ಗಿಣಿಯೆಂಬ ಗಿರೀಶನ ಕಥೆ

7

ಗಿಣಿಯೆಂಬ ಗಿರೀಶನ ಕಥೆ

ಡಾ. ಆಶಾ ಬೆನಕಪ್ಪ
Published:
Updated:
ಗಿಣಿಯೆಂಬ ಗಿರೀಶನ ಕಥೆ

ಏಳು ವರ್ಷದ ದೀರ್ಘ ಸಮಯದ ಬಳಿಕ ಸುನೀತಾ 2011ರ ಅಕ್ಟೋಬರ್ ಕಡೆಯ ವಾರದಂದು ನನ್ನನ್ನು ಭೇಟಿ ಮಾಡಲು ಬಂದಿದ್ದಳು. ಆಕೆ ಬಂದದ್ದು ಉಚಿತ ಆರೋಗ್ಯ ಶಿಬಿರವೊಂದಕ್ಕೆ ಔಷಧಗಳನ್ನು ಕೊಂಡೊಯ್ಯುವ ಸಲುವಾಗಿ.ನಾವು ಔಷಧ ಕಂಪನಿಗಳ ಪ್ರತಿನಿಧಿಗಳಿಂದ ಪಡೆದುಕೊಂಡ `ವೈದ್ಯರ ಮಾದರಿ~ಗಳನ್ನು (ಔಷಧಗಳು) ಆಕೆಗೆ ಒದಗಿಸುತ್ತಿರುವುದಕ್ಕೆ ನನಗೂ ಖುಷಿಯಾಗಿತ್ತು. ಇದರಿಂದ ಬಡ ರೋಗಿಗಳಿಗೆ ಸಹಾಯವಾಗುತ್ತದೆ.ಅಪ್ಪಾಜಿ ಆಡಳಿತಾವಧಿಯಲ್ಲಿ ಈ ಮಾದರಿ ಔಷಧಿಗಳನ್ನು ಎಲ್ಲಾ ವೈದ್ಯರುಗಳಿಂದ ಸಂಗ್ರಹಿಸಿ ಬಡ ರೋಗಿಗಳಿಗೆ, ಆರೋಗ್ಯ ಶಿಬಿರ ಮತ್ತು ಕೆಲವೊಮ್ಮೆ ವೈಯಕ್ತಿಕ ಬಳಕೆಗೆ ಅನುಕೂಲವಾಗುವಂತೆ ಅವರ ಕೊಠಡಿಯಲ್ಲಿದ್ದ ಅಲ್ಮೆರಾದಲ್ಲಿ ಇಡಲಾಗುತ್ತಿತ್ತು.ನಾನು ಸುನೀತಾಳ ಕಥೆ ಮೊದಲು ಬರೆಯಲೋ ಅಥವಾ ಗಿರೀಶನದೋ ಎಂಬ ಗೊಂದಲದಲ್ಲಿದ್ದೆ. ನನಗೆ ಸುನೀತಾಳ ಪರಿಚಯವಾಗಿದ್ದು ಗಿರೀಶನ ಮೂಲಕ.

ಸುನೀತಾಳಿಗೀಗ 43 ವರ್ಷ.

 

ಒಂಬತ್ತು ಮಕ್ಕಳ ಕುಟುಂಬದಲ್ಲಿ ಆಕೆ ಎಂಟನೇ ಮಗು. ಅವರ ತಂದೆ ಶಿಕ್ಷಕರು. ಮನೆ ನಿರ್ವಹಣೆ ಜವಾಬ್ದಾರಿ ತಾಯಿಯದು. ಸುನೀತಾ ರೂಪವಂತೆ, ಬುದ್ಧಿವಂತೆ ಮಾತ್ರವಲ್ಲ ತನ್ನ ಹಕ್ಕುಗಳ ಬಗ್ಗೆ ತರ್ಕಬದ್ಧ ವಾದವನ್ನೂ ಮಂಡಿಸುತ್ತಿದ್ದಳು.ಇದು ಆಕೆಯ ಕುಟುಂಬದ ಸದಸ್ಯರಿಗೆ, ಅದರಲ್ಲೂ ಆಕೆಯ ತಾಯಿ ಮತ್ತು ಹಿರಿಯ ಸಹೋದರನಿಗೆ ಹಿಡಿಸುತ್ತಿರಲಿಲ್ಲ. ಹೀಗಾಗಿ ಮನೆಯಲ್ಲಿ ಪ್ರೀತಿ ವಾತ್ಸಲ್ಯಗಳಿಲ್ಲದ ಆಕೆ ಹಣಕಾಸು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಲ್ಲಿ ಪ್ರೀತಿ ಮಮತೆ ಕಂಡುಕೊಂಡಿದ್ದಳು. ಪದವಿ ವಿದ್ಯಾಭ್ಯಾಸವನ್ನೂ ಪೂರ್ಣಗೊಳಿಸಲೂ ಆಕೆಗೆ ಸಾಧ್ಯವಾಗಲಿಲ್ಲ. ಕುಟುಂಬದ ಸದಸ್ಯರ ವಿರೋಧದ ನಡುವೆಯೂ ಆಕೆ ಆತನನ್ನು ಮದುವೆಯಾದಳು.ಸಾಂಸಾರಿಕ ಜೀವನ ಹೈದರಾಬಾದ್‌ನಲ್ಲಿ ಶುರುವಾಯಿತು. ಆ ದಂಪತಿಗೆ ಎರಡು ಮಕ್ಕಳು. ಗಿರೀಶ ಆಕೆಯ ಎರಡನೇ ಮಗು. ಆದರೆ ಮದುವೆಯ ಬಂಧ ಕೇವಲ ಮೂರು ವರ್ಷಕ್ಕೇ ಅಂತ್ಯಗೊಂಡಿತು.ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ಸುಳ್ಳುಗಾರ, ಸಾಲಗಾರ, ಕುಡಿತ ಧೂಮಪಾನದಂತಹ ದುಶ್ಚಟಗಳ ದಾಸ ಎನ್ನುವುದು ಆಕೆಗೆ ತಿಳಿಯಿತು. `ಬೇಡುವುದನ್ನು~ ಎಂದಿಗೂ ಒಪ್ಪಿಕೊಳ್ಳದ, ನೇರ ನಡೆನುಡಿ ವ್ಯಕ್ತಿತ್ವದ ಮತ್ತು ಸುಸಂಸ್ಕೃತೆಯಾದ ಆಕೆಗೆ ಇದನ್ನು ಸಹಿಸಿಕೊಳ್ಳುವುದು ಅಸಾಧ್ಯವಾಗಿತ್ತು.ತನ್ನ ಸುತ್ತ ಆಕೆ ಕಟ್ಟಿಕೊಂಡಿದ್ದ ಕನಸಿನ ಗೋಪುರ ನುಚ್ಚುನೂರಾಗಿತ್ತು. ಮುರಿದು ಹೋದ ಮದುವೆ ಮತ್ತು ಆ ಮನುಷ್ಯನಿಗಾಗಿ ಕುಟುಂಬದ ಸದಸ್ಯರೊಂದಿಗೆ ಸೃಷ್ಟಿಸಿಕೊಂಡಿದ್ದ ಅಂತರದಿಂದ ತೀವ್ರ ಆಘಾತ ಮತ್ತು ಹತಾಶೆಗೊಳಗಾಗಿದ್ದ ಸುನೀತಾ ತನ್ನ ಬದುಕಿನಲ್ಲಿ ನಡೆಯುತ್ತಿರುವ ಅನಾಹುತಗಳಿಂದ ತನ್ನನ್ನು ತಾನೇ ಶಿಕ್ಷಿಸಿಕೊಂಡಳು.

 

ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಳು. ನೆರೆಹೊರೆಯವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸುವಾಗ, ಆಕೆಯ ಈ ಕೃತ್ಯಕ್ಕೆ ಕಾರಣನಾದ ಆಕೆಯ ಗಂಡ ಬೆಂಕಿ ಆರಿಸಲು ನೀರು ಸುರಿಯುತ್ತಿದ್ದ. ಆಕೆಯ ಎರಡು ಮಕ್ಕಳ ಜವಾಬ್ದಾರಿಯನ್ನು ಮರೆತಿದ್ದ.ತಮ್ಮ ಕಣ್ಣೆದುರಿಗೆ ನಡೆದ ದುರಂತಕ್ಕೆ ಈ ಎರಡೂ ಮಕ್ಕಳು ಮೂಕ ಪ್ರೇಕ್ಷಕರಾಗಿದ್ದರು. ಆಗ ಗಿರೀಶ ಹನ್ನೊಂದು ತಿಂಗಳ ಹಸುಗೂಸು. ಈ ಘಟನೆ ಬಳಿಕ ಸುನೀತಾಳ ಮೊದಲ ಮಗುವನ್ನು ಆಕೆಯ ಅತ್ತೆ ತನ್ನ ಸುಪರ್ದಿಗೆ ತೆಗೆದುಕೊಂಡರು.ತಂದೆ ತಾಯಿಯಿಂದ ದೂರವಾಗಿ ಮತ್ತು ಮಾವನ ಸಾವಿನಿಂದ ಹತ್ತಿರದವರನ್ನು ಕಳೆದುಕೊಂಡ ಸುನೀತಾಳನ್ನು ತ್ಯಜಿಸಿದ ಆಕೆಯ ಗಂಡ ಬೇರೆ ಮದುವೆಯಾದ. ಸುನೀತಾ ದಿಕ್ಕು ತೋಚದಂತಾದಳು.ರಾಜ್ಯ ಸರ್ಕಾರದ ಬಹುತೇಕ ಎಲ್ಲಾ ಮಹಿಳಾ ಆಶ್ರಯತಾಣಗಳ ಒಳಹೊಕ್ಕು ಹೊರಬಂದ ಆಕೆ ಅವುಗಳ ಲೆಕ್ಕವನ್ನೂ ನೀಡಬಲ್ಲಳು. ಮಹಿಳಾ, ಕಾನೂನು, ಆರೋಗ್ಯ, ಪೊಲೀಸ್ ಹೀಗೆ ವಿವಿಧ ಇಲಾಖೆಗಳ ಕಮೀಷನರ್‌ಗಳನ್ನೂ ಭೇಟಿ ಮಾಡಿದಳು. ತನಗೊಂದು `ಸುರಕ್ಷಿತ ಸೂರು~ ಹುಡುಕುವ ಸಲುವಾಗಿ ಅಲೆದಾಟ ನಡೆಸಿದಳು.ಗಿರೀಶ ಹುಟ್ಟಿದ್ದು 1998ರ ನವೆಂಬರ್ 4ರಂದು. ಖಾಸಗಿ ಆಸ್ಪತ್ರೆಯೊಂದರಲ್ಲಿ ಜನಿಸಿದ ಆತ ಆರೋಗ್ಯವಂತ ಶಿಶುಗಳಂತೆ ಹುಟ್ಟುವಾಗ 3.5 ಕೆ.ಜಿ ತೂಕವಿದ್ದ. ಆದರೆ ಹುಟ್ಟಿದ ಕೂಡಲೇ ಅಳಲೇ ಇಲ್ಲ. ಮಿದುಳು, ಹೃದಯ, ಶ್ವಾಸಕೋಶ, ಮೂತ್ರಪಿಂಡ ಮುಂತಾದ ಜೀವಧಾರಕ ಅಂಗಗಳಿಗೆ ಆಮ್ಲಜನಕ ಸರಾಗವಾಗಿ ಚಲಿಸಲು ಹುಟ್ಟಿದ ಕೂಡಲೇ ಮಕ್ಕಳು ಅಳುವುದು ಅತ್ಯವಶ್ಯಕ. ಆದರೆ ಗಿರೀಶ ಅದಕ್ಕೆ ಅಪವಾದವಾಗಿದ್ದ.ದೇಹದ ವಿವಿಧ ಭಾಗಗಳಿಗೆ ಉಂಟಾದ ಆಮ್ಲಜನಕದ ಕೊರತೆಯಿಂದಾಗಿ ಆಗಾಗ್ಗೆ ಕಡ್ಡಿಯಂತೆ ಸೆಟೆದುನಿಲ್ಲುವಂತಹ ದೇಹ ವಿನ್ಯಾಸ ಅಸಹಜಗೊಂಡು ಮಿದುಳಿನ ಪಾರ್ಶ್ವವಾಯುವಿಗೆ ಕಾರಣವಾಯಿತು.ಈ ಸಮಸ್ಯೆಗೆ ತುತ್ತಾದವರು ಸದಾ ತಮ್ಮ ನಾಲಗೆಯನ್ನು ಹೊರಚಾಚಿಕೊಂಡಿರುತ್ತಾರೆ ಮತ್ತು ತಮ್ಮ ಬಾಯಿಯ ಸಂದಿಯಿಂದ ಇಳಿಯುವ ಲಾಲಾರಸವನ್ನು ಸರಿಯಾಗಿ ನುಂಗಲು ಅವರಿಗೆ ಸಾಧ್ಯವಾಗುವುದಿಲ್ಲ. ಸ್ನಾಯುಗಳು ಆಗಾಗ್ಗೆ ಸೆಳೆತಕ್ಕೆ ಒಳಗಾಗುವುದರಿಂದ ಮೊದಲೇ ಹಾನಿಗೊಳಗಾದ ಮಿದುಳಿಗೆ ಮತ್ತಷ್ಟು ಘಾಸಿಯಾಗುತ್ತದೆ.ಗಿರೀಶನ ಕಾಯಿಲೆಗೆ ಆತ ನಿರಂತರವಾಗಿ ಆಸ್ಪತ್ರೆಗೆ ದಾಖಲಾಗಬೇಕಾಗಿತ್ತು. ಹೀಗೆ ಪ್ರತಿ ಬಾರಿ ದಾಖಲಾದಾಗಲೂ 7-10 ದಿನ ಅಲ್ಲೇ ಇರಬೇಕಾಗಿತ್ತು. ಆಗಲೇ `ಸುನೀತಾ~ ಎಂಬ ಅದ್ಭುತ ವ್ಯಕ್ತಿತ್ವದ ತಾಯಿಯನ್ನು ನಾನು ಭೇಟಿ ಮಾಡಿದ್ದು. ಅದು 1998-99ರಲ್ಲಿ. ವಿರೂಪಗೊಂಡಿದ್ದ ಆಕೆಯ ಮುಖದ ಬಗ್ಗೆ ಕೇಳಲು ನನಗೆ ತೀವ್ರ ಹಿಂಜರಿಕೆಯಾಗಿತ್ತು.ಆಸ್ಪತ್ರೆಯಲ್ಲಿ ಇದ್ದ ಸಮಯದಲ್ಲಿ ತಾಯಿ ಮತ್ತು ಮಗ ಎಡಬಿಡದೆ ಮಾತನಾಡಿಕೊಳ್ಳುತ್ತಲೇ ಇರುತ್ತಿದ್ದರು. ಅಮ್ಮ ಮಗನಿಗಾಗಿ `ಜೋಗುಳ~ ಹಾಡುತ್ತಿದ್ದಳು.

 

ಇಬ್ಬರೂ ತಮ್ಮ ನೋವು ಮರೆತು ತಮಾಷೆಯ ಮಾತುಗಳನ್ನು ಹಂಚಿಕೊಳ್ಳುತ್ತ, ನಿತ್ಯ ಬದುಕಿನ ದುಃಖದ ನಡುವೆಯೇ ತಮ್ಮ ಭವಿಷ್ಯದ ಬಗ್ಗೆ ಭರವಸೆಯ ಕಿರಣವನ್ನು ನಿರೀಕ್ಷಿಸುತ್ತಿದ್ದಂತೆ ಕಾಣಿಸುತ್ತಿತ್ತು. ಗಿರೀಶ ಅಮ್ಮನನ್ನು ತನ್ನದೇ ರೀತಿಯಲ್ಲಿ ಸಮಾಧಾನಪಡಿಸುತ್ತಿದ್ದ.ಅದು ಹೇಗೆಂದು ದೇವರಿಗೇ ಗೊತ್ತು!

ಅವರಿಬ್ಬರದೂ ಎರಡು ದೇಹ ಒಂದೇ ಆತ್ಮ. ಅವರು ಅವರದೇ ಪ್ರಪಂಚದಲ್ಲಿ ಬದುಕುತ್ತಿದ್ದರು, ನೋವಿನಲ್ಲೂ ಒಬ್ಬರನ್ನೊಬ್ಬರು ಸಂತೋಷಪಡಿಸಲು ಪ್ರಯತ್ನಿಸುತ್ತಿದ್ದರು. ಗಿರೀಶನ ಒಡನಾಟವೇ ಆಕೆಗೆ ಮುಲಾಮು (ಆಕೆ ಹಲವಾರು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಳು). ಒಂಟಿತನ ಮತ್ತು ಅಭದ್ರತೆಯ ಭಯದಿಂದ ತನ್ನ ಅಮ್ಮನನ್ನು ಹೊರತರಲು ಗಿರೀಶ ಸಹಾಯ(?) ಮಾಡಿದ.ಆಕೆಯ ಎಲ್ಲಾ ಸಮಸ್ಯೆ ಮತ್ತು ಹತಾಶೆಗಳ ನಡುವೆಯೂ ಗಿರೀಶನಿಗೆ ಒಳ್ಳೆಯ ಆರೈಕೆ ಸಿಕ್ಕಿತು. ಆತ ಅತ್ಯಂತ ಶುಚಿಯಾದ ಮತ್ತು ಅಚ್ಚುಕಟ್ಟಾಗಿ ಬಟ್ಟೆ ತೊಟ್ಟ ಮಗುವಾಗಿದ್ದ. ಮೂತ್ರ ಮತ್ತು ಮಲ ವಿಸರ್ಜನೆಯನ್ನು ತಡೆದುಕೊಳ್ಳುವ ಶಕ್ತಿ ಇಲ್ಲದಿದ್ದರಿಂದ ಹಾಸಿಗೆ ಮೇಲೆಯೇ ವಿಸರ್ಜಿಸುತ್ತಿದ್ದ. ಗಿರೀಶನಿಗೆ `ಗಿಣಿ~ ಎಂದು ಅಡ್ಡ ಹೆಸರಿಡಲಾಗಿತ್ತು.ಸುನೀತಾಳಿಗೆ ಕತ್ತನ್ನು ಹೆಚ್ಚಾಗಿ ತಿರುಗಿಸಲು ಸಾಧ್ಯವಾಗುತ್ತಿರಲಿಲ್ಲ. ಆ ಕಾರಣದಿಂದಾಗಿ, ತನ್ನ ವಿಶೇಷ ಮಗುವನ್ನು ನೋಡಿಕೊಳ್ಳುವುದು ಆಕೆಗೆ ಕಷ್ಟವಾಗತೊಡಗಿತು.ಸುಟ್ಟು ವಿರೂಪಗೊಂಡ ಮುಖ ಮತ್ತು ಕತ್ತನ್ನು ಸರಿಪಡಿಸಲು ಸುನೀತಾ ಪುನಾರಚನೆಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಗಿರೀಶನಿಗೆ ಎರಡು ವರ್ಷವಾದಾಗ ಚಿಕಿತ್ಸೆಗೆ ಒಳಗಾಗಲು ಆಕೆ ನಿರ್ಧರಿಸಿದಳು.

 

ಗಿರೀಶನ ಆರೈಕೆ ಜವಾಬ್ದಾರಿ ತೆಗೆದುಕೊಂಡ ಆಕೆಯ ಅಕ್ಕ, ಹದಿನೈದು ದಿನಕ್ಕೇ ಆತನನ್ನು ಆಸ್ಪತ್ರೆಯ ಹಾಸಿಗೆಯಲ್ಲಿ ಬಿಟ್ಟು ಹೊರಟಳು. ಆಸ್ಪತ್ರೆಯ ನಿಯಮಾವಳಿಗಳಿಂದ ವಿನಾಯಿತಿ ನೀಡಿ ಮಗುವನ್ನು ತನ್ನ ಬಳಿಯೇ ಇರಿಸಿಕೊಳ್ಳಲು ಅನುಮತಿ ನೀಡಿದ ವಿಕ್ಟೋರಿಯಾ ಆಸ್ಪತ್ರೆಯ ಮೇಲ್ವಿಚಾರಕ ಡಾ. ಚಂದ್ರಶೇಖರ್ ಮತ್ತು ಪ್ಲಾಸ್ಟಿಕ್ ಸರ್ಜನ್ ಡಾ. ಗುರುಮೂರ್ತಿ ಅವರನ್ನು ಸುನೀತಾ ಕೃತಜ್ಞತಾಪೂರ್ವಕವಾಗಿ ನೆನೆಸಿಕೊಳ್ಳುತ್ತಾಳೆ.ವಿಕ್ಟೋರಿಯಾ ಆಸ್ಪತ್ರೆ ಆಕೆಯ ತವರು ಮನೆಯಾದರೆ, ವಾಣಿ ವಿಲಾಸ ಆಸ್ಪತ್ರೆ ಗಿರೀಶನ ಮನೆಯಾಗಿತ್ತು.ಗಿರೀಶನ ದೇಹದ ಸೆಳೆತದ ಸಂದರ್ಭದಲ್ಲಿ ನೆರವಾದ ಡಾ.ಜಿ.ಟಿ. ಸುಭಾಷ್ ಮತ್ತು ಹೆಚ್ಚು ಕಡಿಮೆ ಎಲ್ಲಾ ಅಪಸ್ಮಾರ ಔಷಧಗಳನ್ನು ಉಚಿತವಾಗಿ ಒದಗಿಸಿದ ಮೈತ್ರಿ ಮೆಡಿಕಲ್ಸ್ (ವಾಣಿ ವಿಲಾಸ ಆಸ್ಪತ್ರೆ ಎದುರು) ಅವರ ಸಹಾಯಗಳನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾಳೆ.

 

ಹೀಗೆ ನೆನೆಸಿಕೊಳ್ಳುವಾಗ ಅವಳ ಕಣ್ಣಾಲಿಗಳು ತುಂಬಿ ಬರುತ್ತವೆ. ಆದರೆ ಕಣ್ಣ ಹನಿಗಳು ಹರಿದು ಬರುವುದನ್ನು ಆಕೆ ತಡೆದುಕೊಳ್ಳುತ್ತಾಳೆ. ಸುನೀತಾ ಗಟ್ಟಿ ಮನಸ್ಸಿನ ಮಹಿಳೆ.ಆಶ್ರಯಕ್ಕೆ ಸೂರಿನ ಹುಡುಕಾಟದಲ್ಲಿದ್ದಾಗ ಆಕೆ ಮತ್ತು ಗಿರೀಶ ರಾತ್ರಿ ಬಸ್ಸುಗಳಲ್ಲಿ ಹಾಸನಕ್ಕೆ ಹೋಗಿ ಬೆಳಿಗ್ಗೆ ಬೆಂಗಳೂರಿಗೆ ಮರಳುತ್ತಿದ್ದರು. ಚಲಿಸುವ ಬಸ್ಸೇ ಅವರಿಬ್ಬರ ಆಶ್ರಯ ತಾಣವಾಗಿತ್ತು. ಈ ಬಸ್ಸುಗಳ ಚಾಲಕ ಮತ್ತು ನಿರ್ವಾಹಕರ ಉಪಕಾರವನ್ನು ಆಕೆ ಸ್ಮರಿಸುತ್ತಾಳೆ.ಬಸ್ ನಿಲ್ದಾಣಗಳ ಶೌಚಾಲಯ ಮತ್ತು ಸ್ನಾನದ ಕೋಣೆಗಳು ಅವರಿಗೆ ನಿತ್ಯ ಕರ್ಮಗಳನ್ನು ಪೂರೈಸಿಕೊಳ್ಳಲು ನೆರವಾಗುತ್ತಿದ್ದವು. ಆಕೆ ಅಕ್ಷರಶಃ ವಿಕ್ಟೋರಿಯಾ, ವಾಣಿ ವಿಲಾಸ ಮತ್ತು ಸಾಮಾನ್ಯ ಧರ್ಮಶಾಲೆಗಳ ಕಾರಿಡಾರ್‌ಗಳಲ್ಲಿ ಬದುಕಿದಳು.ಆಕೆಗೆ ಈ `ಸರ್ಕಾರದ ಮನೆಗಳು~ ತಾತ್ಕಾಲಿಕ ಸೂರುಗಳನ್ನು ಒದಗಿಸಿದ್ದವು.

ತನ್ನನ್ನು ಸುಟ್ಟುಕೊಳ್ಳುವಾಗ, ನಿಶ್ಚೇಷ್ಟಿತಳಾದಾಗ... ಹೀಗೆ ಸುನೀತಾಳ ಎಲ್ಲಾ ಪಯಣದಲ್ಲೂ ಗಿರೀಶ ಆಕೆಯ ಆತ್ಮಸಂಗಾತಿಯಾಗಿದ್ದ. ಓಡಾಡಲು ಸಾಧ್ಯವಾಗದ ಗಿರೀಶನನ್ನು ಎತ್ತಿಕೊಳ್ಳಲು ಆಕೆಗೆ ಬಲವಾದ ತೋಳು ಬೇಕಾಗಿತ್ತು.ಆತ ಮಾತನಾಡಲಾರದ, ಕೇಳಿಸಿಕೊಳ್ಳಲಾರದ ಅಥವಾ ತಾನು ಹೇಗಿದ್ದೇನೆಂದು ಸ್ವತಃ ನೋಡಿಕೊಳ್ಳಲಾರದಂತಹ, ಮಾನಸಿಕವಾಗಿ ಬಲಿಯದ ಮಸ್ತಿಷ್ಕ ಪಾರ್ಶ್ವವಾಯುವಿನಿಂದ ನರಳುತ್ತಿದ್ದ ಮಗುವಾಗಿದ್ದ.ಈ ಅಂಗವೈಕಲ್ಯಗಳ ನಡುವೆಯೂ ಗಿರೀಶನ ಜನ್ಮದಿನಾಚರಣೆ ವಿಶಿಷ್ಟವಾಗಿ ನಡೆಯುತ್ತಿತ್ತು. ಆತನ ತಾಯಿ ಮಾತ್ರವೇ ಇದರ ಏಕೈಕ ಆಹ್ವಾನಿತೆ. ಗಿರೀಶನಿಗೆ ಕೇಕ್ ಕತ್ತರಿಸುವುದಾಗಲೀ ಅಥವಾ ಮೇಣದ ಬತ್ತಿ ಹಚ್ಚುವುದಾಗಲೀ ಸಾಧ್ಯವಿರಲಿಲ್ಲ. ಹುಟ್ಟುಹಬ್ಬದಂದು ಒಳ್ಳೆಯ ಬಟ್ಟೆ ಮತ್ತು ಟೊಪ್ಪಿ ಹಾಕಿ ಆತನ ಫೋಟೋಗಳನ್ನು ತೆಗೆಯಲಾಗುತ್ತಿತ್ತು.ಜೀವನಾಧಾರಕ್ಕಾಗಿ ಆಕೆಗೆ ಉದ್ಯೋಗದ ಅಗತ್ಯವಿತ್ತು. `ಡೇ ಕೇರ್ ಹೋಮ್~ಗಳಲ್ಲಿ ಮಕ್ಕಳನ್ನು ರಾತ್ರಿ ವೇಳೆ ನೋಡಿಕೊಳ್ಳಬೇಕಾಗುತ್ತಿತ್ತು. ಆಕೆಗೆ ರಾತ್ರಿಪಾಳಿ ಮಾಡಲು ಸಾಧ್ಯವಾಗುತ್ತಿರಲಿಲ್ಲವಾದ್ದರಿಂದ ಸಿಕ್ಕ ಕೆಲಸಗಳನ್ನು ಕಳೆದುಕೊಳ್ಳಬೇಕಾಗುತ್ತಿತ್ತು. `ಸೀಮೆ ಎಣ್ಣೆ ಬಲಿಪಶು~ವಾಗಿದ್ದಕ್ಕೆ ದೊರೆತ ಪರಿಹಾರದ ಹಣವನ್ನು ಅತ್ಯಂತ ಎಚ್ಚರಿಕೆಯಿಂದ ಸಮರ್ಪಕವಾಗಿ ಆಕೆ ಬಳಸಿಕೊಂಡಳು.`ಶಸ್ತ್ರಚಿಕಿತ್ಸೆ~ಗೆ (ಪುನರ್ ನಿರ್ಮಾಣಗೊಂಡ) ಒಳಗಾದ ಈಗಿನ ವಾಣಿ ವಿಲಾಸ ಆಸ್ಪತ್ರೆಯನ್ನು ಆಕೆ ಇಷ್ಟಪಡಲಿಲ್ಲ. ಪ್ರವೇಶ ಮತ್ತು ಹೊರಬಾಗಿಲುಗಳೆಲ್ಲವೂ ಹೊಸದಾಗಿ ನಿರ್ಮಾಣಗೊಂಡಿರುವುದರಿಂದ ನನ್ನನ್ನು ಹುಡುಕುವುದು ಆಕೆಗೆ ಕಷ್ಟವಾಗಿತ್ತು. ಹಳೆಯ ವಾಣಿ ವಿಲಾಸ ವಾರ್ಡ್‌ಗಳಲ್ಲಿದ್ದ ಒಳ್ಳೆಯ ಆಯಾಗಳು, ನರ್ಸ್ ಸಿಬ್ಬಂದಿ ಎಲ್ಲರೂ ಕಣ್ಮರೆಯಾಗಿದ್ದರು.

 

ಅಲ್ಲದೆ ಆಕೆಗೆ ಪರಿಚಯವಿದ್ದ ವೈದ್ಯರೂ ಕಡಿಮೆಯಾಗಿದ್ದರು. ಒಳ-ಹೊರಗೆ ಓಡಾಡುತ್ತಿದ್ದ ನನ್ನನ್ನು ಮತ್ತು ಗಿರೀಶನನ್ನು ಹೇಗೆ ಈ ಜಾಗ ನೆನಪಿಸಿಕೊಳ್ಳಬಲ್ಲದು. ಆಗಿನ ಗೋಡೆಗಳು ಮತ್ತು ಕಂಬಗಳು ನನ್ನ ಗಿರೀಶನನ್ನು ಬಲ್ಲವು. ಆದರೆ ಈಗಿನವುಗಳಲ್ಲ.ಆಕೆ ಕಡೆಗೂ ನಾನಿರುವ ಜಾಗವನ್ನು ಪತ್ತೆ ಮಾಡಿ ನಿರಾಳವಾದಳು. ಆಕೆ ಗಿರೀಶನ ನೆನಪಿನಲ್ಲಿ ಆತನ ಜನ್ಮದಿನವನ್ನು ಉಚಿತ ಆರೋಗ್ಯ ಕೇಂದ್ರದ ಮೂಲಕ ಆಚರಿಸಿಕೊಳ್ಳುತ್ತಿದ್ದಳು.ಉದ್ಯೋಗದ ಹುಡುಕಾಟದಲ್ಲಿದ್ದಾಗ, ಆಕೆ ಗಿರೀಶನನ್ನು ದಾವಣಗೆರೆಯಲ್ಲಿದ್ದ ತನ್ನ ಅಕ್ಕನ ಮನೆಯಲ್ಲಿ 15 ದಿನಗಳ ಮಟ್ಟಿಗೆ ಬಿಟ್ಟು ಬೆಂಗಳೂರಿಗೆ ಬಂದಿದ್ದಳು. ಅಲ್ಲಿಂದಲೇ ಅವನನ್ನು ನೋಡಿಕೊಳ್ಳುತ್ತಿದ್ದಳು.2006ರ ಆಗಸ್ಟ್ 14. ಹಾಲು ಕುಡಿದ ಗಿರೀಶನಿಗೆ ಅದರಿಂದ ಉಸಿರು ಸಿಕ್ಕಿಕೊಂಡಂತಾಯಿತು. ಖಾಸಗಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯೊಂದರಲ್ಲಿ ಆತ ತನ್ನ ಕೊನೆಯುಸಿರೆಳೆದ. ತಾಯಿ ಮತ್ತು ಮಗನ ಆ 15 ದಿನಗಳ ಸುದೀರ್ಘ ವಿರಹಕ್ಕಾಗಿ ಆಕೆ ತೀವ್ರ ಪಶ್ಚಾತ್ತಾಪಪಟ್ಟಳು.`ಗಿಣಿ~ಯ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳುವುದು ಸುನೀತಾಳಿಗೆ ತುಂಬಾ ಕಷ್ಟವಾಯಿತು. ಇಷ್ಟೆಲ್ಲಾ ಆಗಿದ್ದರೂ ಆಕೆ ಆತನ ಕಣ್ಣು ಮತ್ತು ಮೂತ್ರಪಿಂಡಗಳನ್ನು ದಾನ ಮಾಡಿದ್ದಲ್ಲದೆ, ಮಗನ ಇಡೀ ಶರೀರವನ್ನು ಸಂಶೋಧನೆಯ ಉದ್ದೇಶಕ್ಕೆ ಬಿಟ್ಟುಕೊಟ್ಟಳು. ಆಕೆಯ ಈ ಕೆಲಸ ಆನೆಯ ತುಳಿತಕ್ಕೆ ಸಿಕ್ಕಿದ ತಮ್ಮ ಮಗನ ನುಜ್ಜುಗುಜ್ಜಾದ ಶರೀರವನ್ನು ಕೆ.ಆರ್. ಆಸ್ಪತ್ರೆಗೆ ದಾನ ಮಾಡಲು ಶಿವರಾಮಪೇಟೆಯ ಗೌರಮ್ಮನಿಗೆ ಪ್ರೇರಣೆ ನೀಡಿತು.ಗಿರೀಶನ ಅಗಲಿಕೆ ಬಳಿಕ ಬೀದಿಯಲ್ಲಿರುವ ನಿರ್ಗತಿಕರಿಗೆ ಸಹಾಯ ಮಾಡುವ ಕನಸಿನೊಂದಿಗೆ ಸುನೀತಾ ಬದುಕುತ್ತಿದ್ದಾಳೆ. ಬೀದಿಯಲ್ಲಿರುವ ಚಿತ್ರಹಿಂಸೆಗೊಳಗಾದ, ಯಾತನೆ ಪಡುತ್ತಿರುವ ಜೀವಗಳ ಪಾಲಿಗೆ ಆಕೆ ಅರ್ಥಕೋಶ ಮಾತ್ರವಲ್ಲ ನಿರ್ದೇಶಿಕೆ ಕೂಡ.ಆಕೆಯ ಛಲದ ಬದುಕಿನ ಕಥೆಯನ್ನು ಪೂರ್ಣಗೊಳಿಸುವ ಸಲುವಾಗಿ ಮಾತನಾಡಿದಾಗ ಸುನೀತಾ ಹೇಳಿದ್ದು- “ಕ್ಷಮಿಸಿ ಮೇಡಂ, ಇವತ್ತು ನಾನು ಕೇರ್ ಆಫ್ ಫುಟ್‌ಪಾತ್. ಮನೆ ಮಾಲೀಕ ನನ್ನನ್ನು ಹೊರಹಾಕಿ ನನ್ನ ವಸ್ತುಗಳನ್ನು ಕಸಿದುಕೊಂಡಿದ್ದಾನೆ”. ನಾನು ಮಾತನಾಡುವ ಮುನ್ನವೇ ಮತ್ತೆ ಮಾತು ಮುಂದುವರೆಸಿದಳು.

 

“ಬದುಕು ಮತ್ತು ಅದನ್ನು ನಿರ್ವಹಿಸುವುದು ಹೇಗೆಂದು ನನಗೆ ಚೆನ್ನಾಗಿ ಗೊತ್ತು. ನೀವು ಚಿಂತಿಸಬೇಡಿ ಮೇಡಂ”.ಸ್ವರ್ಗದಲ್ಲಿರುವ ಆಕೆಯ ಪ್ರೀತಿಯ ಮಗ ಗಿರೀಶ ತನ್ನ ಪ್ರೀತಿಯ ಅಮ್ಮನನ್ನು ಸಂಶೋಧನಾ ಕೊಠಡಿಯಲ್ಲಿರುವ ತನ್ನ ದೇಹದ ಮೂಲಕವೇ ರಕ್ಷಿಸುತ್ತಿರಬಹುದು.ಸುನೀತಾ- ನಿನ್ನನ್ನು ಪ್ರೀತಿ ಪಾತ್ರ ಮಗಳಂತೆ ಯಾರಾದರೂ ಆರೈಕೆ ಮಾಡುತ್ತಾರೆಂಬ ಭರವಸೆ ಹೊಂದಿದ್ದೇನೆ. ತಾಯಿಯಾಗಿ ಗಿರೀಶನ ಪೋಷಣೆಯಲ್ಲಿ ಅಸಾಧಾರಣವಾದುದ್ದನ್ನು ಸಾಧಿಸಿದ್ದೀಯ! 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry