ಕ್ರೀಡಾರಂಗದ ಕತ್ತಲು ಓಡಿಸುವ ದೀಪಾವಳಿ ಬರಲಿ

7

ಕ್ರೀಡಾರಂಗದ ಕತ್ತಲು ಓಡಿಸುವ ದೀಪಾವಳಿ ಬರಲಿ

ಗೋಪಾಲ ಹೆಗಡೆ
Published:
Updated:

`ಪ್ರಜಾವಾಣಿ~ಯ ಕ್ರೀಡಾ ಓದುಗರಿಗೆ ದೀಪಾವಳಿಯ ಹಾರ್ದಿಕ ಶುಭಾಶಯಗಳು. ದೇಶದ ಕ್ರಿಕೆಟ್‌ಪ್ರೇಮಿಗಳಿಗೆ ಈ ಸಲದ ದೀಪಾವಳಿ ಖುಷಿ ತಂದಿದೆ. ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಂಡಿದೆ.ಇದನ್ನು ಬರೆಯುವ ಹೊತ್ತಿಗೆ ಮೊದಲ ಮೂರು 50 ಓವರುಗಳ ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ್ದ ಭಾರತ ಸರಣಿ ಗೆಲುವಿನ ಮುನ್ನಡೆ ಸಾಧಿಸಿತ್ತು. ಉಳಿದ ಎರಡು ಪಂದ್ಯಗಳಲ್ಲೂ ಗೆದ್ದು `ವೈಟ್‌ವಾಷ್~ ಮಾಡುವ ವಿಶ್ವಾಸ ದೋನಿಪಡೆಯಲ್ಲಿ ಮೂಡಿದೆ.ಇಂಗ್ಲೆಂಡ್ ಪ್ರವಾಸದಲ್ಲಿ ಒಂದೂ ಪಂದ್ಯ ಗೆಲ್ಲದೇ (ಟೆಸ್ಟ್ ಮತ್ತು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳು) ಸೋತು ಸುಣ್ಣವಾಗಿ ವಾಪಸ್ಸಾಗಿದ್ದ ದೋನಿ ಮುಖದಲ್ಲಿ ಮತ್ತೆ ನಗು ಅರಳಿದೆ. ವಿಶ್ವ ಕಪ್ ಗೆದ್ದ ತಂಡ ಒಂದು ವರ್ಷವಾದರೂ ಅದೇ ಮಟ್ಟದಲ್ಲಿ ಆಡುತ್ತಿರಬೇಕೆಂದು ಕ್ರಿಕೆಟ್‌ಪ್ರೇಮಿ ಸಹಜವಾಗಿಯೇ ನಿರೀಕ್ಷಿಸುತ್ತಾನೆ.ಭಾರತ ಗೆಲ್ಲುವುದನ್ನು ನೋಡಿ ನನ್ನ ಗೆಳೆಯರೊಬ್ಬರು, `ನಾಯಿ ತನ್ನ ಗಲ್ಲಿಯಲ್ಲಿ ಹುಲಿಯಾಗಿಬಿಡುತ್ತದೆ~ ಎಂದು ಹೇಳಿದ್ದು ಸಹಜವಾಗಿಯೇ ಇತ್ತು. ಇದು ಪ್ರತಿಯೊಂದು ತಂಡಕ್ಕೂ ಅನ್ವಯವಾಗುತ್ತದೆ. ಇಂಗ್ಲೆಂಡ್‌ನ ವಾತಾವರಣದಲ್ಲಿ ಆ ತಂಡವನ್ನು ಸೋಲಿಸುವುದು ಕಷ್ಟವೇ ಆಗಿರುತ್ತದೆ.

 

ಆದರೆ, ವಿಶ್ವ ಕಪ್ ಗೆಲುವಿನ ನಂತರ ಭಾರತದ ಆಟಗಾರರು ದಿಢೀರನೇ ಬಾಲ ಮುದುರಿಕೊಂಡಿದ್ದು ಅನಿರೀಕ್ಷಿತವೂ ಆಗಿತ್ತು, ಆಶ್ಚರ್ಯಕರವೂ ಆಗಿತ್ತು. ಅದಕ್ಕೆ ಐಪಿಎಲ್ ಕಾರಣ, ಹಣದ ದುರಾಸೆ ಕಾರಣ ಎಂದು ನೂರೆಂಟು ಟೀಕೆಗಳು ಕೇಳಿಬಂದದ್ದರಲ್ಲೂ ಸತ್ಯಾಂಶ ಇತ್ತು.

ಭಾರತ ತಂಡ ಇಂಗ್ಲೆಂಡ್ ಪ್ರವಾಸದಿಂದ ಬಂದ ಮೇಲೆ ನಡೆದ ಚಾಂಪಿಯನ್ಸ್ ಟ್ರೋಫಿಗೆ ಪ್ರೇಕ್ಷಕರ ಬೆಂಬಲ ನಿರಾಶಾದಾಯಕವೇ ಆಗಿತ್ತು. ಈ ದೇಶದಲ್ಲಿ ಕ್ರಿಕೆಟ್ ಒಂದು ರೀತಿಯಲ್ಲಿ ಅಜೀರ್ಣವಾಗುವಷ್ಟು ಹೆಚ್ಚಾಗಿದೆ.ಕ್ರಿಕೆಟ್‌ಪ್ರೇಮಿಯ ಆಸಕ್ತಿ ಅಂತರರಾಷ್ಟ್ರೀಯ ಪಂದ್ಯಗಳಿಗೆ ಮಾತ್ರ ಸೀಮಿತವಾಗಿದೆ ಎಂಬುದು ರಣಜಿ ಟ್ರೋಫಿ ಅಥವಾ ಇತರ ದೇಶೀ ಟೂರ್ನಿಗಳನ್ನು ನೋಡಿದಾಗ ಗೊತ್ತಾಗುತ್ತದೆ.

 

ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ನೋಡಲು ಸಾವಿರ ಸಂಖ್ಯೆಯಲ್ಲಿ ಹೋಗುವ ಬೆಂಗಳೂರಿನ ಜನ ರಣಜಿ ಪಂದ್ಯಗಳನ್ನು ಅಥವಾ ದುಲೀಪ್ ಟ್ರೋಫಿ  ಪಂದ್ಯಗಳನ್ನು ನೋಡಲು ಹೋಗುವುದಿಲ್ಲ.ಇದರಲ್ಲಿ ಭಾರತ ತಂಡದ ಪ್ರಮುಖ ಆಟಗಾರರು ಆಡಿದರೂ ಯಾರಿಗೂ ಈ ಪಂದ್ಯಗಳನ್ನು ನೋಡುವ ಆಸಕ್ತಿ ಉಳಿದಿಲ್ಲ. ಇದರಿಂದಾಗಿ ನಮ್ಮ  ಕ್ರಿಕೆಟ್ ಪ್ರೇಕ್ಷಕರು ನಿಜವಾದ ಕ್ರಿಕೆಟ್‌ಪ್ರೇಮಿಗಳೇ ಎಂಬ ಬಗ್ಗೆ ಅನುಮಾನ ಮೂಡುತ್ತದೆ.ರಣಜಿ ಟ್ರೋಫಿ ಪಂದ್ಯಗಳಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ. ಆಟಗಾರರಿಗೂ ಈಗ ಸಾಕಷ್ಟು ಹಣ ಸಿಗುತ್ತಿದೆ. ಟೆಸ್ಟ್ ಅಥವಾ ಅಂತರರಾಷ್ಟ್ರೀಯ ಪಂದ್ಯಗಳಿಗೆ ಆಯ್ಕೆಯಾಗಲು ರಣಜಿಯಲ್ಲಿ ಕಾಣುವ ಸಾಧನೆಯೇ ಮುಖ್ಯವಾಗಿರುತ್ತದೆ.

 

ಆದ್ದರಿಂದ ಈ ಪಂದ್ಯಗಳನ್ನು ನೋಡಲು ಜನರು ಬರಬೇಕು. ಬೆಂಗಳೂರಿನಲ್ಲಿ ಬರದಿದ್ದರೆ ಜಿಲ್ಲಾ ಕೇಂದ್ರಗಳಲ್ಲೇ ಎಲ್ಲ ಪಂದ್ಯಗಳನ್ನು ನಡೆಸಬೇಕು. ಜಿಲ್ಲಾ ಕೇಂದ್ರಗಳಲ್ಲಿ ಪಂದ್ಯಗಳು ನಡೆದಿಲ್ಲ ಎಂದಲ್ಲ. ಆದರೆ ಎಲ್ಲ ಪಂದ್ಯಗಳನ್ನೂ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಸುವುದರಿಂದ ಅಲ್ಲಿ ಕ್ರಿಕೆಟ್ ಆಸಕ್ತಿ ಬೆಳೆಯುತ್ತದೆ. ಭಾರತ ಈ ವರ್ಷ ವಿಶ್ವ ಕಪ್ ಗೆದ್ದದ್ದು ದೇಶದ ಕ್ರೀಡಾರಂಗದಲ್ಲಿ ಕ್ರಿಕೆಟ್ ಹುಚ್ಚನ್ನು ಇನ್ನಷ್ಟು ಕೆರಳಿಸಿದೆ. ಜನ ಕ್ರಿಕೆಟ್ ಬಿಟ್ಟು ಬೇರೆ ಆಟಗಳನ್ನು ನೋಡುತ್ತಿಲ್ಲ. ಇತರ ಕ್ರೀಡೆಗಳಲ್ಲಿ ಪಟಾಕಿಯ ಶಬ್ದ ಕೇಳುತ್ತಿಲ್ಲ, ಭರವಸೆದಾಯಕ ದೀಪಗಳು ಬೆಳಗುತ್ತಿಲ್ಲ.

ರಾಷ್ಟ್ರೀಯ ಕ್ರೀಡಾ ನೀತಿಯ ವಿವಾದ ಬಗೆಹರಿದಿಲ್ಲ.

 

ಕ್ರೀಡಾ ಸಚಿವರ ಪ್ರಯತ್ನಗಳಿಗೆ ಭಾರತ ಒಲಿಂಪಿಕ್ ಸಂಸ್ಥೆ ಹಾಗೂ ದೇಶದ ಶ್ರೀಮಂತ ಸಂಸ್ಥೆಯೆನಿಸಿದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ತೀವ್ರ ವಿರೋಧ ವ್ಯಕ್ತಪಡಿಸುತ್ತಲೇ ಇವೆ.ಕ್ರಿಕೆಟ್ ಮಂಡಳಿಯಲ್ಲಿ ಹಣ ತುಂಬಿತುಳುಕುತ್ತಿರುವುದರಿಂದ ಹಾಗೂ ಅದರಲ್ಲಿ ಪ್ರಭಾವಿ ರಾಜಕಾರಣಿಗಳು ಕುಳಿತಿರುವುದರಿಂದ ಅವರಿಂದ ಪ್ರತಿರೋಧ ನಿರೀಕ್ಷಿತವೇ ಆಗಿತ್ತು.ಭಾರತ ಒಲಿಂಪಿಕ್ ಸಂಸ್ಥೆಯಲ್ಲೂ ರಾಜಕಾರಣಿಗಳೇ ಇದ್ದಾರೆ. ಆದರೆ ಕಾಮನ್ವೆಲ್ತ್ ಕ್ರೀಡೆಗಳ ನಂತರ ಏನಾಯಿತು ಎಂಬುದರ ಅರಿವು ಅವರಿಗೆ ಇರುವುದರಿಂದ ರಾಷ್ಟ್ರೀಯ ಕ್ರೀಡಾ ನೀತಿ ಜಾರಿಗೆ ಒಲಿಂಪಿಕ್ ಸಂಸ್ಥೆ ಪದಾಧಿಕಾರಿಗಳು ಕೈಜೋಡಿಸಬೇಕಿತ್ತು. ತಮ್ಮ ಎಲೆಯಲ್ಲಿ ಬಿದ್ದಿರುವ ಕತ್ತೆಯನ್ನು ನೋಡುವುದನ್ನು ಬಿಟ್ಟು ಬೇರೆಯವರ ಎಲೆಯ ಮೇಲೆ ಕುಳಿತಿರುವ ನೊಣದ ಕಡೆ ಮಾತ್ರ ಅವರ ಲಕ್ಷ್ಯ ಇದ್ದಂತಿದೆ.ಕಳೆದ ವರ್ಷ ಕಾಮನ್ವೆಲ್ತ್ ಕ್ರೀಡೆಗಳು ಮತ್ತು ಏಷ್ಯನ್ ಕ್ರೀಡೆಗಳಲ್ಲಿ ಉತ್ತಮ ಸಾಧನೆ ತೋರಿದ್ದ ಭಾರತದ ಅಥ್ಲೀಟುಗಳು ಒಲಿಂಪಿಕ್ಸ್‌ಗೂ ಹೋಗುವ ವಿಶ್ವಾಸ ಮೂಡಿಸಿದ್ದರು. ಆದರೆ ಅವರಲ್ಲಿ ಪ್ರಮುಖರೆನಿಸಿಕೊಂಡ ಮೂರ‌್ನಾಲ್ಕು ಮಂದಿ ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ಅನರ್ಹಗೊಂಡರು.

 

ಮುಂದಿನ ವರ್ಷ ಲಂಡನ್‌ನಲ್ಲಿ ನಡೆಯುವ ಒಲಿಂಪಿಕ್ಸ್‌ಗೆ ಈಗ ಅರ್ಹತೆ ಗಳಿಸಿರುವ ಕೃಷ್ಣಾ ಪೂನಿಯಾ (ಡಿಸ್ಕಸ್ ಎಸೆತ) ಒಬ್ಬಳೇ ಸ್ವಲ್ಪ ಆಸೆ ಮೂಡಿಸಿದ್ದಾರೆ. ಪದಕ ಕಷ್ಟವಾದರೂ ಆಕೆ ಶ್ರಮಪಟ್ಟರೆ ಕಂಚಿನ ಪದಕವಾದರೂ ಸಾಧ್ಯವಾಗಬಹುದು. ಆಕೆಯ ತಯಾರಿಗೆ ಭಾರತ ಒಲಿಂಪಿಕ್ ಸಂಸ್ಥೆ ಮತ್ತು ಅಥ್ಲೆಟಿಕ್ ಸಂಸ್ಥೆ ಸಂಪೂರ್ಣ ಸಹಾಯ ಮಾಡಬೇಕು.ಆದರೆ, ದೀಪಾವಳಿಯ ಮೇಲೆ ದೀಪಾವಳಿ ಬಂದರೂ ಕ್ರೀಡಾರಂಗದಲ್ಲಿ ತುಂಬಿರುವ ಹೊಲಸನ್ನು ತೊಳೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದೆನಿಸುತ್ತದೆ. 1994 ರಲ್ಲಿ ಪುಣೆಯಲ್ಲಿ ನಡೆದ ರಾಷ್ಟ್ರೀಯ ಕ್ರೀಡೆಗಳ ವರದಿಗೆ ಹೋಗಿದ್ದಾಗ, ಅದನ್ನು ಸಂಘಟಿಸಿದ್ದ ಸುರೇಶ್ ಕಲ್ಮಾಡಿ `ಪ್ರಜಾವಾಣಿ~ಗೆ ಸಂದರ್ಶನ ನೀಡಿದ್ದರು.

 

ಅದರಲ್ಲಿ ಅವರು, `ನನಗೆ ಅಧಿಕಾರ ಮುಖ್ಯ. ಅಧಿಕಾರ ಇದ್ದರೆ ಹಣ ತಾನಾಗಿಯೇ ಕಾಲಬಳಿ ಬಂದು ಬೀಳುತ್ತದೆ. ಈ ರಾಷ್ಟ್ರೀಯ ಕ್ರೀಡೆಗಳಲ್ಲಿ ನಾನು ಹಣ ತಿನ್ನುವ ಅಗತ್ಯ ಇಲ್ಲ~ ಎಂದು ಹೇಳಿದ್ದು ನೆನಪಾಗುತ್ತದೆ. ಅವರಿಗೆ ಅಧಿಕಾರವೂ ಬಂತು, ಹಣದ ಲೂಟಿಯೂ ಆಯಿತು.ಅಧಿಕಾರದ ಲಾಲಸೆಗಾಗಿ ಆ ವ್ಯಕ್ತಿ ಏನು ಬೇಕಾದರೂ ಮಾಡಬಲ್ಲ ಎಂದೆನಿಸಿತ್ತು. ಕಲ್ಮಾಡಿ ಮತ್ತು ಅವರ ಬಲಗೈಬಂಟ ಲಲಿತ್ ಭಾನೊಟ್ ಈಗ ತಿಹಾರ್ ಜೈಲಿನಲ್ಲಿ ಬಂದಿಯಾಗಿದ್ದಾರೆ. ಕಾಮನ್ವೆಲ್ತ್ ಕ್ರೀಡೆಗಳ ಹಗರಣ ಸಾಧಾರಣದ್ದಲ್ಲ. ದಿನವೂ ಹೊಸತೊಂದು ಪ್ರಕರಣ ಬೆಳಕಿಗೆ ಬರುತ್ತಿದೆ.ಕಲ್ಮಾಡಿ ಅಷ್ಟು ಸುಲಭವಾಗಿ ಜೈಲಿನಿಂದ ಹೊರಬರಲು ಸಾಧ್ಯವಾಗಲಿಕ್ಕಿಲ್ಲ. ಇನ್ನೂ ಕೆಲವು ಪ್ರಮುಖ ರಾಜಕಾರಣಿಗಳು ಕೂಡ ತಿಹಾರ್ ನಿವಾಸಿ ಆಗಬಹುದೆಂದು ದೆಹಲಿ ಮಿತ್ರರು ಹೇಳುತ್ತಿದ್ದಾರೆ.ಇಷ್ಟೆಲ್ಲ ಆದರೂ ಕ್ರೀಡಾರಂಗದಲ್ಲಿ ತುಂಬಿರುವ ಭ್ರಷ್ಟಾಚಾರ ಮಾತ್ರ ಸ್ವಲ್ಪವೂ ಕಡಿವೆುಯಾಗಿಲ್ಲ ಎಂದು ಕ್ರೀಡಾಪಟುಗಳು ಹೇಳುತ್ತಾರೆ. ಆದರೂ ಭಾರತ ಕ್ರೀಡಾರಂಗ ಜೀವಂತವಾಗಿ ಉಳಿದಿದೆಯಲ್ಲ, ಅದೇ ಆಶ್ಚರ್ಯ ಎಂದೂ ಹೇಳುತ್ತಾರೆ. ಅದಕ್ಕೆ ಕಾರಣ ಕ್ರೀಡಾಪಟುಗಳೇ. ಒಂದಲ್ಲ ಒಂದು ದಿನ ತನಗೆ ರಾಷ್ಟ್ರವನ್ನು ಪ್ರತಿನಿಧಿಸುವ ಅವಕಾಶ ಸಿಗುತ್ತದೆ ಎಂಬ ಆಶಾಭಾವನೆಯೇ ಕ್ರೀಡಾಪಟುಗಳು ಎಲ್ಲ ತೊಂದರೆಗಳನ್ನು ಎದುರಿಸಿ ಮುನ್ನಡೆಯಲು ಸಹಾಯಕವಾಗುತ್ತದೆ.

 

ಕ್ರೀಡಾರಂಗದ ಕತ್ತಲನ್ನು ಹೋಗಲಾಡಿಸುವ ದೀಪಾವಳಿ ಬಂದೇಬರುತ್ತದೆ ಎಂಬ ಕನಸೇ ಹೊಸ ಕ್ರೀಡಾಪಟುಗಳನ್ನು ಸೃಷ್ಟಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry