ಶುಕ್ರವಾರ, ಡಿಸೆಂಬರ್ 13, 2019
19 °C

ಗುಡ್ಡದ ನೆತ್ತಿಯ ಮೇಲೆ ಸೂಪರ್ ರಂಧ್ರ

ನಾಗೇಶ ಹೆಗಡೆ Updated:

ಅಕ್ಷರ ಗಾತ್ರ : | |

ಗುಡ್ಡದ ನೆತ್ತಿಯ ಮೇಲೆ ಸೂಪರ್ ರಂಧ್ರ

ಕೊಳವೆಬಾವಿಗಳು ಸದ್ದು ಮಾಡುವ ಕಾಲ ಆರಂಭವಾಗಿದೆ. ಹೊಸ ಬಾವಿ ಕೊರೆಯುವ ಗದ್ದಲ ಅನೇಕ ಕಡೆ ಜೋರಾಗುತ್ತಿದೆ. ಬತ್ತಿದ ಬಾವಿಗಳನ್ನು ಇನ್ನಷ್ಟು ಆಳಕ್ಕೆ ಕೊರೆಯುವ ಕೆಲಸ ಒಂದು ಕಡೆ; ಮಳೆನೀರನ್ನು ಬೋರ್‍ವೆಲ್ ಕಡೆ ತಿರುಗಿಸಿ ‘ಜಲಮರುಪೂರಣ’ ಮಾಡಲೆಂದು ಅಗೆತ ಇನ್ನೊಂದು ಕಡೆ. ಒಟ್ಟಿನಲ್ಲಿ ಜೆಸಿಬಿಗಳಿಗೆ, ಬೋರ್‍ವೆಲ್ ಲಾರಿಗಳಿಗೆ, ರಿಗ್‍ಗಳಿಗೆ ಇನ್ನೆರಡು ತಿಂಗಳು ಕೆಲಸವೋ ಕೆಲಸ.

ಮಹಾರಾಷ್ಟ್ರದ ತಂಪುಹವೆಯ ವಿಹಾರಧಾಮ ಎನಿಸಿದ ಮಹಾಬಳೇಶ್ವರಕ್ಕೆ ಬನ್ನಿ. ಇಲ್ಲಿ ಸಮೀಪ ಗೋಠಾಣಾ ಎಂಬ ಗುಡ್ಡದ ಮೇಲೆ ಕೊಳವೆಬಾವಿಯನ್ನು ಕಳೆದ ಮೂರು ವರ್ಷಗಳಿಂದ ಕೊರೆಯುತ್ತಿದ್ದಾರೆ. ಅದಕ್ಕೆಂದೇ ಗುಡ್ಡದ ನೆತ್ತಿಯನ್ನು ಕೆತ್ತಿ ಸಪಾಟು ಮಾಡಿ ಅಲ್ಲೊಂದು ಬೃಹತ್ ಡ್ರಿಲ್ಲಿಂಗ್ ರಿಗ್ಗನ್ನು ನಿಲ್ಲಿಸಲಾಗಿದೆ. ನೋಡಿದರೆ ಆಕಾಶಕ್ಕೆ ನೆಗೆಯಲು ಸಜ್ಜಾದ ರಾಕೆಟ್‍ನಂತೆ ಲೋಹದ ಕಂಬಗಳು ಅರವತ್ತು ಅಡಿ ಎತ್ತರಕ್ಕೆ ಮುಗಿಲೇರಿ ನಿಂತಿವೆ. ಆದರೆ ರಿಗ್ಗಿನ ಗುರಿ ಮಾತ್ರ ಪಾತಾಳದೆಡೆಗೆ. ಈ ದಿಗ್ಗಜ ಯಂತ್ರದ ಹೆಸರು ಶಿವಗಂಗಾ. ಇಷ್ಟು ವರ್ಷಗಳ ಕಾಲ ಅದು ಕಡಲತೀರದಲ್ಲಿ ಓಡಾಡುತ್ತ ಅಗತ್ಯ ಬಿದ್ದಲ್ಲಿ ಸಮುದ್ರವನ್ನೂ ಹೊಕ್ಕು ಬಾವಿ ಕೊರೆಯುತ್ತಿತ್ತು. ಈಗ ಅದು ಸಮುದ್ರದಿಂದ 3000 ಅಡಿ ಎತ್ತರದಲ್ಲಿ ಪಶ್ಚಿಮಘಟ್ಟದ ಗುಡ್ಡ ಏರಿ ನಿಂತು ಬಾವಿ ಕೊರೆಯುವ ಕೆಲಸದಲ್ಲಿ ಮಗ್ನವಾಗಿದೆ. ನೀರಿಗಾಗಿ ಅಲ್ಲ, ಪಾತಾಳಗಂಗೆಗಾಗಿ ಅಲ್ಲ, ನೈಸರ್ಗಿಕ ಅನಿಲಕ್ಕಾಗಿ ಅಲ್ಲ, ಪೆಟ್ರೋಲಿಗಾಗಿ ಕೂಡ ಅಲ್ಲ.

ದೇಶದ ಅತ್ಯಂತ ಆಳದ ಈ ರಂಧ್ರವನ್ನು ಭೂಕಂಪನಗಳ ಗುಣಲಕ್ಷಣಗಳ ವೀಕ್ಷಣೆಗೆಂದೇ ಕೊರೆಯಲಾಗುತ್ತಿದೆ. ಸಾವಿರ, ಎರಡು ಸಾವಿರ ಅಲ್ಲ, ಈಗಾಗಲೇ 10 ಸಾವಿರ ಅಡಿಗಿಂತ (ಮೂರು ಕಿ.ಮೀ) ಆಳಕ್ಕೆ ಕೊರೆಯಲಾಗಿದೆ. ಒಟ್ಟೂ ಐದು ಕಿ.ಮೀ. ಕೊರೆಯುವ ಯೋಜನೆಯಿದೆ. ಆ ಆಳದಲ್ಲಿ ಬಿಸಿದೂಳು ಮತ್ತು ಒಂದಿಷ್ಟು ಜ್ಞಾನ ಬಿಟ್ಟು ಬೇರೇನೂ ಸಿಗುವುದಿಲ್ಲ. ಕೊರೆತ ಮುಗಿಸಿದ ನಂತರ ರಂಧ್ರದ ತಳದಲ್ಲಿ ಒಂದು ಪುಟ್ಟ ಒಬ್ಸರ್ವೇಟರಿ (ವೇಧಶಾಲೆ)ಯನ್ನು ಸ್ಥಾಪಿಸಲಾಗುತ್ತದೆ. ಅಲ್ಲಿ ಅದು ತನ್ನ ಸುತ್ತಲಿನ ಎಂಟೂ ದಿಕ್ಕಿನಲ್ಲಿ ಸಂಭವಿಸುವ ಎಲ್ಲ ಚಿಕ್ಕದೊಡ್ಡ ಶಿಲಾಕಂಪನಗಳನ್ನೂ ದಾಖಲಿಸುತ್ತ ವಿಜ್ಞಾನಿಗಳಿಗೆ ವರದಿ ಮಾಡುತ್ತಿರುತ್ತದೆ. ಅದು ನಮ್ಮ ದೇಶದ ಮಟ್ಟಿಗೆ ‘ಸೂಪರ್‌ಡೀಪ್’ ಕೊಳವೆಬಾವಿ ಎನಿಸಲಿಕ್ಕಿದೆ. ಅತ್ತ ಇಸ್ರೊ ವಿಜ್ಞಾನಿಗಳು ಬಾಹ್ಯಾಕಾಶ ಸಾಧನೆಗಳತ್ತ ಮಗ್ನರಾಗಿದ್ದರೆ ಇತ್ತ ಭೂವಿಜ್ಞಾನಿಗಳು ಪಾತಾಳದಲ್ಲಿ ದಾಖಲೆ ನಿರ್ಮಿಸಲು ಹೊರಟಿದ್ದಾರೆ.

ಇಲ್ಲೇ ಏಕೆ ಭೂಕಂಪನದ ಅಧ್ಯಯನ ಮಾಡಬೇಕು? ಗೋಠಾಣಾದಿಂದ ಹತ್ತು ಕಿ.ಮೀ. ದೂರದ ತಗ್ಗಿನಲ್ಲಿ ಕೊಯ್ನಾ ಅಣೆಕಟ್ಟು ಇದೆ. ಪಶ್ಚಿಮ ಘಟ್ಟಗಳ ಮಧ್ಯೆ ಉಗಮವಾಗುವ ಕೊಯ್ನಾ ನದಿ ದಕ್ಷಿಣೋತ್ತರವಾಗಿ ಹರಿದು ಕೃಷ್ಣೆಯನ್ನು ಸೇರುತ್ತದೆ. ಅದಕ್ಕೆ ಕೊಯ್ನಾ ಎಂಬಲ್ಲಿ ಕಟ್ಟಿದ ಈ ಅಣೆಕಟ್ಟಿನ ವಿಶೇಷ ಏನೆಂದರೆ ಇಲ್ಲಿ ಪದೇಪದೇ ಭೂಮಿ ನಡುಗುತ್ತಿರುತ್ತದೆ. ಕಟ್ಟೆ ಕಟ್ಟಿ ಐದು ವರ್ಷಗಳಾಗುತ್ತಲೇ 1967ರಲ್ಲಿ ದೊಡ್ಡದೊಂದು (6.2 ಪರಿಮಾಣದ) ಭೂಕಂಪನ ಸಂಭವಿಸಿ, 2000ಕ್ಕೂ ಹೆಚ್ಚು ಜನರು ಗಾಯಾಳುಗಳಾಗಿ, 177 ಜನರು ಅಸು ನೀಗಿದರು. ಸಮೀಪದ ಕೊಯ್ನಾ ನಗರದ ಮುಕ್ಕಾಲುಪಾಲು ಮನೆಗಳು ಕುಸಿದವು. ಕಣಿವೆಗುಂಟ 25 ಕಿಲೊಮೀಟರ್ ಉದ್ದದ ಬಿರುಕು ಬಿಟ್ಟಿತ್ತು.

ಆಗಿನ ಭೂಕಂಪನದಿಂದಾಗಿ ಅಣೆಕಟ್ಟಿನಲ್ಲೂ ಬಿರುಕು ಕಂಡುಬಂದಿತ್ತು. ಅದಕ್ಕೆ ಕಾಂಕ್ರೀಟ್ ಹಾಕಿ ಮುಚ್ಚಿ ಅಲ್ಲಿ ಮತ್ತೆ ಅದಕ್ಕೆ ಒತ್ತಡ ಬಾರದ ಹಾಗೆ ಕಟ್ಟೆಯ ಅತ್ತ ಇತ್ತ ನೂರಾರು ರಂಧ್ರಗಳನ್ನು ಮಾಡಲಾಗಿದೆ. ಆದರೂ ಮತ್ತೆ ಮತ್ತೆ ಸಾವಿರಾರು ಬಾರಿ ಅಲ್ಲಿ ನೆಲ ನಡುಗಿದೆ. ತುಸು ದೊಡ್ಡ ಭೂಕಂಪನಗಳು 400ಕ್ಕೂ ಹೆಚ್ಚು ಬಾರಿ ಸಂಭವಿಸಿವೆ. ಸಾಕಷ್ಟು ದೊಡ್ಡದೆನಿಸಿದ, ಅಂದರೆ 5ಕ್ಕಿಂತ ದೊಡ್ಡ ಪರಿಮಾಣದ ಭೂಕಂಪನ 22 ಬಾರಿ ದಾಖಲಾಗಿದೆ.

ಹೇಳಿಕೇಳಿ ಎತ್ತರದಲ್ಲಿ ನಿರ್ಮಿಸಿದ ಜಲಾಶಯ. ನೀರಿನ ಭಾರೀ ತೂಕ ಮತ್ತು ಒತ್ತಡದಿಂದಾಗಿ ಭೂಕಂಪನ ಆದೀತೆಂದು ಕೆಲವು ವಿಜ್ಞಾನಿಗಳು ಆಗಲೇ ಎಚ್ಚರಿಸಿದ್ದರು.

ಆದರೆ ಅಂದಿನ ಖ್ಯಾತ ನೀರಾವರಿ ತಜ್ಞ ಡಾ. ಕೆ.ಎಲ್. ರಾವ್ ಅದನ್ನು ಬಲವಾಗಿ ನಿರಾಕರಿಸಿದ್ದರು: `ಅಂಥ ಭಾರೀ ಶಿಲಾಸ್ತರಗಳ ಮೇಲೆ ಇಷ್ಟು ನೀರು ಸಂಗ್ರಹವಾಗಿದ್ದು

ಆನೆಯ ಮೇಲೆ ಸೊಳ್ಳೆ ಕೂತಂತೆ' ಎಂದು ಅವರು ಅಂದು ಹೇಳಿದ್ದರು. ನೀರಿನ ತೂಕದ್ದೇನು ಸಮಸ್ಯೆ ಇರಲಿಕ್ಕಿಲ್ಲ. ಆದರೆ ಆ ಒತ್ತಡದಿಂದಾಗಿ ಅಕ್ಕಪಕ್ಕದ ಆಳ ಕಣಿವೆಗಳಲ್ಲೂ ಇನ್ನೂ ಆಳದ ಶಿಲಾಸ್ತರಗಳಲ್ಲೂ ನೀರು ಜಿನುಗಿ ಕೀಲೆಣ್ಣೆಯಂತೆ ವರ್ತಿಸುತ್ತದೆ. ಗುಡ್ಡಗಳ ಅಸ್ಥಿರ ಶಿಲೆಗಳು ಆಗಾಗ ಜಾರುತ್ತ ಕುಸಿಯುತ್ತ ಭೂಕಂಪನಕ್ಕೆ ಕಾರಣವಾಗುತ್ತಿವೆ.

ಅದರ ಅಧ್ಯಯನಕ್ಕೆಂತಲೇ ಈ ಸೂಪರ್ ರಂಧ್ರ ಸಿದ್ಧವಾಗುತ್ತಿದೆ.

ಮನುಷ್ಯನ ಕೃತ್ಯಗಳಿಗೂ ಭೂಕಂಪನಕ್ಕೂ ಅನೇಕ ಕಡೆ ನೇರ ಸಂಬಂಧಗಳು ಕಂಡುಬಂದಿವೆ. 2008ರಲ್ಲಿ ಚೀನಾದಲ್ಲಿ ಝಿಪ್ಪಿಂಗ್‍ಪು ಎಂಬಲ್ಲಿ ಜಲಾಶಯ ನಿರ್ಮಿಸಿ ಎರಡೇ ವರ್ಷಗಳಲ್ಲಿ ಭಾರೀ ಜೋರಾಗಿ ನೆಲ ಅದುರಿದ್ದರಿಂದ 67 ಸಾವಿರ ಜನರು ಅಸುನೀಗಿದರು. ಪೃಥ್ವಿಯ ನಾನಾ ಕಡೆಗಳಲ್ಲಿ ಗಣಿ ಅಗೆತದ ಕೆಲಸ, ತೈಲ ಎತ್ತುವ ಕೆಲಸ, ಆಳದಿಂದ ನೀರನ್ನು ಮೇಲೆತ್ತುವ ಕೆಲಸ, ಖಾಲಿ ತೈಲದ ಬಾವಿಯೊಳಕ್ಕೆ ಕೊಳಕು ನೀರನ್ನು ಕಳಿಸುವ ಕೆಲಸ ಎಲ್ಲವೂ ಭೂಚಿಪ್ಪಿನ ಸಮತೋಲವನ್ನು ಏರುಪೇರು ಮಾಡುತ್ತವೆ. ಭೂಕಂಪನಗಳ ಅಧ್ಯಯನ ಮಾಡುವವರಿಗೆ ಪ್ರತಿ ತಿಂಗಳೂ ಪೃಥ್ವಿಯ ಒಂದಲ್ಲ ಒಂದು ಕಡೆ ಮನುಷ್ಯನಿಂದಾಗಿಯೇ ಸಂಭವಿಸಿದ ಕಂಪನಗಳ ದಾಖಲೆ ಸಿಗುತ್ತಿರುತ್ತದೆ. ಕಳೆದ ವಾರವಷ್ಟೇ (ಮಾರ್ಚ್ 26ರಂದು) ಆಲ್ಮಟಿ ಜಲಾಶಯದ ಬಳಿ ಸಾಕಷ್ಟು ದೊಡ್ಡದೆಂದೇ ಹೇಳಬಹುದಾದ 4.4 ಪರಿಮಾಣದ ಕಂಪನ ದಾಖಲೆಯಾಗಿದೆ. ಅಂದಹಾಗೆ, ಅದು ನಮ್ಮ ಆಲ್ಮಟ್ಟಿ ಜಲಾಶಯವಲ್ಲ, ಕಝಾಕ್‍ಸ್ತಾನದ ಅತಿ ದೊಡ್ಡ ನಗರದ ಹೆಸರು ಆಲ್ಮಟಿ; ಅಲ್ಲೇ ಸಮೀಪದಲ್ಲಿ ಕಪ್ಶಾಗಾಯ್ ಸರೋವರ ಇದೆ. ಅದರ ಕೆಳಗೆ 33 ಕಿಲೊಮೀಟರ್ ಆಳದಲ್ಲಿ ಕಂಪನ ಉಂಟಾಗಿದೆ. ಅಷ್ಟೊಂದು ಆಳದ ಕಂಪನವೆಂದರೆ ಅದು ಸರೋವರದ ನೀರಿನ ತೂಕದಿಂದ ಆಗಿದ್ದೆಂದರೆ `ಆನೆಯ ಮೇಲೆ ಸೊಳ್ಳೆ'ಯ ಉಪಮೆ ಅಲ್ಲಿ ಸರಿ ಹೋದಂತಿದೆ. ಆದರೆ ಕೊಯ್ನಾದಲ್ಲಿ ಪದೇ ಪದೇ ನೆಲ ಅದುರುತ್ತಿದೆ. ಅತಿ ದೊಡ್ಡ ಭೂಕಂಪನ ಸಂಭವಿಸಿ ಮೊನ್ನೆ ಡಿಸೆಂಬರ್ 2017ಕ್ಕೆ ಐವತ್ತು ವರ್ಷಗಳು ತುಂಬುವ ತುಸು ಮುಂಚೆ ಅಲ್ಲಿ ಮತ್ತೆ ನೆಲ ನಡುಗಿತ್ತು.

ಭೂಮಿಗೆ ರಂಧ್ರ ಕೊರೆದು, ಡೈನಮೈಟ್ ಸಿಡಿಸಿ ಏನೇ ಮಾಡಲು ಹೋದಲ್ಲೆಲ್ಲ ಅಪಾಯದ ಸಂಭವ ಇದೆಯೆಂದಾದರೆ ಕೊಯ್ನಾ ಅಣೆಕಟ್ಟಿನ ಬಳಿ ನಾಲ್ಕೈದು ಕಿಲೊಮೀಟರ್ ಆಳದ ರಂಧ್ರ ಕೊರೆಯುವುದು ಹೊಸ ಅಪಾಯಕ್ಕೆ ಆಹ್ವಾನ ಕೊಟ್ಟಂತೆ ಅಲ್ಲವೆ? ಹಾಗೇನಿಲ್ಲ. ರಂಧ್ರ ಕೊರೆದ ಮಾತ್ರಕ್ಕೇ ರಿಸ್ಕ್ ಹೆಚ್ಚಾಗುತ್ತದೆ ಎನ್ನುವಂತಿಲ್ಲ. ಕ್ಯಾಲಿಫೋರ್ನಿಯಾ ಕಡಲಂಚಿನಲ್ಲಿ ಸ್ಯಾನ್ ಆಂಡ್ರಿಯಾಸ್ ಎಂಬ ಸರೋವರ ಮತ್ತು ಕಣಿವೆಗುಂಟ 1200 ಕಿ.ಮೀ. ಉದ್ದನ್ನ ಭೂಖಂಡವೇ ಸೀಳಿಕೊಂಡಿದೆ. ದೊಡ್ಡ ಭೂಕಂಪನವಾದರೆ ಸಾನ್‍ಫ್ರಾನ್ಸಿಸ್ಕೊ ನಗರ ಮತ್ತು ಅರ್ಧರಾಜ್ಯವೇ ಶಾಂತಸಾಗರದಲ್ಲಿ ಕಣ್ಮರೆಯಾಗುವ ಸಂಭವವಿದೆ. ಆಗಾಗ ಚಿಕ್ಕ ಭೂಕಂಪನ ಸಂಭವಿಸುವ ಆ ಪ್ರಪಾತದಲ್ಲಿ ಮೂರು ಕಿ.ಮೀ. ಆಳದ ರಂಧ್ರ ಕೊರೆದು ಅದರ ತಳದಲ್ಲಿ ಶೋಧ ಸಲಕರಣೆಗಳನ್ನು ಸ್ಥಾಪಿಸಲಾಗಿದೆ. ಸಾವಿರಾರು ಬಗೆಯ ವೈಜ್ಞಾನಿಕ ಅಧ್ಯಯನಗಳು ಅಲ್ಲಿ ನಡೆದಿವೆ, ನಡೆಯುತ್ತಿವೆ. ರಂಧ್ರ ಕೊರೆದಿದ್ದಕ್ಕೆ ಯಾರೂ ಆಕ್ಷೇಪ ಎತ್ತಿಲ್ಲ.

ಇಷ್ಟಕ್ಕೂ ಕೊಯ್ನಾ ರಂಧ್ರದ ಮೂಲಕ ನೀರನ್ನು ತೆಗೆಯುವ ಅಥವಾ ತುಂಬುವ ಉದ್ದೇಶವಿಲ್ಲ. ಅಂತರ್ಜಲ ಇಲ್ಲದ ತಾಣವನ್ನೇ ಹುಡುಕಿ ಗುಡ್ಡದ ನೆತ್ತಿಯಲ್ಲಿ ಕೊರೆದ ತೂತು ಅದು. ಅಲ್ಲಿ ಕೆಲಸ ಮಾಡುವ 80 ಜನರಿಗೆ ಗುಡ್ಡದ ಕೆಳಗಿನಿಂದ ಟ್ಯಾಂಕರ್‍ಗಳಲ್ಲಿ ನೀರು ಪೂರೈಕೆ ಆಗುತ್ತಿದೆ. ವಿಷಯ ಏನೆಂದರೆ, ನಮ್ಮ ಭೂವಿಜ್ಞಾನಿಗಳಿಗೆ ಭೂಕಂಪನದ ಗುಣಲಕ್ಷಣಗಳನ್ನು ಅರ್ಥ ಮಾಡಿಕೊಳ್ಳಲು ಒಂದು ಆದರ್ಶ ಸ್ಥಳ ಬೇಕಾಗಿತ್ತು. ಪದೇ ಪದೇ ಭೂಕಂಪನ ಆಗುವ ಸ್ಥಳವೇ ಬೇಕಾಗಿತ್ತು. ಒಂದೇ ಪ್ರದೇಶದಲ್ಲಿ ಇಷ್ಟೊಂದು ಬಾರಿ ಭೂಮಿ ನಡುಗಿದ್ದು ಕೊಯ್ನಾ ಬಿಟ್ಟರೆ ನಮ್ಮ ದೇಶದಲ್ಲಿ ಬೇರೆಲ್ಲೂ ಇಲ್ಲ. ಅದೂ ಅಲ್ಲದೆ ಕೊಯ್ನಾ ಸುತ್ತಮುತ್ತಲಿನ ಕೆಲವ ಪ್ರದೇಶಗಳಲ್ಲಿ 20-30 ಕಿಲೊ ಮೀಟರಿನಷ್ಟು ಚಿಕ್ಕ ಪ್ರದೇಶಕ್ಕೂ ಸೀಮಿತವಾದ ಕಂಪನಗಳು ಆಗಾಗ ಸಂಭವಿಸುತ್ತಿರುತ್ತವೆ. ಅವುಗಳ ಅಧ್ಯಯನಕ್ಕೆ ಈಗಾಗಲೇ ಕೊಯ್ನಾ ಸುತ್ತ 9 ತಾಣಗಳಲ್ಲಿ ಒಂದೂವರೆ ಕಿ.ಮೀ. ಆಳದ ರಂಧ್ರಗಳನ್ನು ಕೊರೆದು ಕಂಪನ ಮಾಪನ ಯಂತ್ರಗಳನ್ನು ಹೂಡಿದ್ದಾರೆ (ಮೇಲೆ ಮುಚ್ಚಳ ಹಾಕಿದ್ದಾರೆ, ಚಿಂತೆಯಿಲ್ಲ). ಈಗ ಗೋಠಾಣಾ ನೆತ್ತಿಯ ಮೇಲಿನ ಸೂಪರ್ ರಂಧ್ರದ ಕೆಲಸ ಪೂರ್ತಿಗೊಂಡ ನಂತರ ಅದೊಂದು ಅಂತರರಾಷ್ಟ್ರೀಯ ಸಂಶೋಧನ ಕೇಂದ್ರ (ರಂಧ್ರ)ವಾಗಲಿದೆ. ಐದು ಕಿಲೊಮೀಟರ್ ಆಳದವರೆಗೂ ಅಲ್ಲಲ್ಲಲ್ಲಿ ಸೆನ್ಸರ್‍ಗಳನ್ನು ಇಡುತ್ತಾರೆ. ಅವು ಅಲ್ಲಲ್ಲಿನ ಉಷ್ಣತೆ, ಶಿಲಾಭಿತ್ತಿಯಲ್ಲಿ ಸೂಸುವ ರೇಡಾನ್ ಮತ್ತು ಇತರ ಕೆಮಿಕಲ್ ಅಂಶಗಳ ಬಗ್ಗೆ ಬೇಕೆಂದಾಗ ದಾಖಲೆಗಳನ್ನು ಒದಗಿಸುತ್ತಿರುತ್ತವೆ. ಸುತ್ತಲೆಲ್ಲಾದರೂ ಕಂಪನ ಉಂಟಾದಾಗ ಅದು ಯಾವ ದಿಕ್ಕಿನಿಂದ ಎಷ್ಟು ತೀವ್ರತೆಯಲ್ಲಿ ಬರುತ್ತಿದೆ ಎಂಬುದನ್ನು ತಿಳಿಸುತ್ತವೆ. ಇಲ್ಲಿ ಲಭಿಸುವ ದತ್ತಾಂಶಗಳಿಂದ ಭೂಕಂಪನಗಳ ನಿಖರ ಮುನ್ಸೂಚನೆ ಪಡೆಯಲು ಸಾಧ್ಯವಾದರೆ ದೇಶಕ್ಕೆ ಕೀರ್ತಿ ಲಭಿಸುತ್ತದೆ.

ಮೂರು ಕಿಲೊಮೀಟರ್ ಅಥವಾ ಹತ್ತು ಸಾವಿರ ಅಡಿ ಆಳವೆಂದ ಮಾತ್ರಕ್ಕೇ ನಾವು ಪಾತಾಳವನ್ನೇ ತಲುಪಿದೆವು ಎಂದರ್ಥವಲ್ಲ. ಭೂಕೇಂದ್ರಕ್ಕೆ ತಲುಪಬೇಕೆಂದರೆ 6371 ಕಿ.ಮೀ. ಆಳಕ್ಕೆ ಇಳಿಯಬೇಕು. ಭೂಮಿಯೆಂಬ ಹಣ್ಣಿನ ಹೊರಗಿನ ಒಣಸಿಪ್ಪೆಯೇ 35 ಕಿ.ಮೀ. ದಪ್ಪ ಇದೆ. ಅದನ್ನು ಛೇದಿಸಲು ಮನುಷ್ಯರಿಗೆ ಇದುವರೆಗೆ ಸಾಧ್ಯವಾಗಿಲ್ಲ. ರಷ್ಯನ್ನರು ಕೋಲಾ ಭೂಖಂಡದಲ್ಲಿ 12.262 ಕಿ.ಮೀ. ಆಳದವರೆಗೆ ರಂಧ್ರ ಕೊರೆದು ಸುಸ್ತಾಗಿ ಕೈಚೆಲ್ಲಿದರು. ಅಲ್ಲಿ ನಿರೀಕ್ಷೆಗಿಂತ ಮೂರು ಪಟ್ಟು ಶಾಖ (360 ಡಿಗ್ರಿ ಸೆ.) ಇದ್ದುದರಿಂದ ಇನ್ನೂ ಆಳಕ್ಕೆ ಸಾಗಲಾಗದೆ ಅಲ್ಲೊಂದು ಚಿಕ್ಕ ಸ್ಮಾರಕದಂಥ ಗೋಪುರ ಕಟ್ಟಿ ಕೈಬಿಟ್ಟಿದ್ದಾರೆ. ನಮ್ಮ ಕೃಷ್ಣಾ ಗೋದಾವರಿ ತೀರದಲ್ಲಿ ಸರ್ಕಾರಿ ಸ್ವಾಮ್ಯದ ಓಎನ್‍ಜಿಸಿ (ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೊರೇಶನ್) ಕಂಪನಿ 3.12 ಕಿ.ಮೀ. ಆಳದವರೆಗೂ ರಂಧ್ರ ಕೊರೆದಿದೆ. ತೈಲ ಕಂಪನಿಗಳು ಆಳವಾದ ಬಾವಿ ಕೊರೆಯುವುದು ಸಾಧನೆಯಲ್ಲ, ದುಸ್ಸಾಧನೆ ಎಂತಲೇ ಹೇಳಬೇಕು. ಏಕೆಂದರೆ, ಹೆಚ್ಚು ಹೆಚ್ಚು ಆಳಕ್ಕೆ ರಂಧ್ರವನ್ನು ಕೊರೆದು ತೈಲ ಎತ್ತಿ ಹೆಚ್ಚು ಹೆಚ್ಚು ಬಳಸಿದಂತೆಲ್ಲ ಭೂಮಿಯ ತಾಪಮಾನ ಏರುತ್ತ ಹೋಗುತ್ತಿದೆ; ಕುಡಿಯುವ ನೀರಿಗಾಗಿ ಇನ್ನಷ್ಟು ಮತ್ತಷ್ಟು ಆಳದ ರಂಧ್ರವನ್ನು ಕೊರೆಯಬೇಕಾಗಿ ಬರುತ್ತಿದೆ.

ತಮಿಳುನಾಡಿನ ತಿರುಚೆಂಗೋಡು ಎಂಬ ಪಟ್ಟಣವನ್ನು ಭಾರತದ `ರಿಗ್ ರಾಜಧಾನಿ' ಎಂದೇ ಹೇಳುತ್ತಾರೆ. ರಿಗ್ ಯಂತ್ರಗಳನ್ನು ನಿರ್ಮಿಸಿ, ವಿಶೇಷ ವಿನ್ಯಾಸದ ಲಾರಿಗಳಿಗೆ ಜೋಡಿಸಿ ದೇಶದ ಮೂಲೆಮೂಲೆಗಳಿಗೂ ಪರಿಣತರೊಂದಿಗೆ ಅಟ್ಟುವುದಷ್ಟೇ ಅಲ್ಲ, ಆಫ್ರಿಕಾ ಖಂಡಕ್ಕೂ ರವಾನಿಸುವ ಖ್ಯಾತಿ ಅದರದು. ತಿರುಚೆಂಗೋಡು ಎಂದರೆ ಸುಂದರ ಊರು. ಅಲ್ಲೇ ಈಗ ನೀರಿನ ತುಟಾಗ್ರತೆ ಎದುರಾಗಿದೆ.

ಪ್ರತಿಕ್ರಿಯಿಸಿ (+)