್‌ ಅಭಿಮಾನಿಗಳು ಭಾರತದಲ್ಲಿದ್ದಾರೆ. ಬಿಸಿಸಿಐ ಬಳಿ ಅಪಾರ ಹಣ ಇದೆ. ಈ ಎರಡೂ ಅಂಶಗಳಿಂದಾಗಿ ಭಾರತದ ತಂಡವು ಕ್ರಿಕೆಟ್‌ನ ಎಲ್ಲ ಪ್ರಕಾರಗಳಲ್ಲಿಯೂ ಸದಾ ಅತ್ಯುತ್ತಮ ತಂಡವಾಗಿ ಇರಬೇಕಿತ್ತು; ಟೆಸ್ಟ್‌ ಅಥವಾ ಏಕದಿನ ಅಥವಾ ಟಿ20 ಪಂದ್ಯದಲ್ಲಿ ಅಥವಾ ಸರಣಿಯಲ್ಲಿ ತಾಯ್ನಾಡಿನಲ್ಲಿ ಅಥವಾ ವಿದೇಶದಲ್ಲಿ ಸೋಲುವುದಕ್ಕೆ ಯಾವುದೇಕಾರಣ ಇಲ್ಲ. ಹಾಗಿದ್ದರೂ ಸೋಲುತ್ತೇವೆ ಎಂದಾದರೆ, ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ ಸರಣಿ ಗೆಲ್ಲಲು 70 ವರ್ಷ ಶ್ರಮಿಸಬೇಕಾಯಿತು ಎಂದರೆ, ಖಂಡಿತವಾಗಿಯೂ ಲೋಪ ಇರುವುದು ದೇಶದ ಕ್ರಿಕೆಟ್‌ ಆಡಳಿತದಲ್ಲಿಯೇ.

ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದಿಂದ ಬಹು ಕಾಲದಿಂದ ಬಳಲುತ್ತಿದ್ದ ಭಾರತದ ಕ್ರಿಕೆಟ್‌ಗೆ ಇತ್ತೀಚೆಗೆ ಇನ್ನೊಂದು ಬಾಧೆಯೂ ಅಂಟಿಕೊಂಡಿದೆ. ಅದು ‘ಸೂಪರ್‌ಸ್ಟಾರ್‌’ ರೋಗ. ಕೊಹ್ಲಿ ಶ್ರೇಷ್ಠ ಆಟಗಾರ, ಅತ್ಯುತ್ತಮ ನಾಯಕ ಎಲ್ಲವೂ ಹೌದು; ಆದರೆ ಸಾಂಸ್ಥಿಕ ನಿಯಂತ್ರಣ ಇಲ್ಲದಿದ್ದರೆ ಅಭಿಮಾನಿಗಳು ನಿರೀಕ್ಷಿಸುವ ರೀತಿಯಲ್ಲಿ ಅವರ ತಂಡ ಸಾಧನೆ ಮಾಡುವುದು ಸಾಧ್ಯವೇ ಇಲ್ಲ. ವೆಸ್ಟ್‌ ಇಂಡೀಸ್‌ ಮತ್ತು ಇಂಗ್ಲೆಂಡ್‌ ವಿರುದ್ಧ 1970ರ ದಶಕದಲ್ಲಿ ಭಾರತ ಮೊದಲ ಟೆಸ್ಟ್‌ ಸರಣಿ ಗೆದ್ದಾಗ ಆಯ್ಕೆದಾರರ ಸಮಿತಿಗೆ ವಿಜಯ್‌ ಮರ್ಚಂಟ್‌ ಮುಖ್ಯಸ್ಥರಾಗಿದ್ದರು. ಬಳಿಕ, ತಾಯ್ನಾಡಿನಲ್ಲಿ ಸತತವಾಗಿ ಸರಣಿ ಗೆಲ್ಲುವುದನ್ನು ಮುಂದುವರಿಸಿದಾಗ ಜಿ.ಆರ್‌. ವಿಶ್ವನಾಥ್‌ ಮತ್ತು ದಿಲೀಪ್‌ ವೆಂಗ್‌ಸರ್ಕರ್‌ ಅಂಥವರು ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು. ಕ್ರಿಕೆಟ್‌ ಆಟದಲ್ಲಿ ಇವರ ಸಾಧನೆ ಈಗಿನ ಆಟಗಾರರಷ್ಟೇ ಗಣನೀಯ. ಆದರೆ, ಈಗಿನ ಆಯ್ಕೆದಾರರ ಸಮಿತಿಯಲ್ಲಿ ಇದ್ದವರು ಬೆರಳೆಣಿಕೆಯಷ್ಟು ಟೆಸ್ಟ್‌ಗಳನ್ನಷ್ಟೇ ಆಡಿದವರು. ತಂಡದ ಕೋಚ್‌ ರವಿಶಾಸ್ತ್ರಿ ಹೆಚ್ಚು ಟೆಸ್ಟ್‌ಗಳಲ್ಲಿ ಆಡಿದ್ದಾರೆ. ಆದರೆ ನಿಜ ಅರ್ಥದಲ್ಲಿ ಅವರು ಶ್ರೇಷ್ಠ ಆಟಗಾರನೇನೂ ಅಲ್ಲ. ತಂಡದ ನಾಯಕನ ಮೇಲೆ ಅವರಿಗೆ ಇರುವ ಗೌರವ ಎಲ್ಲರಿಗೂ ಸ್ಪಷ್ಟವಾಗಿ ತಿಳಿದಿರುವುದೇ ಆಗಿದೆ.

ಈಗ ಭಾರತದ ಕ್ರಿಕೆಟ್‌ನ ಆಯ್ಕೆದಾರರು, ತರಬೇತಿ ಸಿಬ್ಬಂದಿ ಮತ್ತು ಆಡಳಿತಗಾರರೆಲ್ಲರೂ ಕೊಹ್ಲಿಯ ಮುಂದೆ ಕುಬ್ಜರು. ಅದು ಬದಲಾಗಬೇಕು. ಆಯ್ಕೆದಾರರು ಕ್ರಿಕೆಟ್‌ನ ನಿಜವಾದ ಸಾಧಕರಾಗಿರಬೇಕು. ಕೊಹ್ಲಿಯ ಮೇಲೆಯೂ ತಮಗೆ ಅಧಿಕಾರ ಇದೆ ಎಂಬುದನ್ನು ಅಗತ್ಯ ಬಿದ್ದಾಗ ಹೇಳುವ ವಿವೇಕ ಮತ್ತು ಧೈರ್ಯ ಕೋಚ್‌ಗೆ ಇರಬೇಕು. ತಮ್ಮ ಅಹಂ ಮತ್ತು ದೊರೆಯುವ ಹಣದ ಮೇಲಿನ ಗಮನವನ್ನು ಬದಿಗಿರಿಸಿ ವಿದೇಶಗಳಲ್ಲಿ ಗೆಲ್ಲುವ ಸಾಧ್ಯತೆಯನ್ನು ಗರಿಷ್ಠಗೊಳಿಸುವ ರೀತಿಯಲ್ಲಿ ಆಡಳಿತದಾರರು ವೇಳಾಪಟ್ಟಿ ಸಿದ್ಧಪಡಿಸಬೇಕು (ದಕ್ಷಿಣ ಆಫ್ರಿಕಾ ಪ್ರವಾಸವನ್ನು ವಿಸ್ತರಿಸದಿರಲು ಬಿಸಿಸಿಐಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಜತೆ ಇರುವ ದ್ವೇಷವೇ ಕಾರಣ).

ದಕ್ಷಿಣ ಆಫ್ರಿಕಾದಲ್ಲಿ ಮತ್ತು ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ ಮತ್ತು ಸರಣಿಯನ್ನು ನಿರಂತರವಾಗಿ ಗೆಲ್ಲದೆ ಇರುವಾಗ ನಮ್ಮನ್ನು ನಾವು ವಿಶ್ವ ಕ್ರಿಕೆಟ್‌ನ ಕೇಂದ್ರ ಎಂದು ಕರೆದುಕೊಳ್ಳುವುದು ಹೇಗೆ? ವಿಶ್ವ ಕ್ರಿಕೆಟ್‌ನ ಪ್ರಭುತ್ವ ಸ್ಥಾನ ಪಡೆಯಲು ನಮ್ಮಲ್ಲಿ ಒಂದು ತಂಡ ಇದೆ ಮತ್ತು ಒಬ್ಬ ನಾಯಕ ಇದ್ದಾರೆ. ನಾಯಕನ ಅಧಿಕಾರ ಮತ್ತು ಗರ್ವ ಅವರ ವೈಯಕ್ತಿಕ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದೆ. ಆದರೆ, ಅದು ಸಾಂಸ್ಥಿಕ ಶ್ರೇಷ್ಠತೆಯಾಗಿ ಬದಲಾಗಲು ಅಧಿಕಾರ ಮತ್ತು ಗರ್ವವನ್ನು ನಿಯಂತ್ರಿಸಲೇಬೇಕು. ಕೊಹ್ಲಿ ಅವರಿಗೆ 29 ವರ್ಷವಷ್ಟೇ ವಯಸ್ಸು. ದಕ್ಷಿಣ ಆಫ್ರಿಕಾದಲ್ಲಿ ತಂಡವನ್ನು ಮತ್ತೊಮ್ಮೆ ಮುನ್ನಡೆಸುವ ಅವಕಾಶ ಖಚಿತವಾಗಿಯೂ ಅವರಿಗೆ ದೊರೆಯಲಿದೆ. ಒಂದಕ್ಕಿಂತ ಹೆಚ್ಚು ಬಾರಿ ಆಸ್ಟ್ರೇಲಿಯಾಕ್ಕೆ ಹೋಗುವ ಸಾಧ್ಯತೆಯೂ ಇದೆ. ಎರಡು ವರ್ಷಗಳ ಹಿಂದೆ ಸಾರ್ವಕಾಲಿಕ ಕಾಲ್ಪನಿಕ ತಂಡದಲ್ಲಿ ಅವರಿಗೆ ನಾನು ಸ್ಥಾನ ಕೊಟ್ಟಿದ್ದೇನೆ. ಕ್ರಿಕೆಟ್‌ ಜೀವನಕ್ಕೆ ವಿದಾಯ ಹೇಳುವ ಹೊತ್ತಿಗೆ ಅವರು ಸಾರ್ವಕಾಲಿಕ ಕಾಲ್ಪನಿಕ ಭಾರತ ತಂಡದ ನಾಯಕ ಸ್ಥಾನವನ್ನೂ ಪಡೆಯಲಿ ಎಂಬುದು ನನ್ನ ಬಯಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry