ಶುಕ್ರವಾರ, ಏಪ್ರಿಲ್ 23, 2021
24 °C

ಖಿದ್ರನ ಉಪದೇಶ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಒಂದು ದೇಶ. ಅದಕ್ಕೊಬ್ಬ ರಾಜ. ಅವನು ಒಳ್ಳೆಯವನು, ಆದರೆ ಸಮರ್ಥನಲ್ಲ. ರಾಜ ಅಸಮರ್ಥನಾದರೆ ದೇಶದ ಪ್ರಗತಿ ಕುಂಠಿತವಾಗುತ್ತದೆ.ಅಂತೆಯೇ ಈ ದೇಶದಲ್ಲಿ ಅಶಾಂತಿ ತಲೆದೋರಿತು, ಜನ ಆಲಸಿಗಳಾಗಿದ್ದರು. ರಾಜನಿಗೆ ದಿಕ್ಕೇ ತೋರದಂತಾಯಿತು. ಆದ್ದರಿಂದ ಆತ ತನಗೆ ಖಿದ್ರನ ದರ್ಶನವಾದೀತೇ ಎಂದು ಕಾಯುತ್ತಿದ್ದ. ಸೂಫೀ ಪರಂಪರೆಯಲ್ಲಿ ಒಂದು ನಂಬಿಕೆಯಿದೆ. ಖಿದ್ರನೆಂಬುವನು ಭಗವಂತನ ದರ್ಶನವನ್ನು ಪಡೆದವನು. ಆತ ಚಿರಂಜೀವಿ. ಆದರೆ ಕಣ್ಣಿಗೆ ಕಾಣುವವನಲ್ಲ. ತನ್ನ ಮನಸ್ಸಿಗೆ ತೋಚಿದಾಗ, ಯಾರಾದರೂ ಸಜ್ಜನರಿಗೆ ಅವಶ್ಯಕತೆ ಬಿದ್ದಾಗ ಆತ ದೇಹವನ್ನು ಹೊಂದಿ ಕಣ್ಣಿಗೆ ಕಾಣಿಸುತ್ತಾನೆ. ಅಂತಹ ಖಿದ್ರ ತನ್ನ ಕಣ್ಣಿಗೆ ಬಿದ್ದರೆ ದೇಶದ ಕಷ್ಟ ಪರಿಹಾರಕ್ಕೆ ಸಹಾಯವಾದೀತು ಎಂದು ರಾಜ ಕಾಯುತ್ತಿದ್ದ.ಒಂದು ಘೋಷಣೆಯನ್ನು ಹೊರಡಿಸಿಬಿಟ್ಟ. ತನ್ನ ಪ್ರಜೆಗಳಲ್ಲಿ ಯಾರಾದರೂ ತನಗೆ ಖಿದ್ರನ ದರ್ಶನ ಮಾಡಿಸಿದರೆ ಅವರು ಕೇಳಿದ್ದನ್ನು ಕೊಟ್ಟುಬಿಡುತ್ತೇನೆ ಎಂದು ಡಂಗುರ ಸಾರಿಸಿದ. ಪ್ರಜೆಗಳಿಗೂ ಖಿದ್ರನ ದರ್ಶನದ ಅಪೇಕ್ಷೆ ಇದೆ. ಆದರೆ ಆತ ಎಲ್ಲಿದ್ದಾನೆ ಏನು ಮಾಡಿದರೆ ದರ್ಶನ ಕೊಡುತ್ತಾನೆ ಎಂಬುದು ತಿಳಿದಿಲ್ಲ. ಈ ರಾಜ್ಯದಲ್ಲಿ ಮುದುಕನೊಬ್ಬನಿದ್ದ. ಆತನ ಪರಿಸ್ಥಿತಿ ತುಂಬ ಹೀನಾಯವಾಗಿತ್ತು. ಆತನ ಒಬ್ಬನೇ ಮಗ, ಸೊಸೆ ಪ್ರವಾಹದಲ್ಲಿ ಕೊಚ್ಚಿ ಹೋಗಿಬಿಟ್ಟಿದ್ದರು. ಇಳಿವಯಸ್ಸಿನಲ್ಲಿ ತನ್ನ ಹೆಂಡತಿಯೊಂದಿಗೆ ದುಃಖದಲ್ಲಿ ಬದುಕುತ್ತಿದ್ದ.  ಆಗಾಗ ಅವನ ಆರೋಗ್ಯ ಕೆಡುತ್ತಿತ್ತು. ಔಷಧಿಗೆ ದುಡ್ಡಿಲ್ಲ. ಮಗ, ಸೊಸೆಯರ ಅಂತ್ಯಕ್ರಿಯೆಗೆ ಸಾಲ ಮಾಡಿದ್ದ. ದಿನನಿತ್ಯದ ಬದುಕಿಗೆ ಸಾಲವೇ ಗತಿ. ಕನಿಕರದಿಂದ ಕೆಲವರು ಸಹಾಯಮಾಡಿದ್ದರೇನೋ ನಿಜ. ಆದರೆ ಯಾವ ಆದಾಯವೂ ಇರದಿದ್ದ ಮುದುಕನಿಗೆ ಯಾರು ತಾನೇ ಹೆಚ್ಚಿನ ಸಾಲ ಕೊಟ್ಟಾರು? ಅದು ಮರಳಿ ಬರದಿರುವ ಸಾಲ.ಈ ಮುದುಕ ರಾಜನ ಘೋಷಣೆಯನ್ನು ಕೇಳಿದ. ಸೀದಾ ಅರಮನೆಗೆ ನಡೆದ. ತಾನು ರಾಜನಿಗೆ ಖಿದ್ರನನ್ನು ತೋರಿಸುವುದಾಗಿಯೂ, ಅದಕ್ಕೆ ಪ್ರತಿಯಾಗಿ ರಾಜ ಅವನಿಗೆ ಹತ್ತು ಸಾವಿರ ಬಂಗಾರದ ನಾಣ್ಯಗಳನ್ನು ಕೊಡಬೇಕೆಂದು ಕೇಳಿದ. ರಾಜ ಒಪ್ಪಿ ಅವನಿಗೆ ಹಣ ನೀಡಿದ. ಆದರೆ ಒಂದು ಕರಾರು ಮಾಡಿದ.

ನಲವತ್ತು ದಿನಗಳಲ್ಲಿ ಖಿದ್ರನ ದರ್ಶನ ಮಾಡಿಸದಿದ್ದರೆ ಮುದುಕನನ್ನು ಶೂಲಕ್ಕೇರಿಸಲಾಗುವುದು. ಮುದುಕ ಮನೆಗೆ ಬಂದ. ತನ್ನ ಮೇಲಿದ್ದ ಸಾಲವನ್ನು ತೀರಿಸಿದ. ಪುಟ್ಟ ತೋಟವೊಂದನ್ನು ಕೊಂಡು ಅದನ್ನು ನೋಡಿಕೊಳ್ಳಲು ತರುಣನೊಬ್ಬನನ್ನು ನಿಯಮಿಸಿದ. ಅದರಲ್ಲಿಯೇ ಒಂದು ಸಣ್ಣ ಗುಡಿಸಲನ್ನು ಕಟ್ಟಿಕೊಂಡ. ಇದೆಲ್ಲ ಆಗುವುದರಲ್ಲಿ ನಲವತ್ತು ದಿನಗಳು ಮುಗಿಯುತ್ತಾ ಬಂದವು. ಕೊನೆಯ ದಿನ ತನ್ನ ಮುದುಕಿ ಹೆಂಡತಿಯನ್ನು ಕೂಡ್ರಿಸಿಕೊಂಡು ಹೇಳಿದ, ‘ನಾನು ರಾಜನಿಗೆ ಖಿದ್ರನನ್ನು ತೋರಿಸುತ್ತೇನೆಂದು ಹೇಳಿ ಹತ್ತು ಸಾವಿರ ಹೊನ್ನು ತಂದಿದ್ದೇನೆ. ನಮ್ಮ ಕಷ್ಟಗಳಿಗೆ ಪರಿಹಾರವೇ ಇರಲಿಲ್ಲ.ಈಗ ಈ ಹಣದಿಂದ ಒಂದು ಚೂರು ವ್ಯವಸ್ಥೆ ಮಾಡಿದ್ದೇನೆ. ತೋಟದಿಂದ ಬರುವ ಆದಾಯದಿಂದ ನಿನ್ನ ಜೀವನ ನಡೆದೀತು. ಇಂದೇ ನಲವತ್ತನೇ ದಿನ.ನಾನಿಂದು ರಾಜನ ಬಳಿಗೆ ಹೋಗಿ ಸಮರ್ಪಣೆ ಮಾಡಿಕೊಳ್ಳುತ್ತೇನೆ. ಅವರು ನನ್ನನ್ನು ನೇಣಿಗೇರಿಸುತ್ತಾರೆ. ಇನ್ನು ನೀನಾದರೂ ನಾಳಿನ ಚಿಂತೆಯಿಲ್ಲದೇ ಬದುಕಬಹುದೆಂಬ ಸಂತೋಷದಿಂದ ಪ್ರಾಣ ಬಿಡುತ್ತೇನೆ.’ ಹೆಂಡತಿ ಗೋಳಿಟ್ಟಳು, ಅತ್ತಳು. ಆಕೆಯಿಂದ ಬೀಳ್ಕೊಂಡು ಮುದುಕ ರಾಜನ ಬಳಿಗೆ ಬಂದು ಹೇಳಿದ, ‘ಮಹಾಪ್ರಭು, ನನ್ನಿಂದ ಖಿದ್ರನನ್ನು ತೋರಿಸಲಾಗಲಿಲ್ಲ. ಆ ಶಕ್ತಿಯೂ ನನಗಿಲ್ಲ. ನೀವು ಕೊಟ್ಟ ಹಣದಲ್ಲಿ ನನ್ನ ಹೆಂಡತಿಗೆ ಒಂದಷ್ಟು ಭದ್ರತೆ ಮಾಡಿದ್ದೇನೆ. ನನ್ನ ತಲೆದಂಡ ಕೊಡಲು ಸಿದ್ಧನಾಗಿ ಬಂದಿದ್ದೇನೆ.’ರಾಜನಿಗೆ ಇದೊಂದು ಹೊಸ ಸಮಸ್ಯೆ. ಮಂತ್ರಿಗಳ ಅಭಿಪ್ರಾಯ ಕೇಳಿದ. ಒಬ್ಬ ಮಂತ್ರಿ ಈತನನ್ನು ಗಲ್ಲಿಗೇರಿಸಲೇಬೇಕು ಎಂದ.  ಮತ್ತೊಬ್ಬ ದೇಶದಿಂದ ಹೊರಹಾಕಬೇಕು ಎಂದು ಒತ್ತಾಯಿಸಿದ. ಇನ್ನೊಬ್ಬ ಈತನನ್ನು ಚೂರುಚೂರಾಗಿ ಕತ್ತರಿಸಿ ಕಾಡಿನಲ್ಲಿ ಚೆಲ್ಲಬೇಕೆಂದ.  ಕೊನೆಯವನು ಮಾತ್ರ ಅವನನ್ನು ಕ್ಷಮಿಸಿ ಅವರ ಜೀವನಕ್ಕೊಂದು ದಾರಿಮಾಡಿಕೊಡಬೇಕೆಂದು ವಿನಂತಿಸಿದ. ಇದು ನಡೆದಾಗ ಸಭೆಯಲ್ಲಿ ಒಬ್ಬ ಹಿರಿಯ ಮನುಷ್ಯ ನೀಳವಾದ ಗಡ್ಡ ಬಿಟ್ಟು ಗಂಭೀರವಾಗಿ ಕುಳಿತಿದ್ದ. ಮಂತ್ರಿಗಳ ಸಲಹೆ ಮುಗಿದ ಮೇಲೆ ತನ್ನ ಕೈ ಎತ್ತಿ ಹೇಳಿದ,  ‘ನಾಲ್ಕನೆಯ ಮಂತ್ರಿಯ ಅಭಿಪ್ರಾಯವನ್ನು ನೀನು ಪಾಲಿಸಬೇಕು.ಆ ಮುದುಕ ಹಾಗೆ ನಡೆದುಕೊಂಡದ್ದು ಅಸಹಾಯಕತೆಯಿಂದ, ಅನಿವಾರ್ಯತೆಯಿಂದ. ನಿನ್ನ ರಾಜ್ಯದ ಅಶಕ್ತರಿಗೆ, ದೀನರಿಗೆ ಭದ್ರತೆಯನ್ನು ನೀಡು.ಆಡಳಿತವನ್ನು ಸ್ವಲ್ಪ ಬಿಗಿಮಾಡು, ಮಾತು ಕಡಿಮೆ ಮಾಡು. ಎಲ್ಲ ಒಳ್ಳೆಯದಾಗುತ್ತದೆ. ನಿನಗೆ ಖಿದ್ರನ ದರ್ಶನವಾಯಿತಲ್ಲ?’  ಹೀಗೆ ಹೇಳುತ್ತಿದ್ದಂತೆ ಗಾಳಿಯಲ್ಲಿ ಕರಗಿ ಮಾಯವಾದ. ಅವನೇ ಖಿದ್ರನೆಂದು ಎಲ್ಲರಿಗೂ ತಿಳಿಯಿತು. ಅಶಕ್ತನಾದ ಮುದುಕನನ್ನು ರಕ್ಷಿಸಲು ಆತ ಬಂದಿದ್ದ. ರಾಜ ಖಿದ್ರನ ಆದೇಶದಂತೆ ನಡೆದ. ರಾಜ್ಯ  ಸಮೃದ್ಧವಾಯಿತು.ಖಿದ್ರನ ಮಾತು ಯಾವ ಕಾಲಕ್ಕೂ ಅನ್ವಯಿಸುವಂತಹದ್ದು. ರಾಜ್ಯ ನಡೆಸುವವರು. ಕಡಿಮೆ ಮಾತನಾಡಬೇಕು, ಆಡಳಿತ ಬಿಗಿಯಾಗಿರಬೇಕು ಮತ್ತು   ಅಶಕ್ತರಿಗೆ, ದೀನರಿಗೆ ಭದ್ರತೆ ನೀಡಬೇಕು. ಆಗ ದೇಶ ಸುಭಿಕ್ಷವಾಗುತ್ತದೆ. ಆದರೆ ಸಾಮಾನ್ಯವಾಗಿ ಆಡಳಿತ ನಡೆಸುವವರು ಇದಕ್ಕೆ ವಿರುದ್ಧವಾಗಿಯೇ ನಡೆದು ದೇಶವನ್ನು ತೊಂದರೆಗೆ ತಳ್ಳಿ, ತಾವೂ ಕಷ್ಟದಲ್ಲಿ ಬೀಳುತ್ತಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.