ಶನಿವಾರ, ಮಾರ್ಚ್ 25, 2023
29 °C

ಗಾಂಧಿ, ಅಂಬೇಡ್ಕರ್ ಚಿಂತನೆಗಳ ಮರು ವ್ಯಾಖ್ಯಾನ

ರಾಮಚಂದ್ರ ಗುಹಾ Updated:

ಅಕ್ಷರ ಗಾತ್ರ : | |

ಗಾಂಧಿ, ಅಂಬೇಡ್ಕರ್ ಚಿಂತನೆಗಳ ಮರು ವ್ಯಾಖ್ಯಾನ

ಪುಸ್ತಕಗಳು ಬದುಕನ್ನು ಬದಲಿಸುವುದಿಲ್ಲ. ಆದರೆ ಪುಸ್ತಕಗಳು ನಾವು ಪ್ರಪಂಚ ನೋಡುವ ಬಗೆಯನ್ನು ಬದಲಿಸಬಲ್ಲವು.  ಕೈಗಾರಿಕೀಕರಣದ ಮೂಲಕ ಗ್ರಾಮೀಣ ಸಮುದಾಯಗಳನ್ನು ಪರಿವರ್ತಿಸುವ ಕ್ರಿಯೆಯ ಬಗ್ಗೆ ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿ ನಂಬಿಕೆ ಇದ್ದಂತಹ ದೊಡ್ಡ ಆಧುನಿಕ ಸಿದ್ಧಾಂತವಾದಿಯಾಗಿದ್ದೆ ನಾನು. ಬಡಜನರ ಕುರಿತಾದ ಕಾಳಜಿಯಲ್ಲಿ ದೊಡ್ಡ ಅನುಗ್ರಹ ನೀಡುವಂತಹ ಭಾವನೆ ಅಲ್ಲಿ ಮಿಳಿತವಾಗಿತ್ತು. ಆ ಕಾಲದಲ್ಲಿ ಸಾಮಾನ್ಯವಾಗಿ ಹೇಳಲಾಗುತ್ತಿದ್ದ ‘ವೈಜ್ಞಾನಿಕ ಮನೋಭಾವ’ ಹಾಗೂ ಆಧುನಿಕ ತಂತ್ರಜ್ಞಾನದ ಅಳವಡಿಕೆಯ ಮೂಲಕ ನಗರಗಳ ಹೊರಗೆ ಜೀವಿಸುವವರ ಬದುಕು ಸುಧಾರಿಸಬೇಕು ಹಾಗೂ ಅಭಿವೃದ್ಧಿಯಾಗಬೇಕು ಎಂಬಂತಹ ವಾದ ಅದು. ಆಗ ನಾನು ವೆರಿಯರ್ ಎಲ್ವಿನ್ ಅವರ ‘ಲೀವ್ಸ್ ಫ್ರಮ್ ದಿ ಜಂಗಲ್’ ಪುಸ್ತಕ ಓದಿದೆ.ಇದು ಮಧ್ಯ ಭಾರತದ ಗೋಂಡ ಆದಿವಾಸಿಗಳ ಬದುಕಿನ ಎಳೆಗಳನ್ನು ಸೂಕ್ಷ್ಮವಾಗಿ ಹೊರಗೆಡಹುವ ಪುಸ್ತಕ. ಈ ಆದಿವಾಸಿಗಳ ಅನಕ್ಷರತೆ, ಸಂಪತ್ತಿನ ಕೊರತೆಯ ಹೊರತಾಗಿಯೂ, ಕಾವ್ಯ, ಜಾನಪದ ಹಾಗೂ ಕಲೆಯಲ್ಲಿ ಈ ಆದಿವಾಸಿಗಳಿಗಿರುವ ದೊಡ್ಡ ಪರಂಪರೆ, ಪ್ರಕೃತಿಯೊಂದಿಗೆ ಅವರ ಆಳವಾದ ತಾದಾತ್ಮ್ಯ ಹಾಗೂ ಸಮುದಾಯ ಏಕತೆಯ ಬಲವಾದ ಭಾವ - ಈ ಎಲ್ಲವನ್ನೂ ಈ ಪುಸ್ತಕ ಹಾಗೂ ಅವರ ಇತರ ಕೃತಿಗಳು ನನಗೆ ತೋರಿಸಿಕೊಟ್ಟಿದ್ದವು. ತಮ್ಮನ್ನು ಅನಾಗರಿಕ ಹಾಗೂ ಅಸಂಸ್ಕೃತ ಎಂದು ತಳ್ಳಿಹಾಕುವ ಆಧುನಿಕ ಪ್ರಪಂಚಕ್ಕೂ ತಮ್ಮಲ್ಲಿ ಕಲಿಸುವುದಿದೆ ಎಂಬುದನ್ನು ಈ ಆದಿವಾಸಿಗಳು ಈ ಪುಸ್ತಕದ ಮೂಲಕ ತೋರಿಸಿಕೊಟ್ಟಿದ್ದರು.ಸ್ವಲ್ಪ ಕಾಲದ ನಂತರ, ನಾನು ಮಾರ್ಕ್ಸ್‌ವಾದಿಯಾದೆ. ಕೋಲ್ಕತ್ತಾದಲ್ಲಿ ನನಗೆ ಕಲಿಸಿದ ವಿದ್ವಾಂಸರಿಂದ ಪ್ರಭಾವಿತನಾಗಿ ಈ ಸಿದ್ಧಾಂತದತ್ತ ಆಕರ್ಷಿತನಾದೆ. ನಾನಿನ್ನೂ ಆಗ ಬಿಸಿರಕ್ತದ ಯುವಕ. ತಾಳ್ಮೆ ಎಂಬುದಿರಲಿಲ್ಲ. ಭಾರತದ ಸಾಮಾಜಿಕ ಬದುಕಿನಲ್ಲಿ ಎದ್ದು ಕಾಣುತ್ತಿದ್ದ ಬಡತನ ಹಾಗೂ ಅಸಮಾನತೆಯನ್ನು ನಿರ್ವಹಿಸಲು ನನ್ನ ತಂದೆತಾಯಿಗಳಿಗೆ ಮಾದರಿ ನಾಯಕರೆನಿಸಿದ್ದ ಜವಾಹರಲಾಲ್ ನೆಹರೂರ ಹೆಚ್ಚಿನ ಆದರ್ಶಗಳು ಸಾಕೆನಿಸುವಂತಿರಲಿಲ್ಲ. ನಂತರ ಡೆಹ್ರಾಡೂನ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಡೆಹ್ರಾಡೂನ್‌ನ  ರಸ್ತೆಯೊಂದರ ಬದಿಯಲ್ಲಿ ಜಾರ್ಜ್ ಆರ್ವೆಲ್‌ರ ‘ಹೋಮೇಜ್ ಟು  ಕೆಟಲೋನಿಯಾ’ ಪುಸ್ತಕ ಖರೀದಿಸಿದೆ. ಆ ಪುಸ್ತಕವನ್ನು ಮನೆಗೆ ಒಯ್ದು ರಾತ್ರಿ ಇಡೀ ಓದಿದೆ. ಜೋಸೆಫ್ ಸ್ಟಾಲಿನ್‌ನ ಸೂಚನೆಗಳ ಮೇರೆಗೆ ಕೆಲಸ ನಿರ್ವಹಿಸುತ್ತಾ ಅನೀತಿಯುತ ಹಾಗೂ ಸಿನಿಕರಾದ ಕಮ್ಯುನಿಸ್ಟರ ಗುಂಪು, ಸ್ಪಾನಿಷ್ ಜನರ ಪ್ರಜಾಸತ್ತಾತ್ಮಕ ಆಶಯಗಳನ್ನು ಅವರ ಚಳವಳಿಯನ್ನು ಆಕ್ರಮಿಸುವ ಮೂಲಕ ಹೇಗೆ ಗೌಣವಾಗಿಸಿದ್ದರೆಂಬುದನ್ನು ಆರ್ವೆಲ್ ಕಣ್ಣಾರೆ ಕಂಡಿದ್ದರು. ತಮ್ಮ ಅನುಭವಗಳನ್ನು ಅವರು ಅಸಾಧಾರಣ ಸ್ಪಷ್ಟತೆಯೊಂದಿಗೆ ಬರೆದಿದ್ದರು. ಬೆಳಿಗ್ಗೆ ವೇಳೆಗೆ ನಾನು ಮಾರ್ಕ್ಸ್‌ವಾದ ತೊರೆದು ಮತ್ತೊಮ್ಮೆ ಸಾಮಾಜಿಕ ಪ್ರಜಾತಂತ್ರವಾದಿ (ಸೋಷಿಯಲ್ ಡೆಮೊಕ್ರಾಟ್) ಆಗಿದ್ದೆ.ಪ್ರಪಂಚವನ್ನು ನೋಡುವ ನನ್ನ ದೃಷ್ಟಿಯನ್ನು ಬದಲಿಸಿದ ಮತ್ತೊಂದು ಪುಸ್ತಕ ಎಂದರೆ ‘ಟ್ರೂಥ್ ಕಾಲ್ಡ್ ದೆಮ್ ಡಿಫರೆಂಟ್ಲಿ’. ಈ ಪುಸ್ತಕವನ್ನು ಪ್ರಕಟಿಸಿರುವವರು ಅಹಮದಾಬಾದ್‌ನ ನವಜೀವನ್ ಪ್ರೆಸ್. ಈ ಪುಸ್ತಕ ರವೀಂದ್ರನಾಥ ಟಾಗೋರ್ ಹಾಗೂ ಮಹಾತ್ಮ ಗಾಂಧಿ ಮಧ್ಯದ ಸಂವಾದಗಳನ್ನು ಅಕ್ಷರರೂಪಕ್ಕಿಳಿಸಿದೆ. ಈ ಇಬ್ಬರೂ ಹಲವಾರು ವಿಚಾರಗಳನ್ನು ಚರ್ಚಿಸಿದ್ದಾರೆ. ವಿಶ್ವದಲ್ಲಿ ಭಾರತದ ಸ್ಥಾನ, ಇಂಗ್ಲಿಷ್ ಭಾಷೆಯ ಪಾತ್ರ, ಚರಕದಲ್ಲಿ ಒಂದು ಗಂಟೆ ನೂಲುವುದು ದೇಶ ಭಕ್ತರಿಗೆ ಕಡ್ಡಾಯವೇ ಇತ್ಯಾದಿ. ಈ ಮಾತುಕತೆಗಳು ಈ ಇಬ್ಬರ ಬೌದ್ಧಿಕ  ಹಾಗೂ ನೈತಿಕ ಗುಣವಿಶೇಷಗಳನ್ನು ಬಹಿರಂಗ ಪಡಿಸುತ್ತವೆ. ಪರಿಸ್ಥಿತಿ ಅಥವಾ ವಿವೇಚನೆಯ ಒತ್ತಡ ಉಂಟಾದಾಗ ತಮ್ಮ ದೃಷ್ಟಿಗಳನ್ನು ಬದಲಿಸುವ ಸಾಮರ್ಥ್ಯವೂ ಅವರಲ್ಲಿತ್ತು ಎಂಬುದೂ ವ್ಯಕ್ತವಾಗುತ್ತದೆ.ಎಲ್ವಿನ್ ಒಂದು ಕಾಲಕ್ಕೆ ಭಾರತದಲ್ಲಿ ಹೆಸರಾಂತ ಲೇಖಕರಾಗಿದ್ದರು. ಟಾಗೋರ್, ಗಾಂಧಿ ಹಾಗೂ ಆರ್ವೆಲ್ ಜಾಗತಿಕ ಖ್ಯಾತಿ ಹೊಂದಿದವರು. ಇವರೆಲ್ಲರಿಗೂ ಇಂಗ್ಲಿಷ್‌ನಲ್ಲಿ ಗಣನೀಯ ಹಾಗೂ ವೈವಿಧ್ಯಮಯವಾದ ಹಿಡಿತ ಇತ್ತು. ಅವರ ಪುಸ್ತಕಗಳನ್ನು ಅತಿ ಪ್ರತಿಷ್ಠಿತ ಪ್ರಕಾಶಕರು ಪ್ರಕಟಿಸಿದ್ದರು. ವಿಶ್ವವನ್ನು ನೋಡುವ ನನ್ನ ದೃಷ್ಟಿಯನ್ನು ತೀವ್ರವಾಗಿ ಬದಲಿಸಿದ ನಾಲ್ಕನೇ ಪುಸ್ತಕ ಕರ್ನಾಟಕದವರದಾಗಿತ್ತು. ಕರ್ನಾಟಕದ ಹೊರಗೆ ಅಷ್ಟೇನೂ ಹೆಸರು ಮಾಡಿರದಿದ್ದ ಲೇಖಕರಿವರು. ಈ ಪುಸ್ತಕವನ್ನು ಪ್ರಕಟಿಸಿದ್ದೂ ಅಷ್ಟೊಂದು ಪರಿಚಿತವಲ್ಲದ ಪ್ರಕಾಶಕರು. 1990ರ ದಶಕದ ಆರಂಭದಲ್ಲಿ ಬೆಂಗಳೂರಿನ ಪ್ರಿಮಿಯರ್ ಬುಕ್‌ಷಾಪ್‌ನಲ್ಲಿ ಪುಸ್ತಕಗಳನ್ನು ಹುಡುಕುತ್ತಿದ್ದಾಗ ‘ದಿ ಫ್ಲೇಮಿಂಗ್ ಫೀಟ್’ ಎಂಬ ಪುಟ್ಟ ಪುಸ್ತಕ ಕಣ್ಣಿಗೆ ಬಿತ್ತು. ಈ ಪುಸ್ತಕದ ಹೆಸರೇ ಕುತೂಹಲ ಕೆರಳಿಸಿತ್ತು. ಹಾಗೆಯೇ ಬಿ.ಆರ್. ಅಂಬೇಡ್ಕರ್ ಸುತ್ತ ಹೆಣೆದುಕೊಂಡ ಪ್ರಬಂಧಮಾಲಿಕೆಗಳನ್ನೊಳಗೊಂಡ ಈ ಪುಸ್ತಕದೊಳಗಿನ ವಿಚಾರಗಳೂ ಕುತೂಹಲ ಕೆರಳಿಸುವಂತಿತ್ತು.‘ಇನ್‌ಸ್ಟಿಟ್ಯೂಟ್ ಆಫ್ ಕಲ್ಚರಲ್ ರಿಸರ್ಚ್ ಅಂಡ್ ಆ್ಯಕ್ಷನ್’ ಎಂಬ ಸ್ಥಳೀಯ ಎನ್‌ಜಿಓ ಪ್ರಕಟಿಸಿದ ‘ದಿ ಫ್ಲೇಮಿಂಗ್ ಫೀಟ್’, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರೊಫೆಸರ್ ಡಿ. ಆರ್. ನಾಗರಾಜ್ ಅವರ ಮೊದಲ ಇಂಗ್ಲಿಷ್ ಕೃತಿಯಾಗಿತ್ತು.1930ರ ದಶಕ ಹಾಗೂ 1940ರ ದಶಕದ ರಾಜಕಾರಣ, ಗಾಂಧಿ ಹಾಗೂ ಅಂಬೇಡ್ಕರ್ ಅವರನ್ನು ಎದುರಾಳಿಗಳಾಗಿ ನಿಲ್ಲಿಸಿತ್ತು. ಇತ್ತೀಚೆಗೆ 1980ರ ದಶಕ ಹಾಗೂ 1990ರ ದಶಕಗಳ ರಾಜಕಾರಣದಲ್ಲೂ ಇದು ಪುನರಾವರ್ತನೆಯಾಗಿತ್ತು. ದಲಿತರ ವಿಮೋಚನೆಗೆ ನೆರವಾಗುವ ಬದಲು ಅಡ್ಡಗಾಲಾಗುವ ರೀತಿ ದಲಿತರ ಮೇಲೆ ಅನುಗ್ರಹ ತೋರಿಸಲಾಯಿತು ಎಂಬ ಆರೋಪ ಹೊರಿಸಿ ಮಹಾತ್ಮರ ಮೇಲೆ ಬಹುಜನ ಸಮಾಜ ಪಕ್ಷ ನಿರಂತರ ಟೀಕೆಗಳ ಸುರಿಮಳೆ ಹರಿಸಿತ್ತು. ಮತ್ತೊಂದು ನೆಲೆಯಲ್ಲಿ ಹಿಂದುತ್ವದ ಸಿದ್ಧಾಂತವಾದಿ ಅರುಣ್ ಶೌರಿ ಅವರು ಅಂಬೇಡ್ಕರ್ ಅವರು ಬ್ರಿಟಿಷರ ವಂದಿಮಾಗಧ ಎಂಬಂತೆ ಚಿತ್ರಿಸಿ 600 ಪುಟಗಳ ಸುದೀರ್ಘ ಕೃತಿ ಬರೆದಿದ್ದರು.ಡಿ. ಆರ್. ನಾಗರಾಜ್‌ರದ್ದು  ಅಸಾಧಾರಣ ವಿಶ್ಲೇಷಣೆ. ಕನಿಷ್ಠ ಆ ಸಂದರ್ಭಕ್ಕಂತೂ, ಗಾಂಧಿ ಹಾಗೂ ಅಂಬೇಡ್ಕರ್ ಇಬ್ಬರಿಗೂ ಅವರು ತೋರುವ ಮೆಚ್ಚುಗೆಯಲ್ಲಿ ಅದು ವಿಶಿಷ್ಟವಾದುದಾಗಿತ್ತು. ನಿಜಕ್ಕೂ, ಗಾಂಧಿ, ಅಂಬೇಡ್ಕರ್‌ರ ಜೀವಿತ ಅವಧಿಯಲ್ಲಿ ಅವರವರ ಸಾಮಾಜಿಕ ನೆಲೆಗಳು ರಾಜಕೀಯ ಎದುರಾಳಿಗಳಾಗದಿರಲು ಕಷ್ಟವಾಗುವಂತಹ ಸ್ಥಿತಿಯನ್ನು ಸೃಷ್ಟಿಸಿದ್ದಿದ್ದು ಹೌದು. ಅಮೆರಿಕದಲ್ಲಿ ತಮ್ಮ ಓದು ಮುಗಿಸಿ ಅಂಬೇಡ್ಕರ್ ಭಾರತಕ್ಕೆ ವಾಪಸಾಗುವಾಗ, ಗಾಂಧಿಯವರು ರಾಷ್ಟ್ರೀಯ ಚಳವಳಿಯಲ್ಲಿ  ಮುಂಚೂಣಿಯ ನಾಯಕರಾಗಿದ್ದರು. ದಲಿತ ಹಿನ್ನೆಲೆಯ ಬುದ್ಧಿವಂತ ಹಾಗೂ ಮಹತ್ವಾಕಾಂಕ್ಷಿ ಯುವಕನಿಗೆ, ಕಾಂಗ್ರೆಸ್ ಸೇರುವುದೆಂದರೆ ರಾಜಕಾರಣದಲ್ಲಿ ಅಪ್ರಧಾನ ಪಾತ್ರಕ್ಕೆ ತಳ್ಳಿಸಿಕೊಂಡಂತೆ ಎಂದಾಗಿತ್ತು. ಹೀಗಾಗಿ, ನಾಗರಾಜ್ ಅವರು ಎತ್ತಿ ಹೇಳಿದಂತೆ, ‘ಆಸಕ್ತಿದಾಯಕ ಹಾಗೂ ಉಪಯುಕ್ತ ಮಾದರಿಗಳನ್ನು ಪಕ್ಷದೊಳಗಿಂದ ಬೆಳೆಸಲು ಕಾಂಗ್ರೆಸ್‌ನಲ್ಲಿ ಹರಿಜನ ನಾಯಕನಿಗೆ ಹೆಚ್ಚಿನ ಅವಕಾಶಗಳು ಇರಲಿಲ್ಲ’. ಹೀಗಾಗಿ  ಅಂಬೇಡ್ಕರ್ ಅವರು ಗಾಂಧಿಯವರ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ಗೆ ತದ್ವಿರುದ್ಧವಾಗಿ ತಮ್ಮ ಜನರಿಗಾಗಿ ಹೋರಾಡಲು ತಮ್ಮದೇ ಪ್ರತ್ಯೇಕವಾದಂತಹ ರಾಜಕೀಯ ಪಕ್ಷ ಸ್ಥಾಪಿಸಿಕೊಳ್ಳುವುದನ್ನು ಆಯ್ಕೆ ಮಾಡಿಕೊಂಡರು.ತಮ್ಮ ಚರ್ಚೆಗಳು ಹಾಗೂ ವಾಗ್ವಾದಗಳ ಮೂಲಕ ಗಾಂಧಿ ಹಾಗೂ ಅಂಬೇಡ್ಕರ್ ಪರಸ್ಪರ ಒಬ್ಬರನ್ನೊಬ್ಬರು ಹೇಗೆ ಬದಲಿಸಿದರೆಂಬುದನ್ನೂ ‘ದಿ ಫ್ಲೇಮಿಂಗ್ ಫೀಟ್’ನಲ್ಲಿ, ನಾಗರಾಜ್ ತೋರಿಸಿಕೊಟ್ಟರು. ಮಹಾತ್ಮ ಗಾಂಧಿ ಜಾತಿ ತಾರತಮ್ಯದ ಬೇರುಗಳಿಗೆ ಹೆಚ್ಚು ಸಂವೇದನಾಶೀಲರಾದರು. ಅಂಬೇಡ್ಕರ್ ಅವರು ಆರ್ಥಿಕ ಅವಕಾಶಗಳಂತೆ ನೈತಿಕ ಪುನರುತ್ಥಾನವೂ ದಲಿತ ವಿಮೋಚನೆಗೆ ಅಗತ್ಯವಾದುದು ಎಂಬುದನ್ನು  ಕಂಡುಕೊಂಡರು. ಈ ಇಬ್ಬರು ನಾಯಕರಿಗೂ ಗೌರವ ತೋರಲೆತ್ನಿಸುತ್ತಾ ನಾಗರಾಜ್ ಅವರು, ಅವರೇ ಹೇಳಿದಂತೆ, ‘ಆಳವಾಗಿ ಬೇರೂರಿದ ಪೂರ್ವಗ್ರಹ’ (ಒಬ್ಬರೇ ನಾಯಕನನ್ನು ಅನುಕರಿಸಬೇಕೆಂಬ ರೀತಿಯಲ್ಲಿ ಭಾರತೀಯರಲ್ಲಿ ಬೇರೂರಿರುವ ಒತ್ತಡ ) ಜೊತೆಗೆ ‘ಹೀಗೇ ಆಗಬೇಕೆಂದು ಬಯಸುವ ಆಲೋಚನೆ’ಗಳ (ದಲಿತ ಸಮಸ್ಯೆಗೆ ಯಾರೋ ಒಬ್ಬರು ಚಿಂತಕರು ಮಾತ್ರ ಎಲ್ಲಾ ಉತ್ತರಗಳನ್ನು ನೀಡುವರೆಂದು ನಂಬಿಕೊಳ್ಳುವಂಥದ್ದು) ವಿರುದ್ಧ ಸೆಣಸಬೇಕಾಯಿತು. ಸದ್ಯದ ದೃಷ್ಟಿಕೋನದಿಂದ, ಈ ಇಬ್ಬರ ಚಿಂತನೆಗಳ ಸಮನ್ವಯ ಸಾಧಿಸುವಂತಹ ಅನಿವಾರ್ಯ ಒತ್ತಡವಿದೆ ಎಂದು ನಾಗರಾಜ್ ಒತ್ತಿ ಹೇಳುತ್ತಾರೆ. ‘ಆಧು ನಿಕ ಭಾರತೀಯ ಇತಿಹಾಸದ ಅತ್ಯಂತ ದೊಡ್ಡ ವಿರೋಧಾಭಾಸ ಎಂದರೆ ಗಾಂಧಿ ಹಾಗೂ ಅಂಬೇಡ್ಕರ್ ವಾದಗಳೆರಡೂ ಭಾಗಶಃ ಸತ್ಯ; ಈ ಎರಡೂ ೃಷ್ಟಿಕೋನಗಳ ವಾದಗಳು ಪರಸ್ಪರರನ್ನು ಪೂರ್ಣ  ಗ್ರಹಿಸಿಕೊಳ್ಳಬೇಕಿವೆ’ ಎಂದೂ ನಾಗರಾಜ್ ಬರೆಯುತ್ತಾರೆ.ನಾಗರಾಜ್‌ರನ್ನು ಓದುವುದು ಟಾಗೋರ್, ಗಾಂಧಿ, ಆರ್ವೆಲ್ ಹಾಗೂ ಎಲ್ವಿನ್‌ರನ್ನು ಓದುವಂತೆಯೇ ಮಹತ್ವದ ಅನುಭವ. ತಮ್ಮ ಜೀವಿತ ಅವಧಿಯಲ್ಲಿ ಗಾಂಧಿ ಹಾಗೂ ಅಂಬೇಡ್ಕರ್ ಪ್ರತಿಸ್ಪರ್ಧಿಗಳಾಗಿದ್ದರೂ, ಇಂದಿನ ಭಾರತದ ದೃಷ್ಟಿಯಲ್ಲಿ ಈ ಇಬ್ಬರನ್ನೂ ಸಹಭಾಗಿಗಳಾಗಿ, ಸಹವರ್ತಿಗಳಾಗಿ ಕಾಣಬೇಕೆಂಬುದನ್ನು ನಾಗರಾಜ್ ನನಗೆ ಕಲಿಸಿದರು. ದಲಿತ ವಿಮೋಚನೆಯ ಇನ್ನೂ ಮುಗಿಯದ ಕೆಲಸವನ್ನು ಪೂರ್ತಿಗೊಳಿಸಲು ಇಬ್ಬರ ಪರಂಪರೆಯೂ ಅಗತ್ಯ. ‘ದಿ  ಫ್ಲೇಮಿಂಗ್ ಫೀಟ್’ ಪ್ರಕಟಣೆಯ ನಂತರ, ನಾಗರಾಜ್ ಅವರು ಇಂಗ್ಲಿಷಿನಲ್ಲಿ ಸಾಕಷ್ಟು ಬರೆಯಲು ತೊಡಗಿದರು. ಆ ನಂತರದ ಪ್ರಬಂಧಗಳು, ಈ ಪುಸ್ತಕದಂತೆಯೇ, ಭೂತಕಾಲ - ವರ್ತಮಾನ, ಅತಿ ಗಣ್ಯರು - ಉಪ ಸಂಸ್ಕೃತಿಯ ಜನರು, ದೇಶೀಯ ಭಾಷೆಗಳನ್ನಾಡುವವರು - ಕಾಸ್ಮೊಪಾಲಿಟನ್ ಜನರು ... ಹೀಗೆ ವಿಭಿನ್ನ ಜಗತ್ತುಗಳನ್ನು ವಾಗ್ವಾದ ಲೋಕಕ್ಕೆ ತರುವ ಸಾಮರ್ಥ್ಯ ಹೊಂದಿದ್ದವು. ವಿದ್ವಾಂಸ ಹಾಗೂ ರಾಜಕೀಯ ವಿಶ್ಲೇಷಕರಾಗಿ ಪಕ್ವಗೊಳ್ಳುತ್ತಿರುವಂತೆಯೇ, 1998ರಲ್ಲಿ, ನಾಗರಾಜ್ ಅವರು ಹೃದಯಾಘಾತದಿಂದ ತೀರಿಕೊಂಡರು. ಈಗ 12 ವರ್ಷಗಳ ನಂತರ, ದಲಿತ ಪ್ರಶ್ನೆಗಳನ್ನು ಕುರಿತ ಅವರ ಪ್ರಕಟಿತ ಹಾಗೂ ಅಪ್ರಕಟಿತ ಪ್ರಬಂಧಗಳನ್ನು ಸೇರಿಸಿದ ‘ದಿ ಫ್ಲೇಮಿಂಗ್ ಫೀಟ್’ ವಿಸ್ತೃತ ಆವೃತ್ತಿಯನ್ನು ಈ ಬಾರಿ ಮುಖ್ಯವಾಹಿನಿಯ ಪ್ರಕಾಶಕರೊಬ್ಬರು ಪ್ರಕಟಿಸಿದ್ದಾರೆ. ಇದನ್ನು ಸಂಪಾದಿಸಿ, ಸಂವೇದನಾಶೀಲತೆಯಿಂದ ಪರಿಚಯಿಸಿರುವವರು ಅವರ ಮಾಜಿ ವಿದ್ಯಾರ್ಥಿ ಪೃಥ್ವಿ ದತ್ತ ಚಂದ್ರ ಸೋಭಿ. ‘ತೀವ್ರ ಗಾಂಧಿವಾದದ ಜೀವಂತ ಪರಂಪರೆಯ ಕೊರತೆ’; ದಲಿತ್ ಅಸ್ಮಿತೆಯ ಸ್ವ ಅನ್ವೇಷಣೆ (ಅವರೇ ಹೇಳುವಂತೆ, ಹಿಂದೂವಾದದ ಹೊರಗೆ ಇತಿಹಾಸ ಅರಸುತ್ತಾ, ಭೀತಿಯ ಏಕಾಂಗಿತನದಲ್ಲಿ ಆಧುನಿಕ ದಲಿತ ತನ್ನ ಪುನರ್ಜನ್ಮ ಅರಸಬೇಕು. ಇದಕ್ಕಾಗಿ ತನ್ನ ಸುತ್ತಲಿನ ಹಿಂದೂ ಪರಿಸರವನ್ನೇನೂ ಅವರು ಅವಲಂಬಿಸಬೇಕಿಲ್ಲ);  ಪರಿಸರ, ದಲಿತ ಹಾಗೂ ಆದಿವಾಸಿ ಚಳವಳಿಗಳ ಸಂಯುಕ್ತ ರಂಗವನ್ನು ನಿರ್ಮಿಸುವ ಅಗತ್ಯ ಇತ್ಯಾದಿ ವಿಸ್ತೃತ ವಿಷಯಗಳ ಬಗ್ಗೆ ನಿಖರತೆ ಹಾಗೂ ಒಳನೋಟಗಳಿಂದ ನಾಗರಾಜ್ ಇಲ್ಲಿ ಬರೆಯುತ್ತಾರೆ.ನಾಗರಾಜ್ ಅವರು ಸಮಾಜ ವಿಜ್ಞಾನಿ ಜೊತೆಗೆ ಸಾಹಿತಿ. ಅವರ ಬರಹದ ರೀತಿ ಕೆಲವೊಮ್ಮೆ ಅನುಭವಜನ್ಯ ಮತ್ತೆ ಕೆಲವೊಮ್ಮೆ ರೂಪಕಗಳನ್ನೊಳಗೊಂಡಿದ್ದು. ಇಲ್ಲೊಂದು ಪ್ರಾತಿನಿಧಿಕ ಉದ್ಧೃತಭಾಗ: ‘ ಬಾಬಾಸಾಹೇಬ್ (ಅಂಬೇಡ್ಕರ್) ಅವರಿಗೆ ಗಾಂಧಿವಾದದ ಮಾದರಿಯನ್ನು ತಿರಸ್ಕರಿಸುವುದಲ್ಲದೆ ಬೇರೆ ಆಯ್ಕೆ ಇರಲಿಲ್ಲ. ಈ ಮಾದರಿ, ಸ್ವ ಶುದ್ಧೀಕರಣದ ವಿಧಿಗಳಲ್ಲಿ ಹರಿಜನರನ್ನು ವಸ್ತುವಾಗಿ ಗ್ರಹಿಸುತ್ತದೆ. ಈ ವಿಧಿವತ್ತು ಆಚರಣೆಯನ್ನು ಆಚರಿಸುವಂತಹವರೋ, ತಮ್ಮ ಬಗ್ಗೆ  ದೊಡ್ಡದಾದ ನಾಯಕನ ಪರಿಕಲ್ಪನೆ ಹೊಂದಿರುವಂತಹವರು. ಇತಿಹಾಸದ ರಂಗಸ್ಥಳದಲ್ಲಿ, ಅಂತಹ ಕಥಾವಸ್ತು ಇರುವ ನಾಟಕದಲ್ಲಿ, ಅಸ್ಪೃಶ್ಯರು ತಾವೇ ಸ್ವತಃ ತಮ್ಮದೇ ನೆಲೆಯಲ್ಲಿ ನಾಯಕರಾಗುವುದು ಎಂದಿಗೂ ಸಾಧ್ಯವಿಲ್ಲ. ತಮ್ಮದೇ ಅಸ್ತಿತ್ವವಾದಿ ಆಕ್ರೋಶ ಹಾಗೂ ಹತಾಶೆ ಅಥವಾ  ತಮ್ಮದೇ ಕೀರ್ತಿಯನ್ನರಸುತ್ತಾ ಅವಲೋಕಿಸಿಕೊಳ್ಳುವಂತಹ ನಾಯಕನಿಗೆ ಅವರು ಪ್ರತಿಬಿಂಬ ಮಾತ್ರವಾಗಿರುತ್ತಾರೆ’..‘ದಿ ಫ್ಲೇಮಿಂಗ್ ಫೀಟ್’ ನ  ಈ ಹೊಸ ಆವೃತ್ತಿ 2010ರಲ್ಲಿ ಪ್ರಕಟವಾದ ಸೃಜನೇತರ ಕೃತಿಗಳ ಪ್ರಕಾರದಲ್ಲಿ ಬಹುಶಃ ಬಹಳ ಮುಖ್ಯವಾದದ್ದು. ಏನಾದರಾಗಲಿ, ಆಧುನಿಕ ಭಾರತದಲ್ಲಿ ಸಮಾಜ ಹಾಗೂ ರಾಜಕಾರಣದಲ್ಲಿ ಗಂಭೀರ ಆಸಕ್ತಿ ಇರುವ ಯಾರಿಗಾದರೂ ಈ ಕೃತಿ ಅನಿವಾರ್ಯವಾದದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.