ಗುರುವಾರ , ಜೂನ್ 24, 2021
23 °C

ಕ್ಯಾನನ್ 700ಡಿ ಕಿರುಚಿತ್ರಕ್ಕೂ ಸೈ ಈ ಕ್ಯಾಮೆರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಿಎಸ್‌ಎಲ್‌ಆರ್ ಕ್ಯಾಮೆರಾಗಳು ಕೈಗೆಟುಕುವ ಬೆಲೆಗೆ ದೊರೆಯುತ್ತಿವೆ. ಆದರೆ ಕಡಿಮೆ ಬೆಲೆಯ ಡಿಎಸ್‌ಎಲ್‌ಆರ್ ಕ್ಯಾಮೆರಾಗಳನ್ನು ಪರಿಣತರು ಹತ್ತಿರವೂ ಸೇರಿಸುವುದಿಲ್ಲ. ಅವರು ಬಳಸುವುದು ಏನಿದ್ದರೂ ಅತಿ ಹೆಚ್ಚು ಬೆಲೆಯ ಕ್ಯಾಮೆರಾಗಳನ್ನು. ಇತ್ತ ಅತಿ ಕಡಿಮೆ

ಬೆಲೆಯೂ ಅಲ್ಲದ, ಅತ್ತ ಅತಿ ದುಬಾರಿಯೂ ಅಲ್ಲದ ಮಧ್ಯಮ ಶ್ರೇಣಿಯ ಒಂದು ಉತ್ತಮ ಕ್ಯಾಮೆರಾ ಕ್ಯಾನನ್ 700ಡಿ (Canon 700D). ಇದು ನಮ್ಮ ಈ ವಾರದ ಗ್ಯಾಜೆಟ್.

ಗುಣವೈಶಿಷ್ಟ್ಯಗಳು

ಡಿಜಿಟಲ್ ಎಸ್‌ಎಲ್‌ಆರ್, 18 ಮೆಗಾಪಿಕ್ಸೆಲ್, 22.3 x 14.9 ಮಿ.ಮೀ. ಗಾತ್ರದ ಸಿಮೋಸ್ (CMOS) ಸಂವೇದಕ (sensor), ಕ್ಯಾನನ್ ಇಎಫ್ ಲೆನ್ಸ್, 1/4000 ದಿಂದ 30 ಸೆಕೆಂಡು ತನಕ ಷಟರ್ ವೇಗ, ಐಎಸ್‌ಒ 100–6400 (12800), ಷಟರ್ ಪ್ರಿಯಾರಿಟಿ, ಅಪೆರ್ಚರ್  ಪ್ರಿಯಾರಿಟಿ, ಪ್ರೋಗ್ರಾಮ್, ಮ್ಯಾನ್ಯುವಲ್ ಇತ್ಯಾದಿ ಆಯ್ಕೆಗಳು, ಹಲವು ದೃಶ್ಯಗಳ ಆಯ್ಕೆ, ಮ್ಯಾಕ್ರೊ, ಡೆಪ್ತ್‌ ಆಫ್ ಫೀಲ್ಡ್ ಪ್ರಿವ್ಯೂ, ಎಕ್ಸ್ಪೋಷರ್ ಜಾಸ್ತಿ ಅಥವಾ ಕಡಿಮೆ ಮಾಡುವ ಸೌಲಭ್ಯ, ಫ್ಲಾಶ್, ಹೆಚ್ಚಿಗೆ ಫ್ಲಾಶ್ ಜೋಡಿಸುವ ಸೌಲಭ್ಯ, ಪೂರ್ತಿ ಹೈಡೆಫಿನಿಶನ್ (1920 x 1080, 30fps) ವಿಡಿಯೊ ಶೂಟಿಂಗ್, 7.7 ಸೆ.ಮೀ. ಗಾತ್ರದ ತೆರೆಯಬಲ್ಲ, ತಿರುಗಿಸಬಲ್ಲ, ಮಡಚಬಲ್ಲ ಸ್ಪರ್ಶಸಂವೇದಿ ಪರದೆ, 580 ಗ್ರಾಂ ತೂಕ, ಇತ್ಯಾದಿ. ಒಂದು ಮೇಲ್ದರ್ಜೆಯ ಡಿಎಸ್‌ಎಲ್‌ಆರ್ ಕ್ಯಾಮೆರಾದ ಎಲ್ಲ ಗುಣವೈಶಿಷ್ಟ್ಯಗಳು ಇದರಲ್ಲಿವೆ. ಬೆಲೆ ಸುಮಾರು ₨53,000 (18–55 ಮಿ.ಮೀ. ಲೆನ್ಸ್), ₨70,000 (18–135).

ನಾನು ಬಳಸಿದ್ದು 18–135ಮಿ.ಮೀ. ಲೆನ್ಸ್ ಜೊತೆ. ಕ್ಯಾಮೆರಾದ ರಚನೆ, ವಿನ್ಯಾಸ ಎಲ್ಲ ಕ್ಯಾನನ್ ಕ್ಯಾಮೆರಾಗಳಂತೆ ಇದೆ. ಬರಿಯ ಕ್ಯಾಮೆರಾವೇ ಸುಮಾರು 600 ಗ್ರಾಂ ತೂಕ ಇದೆ. ದೊಡ್ಡ ಲೆನ್ಸ್ ಸೇರಿಸಿದಾಗ ಇನ್ನಷ್ಟು ತೂಕ ಆಗುತ್ತದೆ. ದೊಡ್ಡ ಎಸ್‌ಎಲ್‌ಆರ್ ಬೇಕೆನ್ನುವವರು ಇವನ್ನೆಲ್ಲ ಸಹಿಸಿಕೊಳ್ಳಬೇಕು. ಇದು ಕ್ಯಾನನ್ 600ಡಿ ಮತ್ತು 650ಡಿ ಕ್ಯಾಮೆರಾಗಳಿಗೆ ಉತ್ತರಾಧಿಕಾರಿಯಾಗಿ ಬಂದಿದೆ.

ಅಂತೆಯೇ ಇದನ್ನು ಅವೆರಡರ ಸುಧಾರಿತ ಆವೃತ್ತಿ ಎನ್ನಬಹುದು. ಇದರಲ್ಲಿ ಪ್ರಮುಖ ಬದಲಾವಣೆ ಎಂದರೆ ಇದರ ಪ್ರೊಸೆಸರ್. ಅದು ನಿಜಕ್ಕೂ ಉತ್ತಮವಾಗಿದೆ. ತೆಗೆದ ಫೋಟೊಗಳ ಗುಣಮಟ್ಟ ಮತ್ತು ನಿಜವಾದ ಬಣ್ಣಗಳನ್ನು ಮೂಡಿಸುವಿಕೆಯಲ್ಲಿ ಈ ಕ್ಯಾಮೆರಾ ಒಂದು ಕೈ ಮೇಲು ಎನ್ನಬಹುದು. ಪ್ರೊಸೆಸರ್ ವೇಗವಾಗಿ ಕೆಲಸ ಮಾಡುತ್ತದೆ. ಹಲವು ಫೋಟೊಗಳನ್ನು ಅತಿ ವೇಗವಾಗಿ ತೆಗೆಯಬಹುದು. ಈ ಕ್ಯಾಮೆರಾದ ಎಲ್ಲ ವಿಶೇಷತೆಗಳ ಬಗ್ಗೆ ಪೂರ್ತಿಯಾಗಿ ಬರೆಯಬೇಕಾದರೆ ಕಾಮನಬಿಲ್ಲು ಪುರವಣಿಯ ಎಲ್ಲ ಪುಟಗಳು ಬೇಕು.

ಈ ಕ್ಯಾಮೆರಾದ ಒಂದು ವೈಶಿಷ್ಟ್ಯ ಎಂದರೆ ಇದರಲ್ಲಿ ಬಳಸಿರುವ ಸ್ಪರ್ಶಸಂವೇದಿ ಪರದೆ (touch screen). ಇದು ಹಲವು ರೀತಿಯಲ್ಲಿ ಉಪಯುಕ್ತ. ಫೋಟೊಗಳನ್ನು ಎರಡು ಬೆರಳು ಬಳಸಿ ದೊಡ್ಡದು ಚಿಕ್ಕದು ಮಾಡಬಹುದು. ಪರದೆಯಲ್ಲಿ ಮೂಡಿಬರುವ ದೃಶ್ಯವನ್ನು ನೋಡಿಕೊಂಡು ಪರದೆಯನ್ನು ಬೇಕಾದ ಜಾಗದಲ್ಲಿ ಮುಟ್ಟುವ ಮೂಲಕ ಆ ಜಾಗಕ್ಕೆ ಫೋಕಸ್ ಮಾಡಿ ಫೋಟೊ ತೆಗೆಯುವ ಸೌಲಭ್ಯ ಇದೆ.

ಇದನ್ನು ಬಳಸಿ ತೆಗೆದ ವಿಡಿಯೊ ಚೆನ್ನಾಗಿ ಮೂಡಿಬಂದಿದೆ. ಇದು ಹೈಡೆಫಿನಿಶನ್ ವಿಡಿಯೊ ಕೂಡ ಮಾಡಬಲ್ಲುದು. ಒಂದು ಪ್ರವೇಶ ಮಟ್ಟದ ಸಿನಿಮಾ ಮಾಡಲು ಇದನ್ನು ಬಳಸಬಹುದು. ಇದರಲ್ಲಿ ವಿಡಿಯೊ ಚಿತ್ರೀಕರಣ ಮಾಡುವಾಗ ಧ್ವನಿಯನ್ನು ಸ್ಟಿರಿಯೊ ವಿಧಾನದಲ್ಲಿ ರೆಕಾರ್ಡ್ ಮಾಡಿಕೊಳ್ಳಬಹುದು. ಹೆಚ್ಚಿಗೆ ಮೈಕ್ರೋಫೋನ್ ಜೋಡಿಸಲು ಕಿಂಡಿಯಿದೆ. ಆದರೆ ಲೈನ್-ಇನ್ ಸೌಲಭ್ಯವಿಲ್ಲ. ತಯಾರಿಸಿದ ವಿಡಿಯೊವನ್ನು ಎಚ್‌ಡಿಎಂಐ ಕೇಬಲ್ ಮೂಲಕ ಟಿ.ವಿ.ಗೆ ಜೋಡಿಸಿ ವೀಕ್ಷಿಸಬಹುದು. ಈ ಕ್ಯಾಮೆರಾದ ಒಂದು ಪ್ರಮುಖ ಬಾಧಕ ಎಂದರೆ ಇದರ ಬ್ಯಾಟರಿ ಹಸಿವು.

ಒಟ್ಟಿನಲ್ಲಿ ಹೇಳುವುದಾದರೆ ಒಂದು ಉತ್ತಮ, ಸ್ವಲ್ಪ ಹೆಚ್ಚಿಗೆ ಬೆಲೆಬಾಳುವ ಕ್ಯಾಮೆರಾ ಎನ್ನಬಹುದು.

ವಾರದ ಅಪ್

ಕಿಂಗ್‌ಸಾಫ್ಟ್‌ ಆಫೀಸ್ 

ಯಾರಾದರೂ ನಿಮಗೆ ಒಂದು ಮೈಕ್ರೋಸಾಫ್ಟ್‌ ಆಫೀಸ್ ಫೈಲ್ (ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್) ಕಳುಹಿಸಿದರೆ ಅದನ್ನು ನಿಮ್ಮ ಆಂಡ್ರೋಯಿಡ್ ಫೋನಿನಲ್ಲಿ ತೆರೆಯುವುದು ಹೇಗೆ? ಅದಕ್ಕೆ ಕೆಲವು ಕಿರುತಂತ್ರಾಂಶಗಳಿವೆ (ಆಪ್‌). ಅಂತಹ ಒಂದು ಉಪಯುಕ್ತ ಆಪ್ ಕಿಂಗ್‌ಸಾಫ್ಟ್‌ ಆಫೀಸ್ (Kingsoft Office). ಇದನ್ನು ಬಳಸಿ ನೀವು ವರ್ಡ್, ಎಕ್ಸೆಲ್ ಅಥವಾ ಪವರ್‌ಪಾಯಿಂಟ್‌ ಫೈಲುಗಳನ್ನು ತೆರೆಯಬಹುದು ಮತ್ತು ಅವುಗಳನ್ನು ಸಂಪಾದಿಸಬಹುದು.

ಹೊಸ ಕಡತ ತಯಾರಿಯನ್ನೂ ಮಾಡಬಹುದು. ಇದರಲ್ಲಿ ವರ್ಡ್ ಫೈಲ್ ತಯಾರಿಸುವಾಗ ಮತ್ತು ಓದುವಾಗ ಅದರಲ್ಲಿ ಕನ್ನಡ ಪಠ್ಯ (ಯುನಿಕೋಡ್) ಇದ್ದಲ್ಲಿ ಅದರ ರೆಂಡರಿಂಗ್ ಅಷ್ಟು ಸರಿಯಿಲ್ಲ. ಇದೇ ಸಮಸ್ಯೆ ಪವರ್‌ಪಾಯಿಂಟ್‌ಗೂ ಇದೆ. ಇದರ ಎಕ್ಸೆಲ್ (ಸ್ಪ್ರೆಡ್‌ಶೀಟ್) ಮಾತ್ರ ಕನ್ನಡವನ್ನು ಸರಿಯಾಗಿ ತೋರಿಸುತ್ತದೆ. ಇದರಲ್ಲಿ ತಯಾರಿಸಿದ ಕನ್ನಡ ಫೈಲಿನಲ್ಲಿ (ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್) ಕನ್ನಡ ಪಠ್ಯ ಸರಿಯಾಗಿಯೇ ದಾಖಲಾಗಿರುತ್ತದೆ. ಅಂದರೆ ಇದನ್ನು ಬಳಸಿ ಆಫೀಸ್ ಫೈಲ್ ತಯಾರಿಸಿ ಅದನ್ನು ಗಣಕದಲ್ಲಿ ತೆರೆದರೆ ಕನ್ನಡ ಪಠ್ಯ ಸರಿಯಾಗಿಯೇ ಇರುತ್ತದೆ.

ಗ್ಯಾಜೆಟ್ ಸುದ್ದಿ

ಸಕ್ಕರೆ ಬ್ಯಾಟರಿ

ಎಲ್ಲ ನಮೂನೆಯ ಪಿಷ್ಟಗಳು (ಸಕ್ಕರೆ, ಗ್ಲೂಕೋಸ್, ಫ್ರಕ್ಟೋಸ್...) ಶಕ್ತಿಯ ಆಗರ ಎಂಬುದನ್ನು ನಾವು ಪ್ರಾಥಮಿಕ ಶಾಲೆಯಲ್ಲೇ ಕಲಿತಿದ್ದೇವೆ. ಈ ಶಕ್ತಿಯನ್ನು ಬಳಸಿ ಬ್ಯಾಟರಿ ತಯಾರಿಸಿದರೆ ಹೇಗೆ? ಹೌದಲ್ಲವೇ? ಯಾಕೆ ಯಾರಿಗೂ ಈತನಕ ಈ ವಿಷಯ ಹೊಳೆಯಲಿಲ್ಲ ಎಂದು ಆಲೋಚಿಸುತ್ತಿದ್ದೀರಾ? ಈಗಷ್ಟೆ ವರ್ಜೀನಿಯ ಟೆಕ್‌ನಿಂದ ಬಂದ ಸುದ್ದಿಯ ಪ್ರಕಾರ ಅಲ್ಲಿಯ ವಿಜ್ಞಾನಿಗಳು ಗ್ಲೂಕೋಸ್‌ ಬಳಸಿ ಬ್ಯಾಟರಿ ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಅವರು 13 ಕಿಣ್ವಗಳನ್ನು (enzyme) ಬಳಸಿದ್ದಾರೆ.

ಇದಿನ್ನೂ ಪ್ರಯೋಗಾಲಯದಲ್ಲಿದೆ. ಯಾವಾಗ ಬಳಕೆಗೆ ಬರಬಹುದು ಎಂದು ತಿಳಿದಿಲ್ಲ. ಒಂದು ಶಕ್ತಿಶಾಲಿಯಾದ ಬ್ಯಾಟರಿಯಾಗಿ ಇದು ಹೊರಹೊಮ್ಮುತ್ತದೋ ಇಲ್ಲವೋ ಎಂದೂ ತಿಳಿದಿಲ್ಲ. ಸದ್ಯಕ್ಕೆ ನೀವು ಗ್ಲೂಕೋಸ್ ತಿಂದು ನಿಮ್ಮ ದೇಹದಲ್ಲಿ ಮಾತ್ರ ಶಕ್ತಿ ತಯಾರಿಸಬಹುದು.

ಗ್ಯಾಜೆಟ್ ತರ್ಲೆ

ಮುನ್ನಾಭಾಯಿಗೆ ಸ್ಯಾಮ್‌ಸಂಗ್ ಗೇರ್ ಸಿಕ್ಕಿದರೆ?

ಮೊಬೈಲ್ ಫೋನ್ ಮೂಲಕ ಉತ್ತರ ಕೇಳಿ ಪರೀಕ್ಷೆಯಲ್ಲಿ ಬರೆಯುವುದನ್ನು ಮುನ್ನಾಭಾಯಿ ಎಂಬಿಬಿಎಸ್ ಸಿನಿಮಾದಲ್ಲಿ ನೋಡಿದ್ದೀರಿ ತಾನೆ? ಇದರ ಮುಂದುವರೆದ ಆವೃತ್ತಿಯಾಗಿ ಸ್ಯಾಮ್‌ಸಂಗ್ ಗೇರ್ ಬಳಸಬಹುದು ಎಂಬುದಾಗಿ ಟ್ವಿಟರ್‌ನಲ್ಲಿ ಒಂದು ಜೋಕ್ ಹರಿದಾಡುತ್ತಿದೆ. ಈ ಗೇರ್ ಒಂದು ಮಾಮೂಲಿ ಕೈಗಡಿಯಾರದಂತೆ ಕಾಣಿಸುತ್ತದೆ. ಆದರೆ ಅದು ಸ್ಮಾರ್ಟ್‌ವಾಚ್ ಆಗಿದೆ. ಅದರ ಮೂಲಕ ಅಂತರಜಾಲ ಸಂಪರ್ಕ ಕೂಡ ಮಾಡಬಹುದು. ಅಂದರೆ ಪರೀಕ್ಷೆಯಲ್ಲಿ ನೀಡಿದ ಪ್ರಶ್ನೆಗಳಿಗೆ ಉತ್ತರ ಪತ್ತೆ ಹಚ್ಚಬಹುದು! ಇನ್ನು ಮುಂದೆ ಪರೀಕ್ಷಾ ಕೊಠಡಿಗೆ ಮೊಬೈಲ್ ಫೋನ್‌ಗಳ ಜೊತೆ ಕೈಗಡಿಯಾರಗಳನ್ನೂ ನಿಷೇಧಿಸಬೇಕಾಗಿ ಬರಬಹುದು.

ಗ್ಯಾಜೆಟ್ ಸಲಹೆ

ನರೇಂದ್ರ ಶಾಮನೂರು ಅವರ ಪ್ರಶ್ನೆ: ನಾನು ನನ್ನ ಮೈಕ್ರೋಮ್ಯಾಕ್ಸ್ ಫನ್‌ಬುಕ್ ಟ್ಯಾಬ್ಲೆಟ್‌ನಲ್ಲಿ ಆಪ್‌ಲಾಕ್ ಬಳಸಿ ಕೆಲವು ಪ್ರಮುಖ ಆಪ್‌ಗಳ ಬಳಕೆಯನ್ನು ನಿರ್ಬಂಧಿಸಿದ್ದೇನೆ. ಈಗ ನನಗೆ ಅದರ ಗುಪ್ತಪದ (ಪಾಸ್‌ವರ್ಡ್) ಮರೆತುಹೋಗಿದೆ. ನಾನು ಅದನ್ನು ಪ್ರಾರಂಭಿಸುವಾಗ ನನ್ನ ಜಿಮೈಲ್ ವಿಳಾಸ ನೀಡಿದ್ದೆ. ಅದರ ಮೂಲಕ ಗುಪ್ತಪದ ಪಡೆಯೋಣ ಎಂದರೆ ಅದರ ಗುಪ್ತಪದ ಕೂಡ ಮರೆತುಹೋಗಿದೆ. ಈಗ ಏನು ಮಾಡಬಹುದು?

ಉ: ಫ್ಯಾಕ್ಟರಿ ರಿಸೆಟ್ ಒಂದೇ ನಿಮಗೆ ಉಳಿದಿರುವ ದಾರಿ. ಸೆಟ್ಟಿಂಗ್ಸ್‌ಗೆ ಹೋಗಿ ಅಲ್ಲಿ Backup and reset ಎಂಬುದನ್ನು ಬಳಸಿ ಪೂರ್ತಿ ರಿಸೆಟ್ ಮಾಡಿ.

ನೆನಪಿಡಿ –ಹೀಗೆ ಮಾಡುವುದರಿಂದ ನಿಮ್ಮ ಎಲ್ಲ ಸಂಪರ್ಕ, ಸಂದೇಶ, ಫೋಟೊ ಅಳಿಸಿಹೋಗುತ್ತವೆ. ಮೊದಲೇ ಅವುಗಳ ಬ್ಯಾಕ್‌ಅಪ್ ತೆಗೆದುಕೊಳ್ಳುವುದು ಒಳ್ಳೆಯದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.