ಗುಪ್ತ ಶಕ್ತಿಯ ರಾಶಿ

7

ಗುಪ್ತ ಶಕ್ತಿಯ ರಾಶಿ

ಗುರುರಾಜ ಕರ್ಜಗಿ
Published:
Updated:

 


ಎರಡು ವರ್ಷಗಳ ಕೆಳಗೆ ಪತ್ರಿಕೆಯಲ್ಲಿ  ಒಂದು ಸುದ್ದಿ ಪ್ರಕಟವಾಗಿತ್ತು. ಹಳೆಯ ಮೆಕ್ಸಿಕೊ  ನಗರದ ಪೋಲಿಸರು ಒಬ್ಬ ರೈತನನ್ನು ಜೈಲಿಗೆ ಹಾಕಿದ ವಿಷಯ ಅದು. ಯಾರೋ ಒಬ್ಬನನ್ನು ಯಾವುದೋ ಅಪರಾಧಕ್ಕೆ ಜೈಲಿಗೆ ಹಾಕಿದರೆ ಅದೇಕೆ ದೊಡ್ಡ ಸುದ್ದಿಯಾಗಬೇಕು. ಆದರೆ, ಇದು ಬಹುದೊಡ್ಡ ವಿಷಯವಾಗಿತ್ತು. ಈ ರೈತ ತುಂಬ ಬಡವ. ಅಲ್ಲಲ್ಲಿ  ಕೂಲಿ ಮಾಡಿ ಬದುಕು ಸಾಗಿಸುತ್ತಿದ್ದ. ಅವನು ಊರ ಹೊರಗೆ ಷೆಡ್ ಕಟ್ಟಿಕೊಂಡು ಬದುಕುತ್ತಿದ್ದ. ಆ ಷೆಡ್ ಕೂಡ ಬಳಸಿದ ಡಾಂಬರು ಡ್ರಮ್‌ಗಳಿಂದ ಮಾಡಿದ್ದು. ಆರೆಂಟು ವರ್ಷಗಳಿಂದ ಅಲ್ಲಿ ಯೇ ಇದ್ದ ಆತ. ಇದ್ದಕಿದ್ದಂತೆ ಒಂದು ದಿನ ಸಮುದ್ರ ತೀರದಲ್ಲಿ  ಒಂದು ಇಟ್ಟಿಗೆಯಿಂದ ಕಟ್ಟಿದ ಮನೆಗೆ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬಂದು ಇರಲು ಪ್ರಾರಂಭಿಸಿದ. ಅವನನ್ನು ಚೆನ್ನಾಗಿ ಬಲ್ಲವರಿಗೆ ಇದೊಂದು ಆಶ್ಚರ್ಯದ ವಿಷಯವಾಯಿತು. ಎರಡು ಹೊತ್ತು ಊಟಕ್ಕೇ ಲಾಟರಿ ಹೊಡೆಯುತ್ತಿದ್ದ ಈ ಕುಡುಕ ರೈತ ಸಮುದ್ರ ತೀರದ ಮನೆಯನ್ನು ಹೇಗೆ ಕೊಂಡುಕೊಂಡ. ಅವನಿಗೆ ಯಾರು ದುಡ್ಡು ಕೊಟ್ಟಿದ್ದಾರು... ಎಂದೆಲ್ಲ ಪರಿಚಯವಿದ್ದ ಜನ ಮಾತನಾಡಿಕೊಳ್ಳುತ್ತಿದ್ದರು. 

 

ಯಾರೋ ಒಬ್ಬರು ಹೊಟ್ಟೆಕಿಚ್ಚಿನಿಂದ ಪೋಲೀಸರಿಗೆ ದೂರು ನೀಡಿದರು. ಪೋಲಿಸರಿಗೂ ಈ ವಿಷಯದ ಬಗ್ಗೆ ವಾಸನೆ ಬಂದಿತ್ತು. ಅವರೂ ಅವನನ್ನು ದಸ್ತಗಿರಿ ಮಾಡಿ ತನಿಖೆ ಆರಂಭಿಸಿದರು. ಅವರಿಗೆ ತಿಳಿದ ವಿಷಯ ಆಶ್ಚರ್ಯಜನಕವಾಗಿತ್ತು. ಈ ರೈತ ಎರಡು ದೊಡ್ಡ ಬಂಗಾರದ ಗಟ್ಟಿಗಳನ್ನು ನಗರದ ಚಿನ್ನದ ವ್ಯಾಪಾರಿಗೆ ಮಾರಿ ದುಡ್ಡು ಪಡೆದಿದ್ದ. ಆ ವ್ಯಾಪಾರಿಯನ್ನು ತನಿಖೆಗೆ ಒಳಪಡಿಸಿದಾಗ ಇನ್ನೂ ಆಶ್ಚರ್ಯದ ಸಂಗತಿ ಹೊರಬಂದಿತು. ಈ ರೈತನಿಗೆ ವ್ಯವಹಾರ ತಿಳಿಯುವುದಿಲ್ಲವೆಂದು ಚಿನ್ನದ ವ್ಯಾಪಾರಿ ಐದುಲಕ್ಷ ಡಾಲರ್ ಬೆಲೆಬಾಳುವ ಆ ಚಿನ್ನದ ಗಟ್ಟಿಗಳಿಗೆ ಕೇವಲ ಐದು ಸಾವಿರದ ಎಂಟುನೂರು ಡಾಲರ್ ಕೊಟ್ಟಿದ್ದ. ಇಷ್ಟು ಬೆಲೆಬಾಳುವ ಬಂಗಾರದ ಗಟ್ಟಿಗಳು ರೈತನಿಗೆ ಹೇಗೆ ದೊರಕಿದವು ಎಂದು ಹುಡುಕಾಡಿದಾಗ ಅವನಿಗೆ ತಾನು ಬದುಕಿದ್ದ ಹಳೆಯ ಮನೆಯ ಪಕ್ಕದಲ್ಲಿ  ನೆಲ ಅಗೆದಾಗ ದೊರೆತದ್ದು ಎಂದು ತಿಳಿಯಿತು. ಚಿನ್ನದ ವ್ಯಾಪಾರಿಯಿಂದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡು ಪುರಾತತ್ವ ಇಲಾಖೆಗೆ ಅವನ್ನು ಒಪ್ಪಿಸಿದಾಗ ಇನ್ನೊಂದು ಅದ್ಭುತ ವಿಷಯ ಗೊತ್ತಾಯಿತು. ಈ ಬಂಗಾರದ ಗಟ್ಟಿಗಳು ಹದಿನಾರನೇ ಶತಮಾನದ ಅಝಟೆಕ್ ಚಕ್ರವರ್ತಿ ಮೊಂಟೆಝಮಾನ ಕಾಲದವು. ಆ ಚಕ್ರವರ್ತಿ ತನ್ನ ಜೀವಿತಾವಧಿಯಲ್ಲಿ  ಅಪಾರ ಪ್ರಮಾಣದ ಬಂಗಾರವನ್ನು ಸಂಗ್ರಹಿಸಿ ಅಜ್ಞಾತ ಸ್ಥಳದಲ್ಲಿ  ಹೂತಿಟ್ಟಿದ್ದನಂತೆ.ಯಾರಿಗೂ ಅವನ ಬಂಗಾರದ ರಾಶಿಯ ಸ್ಥಳ ತಿಳಿದಿರಲಿಲ್ಲ. ಅದರ ಒಂದು ಭಾಗದಲ್ಲಿ  ಈ ರೈತನಿಗೆ ಎರಡು ಗಟ್ಟಿಗಳು ದೊರಕಿದ್ದವು. ಈಗ ಸರ್ಕಾರ ಚುರುಕಾಯಿತು. ಬಹುಶಃ ಆಝಟೆಕ್ ಚಕ್ರವರ್ತಿಯ ಗುಪ್ತಧನ ಹತ್ತಿರವೇ ಇದ್ದಿರಬೇಕು ಎಂದು ಭೂಮಿ ಅಗೆಯಲು ಪ್ರಾರಂಭಿಸಿದರು. ಬಹುದೊಡ್ಡ ಪ್ರಮಾಣದ ಬಂಗಾರ ದೊರೆಯದಿದ್ದರೂ ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ಬಂಗಾರ ಸಿಕ್ಕಿತು. ಪಾಪ! ಅವುಗಳ ಸ್ಥಳವನ್ನು ಆಕಸ್ಮಿಕವಾಗಿ ಕಂಡು ಹಿಡಿದ ರೈತ ಜೈಲು ಪಾಲಾದ. ನಾವೂ ಹಾಗೆಯೇ. ಅಪಾರ ಪ್ರಮಾಣದ ಬೆಲೆಬಾಳುವ ವಸ್ತುಗಳ ಗಣಿಗಳ ಹತ್ತಿರವೇ ಇದ್ದೇವೆ. ಆದರೆ ಆ ಗಣಿಗಳು ಹೊರಗಿರದೆ ನಮ್ಮಳಗೇ ಇವೆ. ಅವೇ ನಮ್ಮಲ್ಲಿ  ನೈಜವಾಗಿರುವ, ಸುಪ್ತವಾಗಿರುವ ಶಕ್ತಿ, ಶ್ರದ್ಧೆ, ಆತ್ಮವಿಶ್ವಾಸಗಳು. ಅವುಗಳನ್ನು ಮೆಕ್ಸಿಕೋದ ರೈತನಂತೆ ಆಕಸ್ಮಿಕವಾಗಿ ಕಂಡುಹಿಡಿಯುವ ಬದಲು ಪ್ರಯತ್ನಪೂರ್ವಕವಾಗಿ ಹೊರ ತೆಗೆಯಬೇಕು. ನಮಗೇ ತಿಳಿಯದ, ಅರಿವಿಗೆ ಬರದ ಅನರ್ಘ್ಯ ಶಕ್ತಿಯ ರಾಶಿ ನಮ್ಮಳಗಿನಿಂದ ಹೊರಬರಲು ತಹತಹಿಸುತ್ತಿದೆ, ಅವಕಾಶಕ್ಕಾಗಿ ಕಾಯುತ್ತಿರುತ್ತದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry