ಕ್ರಿಕೆಟ್ ದೈತ್ಯರಿಗೆ ಈ ಗೆಲುವು ಬೇಕಿತ್ತು

7

ಕ್ರಿಕೆಟ್ ದೈತ್ಯರಿಗೆ ಈ ಗೆಲುವು ಬೇಕಿತ್ತು

ಗೋಪಾಲ ಹೆಗಡೆ
Published:
Updated:

ಕ್ರಿಕೆಟ್‌ನಲ್ಲಿ ಹಳೆಯ ನೆನಪುಗಳು ಯಾವಾಗಲೂ ಮಧುರ ಎಂಬ ಮಾತಿದೆ. ಅದರ ಅನುಭವ ನನಗಾಗಿದೆ. 37 ವರ್ಷಗಳ ಹಿಂದೆ, ಅಂದರೆ 1975 ರಲ್ಲಿ ಮದರಾಸಿನ ಚೆಪಾಕ್ ಕ್ರೀಡಾಂಗಣದಲ್ಲಿ ಮನ್ಸೂರ್ ಅಲಿಖಾನ್ ಪಟೌಡಿ ನಾಯಕತ್ವದ ಭಾರತ ತಂಡ, ಕ್ಲೈವ್ ಲಾಯ್ಡ ನಾಯಕತ್ವದ ವೆಸ್ಟ್‌ಇಂಡೀಸ್ ತಂಡವನ್ನು ಸೋಲಿಸಿತ್ತು.

 

ಕರ್ನಾಟಕದ ಕ್ರಿಕೆಟ್ ರತ್ನ ಎಂದು ಕರೆಸಿಕೊಳ್ಳುವ ಜಿ.ಆರ್. ವಿಶ್ವನಾಥ್ ಆ         ಟೆಸ್ಟ್‌ನಲ್ಲಿ ಕೇವಲ ಮೂರು ರನ್ನುಗಳಿಂದ ಶತಕ ತಪ್ಪಿಸಿಕೊಂಡರಾದರೂ, ಅವರ ಅಜೇಯ 97 ರನ್ನುಗಳ ಆಟವೇ ಭಾರತದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ದು. ಆಗಿನ್ನೂ ದಿಢೀರ್ ಕ್ರಿಕೆಟ್ ಆರಂಭವಾಗಿರಲಿಲ್ಲ.ಆದರೆ ಅದೇ ವರ್ಷ ಇಂಗ್ಲೆಂಡ್‌ನಲ್ಲಿ ತಲಾ 60 ಓವರುಗಳ ವಿಶ್ವ ಕಪ್ ಕ್ರಿಕೆಟ್ ಆರಂಭವಾಯಿತು. ವೆಸ್ಟ್‌ಇಂಡೀಸ್ ಚಾಂಪಿಯನ್ ಆಗಿತ್ತು. ಅದನ್ನೀಗ ಯಾಕೆ ನೆನಪಿಸುತ್ತಿದ್ದೇನೆಂದರೆ, ಆ ಮದರಾಸು ಟೆಸ್ಟ್‌ನಲ್ಲಿ ಕ್ಲೈವ್ ಲಾಯ್ಡ ಎತ್ತಿದ್ದ ಒಂದು ಸಿಕ್ಸರ್ (ಬಹುಶಃ ಪ್ರಸನ್ನ ಅವರ ಬೌಲಿಂಗ್‌ನಲ್ಲಿ)ನಲ್ಲಿ ಚೆಂಡು ಸಮುದ್ರ ದಾಟಿ ಶ್ರೀಲಂಕಾದಲ್ಲಿ ಹೋಗಿ ಬೀಳುವುದೇನೋ ಎಂದೆನಿಸಿತ್ತು.

 

ಈಗ ಕ್ರಿಸ್ ಗೇಯ್ಲ ಅಥವಾ ಮಾರ್ಲನ್ ಸ್ಯಾಮುಯೆಲ್ಸ್ ಸಿಕ್ಸರ್ ಹೊಡೆಯುವಾಗ ಚೆಪಾಕ್ ಪಂದ್ಯ ನೆನಪಾಗುತ್ತದೆ. ಇದಕ್ಕೇ ಇರಬೇಕು ವೆಸ್ಟ್‌ಇಂಡೀಸ್ ಆಟಗಾರರನ್ನು `ಕ್ರಿಕೆಟ್ ದೈತ್ಯರು~ ಎಂದು ಕರೆದದ್ದು. ಅವರ ದೈಹಿಕ ಸದೃಢತೆಯ ಜೊತೆಗೆ,  `ಚೆಂಡಿರುವುದೇ ಬಲವಾಗಿ ಹೊಡೆಯಲು~ ಎಂಬ ಅವರ ಮನೋಭಾವ ನನಗೆ ಬಹಳ ಇಷ್ಟವಾಗಿದ್ದ ವಿಷಯಗಳು.ಕಪ್ಪು ವರ್ಣವೂ ಅವರ ಬಗ್ಗೆ ನನಗೆ ವಿಶೇಷ ಒಲವು ಮೂಡಿಸಿರಬಹುದು. ಅವರು ಇಂಗ್ಲೆಂಡ್, ಆಸ್ಟ್ರೇಲಿಯ ಅಥವಾ ದಕ್ಷಿಣ ಆಫ್ರಿಕ ವಿರುದ್ಧ ಆಡಿದಾಗಲೆಲ್ಲ, ವಿಂಡೀಸ್ ತಂಡವೇ ಗೆಲ್ಲಬೇಕು ಎಂಬ ಅನಿಸಿಕೆ ನನ್ನಲ್ಲಿ ಮೂಡುತ್ತಿತ್ತು. ಬಿಳಿಯರ ವರ್ಣಭೇದ ನೀತಿಯನ್ನು ಹೊಡೆದೋಡಿಸಲು ಅವರನ್ನು ಮೈದಾನದಲ್ಲಿ ಸದೆಬಡಿಯಬೇಕು ಎಂಬ ಕಪ್ಪು ವರ್ಣೀಯ ಕ್ರೀಡಾಪಟುಗಳ ನಂಬಿಕೆ ಸರಿಯಾಗೇ ಇತ್ತು. ಈಗ ಅಂಥ ವಾತಾವರಣ ಇಲ್ಲ. ವೆಸ್ಟ್‌ಇಂಡೀಸ್ ತಂಡದಲ್ಲೂ ಮೊದಲಿನಂಥ ಆಟಗಾರರು ಇಲ್ಲ.ನಿಗದಿಯ ಓವರುಗಳ ಕ್ರಿಕೆಟ್ ಆರಂಭವಾದ ಮೇಲೆ ಹಲವು ವರ್ಷಗಳ ವರೆಗೆ ವೆಸ್ಟ್‌ಇಂಡೀಸ್ ತಂಡವೇ ಅಗ್ರಮಾನ್ಯವಾಗಿತ್ತು. 1975 ರಲ್ಲಿ ವಿಶ್ವ ಕಪ್ ಗೆದ್ದ ಆ ತಂಡ, 1979 ರಲ್ಲೂ ಅದನ್ನು ಬೇರೆಯವರಿಗೆ ಬಿಟ್ಟುಕೊಡಲಿಲ್ಲ. ಆದರೆ 1983 ರಲ್ಲಿ ಆ ದೈತ್ಯರಿಗೆ, ತಮ್ಮನ್ನೂ ಮೀರಿಸುವ ಪ್ರಚಂಡರಿದ್ದಾರೆ ಎಂಬುದನ್ನು `ಕಪಿಲ್ಸ್ ಡೆವಿಲ್ಸ್~ ತೋರಿಸಿಕೊಟ್ಟಿದ್ದರು.ಇದು ಇಡೀ ಕ್ರಿಕೆಟ್ ಜಗತ್ತನ್ನೇ ಬೆರಗುಗೊಳಿಸಿತ್ತು. ಭಾರತ ಗೆಲ್ಲುವುದೆಂದು ಹಣ ಕಟ್ಟಿ ಗೆದ್ದವರು ನನ್ನಂತೆಯೇ ಹುಂಬ ಧೈರ್ಯ ತೋರಿದ ಕೆಲವೇ ಜನರಿದ್ದರು. ಅದೀಗ ಇತಿಹಾಸ. ಆದರೆ ವೆಸ್ಟ್‌ಇಂಡೀಸ್ ತಂಡ ಆ ಫೈನಲ್‌ನಲ್ಲಿ ಸೋತ ಮೇಲೆ, ಮತ್ತೆಂದೂ ಕಪ್ ಗೆಲ್ಲುವುದಿರಲಿ ಫೈನಲ್ ಕೂಡ ತಲುಪಿಲ್ಲ.

 

ವಿವಿಯನ್ ರಿಚರ್ಡ್ಸ್ ನಂತರ ಬ್ರಯಾನ್ ಲಾರಾನಂಥ ಮಹಾನ್ ಆಟಗಾರ ಬಂದರೂ, ವಿಂಡೀಸ್ ತಂಡದ ಪ್ರಮುಖ ಶಕ್ತಿಯಾಗಿದ್ದ ವೇಗದ ದಾಳಿ ಬಲಹೀನವಾಗತೊಡಗಿತ್ತು. ಎಂಟು ವರ್ಷಗಳ ಹಿಂದೆ, ಇಂಗ್ಲೆಂಡ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ವಿಂಡೀಸ್ ತಂಡ ಜಯಭೇರಿ ಬಾರಿಸಿದರೂ, ಅದು ವಿಶ್ವ ಕಪ್‌ಗೆ ಸಮನಾದ ಟೂರ್ನಿಯೇನಲ್ಲ.

 

ಈಗ 20 ಓವರುಗಳ ಕ್ರಿಕೆಟ್ ಆದರೂ ಅದಕ್ಕೆ ವಿಶ್ವ ಕಪ್ ಎಂಬ ಮುದ್ರೆ ಇರುವುದರಿಂದ ವೆಸ್ಟ್‌ಇಂಡೀಸ್ ತಂಡದ ಗೆಲುವು ಖುಷಿ ಕೊಡುವ ವಿಷಯ. ತಿರುಗಾಮುರುಗಾ ಒಂದೇ ತಂಡ ಮೇಲುಗೈ ಸಾಧಿಸುತ್ತಿದ್ದರೆ ಅದರಲ್ಲಿ ಸ್ವಾರಸ್ಯ ಇರುವುದಿಲ್ಲ. ಹೊಸ ಚಾಂಪಿಯನ್ ಹೊರಹೊಮ್ಮುವುದು ಆಟದ ದೃಷ್ಟಿಯಿಂದ ಒಳ್ಳೆಯದು. ಅದೀಗ ವಿಂಡೀಸ್ ಕ್ರಿಕೆಟ್‌ನಲ್ಲೂ ಹೊಸ ಬೆಳಕು ಮೂಡಿಸಲಿದೆ.ಕಳೆದ ವಾರ ಶ್ರೀಲಂಕಾದಲ್ಲಿ ಮುಗಿದ ಟಿ-20 ವಿಶ್ವ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ವೆಸ್ಟ್‌ಇಂಡೀಸ್ ತಂಡ ಗೆಲ್ಲುವುದೆಂದು ಹಣ ಕಟ್ಟಿದವರು ಬಹಳ ಕಡಿಮೆ. ತಂಡದಲ್ಲಿ ಕೆಲವು ಅದ್ಭುತ ಆಟಗಾರರು ಇದ್ದರೂ ಅವರ ಪಕ್ಕಾ ಯಶಸ್ಸಿನ ಬಗ್ಗೆ ಯಾರಿಗೂ ವಿಶ್ವಾಸ ಇರಲಿಲ್ಲ. ಕ್ರಿಸ್ ಗೇಯ್ಲ ಹೊಡೆದರೆ ಹೊಡೆದರು ಇಲ್ಲದಿದ್ದರೆ ಇಲ್ಲ.ಅವರು ಹೊಡೆದರೆ ವಿಂಡೀಸ್ ಗೆಲುವು ಖಂಡಿತ ಎನ್ನಬಹುದಾದರೂ ಅವರು ವಿಫಲರಾದರೆ ತಂಡದ ಕಥೆ ಮುಗಿಯಿತು ಎಂಬ ಭಾವನೆ ಜನರಲ್ಲಷ್ಟೇ ಅಲ್ಲ ಬಹುಶಃ ತಂಡದಲ್ಲೂ ಇತ್ತೆಂದು ಕಾಣುತ್ತದೆ. ಹಿಂದೆಯೂ ಆ ತಂಡ ಇಂಥ ಒಂದು ಮಾನಸಿಕ ಸುಳಿಗೆ ಸಿಲುಕಿಯೇ ವಿಫಲವಾಗಿರಬಹುದು.ಆದರೆ ತಂಡದ ಇತರ ಆಟಗಾರರಲ್ಲೂ ಪಂದ್ಯ ಗೆದ್ದುಕೊಡುವ ಸಾಮರ್ಥ್ಯ ಇದೆ ಎಂಬುದನ್ನು ಅಂದು ಸ್ಯಾಮುಯೆಲ್ಸ್ ತೋರಿಸಿಕೊಟ್ಟರು. ಶ್ರೀಲಂಕಾದ ಬೌಲರುಗಳ ಎದುರು, ಅದರಲ್ಲೂ ನಿಗೂಢ ಸ್ಪಿನ್ನರ್ ಎಂದು ಹೆಸರಾಗಿರುವ ಅಜಂತಾ ಮೆಂಡಿಸ್ ವಿರುದ್ಧ ವಿಂಡೀಸ್ ಬ್ಯಾಟ್ಸಮನ್ನರು ಪರದಾಡುತ್ತಿದ್ದಾಗ, ದೈತ್ಯ ಪ್ರತಿಭೆ ತೋರಿದವರು ಸ್ಯಾಮುಯೆಲ್ಸ್.ಅಂದಿನ ರಾತ್ರಿ ಫೈನಲ್ ಬಿಸಿಯಾಗುವಂತೆ ಮಾಡಿದ್ದೇ ಸ್ಯಾಮುಯೆಲ್ಸ್. ಅವರು ಎತ್ತಿದ್ದ ಸಿಕ್ಸರುಗಳಲ್ಲೂ ಚೆಂಡು ಸಮುದ್ರ ದಾಟಿ ಚೆನ್ನೈನಲ್ಲಿ ಬೀಳುವಂತೆ ಕಂಡಿತ್ತು. ಚೆಂಡನ್ನು ಭರ್ಜರಿಯಾಗಿಯೇ ಎಸೆಯುವ ಲಸಿತ್ ಮಾಲಿಂಗ ತಮ್ಮ ಗಲ್ಲಿಯಲ್ಲಿಯೇ ಸಿಕ್ಕಾಪಟ್ಟೆ ಹೊಡೆಸಿಕೊಂಡದ್ದು ಅದೇ ಮೊದಲೆಂದು ಕಾಣುತ್ತದೆ.ಬೌಲರುಗಳಿಗೆ ಅದರಲ್ಲೂ ಸ್ಪಿನ್ನರುಗಳಿಗೆ ಹೆಚ್ಚು ನೆರವಾಗುವಂತೆ ಪಿಚ್‌ಗಳನ್ನು ಸಿದ್ಧಪಡಿಸಿಕೊಂಡಿದ್ದ ಶ್ರೀಲಂಕಾ ತಂಡ ಅದಕ್ಕೆ ದಂಡ ತೆರುವಂತಾಯಿತು. ಟಿ-20 ಕ್ರಿಕೆಟ್‌ನಲ್ಲಿ ಬ್ಯಾಟ್ಸಮನ್ನರು ಹುಚ್ಚರ ಹಾಗೆ ಆಡಬೇಕು.ಬೌಂಡರಿ, ಸಿಕ್ಸರುಗಳ ಸುರಿಮಳೆಯಾಗಬೇಕು. ಅದನ್ನು ಬಿಟ್ಟು ಬೌಲರುಗಳು ಮೇಲುಗೈ ಸಾಧಿಸುವಂಥ ಅಂಕಣಗಳನ್ನು ಸಿದ್ಧಪಡಿಸಿದರೆ ಅದರಲ್ಲಿ ಮಜಾ ಬರುವುದಿಲ್ಲ. (ನನ್ನ ಹಲವು ಮಂದಿ ಕ್ರಿಕೆಟ್ ಹುಚ್ಚಿನ ಸ್ನೇಹಿತರ ಅಭಿಪ್ರಾಯ ಇದು.)ಬಹಳ ಬೇಗ ಹಣ ಮಾಡುವ ಜೂಜಾಟ ಈ ಚುಟುಕು ಕ್ರಿಕೆಟ್.ಇದು ಆಟಗಾರರ ಕಿಸೆ ಹಾಗೂ ಮಂಡಳಿಗಳ ತಿಜೋರಿ ತುಂಬುವ ಕ್ರಿಕೆಟ್. ಇಲ್ಲಿ ಒಳ್ಳೆಯ ಕ್ರಿಕೆಟ್ ಯಾರಿಗೂ ಬೇಕಾಗಿಲ್ಲ. ಮಹೇಂದ್ರ ಸಿಂಗ್ ದೋನಿ ಕಳೆದ ವರ್ಷ ಭಾರತಕ್ಕೆ ವಿಶ್ವ ಕಪ್ (50 ಓವರುಗಳ) ಗೆದ್ದುಕೊಟ್ಟ ಮೇಲೆ ಮೊದಲಿನಂತಿಲ್ಲ.ಅಂದರೆ ಅವರು ಅಲ್ಲಿ ಇಲ್ಲಿ ಎಡವುತ್ತಿದ್ದಾರೆ. ಶ್ರೀಲಂಕಾದಲ್ಲಿ ಪಿಚ್‌ಗಳು ಸ್ಪಿನ್ನರುಗಳಿಗೆ ಹೆಚ್ಚು ಅನುಕೂಲಕರವಾಗಿದ್ದರೂ ದೋನಿ ತಮ್ಮ ಬೌಲರುಗಳ ಮೇಲೆ ಅಷ್ಟೊಂದು ವಿಶ್ವಾಸ ತೋರಲಿಲ್ಲ. ಅದರಲ್ಲೂ ತಂಡಕ್ಕೆ ಮರಳಿ ಬಂದ ಹರಭಜನ್ ಸಿಂಗ್ ಅವರನ್ನು ಯಾವಾಗ, ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬ ವಿಷಯದಲ್ಲಿ ಅವರು ತಪ್ಪು ಮಾಡಿದರು.ದಕ್ಷಿಣ ಆಫ್ರಿಕ ವಿರುದ್ಧದ ಪಂದ್ಯದಲ್ಲಿ ಭಾರತ ಉತ್ತಮ ಅಂತರದಿಂದ ಗೆದ್ದಿದ್ದರೆ ಮಾತ್ರ ಸೆಮಿಫೈನಲ್‌ಗೆ ಮುನ್ನಡೆಯುತ್ತಿತ್ತು. ಇದು ಗೊತ್ತಿದ್ದೂ ಹರಭಜನ್ ಅವರನ್ನು ದೋನಿ ಆಡಿಸಲಿಲ್ಲ. ಪಾರ್ಟ್‌ಟೈಮ್ ಬೌಲರುಗಳು ಐಪಿಎಲ್‌ನಲ್ಲಿ ಯಶಸ್ವಿಯಾದಂತೆ ವಿಶ್ವ ಕಪ್ ಪಂದ್ಯಗಳಲ್ಲಿ ವಿಕೆಟ್‌ಗಳನ್ನು ಉರುಳಿಸುವುದು ಅಷ್ಟು ಸುಲಭ ಅಲ್ಲ. ಹರಭಜನ್ ಅವರನ್ನು ಆಡಿಸಿದ್ದರೆ ಫಲಿತಾಂಶ ಬೇರೆಯೇ ಆಗುತ್ತಿತ್ತು ಎಂದು ಹೇಳಲಾಗದಾದರೂ, ಅವರನ್ನು ಕೈಬಿಟ್ಟಿದ್ದು ಚರ್ಚೆಗೆ ಅನುವು ಮಾಡಿಕೊಟ್ಟಿತು.ಈಗ ದೋನಿ ಅವರನ್ನು ಬದಲಿಸುವ ಮಾತುಗಳು ಕೇಳಬರತೊಡಗಿವೆ. ಆಸ್ಟ್ರೇಲಿಯ, ಇಂಗ್ಲೆಂಡ್, ದಕ್ಷಿಣ ಆಫ್ರಿಕದಂತೆ ಟೆಸ್ಟ್, 50 ಓವರುಗಳ ಪಂದ್ಯ ಹಾಗೂ 20 ಓವರುಗಳ ಪಂದ್ಯಗಳಿಗೆ ಪ್ರತ್ಯೇಕ ನಾಯಕನಿದ್ದರೆ ಒಳ್ಳೆಯದು ಎಂಬ ಚರ್ಚೆ ಆರಂಭವಾಗಿದೆ.ಮೊದಲನೆಯದಾಗಿ ಇಲ್ಲಿ ಬೇರೆ ತಂಡಗಳನ್ನು ಅನುಸರಿಸುವ ಅಗತ್ಯ ಭಾರತಕ್ಕಿಲ್ಲ. ಎರಡನೆಯದಾಗಿ ಟಿ-20 ಎಂಬ ಕೆಟ್ಟ ಚುಟುಕು ಕ್ರಿಕೆಟ್ ಫಲಿತಾಂಶವನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವೂ ಇಲ್ಲ. 2011 ರ ವಿಶ್ವ ಕಪ್ ಗೆಲುವಿನ ನಂತರ ದೋನಿ ಟೆಸ್ಟ್ ಸರಣಿಗಳಲ್ಲಿ ವಿಫಲರಾಗಿರಬಹುದು.ಆದರೆ ಅವರನ್ನು ತೆಗೆದುಹಾಕುವ ಅನಿವಾರ್ಯ ಪರಿಸ್ಥಿತಿಯಂತೂ ಇನ್ನೂ ಉದ್ಭವಿಸಿಲ್ಲ. ಬರುವ ಚಳಿಗಾಲದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ವಿರುದ್ಧ ನಡೆಯುವ ಟೆಸ್ಟ್ ಸರಣಿಯ ನಂತರ ಯೋಚಿಸಬಹುದು. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ವಿರುದ್ಧ ಅವುಗಳ ನೆಲದಲ್ಲೇ ಹಿಗ್ಗಾಮುಗ್ಗಾ ಹೊಡೆಸಿಕೊಂಡು ಬಂದಿರುವ ದೋನಿ ಅವರಿಗೆ ತಿರುಗೇಟು ನೀಡುವ ಅವಕಾಶವನ್ನು ಕೊಡಬೇಕು.

   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry