ಗಲ್ಲು ಶಿಕ್ಷೆ ಆಯಿತು. ಆದರೆ, ಅದು ಉತ್ತರವೇ?

7

ಗಲ್ಲು ಶಿಕ್ಷೆ ಆಯಿತು. ಆದರೆ, ಅದು ಉತ್ತರವೇ?

Published:
Updated:
ಗಲ್ಲು ಶಿಕ್ಷೆ ಆಯಿತು. ಆದರೆ, ಅದು ಉತ್ತರವೇ?

ನೂರೆಂಟು ಪ್ರಶ್ನೆಗಳು ಮನಸ್ಸನ್ನು ಮುತ್ತಿ ಕಾಡುತ್ತಿವೆ. ಉತ್ತರಕ್ಕಾಗಿ ಮನಸ್ಸು ತಡಕಾಡುತ್ತದೆ. ದೆಹಲಿಯ ಸಾಕೇತ್‌ ನ್ಯಾಯಾಲಯ ಮೊನ್ನೆ ಅತ್ಯಾಚಾರ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಆದರೆ, ಅತ್ಯಾಚಾರ ಏಕೆ ಆಗುತ್ತದೆ? ಅತ್ಯಾಚಾರ ಮಾಡುವಂಥ ಸ್ಥಿತಿ ನಮ್ಮ ಮನಸ್ಸಿನಲ್ಲಿ ಎಲ್ಲಿ ಅವಿತುಕೊಂಡು ಕುಳಿತಿರುತ್ತದೆ? ಮನುಷ್ಯ ಇದ್ದಕ್ಕಿದ್ದಂತೆ ಕರಡಿ ಆಗಲು ಹೇಗೆ ಸಾಧ್ಯ? ಆ 23ರ ಹರಯದ ಯುವತಿ ಏನು ತಪ್ಪು ಮಾಡಿದ್ದಳು? ಅವಳ ಮೇಲೆ ಎಂಥ ಅನ್ಯಾಯ ನಡೆಯಿತಲ್ಲ? ಆಕೆಯ ಮೇಲೆ ಮೃಗಗಳ ಹಾಗೆ ಆಕ್ರಮಿಸಿದವರಿಗೆ ಗಲ್ಲು ಶಿಕ್ಷೆಯಾದರೆ ಆಕೆಗೆ ಆದ ಅನ್ಯಾಯಕ್ಕೆ ಪರಿಹಾರ ಸಿಕ್ಕಂತೆ ಆಯಿತೇ? ಆ ಹೆಣ್ಣು ಮಗಳು ಕಟ್ಟಿಕೊಂಡ ಕನಸುಗಳು ಕಮರಿ ಹೋಗಲಿಲ್ಲವೇ? ಆಕೆಯ ನಗುವನ್ನು, ಸೆಡವನ್ನು, ಅಂದವನ್ನು, ಸಾಂಗತ್ಯವನ್ನು  ಅವಳ ತಂದೆ ತಾಯಿ, ಆಕೆಯ ಗೆಳೆಯ ಮತ್ತೆ ಎಲ್ಲಿ ಹುಡುಕಬೇಕು? ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾದುದರಿಂದ ಯುವತಿಯ ಕುಟುಂಬಕ್ಕೆ ನ್ಯಾಯ ಸಿಕ್ಕಿತು ಎಂದರೆ ಏನು ಅರ್ಥ? ಸಂತ್ರಸ್ತರು ಇಷ್ಟಕ್ಕೇ ಸಮಾಧಾನ ಮಾಡಿಕೊಳ್ಳಬೇಕೇ? ಅವರ ಹೋರಾಟ ಇಲ್ಲಿಗೇ ನಿಲ್ಲುತ್ತದೆಯೇ? ಮುಂದಿನ ನ್ಯಾಯಾಲಯಗಳೂ ಇವೆಯಲ್ಲ? ಅವರ ಕುಟುಂಬದ ಜತೆಗೆ ನಿಲ್ಲಲು ಉಳಿದವರಿಗೆ ವೇಳೆ ಇದೆಯೇ? ವ್ಯವಧಾನ ಇದೆಯೇ?ದೆಹಲಿಯಲ್ಲಿ ನಡೆದ ಈ ಅತ್ಯಾಚಾರಕ್ಕೆ ಸಮನಾದ ಮತ್ತೊಂದು ಘಟನೆ ಆಧುನಿಕ ಭಾರತದ ಇತಿಹಾಸದಲ್ಲಿ ನಡೆದಂತೆ ಕಾಣುವುದಿಲ್ಲ. ಕನಿಷ್ಠ ವರದಿಯಾದಂತೆ ಇಲ್ಲ. ಅಲ್ಲಿ ಬರೀ ಅತ್ಯಾಚಾರ ಮಾತ್ರ ನಡೆದಿರಲಿಲ್ಲ. ಒಬ್ಬ ಹೆಣ್ಣುಮಗಳನ್ನು ಹೇಗೆ ನಡೆಸಿಕೊಳ್ಳಬಾರದು ಎಂಬುದಕ್ಕೆ ಅಲ್ಲಿ ಅನೇಕ ನಿದರ್ಶನಗಳು ಇದ್ದುವು. ಆಕೆಯ ದೇಹದ ಮೇಲೆ ಮಾತ್ರ ದೌರ್ಜನ್ಯ ನಡೆದಿರಲಿಲ್ಲ. ಒಟ್ಟು ಹೆಣ್ಣುಕುಲದ ಮಾನಸಿಕತೆಯ ಮೇಲೆಯೇ ಅಲ್ಲಿ ದಾಳಿ ನಡೆದಂತೆ ಇತ್ತು. ಇಲ್ಲವಾದರೆ ಆ ಯುವತಿಯ ಮೇಲೆ ಅತ್ಯಂತ ಕ್ರೂರ ಅತ್ಯಾಚಾರ ನಡೆದ ನಂತರವೂ ಆಕೆಯ ದೇಹದ ಒಳಗೆ ಕಬ್ಬಿಣದ ಸರಳನ್ನು ಸೇರಿಸಬೇಕಾದ ಅಗತ್ಯ ಇರಲಿಲ್ಲ. ಕರುಳನ್ನು ಬಗೆದು ಹೊರಗೆ ಎಳೆಯಬೇಕು ಎಂದು ಅನಿಸುತ್ತಿರಲಿಲ್ಲ. ಮಗಳಂಥ, ಸೊಸೆಯಂಥ ಯುವತಿಯನ್ನು ಬೆತ್ತಲೆ ಮಾಡಿ ರಸ್ತೆಗೆ ಎಸೆದು ಹೋಗಬೇಕು ಎಂದು ತೋರುತ್ತಿರಲಿಲ್ಲ.ದೆಹಲಿ ನಡುಗಿದ್ದು ಈ ಅತ್ಯಾಚಾರಕ್ಕೆ ಅಲ್ಲ. ದೌರ್ಜನ್ಯಕ್ಕೆ ಅಲ್ಲ. ಅದರ ಒಳಗೆ ಇದ್ದ ಕ್ರೌರ್ಯಕ್ಕೆ. ನಾಳೆ ನನಗೂ ಹೀಗೆಯೇ ಆದರೆ ಹೇಗೆ ಎಂಬ ಭಯಕ್ಕೆ. ಆ ಕ್ರೌರ್ಯದ ನಾಯಕತ್ವವನ್ನು ತನ್ನ ತಮ್ಮನೇ ಆಗಿರಬಹುದಾದ ಒಬ್ಬ ಬಾಲಕ ವಹಿಸಿಕೊಂಡಿದ್ದ ಎಂಬ ಆತಂಕಕ್ಕೆ. ಹಿರಿಯರಿಗೆ ಗಲ್ಲು ಶಿಕ್ಷೆ ಆಗಿದೆ. ಆದರೆ, ಆ ಬಾಲಕನಿಗೆ? ಆತ ನಿಜವಾಗಿಯೂ ಬಾಲಕನೇ ಹೌದೇ? ಬಾಲಕ ಎಂದರೆ ಯಾರು? ಅತ್ಯಾಚಾರ ಮಾಡುವ ಸಾಮರ್ಥ್ಯ ಇರುವವನನ್ನೂ ಬಾಲಕ ಎಂದು ಕರೆಯಬಹುದೇ? ಬರೀ ಅತ್ಯಾಚಾರ ಮಾತ್ರವಲ್ಲ ಆಕೆಯ ದೇಹದಲ್ಲಿ ಕಬ್ಬಿಣದ ಸಲಾಕೆಯನ್ನು ತೂರಿಸುವಂಥ ಮೃಗಕ್ಕೂ ಬಾಲಕ ಎಂದು ಹೇಳಬಹುದೇ? ತಾನು ಮಾತ್ರ ಅತ್ಯಾಚಾರ ಮಾಡಿ ಸುಮ್ಮನಾಗದೇ ಇತರರನ್ನು ಅದೇ ಕೃತ್ಯಕ್ಕೆ ಹುರಿದುಂಬಿಸುವವನು ಹೇಗೆ ಕುಮಾರ ಆದಾನು?ಅಲ್ಲಿ ಮಾತ್ರ ಬಾಲಕ ಇಲ್ಲ. ಮುಂಬೈನ ಶಕ್ತಿ ಮಿಲ್‌ ಆವರಣದಲ್ಲಿ ಪತ್ರಿಕಾ ಛಾಯಾಗ್ರಾಹಕಿ ಮೇಲೆ ಅತ್ಯಾಚಾರ ಮಾಡಿದ ಗುಂಪಿನಲ್ಲಿಯೂ ಒಬ್ಬ ಬಾಲಕ ಇದ್ದ. ಅವನೂ ಎಲ್ಲರಿಗಿಂತ ಕ್ರೂರನಾಗಿದ್ದ. ಅವನ ಜತೆಗೆ ಇದ್ದ ಇನ್ನೂ ಒಬ್ಬನೂ ಬಾಲಕ ಎಂದು ಆತನ ತಂದೆ ತಾಯಿ ಈಗ ಹೇಳ ಹೊರಟಿದ್ದಾರೆ. ಅದು ಅಪರಾಧದ ಗುರುತರತೆಯನ್ನು ಕಡಿಮೆ ಮಾಡುತ್ತದೆಯೇ? ಅಥವಾ ಹೆಚ್ಚು ಮಾಡುತ್ತದೆಯೇ? ಆ ಬಾಲಕನ ಜತೆಗೆ ಅವನ ಸೋದರ ಸಂಬಂಧಿಯೂ ಒಬ್ಬನಿದ್ದ. ಎಲ್ಲಿಯಾದರೂ ಉಂಟೇ? ಅಣ್ಣ ತಮ್ಮಂದಿರು ಸೇರಿಕೊಂಡು ಒಂದೇ ಕಡೆ ಒಬ್ಬಳೇ ಹೆಣ್ಣು ಮಗಳ ಜತೆಗೆ ಹೀಗೆ ನಡೆದುಕೊಳ್ಳುವುದು? ಮುಂಬೈ ಅತ್ಯಾಚಾರದಲ್ಲಿ ಇಬ್ಬರು ಸೋದರ ಸಂಬಂಧಿಗಳು ಇದ್ದರು. ದೆಹಲಿಯಲ್ಲಿ ಖಾಸಾ ಅಣ್ಣತಮ್ಮಂದಿರೇ ಪಾಲುಗೊಂಡಿದ್ದರು. ಅಣ್ಣ ಮಾಡುವುದು ತಪ್ಪು ಎಂದು ತಮ್ಮನಿಗೆ ಅನಿಸಲಿಲ್ಲ. ತಮ್ಮನಿಗೆ ಬುದ್ಧಿ ಹೇಳುವ ಸ್ಥಿತಿಯಲ್ಲಿ ಅಣ್ಣ ಇರಲಿಲ್ಲ.ಎಷ್ಟು ಜನರಿಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಮುಂಬೈ ಯುವತಿಯ ಜತೆಗೆ ಅಸಹಜ ಲೈಂಗಿಕ ಕ್ರಿಯೆ ನಡೆದಿದೆ. ಅದನ್ನು ಆ ದುಷ್ಟರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾರೆ. ದೆಹಲಿಯ ಅಪರಾಧಿಗಳ ವಿರುದ್ಧವೂ ‘ಅಸ್ವಾಭಾವಿಕ ಲೈಂಗಿಕ ಅಪರಾಧ’ದ ಆರೋಪ ಇದೆ. ನಮ್ಮೊಳಗಿನ ಕ್ರೌರ್ಯ ಎಂಥದು? ವಿಕೃತಿ ಎಂಥದು? ಅದಕ್ಕೆ ಏನಾದರೂ ಮಿತಿಗಳು ಇವೆಯೇ ಇಲ್ಲವೇ?  ಮತ್ತೆ ಪ್ರಶ್ನೆಗಳು...ಮುಂಬೈನಲ್ಲಿ ಅಷ್ಟೇ ಬಾಲಕ ಇರಲಿಲ್ಲ. ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿ ಕಾನೂನು ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದಲ್ಲಿಯೂ ಒಬ್ಬ ಬಾಲಕನಿದ್ದ. ಅಲ್ಲಿ ಅದೃಷ್ಟಕ್ಕೆ ಅಣ್ಣ ತಮ್ಮಂದಿರು ಇರಲಿಲ್ಲ. ಆದರೆ, ‘ನಾವು ಏನು ಮಾಡಬೇಕೋ ಅದನ್ನು ಮಾಡಿದ್ದೇವೆ’ ಎಂದು ಬಹಿರಂಗವಾಗಿ ಹೇಳುವ ಮಾನಗೇಡಿಯೊಬ್ಬ ಅಲ್ಲಿ ಇದ್ದ. ಆತ ಇದುವರೆಗೆ ತಲೆ ತಪ್ಪಿಸಿಕೊಂಡು ಮೊನ್ನೆ ಮೊನ್ನೆ ಸಿಕ್ಕಿ ಬಿದ್ದಿದ್ದಾನೆ.ಈ ಮೂರೂ ಘಟನೆಗಳು ಆಕಸ್ಮಿಕವಲ್ಲ. ಹರಯದ ಭರದಲ್ಲೋ, ಕುಡಿತದ ಅಮಲಿನಲ್ಲೋ ಆದುವೂ ಅಲ್ಲ. ಎಲ್ಲವೂ ಯೋಜಿತ. ಇವರೆಲ್ಲ ಬೇಟೆಗಾರರು. ಬಲಿಗಳು ತಮ್ಮ ಬಲೆಗೆ ಬಂದು ಬೀಳಲಿ ಎಂದು ಕಾಯುವವರು. ಬೀಳದಿದ್ದರೆ ಬೀಳುವ ಹಾಗೆ ಮಾಡುವವರು. ದೆಹಲಿಯಲ್ಲಿ ಅತ್ಯಾಚಾರಕ್ಕಿಂತ ಮುಂಚೆ ದರೋಡೆ ಮಾಡಿದ್ದರು. ಆಗ ಪುರುಷನ ಬದಲು ಹೆಣ್ಣು ಮಗಳು ಸಿಕ್ಕಿದ್ದರೆ ಅವಳಿಗೂ ಇದೇ ಗತಿಯಾಗುತ್ತಿತ್ತು. ಮುಂಬೈ ಬೇಟೆಗಾರರು ಈ ಛಾಯಾಗ್ರಾಹಕಿಗಿಂತ ಮುಂಚೆ ಕಸ ಎತ್ತಲು ಬರುವ ಹೆಣ್ಣು ಮಕ್ಕಳನ್ನೂ ಬಿಟ್ಟಿರಲಿಲ್ಲ. ಜ್ಞಾನಭಾರತಿ ಪ್ರಕರಣದಲ್ಲಿ ಸಿಕ್ಕಿಬಿದ್ದವರ ವಿರುದ್ಧವೂ ಅದೇ ಆರೋಪ ಇದೆ. ಏನು ಮಾಡಬೇಕು ಎಂದುಕೊಂಡಿದ್ದೆವೋ ಅದನ್ನು ಮಾಡಿದ್ದೇವೆ ಎಂಬ ಅವನ ಮಾತಿನಲ್ಲಿಯೇ ಅದರ ಇಂಗಿತ ಇದೆ.ಆರು ವರ್ಷಗಳ ಹಿಂದೆ ದೆಹಲಿಯಲ್ಲಿ ಆರು ವರ್ಷದ ಹಸುಳೆಯೊಬ್ಬಳ ಮೇಲೆ ಅದೇ ಪ್ರದೇಶದ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಿದ. ಆಕೆಯ ದೇಹವನ್ನು ಆರು ತುಂಡು ಮಾಡಿ ಚರಂಡಿಯಲ್ಲಿ ಬಿಸಾಕಿದ. ಆತನಿಗೆ ಗಲ್ಲು ಶಿಕ್ಷೆಯಾಗಿತ್ತು. ಆದರೆ, ಆತ ಬಾಲಕ ಎಂದು ಪತ್ತೆಯಾಯಿತು. ಆತ ಮೂರು ವರ್ಷಗಳನ್ನು ಸ್ಟೇಟ್‌ ಹೋಂನಲ್ಲಿ ಕಳೆದು ಈಗ ಬಿಡುಗಡೆ ಆಗಿ ಬಂದಿದ್ದಾನೆ. ಆತನ ಮನೆಯ ಕೂಗಳತೆ ದೂರದಲ್ಲಿ ಆ ಹಸುಳೆಯ ತಂದೆ ತಾಯಿಯ ಮನೆಯೂ ಇದೆ. ಅವರಿಗೆ ಇನ್ನೂ ಒಬ್ಬಳು ಪುಟ್ಟ ಮಗಳು ಇದ್ದಾಳೆ. ಅವರು ಆ ಮನೆಯನ್ನು ಬಿಟ್ಟು ಹೋಗಬೇಕೇ? ಅಲ್ಲಿಯೇ ಇರಬೇಕೇ? ನ್ಯಾಯ ಎಂದರೆ ಏನು? ಬಾಲಕನ ಕಡೆಗೆ ನ್ಯಾಯ ಇರಬೇಕೇ? ಹಸುಳೆಯನ್ನು ಕಳೆದುಕೊಂಡ ಪಾಲಕರ ಕಡೆಗೆ ಇರಬೇಕೇ? ಎಂಥದೇ ಕುಕೃತ್ಯ ಮಾಡಿದರೂ ಬಾಲಾರೋಪಿಗಳ ಹೆಸರು ಬರೆಯಬಾರದು. ಅವನನ್ನು ಗುರುತಿಸಲೂ ಬಾರದು. ಮೂರು ವರ್ಷದ ಶಿಕ್ಷೆ ಮುಗಿಸಿಕೊಂಡು ಬಂದ ನಂತರ ಅದು ಅವನ ದಾಖಲೆಯಲ್ಲಿ ಉಳಿಯುವುದೂ ಇಲ್ಲ. ಅದನ್ನು ಅಳಿಸಿ ಹಾಕಬೇಕು ಎಂದು ಕಾನೂನೇ ಇದೆ. ಹಾಗಾದರೆ ರಕ್ಷಣೆ ಯಾರಿಗೆ ಸಿಗಬೇಕು?ನಿಜ, ಕಾನೂನು ಕುರುಡು ಎನ್ನುತ್ತಾರೆ. ಅದು ಎಷ್ಟು ಕುರುಡಾಗಿರಬೇಕು? ಅದೂ ನಿಜ, ಎಲ್ಲರಿಗೂ ಸುಧಾರಿಸಿಕೊಳ್ಳಲು ಒಂದು ಅವಕಾಶ ಕೊಡಬೇಕು. ಬಾಲಾರೋಪಿಗಳಿಗೆ ಮೊದಲು ಅವಕಾಶ ಸಿಗಬೇಕು. ಅವನು ಇನ್ನೂ ಬಹುಕಾಲ ಬದುಕಬೇಕು. ಇತ್ಯಾದಿ... ಇತ್ಯಾದಿ... ಸರಿ, ಕಿಸೆಗಳ್ಳತನ ಮಾಡುವ ಬಾಲಕರಿಗೆ ಅವಕಾಶ ಕೊಡೋಣ. ದರೋಡೆ ಮಾಡಿದರೆ ಅದಕ್ಕೂ ಒಂದು ಅವಕಾಶ ಕೊಡೋಣ. ತುಂಟ ವಯಸ್ಸು. ಈಗಷ್ಟೇ ಮೀಸೆ ಚಿಗುರುತ್ತಿವೆ. ಹುಡುಗಿಯರನ್ನು ಚುಡಾಯಿಸುತ್ತಾನೆ. ಅದಕ್ಕೂ ರಿಯಾಯಿತಿ ಕೊಡೋಣ. ಏನೋ ಮಾಡಲು ಹೋಗಿ, ಏನೋ ಆಯಿತು. ಆತನಿಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಆದರೆ, ಮಾಡಿ ಬಿಟ್ಟ. ಸರಿ, ಅದಕ್ಕೂ ರಿಯಾಯಿತಿ ಕೊಡೋಣ. ಅತ್ಯಾಚಾರ ಮಾಡಿದರೆ? ಅತ್ಯಾಚಾರ ಮಾಡಲು ಕೌಮಾರ್ಯ ಕಳೆಯುವುದು ಬೇಡವೇ? ಹಾಗಾದರೆ ಕೌಮಾರ್ಯ ಎಂದರೆ ಏನು? ಹೋಗಲಿ, ಅಪರಾಧಕ್ಕೆ ಮತ್ತು ಶಿಕ್ಷೆಗೆ ತಾಳೆ ಇರುವುದು ಬೇಡವೇ? ತಾಳೆ ಆಗಬೇಕೇ ಬೇಡವೇ? ಅತ್ಯಾಚಾರ ಮತ್ತು ಕೊಲೆಗೇ ಗರಿಷ್ಠ ಶಿಕ್ಷೆ ಮೂರೂ ವರ್ಷ ಎನ್ನುವುದಾದರೆ ಸಣ್ಣ ಪುಟ್ಟ ಅಪರಾಧಗಳಿಗೆಲ್ಲ ಹೀಗೆ ಹೋಗಿ ಹಾಗೆ ಬಂದರೆ ಸಾಕಲ್ಲ?ದೆಹಲಿ, ಮುಂಬೈ ಮತ್ತು ಬೆಂಗಳೂರಿನ ಕ್ರೂರ ಅತ್ಯಾಚಾರಗಳನ್ನು ಕಂಡ ನಂತರವೂ ಬಾಲಾರೋಪಿಗಳ ವಯಸ್ಸು ಕಡಿಮೆ ಮಾಡುವುದು ಬೇಡವೇ? ಇನ್ನೂ ಆ ಮಿತಿ ಹದಿನೆಂಟೇ ಇರಬೇಕೇ? ಕಡಿಮೆ ಮಾಡಬೇಕು ಎಂಬ ವಾದವನ್ನು ದೇಶದ  ಸರ್ವೋಚ್ಚ ನ್ಯಾಯಾಲಯ ಒಪ್ಪಿಲ್ಲ. ಅದೇ ನ್ಯಾಯಾಲಯದ ನ್ಯಾಯಮೂರ್ತಿಯಾಗಿದ್ದ ಜೆ.ಎಸ್‌.ವರ್ಮಾ ಸಮಿತಿಯೂ ಒಪ್ಪಲಿಲ್ಲ. ಉದ್ದೇಶ ಒಳ್ಳೆಯದು. ಬಾಲಾರೋಪಿಗಳನ್ನು ಶಿಕ್ಷಿಸಬಾರದು. ಅವರನ್ನು ಸುಧಾರಿಸಬೇಕು ಎಂಬುದು ಕಾನೂನಿನ ಕಾಳಜಿ.ಬಾಲಾರೋಪಿಗಳನ್ನು ಇಡುವ ಸ್ಟೇಟ್‌ ಹೋಮ್‌ಗಳಿಂದ ಹೊರಗೆ ಬಂದ ಬಾಲಕರ ಮನಃಸ್ಥಿತಿ ಸುಧಾರಿಸಿದೆಯೇ? ಅವು ನಮ್ಮ ಜೈಲುಗಳಿಗಿಂತ ಉತ್ತಮ ತಾಣಗಳೇ? ಅವುಗಳ ಸುಧಾರಣೆ ಬಗ್ಗೆ ಸರ್ಕಾರ ಏನು ಪ್ರಯತ್ನ ಮಾಡಿದೆ? ಮಾಡುವಂತೆ ಯಾವ ಒತ್ತಡ ಹಾಕಿದ್ದೇವೆ? ಸುಧಾರಣಾವಾದಿಗಳು ಆಗುವುದು ಸುಲಭ. ಉದಾರವಾದಿಗಳು ಆಗುವುದೂ ಸುಲಭ. ಮನುಷ್ಯರನ್ನು ಅಟ್ಟಿಸಿಕೊಂಡು ಹೋಗಿ ಕಚ್ಚುವ ಹುಚ್ಚು ನಾಯಿಗಳನ್ನು ರಕ್ಷಿಸಬೇಕು ಎನ್ನುವವರೂ ಹೀಗೆಯೇ ಮಾತನಾಡುತ್ತಾರೆ. ದೆಹಲಿ ಅತ್ಯಾಚಾರದ ಬಾಲಾರೋಪಿ ಬಿಡುಗಡೆಯಾದ ನಂತರ  ಯಾರಾದರೂ ಒಬ್ಬ ಸುಧಾರಣಾವಾದಿ ಆತನನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆಯೇ? ಹೀಗೆ ಮಾಡಿ ಎಂದು ದೆಹಲಿಯ ಯುವತಿಯ ತಂದೆ ತಾಯಿ ಕೇಳಿದರೆ ಅವರು ಏನು ಉತ್ತರ ಕೊಡುತ್ತಾರೆ?‘ದೇಶದಲ್ಲಿ ಇನ್ನು ಎರಡು ತಿಂಗಳು ಅತ್ಯಾಚಾರ ನಡೆಯದೇ ಇದ್ದರೆ ನಾನೇ ದೆಹಲಿ ಅತ್ಯಾಚಾರದ ಆರೋಪಿಗಳನ್ನು ನೇಣಿಗೆ ಏರಿಸಲು ಒಪ್ಪುತ್ತೇನೆ’ ಎಂದು ಅವರ ಪರ ವಕೀಲರು ಹೇಳಿದ್ದಾರೆ. ಎಂಥ ಶಿಕ್ಷೆ ಕೊಟ್ಟರೂ ಮನುಷ್ಯನ ಒಳಗಿನ ಕ್ರೌರ್ಯಕ್ಕೆ  ಅದು ಉತ್ತರ­ವಲ್ಲ ಎಂದು ಆ ವಕೀಲರಿಗೆ ಗೊತ್ತಿದೆ. ದೆಹಲಿಯ ಯುವತಿಯನ್ನು ರಕ್ಷಿಸುವುದು ಸಮಾಜದ ಹೊಣೆಯಾಗಿತ್ತು ಎಂದು ತೀರ್ಪು ಬರುವ ದಿನ ಆಕೆಯ ಗೆಳೆಯನೂ ಹೇಳಿದ್ದ. ನಾವು ಅಂಥ ಹೊಣೆಗಾರ ಸಮಾಜದಲ್ಲಿ ಬದುಕುತ್ತಿದ್ದೇವೆಯೇ? ಇಲ್ಲ ಎನಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry