ಭಾನುವಾರ, ಜನವರಿ 19, 2020
29 °C

ಖಡ್ಗಕ್ಕಿಂತ ಲೇಖನಿಯೇ ಸದಾ ಹರಿತ

ರಾಮಚಂದ್ರ ಗುಹಾ Updated:

ಅಕ್ಷರ ಗಾತ್ರ : | |

ಬಾಂಗ್ಲಾದೇಶದಲ್ಲಿ ರವೀಂದ್ರನಾಥ ಟ್ಯಾಗೋರರ ಕೀರ್ತಿಯ ಏರಿಳಿತಗಳನ್ನು ಕುರಿತಂತೆ ಪ್ರಸಿದ್ಧ ಬಾಂಗ್ಲಾ ಲೇಖಕ ಗುಲಾಂ ಮುರ್ಷಿದ್ ಅವರು `ಫ್ರಂಟ್‌ಲೈನ್~ ಪತ್ರಿಕೆಯಲ್ಲಿ ಇತ್ತೀಚೆಗೆ ಲೇಖನವೊಂದನ್ನು ಬರೆದಿದ್ದಾರೆ. ಅದು ಪೂರ್ವ ಪಾಕಿಸ್ತಾನ ಆಗಿರುವವರೆಗೆ, ಅಲ್ಲಿ ಟ್ಯಾಗೋರರನ್ನು ಒಳ್ಳೆಯ ರೀತಿಯಲ್ಲೇನೂ ಕಾಣುತ್ತಿರಲಿಲ್ಲ. ಭಾಗಶಃ ಇದಕ್ಕೆ ಕಾರಣ, ಟ್ಯಾಗೋರರು ಮೇಲ್ವರ್ಗದ ಭೂಮಾಲೀಕ ಕುಟುಂಬಕ್ಕೆ ಸೇರಿದ್ದುದು.

 

ಮತ್ತೊಂದು ಬಹು ಮುಖ್ಯ ಕಾರಣ, ಅವರು ಹಿಂದೂ ಧರ್ಮದವರಾಗಿದ್ದುದು. 1961ರಲ್ಲಿ ಟ್ಯಾಗೋರರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ, ಅವರ ವಿರುದ್ಧ ಪಾಕಿಸ್ತಾನಿ ಸರ್ಕಾರ ಬೆಂಬಲಿತ ಅಥವಾ ಹಣ ಸಹಾಯ ಪಡೆದುಕೊಂಡ ವೃತ್ತಪತ್ರಿಕೆಗಳಲ್ಲಿ ಅನೇಕ ನಿಂದನಾತ್ಮಕ ಲೇಖನಗಳನ್ನೂ ಪ್ರಕಟಿಸಲಾಗಿತ್ತು. ಆದರೆ, ಜನರ ಭಾವನೆಗಳನ್ನು ಬತ್ತಿಸಲು ಅಥವಾ ಗೆದ್ದುಕೊಳ್ಳಲು ಪ್ರಭುತ್ವದ ಈ ಪ್ರಚಾರಗಳಿಂದೇನೂ ಸಾಧ್ಯವಾಗಲಿಲ್ಲ. ಸ್ವತಂತ್ರ ಬಾಂಗ್ಲಾದೇಶ ಬೇಕೆಂಬ ಚಳವಳಿ ತೀವ್ರವಾದಂತೆ, ಪಶ್ಚಿಮ ಪಾಕಿಸ್ತಾನದ ಪ್ರಾಬಲ್ಯ ವಿರೋಧಿಸಿ ಬಂಗಾಳಿ ರಾಷ್ಟ್ರೀಯವಾದವನ್ನು ಪ್ರತಿಪಾದಿಸಲು, ಮಾತೃಭೂಮಿಯ ಸೌಂದರ್ಯವನ್ನು ಹಾಡಿ ಹೊಗಳಿದ ಟ್ಯಾಗೋರರ ಅನೇಕ ಹಾಡುಗಳನ್ನೇ ಬಳಸಿಕೊಳ್ಳಲಾಯಿತು. ಟ್ಯಾಗೋರರ ಗೀತೆಗಳನ್ನು ಹಾಡಿದವರು ಅಥವಾ ಅವರ ನಾಟಕ, ನೃತ್ಯನಾಟಕಗಳನ್ನು ಪ್ರದರ್ಶಿಸಿದವರಿಗೆ ರವೀಂದ್ರರು ಜಾತ್ಯತೀತ ಬಂಗಾಳಿ ಸಂಸ್ಕೃತಿಯ ಪ್ರತೀಕರಾಗಿದ್ದರು ಎಂಬುದು ಅರ್ಥವಾಗುತ್ತದೆ ಎನ್ನುತ್ತಾರೆ ಗುಲಾಂ ಮುರ್ಷಿದ್.ಉತ್ಪ್ರೇಕ್ಷಿತ ರಾಷ್ಟ್ರಪ್ರೇಮವಾಗಲಿ, ಕೋಮುಭಾವನೆಗಳಾಗಲಿ ಟ್ಯಾಗೋರರಲ್ಲಿ ಇರಲೇ ಇಲ್ಲ. ಹಾಗೆಯೇ, ಅವರ ಕಿರಿಯ ಸಮಕಾಲೀನರಾದ ನಜ್ರುಲ್ ಇಸ್ಲಾಂ ಅವರಲ್ಲೂ ಇರಲಿಲ್ಲ. ಅವರನ್ನು ಮುಸ್ಲಿಮರ ಅಥವಾ ಮುಸ್ಲಿಮರ ಪರ ಬರೆಯುವ ಕವಿ ಎಂದು ಎಷ್ಟೇ ಬಿಂಬಿಸಲು ಯತ್ನಿಸಿದರೂ ಅದು ಅವರಲ್ಲಿರಲಿಲ್ಲ.ತಮ್ಮ ಕಡೆಯ ಕೆಲವು ವರ್ಷಗಳನ್ನು ಢಾಕಾದಲ್ಲಿ ಕಳೆದಿದ್ದ ನಜ್ರುಲ್ ಇಸ್ಲಾಂ ಅವರನ್ನು, ಸ್ವಯಂಘೋಷಿತ `ಇಸ್ಲಾಮಿಕ್~ ರಿಪಬ್ಲಿಕ್‌ನ ರಾಷ್ಟ್ರೀಯ ಕವಿ ಎಂದು ಬಿಂಬಿಸಿದರೂ, ನಜ್ರುಲ್ ಅವರು ಟ್ಯಾಗೋರ್‌ರಂತೆಯೇ ಜಾತ್ಯತೀತ ಬಂಗಾಳಿ ಸಂಸ್ಕೃತಿಯ ಚೈತನ್ಯದ ಪ್ರತೀಕ.ಟ್ಯಾಗೋರ್‌ರಂತೆಯೇ, ಅವರೂ ಉತ್ಕೃಷ್ಟ ಸಾಹಿತ್ಯಕ ಸಾಧನೆಯನ್ನು ಸಂಕೇತಿಸಿದವರು. ಅವರು ಬಂಗಾಳದಲ್ಲಿ ಜನಿಸಿ ಬಂಗಾಳಿಯಲ್ಲೇ ಬರೆದಂತಹ ಬಹು ದೊಡ್ಡ ವಿಶ್ವ ಕವಿ.

ಕೊಲ್ಕೊತ್ತಾದ ಸಾಲ್ಟ್‌ಲೇಕ್‌ನಲ್ಲಿರುವ, ಈ ಹಿಂದೆ ಮುಖ್ಯಮಂತ್ರಿಯ ನಿವಾಸವಾಗಿ ಬಳಸಲಾಗುತ್ತಿದ್ದ ದೊಡ್ಡ ಮನೆಯನ್ನು ಈಗ ನಜ್ರುಲ್ ಇಸ್ಲಾಂ ಅವರ ಜೀವನ ಹಾಗೂ ಸಾಧನೆಗಳಿಗೆ ಮುಡಿಪಾಗಿಟ್ಟ ವಸ್ತುಸಂಗ್ರಹಾಲಯ ಹಾಗೂ ಸಂಶೋಧನಾ ಕೇಂದ್ರವಾಗಿ ಮಾರ್ಪಡಿಸಲಾಗುವುದು ಎಂದು 2011ರ ಡಿಸೆಂಬರ್ ಕಡೆಯ ವಾರದಲ್ಲಿ  ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಕಟಿಸಿದ್ದಾರೆ.

 

ಆ ನಿವಾಸದಲ್ಲಿ ವಾಸಿಸಿದ್ದಂತಹ ಕಡೆಯ ವ್ಯಕ್ತಿ ಕಮ್ಯುನಿಸ್ಟ್ ಪಕ್ಷದ ಜ್ಯೋತಿ ಬಸು ಅವರಾದರೂ, ಈ ನಿವಾಸಕ್ಕೆ 1972ರಲ್ಲಿ ಕೊಲ್ಕೊತ್ತಾದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧಿವೇಶನದಲ್ಲಿ ಪಾಲ್ಗೊಂಡು ಅಲ್ಲಿ ಸ್ವಲ್ಪ ಕಾಲ ತಂಗಿದ್ದ ಇಂದಿರಾಗಾಂಧಿಯವರ ಹೆಸರಿದೆ.`ಇಂದಿರಾ ಭವನ~ವನ್ನು `ನಜ್ರುಲ್ ಭವನ~ವಾಗಿ ಮರು ನಾಮಕರಣ ಮಾಡುವ ನಿರ್ಧಾರ ಪಶ್ಚಿಮ ಬಂಗಾಳದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆಕ್ರೋಶ, ದಿಗಿಲನ್ನು ಹುಟ್ಟುಹಾಕಿದೆ. ಹಳೆಯ ಹೆಸರನ್ನೇ ಉಳಿಸಬೇಕೆಂದು ಒತ್ತಾಯಿಸಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಭಟ್ಟಾಚಾರ್ಯ ಅವರು ಮುಖ್ಯಮಂತ್ರಿಗೆ ಪತ್ರವನ್ನೂ ಬರೆದಿದ್ದಾರೆ. `ಇಂದಿರಾ ಭವನ್~ ಎಂಬುದು ನಮ್ಮ ಪ್ರೀತಿಯ ನಾಯಕಿ (ದಿವಂಗತ) ಪ್ರಧಾನಿ ಇಂದಿರಾ ಗಾಂಧಿ ನೆನಪಿಗೆ ಸಂಬಂಧಿಸಿದೆ; ಜೊತೆಗೆ ಇಂದಿರಾಜಿ ಹೆಸರು, ನೆನಪುಗಳ ಜೊತೆ ಲಕ್ಷಾಂತರ ಜನರ ಭಾವನೆಗಳೂ ಹೆಣೆದುಕೊಂಡಿವೆ~ ಎಂದೂ ಅವರು ಬರೆದಿದ್ದಾರೆ.  ಈ ನಿರ್ಧಾರವನ್ನು ಹಿಂತೆಗೆದುಕೊಳ್ಳದಿದ್ದಲ್ಲಿ ರಾಜ್ಯದಾದ್ಯಂತ ಅನೇಕ  ಪ್ರತಿಭಟನೆಗಳನ್ನು ಕಾಂಗ್ರೆಸ್ ಪಕ್ಷ ಆರಂಭಿಸುವುದಾಗಿಯೂ ಅವರು ಎಚ್ಚರಿಸಿದ್ದಾರೆ.ಸಾಲ್ಟ್‌ಲೇಕ್‌ನಲ್ಲಿರುವ ಈ ಕಟ್ಟಡದ ಹೆಸರನ್ನು ಮಮತಾ ಬ್ಯಾನರ್ಜಿ ಅವರು ಏಕೆ ಬದಲಾಯಿಸ ಹೊರಟಿದ್ದಾರೆ ಎಂಬುದಕ್ಕೆ ನಾಲ್ಕು ಕಾರಣಗಳಿರುವ ಸಾಧ್ಯತೆ ಇದೆ. ಮೊದಲನೆಯದು, ನಜ್ರುಲ್ ಇಸ್ಲಾಂ ಅವರ ಕವನಗಳು ಹಾಗೂ ಹಾಡುಗಳಿಗೆ ಹಿಂದಿನಿಂದಲೂ ಇರುವ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸುವುದು.

 

ಎರಡನೆಯದು, ನಜ್ರುಲ್ ಅವರು ಸ್ವತಃ ತಾವೇ ಜಾತಿಧರ್ಮಗಳ ಎಲ್ಲೆಗಳನ್ನು ಮೀರಿದ್ದರೂ, ಅವರು ಮುಸ್ಲಿಂ ಧರ್ಮದಲ್ಲಿ ಜನಿಸಿ ಮುಸ್ಲಿಂ ಹೆಸರು ಹೊಂದಿದ್ದ ಕಾರಣಕ್ಕಾಗಿ, ಈ ಮರು ನಾಮಕರಣ ಪಶ್ಚಿಮ ಬಂಗಾಳದ ದೊಡ್ಡ ಮುಸ್ಲಿಂ ಜನಸಮುದಾಯಕ್ಕೆ ಆಕರ್ಷಕವಾಗಿ ಪರಿಣಮಿಸಬಹುದು ಎಂಬುದು.

 

ಮೂರನೆಯದು, ತೃಣಮೂಲ ಹಾಗೂ ಅದರ ಮಿತ್ರ ಪಕ್ಷ ಕಾಂಗ್ರೆಸ್ ಪಕ್ಷದ ಮಧ್ಯೆ ಹೆಚ್ಚುತ್ತಿರುವ ಬಿರುಕಿನ ಪರಿಣಾಮ. ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ  ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಹಾಗೂ ಲೋಕಪಾಲ್ ಮಸೂದೆ ವಿಚಾರದಲ್ಲಿನ ವಿರೋಧಗಳಿಂದಾಗಿ, ಬ್ಯಾನರ್ಜಿ ಅವರು ಕಾಂಗ್ರೆಸ್‌ನ ಹೊರತಾಗಿ ತಮ್ಮ

ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಯತ್ನವೂ ಇದಾಗಿರಬಹುದು. ನಾಲ್ಕನೇ ಕಾರಣ, ಇಂದಿರಾ ಗಾಂಧಿಯವರ ವರ್ಚಸ್ಸು ಕುಂದಿಸುವ ಯತ್ನ. ಪಶ್ಚಿಮ ಬಂಗಾಳದ ರಾಜಕೀಯ ಸಂಸ್ಕೃತಿಯಲ್ಲಿ ಒಬ್ಬರೇ ಒಬ್ಬರು ಅಧಿಕಾರಯುತ ಸ್ತ್ರೀ ಮಾದರಿಗೆ ಅವಕಾಶ ಇರಬೇಕೆಂದು ಮಮತಾ ಬ್ಯಾನರ್ಜಿ ಬಯಸಿದ್ದಿರಬಹುದು. ಬಾಂಗ್ಲಾದೇಶ ಯುದ್ಧದ ನಂತರ ಇಂದಿರಾ ಗಾಂಧಿ ಅವರನ್ನು ದುರ್ಗಾಗೆ ಹೋಲಿಸಲಾಗುತ್ತಿತ್ತು.

 

ಆ ಮಿಲಿಟರಿ ವಿಜಯದ ನಂತರ ಅವರು ಸಾಲ್ಟ್‌ಲೇಕ್‌ನ ಆ ಕಟ್ಟಡದಲ್ಲಿ ತಂಗಿದ್ದರು. ನಲವತ್ತು ವರ್ಷಗಳ ನಂತರ ಆ ವರ್ಚಸ್ಸು ಒಂದಷ್ಟು ಮಂಕಾಗಿದೆ. ಅದನ್ನು ಇನ್ನಷ್ಟು ಬೇಗನೇ ಮಂಕಾಗಿಸಲು ಹೆಸರು ಬದಲಿಸುವ ಈ ಕ್ರಿಯೆ ಒಂದಿಷ್ಟು ಸಹಾಯಕವಾಗಬಹುದು.ನಾನೆಂದೂ ಮಮತಾ ಬ್ಯಾನರ್ಜಿಯನ್ನು ಭೇಟಿಯಾಗಿಲ್ಲ. ಅವರ ಸಲಹೆಗಾರರಲ್ಲಿ ಯಾರೊಬ್ಬರೂ ನನಗೆ ಪರಿಚಯವಿಲ್ಲ. ಹೀಗಾಗಿ ಪೂರ್ವ ಕೊಲ್ಕೊತ್ತಾದಲ್ಲಿನ ಕಟ್ಟಡಕ್ಕೆ ರಾಜಕಾರಣಿಯ ಹೆಸರಿನ ಬದಲು ಕವಿಯ ಹೆಸರನ್ನಿಡುವ ಈ ನಿರ್ಧಾರಕ್ಕೆ ಈ ಮೇಲಿನ ಕಾರಣಗಳಲ್ಲಿ ಯಾವುದು ಮುಖ್ಯವಾದುದು ಎಂಬುದನ್ನು ಅಧಿಕಾರಯುತವಾಗಿ ಹೇಳಲಾರೆ.

 

ನಾನೇನಾದರೂ ಊಹಿಸಿದಲ್ಲಿ, ಒಂದು ಅಥವಾ ನಾಲ್ಕನೇ ಕಾರಣಕ್ಕಿಂತ ಎರಡು ಮತ್ತು ಮೂರನೇ ಕಾರಣಗಳು ಸರಿ ಎನಿಸುತ್ತವೆ. ಎಂದರೆ, ಈ ಕ್ರಮಕ್ಕೆ ಸಾಹಿತ್ಯ ಪ್ರೀತಿ ಅಥವಾ ವ್ಯಕ್ತಿ ಆರಾಧನೆ ಕುರಿತ ಅಸಹನೆಗಿಂತ ಮತಬ್ಯಾಂಕ್ ರಾಜಕಾರಣ ಹಾಗೂ ರಾಜಕೀಯ ಸ್ವಾತಂತ್ರ್ಯದ ಪ್ರತಿಪಾದನೆ ಮುಖ್ಯ ಕಾರಣ ಎನ್ನಬಹುದು. ಕಾರಣಗಳು ಏನಾದರೂ ಇರಲಿ, ಮರು ನಾಮಕರಣದ ವಿಚಾರಕ್ಕೆ ನನ್ನ ಮೊದಲ ಪ್ರತಿಕ್ರಿಯೆ ಸಂತಸದ್ದಾಗಿತ್ತು. ಈ ಸುದ್ದಿಯನ್ನು ಓದಿದಾಗ, ಕಾಂಗ್ರೆಸ್ ಪಕ್ಷದ ವಕ್ತಾರೆಯೊಬ್ಬರೊಡನೆ ಟೆಲಿವಿಷನ್‌ನಲ್ಲಿ ಈ ಹಿಂದೆ ನಾನು ನಡೆಸಿದ ವಾದವಿವಾದ ನೆನಪಾಯಿತು.

 

ಹೈದರಾಬಾದ್‌ನಲ್ಲಿ ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜೀವ್ ಗಾಂಧಿ ಹೆಸರಿಟ್ಟ ಸಂದರ್ಭ ಅದು. ಆಗ ಆಂಧ್ರಪ್ರದೇಶದಲ್ಲಿ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಜೊತೆಗೆ, ತನ್ನ ದಿವಂಗತ ಪತಿಯ ನೆನಪಿನ ಅಂಧಾಭಿಮಾನಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸಮರ್ಪಿಸಿಕೊಂಡಿದ್ದುದು ಎಲ್ಲರಿಗೂ ತಿಳಿದ ವಿಚಾರವಾಗಿತ್ತು.

 

ವಿಮಾನ ನಿಲ್ದಾಣಕ್ಕೆ, ಆಂಧ್ರ ಪ್ರದೇಶದಲ್ಲಿ ಹುಟ್ಟಿದ ಅತ್ಯಂತ ದೊಡ್ಡ ವ್ಯಕ್ತಿ ಹಾಗೂ ಬಹು ದೊಡ್ಡ ವಾಗ್ಗೇಯಕಾರರಾದ ತ್ಯಾಗರಾಜರ ಹೆಸರನ್ನು ಇಟ್ಟಿದ್ದಿದ್ದರೆ ಅದಕ್ಕಿಂತ ಸೂಕ್ತವಾದದ್ದು ಬಹುಶಃ ಬೇರೆ ಇರುತ್ತಿರಲಿಲ್ಲ ಎಂದು ನಾನು ಕಾಂಗ್ರೆಸ್ ವಕ್ತಾರೆಗೆ ಸೂಚಿಸಿದ್ದೆ.ನಾನು ಬಂಗಾಳಿಯಲ್ಲ. ನಜ್ರುಲ್ ಇಸ್ಲಾಂ ಅವರ ಕೃತಿಗಳನ್ನು ಅನುವಾದದಲ್ಲಿ ಮಾತ್ರ ನಾನು ಓದಬಲ್ಲೆ. ಮಮತಾ ಬ್ಯಾನರ್ಜಿ ಬಗ್ಗೆ ನಿಜಕ್ಕೂ ನನಗೆ ಸಮ್ಮಿಶ್ರ ಭಾವನೆಗಳಿವೆ. ಹೀಗಿದ್ದೂ, ಈ ಒಂದು ನಿರ್ದಿಷ್ಟ ಕ್ರಮ ನನಗೆ ಸಂತಸ ನೀಡಿತ್ತು.

 

ಸೃಜನಾತ್ಮಕ ಕಲಾವಿದರ ಕೊಡುಗೆಗಳ ಬಗ್ಗೆ ನಮ್ಮ ಸಾರ್ವಜನಿಕ ಸಂಸ್ಕೃತಿಯಲ್ಲಿ ಹೆಚ್ಚಿನ ಮೆಚ್ಚುಗೆ ಇರಬೇಕೆಂದು ನಾನು ಬಹಳ ಕಾಲದಿಂದಲೂ ಅಪೇಕ್ಷಿಸಿದವನು. ಬೇರಾರಿಗೂ ಸಾಟಿ ಇಲ್ಲದಂತಹ ಎಂ. ಎಸ್. ಸುಬ್ಬುಲಕ್ಷ್ಮಿ ಅವರಿಗೆ `ಭಾರತ ರತ್ನ~ ಪ್ರಶಸ್ತಿ ನೀಡಬೇಕೆಂದು 1990ರ ದಶಕದ ಮಧ್ಯಭಾಗದಲ್ಲಿ, ಗೋಪಾಲಕೃಷ್ಣ ಗಾಂಧಿ ಹಾಗೂ ಎಚ್. ವೈ. ಶಾರದಾ ಪ್ರಸಾದ್ ಅವರ ನಾಯಕತ್ವದಲ್ಲಿ ನಡೆದ ಪ್ರಚಾರಾಂದೋಲನದಲ್ಲಿ ನಾನು ಪಾಲ್ಗೊಂಡಿದ್ದೆ.

 

ಅನೇಕ ಸಾಧಾರಣ ಅಥವಾ  ಕೆಟ್ಟ ರಾಜಕಾರಣಿಗಳೆಲ್ಲಾ ಆ ಬಿರುದಿನಿಂದ ಘನತೆ ಪಡೆದುಕೊಂಡಿದ್ದರು. ಹೀಗಿದ್ದೂ ಎಂ.ಎಸ್ ಗೆ ಈ ಗೌರವ ದಕ್ಕಿರಲಿಲ್ಲ. ಈ ಪ್ರಚಾರಾಂದೋಲನ ಯಶಸ್ವಿಯಾಯಿತು. ಎಂ.ಎಸ್ ಅಲ್ಲದೆ ಲತಾ ಮಂಗೇಶ್ಕರ್, ರವಿ ಶಂಕರ್ ಹಾಗೂ ಬಿಸ್ಮಿಲ್ಲಾಖಾನ್ ಅವರಿಗೂ ಈ `ಭಾರತ ರತ್ನ~ ಪ್ರಶಸ್ತಿ ಸಿಕ್ಕಿ ಭಾರತ ಗಣರಾಜ್ಯದ ಅತ್ಯುನ್ನತ ಗೌರವದ ಕೀರ್ತಿ ಹೆಚ್ಚಾಯಿತು. ಈಗ ಕೊಲ್ಕೊತ್ತಾದಲ್ಲಿ ಸಾರ್ವಜನಿಕ ಕಟ್ಟಡಕ್ಕೆ `ಇಂದಿರಾ ಗಾಂಧಿ~ಯ ಹೆಸರಿನ ಬದಲಾಗಿ ಕವಿಯ ಹೆಸರಿಡಲಾಗುವುದು ಎಂಬುದು ನನಗೆ ಸಂತೋಷ ನೀಡಿದೆ. ನಾನು ಜವಾಹರಲಾಲ್ ನೆಹರೂ ಅವರನ್ನು ಮೆಚ್ಚುತ್ತೇನಾದರೂ, ಇಂದಿರಾ ಹಾಗೂ ಇಂದಿರಾ ನಂತರದ ಘಟ್ಟಗಳಲ್ಲಿ ಕಾಂಗ್ರೆಸ್ ಪಕ್ಷದ ವಂಶವಾಹಿ ಆಡಳಿತದ ಬಗ್ಗೆ ನನಗೆ ಆಳವಾದ ಅಸಹನೆ ಇದೆ. ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷೆಯಾಗಿರುವ ಸಂದರ್ಭದಲ್ಲಿ ಇದು ಸಾರ್ವಕಾಲಿಕ ಕುಸಿತ  ತಲುಪಿದೆಯೇನೊ.  ಜೀವಂತವಿರುವ ನೆಹರೂ - ಗಾಂಧಿಗಳಾದ, ಸೋನಿಯಾ - ರಾಹುಲ್ ಜೊತೆಗೆ, ಕಾಲವಾಗಿರುವ ನೆಹರೂ -ಗಾಂಧಿಗಳಾದ ಇಂದಿರಾ - ರಾಜೀವ್‌ರನ್ನು ನಿಯಮಿತವಾಗಿ ಶಾಸಕರು ಹಾಗೂ ಸಚಿವರು ಹೊಗಳುವುದರಲ್ಲೇ ಸಾರ್ಥಕ್ಯ ಕಾಣುತ್ತಾರೆ. ತಮಗೆ ಸದಾ ಪ್ರಾಶಸ್ತ್ಯವಿರಬೇಕೆಂದು ಬಯಸುವ ಕಾಂಗ್ರೆಸ್ ನಾಯಕರು, ಇಂದಿರಾ ಅಥವಾ ರಾಜೀವ್ ಹೆಸರುಗಳನ್ನು ಕಟ್ಟಡ ಅಥವಾ ವಿಮಾನ ನಿಲ್ದಾಣಗಳಿಗೆ ಇಡುವುದು ಸೂಕ್ತ ಎಂದು ಭಾವಿಸುತ್ತಾರೆ. ಅಥವಾ ಅವರ ನಿಜವಾದ ಅಥವಾ ಭ್ರಮಾತ್ಮಕ ಸಾಧನೆಗಳನ್ನು ಹೊಗಳುವ ಭಾರಿ ಜಾಹೀರಾತುಗಳನ್ನು ತೆರಿಗೆದಾರರ ವೆಚ್ಚದಲ್ಲಿ ನೀಡುತ್ತಿರುವುದು ಸೂಕ್ತ ಎಂದು ಭಾವಿಸುತ್ತಾರೆ.

 

`ಇಂದಿರಾ ಭವನ~ವನ್ನು `ನಜ್ರುಲ್ ಭವನ~ವಾಗಿ ಮರು ನಾಮಕರಣ ಮಾಡುವ ವಿಚಾರದಲ್ಲಿ ಪಶ್ಚಿಮ ಬಂಗಾಳದ ಕಾಂಗ್ರೆಸಿಗರ ಪ್ರತಿಭಟನೆ ಇದೇ ವಂದಿಮಾಗಧ ಸಂಸ್ಕೃತಿಯದೇ ಲಕ್ಷಣ. ಈ ಹೆಸರಿಡುವ ಅಥವಾ ಮರುನಾಮಕರಣ ಮಾಡುವ ಕ್ರಿಯೆಗಳಲ್ಲಿ ರಾಜಕಾರಣಿಗಳು ತಮಗೆ ಸಲ್ಲಬೇಕಾದುದಕ್ಕಿಂತ ಹೆಚ್ಚಿನದನ್ನೇ ಪಡೆಯುತ್ತಾರೆ; ಸಾಹಿತಿಗಳು, ಸಂಗೀತಗಾರರು ಅತ್ಯಂತ ಕಡಿಮೆ ಪಡೆಯುತ್ತಾರೆ ಎಂದು ಯೋಚಿಸುವವರಿಗೆ ಕೊಲ್ಕೊತ್ತಾದಲ್ಲಿನ ಈ ಬದಲಾವಣೆ ಹೃದಯಸ್ಪರ್ಶಿಯಾಗುವಂತಹದ್ದು. ಇಡೀ ವಿಮಾನ ನಿಲ್ದಾಣಕ್ಕೆ ಕವಿಯ ಹೆಸರಿಟ್ಟ ದಕ್ಷಿಣ ಏಷ್ಯಾದ ನಗರವೊಂದರತ್ತ ನಾನವರ ಗಮನ ಸೆಳೆಯಲೂ ಬಯಸುತ್ತೇನೆ. ಲಾಹೋರ್‌ನಲ್ಲಿರುವ ಅಲ್ಲಾಮಾ ಇಕ್ಬಾಲ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಅನ್ನು ನಾನಿಲ್ಲಿ ಪ್ರಸ್ತಾಪಿಸುತ್ತಿದ್ದೇನೆ.

 

ಭಾರತೀಯರು ಪಾಕಿಸ್ತಾನಿಗಳನ್ನು ಅನುಕರಿಸಲು ಬಯಸುವುದಿಲ್ಲ. ಆದರೆ ಈ ವಿಚಾರದಲ್ಲಿ ಮಾತ್ರ ಈ ಭಾವನೆ ಕೈಬಿಡಲು ಬಯಸಬಹುದೇನೊ. ಪುಣೆಯ ಬಳಿ ಹೊಸ ವಿಮಾನ ನಿಲ್ದಾಣವೇನಾದರೂ ನಿರ್ಮಾಣವಾದಲ್ಲಿ  ಸಂತ ತುಕಾರಾಮನಂತಹ ಕವಿಗಿಂತ ಬೇರೆ ಹೆಸರು ಬೇಕೆ? ಕೊಲ್ಕೊತ್ತಾಗೆ ಮುಂದೆ ಎಂದಾದರೂ ಎರಡನೇ ವಿಮಾನ ನಿಲ್ದಾಣದ ಅಗತ್ಯ ಬಿದ್ದಲ್ಲಿ ಅದಕ್ಕೆ ಒಬ್ಬರಿಗಿಂತ ಇಬ್ಬರು ಕವಿಗಳು ಟ್ಯಾಗೋರ್ ಹಾಗೂ ನಜ್ರುಲ್ ಇಸ್ಲಾಂ ಹೆಸರುಗಳನ್ನು ಒಟ್ಟಾಗಿ ಸೇರಿಸಿ ಇಡಬೇಕು.

(ನಿಮ್ಮ ಅನಿಸಿಕೆ ತಿಳಿಸಿ: ಛಿಜಿಠಿಜಛ್ಛಿಛಿಛಿಚಿಚ್ಚಃಟ್ಟಚ್ಜಚ್ಞಜಿ.್ಚಟ.ಜ್ಞಿ)

ಪ್ರತಿಕ್ರಿಯಿಸಿ (+)