ಶನಿವಾರ, ಡಿಸೆಂಬರ್ 7, 2019
25 °C

ಗುಜರಾತ್ ಚುನಾವಣೆ ನೀಡಿದ ಸಂದೇಶವೇನು?

ನಾರಾಯಣ ಎ
Published:
Updated:
ಗುಜರಾತ್ ಚುನಾವಣೆ ನೀಡಿದ ಸಂದೇಶವೇನು?

ಅಂತಿಮವಾಗಿ ಗೆಲುವು ಗೆಲುವೇ, ಸೋಲು ಸೋಲೇ ಎಂದು ಒಪ್ಪಿಕೊಂಡರೂ ಗುಜರಾತ್ ಚುನಾವಣೆಯಲ್ಲಿ ನಿನ್ನೆ ಕಂಡದ್ದು ಒಂದು ವಿಷಣ್ಣ ಸನ್ನಿವೇಶದ ವಿಲಕ್ಷಣ ಫಲಿತಾಂಶವನ್ನು. ಬಿಜೆಪಿ ಮತ್ತೊಮ್ಮೆ ಗೆದ್ದಿದೆ, ಕಾಂಗ್ರೆಸ್ ಮತ್ತೊಮ್ಮೆ ಸೋತಿದೆ. ಆದರೆ, ಗೆದ್ದ ಗೆಲುವು ಸಂಪೂರ್ಣ ಗೆಲುವಲ್ಲ, ಸೋತ ಸೋಲು ಸಂಪೂರ್ಣ ಸೋಲಲ್ಲ.

ಈ ರೀತಿಯ ಚುನಾವಣಾ ತೀರ್ಪುಗಳು ಭಾರತದ ಚುನಾವಣಾ ಚರಿತ್ರೆಯಲ್ಲಿ ಅಪೂರ್ವ. ಸಂಪೂರ್ಣ ಅಸಮಬಲರ ನಡುವೆ ಏರ್ಪಟ್ಟ ಈ ಏಕಮುಖ ಕದನ ಅಂತಿಮವಾಗಿ ಪಡೆದುಕೊಂಡ ಖಾಡಾಖಾಡಿ ತಿರುವು ಒಂದು ರೀತಿಯಲ್ಲಿ ಆಮೆ ಮತ್ತು ಮೊಲದ ಓಟದಲ್ಲಿ ಆಮೆ ಗೆದ್ದ ಪಂಚತಂತ್ರದ ಕತೆಯಂತಿದೆ. ಒಂದೇ ವ್ಯತ್ಯಾಸವೆಂದರೆ ಇಲ್ಲಿ ಮೊಲ ನಿದ್ರಿಸಿಲ್ಲ, ಬದಲಿಗೆ ವೇಗ ಹೆಚ್ಚಿಸಿಕೊಂಡು ಓಡಿದೆ ಮತ್ತು ಆ ಕಾರಣಕ್ಕಾಗಿ ಆಮೆ ಗೆದ್ದಿಲ್ಲ. ಆದರೆ, ಸೋಲಿನ ಸರದಾರ ಎಂದು ಬಿಜೆಪಿಗರಿಂದ ಕಂಡಕಂಡಲ್ಲಿ ಮೂದಲಿಕೆಗೆ ಒಳಗಾಗಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ವರ್ಚಸ್ಸು ಅವರ ಪಕ್ಷದ ಸೋಲಿನಲ್ಲೂ ಒಂದು ತೂಕ ಏರಿದೆ.

ಬಿಜೆಪಿ ತನ್ನ ಸ್ಥಾನ ಉಳಿಸಿಕೊಂಡ ಸ್ಥಿತಿಯಲ್ಲೂ ಕಾಂಗ್ರೆಸ್ ತನ್ನ ಮಾನ ಉಳಿಸಿಕೊಂಡ ಈ ಚುನಾವಣೆ ನೀಡುವ ಸಂದೇಶವೇನು? ಈ ಪ್ರಶ್ನೆಗೆ ಉತ್ತರವನ್ನು ಫಲಿತಾಂಶದ ಅಂಕಿ-ಸಂಖ್ಯೆಗಳಿಂದ ಮಾತ್ರ ಹುಡುಕಿ ತೆಗೆಯಲು ಸಾಧ್ಯವಿಲ್ಲ. ಫಲಿತಾಂಶ ನೀಡುವ ಸಂದೇಶಗಳೇನೆಂದು ಅರ್ಥಮಾಡಿಕೊಳ್ಳುವ ಮೊದಲು ಇಡೀ ಚುನಾವಣೆಯ ಸಂಕೀರ್ಣ ಭೂಮಿಕೆಯತ್ತ ಒಂದು ನೋಟ ಹರಿಸಬೇಕು.

ಇಷ್ಟೊಂದು ಕ್ಲಿಷ್ಟಕರ ಸಾಮಾಜಿಕ-ರಾಜಕೀಯ ವೇದಿಕೆಯೊಂದರ ಮೇಲೆ ಒಂದು ವಿಧಾನಸಭಾ ಚುನಾವಣೆ ನಡೆದದ್ದು ದೇಶದಲ್ಲಿ ಇದೇ ಮೊದಲಿರಬೇಕು. ಇದು ಲೋಕಸಭಾ ಚುನಾವಣೆಯಂತೆ ನಡೆದ ವಿಧಾನಸಭಾ ಚುನಾವಣೆ. ಇದು ರಾಷ್ಟ್ರೀಯ ನಾಯಕರು ನಡೆಸಿದ ರಾಜ್ಯಮಟ್ಟದ ಕದನ. ಇಲ್ಲಿ ಎರಡೂ ಪಕ್ಷಗಳ ಸ್ಥಳೀಯ ನಾಯಕರು ನೆಪಕ್ಕಾದರೂ ಚುನಾವಣಾ ಪ್ರಚಾರದ ಮುಂಚೂಣಿಯಲ್ಲಿರಲಿಲ್ಲ. ಅಲ್ಲಿದ್ದದ್ದು ಒಂದೆಡೆ, ಸ್ವಯಂ ಘೋಷಿತ ಹದಿನೈದು ಇಂಚಿನ ಎದೆಯ ಪ್ರಬಲ ನಾಯಕ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಇನ್ನೊಂದೆಡೆ ‘ದುರ್ಬಲ ಬಾಲಕ' ಎಂದು ಬಾರಿ ಬಾರಿ ಬಿಜೆಪಿಯವರಿಂದ ಅವಮಾನಕ್ಕೊಳಗಾಗುತ್ತಿದ್ದ ರಾಹುಲ್ ಗಾಂಧಿ. ಪ್ರಬಲ ನಾಯಕನಿಗೆ ಹೆಗಲಿಗೆ ಹೆಗಲು ನೀಡಲು ಜತೆಗಿದ್ದದ್ದು ಚುನಾವಣಾತಂತ್ರ ಚಾಣಕ್ಯ ಬಿರುದಾಂಕಿತ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ. ‘ದುರ್ಬಲ ಬಾಲಕ'ನ ಜತೆ ಇದ್ದದ್ದು ರಾಜಕೀಯದಲ್ಲಿ ಈಗಷ್ಟೇ ಕಣ್ಣು ಬಿಡುತ್ತಿರುವ ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ ಮತ್ತು ಅಲ್ಪೇಶ್ ಠಾಕೂರ್ ಎಂಬ ಹೆಸರುಳ್ಳ ಮೂರು ಜನ ಕೋಪಿಷ್ಟ ತರುಣರು. ಈ ಮೂವರಲ್ಲಿ ಹಾರ್ದಿಕ್ ಪಟೇಲ್ ಇನ್ನೂ ಚುನಾವಣೆಗೆ ಸ್ಪರ್ಧಿಸುವಷ್ಟೂ ವಯಸ್ಸಾಗದ ಬಾಲ-ಯುವಕ. ಇದು ಅಸಮಬಲ, ಏಕಮುಖ ಚುನಾವಣಾ ರಂಗದ ಒಂದು ಮುಖ.

ಹಾಗೆಂದು ಇಂದು ಸಂಪೂರ್ಣ ಸರಳ ರೇಖೆಯಲ್ಲಿ ನಿರೂಪಿಸಬಹುದಾದ ಅಸಮತೋಲನ ಎನ್ನುವ ಹಾಗೂ ಇರಲಿಲ್ಲ. ಯಾಕೆಂದರೆ ಬಿಜೆಪಿ ಗುಜರಾತಿನಲ್ಲಿ 22 ವರ್ಷಗಳ ಕಾಲ ಆಡಳಿತ ನಡೆಸಿ ಚುನಾವಣೆ ಎದುರಿಸುತ್ತಿತ್ತು. ಎಲ್ಲ ಸರಿಯಾಗಿದ್ದರೂ ಆಡಳಿತ ವಿರೋಧಿ ಅಲೆ ಹುಟ್ಟಿಕೊಳ್ಳಬಹುದಾದಷ್ಟು ಸುದೀರ್ಘ ಅವಧಿ ಇದು. ಇದರ ಜತೆ ಇನ್ನೊಂದು ವಿಚಿತ್ರ ಪರಿಸ್ಥಿತಿ ಇತ್ತು. ಅಲ್ಲಿ ಬಿಜೆಪಿಯ ಮುಂದಿದ್ದದ್ದು ಎರಡು ಎಳೆಯ ಆಡಳಿತ ವಿರೋಧಿ ಅಲೆ. ಒಂದೆಡೆ ರಾಜ್ಯ ಸರ್ಕಾರದ ವಿರುದ್ಧ ಹುಟ್ಟಿಕೊಂಡಿರಬಹುದಾಗಿದ್ದ ಅಭಿಪ್ರಾಯ, ಇನ್ನೊಂದೆಡೆ ಅಖಾಡಲ್ಲಿದ್ದದ್ದು ಸ್ವತಃ ಪ್ರಧಾನ ಮಂತ್ರಿಯಾದುದರಿಂದ ಅಲ್ಲಿ ಕೇಂದ್ರ ಸರ್ಕಾರದ ಬಗ್ಗೆ ಇರಬಹುದಾಗಿದ್ದ ಆಡಳಿತ ವಿರೋಧಿ ಅಲೆಯನ್ನು ಕೂಡಾ ನಿರೀಕ್ಷಿಸಬಹುದಾಗಿತ್ತು (ಮುಖ್ಯವಾಗಿ ನೋಟು ನಿಷೇಧದ ವಿವಾದ ಮತ್ತು ಹೊಸ ಜಿಎಸ್‌ಟಿ ತೆರಿಗೆಯ ಕಾರಣಗಳಿಂದ).

ಜತೆಗೆ ಗುಜರಾತ್ ಅಭಿವೃದ್ಧಿ ಮಾದರಿ ಕುಸಿದುಬಿದ್ದ ಕತೆಗಳು ಎಲ್ಲೆಡೆ ಹುಟ್ಟಿಕೊಂಡಿದ್ದವು. ಇಷ್ಟೆಲ್ಲಾ ಇದ್ದರೂ ಚುನಾವಣೆ ನಡೆದಾಗ ಇಡೀ ದೇಶದಲ್ಲೇ ಬಿಜೆಪಿ ಅತ್ಯಂತ ಪ್ರಬಲವಾಗಿದ್ದದ್ದು ಗುಜರಾತಿನಲ್ಲಿ, ಕಾಂಗ್ರೆಸ್ ಅತ್ಯಂತ ದುರ್ಬಲವಾಗಿದ್ದದ್ದು ಗುಜರಾತಿನಲ್ಲಿ. ಈ ಎಲ್ಲ ಕಾರಣಗಳಿಂದಾಗಿ ಈ ಬಾರಿ ಗುಜರಾತ್, ದೇಶ ಕಂಡ ಅತ್ಯಂತ ಸಂಕೀರ್ಣ ಚುನಾವಣಾ ಅಖಾಡವಾಗಿತ್ತು.

ಇಂತಹ ಅಸಮಬಲ ಸನ್ನಿವೇಶದಲ್ಲಿ ಬಿಜೆಪಿ ಗೆಲ್ಲುವುದು ಶತಸಿದ್ಧವಾಗಿದ್ದರೂ ಒಟ್ಟು 182 ಸೀಟುಗಳಲ್ಲಿ 100 ಕ್ಕಿಂತ ಕಡಿಮೆ ಪಡೆದರೆ ಗೆಲುವಿನಲ್ಲೂ ಅದು ಮಾನಸಿಕ ಆಘಾತವನ್ನು ಅನುಭವಿಸುತ್ತದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದರು. ಅದೇ ರೀತಿ ಹೋದ (2012) ಚುನಾವಣೆಯಲ್ಲಿ 61 ಸ್ಥಾನಗಳನ್ನು ಗೆದ್ದು ಈ ಚುನಾವಣೆಯ ಹೊತ್ತಿಗೆ ಸುಮಾರು 20 ಶಾಸಕರನ್ನು ಕಳೆದುಕೊಂಡಿದ್ದ ಕಾಂಗ್ರೆಸ್ 60 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದರೆ ಆ ಪಕ್ಷದ ಪುನಶ್ಚೇತನದ ಪಥ ತೆರೆದುಕೊಳ್ಳುತ್ತದೆ ಎಂಬುದೂ ರಾಜಕೀಯ ವೀಕ್ಷಕರ ಅಭಿಪ್ರಾಯವಾಗಿತ್ತು.

ಈಗ ಆಗಿದ್ದು ಅದೇ. ಬಿಜೆಪಿಗೆ ನೂರಕ್ಕಿಂತ ಒಂದು ಸೀಟು ಕಡಿಮೆ ಬಂದಿದೆ, ಕಾಂಗ್ರೆಸ್‌ ಅರವತ್ತರ ಮೇಲೆ ಮತ್ತೆ ಇಪ್ಪತ್ತು ಸೀಟುಗಳನ್ನು ಗೆದ್ದುಕೊಂಡಿದೆ. ಆದುದರಿಂದ ಈ ಚುನಾವಣೆಯಷ್ಟೇ ಅದರ ಫಲಿತಾಂಶವೂ ಮುಖ್ಯವಾಗಿ ಕಾಣಿಸುವುದು. ತಮಗೆ ಬಂದೊದಗಿದ ಈ ಸ್ಥಿತಿಗೆ ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಹೇಗೆ ಪ್ರತಿಸ್ಪಂದಿಸುತ್ತವೆ ಎನ್ನುವುದು ದೇಶದ ರಾಜಕೀಯ ಮತ್ತು ಆಡಳಿತ ಹಾದಿಯನ್ನು ನಿರ್ಣಯಿಸಲಿವೆ.

ಈಗ ಚುನಾವಣೆಯ ಸಂದೇಶದ ವಿಷಯಕ್ಕೆ ಬರೋಣ. ಇಲ್ಲಿ ಮುಖ್ಯವಾಗುವುದು ಈ ಚುನಾವಣಾ ಫಲಿತಾಂಶದಿಂದ ಬಿಜೆಪಿ ಮತ್ತು ಕಾಂಗ್ರೆಸ್‌ ಯಾವ ಯಾವ ಪಾಠಗಳನ್ನು ಕಲಿಯುತ್ತವೆ ಅಥವಾ ಬಿಡುತ್ತವೆ ಎನ್ನುವುದಲ್ಲ. ಹಾಗೆ ನೋಡಿದರೆ ಚುನಾವಣೆಯೊಂದು ನೀಡುವ ಸಂದೇಶ ಏನು ಎನ್ನುವುದನ್ನು ಅದರ ಫಲಿತಾಂಶದಲ್ಲಿ ಮಾತ್ರ ಹುಡುಕುವುದು ಸರಿಯಲ್ಲ. ಆ ಸಂದೇಶವನ್ನು ಇಡೀ ಚುನಾವಣೆಯ ಪ್ರಕ್ರಿಯೆಯಲ್ಲಿ, ಅದರ ಸುತ್ತ ನಡೆದ ಘಟನಾವಳಿಗಳಲ್ಲಿ, ಪಕ್ಷಗಳು ಹೂಡಿದ ತಂತ್ರ-ಪ್ರತಿತಂತ್ರಗಳಲ್ಲಿ, ನಾಯಕರು ಆಡಿದ ಮತ್ತು ಆಡದೆ ಉಳಿದ ಮಾತುಗಳಲ್ಲಿ ಹುಡುಕಬೇಕು.ಈ ದೃಷ್ಟಿಯಲ್ಲಿ ಈ ಚುನಾವಣೆ ದೇಶಕ್ಕೆ ತಿಳಿಸಿದ್ದೇನು ಎನ್ನುವ ಪ್ರಶ್ನೆಗೆ ಉತ್ತರ ಹುಡುಕಲು ತೊಡಗಿದಾಗ ಬಿಜೆಪಿ ಗೆದ್ದು ಸೋತದ್ದನ್ನು ಮತ್ತು ಕಾಂಗ್ರೆಸ್ ಸೋತು ಗೆದ್ದದ್ದನ್ನು ಬೇರೆಯೇ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಮೊದಲನೆಯದಾಗಿ ಕಾಂಗ್ರೆಸ್ ಈ ಚುನಾವಣೆಯನ್ನು ಒಂಟಿಯಾಗಿ ಎದುರಿಸಿಲ್ಲ. ಅದು ಬಿಜೆಪಿಯ ಸಾಮಾಜಿಕ ಧ್ರುವೀಕರಣದ ರಾಜಕೀಯ ಮಾದರಿಗೆ ಒಂದು ಪರ್ಯಾಯ ಮಾದರಿಯನ್ನು ಮಂಡಿಸಿಲ್ಲ. ಅಂತಹದ್ದೊಂದು ನಂಬಿಕೆಯನ್ನು ತನ್ನ ಭಾಷಣದ ಮೂಲಕ ರಾಹುಲ್ ಗಾಂಧಿಯವರು ಹುಟ್ಟಿಸಲು ಪ್ರಯತ್ನಿಸಿದರೂ ವಾಸ್ತವದಲ್ಲಿ ಗುಜರಾತಿನ ಕಾಂಗ್ರೆಸ್‌ ಪಾಳಯದಲ್ಲಿ ಏನು ನಡೆಯಿತೋ ಅದು ಬಿಜೆಪಿಯ ರಾಜಕೀಯ ಮಾದರಿಗಿಂತ ಭಿನ್ನವಾಗಿ ಏನೂ ಇರಲಿಲ್ಲ. ಒಂದು ರೀತಿಯಲ್ಲಿ ಕಾಂಗ್ರೆಸ್ ತನ್ನ ಕೆಲಸವನ್ನು ಕ್ರೋಧಾವಿಷ್ಟರಾದ ಮೂವರು ಸ್ಥಳೀಯ ತರುಣರಿಗೆ ಹೊರಗುತ್ತಿಗೆ ನೀಡಿದಂತಿತ್ತು. ಈ ಮೂವರೂ ಯುವಕರು ಜಾತಿ ಆಧಾರಿತ ರಾಜಕೀಯವನ್ನು ಬೇರೆ ಬೇರೆ ರೀತಿಯಲ್ಲಿ ನೆಚ್ಚಿಕೊಂಡವರು. ಅದರಲ್ಲೂ ಕಾಂಗ್ರೆಸ್ ಪ್ರಮುಖವಾಗಿ ಅವಲಂಬಿಸಿದ್ದು ಪ್ರಶ್ನಾರ್ಹ ರಾಜಕೀಯ ಅಜೆಂಡಾವೊಂದನ್ನು ಮುಂದಿಟ್ಟುಕೊಂಡಿದ್ದ ಹಾರ್ದಿಕ್ ಪಟೇಲ್ ಎನ್ನುವ ಯುವಕನ ಮೇಲೆ.

ಈ ಹಾರ್ದಿಕ್ ಪಟೇಲ್ ಎಂಬ ಯುವಕ ಜನಪ್ರಿಯತೆ ಗಳಿಸಿರುವುದು ಮುಂದುವರಿದ ಪಟೇಲ್ ಜಾತಿಯವರಿಗೆ ಮೀಸಲಾತಿ ನೀಡಬೇಕು ಎನ್ನುವ ಬೇಡಿಕೆಯನ್ನು ಮುಂದಿಟ್ಟುಕೊಂಡು. ಅದರ ಜತೆಗೆ ಅವರಿಗೆ ಆದರ್ಶ ಮುಂಬೈಯ ಬಾಳಾ ಠಾಕ್ರೆಯಂತೆ. ಯಾವ ಅಧಿಕಾರಸ್ಥ ಸ್ಥಾನವನ್ನೂ ಅಲಂಕರಿಸದೆ ಜನಪ್ರಿಯರಾಗಿದ್ದರು ಎನ್ನುವ ಕಾರಣಕ್ಕೆ ಠಾಕ್ರೆ ಆರಾಧ್ಯ ದೈವವಂತೆ. ಅಧಿಕಾರ ರಾಜಕೀಯದಿಂದ ದೂರವಿದ್ದು ಜಗತ್ತಿನಾದ್ಯಂತ ಜನಪ್ರಿಯವಾಗಿದ್ದ, ಅವರದೇ ರಾಜ್ಯದ ಮಹಾತ್ಮ ಗಾಂಧಿ ಈ ಯುವ ಪಾಟೀದಾರ್ ನಾಯಕನಿಗೆ ಆದರ್ಶವಾಗಲಿಲ್ಲ!

ಹಿಂದೊಮ್ಮೆ ಇದೇ ಯುವಕ ‘ಪೊಲೀಸರನ್ನು ಕೊಲ್ಲಿ’ ಎಂದು ಬಹಿರಂಗವಾಗಿ ಕರೆ ನೀಡಿದ್ದರು (ಭಾರತದ ಪೊಲೀಸರ ಕ್ರೌರ್ಯ ಸರಿಪಡಿಸಲು ಉಳಿದಿರುವ ಏಕೈಕ ಮಾರ್ಗ ಇದು ಎಂದು ಬಹುಮಂದಿ ನಂಬಿರಬಹುದು ಎನ್ನುವ ವಿಚಾರ ಬೇರೆ). ಹಿಂಸೆಯನ್ನೂ ಅರಾಜಕತೆಯನ್ನೂ ನಂಬಿದ್ದ ಬಾಳಾ ಠಾಕ್ರೆಯ ರೀತಿಯಲ್ಲೇ ಇದೆ ಈ ಯುವಕನ ನಡೆನುಡಿ.

ಅದೇ ರೀತಿ, ಬಿಜೆಪಿಯವರ ಮತ್ತು ಮೋದಿಯವರ ಮಾತಿನ ಮಟ್ಟದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗಲೇ ಇನ್ನೊಬ್ಬ ಕೋಪಾವಿಷ್ಟ ಯುವಕ ಅಲ್ಪೇಶ್ ಠಾಕೂರ್ ಅವರು ‘ಮೋದಿ ಪ್ರತೀ ದಿನ ಕೋಟಿ ಕೋಟಿ ರೂಪಾಯಿ ಮೌಲ್ಯದ ಅಣಬೆ ತಿಂದು ಬೆಳ್ಳಗಾಗಿದ್ದಾರೆ’ ಎಂದು ಹೇಳಿ ತಾನೂ ಬಿಜೆಪಿಯವರಿಗಿಂತ ಕಡಿಮೆಯಿಲ್ಲ ಎಂದು ತೋರಿಸಿದರು. ಇದನ್ನೆಲ್ಲಾ ನೋಡುತ್ತಿದ್ದರೆ, ಬಿಜೆಪಿಗೆ ವಿರುದ್ಧವಾಗಿದ್ದರು ಎನ್ನುವ ಒಂದೇ ಕಾರಣಕ್ಕೆ ಇವರು ಮೋದಿ-ಷಾ ಜೋಡಿಗೆ ಪರ್ಯಾಯ ರಾಜಕೀಯ ಕಟ್ಟಬಲ್ಲರು ಎಂದು ಭಾವಿಸುವುದಾದರೂ ಹೇಗೆ? ನಾವು ನಿಜಕ್ಕೂ ಇವರೆಲ್ಲರಲ್ಲಿ ಕಾಣುತ್ತಿರುವುದು ನಾಳೆಯ ಮೋದಿ-ಷಾಗಳನ್ನೇ ಅಲ್ಲವೇ? ಈ ಮೂವರ ಪೈಕಿ ತುಸು ಭಿನ್ನವಾಗಿ ಕಾಣಿಸಿದ್ದು ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದ ಜಿಗ್ನೇಶ್‌ ಮೇವಾನಿ ಮಾತ್ರ.

ಎರಡನೆಯದಾಗಿ ಸ್ವತಃ ನರೇಂದ್ರ ಮೋದಿ ಅವರು, ಸೋಲಿನ ದವಡೆಯಲ್ಲಿದ್ದ ತನ್ನ ಪಕ್ಷವನ್ನು ಕೊನೆ ಗಳಿಗೆಯ ಪ್ರಚಾರದ ಮೂಲಕ ರಕ್ಷಿಸಿಕೊಳ್ಳುವಲ್ಲಿ ಅವಲಂಬಿಸಿದ್ದು ತನ್ನ ಬಹು ಚರ್ಚಿತ ಗುಜರಾತ್ ಅಭಿವೃದ್ಧಿ ಮಾದರಿಯನ್ನಲ್ಲ. ಈ ತನಕ ಅವರು ಅಭಿವೃದ್ಧಿ ರಾಜಕೀಯ ಮತ್ತು ಧ್ರುವೀಕರಣ ರಾಜಕೀಯದ ಮಿಶ್ರಣವೊಂದನ್ನು ತಮ್ಮ ರಾಜಕೀಯದ ಮೂಲಮಂತ್ರ ಮಾಡಿಕೊಂಡಿದ್ದರು. ಆದರೆ ಈ ಬಾರಿಯ ವರಸೆಯೇ ಬೇರೆ. ಯಾವ ನೆಲದಲ್ಲಿ ಗುಜರಾತ್ ಮಾದರಿ ಹುಟ್ಟಿಕೊಂಡಿತೋ ಅಲ್ಲೇ ಅದನ್ನು ಬದಿಗಿಟ್ಟು ಧ್ರುವೀಕರಣದ ರಾಜಕೀಯದ ಹೊಸ ಹೊಸ ಪಟ್ಟುಗಳನ್ನು ಈ ಚುನಾವಣೆಯಲ್ಲಿ ಬಳಸಲಾಯಿತು.

ಮಾಜಿ ಪ್ರಧಾನಿಯೊಬ್ಬರು ಪಾಕಿಸ್ತಾನದ ಜತೆ ಕೈಜೋಡಿಸಿ ತನ್ನನ್ನು ಸೋಲಿಸಲು ಪ್ರಯತ್ನಿಸುತ್ತಿದ್ದಾರೆ, ಕಾಂಗ್ರೆಸ್ ನಾಯಕರೊಬ್ಬರು ಪಾಕಿಸ್ತಾನದಲ್ಲಿ ತನ್ನನ್ನು ಕೊಲ್ಲಲು ಸುಪಾರಿ ಕೊಟ್ಟಿದ್ದಾರೆ ಮುಂತಾದ ಬಾಲಿಶ ಹೇಳಿಕೆಗಳ ಮೂಲಕ ಮತದಾರರ ಅನುಕಂಪ ಗಳಿಸುವ ಮಟ್ಟಕ್ಕೆ ಪ್ರಧಾನಿಯವರ ಪ್ರಚಾರತಂತ್ರ ಇಳಿಯಿತು. ಆ ಮೂಲಕ ಅಭಿವೃದ್ಧಿ ಮಂತ್ರ ಹೋಗಿ ಹಳೆಯ ಮಾದರಿ ವಿಜೃಂಭಿಸಿತು.

ಇದಕ್ಕೆ ಪರ್ಯಾಯವಾಗಿ ತಾನು ‘ಅಭಿವೃದ್ಧಿ ಮೀಮಾಂಸೆಯನ್ನೇ ಚುನಾವಣಾ ಸಾಮಗ್ರಿಯಾಗಿ ಬಳಸುತ್ತೇನೆ’ ಎಂದು ಹೊರಟ ರಾಹುಲ್ ಗಾಂಧಿ ಕೂಡಾ ಕೊನೆಗೆ ಇದೇ ಧ್ರುವೀಕರಣ ರಾಜಕೀಯದ ಇನ್ನೊಂದು ಆಯಾಮವನ್ನು ನೆಚ್ಚಿಕೊಳ್ಳತೊಡಗಿದಂತಿತ್ತು. ಸೋಮನಾಥ ದೇವಾಲಯದಲ್ಲಿ ತನ್ನ ಹೆಸರಿನ ಮುಂದೆ ‘ಹಿಂದೂಯೇತರ’ ಎಂಬುದಾಗಿ ದಾಖಲಿಸಿದ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ವಿವಾದಕ್ಕೆ ಪ್ರತಿಕ್ರಿಯಿಸುವ ಭರದಲ್ಲಿ ‘ನಾನು ಬ್ರಾಹ್ಮಣ, ನಾನು ಶಿವಭಕ್ತ, ನಾನು ಜನಿವಾರ ಹಾಕಿಕೊಳ್ಳುತ್ತೇನೆ’ ಎಂಬುದಾಗಿ ಬಡಬಡಿಸಿ ತಾನು ತುಳಿಯುತ್ತಿರುವ ತಾತ್ವಿಕ ಹಾದಿ ಏನು ಎನ್ನುವ ವಿಚಾರದಲ್ಲಿ ಗೊಂದಲ ಹುಟ್ಟಿಸಿದರು.

ಹಿಂದೂ ಎನ್ನುವ ಪರಿಕಲ್ಪನೆಯನ್ನು ಬಿಜೆಪಿಯವರು ಗುತ್ತಿಗೆಗೆ ಪಡೆದುಕೊಂಡಂತೆ ವರ್ತಿಸುವ ರಾಜಕೀಯಕ್ಕೆ ಕಾಂಗ್ರೆಸ್ಸಿನಿಂದ ಒಂದು ಸಮಚಿತ್ತದ, ಸ್ಪಷ್ಟವಾದ ಪ್ರತಿಕ್ರಿಯೆ ಅಗತ್ಯವಿತ್ತು ಎನ್ನುವುದನ್ನು ಒಪ್ಪಿಕೊಳ್ಳಬಹುದು. ಆದರೆ ಅದನ್ನು ಮಾಡುವ ಬದಲು ಅವರು ಬಿಜೆಪಿ ಮಾಡುವ ರಾಜಕೀಯವನ್ನೇ ಇನ್ನೊಂದು ರೀತಿಯಲ್ಲಿ ಮಾಡಲು ಹೊರಟರು. ಒಟ್ಟಿನಲ್ಲಿ ಏನು ಎಂದರೆ ಗುಜರಾತಿನಲ್ಲಿ ಬಿಜೆಪಿ, ಕಾಂಗ್ರೆಸ್‌ ಮತ್ತು ಹೊಸದಾಗಿ ರಾಜಕೀಯದ ಅಖಾಡಕ್ಕಿಳಿದ ಯುವ ರಾಜಕಾರಣಿಗಳು ಎಲ್ಲರೂ ಸೇರಿ ಮಾಡಿದ ರಾಜಕೀಯವು ಮೋದಿ-ಷಾ ರಾಜಕೀಯ ಮಾದರಿಯ ಬೇರೆ ಬೇರೆ ರೀತಿಯ ಪಡಿಯಚ್ಚುಗಳಂತಿತ್ತು ಎನ್ನುವುದು.

ಬಿಜೆಪಿ ಗೆಲುವಿನಲ್ಲೂ ಸೋತಿರಬಹುದು. ಆದರೆ ಬಿಜೆಪಿಯ ರಾಜಕೀಯದ ಮಾದರಿ ಈ ಚುನಾವಣೆಯಲ್ಲಿ ಅದ್ಭುತ ಗೆಲುವು ಗಳಿಸಿದೆ. ಇದು ಗುಜರಾತ್ ಚುನಾವಣೆ ಸಾರುವ ದುರಂತ ಸಂದೇಶ. ಈ ಪಡಿಯಚ್ಚಿನಿಂದ ಭಿನ್ನವಾದ, ಸ್ವಂತಿಕೆಯಿಂದ ಕೂಡಿದ ಮಾನವೀಯ ಪರ್ಯಾಯ ಮಾದರಿಯೊಂದನ್ನು ಕಾಂಗ್ರೆಸ್ ಮತ್ತು ಉಳಿದ ಬಿಜೆಪಿಯೇತರ ಪಕ್ಷಗಳು ಅಳವಡಿಸಿಕೊಂಡರೆ ಈ ದೇಶದಲ್ಲಿ ಪ್ರಜಾತಂತ್ರಕ್ಕೆ ಭವಿಷ್ಯವಿದೆ. ಇಲ್ಲದೆ ಹೋದರೆ ನಡೆದದ್ದೇ ದಾರಿ. ಈ ಮಧ್ಯೆ ಅಭಿವೃದ್ಧಿಗೆ ಸಂಬಂಧಿಸಿದಂತೆ 'ಗುಜರಾತ್ ಮಾದರಿ' ಎಂಬುದು ಬೇಕಾದಾಗ ಬಳಸಿ ಬೇಡವಾದಾಗ ಬದಿಗಿಡುವ ಆಟಿಕೆ ಅಥವಾ ಬೂಟಾಟಿಕೆಯ ವಸ್ತುವಾಗಿದೆ.

ಪ್ರತಿಕ್ರಿಯಿಸಿ (+)