ಬುಧವಾರ, ನವೆಂಬರ್ 13, 2019
17 °C

ಗೆಲ್ಲುವ ತೋಳ

ಗುರುರಾಜ ಕರ್ಜಗಿ
Published:
Updated:

ಅಜ್ಜ, ಮೊಮ್ಮಗ ಇಬ್ಬರೂ ಬಿಸಿಲು ಕಾಯಿಸುತ್ತ ಮನೆಯ ಮುಂದೆ ಕುಳಿತಿದ್ದರು. ಮೊಮ್ಮಗ ಕೇಳಿದ, ಅಜ್ಜಾ, ನನಗೊಂದು ಕಥೆ ಹೇಳು.

ಅಜ್ಜ, `ನಿನಗೆ ಇಂದು ವಿಶೇಷ ಕಥೆ ಹೇಳುತ್ತೇನೆ. ಒಂದು ರೀತಿಯಲ್ಲಿ ಅದು ಕಥೆ ಅಲ್ಲ. ಅದು ನನ್ನೊಳಗೆ, ನಿನ್ನೊಳಗೆ, ಎಲ್ಲರೊಳಗೆ ನಡೆಯುತ್ತಿರುವಂತಹ ಘಟನೆ'  ಎಂದ.  ಅದು ಏನು ನಡೀತಿದೆ?  ಮೊಮ್ಮಗನ ಕುತೂಹಲ.`ನನ್ನ ಮನಸ್ಸಿನೊಳಗೆ ಎರಡು ತೋಳ ಇವೆ. ನಾನು ಪುಟ್ಟ ಬಾಲಕನಾಗಿದ್ದಾಗ ಅವು ಒಳಗಿದ್ದದ್ದು ತಿಳಿಯಲೇ ಇಲ್ಲ. ಆದರೆ ದೊಡ್ಡವನಾದಂತೆ ಆ ತೋಳಗಳು ತಮ್ಮ ತಮ್ಮಲೇ ಕಚ್ಚಾಡುತ್ತಿದ್ದುದು ಗೊತ್ತಾಗತೊಡಗಿತು. ಅವೆರಡೂ ತೋಳಗಳೇ ಆದರೂ ಅವುಗಳ ಸ್ವಭಾವದಲ್ಲಿ ತುಂಬ ವ್ಯತ್ಯಾಸವಿದೆ. ಒಂದು ತೋಳ ಮೃದು ಮನಸ್ಸಿನದು. ಅದರ ಮೈಮೇಲೆ ಮೃದುವಾದ ಬೂದುಬಣ್ಣದ ಕೂದಲು. ಅದರ ಕಣ್ಣುಗಳಲ್ಲಿ ಪ್ರೀತಿ ಇದೆ. ಮುಖ ಉಗ್ರವಲ್ಲ. ಅದು ಬಾಯಿತೆರೆದು ತನ್ನ ಹರಿತವಾದ ಹಲ್ಲುಗಳನ್ನು ತೋರಿಸದೇ ಮೆಲುವಾಗಿ ನಕ್ಕಂತೆ ಭಾಸವಾಗುತ್ತದೆ. ಅದು ಕೋಪದಿಂದ ಗುರುಗುಟ್ಟಿದ್ದನ್ನು ನಾನು ನೋಡಲೇ ಇಲ್ಲ. ಆಹಾರ ಕೊಟ್ಟಾಗ ತಾನೇ ಮೊದಲು ನುಗ್ಗದೇ ಪುಟ್ಟ ಮರಿಗಳಿಗೆ ಮೊದಲು ಆಹಾರ ದೊರಕುವಂತೆ ನೋಡಿಕೊಳ್ಳುತ್ತದೆ. ಈ ತೋಳವನ್ನು ಪ್ರೀತಿಯ ತೋಳ ಎಂದು ಕರೆಯುತ್ತೇನೆ  ಎಂದ ಅಜ್ಜ.`ಇನ್ನೊಂದು ತೋಳ ಇದೆಯಲ್ಲ, ಅದು ಹೇಗಿದೆ' ಕೇಳಿದ ಮೊಮ್ಮಗ.  `ಹೇಳುತ್ತೇನೆ ಇರು. ಇನ್ನೊಂದು ತೋಳ ಭಯಂಕರವಾದದ್ದು. ಅದು ಯಾವಾಗಲೂ ಕೋಪದಿಂದ ಗುರುಗುಟ್ಟುತ್ತಲೇ ಇರುತ್ತದೆ. ಯಾರನ್ನೂ ಹತ್ತಿರ ಬರಗೊಡುವುದಿಲ್ಲ. ಯಾರಾದರೂ ಹತ್ತಿರ ಬಂದರೆ ಸಾಕು ತುಟಿಗಳನ್ನು ಹಿಂದಕ್ಕೆಳೆದುಕೊಂಡು ತನ್ನ ಚೂಪಾದ ಹಲ್ಲುಗಳನ್ನು ಹೆದರಿಸುವಂತೆ ತೋರುತ್ತದೆ. ಯಾವಾಗಲೂ ಎಚ್ಚರಿಕೆಯಿಂದ ಕಾಯುತ್ತ ತನ್ನ ಆಹಾರದ ಹತ್ತಿರ ಯಾರೂ ಬರದಂತೆ ನೋಡುತ್ತದೆ. ತನ್ನ ಹೊಟ್ಟೆ ತುಂಬುವ ತನಕ ಯಾರನ್ನೂ ನೋಡುವುದಿಲ್ಲ.ಹೊಟ್ಟೆ ತುಂಬಿದ ಮೇಲೂ ಉಳಿದ ಆಹಾರವನ್ನು ಮತ್ತೊಬ್ಬರಿಗೆ ಕೊಡುವುದಿಲ್ಲ. ಅದು ಕೆಟ್ಟು ಹೋದರೂ ಚಿಂತೆಯಿಲ್ಲ ಆದರೆ ಬೇರೆಯವರಿಗೆ ದಕ್ಕದಂತೆ ನೋಡಿಕೊಳ್ಳುತ್ತದೆ. ಅದಕ್ಕೆ ಯಾವಾಗಲೂ ಹೆದರಿಕೆಯೋ, ಅಹಂಕಾರವೋ ತಿಳಿಯದು, ಯಾರೊಂದಿಗೂ ಬೆರೆಯುವುದಿಲ್ಲ. ಅದು ಸದಾ ದ್ವೇಷವನ್ನೇ ಸಾಧಿಸುತ್ತದೆ. ಇದು ಉಗ್ರ ತೋಳ. ಈ ಉಗ್ರತೋಳ ಪ್ರೀತಿಯ ತೋಳದೊಡನೆ ಸದಾ ಹೋರಾಡುತ್ತಿರುತ್ತದೆ. ಪ್ರೀತಿಯ ತೋಳಕ್ಕೆ ಜಗಳ ಇಷ್ಟವಿಲ್ಲದಿದ್ದರೂ ತನ್ನ ರಕ್ಷಣೆಗಾದರೂ ಹೋರಾಟ ಮಾಡಲೇ ಬೇಕಾಗುತ್ತದೆ.ನಾನು ಪ್ರತಿ ನಿಮಿಷವೂ ನನ್ನ ಹೃದಯದಲ್ಲಿ ನಡೆದ ಈ ಹೋರಾಟವನ್ನು ಕಾಣುತ್ತಿದ್ದೇನೆ. ಮಗೂ, ಈ ಹೋರಾಟ ಬರೀ ನನ್ನ ಹೃದಯದಲ್ಲಿ ಮಾತ್ರವಲ್ಲ, ನಿನ್ನ ಹೃದಯದಲ್ಲಿ, ಪ್ರತಿಯೊಬ್ಬರ ಹೃದಯದಲ್ಲಿ ನಡೆದೇ ಇದೆ'. ಹುಡುಗ ಆತಂಕದಿಂದ ಕೇಳಿದ, `ಅಜ್ಜಾ, ಈ ಹೋರಾಟದಲ್ಲಿ ಗೆಲ್ಲುವುದು ಯಾವ ತೋಳ'  ಅಜ್ಜ ನಿಟ್ಟುಸಿರುಬಿಟ್ಟು ಹೇಳಿದ,  `ಮಗೂ ಯಾವ ತೋಳಕ್ಕೆ ನೀನು ಹೆಚ್ಚು ಆಹಾರ ಒದಗಿಸುತ್ತೀಯೋ ಅದು ಗೆಲ್ಲುತ್ತದೆ.  ಮೊಮ್ಮಗನಿಗೆ ಅರ್ಥವಾಯಿತೋ ಇಲ್ಲವೋ ತಿಳಿಯದು. ಆದರೆ ನಮಗೆ ಅರ್ಥವಾಗಬೇಕು.ನಮ್ಮ ಮನಸ್ಸಿನಲ್ಲಿ ಕೆಟ್ಟದ್ದು, ಒಳ್ಳೆಯದು ಎರಡೂ ಇವೆ. ಯಾವ ಭಾವನೆಗಳಿಗೆ ನಾವು ಹೆಚ್ಚು ಪ್ರಾಮುಖ್ಯ, ಪ್ರಚೋದನೆ ನೀಡುತ್ತೇವೋ ಅದೇ ನಮ್ಮ ಜೀವನವನ್ನು ನಿರ್ದೇಶ ಮಾಡುತ್ತದೆ. ಬರೀ ಕೆಟ್ಟದನ್ನೇ ಯೋಚಿಸುತ್ತಾ, ಕಾಣುತ್ತ ಹೋದರೆ ಜೀವನವೆಲ್ಲ ಕಸವೇ. ಒಳ್ಳೆಯದನ್ನೇ ನೋಡುತ್ತ, ಮಾಡುತ್ತ, ಚಿಂತಿಸುತ್ತ ಹೊರಟರೆ ಇದೇ ಜೀವನ ಸ್ವರ್ಗವಾಗುತ್ತದೆ.

ಪ್ರತಿಕ್ರಿಯಿಸಿ (+)