ಕ್ರಿಕೆಟ್‌: ಹಿತಾಸಕ್ತಿ ರಕ್ಷಣೆಯ ಇನ್ನಷ್ಟು ಮುಖಗಳು...

7

ಕ್ರಿಕೆಟ್‌: ಹಿತಾಸಕ್ತಿ ರಕ್ಷಣೆಯ ಇನ್ನಷ್ಟು ಮುಖಗಳು...

ಶೇಖರ್‌ ಗುಪ್ತ
Published:
Updated:
ಕ್ರಿಕೆಟ್‌: ಹಿತಾಸಕ್ತಿ ರಕ್ಷಣೆಯ ಇನ್ನಷ್ಟು ಮುಖಗಳು...

ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಸುಧಾರಣೆಗೆ, ಸುಪ್ರೀಂಕೋರ್ಟ್‌ ಕೈಗೊಂಡ ಕ್ರಮಗಳೆಲ್ಲ ಕುಲಗೆಟ್ಟಿವೆ. ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿಗಳ ಮಧ್ಯಪ್ರವೇಶದ ನಂತರವೂ ಭಾರತದ ಕ್ರಿಕೆಟ್‌ ಅನಾಥವಾಗಿರುವಂತೆ ಭಾಸವಾಗುತ್ತಿದೆ. ಸಹನೆಯಿಲ್ಲದ ಶಸ್ತ್ರಚಿಕಿತ್ಸಕನು ರೋಗಿಯ ಹೊಟ್ಟೆ ಕೊಯ್ದು ಮುಂದೇನು ಮಾಡಬೇಕು ಎಂದು ತೋಚದೆ ಹೊಲಿಗೆಯನ್ನೂ ಹಾಕದೆ ಗೊಂದಲದಲ್ಲಿ ಮುಳುಗಿರುವಂತೆ ಕಂಡು ಬರುತ್ತಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂಗ್ಲೆಂಡ್‌ಗೆ ತೆರಳಿರುವ ಭಾರತದ ಕ್ರಿಕೆಟ್‌ ತಂಡವು ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನೇ ಎದುರಿಸಬೇಕಾಗಿ ಬಂದಿರುವುದು ಏಕೆ? ಪಂದ್ಯಾವಳಿಗೆ ಕ್ರಿಕೆಟ್‌ ತಂಡವನ್ನು ಸಿದ್ಧಗೊಳಿಸುವುದರತ್ತ ಗಮನ ಕೇಂದ್ರೀಕರಿಸುವುದರ ಬದಲಿಗೆ, ಹೊಸ ಕೋಚ್‌ ನೇಮಕ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳಿಗೆ ಬಿಸಿಸಿಐ ಪ್ರತಿನಿಧಿಗಳು ಉತ್ತರ ನೀಡಲು ಮುಂದಾಗಿರುವುದು ಏಕೆ ಎಂಬ ಪ್ರಶ್ನೆಗಳಿಗೆ ಇದುವರೆಗೂ ಉತ್ತರ ಸಿಕ್ಕಿಲ್ಲ.

ದೆಹಲಿ ಕ್ರಿಕೆಟ್‌ನ ಆಡಳಿತ ನಿರ್ವಹಿಸಲು ಕೋರ್ಟ್‌ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿಯೊಬ್ಬರು ವರದಿಗಾರನೊಬ್ಬನನ್ನು ಬೆದರಿಸಿದ ಘಟನೆ ನಡೆದಿದೆ.  ಉಚಿತ ಪಾಸ್ ವಿತರಣೆಯಲ್ಲಿ ವರದಿಗಾರ ಈ ನ್ಯಾಯಮೂರ್ತಿಗಳ ನಡೆಯನ್ನು ಮತ್ತು ಅವರ ಮಗಳು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ  ಭಾಗಿಯಾಗಿರುವುದನ್ನು ಪ್ರಶ್ನಿಸಿದ್ದ.

ಭಾರತದ ಕ್ರಿಕೆಟ್‌ ಈಗ ಅತಿದೊಡ್ಡ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಆಟದ ಮೈದಾನ ಮತ್ತು ಬೋರ್ಡ್‌ ರೂಂನಲ್ಲಿಯೂ ಈ ಬಿಕ್ಕಟ್ಟು ಕಂಡು ಬರುತ್ತಿದೆ.  ಕ್ರಿಕೆಟಿಗರ ಪ್ರತಿಭೆ ಮತ್ತು ಪ್ರೇರಣೆಯ ಮಟ್ಟವೊಂದೇ ಭಾರತ ತಂಡವನ್ನು ಚಾಂಪಿಯನ್ಸ್‌ ಟ್ರೋಫಿಯತ್ತ ಕರೆದೊಯ್ಯಬಹುದಷ್ಟೆ.

ತಂಡ ಮತ್ತು ಆಡಳಿತ ಮಂಡಳಿಯಲ್ಲಿ ಒಡಕು ಇರುವುದು ವಾಸ್ತವ ಸಂಗತಿಯಾಗಿದೆ. ಐಸಿಸಿ ಬೋರ್ಡ್‌ ರೂಂನಲ್ಲಿಯೂ ಭಾರತವನ್ನು ಮೂಲೆಗುಂಪು ಮಾಡಲಾಗಿದೆ. ಠೇಂಕಾರದಿಂದ ವರ್ತಿಸುತ್ತಿದ್ದ ‘ಬಿಸಿಸಿಐ’ಯ ಪರಿಸ್ಥಿತಿಯು ಈಗ ಇತರರ ಆದೇಶಕ್ಕೆ ಬಾಲ ಅಲ್ಲಾಡಿಸುವ ನಾಯಿಯಂತಾಗಿದೆ.

‘ಬಿಸಿಸಿಐ’ದ ಆಡಳಿತ ನಿರ್ವಹಣೆ ಮತ್ತು ಸುಧಾರಣಾ ಕ್ರಮಗಳ ಜಾರಿಗೆ ಕೋರ್ಟ್‌ ನೇಮಿಸಿರುವ ಆಡಳಿತಗಾರರ ಸಮಿತಿಯಲ್ಲಿಯೇ   (ಸಿಒಎ) ಈಗ  ಆಂತರಿಕ ಭಿನ್ನಾಭಿಪ್ರಾಯ ಮತ್ತು  ಬಹುಬಗೆಯ ಹಿತಾಸಕ್ತಿ ಸಂಘರ್ಷದ ಕಾರಣಕ್ಕೆ ಒಡಕು ಮೂಡಿದೆ. ಇತಿಹಾಸ ತಜ್ಞ ಮತ್ತು ಬುದ್ಧಿಜೀವಿ ರಾಮಚಂದ್ರ ಗುಹಾ ಅವರು ‘ಸಿಒಎ’ನಲ್ಲಿನ ಹಿತಾಸಕ್ತಿ ಸಂಘರ್ಷಗಳ ಬಗ್ಗೆ  ಬಹಿರಂಗವಾಗಿ ದನಿ ಎತ್ತಿರುವುದಕ್ಕೆ, ಅವರ ಅನಿಸಿಕೆಗಳನ್ನೆಲ್ಲ ಒಪ್ಪಿಕೊಳ್ಳದಿದ್ದರೂ ಕ್ರಿಕೆಟ್‌ ಅಭಿಮಾನಿಗಳೆಲ್ಲ ಅವರಿಗೆ ಕೃತಜ್ಞರಾಗಿರಬೇಕು.

ಸ್ಪಾಟ್‌ ಫಿಕ್ಸಿಂಗ್‌ ವಿವಾದ ಮತ್ತು ಅದರ ವಿಚಾರಣೆಗಾಗಿ ನಿವೃತ್ತ ನ್ಯಾಯಮೂರ್ತಿ ಮುಕುಲ್‌ ಮುದ್ಗಲ್‌ ಅವರ ನೇತೃತ್ವದಲ್ಲಿನ ಸಮಿತಿ ರಚನೆಯೊಂದಿಗೆ ನಾಲ್ಕು ವರ್ಷಗಳ ಹಿಂದೆ ಕ್ರಿಕೆಟ್‌ನಲ್ಲಿ ನ್ಯಾಯಾಂಗದ ಮಧ್ಯಪ್ರವೇಶ ಆರಂಭವಾಗಿತ್ತು. ನಂತರದ ವರ್ಷಗಳಲ್ಲಿ ಇತರ ಸಂಗತಿಗಳು ಬೆಳಕಿಗೆ ಬಂದಿದ್ದರಿಂದ ಇದು ಇನ್ನಷ್ಟು ಹೆಚ್ಚಳಗೊಂಡಿತು. ಅಂತಿಮವಾಗಿ ಸುಪ್ರೀಂಕೋರ್ಟ್‌, ಆರ್‌. ಎಂ. ಲೋಧಾ ನೇತೃತ್ವದಲ್ಲಿ ಮೂವರು ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ರಚಿಸಿತ್ತು. ಸಮಿತಿಯು 12 ತಿಂಗಳುಗಳ ಕಾಲ ಪರಿಶ್ರಮಪಟ್ಟು, ‘ಬಿಸಿಸಿಐ’ನ ಆಡಳಿತ ನಿರ್ವಹಣೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ವರದಿ ಸಲ್ಲಿಸಿತ್ತು.

ವರದಿಯ ಶಿಫಾರಸುಗಳನ್ನು 2016ರ ಅಕ್ಟೋಬರ್‌ ತಿಂಗಳಾಂತ್ಯದ ಹೊತ್ತಿಗೆ ಜಾರಿಗೆ ತರಬೇಕು ಎಂದು ಕೋರ್ಟ್‌, ‘ಬಿಸಿಸಿಐ’ಗೆ ಕಟ್ಟಪ್ಪಣೆ ಮಾಡಿತ್ತು.  ಕೋರ್ಟ್‌ ಆದೇಶ ಪಾಲಿಸದ ಕಾರಣಕ್ಕೆ, ಮಂಡಳಿಯ ಅಧ್ಯಕ್ಷ ಅನುರಾಗ್‌ ಠಾಕೂರ್‌ ಮತ್ತು ಕಾರ್ಯದರ್ಶಿ ಅಜಯ್‌ ಶಿರ್ಕೆ ಅವರನ್ನು ವಜಾ ಮಾಡಿತ್ತು. ಲೋಧಾ ಸಮಿತಿಯ ಶಿಫಾರಸಿನ ಅನ್ವಯ ಕೋರ್ಟ್‌, ಆಡಳಿತಗಾರರ ಸಮಿತಿ (ಸಿಒಎ) ನೇಮಿಸಿತ್ತು. ಸುಧಾರಣಾ ಕ್ರಮಗಳನ್ನು ಜಾರಿಗೆ ತರುವುದು ಮತ್ತು ತಾತ್ಪೂರ್ತಿಕವಾಗಿ ಕ್ರಿಕೆಟ್‌ ಮಂಡಳಿಯ ಆಡಳಿತ ನಿರ್ವಹಣೆ ಮಾಡುವ ಹೊಣೆಗಾರಿಕೆಯನ್ನು ಈ ಸಮಿತಿಗೆ ಒಪ್ಪಿಸಲಾಗಿತ್ತು.

ಈ ಸಮಿತಿಯ (ಸಿಒಎ) ಮುಖ್ಯಸ್ಥರನ್ನಾಗಿ ಮಾಜಿ ಮಹಾ ಲೇಖಪಾಲ (ಸಿಎಜಿ) ವಿನೋದ್‌ ರೈ ಅವರನ್ನು ನೇಮಿಸಲಾಗಿತ್ತು.  ನ್ಯಾಯಮೂರ್ತಿ ಲೋಧಾ ಅವರೇ ಬಹುಶಃ ರೈ ಅವರನ್ನು ಆಯ್ಕೆ ಮಾಡಿರಬಹುದು ಎಂದು ನಾವು ಊಹಿಸಬಹುದು.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆ ನಿಭಾಯಿಸುವಾಗ ಲೋಧಾ ಅವರು ಕೇರಳದ ಪದ್ಮನಾಭಸ್ವಾಮಿ ದೇವಸ್ಥಾನವನ್ನು ಕೋರ್ಟ್‌ ನೇಮಿಸಿದ ಆಡಳಿತ ಸಮಿತಿಯ ಸುಪರ್ದಿಗೆ ಒಪ್ಪಿಸಿದ್ದರು. ದೇವಸ್ಥಾನದ ಹಣಕಾಸು ಲೆಕ್ಕಪತ್ರ ನಡೆಸುವುದರ ಮುಖ್ಯಸ್ಥ  ಹುದ್ದೆ ನಿರ್ವಹಿಸಲು ರೈ ಅವರನ್ನು ಕೇಳಿಕೊಂಡಿದ್ದರು.

ಭಾರತೀಯ ವೈದ್ಯಕೀಯ ಮಂಡಳಿಯ(ಎಂಸಿಐ) ಸುಧಾರಣೆಗೆ ಸುಪ್ರೀಂಕೋರ್ಟ್‌ ಪೀಠವು ರಚಿಸಿದ್ದ ಸಮಿತಿಯ ಅಧ್ಯಕ್ಷರನ್ನಾಗಿ ನ್ಯಾಯಮೂರ್ತಿ ಲೋಧಾ ಅವರನ್ನೇ ನೇಮಿಸಲಾಗಿತ್ತು. ಲೋಧಾ ಅವರು ಈ ಸಮಿತಿಯಲ್ಲಿಯೂ ರೈ ಅವರನ್ನೂ ಸೇರಿಸಿಕೊಂಡಿದ್ದರು.

‘ಸಿಒಎ’ದ ಇತರ ಮೂವರು ಸದಸ್ಯರನ್ನು ನೇಮಿಸಿಕೊಳ್ಳುವಾಗ, ಮುಂಬೈನ ಹಣಕಾಸು ಸಂಸ್ಥೆ ಐಡಿಎಫ್‌ಸಿ ಲಿಮಿಟೆಡ್‌ನ ಸಿಇಒ ವಿಕ್ರಂ ಲಿಮಯೆ ಅವರನ್ನು  ರೈ ಅವರೇ ಆಯ್ಕೆ ಮಾಡಿಕೊಂಡಿರಬಹುದು. ರೈ ಅವರು ಇದೇ ಕಂಪೆನಿಯ ಕಾರ್ಯನಿರ್ವಾಹಕಯೇತರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಡಯಾನಾ ಎಡುಲ್ಜಿ ಮತ್ತು ರಾಮಚಂದ್ರ ಗುಹಾ ಅವರು ಹೇಗೆ ಆಯ್ಕೆಯಾದರು ಎನ್ನುವುದು ಸ್ಪಷ್ಟವಾಗಿಲ್ಲ.

‘ಬಿಸಿಸಿಐ’ ಮೇಲೆ ಸಂಪೂರ್ಣ ಹಿಡಿತ ಹೊಂದಿರುವ ‘ಸಿಒಎ’, ನಾಲ್ಕು ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದೆ.  ಸುಪ್ರೀಂಕೋರ್ಟ್‌ನ ಕ್ರಿಕೆಟ್‌ ಪೀಠವು ಕೂಡ, ಈ ವಿಷಯದಲ್ಲಿ ಸಕಾರಾತ್ಮಕವಾಗಿಯೇ ತನ್ನ ಕರ್ತವ್ಯ ನಿಭಾಯಿಸುತ್ತಿದೆ. ಧರ್ಮಶಾಲಾದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಪಂದ್ಯಕ್ಕೆ ₹2.5 ಕೋಟಿ ಬಿಡುಗಡೆ ಮಾಡುವಂತಹ ಸಣ್ಣ ನಿರ್ಧಾರ ಕೈಗೊಳ್ಳಲೂ ಪೀಠ ಸಭೆ ಸೇರಿತ್ತು. ಇನ್ನೂ ಎಷ್ಟು ದಿನಗಳವರೆಗೆ ‘ಸಿಒಎ’ ಅಧಿಕಾರ ನಡೆಸಲಿದೆ ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ. ಕೋರ್ಟ್‌ ಕೂಡ ಈ  ಬಗ್ಗೆ ಗಡುವು ನಿಗದಿಪಡಿಸಿಲ್ಲ.

ಈ ಮಧ್ಯೆ, ಇನ್ನೊಂದು ಬೆಳವಣಿಗೆಯಲ್ಲಿ ಭಾರತದ ಕ್ರಿಕೆಟ್‌ ಮಂಡಳಿಗೆ ಜಾಗತಿಕ ವೇದಿಕೆಯಲ್ಲಿ ಹೀನಾಯ ಸೋಲು ಉಂಟಾಗಿದೆ.   ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯ (ಐಸಿಸಿ) ಅಧಿಕಾರದಲ್ಲಿ ಸುಧಾರಣೆ ತರುವ, ವರಮಾನ ಹಂಚಿಕೆಯ ಮತ್ತು ಮತದಾನದ ನಿಯಮಗಳ ಕುರಿತು ‘ಬಿಸಿಸಿಐ’ ತಳೆದ ನಿಲುವಿಗೆ ಭಾರಿ ಸೋಲು ಉಂಟಾಗಿದೆ.

ಆಸ್ಟ್ರೇಲಿಯಾ, ಇಂಗ್ಲೆಂಡ್‌ ಮತ್ತು ಭಾರತ ಒಳಗೊಂಡ ಮೂವರು ದೊಡ್ಡಣ್ಣರ ಮುಖಂಡನಾಗಿದ್ದ ‘ಬಿಸಿಸಿಐ’,ಇದುವರೆಗೆ ಯಾವತ್ತೂ ಸೋಲು ಕಂಡಿರಲಿಲ್ಲ. ಈಗ 13–1 ಮತಗಳಿಂದ ಹೀನಾಯ ಸೋಲು ಕಂಡಿದೆ.

ಈ ವಿಷಯದಲ್ಲಿ ‘ಸಿಒಎ’, ‘ಬಿಸಿಸಿಐ’ಗೆ ಹೋರಾಟ ನಡೆಸಲು ಅವಕಾಶವನ್ನೇ ನೀಡಲಿಲ್ಲ. ‘ಬಿಸಿಸಿಐ’ಗೆ ಬರೆದ ಸರಣಿ ಪತ್ರಗಳನ್ನೇ ನೋಡಿದರೆ ಇದು ಸ್ಪಷ್ಟಗೊಳ್ಳುತ್ತದೆ. ನ್ಯಾಯಾಲಯದಲ್ಲಿ ಪ್ರಮಾಣ ಪತ್ರ ಸಲ್ಲಿಸುವುದೂ ಸೇರಿದಂತೆ ಯಾವುದೇ ಬಗೆಯ ಕ್ರಮ ಕೈಗೊಳ್ಳಲು ಬಿಡಲಿಲ್ಲ. ಇಂತಹ ಬೆಳವಣಿಗೆಯನ್ನು ನಾನು ಸರ್ಕಾರಿ ನೆನಪೋಲೆಗಳಲ್ಲೂ ಯಾವತ್ತೂ ಕಂಡಿಲ್ಲ.

ನಮ್ಮ ಕ್ರಿಕೆಟ್‌ ತಂಡವೂ ಈಗ ಇಬ್ಭಾಗವಾಗಿದೆ. ನಾಯಕ ಮತ್ತು ಕೋಚ್‌ ಪರಸ್ಪರ ಕತ್ತಿ ಮಸೆಯುತ್ತಿದ್ದಾರೆ. ಪುಟ್ಟ ವಿಶ್ವಕಪ್‌ ನಡೆಯುವ ಸಂದರ್ಭದಲ್ಲಿಯೇ ಕೋಚ್‌ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇವೆಲ್ಲಕ್ಕೆ ಕಳಶ ಇಟ್ಟಂತೆ, ‘ಸಿಒಎ’ದ ಪ್ರಮುಖ ಸದಸ್ಯರೊಬ್ಬರು ತಮ್ಮ ಕೆಲ ಪತ್ರಗಳನ್ನು ಬಹಿರಂಗಪಡಿಸಿದ್ದಾರೆ. ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು  ಹಿರಿಯ ಆಟಗಾರ ಮಹೇಂದ್ರ ಸಿಂಗ್‌ ದೋನಿ ಅವರ  ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಹ ಮಾತುಗಳನ್ನಾಡಿದ್ದಾರೆ.

ಭಾರತದ ಕ್ರಿಕೆಟ್‌ ರಂಗದಲ್ಲಿ ಎಲ್ಲರಿಗೂ ಗೊತ್ತಿರುವಂತಹ ಆಟಗಾರರ ಅದರಲ್ಲೂ ವಿಶೇಷವಾಗಿ ಮಾಜಿ ತಾರೆಗಳ ಹಿತಾಸಕ್ತಿ ಸಂಘರ್ಷಗಳನ್ನು ಗುಹಾ ಅವರ ಪತ್ರ ಬಹಿರಂಗಪಡಿಸಿದೆ. ‘ಬಿಸಿಸಿಐ’ ಆಡಳಿತ ಮಂಡಳಿಯಲ್ಲಿನ ಹಿತಾಸಕ್ತಿ ಸಂಘರ್ಷಗಳನ್ನು ಕೊನೆಗೊಳಿಸುವುದೇ ‘ಸಿಒಎ’ದ  ಮುಖ್ಯ ಕೆಲಸವಾಗಿರುವಾಗ, ಆ ಬಗ್ಗೆ ಮಾಹಿತಿ ಬಹಿರಂಗಪಡಿಸಿರುವುದು ಮಹತ್ವದ ವಿದ್ಯಮಾನವಾಗಿದೆ.

ಭಾರತದ ಕ್ರಿಕೆಟ್‌ನಲ್ಲಿ ನ್ಯಾಯಾಂಗದ ಕ್ರಿಯಾಶೀಲತೆಯು, ಇನ್ನಷ್ಟು ಮಹತ್ವದ  ಗಂಭೀರ ಸ್ವರೂಪದ ಹಿತಾಸಕ್ತಿ ಸಂಘರ್ಷಗಳ ಮೇಲೆ ಬೆಳಕು ಚೆಲ್ಲಲಿದೆ. ಗರಿಷ್ಠ ನಿಯಂತ್ರಣಕ್ಕೆ ಒಳಪಟ್ಟಿರುವ ಹಣಕಾಸು ಮಾರುಕಟ್ಟೆ, ಬ್ಯಾಂಕಿಂಗ್, ಅಧಿಕಾರಶಾಹಿ ಹಾಗೂ ಕಾರ್ಪೊರೇಟ್‌ ಜಗತ್ತಿನ ಮಧ್ಯೆ ಇರುವ ಸಂಬಂಧಗಳ ಮೇಲೆಯೂ ಇದರ ಪರಿಣಾಮ ಕಂಡು ಬರಲಿದೆ.

‘ಸಿಒಎ’ನ ಕಾರ್ಯವೈಖರಿಯನ್ನು ನಿಯಮಿತವಾಗಿ ಗಮನಿಸುತ್ತ ಬಂದಿದ್ದರೆ ಕೆಲ ಸಂಗತಿಗಳು ಸ್ಪಷ್ಟಗೊಳ್ಳುತ್ತವೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸುಧಾರಣೆ ಮತ್ತು ಪುನರ್‌ ರಚನೆ ಉದ್ದೇಶಕ್ಕೆ ಕೇಂದ್ರ ಸರ್ಕಾರ ರಚಿಸಿರುವ ಅತ್ಯಂತ ಪ್ರಭಾವಶಾಲಿ ಬ್ಯಾಂಕಿಂಗ್ ಮಂಡಳಿಯ (ಬಿಬಿಬಿ) ಮುಖ್ಯಸ್ಥರಾಗಿರುವ  ವಿನೋದ್‌ ರೈ, ಸರ್ಕಾರಿ ಬ್ಯಾಂಕ್‌ಗಳಿಗೆ ಪ್ರತಿಸ್ಪರ್ಧಿಯಾಗಿರುವ ಖಾಸಗಿ ವಲಯದ ಐಡಿಎಫ್‌ಸಿ ಬ್ಯಾಂಕ್‌ನ ಪ್ರವರ್ತಕ ಸಂಸ್ಥೆಯಾಗಿರುವ ಐಡಿಎಫ್‌ಸಿಯ ಅಧ್ಯಕ್ಷರೂ ಆಗಿದ್ದಾರೆ. ಇಷ್ಟೇ ಅಲ್ಲ, ರೈ ಅವರು ತಮ್ಮದೇ ಸಂಸ್ಥೆಯ ಸಿಇಒ ಲಿಮಯೆ ಅವರನ್ನು ‘ಸಿಒಎ’ನಲ್ಲಿ ಸದಸ್ಯರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ.

ಇದು ನಿಜಕ್ಕೂ ಕುತೂಹಲಕರ ಸಂಗತಿಯಾಗಿದೆ. ಲಿಮಯೆ ಅವರನ್ನು ರಾಷ್ಟ್ರೀಯ ಷೇರುಪೇಟೆಯ (ಎನ್‌ಎಸ್‌ಇ)  ಸಿಇಒ ಆಗಿ ನೇಮಿಸಲಾಗಿದೆ. ಈ ಷೇರುಪೇಟೆಯಲ್ಲಿ ದೇಶದ  ಬಂಡವಾಳ ಮಾರುಕಟ್ಟೆಯ ಶೇ 80ರಷ್ಟು ವಹಿವಾಟು ನಡೆಯುತ್ತದೆ. ತಿಂಗಳುಗಳವರೆಗೆ ಇದಕ್ಕೆ ಮುಖ್ಯಸ್ಥರೇ ಇದ್ದಿರಲಿಲ್ಲ. ಜತೆಗೆ, ವಹಿವಾಟಿನಲ್ಲಿನ ಅವ್ಯವಹಾರ ಮತ್ತು ವಂಚನೆ ಪ್ರಕರಣಗಳ ಬಗ್ಗೆ ಮೂರು ಹಂತದ ಲೆಕ್ಕಪತ್ರ ತಪಾಸಣೆ ನಡೆಯುತ್ತಿದೆ.

ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಲಿಮಯೆ ಅವರು ಅಧಿಕಾರ ವಹಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿಲ್ಲ. ‘ಸಿಒಎ’ದ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಕೊಡುವವರೆಗೆ ಅವರ ನೇಮಕಾತಿಗೆ ಸಮ್ಮತಿ ಸಿಗುವ ಸಾಧ್ಯತೆ ಇಲ್ಲ. ಈ ವಿಷಯದಲ್ಲಿ ‘ಸೆಬಿ’ ತಳೆದಿರುವ ದಿಟ್ಟ ನಿಲುವನ್ನು ಶ್ಲಾಘಿಸಲೇಬೇಕು.

ಐಪಿಎಲ್‌ನ ಬಹುತೇಕ ಫ್ರಾಂಚೈಸಿಗಳು ಒಂದು ಅಥವಾ ಅದಕ್ಕಿಂತ ಹೆಚ್ಚು ಕಂಪೆನಿಗಳನ್ನು ಷೇರುಪೇಟೆಯಲ್ಲಿ ನೋಂದಾಯಿಸಿವೆ.  ಎಲ್ಲ ಫ್ರಾಂಚೈಸಿಗಳು ಮತ್ತು ಖಾಸಗಿ ಕಂಪೆನಿಗಳು ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಇಂಗಿತ ಹೊಂದಿವೆ. ಹಾಗಿದ್ದರೆ ಲಿಮಯೆ ಅವರು ಎರಡೂ ಕಡೆಗಳಲ್ಲಿ ಅಧಿಕಾರ ನಡೆಸಲು ಸಾಧ್ಯವೆ? ‘ಬಿಸಿಸಿಐ’ನ ಆಡಳಿತ ನಿರ್ವಹಿಸುತ್ತ, ಐಡಿಎಫ್‌ಸಿಯ ಷೇರುದಾರರ ಕೆಲಸಗಳನ್ನು ನಿಭಾಯಿಸಲು ಅವರು ಎಷ್ಟು ಸಮಯ ವ್ಯಯ ಮಾಡುತ್ತಾರೆ ಎನ್ನುವ ಪ್ರಶ್ನೆಗಳೂ ಇಲ್ಲಿ ಉದ್ಭವಿಸುತ್ತವೆ.

ಇತರ ಹಿತಾಸಕ್ತಿ ಸಂಘರ್ಷಗಳೂ ಇಲ್ಲಿ ಬೆಳಕಿಗೆ ಬಂದಿವೆ. ‘ಬಿಸಿಸಿಐ’ ತನ್ನ ಲೆಕ್ಕಪತ್ರಗಳ ತಪಾಸಣೆಗೆ ‘ಎನ್‌ಎಸ್‌ಇ’ ನಿರ್ದೇಶಕರೊಬ್ಬರಿಗೆ ಸೇರಿದ ಸಂಸ್ಥೆಗೆ ಗುತ್ತಿಗೆ ನೀಡಿದೆ. ಈ ಬಗ್ಗೆ ಪ್ರಶ್ನೆಗಳು  ಉದ್ಭವಿಸಿದಾಗ ಈ ಗುತ್ತಿಗೆಯನ್ನು ರದ್ದುಪಡಿಸಲಾಗಿದೆ.

‘ಸಿಒಎ’ನಲ್ಲಿನ  ನನ್ನ ಕೆಲಸ ಇದೇ ಆಗಸ್ಟ್‌ನಲ್ಲಿ ಕೊನೆಗೊಳ್ಳಲಿದೆ. ಒಂದು ವೇಳೆ ಹಾಗೆ ಆಗದಿದ್ದರೆ, ನನ್ನನ್ನು ಈ ಹೊಣೆಗಾರಿಕೆಯಿಂದ ಬಿಡುಗಡೆ ಮಾಡಲು ನಾನು ಕೋರ್ಟ್‌ಗೆ ಮನವಿ ಮಾಡಿಕೊಳ್ಳುವೆ’ ಎಂದು ಲಿಮಯೆ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ‘ದಿ ಇಕನಾಮಿಕ್ ಟೈಮ್ಸ್‌’ ಪತ್ರಿಕೆಯು ಎರಡು ವಾರಗಳ ಹಿಂದೆ ವರದಿ ಮಾಡಿತ್ತು. ಗುಹಾ ಅವರ ರಾಜೀನಾಮೆ ನಂತರ ಮುಂದಿನ ಎರಡು ತಿಂಗಳಲ್ಲಿ ‘ಸಿಒಎ’ದ ಇನ್ನೊಂದು ವಿಕೆಟ್‌ ಪತನಗೊಳ್ಳುವುದು ಅನಿವಾರ್ಯವಾದರೆ, ಭಾರತದ ಕ್ರಿಕೆಟ್‌ ಮಂಡಳಿ ಭವಿಷ್ಯ ಏನಾಗಲಿದೆ? ಮುಖ್ಯಸ್ಥರಿಲ್ಲದೇ ಈಗಾಗಲೇ ‘ಎನ್‌ಎಸ್‌ಇ’ ನಿತ್ರಾಣಗೊಂಡಿದೆ.

ಮುಂಬರುವ ದಿನಗಳಲ್ಲಿ, ಹಣಕಾಸು ಮತ್ತು ಬ್ಯಾಂಕಿಂಗ್ ಕ್ಷೇತ್ರದ ಉನ್ನತ ಮಟ್ಟದಲ್ಲಿನ ಹಿತಾಸಕ್ತಿ ಸಂಘರ್ಷಗಳೂ ಬಯಲಿಗೆ ಬರುವ ಸಾಧ್ಯತೆಗಳಿವೆ. ಕ್ರಿಕೆಟ್‌ ಸ್ವಚ್ಛಗೊಳಿಸಲು ಹೊರಟ ನ್ಯಾಯಾಂಗದ ಮಧ್ಯಪ್ರವೇಶಕ್ಕೆ ಎಲ್ಲರೂ ಕೃತಜ್ಞರಾಗಿರಬೇಕು.

ಕ್ರಿಕೆಟ್‌, ಹಣ ಮತ್ತು ಅಧಿಕಾರದ ಮಧ್ಯೆ ಇರುವ ಸಂಬಂಧದ ಇನ್ನೊಂದು ವಿಭಿನ್ನ ಕಥೆ ಇದಾಗಿದೆಯಷ್ಟೆ. ‘ಸಿಒಎ’ ಅಧಿಕಾರ ವಹಿಸಿಕೊಂಡಾಗ ವಿನೋದ್‌ ರೈ ಅವರು ‘ನಾನೊಬ್ಬ, ನಿರ್ದಿಷ್ಟ ಕೆಲಸ ಮಾಡಲು ಬಂದ ನೈಟ್‌ ವಾಚ್‌ಮನ್‌ ಇದ್ದಂತೆ’ ಎಂದು ಹೇಳಿಕೊಂಡಿದ್ದರು. ಅಧಿಕಾರವು  ಶ್ರೇಷ್ಠರನ್ನೂ ದುರ್ಮಾರ್ಗಕ್ಕೆ ಪ್ರೇರೆಪಿಸುತ್ತದೆ. ಅದರಲ್ಲೂ ಕ್ರಿಕೆಟ್‌ ಅಧಿಕಾರವು ಸಂಪೂರ್ಣವಾಗಿ ಕೆಟ್ಟ ಕೆಲಸಗಳಿಗೆ ದೂಡುತ್ತದೆ.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry