ಗಿಳಿಯ ಕೃತಜ್ಞತೆ

7

ಗಿಳಿಯ ಕೃತಜ್ಞತೆ

ಗುರುರಾಜ ಕರ್ಜಗಿ
Published:
Updated:

 ಯಜಮಾನರ ಮನೆ ಇರುವುದೇ ತೋಟದಲ್ಲಿ. ಊರಿನ ಗದ್ದಲದಿಂದ ದೂರವಾದ ಈ ಸ್ಥಳ ಹಸಿರಿನ ಅರಮನೆ. ತೆಂಗು, ಅಡಿಕೆಮರಗಳ ದಟ್ಟ ಪದರುಗಳ ಹಿಂದೆ ಇದ್ದ ಈ ತೋಟದ ಮನೆ ಹೊರಗಿನಿಂದ ಕಾಣುವುದೇ ಇಲ್ಲ. ಅಷ್ಟೂ ವರ್ಷಗಳ ಕಾಲ ದೇಶ ವಿದೇಶಗಳಲ್ಲಿ ಜನಸಾಗರದ ಮಧ್ಯೆ ಕಾಂಕ್ರೀಟು ಕಾಡುಗಳಲ್ಲಿ ತಮ್ಮನ್ನೇ ಕಳೆದುಕೊಂಡಿದ್ದ ಯಜಮಾನರು ಈಗ ಮರಳಿ ತಮ್ಮ ತೋಟದ ಮಣ್ಣಿಗೆ ಬಂದು ತಮ್ಮನ್ನು ಮತ್ತೆ ಹುಡುಕಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ.  ದಿನಾಲು ಅವರಿಗೊಂದು ಹೊಸಹೊಸ ಅನುಭವಗಳಾಗುತ್ತವೆ. ಅವರು ಎಷ್ಟೋ ವರ್ಷಗಳ ನಂತರ ಸುಂದರ ಸೂರ್ಯೋದಯ, ಸೂರ್ಯಾಸ್ತಗಳನ್ನು ನೋಡುತ್ತಾರೆ, ತರತರಹದ ಪಕ್ಷಿಗಳನ್ನು, ಹೊಸ ಹೊಸ ಬಗೆಯ ಮರ, ಬಳ್ಳಿಗಳನ್ನು ಕಾಣುತ್ತಾರೆ. ಮತ್ತೆ ವಯಸ್ಸು ಮರಳಿ ಬಂದಂತಿದೆ ಅವರಿಗೆ. ಸಂಜೆಯ ಕಾಲದಲ್ಲಿ ಮನೆಯ ಹೊರಗೆ ಕುರ್ಚಿ ಹಾಕಿಕೊಂಡು ಕುಳಿತರೆ ತಮ್ಮ ಗೂಡುಗಳಿಗೆ ಹಾರಿಬರುವ ಸಾವಿರಾರು ಪಕ್ಷಿಗಳನ್ನು ಕಂಡಾಗ ತಮ್ಮ ಮಕ್ಕಳು ಯಾವಾಗ ತಮ್ಮ ದೇಶಕ್ಕೆ ಮರಳಿ ಬಂದಾರೋ ಎಂದು ಕೇಳಿಕೊಳ್ಳುವ ಮನಸ್ಸಾಗಿ ಹೃದಯ ಆರ್ದ್ರವಾಗುತ್ತದೆ, ಕಣ್ಣು ಒದ್ದೆಯಾಗುತ್ತವೆ.ಒಂದು ಬೆಳಿಗ್ಗೆ ತಮ್ಮ ಕೋಣೆಯಿಂದ ಹೊರಬಂದು ಅಂಗಳಕ್ಕೆ ಬಂದಾಗ ಮೂಲೆಯಲ್ಲಿ ಏನೋ ಬಿದ್ದದ್ದು ಕಾಣಿಸಿತು. ಹತ್ತಿರ ಹೋಗಿ ನೋಡಿದರೆ ಅದೊಂದು ಗಿಳಿ. ಪಾಪ! ಗಿಡುಗ ಹೊಡೆದಿರಬೇಕು, ಸತ್ತು ಹೋಗಿದೆ ಎಂದುಕೊಂಡು ಎತ್ತಲು ಹತ್ತಿರ ಹೋದರೆ ಅದು ಅಲುಗಾಡುತ್ತಿತ್ತು. ಅಯ್ಯೋ ಅದಕ್ಕೇನೋ ಪೆಟ್ಟಾಗಿರಬೇಕು ಎಂದು ಎತ್ತಿಕೊಂಡರು. ಅದು ಸಿಟ್ಟಿನಿಂದ ಕಚ್ಚಲು ಬರಲಿಲ್ಲ.

 

ಯಜಮಾನರಿಗೆ ಸಹಕಾರ ನೀಡಿತು. ಮನೆಯವರೆಲ್ಲ ಓಡಿ ಬಂದರು. ಗಿಳಿಗೆ ರೆಕ್ಕೆಯ ಮೇಲೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದವು. ಯಜಮಾನರ ಮಗಳು ಅದಕ್ಕೆ ಮುಲಾಮು ಹಚ್ಚಿದಳು. ಯಜಮಾನಿ ಅದಕ್ಕೆ ತಿನ್ನುವುದಕ್ಕೆ ಒಂದೆರಡು ಹಣ್ಣಿನ ಹೋಳುಗಳನ್ನು, ಕಾಳುಗಳನ್ನು, ಕಡ್ಲೆಕಾಯಿ ಬೀಜಗಳನ್ನು ಹಾಕಿ ಕುಡಿಯಲು ನೀರುಕೊಟ್ಟರು. ರಾತ್ರಿ ಬೇರೆ ಬೆಕ್ಕು ಅಥವಾ ಪ್ರಾಣಿಗಳಿಂದ ಅದಕ್ಕೆ ತೊಂದರೆಯಾಗಬಾರದೆಂದು ಪಂಜರವನ್ನು ತಂದು ಅದರ ಒಳಗೆ ಇರಿಸಿ ಭದ್ರಪಡಿಸಿದರು.ಒಂದೆರಡು ದಿನಗಳಲ್ಲಿ ಗಿಳಿಗೆ ಪೂರ್ತಿ ಆರೋಗ್ಯ ಸರಿಯಾಯಿತು. ಅದು ಅಂಗಳದ ತುಂಬೆಲ್ಲ ನಡೆದಾಡುತ್ತಿತ್ತು. ಅದು ಹಾರಿ ಹೋಗಲಿ ಎಂದು ಎಷ್ಟು ಪ್ರಯತ್ನ ಮಾಡಿದರೂ ಗಿಳಿಗೆ ಹಾರಲು ಆಗಲೇ ಇಲ್ಲ. ಒಂದು ದಿನ ಯಜಮಾನರು ಗಿಳಿಯನ್ನು ಕೈಯಲ್ಲಿ ಹಿಡಿದುಕೊಂಡು ಮೃದುವಾಗಿ ಅದರ ಮೈ ನೇವರಿಸುವಾಗ ಒಂದು ವಿಚಿತ್ರ ಕಂಡಿತು.ಯಾರೋ ಅದರ ರೆಕ್ಕೆಗಳನ್ನು ತೆಳುವಾದ ನೈಲಾನ್ ದಾರದಿಂದ ದೇಹದೊಂದಿಗೆ ಹೊಲಿದುಬಿಟ್ಟಿದ್ದಾರೆ! ಅದಕ್ಕೇ ಹಾರುವುದು ಸಾಧ್ಯವಿರಲಿಲ್ಲ. ಎಚ್ಚರಿಕೆಯಿಂದ ಪುಟ್ಟ ಕತ್ತರಿ ತೆಗೆದುಕೊಂಡು ಆ ಎಳೆಗಳನ್ನು ನಿಧಾನವಾಗಿ ಕತ್ತರಿಸಿದರು. ಎರಡೂ ರೆಕ್ಕೆಗಳ ಬಂಧವನ್ನು ಬಿಡಿಸಿದ ತಕ್ಷಣ ಗಿಳಿ ರೆಕ್ಕೆಗಳನ್ನು ಎತ್ತಿ ಬಡಿಯಲಾರಂಭಿಸಿತು. ಸಂತೋಷದಿಂದ ಕೂಗು ಹಾಕಿತು. ಆದರೆ ಹಾರಿಹೋಗಲಿಲ್ಲ.ಒಂದೆರಡು ದಿನಗಳವರೆಗೆ ರೆಕ್ಕೆಗಳನ್ನು ಬಡಿಯುತ್ತಲೇ ಇತ್ತು. ಮರುದಿನ ಮನೆಯವರೆಲ್ಲರೂ ನೋಡುತ್ತಿದ್ದಂತೆ ಇದುವರೆಗೂ ತೋರದ ಉತ್ಸಾಹದಿಂದ ಜೋರಾಗಿ ಕೂಗುಹಾಕಿ ಪಟಪಟನೆ ರೆಕ್ಕೆಗಳನ್ನು ಬಡಿದು ಭರ‌್ರನೇ ಹಾರಿಹೋಯಿತು.ಮನೆಯವರೆಲ್ಲ ಚಪ್ಪಾಳೆ ತಟ್ಟಿ ಸಂತೋಷ ತೋರಿದರು. ಗಿಳಿ ನಂತರವೂ ಆಗಾಗ ಮನೆಗೆ ಬಂದು ನೀರು ಕುಡಿದು, ಕಾಳು ತಿಂದು ಹೋಗುತ್ತಿತ್ತು. ದಿನಾಲು ಬಂದು ಯಜಮಾನರ ಹೆಗಲಮೇಲೆ ಕುಳಿತು ಅವರ ಕೆನ್ನೆಗೆ ತನ್ನ ಕೊಕ್ಕನ್ನು ತಿಕ್ಕಿ ತಿಕ್ಕಿ ತನ್ನ ಕೃತಜ್ಞತೆಯನ್ನು ತೋರುತ್ತಿತ್ತು. ಅದೊಂದು ಪರಿವಾರದ ಸದಸ್ಯನೇ ಆಗಿಹೋಯಿತು.ಒಂದು ದಿನ ಬೆಳಿಗ್ಗೆ ನೋಡಿದರೆ ಗಿಳಿ ಬಂದು ಕುಳಿತಿತ್ತು. ಆಹಾರ ತಿನ್ನಲಿಲ್ಲ, ನೀರು ಕುಡಿಯಲಿಲ್ಲ, ಸಂಜೆಯ ಹೊತ್ತಿಗೆ ಅದು ಪ್ರಾಣ ಬಿಟ್ಟುಬಿಟ್ಟಿತ್ತು. ಯಜಮಾನರಿಗೆ ಬಹಳ ದುಃಖವಾಯಿತು.ಒಂದು ಸಣ್ಣ ಸಹಾಯ ಮಾಡಿದ್ದನ್ನು ಕೃತಜ್ಞತೆಯಿಂದ ನೆನೆಸಿಕೊಂಡು ಗಿಳಿ ತನ್ನ ಋಣ ತೀರಿಸುವಂತೆ ಯಜಮಾನರ ಮನೆಯಲ್ಲಿಯೇ ದೇಹಬಿಟ್ಟಿತ್ತು. ಒಂದು ಪುಟ್ಟ ಪ್ರಾಣಿ ತೋರಿದ ಈ ಕೃತಜ್ಞತೆ, ಸೃಷ್ಟಿಯ ಶಿಖರವಾಗಿರುವ ಮನುಷ್ಯನಿಗೇಕೆ ಸಾಧ್ಯವಾಗುತ್ತಿಲ್ಲ?ತನಗೆ ಜನ್ಮ ನೀಡಿದವರಿಗೇ, ಅನ್ನ   ಕೊಟ್ಟವರಿಗೇ, ದಾರಿ ತೋರಿದವರಿಗೇ ಅನ್ಯಾಯ ಮಾಡುವ ಬುದ್ಧಿಯನ್ನು ತೋರುವ ಮನುಷ್ಯ ಗಿಳಿಯಂಥ ಪ್ರಾಣಿಯಿಂದಲಾದರೂ ಕಲಿಯುವುದು ಸಾಧ್ಯವಿಲ್ಲವೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry