ಗುಟ್ಟು ಕ್ಯಾಮೆರಾ ಹುಟ್ಟಿಸಿರುವ ಭೀತಿ

7

ಗುಟ್ಟು ಕ್ಯಾಮೆರಾ ಹುಟ್ಟಿಸಿರುವ ಭೀತಿ

ಎಸ್.ಆರ್. ರಾಮಕೃಷ್ಣ
Published:
Updated:
ಗುಟ್ಟು ಕ್ಯಾಮೆರಾ ಹುಟ್ಟಿಸಿರುವ ಭೀತಿ

ಪುರಭವನದ ಹತ್ತಿರ ಇರುವ ಒಂದು ಪುಟ್ಟ ಅಂಗಡಿಯಲ್ಲಿ ದಿನಕ್ಕೆ ಹತ್ತು ಸ್ಪೈ ಕ್ಯಾಮೆರಾಗಳು ಮಾರಾಟವಾಗುತ್ತವೆ. ಇದಲ್ಲದೆ ಇಂಟರ್ನೆಟ್‌ನಲ್ಲಿ ಕೂಡ ಇಂಥ ಕ್ಯಾಮೆರಾಗಳ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಜೇಮ್ಸ ಬಾಂಡ್ ಸಿನಿಮಾ ರೀತಿಯ ಈ ಎಲೆಕ್ಟ್ರಾನಿಕ್ ವಸ್ತುಗಳನ್ನು ಯಾರು ಕೊಳ್ಳುತ್ತಿದ್ದಾರೆ? ಇವೆಲ್ಲ ಎಲ್ಲಿ ಹೋಗುತ್ತಿವೆ? ಹೇಗೆ ಬಳಕೆಯಾಗುತ್ತಿವೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದ ಪತ್ರಕರ್ತೆ ಸ್ಯಾವಿ ಕಾರ್ನೆಲ್ ಕೆಲವು ಆಶ್ಚರ್ಯದ ವಿಷಯಗಳನ್ನು ಕಂಡರು.ಗುಪ್ತ ಕ್ಯಾಮೆರಾ ಬಳಸುವವರಲ್ಲಿ ಪೊಲೀಸರು, ಟೀವಿ ಪತ್ರಕರ್ತರು ಹೆಚ್ಚು ಇರುತ್ತಾರೆಂಬುದು ಸಾಮಾನ್ಯ ಗ್ರಹಿಕೆ. ಆದರೆ, ಇದು ಎಂಥ ಮುಗ್ಧ ಗ್ರಹಿಕೆ ಎಂದು ಈ ವರದಿ ಮಾಡಹೊರಟವರಿಗೆ ತಿಳಿದುಬಂತು. ನಿಜ ಏನೆಂದರೆ, ಗುಪ್ತ ಕ್ಯಾಮೆರಾ ಬಳಸುವವರಲ್ಲಿ ಪತಿ ಪತ್ನಿಯರೇ ಹೆಚ್ಚು. ಒಬ್ಬರ ಮೇಲೊಬ್ಬರು ಕಣ್ಣಿಡಲು ಈ ತಂತ್ರಜ್ಞಾನವನ್ನು ಬಳಸುತ್ತಿರುವುದು ಬೆಂಗಳೂರಿನ ಹೊಸ ಸತ್ಯಗಳಲ್ಲಿ ಒಂದು.ಆಪ್ತ ಸಂಬಂಧಗಳಲ್ಲಿ ಹೊಗೆಯಾಡುತ್ತಿರುವ ಶಂಕೆ ಚಿತ್ರವಿಚಿತ್ರ ನಡವಳಿಕೆಗೆ ಎಡೆ ಮಾಡಿಕೊಟ್ಟಿದೆ. ಒಬ್ಬ ಸೀಕ್ರೆಟ್ ಕ್ಯಾಮೆರಾ ಆನ್ ಮಾಡಿ, ಹೆಂಡತಿಯ ಮುಂದೆ ನಿಂತು, `ನಿನ್ನೆ ನಿನಗೆ 5000 ರೂಪಾಯಿ ಕೊಟ್ಟೆ, ಹೌದೋ ಅಲ್ಲವೋ?' ಎನ್ನುವಂಥ ಪ್ರಶ್ನೆಗಳನ್ನು ದಿಢೀರ್ ಕೇಳುತ್ತಾನೆ. ಸರಿಯಾಗಿ ನೋಡಿಕೊಳ್ಳಲಿಲ್ಲ ಎಂದು ಹೆಂಡತಿ ಎಂದಾದರೂ ಕೇಸ್ ಹಾಕಿದರೆ ಎದುರಿಸಲು ಸಾಕ್ಷ್ಯಾಧಾರ ತಯಾರು ಮಾಡಿಕೊಂಡಿರಬೇಕು ಎಂಬುದು ಇವನ ಹುನ್ನಾರ.ವರದಕ್ಷಿಣೆ ಪ್ರಕರಣಗಳಲ್ಲಿ ಕೂಡ ಕ್ಯಾಮೆರಾ ಪಾತ್ರ ಹೆಚ್ಚಾಗುತ್ತಿದೆ. ಕಿರುಕುಳದ ಆರೋಪ ಹೊತ್ತು ಪೊಲೀಸರ ಅವಕೃಪೆಗೆ ಪಾತ್ರರಾಗುವ ಗಂಡಸರು ಕ್ಯಾಮೆರಾ ಬಳಸಿ ತಮ್ಮ ಕೇಸ್‌ಗಳನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ. ಕಿರುಕುಳದ ಆರೋಪ ಹೊರಿಸಿ ಬ್ಲಾಕ್‌ಮೇಲ್ ಮಾಡುವ ಜನರನ್ನು ಸೋಲಿಸಲು ಈ ಗುಪ್ತ ತಂತ್ರಜ್ಞಾನ ಬಳಕೆಯಾಗುತ್ತಿದೆ.ಹಾಗೆಂದು ಇದು ನಿರಪರಾಧಿಗಳ ನೆರವಿಗೆ ಬರುತ್ತಿರುವ ಹೊಸ ಸಾಧನ ಎಂದು ಹೇಳಲಾಗುವುದಿಲ್ಲ. ಹೋದವರ್ಷ ಮಹಾರಾಷ್ಟ್ರದಲ್ಲಿ ಕ್ಯಾಮೆರಾ ದೃಶ್ಯಾವಳಿಯ ಬ್ಲಾಕ್‌ಮೇಲ್ ಭೀತಿಗೆ ಒಳಗಾದ ಇಬ್ಬರು ಆತ್ಮಹತ್ಯೆ ಮಾಡಿಕೊಂಡರು. ಮಾಜಿ ಬಾಯ್‌ಫ್ರೆಂಡ್ ತಮ್ಮ ಆಪ್ತ ಕ್ಷಣಗಳನ್ನು ರೆಕಾರ್ಡ್ ಮಾಡಿಕೊಂಡಿದ್ದ ಎನ್ನುವ ಶಂಕೆ ಇದ್ದ ಬೆಂಗಳೂರಿನ ಒಂದು ಹುಡುಗಿ ಮದುವೆಯಾಗಲು ನಿರಾಕರಿಸಿದಳು.ಆತ್ಮವಿಶ್ವಾಸವನ್ನೇ ಕಳೆದುಕೊಂಡುಬಿಟ್ಟಳು. ಆಗುವ ಗಂಡನಿಗೆ ಇವನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದನ್ನು ಎಲ್ಲಿ ಕಳಿಸಿಬಿಡುತ್ತಾನೋ ಎಂದು ಬೆವರಿ ನಡುಗುತ್ತಿದ್ದಳು.ಗುಪ್ತ ಕ್ಯಾಮೆರಾ ಹೇಗಿರುತ್ತದೆ? ದಿನ ಬಳಕೆಯ ಯಾವುದಾದರೂ ವಸ್ತುವಿನೊಳಗೆ ಕ್ಯಾಮೆರಾ ಅಳವಡಿಸಿ ವಿನ್ಯಾಸ ಮಾಡಿರುತ್ತಾರೆ. ಅಂದರೆ ಕೀ ಚೈನ್, ಶರ್ಟ್ ಗುಂಡಿ, ಕನ್ನಡಕ, ಬೆಲ್ಟ್, ಕೋಲಾ ಕ್ಯಾನ್ ಯಾವುದರಲ್ಲಾದರೂ ಕ್ಯಾಮೆರಾ ಇರಬಹುದು. ಎಷ್ಟೋ ಕ್ಯಾಮೆರಾಗಳನ್ನು ಮೊಬೈಲ್‌ನಂತೆ ಚಾರ್ಜ್ ಮಾಡಬಹುದು. ಬೆಲೆ ಸುಮಾರು ರೂ 1,000ದಿಂದ ಪ್ರಾರಂಭವಾಗುತ್ತದೆ. ಇಂಥ ಕ್ಯಾಮೆರಾಗಳು ಸಾಮಾನ್ಯವಾಗಿ ಚೀನಾ ದೇಶದವು. ಹಾಗಾಗಿ ಅಗ್ಗದ ಬೆಲೆಯಲ್ಲಿ ಸಿಗುತ್ತವೆ. 

   

ಬಟ್ಟೆಯ ಹ್ಯಾಂಗರ್‌ನ ಆಕಾರದ ಕ್ಯಾಮೆರಾ ಒಂದು ಮಾರಾಟವಾಗುತ್ತಿದೆ. ಇದರಿಂದ ಹೆಣ್ಣು ಮಕ್ಕಳಲ್ಲಿ ಎಂಥ ಭಯ ಹುಟ್ಟಿದೆ ಎಂದು ನೀವು ಊಹಿಸಬಹುದು. ಬಟ್ಟೆ ಅಂಗಡಿಯ ಟ್ರಯಲ್ ರೂಮಿಗೆ ಹೋಗಿ ಡ್ರೆಸ್ ತೊಟ್ಟು ನೋಡುವ ರೂಢಿಯನ್ನು ಕೆಲವರು ಬಿಟ್ಟೇ ಬಿಟ್ಟಿದ್ದಾರೆ. ಇನ್ನು ಕೆಲವರು ತುಂಬಾ ಹಿಂಜರಿಕೆಯಿಂದ, ಕ್ಯಾಮೆರಾ ಇದೆಯೇ ಎಂದು ಸೂಕ್ಷ್ಮವಾಗಿ ನೋಡಿ ನಂತರ ಬಟ್ಟೆ ತೊಡುತ್ತಾರೆ.ತನ್ನ ಹೆಂಡತಿ ಬೇರೆ ಯಾರ ಜೊತೆಗೋ ಸಂಬಂಧ ಇಟ್ಟುಕೊಂಡಿರುವುದರ ಸುಳಿವು ಕಂಡ ಒಬ್ಬ ಡೈವೋರ್ಸ್ ಪಡೆಯಲು ಬೇಹುಗಾರಿಕೆ ಮಾಡಲು ಪ್ರಾರಂಭಿಸಿದ. ಹುಡುಗಿಯ ಕಡೆಯವರು ಧನಿಕರೂ, ಪ್ರಭಾವಿಗಳೂ ಆಗಿದ್ದರಿಂದ ಇವನನ್ನೇ ಸುಳ್ಳ ಎಂದು ಹೇಳಿ ಹಿಂಸೆ ಕೊಡಬಹುದು ಅಥವಾ ವರದಕ್ಷಿಣೆ ಕೇಸ್ ಹೇರಬಹುದು ಎಂಬುದು ಇವನಲ್ಲಿ ಮನೆಮಾಡಿದ್ದ ಭೀತಿ. ತಿಂಗಳುಗಟ್ಟಲೆ ಪ್ಲಾನ್ ಮಾಡಿ, ಕ್ಯಾಮೆರಾ, ಫೋನ್ ಮತ್ತು ಟೀವಿ ಬಳಸಿ ಸಾಕ್ಷಿಯನ್ನು ತಯಾರು ಮಾಡಿಕೊಂಡ. ಕೊನೆಗೆ  ಹುಡುಗಿಗೆ, ಅವಳ ಮನೆಯವರಿಗೆ ಅದನ್ನು ತೋರಿಸಿ ಸಲೀಸಾಗಿ ವಿಚ್ಛೇದನ ಪಡೆದ. ಹೀಗೆಲ್ಲ ಗುಟ್ಟಾಗಿ ರೆಕಾರ್ಡ್ ಮಾಡುವಾಗ ಬೇಹುಗಾರಿಕೆಯ ಥ್ರಿಲ್ ಅನುಭವಿಸಿದನೆ? ಅಥವಾ ನರಕ ವೇದನೆಯೇ? ಇದಕ್ಕೆ ಉತ್ತರ ವೇದನೆಯೇ ಆದರೂ ವರ್ಷಗಟ್ಟಲೆ ಬಗೆಹರಿಯದ ಕಾನೂನಿನ ಕಷ್ಟದಿಂದ ತಪ್ಪಿಸಿಕೊಂಡ ತೃಪ್ತಿ ಅವನಲ್ಲಿದೆ.ಇದರಿಂದ ಒಂದು ವಿಷಯವಂತೂ ಸ್ಪಷ್ಟ. ಗುಟ್ಟು ಕ್ಯಾಮೆರಾದಲ್ಲಿ ತೆಗೆದ ಚಿತ್ರಗಳು ಸಾರ್ವಜನಿಕವಾಗದಿದ್ದರೂ, ಬೇರೆ ಬೇರೆ ಕಾರಣಕ್ಕೆ ಬಳಕೆಯಾಗುತ್ತಿವೆ. ಗುತ್ತಿಗೆದಾರರು ಅಧಿಕಾರಿಗಳ ಭ್ರಷ್ಟ ಬೇಡಿಕೆಗಳನ್ನು, ದಬ್ಬಾಳಿಕೆಯನ್ನು ರೆಕಾರ್ಡ್ ಮಾಡಿಕೊಂಡು ಅವರನ್ನು ಹದ್ದುಬಸ್ತಿನಲ್ಲಿಡುವ ಉದಾಹರಣೆಗಳು ಇವೆ ಎಂದು ಕೆಲವು ಪತ್ರಕರ್ತರು ಹೇಳುತ್ತಾರೆ.ಇನ್ನು ರಾಜಕಾರಣಿಗಳು ಲಂಚ ಪ್ರಕಾರಗಳಲ್ಲಿ ಸಿಕ್ಕಿ ಬೀಳುವುದು ಎಷ್ಟೋ ಸಲ ಈ ಗುಪ್ತ ತಂತ್ರಜ್ಞಾನದ ಸಹಾಯದಿಂದ. ಬಿಜೆಪಿ ಪಕ್ಷದ ಅಂದಿನ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಸೆರೆಮನೆ ಸೇರಿದ್ದು ಹೀಗೆಯೇ. ಎನ್.ಡಿ. ತಿವಾರಿ ತಮ್ಮ ರಾಜ್ಯಪಾಲ ಹುದ್ದೆ ಕಳೆದುಕೊಂಡಿದ್ದು ನಿಮಗೆ ನೆನಪಿರಬಹುದು. ರಾಜಭವನದಲ್ಲಿನ ಆತನ ಬೆಡ್‌ರೂಂ ಲೀಲೆಗಳು ಬಯಲಾಗಲು ಕಾರಣ ಇಂಥ ಒಂದು ಗುಪ್ತ ಕ್ಯಾಮೆರಾ. ಭನ್ವರಿ ದೇವಿ, ನಿತ್ಯಾನಂದ, ಸಂಪಂಗಿ ಪ್ರಕರಣಗಳು ಸಾರ್ವಜನಿಕ ನೆನಪಿನಲ್ಲಿ ಹಸಿಯಾಗಿಯೇ ಉಳಿದಿವೆ.ಗೊರೂರಿನಲ್ಲಿ ಸಂಗೀತ

ಭಾರತದ ಏರ್‌ಲೈನ್ ವ್ಯಾಪಾರದ ಸ್ವರೂಪವನ್ನೇ ಬದಲಿಸಿದ ಕ್ಯಾಪ್ಟನ್ ಗೋಪಿನಾಥ್ ಕನ್ನಡವರು ಎಂದು ನಿಮಗೆ ತಿಳಿದಿರಬಹುದು. ಅವರು ಹಾಸನ ಜಿಲ್ಲೆಯ ಗೊರೂರಿನವರು. ಆ ಪುಟ್ಟ ಊರಿನ ಸಂಪರ್ಕವನ್ನು ಗಟ್ಟಿಯಾಗಿ ಕಾಪಾಡಿಕೊಂಡು ಬಂದವರು. ಶನಿವಾರ ಅಲ್ಲಿ ಒಂದು ಸಂಗೀತ ಕಛೇರಿ ಏರ್ಪಡಿಸಿದ್ದರು. ಮಲ್ಲಾಡಿ ಸಹೋದರರು ಕರ್ನಾಟಕ ಸಂಗೀತ ಹಾಡಿದರು. ಹೇಮಾವತಿ ನದಿ ಹರಿಯುವ ಈ ಊರಿನ ಯೋಗನಾರಸಿಂಹ ದೇವಸ್ಥಾನದಲ್ಲಿ ಐ ಪ್ಯಾಡ್ ರೀತಿಯ ಕಂಪ್ಯೂಟರ್ ಹಿಡಿದು ಪುರೋಹಿತರೊಬ್ಬರು ಮಂತ್ರ ಓದುತ್ತಿದ್ದರು.ಸಂಗೀತ ಸೊಗಸಾಗಿ ಕೇಳಿಸುವುದಕ್ಕೆ ಹಾಡುಗಾರರಲ್ಲದೆ ಅಲ್ಲಿನ ವಾತಾವರಣವೂ ಕಾರಣವಿರಬಹುದು. ರಸ್ತೆ ಚೆನ್ನಾಗಿರುವುದರಿಂದ ಮೂರೇ ಗಂಟೆಯಲ್ಲಿ ಬೆಂಗಳೂರಿನಿಂದ ಗೊರೂರು ತಲುಪಬಹುದು. ಪ್ರವಾಸಿಗರು ಹೆಚ್ಚಾಗಿ ಹೋಗದ ಸ್ಥಳವಾದ್ದರಿಂದ ದೇವಸ್ಥಾನ, ನದಿ ತೀರ ತುಂಬ ಪ್ರಶಾಂತವಾಗಿವೆ. ಆ ಕಡೆ ಹೋದಾಗ ನೋಡಿಕೊಂಡು ಬನ್ನಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry