ಶುಕ್ರವಾರ, ಫೆಬ್ರವರಿ 26, 2021
22 °C

ಕೋಲೆಬಸವ ಆಗಿರಬೇಕೇ ಲೋಕಾಯುಕ್ತ?

ಪದ್ಮರಾಜ ದಂಡಾವತಿ Updated:

ಅಕ್ಷರ ಗಾತ್ರ : | |

ಕೋಲೆಬಸವ ಆಗಿರಬೇಕೇ ಲೋಕಾಯುಕ್ತ?

ನಿರ್ಧಾರ ತೆಗೆದುಕೊಳ್ಳದೇ ಇರುವುದೂ ಒಂದು ನಿರ್ಧಾರ ಎನ್ನುತ್ತಾರೆ, ನಿಧಾನ ಮಾಡುವುದೂ ಒಂದು ನಿರ್ಧಾರ ಇರಬಹುದು. ಸರ್ಕಾರ ತನಗೆ ಯಾವಾಗ ಬೇಕೋ ಆಗ ನಿರ್ಧಾರ ತೆಗೆದುಕೊಳ್ಳುತ್ತದೆ. ಬೇಡ ಎನಿಸಿದಾಗ ಸುಮ್ಮನೆ ಎಳೆದಾಡುತ್ತ ಇರುತ್ತದೆ. ಎಳೆದಾಡಿದರೆ ಒಳ್ಳೆಯದು ಆಗುತ್ತದೆಯೇ? ಎಳೆದಾಡುವುದರ ಹಿಂದೆ ಮಂಥನ ಇದ್ದರೆ ಒಳ್ಳೆಯದು. ಆದರೆ, ಮಂಥನದ ನಂತರ ಅಮೃತವೇ ಬರುತ್ತದೆ ಎಂದು ಖಾತ್ರಿಯೇನೂ ಇಲ್ಲ. ಈಗ ಲೋಕಾಯುಕ್ತರ ನೇಮಕಕ್ಕೆ ನಡೆದಿರುವ ಮಂಥನದಲ್ಲಿ ಅಮೃತ ಬರುವ ಲಕ್ಷಣವೂ ಕಾಣುತ್ತಿಲ್ಲ. ಏಕೆಂದರೆ ಸರ್ಕಾರಕ್ಕೇ ಅಮೃತ ಬೇಕಾದಂತೆ ಅನಿಸುತ್ತಿಲ್ಲ!ವಿಚಿತ್ರ ಅಲ್ಲವೇ : ಈ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ  ವಿರುದ್ಧ ಹೋರಾಡಿ ಅಧಿಕಾರಕ್ಕೆ ಬಂದಿದೆ. ಆಗ ವಿರೋಧ ಪಕ್ಷದ ನಾಯಕರಾಗಿದ್ದ, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿನ ಸರ್ಕಾರದ ವಿರುದ್ಧ ತೋಳು ಮತ್ತು ತೊಡೆ ಎರಡೂ ತಟ್ಟಿ ಈಗ ಅಧಿಕಾರ ಅನುಭವಿಸುತ್ತಿದ್ದಾರೆ.ಈಗ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್‌  ಪಕ್ಷದ ಕೈಗೆ, ಹಿಂದಿನ ಸರ್ಕಾರದ ವಿರುದ್ಧ, ಆಗಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರು ಕೊಟ್ಟಿದ್ದ ವರದಿ ಒಂದು ದಿವ್ಯಾಸ್ತ್ರದಂತೆ ಒದಗಿ ಬಂದಿತ್ತು. ಅಂದರೆ, ಒಂದು ಸಂಸ್ಥೆ ಸ್ವತಂತ್ರವಾಗಿ ಇದ್ದರೆ, ಅದು ಯಾರ ಮರ್ಜಿಯಲ್ಲಿಯೂ ಕೆಲಸ ಮಾಡದೇ ಇದ್ದರೆ ಆಳುವ ಮುಖ್ಯಮಂತ್ರಿಯ ವಿರುದ್ಧವೇ ಅದು ವರದಿ ಕೊಡಬಹುದು ಎಂದು ಸಂತೋಷ್‌ ಹೆಗ್ಡೆಯವರು ತೋರಿಸಿಕೊಟ್ಟಿದ್ದರು. ಆ ಮೂಲಕ ಹೆಗ್ಡೆಯವರು ರಾಜ್ಯದ ಲೋಕಾಯುಕ್ತ ಸಂಸ್ಥೆಗೆ ಲೋಕಮಾನ್ಯತೆ ತಂದುಕೊಟ್ಟಿದ್ದರು.ಈಗ? ಸಂತೋಷ್‌ ಹೆಗ್ಡೆಯವರು ನಿವೃತ್ತರಾದ ನಂತರ ಆ ಸಂಸ್ಥೆಯನ್ನು ವ್ಯವಸ್ಥಿತವಾಗಿ ನಿರ್ನಾಮ ಮಾಡುವ ಕೈಂಕರ್ಯದಲ್ಲಿ ರಾಜಭವನವೂ ಸೇರಿದಂತೆ ಎಲ್ಲರೂ ಕೈ ಜೋಡಿಸಿದಂತೆ ಕಾಣುತ್ತದೆ. ಭ್ರಷ್ಟಾಚಾರದ ವಿರುದ್ಧ ಸಮರ ಸಾರಬೇಕಿದ್ದ ಸಂಸ್ಥೆಯೇ ಭ್ರಷ್ಟಾಚಾರದ ತವರು ಎನ್ನುವಂತೆ ಆಯಿತು. ಲೋಕಾಯುಕ್ತರು ರಜೆ ಮೇಲೆ ರಜೆ ಹಾಕಿ ತಲೆಮರೆಸಿಕೊಳ್ಳುವಂತೆ ಆಯಿತು. ಅವರ ಮಗನೇ ಜೈಲು ಸೇರಿದ. ಇದಕ್ಕೆ ಸಾಮಾನ್ಯ ಜನರು ಹೊಣೆಯೇ? ಇದು ನಿರ್ಧಾರದ ಸಮಸ್ಯೆ. ನಿರ್ಧಾರ ತೆಗೆದುಕೊಳ್ಳುವವರು ಸರಿಯಾದ ನಿರ್ಧಾರ ತೆಗೆದುಕೊಳ್ಳದೇ ಇರುವುದರ ಸಮಸ್ಯೆ.ಈಗ ಮತ್ತೆ ಅದೇ ಕಾಲಘಟ್ಟದಲ್ಲಿ ಇದ್ದೇವೆ. ಹೊಸ ಲೋಕಾಯುಕ್ತರ ನೇಮಕ ಆಗಬೇಕಾಗಿದೆ. ಸರ್ಕಾರ ತನ್ನ ನಿರ್ಧಾರವನ್ನು ಪ್ರಕಟಿಸಲು ಎಳೆದಾಡುತ್ತಿದೆ. ಈಗ ಸರ್ಕಾರದ ಮನಸ್ಸಿನಲ್ಲಿ ಇರುವ ಹೆಸರಿಗೆ ಸಾರ್ವಜನಿಕ ವಲಯದಲ್ಲಿ ಸಮ್ಮತಿ ಇರುವಂತೆ ಕಾಣುವುದಿಲ್ಲ. ಇದು ಅತ್ಯಂತ ಸೂಕ್ಷ್ಮ ವಿಚಾರ, ಒಂದು ಸಂಸ್ಥೆಯ ಘನತೆ ಗೌರವದ ವಿಚಾರ. ಅಲ್ಲಿ ಬಂದು ಕುಳಿತುಕೊಳ್ಳುವವರ ಘನತೆಯ ವಿಚಾರವೂ ಹೌದು.ಅಲ್ಲಿ ಬಂದು ಕುಳಿತುಕೊಳ್ಳುವವರು ಸಾಮಾನ್ಯ ಜನರೇನೂ ಆಗಿರುವುದಿಲ್ಲ. ಅವರು ಒಂದೋ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಯಾಗಿ ನಿವೃತ್ತರಾಗಿರುವವರು, ಇಲ್ಲವೇ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾಗಿರುವವರು. ಅಂಥವರ ಹೆಸರುಗಳನ್ನು ಪ್ರಸ್ತಾಪಿಸುವಾಗ ಸರ್ಕಾರ ಎಷ್ಟು ಎಂದರೆ ಅಷ್ಟು ಸೂಕ್ಷ್ಮವಾಗಿ ಇರಬೇಕು.ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ವಿಕ್ರಂಜಿತ್‌ ಸೇನ್‌ ಅವರನ್ನು ಸಂಪರ್ಕಿಸಿ, ‘ಲೋಕಾಯುಕ್ತ ಹುದ್ದೆಗೆ ನಿಮ್ಮ ಹೆಸರು ಪರಿಶೀಲನೆಯಲ್ಲಿ ಇದೆ, ಆಯ್ಕೆ ಮಾಡಲು ನಿಮ್ಮ ಒಪ್ಪಿಗೆ ಇದೆಯೇ’ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಕೇಳುವುದಕ್ಕಿಂತ ಮುಂಚೆ ಮುಖ್ಯಮಂತ್ರಿಗಳ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಳ್ಳಬೇಕಿತ್ತು! ಅಥವಾ ಲೋಕಾಯುಕ್ತರನ್ನು ನೇಮಿಸುವ ಸಭೆಯಲ್ಲಿ ಮುಖ್ಯಮಂತ್ರಿಗಳು ಸರ್ವಸಮ್ಮತಿ ಮೂಡಿಸಲಾದರೂ ಪ್ರಯತ್ನ ಮಾಡಬೇಕಿತ್ತು. ಈಗ ಏನಾಯಿತು ಎಂದರೆ ಸಭೆಯ ನಂತರ ಬಹಿರಂಗವಾದ ವಿಕ್ರಂಜಿತ್‌ ಸೇನ್‌ ಹೆಸರಿಗೆ ಮುಖ್ಯಮಂತ್ರಿಗಳ ಸಮ್ಮತಿಯಿಲ್ಲ ಎನ್ನುವಂತೆ ಆಗಿದೆ. ಆದರೆ, ಸಾರ್ವಜನಿಕ ವಲಯದಲ್ಲಿ ಸೇನ್‌ ಹೆಸರಿಗೆ ಹೆಚ್ಚಿನ ಮನ್ನಣೆ ಇದೆ!ಅಂದರೆ, ಮುಖ್ಯಮಂತ್ರಿಗಳು ಸಾರ್ವಜನಿಕ ವಲಯಕ್ಕೆ ಯಾವ ಸಂದೇಶ ಕೊಡಲು ಬಯಸುತ್ತಾರೆ? ಲೋಕಾಯುಕ್ತ ಸಂಸ್ಥೆ ಸ್ವತಂತ್ರವಾಗಿ ಇರಬೇಕು ಎಂದು ಈ ಸರ್ಕಾರ ಬಯಸುವುದಿಲ್ಲವೇ? ಹಿಂದಿನ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರು ತಮ್ಮ ಸಹಪಾಠಿ ನ್ಯಾಯಮೂರ್ತಿ ಸುಭಾಷ ಅಡಿ ಅವರನ್ನು ಉಪಲೋಕಾಯುಕ್ತರಾಗಿ ನೇಮಿಸಿದ್ದಕ್ಕಾಗಿ ಮುಖ್ಯಮಂತ್ರಿಗಳೂ ತಮ್ಮ ಸಹಪಾಠಿಯೊಬ್ಬರನ್ನು ಲೋಕಾಯುಕ್ತರಾಗಿ ನೇಮಿಸಲು ಹೊರಟಿದ್ದಾರೆಯೇ? ಇದು ವ್ಯತ್ಯಾಸದ ಸಮಸ್ಯೆ. ‘ಅವರು ಮಾಡಿಲ್ಲವೇ? ನಾವೇಕೆ ಮಾಡಬಾರದು?’ ಹಾಗಾದರೆ ಅವರ ಮತ್ತು ಇವರ ನಡುವೆ ವ್ಯತ್ಯಾಸ ಇಲ್ಲವೇ? ಯಾರು ಹೇಳಬೇಕು?ಅಡಿ ಅವರ ಪದಚ್ಯುತಿಗೆ ಸರ್ಕಾರ ಏಕೆ ಇಷ್ಟು ಹಟ ಮಾಡುತ್ತಿದೆ ? ಅವರು ಶೆಟ್ಟರ್‌  ಅವರ ಕಾಲದಲ್ಲಿ ನೇಮಕವಾದ ವ್ಯಕ್ತಿ ಎಂದೇ? ಲೋಕಾಯುಕ್ತ ಸಂಸ್ಥೆಯನ್ನು ಸೃಷ್ಟಿಸಿದ ಶಾಸನ ಸಭೆಗೆ ಆ ಸಂಸ್ಥೆಯನ್ನು ನೇರ್ಪುಗೊಳಿಸುವ ಅಧಿಕಾರವೂ ಇದೆ. ಹಾಗೆಂದು ಈಗ ಅದು ನಡೆಸಿರುವ ನೇರ್ಪುಗೊಳಿಸುವ ರೀತಿ ಸರಿ ಇದೆಯೇ? ಲೋಕಾಯುಕ್ತ ಮತ್ತು ಉಪಲೋಕಾಯುಕ್ತರನ್ನು ಪದಚ್ಯುತಗೊಳಿಸಲು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸುವಾಗ ಅದರ ಜೊತೆಗೇ ಆಯಾ ಹುದ್ದೆಗಳಲ್ಲಿ ಇರುವ ವ್ಯಕ್ತಿಗಳ ವಿರುದ್ಧ ಇರುವ ಆರೋಪಗಳನ್ನೂ ಲಗತ್ತಿಸಬೇಕಿತ್ತು ಮತ್ತು ಅದನ್ನು ವಿಧಾನಸಭಾಧ್ಯಕ್ಷರು ಪರಿಶೀಲಿಸಿ ತೀರ್ಮಾನ ಪ್ರಕಟಿಸಬೇಕಿತ್ತು.ಅಡಿ ಅವರ ವಿರುದ್ಧ ಇದ್ದ ಆರೋಪಗಳ ಬಗೆಗೆ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರಂಥ ಹಿರಿಯರು ಮತ್ತು ಕಾನೂನು ಓದಿದವರು ದಿನಕ್ಕೆ ಒಂದರಂತೆ ಮಾತನಾಡುವುದು ಸರಿಯಲ್ಲ. ಒಂದು ಸಾರಿ ಅವರು ಅಡಿ ಅವರ ವಿರುದ್ಧದ ಆರೋಪಗಳು ಸಾಕಾಗಲಾರವು ಎನ್ನುತ್ತಾರೆ, ಇನ್ನೊಂದು ಸಾರಿ ಆರೋಪಗಳು ಸಿಕ್ಕಿವೆ ಎನ್ನುತ್ತಾರೆ. ಹಾಗಾದರೆ ವಿಧಾನಸಭೆಯಲ್ಲಿ ಅಡಿ ವಿರುದ್ಧ ಪದಚ್ಯುತಿ ನಿರ್ಣಯ ಅಂಗೀಕಾರ  ಆಗಿದೆ ಎಂದು ಪ್ರಕಟಿಸುವಾಗ ಅವರ ವಿರುದ್ಧ ಸಾಕಷ್ಟು ಆರೋಪಗಳು ಇರಲಿಲ್ಲ ಎಂದು ಅರ್ಥವಾಗುತ್ತದೆ. ಸಭಾಧ್ಯಕ್ಷರು ಒಬ್ಬರೇ ಹೀಗೆ ಗಳಿಗೆಗೆ ಒಂದು ಮಾತನಾಡಿಲ್ಲ.ರಾಜ್ಯ ಸರ್ಕಾರದ ಅಡ್ವೊಕೇಟ್‌ ಜನರಲ್‌ ಅವರೂ ಹೀಗೆಯೇ ಮಾತನಾಡಿದ್ದಾರೆ. ಅವರಿಗೆ ‘ಮಾರ್ಗದರ್ಶನ ಮಾಡಬೇಕಾದ’ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರೂ ಹಾಗೆಯೇ ಮಾತನಾಡಿದ್ದಾರೆ. ಒಂದು ತಪ್ಪು ಮುಚ್ಚಿಕೊಳ್ಳಲು ಇನ್ನೊಂದು ತಪ್ಪು ಮಾಡುತ್ತೇವೆ. ಈಗ ವಿರೋಧ ಪಕ್ಷದ ನಾಯಕರು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಬಳಿ ಇರುವ ದಾಖಲೆಗಳನ್ನು ನೋಡಿದರೆ ಅಡಿ ಅವರ ಪದಚ್ಯುತಿ ನಿರ್ಣಯ ಕುರಿತು ವಿಧಾನಸಭೆಯ ಕಲಾಪದ ಎರಡು ದಾಖಲೆಗಳು ಇರುವಂತೆ ಕಾಣುತ್ತದೆ. ವಿರೋಧ ಪಕ್ಷದ ಬಳಿ ಇರುವ ಕಲಾಪ ದಾಖಲೆಯಲ್ಲಿ ಅಡಿ ಅವರ ಪದ್ಯಚುತಿ ನಿರ್ಣಯಕ್ಕೆ ಸಮ್ಮತಿ ಸಿಕ್ಕಿದೆ.

ಜಯಚಂದ್ರ ಅವರ ಬಳಿ ಇರುವ ದಾಖಲೆಯಲ್ಲಿ ಪದಚ್ಯುತಿ ನಿರ್ಣಯ ಸಲ್ಲಿಕೆಯಾಗಿದೆ ಅಷ್ಟೇ. ಹಾಗಾದರೆ, ‘ಸಲ್ಲಿಕೆಯಾಗಿಯೂ ಅದರ ಮೇಲೆ ಯಾವುದೇ ನಿರ್ಣಯ ತೆಗೆದುಕೊಳ್ಳದೇ ಇರುವ ಒಂದು ಅವಸ್ಥೆ ಇರಲು ಸಾಧ್ಯವೇ’ ಎಂದು ಕೇಳಿರುವ ಹಿರಿಯ ಕಾಂಗ್ರೆಸ್‌ ಮುಖಂಡ ಮತ್ತು ಮಾಜಿ ಸಭಾಧ್ಯಕ್ಷ ರಮೇಶ್‌ ಕುಮಾರ್‌ ಅವರ ಪ್ರಶ್ನೆಗೆ ಯಾರು ಉತ್ತರ ಕೊಡುತ್ತಾರೆ?ಅಡಿ ಅವರ ವಿರುದ್ಧ ಸಲ್ಲಿಕೆಯಾಗಿರುವ ಪದಚ್ಯುತಿ ನಿರ್ಣಯದ ಜೊತೆಗೆ ಇರಬೇಕಿದ್ದ ಆರೋಪಗಳು ಶಾಸನಸಭೆಯ ಹೊರಗಡೆ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆಯಾಗುತ್ತಿರುವುದು ಇನ್ನೊಂದು ಸೋಜಿಗ ಅಲ್ಲವೇ? ಅಥವಾ ಅಡಿ ಅವರು ಹೀಗೆ ತಮ್ಮ ಬಹಿರಂಗ ‘ವ್ಯಕ್ತಿತ್ವ ಹನನ’ದಿಂದ ಬೇಸತ್ತು ರಾಜೀನಾಮೆ ಕೊಟ್ಟು ಹೊರಟು ಬಿಡಲಿ ಎಂಬ ಹುನ್ನಾರ ಇದರ  ಹಿಂದೆ ಇರಬಹುದೇ?ನವೆಂಬರ್‌ 27ರಂದು ದಿಢೀರನೇ ಅಡಿ ಅವರ ವಿರುದ್ಧ ನಿರ್ಣಯ ಮಂಡನೆಯಾಯಿತು ಮತ್ತು ಅದನ್ನು ಸಭಾಧ್ಯಕ್ಷರು ‘ಒಪ್ಪಿಕೊಂಡಿದ್ದೇನೆ’ ಎಂದು ಪ್ರಕಟಿಸುತ್ತ ಅಷ್ಟೇ ದಿಢೀರನೆ ಕಲಾಪವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದರು. ಸಭಾಧ್ಯಕ್ಷರು, ಅಡಿ ಅವರ ವಿರುದ್ಧದ ಪದಚ್ಯುತಿ ನಿರ್ಣಯ ಒಪ್ಪಿಕೊಂಡಿದ್ದಾರೆ ಎಂದು ನಂತರ ವಿಧಾನಸಭೆಯ ಸಚಿವಾಲಯ ಕಾರ್ಯದರ್ಶಿಗಳು ಲೋಕಾಯುಕ್ತ ರಿಜಿಸ್ಟ್ರಾರ್‌ ಅವರಿಗೆ ಡಿಸೆಂಬರ್‌ 12ರಂದು ಪತ್ರವನ್ನೂ ಬರೆದರು.ತಮ್ಮ ಪದಚ್ಯುತಿ ಪ್ರಶ್ನಿಸಿ ಅಡಿ ಅವರು ಹೈಕೋರ್ಟ್‌ ಮೊರೆ ಹೋದರು. ಅದರ ವಿಚಾರಣೆ ಹಂತದಲ್ಲಿ ಸರ್ಕಾರದ ಅಡ್ವೊಕೇಟ್‌ ಜನರಲ್‌ ಅವರು ಅಡಿ ಅವರ ಕಾರ್ಯನಿರ್ವಹಣೆಗೆ ಸರ್ಕಾರದ ಅಡ್ಡಿಯಿಲ್ಲ ಎಂದು ಹೇಳಿಕೆ ನೀಡಿದರು.  ‘ಅಡಿ ಅವರ ವಿರುದ್ಧ ನಿರ್ಣಯ ಮಂಡನೆಯಾಗಿದೆ. ಆದರೆ, ಅದನ್ನು ಸಭಾಧ್ಯಕ್ಷರು ಒಪ್ಪಿಕೊಂಡಿಲ್ಲ’ ಎಂದು ಸಂಸದೀಯ ಸಚಿವ ಜಯಚಂದ್ರ ಡಿಸೆಂಬರ್‌ 21ರಂದು ಸ್ಪಷ್ಟನೆ ನೀಡಿದರು.ಈ ನಡುವಿನ 26 ದಿನಗಳಲ್ಲಿ ಯಾರೂ ಈ ಕೂದಲು ಸೀಳುವ ಹೇಳಿಕೆಯನ್ನು ನೀಡಿರಲಿಲ್ಲ. ವಾಸ್ತವದಲ್ಲಿ, ಅಡಿ ವಿರುದ್ಧದ ನಿರ್ಣಯಕ್ಕೆ ತಮ್ಮ ಸಮ್ಮತಿ ಸಿಕ್ಕಿಲ್ಲ ಎಂದು ಸ್ಪಷ್ಟನೆ ನೀಡುವುದು ಸಭಾಧ್ಯಕ್ಷರ ಕಚೇರಿಯ ಜವಾಬ್ದಾರಿಯೇ ಆಗಿತ್ತು. ಬದಲಿಗೆ, ‘ಉಪಲೋಕಾಯುಕ್ತ ಸುಭಾಷ ಅಡಿ ಅವರ ಪದಚ್ಯುತಿಗೆ ಸಂಬಂಧಿಸಿದಂತೆ ಸದನದಲ್ಲಿ ಪ್ರಸ್ತಾವ ಮಂಡಿಸಲಾಗಿದೆ. ಆದರೆ  ಅದನ್ನು ಸಭಾಧ್ಯಕ್ಷರು ಒಪ್ಪಿಕೊಂಡಿಲ್ಲ’ ಎಂದು ಅಡ್ವೊಕೇಟ್‌ ಜನರಲ್‌ ಅವರು ಇದೇ ತಿಂಗಳ 7ರಂದು ಹೇಳಿದ್ದಾರೆ.ಸಭಾಧ್ಯಕ್ಷರು ತಮ್ಮ ವರಸೆ ಬದಲಿಸಿ ಅಡಿ ವಿರುದ್ಧದ ನಿರ್ಣಯಕ್ಕೆ ಪೂರಕವಾದ ಆರೋಪಗಳು ತಮ್ಮ ಗಮನಕ್ಕೆ ಬಂದಿವೆ ಎಂದು ಈಗಷ್ಟೇ ಹೇಳಿದ್ದಾರೆ. ಹಾಗಾದರೆ ಅಡಿ ಅವರ ವಿರುದ್ಧ ಸಾಕಷ್ಟು ಆಧಾರಗಳು ಇಲ್ಲದೆ ಪದಚ್ಯುತಿ ನಿರ್ಣಯ ಮಂಡಿಸಲಾಯಿತು ಎಂದ ಅರ್ಥ ಆಗುವುದಿಲ್ಲವೇ? ಮತ್ತು  ಅವರ ಪದಚ್ಯುತಿ ನಿರ್ಣಯ ಒಪ್ಪಿಕೊಳ್ಳುವಂತೆ ಕಾಗೋಡು ತಿಮ್ಮಪ್ಪನವರ ಮೇಲೆ ತೀವ್ರ ಒತ್ತಡ ಇದೆ ಎಂದೂ  ಸ್ಪಷ್ಟವಾಗುತ್ತದೆ.ಈಗ ನಡೆದಿರುವ ವಿದ್ಯಮಾನಗಳನ್ನು ನೋಡಿದರೆ ತನ್ನ ಮಾತು ಕೇಳದವರು ಲೋಕಾಯುಕ್ತ ಸಂಸ್ಥೆಯಲ್ಲಿ ಇರಬಾರದು ಎಂದು ಸರ್ಕಾರ ಬಯಸುತ್ತಿದೆ ಎಂದು ಯಾರಾದರೂ ಅರ್ಥ ಮಾಡಿಕೊಳ್ಳುತ್ತಾರೆ. ಸ್ವತಂತ್ರ ಮನಸ್ಥಿತಿಯ ಒಬ್ಬ ಉಪಲೋಕಾಯುಕ್ತರನ್ನು ಪದಚ್ಯುತಗೊಳಿಸುವ ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ, ವಿಧಾನಸಭೆಗೆ, ಸಂಸದೀಯ ವ್ಯವಹಾರಗಳ ಸಚಿವರಿಗೆ, ಅಡ್ವೊಕೇಟ್‌ ಜನರಲ್‌ ಅವರಿಗೆ ಸಾಕಷ್ಟು ಇರಿಸು ಮುರಿಸು ಆಗಿದೆ.ಒಂದು ಸಾರಿ ಪದಚ್ಯುತಿ ನಿರ್ಣಯವನ್ನು ತಾವು ಒಪ್ಪಿಕೊಂಡಿರುವುದಾಗಿ ಪ್ರಕಟಿಸಿ ಹೈಕೊರ್ಟ್ ಮುಖ್ಯ ನ್ಯಾಯಮೂರ್ತಿಯವರ ಪರಿಶೀಲನೆಗೆ ಕಳಿಸಿಕೊಟ್ಟ ಮೇಲೆ ವಿಧಾನಸಭಾಧ್ಯಕ್ಷರ ಸತ್ವ ಪರೀಕ್ಷೆಯೂ ಶುರುವಾಗುತ್ತದೆ. ಮುಖ್ಯ ನ್ಯಾಯಮೂರ್ತಿಗಳು ನೇಮಿಸುವ ಪರಿಶೀಲನಾ ಸಮಿತಿ, ಪದಚ್ಯುತಿ ನಿರ್ಣಯದ ಜೊತೆಗೆ ಕಳಿಸಿರುವ ಆರೋಪಗಳಲ್ಲಿ ಯಾವ ಹುರುಳೂ ಇಲ್ಲ ಎಂದರೆ ಅದು ಸಭಾಧ್ಯಕ್ಷರಿಗೆ ಮುಖಭಂಗ ಅಲ್ಲವೇ? ಕಾಗೋಡು ತಿಮ್ಮಪ್ಪನವರು ಅದಕ್ಕೆ ಸಿದ್ಧರಿದ್ದಾರೆಯೇ?ಲೋಕಾಯುಕ್ತ ಹುದ್ದೆಗೆ ಹೆಸರು ಕೇಳಿ ಬಂದಿದ್ದ ನ್ಯಾಯಮೂರ್ತಿ ವಿಕ್ರಂಜಿತ್‌ ಸೇನ್‌ ಅವರು ಕರ್ನಾಟಕ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿಯೂ ಆಗಿದ್ದವರು. ಅವರಿಗೆ ಕರ್ನಾಟಕದ ಲೋಕಾಯುಕ್ತ ಸಂಸ್ಥೆಯಲ್ಲಿ ಮತ್ತು ಅದರ ಸುತ್ತಮುತ್ತ ನಡೆದಿರುವ ಹಾದಿರಂಪ, ಬೀದಿರಂಪಗಳು ಗೊತ್ತಿರುವುದಿಲ್ಲ ಎಂದು ಯಾರೂ ಭಾವಿಸಬಾರದು. ನಿವೃತ್ತ ನ್ಯಾಯಮೂರ್ತಿಗಳು ಯಾರೂ ಸರ್ಕಾರ ಕೊಡುವ ಸಂಬಳ ಮತ್ತು ಸವಲತ್ತಿನ ಆಸೆಗಾಗಿ ಲೋಕಾಯುಕ್ತ ಅಥವಾ ಉಪಲೋಕಾಯುಕ್ತರಾಗಿ ಬರಲು ತುದಿಗಾಲ ಮೇಲೆ ನಿಂತಿರುವುದಿಲ್ಲ. ಅವರಿಗೆ ರಾಜಿ ಸಂಧಾನದಲ್ಲಿ ನ್ಯಾಯಬದ್ಧವಾಗಿಯೇ ಸಾಕಷ್ಟು ಹಣ ಸಿಗುತ್ತಿದೆ.ಅದನ್ನು ಬಿಟ್ಟು ಸಮಾಜಕ್ಕೆ ಏನಾದರೂ ತಮ್ಮ ಕಾಲದಲ್ಲಿ ಒಳಿತು ಮಾಡಲು ಆಗುವುದಾದರೆ ಮಾಡೋಣ ಎಂದು ಲೋಕಾಯುಕ್ತ ಅಥವಾ ಉಪಲೋಕಾಯುಕ್ತರಾಗಲು  ಅವರು ಬರುತ್ತಾರೆ; ಭಾಸ್ಕರರಾವ್‌ ಅವರಂಥ ಕೆಲವು ಅಪವಾದಗಳೂ ಇರಬಹುದು. ಆದರೆ, ಸೇನ್‌ ಅವರಂಥವರೆಲ್ಲ ತೀರಾ ಸೂಕ್ಷ್ಮ ವ್ಯಕ್ತಿಗಳಾಗಿರುತ್ತಾರೆ. ಒಂದು ಸಾರಿ ಇಲ್ಲಿ ಏನೋ ವಿವಾದ ಇದೆ ಎಂದು ಅನಿಸಿದ ಕೂಡಲೇ ಅವರು ತಮ್ಮ ಅಸಮ್ಮತಿ ಸೂಚಿಸುತ್ತಾರೆ. ಈಗ ಅವರು ಅದನ್ನೇ ಮಾಡಿದ್ದಾರೆ.ಲೋಕಾಯುಕ್ತ ಸಂಸ್ಥೆ ಇರಿಯುವ ಹೋರಿಯಂತೆ ಇರಬೇಕು. ‘ಹರೆಯ’ ಕಳೆದುಕೊಂಡ ಎತ್ತಿನ ಹಾಗೆ ಅಲ್ಲ. ಸರ್ಕಾರದಲ್ಲಿ ಇದ್ದವರಿಗೆ ಅದು ಇರಿಯುತ್ತದೆ ಅಥವಾ ಇರಿಯಬಹುದು ಎಂಬ ಭಯ ಇರಬೇಕು. ಈಗ ನೋಡಿದರೆ ಸರ್ಕಾರಕ್ಕೆ ಇರಿಯುವ ಸಂಸ್ಥೆ ಬೇಡವಾಗಿದೆ. ಕೊಂಬು ಹಿಡಿದು ಪಳಗಿಸಬಲ್ಲ  ಅಥವಾ ಕೋಲೆಬಸವನ ಹಾಗೆ ಗೋಣು ಅಲುಗಾಡಿಸುವವರು ಬೇಕಾಗಿದೆ. ಸರ್ಕಾರ ಎಷ್ಟು ಬಲಿಷ್ಠವಾಗಿದೆ ಎಂದರೆ ಅದಕ್ಕೆ ಎತ್ತೇ ಸಿಗಬಹುದು. ಅದರಿಂದ ಜನರಿಗೆ ಒಳ್ಳೆಯದು ಆಗುತ್ತದೆಯೇ? ಜನರಿಗೆ ಒಳ್ಳೆಯದು ಮಾಡುವುದು ಯಾರಿಗೆ ಬೇಕಾಗಿದೆ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.