ಗೋಲಗುಮ್ಮಟದ ಊರಿನ ಮಂದಿಯೇ ಕೂಗದಿದ್ದರೆ?...

7

ಗೋಲಗುಮ್ಮಟದ ಊರಿನ ಮಂದಿಯೇ ಕೂಗದಿದ್ದರೆ?...

Published:
Updated:
ಗೋಲಗುಮ್ಮಟದ ಊರಿನ ಮಂದಿಯೇ ಕೂಗದಿದ್ದರೆ?...

ಈ ಜನರಿಗೆ ಎಷ್ಟೊಂದು ಸಹನೆ ಎಂದುಕೊಂಡೆ. ಅದು ಸಹನೆಯೇ? ಅಥವಾ ಅವರಿಗೆ ಅದು ರೂಢಿ ಆಗಿ ಬಿಟ್ಟಿದೆಯೇ? ನಮ್ಮ ಊರಿಗೆ ಒಳ್ಳೆಯ ರಸ್ತೆ, ಚರಂಡಿ, ಶೌಚಾಲಯ, ಬೀದಿ ದೀಪ ಬೇಕು ಎಂದು ಕೇಳುವುದನ್ನೂ ಅವರು ಮರೆತು ಬಿಟ್ಟಿದ್ದಾರೆಯೇ? ಮೊನ್ನೆ ವಿಜಾಪುರಕ್ಕೆ ಹೋದಾಗ ಆ ಊರಿನ ದೂಳೆಲ್ಲ ಮನಸ್ಸನ್ನು ಮಂಕು ಮಾಡಿತು.ಯಾವ ಜಿಲ್ಲಾ ಕೇಂದ್ರವೂ ಇಷ್ಟು ಹಾಳಾಗಿದ್ದಂತೆ ಕಾಣುವುದಿಲ್ಲ. ಏನಾಗಿದೆ ವಿಜಾಪುರಕ್ಕೆ? ಒಂದು ಕಾಲದಲ್ಲಿ ಅದು ಆದಿಲ್‌ಶಾಹಿ ಅರಸರ ರಾಜಧಾನಿ ಆಗಿತ್ತು. ಹನ್ನೆರಡು ಲಕ್ಷ ಜನ ವಾಸಿಸುತ್ತಿದ್ದರು. ಎಲ್ಲರಿಗೂ ಕುಡಿಯಲು ನೀರು ಸಿಗುತ್ತಿತ್ತು. ಅರಸರು ಇದ್ದರೆಂದ ಮೇಲೆ ಊರು ಚೆನ್ನಾಗಿಯೇ ಇತ್ತು. ಈಗಲೂ 16ನೇ ಶತಮಾನದ ಆ ಅರಸರ ವೈಭವ ನೆನಪಿಸುವ ಸ್ಮಾರಕಗಳಿಗೆ ಅಲ್ಲಿ ಕೊರತೆಯೇನೂ ಇಲ್ಲ. ಆದರೆ, ಒಮ್ಮೆ ಅಲ್ಲಿಗೆ ಹೋದರೆ ಮತ್ತೆ ಹೋಗಬಾರದು ಎಂದು ಅನಿಸುತ್ತದೆ. ನಾನು ಇದ್ದ ವಸತಿಗೃಹದ ಮಾಲೀಕರಿಗೆ ಬರುವಾಗ ಅದನ್ನೇ ಹೇಳಿಬಂದೆ.ಎಂಥ ಶ್ರೀಮಂತ ಊರು ಅದು! ಒಂದು ಊರಿನ ಹೆಮ್ಮೆ ಹೆಚ್ಚಿಸಲು ಒಂದು ಗೋಲಗುಮ್ಮಟ ಸಾಕು. ಅಲ್ಲಿ ಬರೀ ಒಂದು ಗೋಲಗುಮ್ಮಟ ಇಲ್ಲ. ಅಂಥ 65 ಸ್ಮಾರಕಗಳು ಆ ಒಂದೇ ಊರಿನಲ್ಲಿ ಇವೆ. ತಾಜಮಹಲಿಗೆ ಪ್ರೇರಣೆ ಕೊಟ್ಟ ಇಬ್ರಾಹಿಂ ರೋಜಾ ಕರಿಕಲ್ಲು ಕಟ್ಟಡವೂ ಅಲ್ಲಿಯೇ ಇದೆ. ಜನರೂ ಶ್ರೀಮಂತರು. ದುಡ್ಡಿನಲ್ಲಿ ಇರಲಿಕ್ಕಿಲ್ಲ. ಮನಸ್ಸಿನಲ್ಲಿ ದೊಡ್ಡವರು. ಚೀನಾ ಜತೆಗೆ ಯುದ್ಧ ನಡೆದಿದ್ದಾಗ ಇಂದಿರಾ ಗಾಂಧಿಯವರನ್ನು ಕರೆಸಿ ಬಂಗಾರದಲ್ಲಿ ತೂಗಿ, ಆಕೆ ತೂಗಿದಷ್ಟು ಬಂಗಾರವನ್ನು ಜತೆ ಮಾಡಿ ಕಳುಹಿಸಿ ಕೊಟ್ಟವರು. ದೇಶದಲ್ಲಿ ಅದು ಅಂಥ ಒಂದೇ ಉದಾಹರಣೆ. ಒಂದು ಮಳೆಯಾದರೆ ಸಾಕು. ಮುತ್ತಿನಂಥ ಜೋಳ ಬೆಳೆದವರು. ಬರೀ ತಮಗಲ್ಲ, ನಾಡಿಗೇ ಕೊಟ್ಟೇವು ಎನ್ನುವ ಧಿಮಾಕಿನವರು. ಈಗ ಅವರಿಗೆ ಏನಾಗಿದೆ? ಊರು ಯುದ್ಧಭೂಮಿಯಂತೆ ರಣಗುಟ್ಟುತ್ತಿದ್ದರೂ ಮೌನವಾಗಿ ಏಕೆ ಇದ್ದಾರೆ? ಬೇಕಾದಷ್ಟು ಕಾರ ತಿನ್ನುವ ಮಂದಿಗೆ ಸಿಟ್ಟೇಕೆ ಬರುವುದಿಲ್ಲ?ಅವರ ಊರಿನಲ್ಲಿ ಹತ್ತಲ್ಲ, ಇಪ್ಪತ್ತಲ್ಲ, ತೊಂಬತ್ತು ವರ್ಷಗಳ ನಂತರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಸಮ್ಮೇಳನಕ್ಕೆ ಬಹಳ ದಿನಗಳೇನೂ ಉಳಿದಿಲ್ಲ. ಹೊರಗಿನ ಜಿಲ್ಲೆಗಳಿಂದ ಸಾವಿರಾರು ಮಂದಿ ಬರುತ್ತಾರೆ. ಬರೀ ಸಮ್ಮೇಳನಕ್ಕೆ ಎಂದು ಬರುವುದಿಲ್ಲ. ಬಂದವರು ಗೋಲಗುಮ್ಮಟ ನೋಡಬೇಕು ಎನ್ನುತ್ತಾರೆ. ಒಮ್ಮೆ ನೋಡಿದವರು ಮತ್ತೆ ನೋಡಬೇಕು ಎನ್ನುತ್ತಾರೆ. ಬರೀ ಗುಮ್ಮಟ ಏಕೆ ಇಡೀ ಊರು ಸುತ್ತೋಣ ಎನ್ನುವವರೂ ಇರಬಹುದು. ಅವರನ್ನು ಸ್ವಾಗತಿಸಲು ಊರಿನಲ್ಲಿ ಒಳ್ಳೆಯ ರಸ್ತೆಗಳು ಇಲ್ಲ.ರಸ್ತೆ ಪಕ್ಕದಲ್ಲಿ ಚರಂಡಿಗಳು ಇಲ್ಲ. ಸಾರ್ವಜನಿಕ ಶೌಚಾಲಯಗಳು ಇಲ್ಲ. ಜನರಿಗೆ ಬೀದಿಬದಿಯೇ ರೂಢಿ ಆಗಿ ಬಿಟ್ಟಿದೆ : ಎರಡೂ ಕೆಲಸಕ್ಕೆ! ಹಂದಿಗಳ ಸಂಖ್ಯೆ ಸಮೃದ್ಧಿ ಆಗಿರುವುದಕ್ಕೂ ಅದೇ ಕಾರಣ. ಬೀದಿ ದೀಪಗಳು ಇಲ್ಲ. ಇಡೀ ಊರಿಗೆ ದೂಳು ಮುಸುಕು ಹಾಕಿದೆ. ಒಂದು ಒಳ್ಳೆಯ ಹೋಟೆಲ್ ಇಲ್ಲ. ಮೊದಲೇ ಹಾಳು ಮಣ್ಣಿನ ಊರು. ಬರೀ ಊರಲ್ಲ ಆ ಜಿಲ್ಲೆಯೇ ಹಾಗೆ. ಅಲ್ಲಿ ಹಸಿರು ಕಾಣುವುದು ಕಡಿಮೆ. ಫಲವತ್ತಾದ ಭಾಗವನ್ನೆಲ್ಲ ಬಾಗಲಕೋಟೆ ಜಿಲ್ಲೆಗೆ ಬಿಟ್ಟು ಕೊಟ್ಟಿದೆ. ವಿಜಾಪುರ ಜಿಲ್ಲೆಯಲ್ಲಿ ರಾಜ್ಯದ ಅತಿ ದೊಡ್ಡ ಆಲಮಟ್ಟಿ ಅಣೆಕಟ್ಟೆ ಇದೆ. ಅದರ ಫಲವೆಲ್ಲ ಮುಂದಿನ ಜಿಲ್ಲೆಗಳಿಗೆ ಹೋಗುತ್ತದೆ. ವಿಜಾಪುರ ಜಿಲ್ಲೆಯ ಮಂದಿಯೇ ಹಾಗೆ. ಅವರು `ಮಂದೆ' ಆಗಿಬಿಟ್ಟಿದ್ದಾರೆ. ಒಂದು ಏತ ನೀರಾವರಿ ಯೋಜನೆಗೆ ನಲವತ್ತು ವರ್ಷ ಹಿಡಿದರೂ ಅವರು ಸುಮ್ಮನಿರುತ್ತಾರೆ.ತಮ್ಮ ಮುಂದೆಯೇ ಊರಿನ ಹಲವರು ಶ್ರೀಮಂತರಾಗುವುದನ್ನು, ಆದುದನ್ನು ಅವರು ಕಣ್ಣಾರೆ ಕಂಡಿದ್ದಾರೆ. ಆ ಒಂದೇ ಊರಿನಲ್ಲಿ ಎರಡು ವಿಶ್ವವಿದ್ಯಾನಿಲಯಗಳು ಇವೆ. ರಾಜ್ಯದ ಹೆಣ್ಣುಮಕ್ಕಳ ಏಕೈಕ ವಿಶ್ವವಿದ್ಯಾನಿಲಯ ಅದರಲ್ಲಿ ಸೇರಿದೆ. ಮಹಿಳೆಯರು ಪ್ರಾರ್ಥನೆ ಮಾಡುವ ರಾಜ್ಯದ ಏಕೈಕ ಮಸೀದಿಯೂ ಅಲ್ಲಿಯೇ ಇದೆ! ಎರಡು ವೈದ್ಯಕೀಯ ಕಾಲೇಜುಗಳು ಇವೆ. ಎರಡು ಎಂಜಿನಿಯರಿಂಗ್ ಕಾಲೇಜುಗಳು ಇವೆ. ಒಂದು ದಂತವೈದ್ಯ ಕಾಲೇಜು ಇದೆ. ಅಲ್ಲಿ ಕಲಿಯಲು ಎಲ್ಲೆಲ್ಲಿಯವರೋ ಬರುತ್ತಿದ್ದಾರೆ. ಎಲ್ಲೆಲ್ಲಿಯವರೋ ಬರುತ್ತಿದ್ದಾರೆ ಎಂದಾದರೂ ಊರನ್ನು ಸುಧಾರಿಸಬೇಕು ಎಂದು ಊರು ಆಳುವವರಿಗೆ ತಿಳಿದಿಲ್ಲ.ವಿಜಾಪುರಕ್ಕಿಂತ ಬೀದರ್ ಚಿಕ್ಕ ಊರು. ಒಬ್ಬ ಅಧಿಕಾರಿ ಆ ಊರನ್ನು ಎಷ್ಟು ಚೆಂದ ಮಾಡಿದರು ಎಂದರೆ ನೀವು ಅಲ್ಲಿಗೆ ಹೋಗಿ ನೋಡಬೇಕು. ವಿಜಾಪುರಕ್ಕೆ ಅಂಥ ಅಧಿಕಾರಿ ಸಿಗಲಿಲ್ಲ. ದೊರಕಿಸಲು ಪ್ರಯತ್ನವೂ ನಡೆಯಲಿಲ್ಲ. ಬೀದರ್‌ನ ಅಧಿಕಾರಿ ಕೈಯಲ್ಲಿ ಹಣವಿಲ್ಲದಿದ್ದರೂ ಅತಿಕ್ರಮಣಗಳನ್ನು ಕೆಡವಿ ಹಾಕಿದರು. ರಸ್ತೆಗಳನ್ನು ನಿರ್ಮಿಸಿದರು. ಚರಂಡಿ ಮಾಡಿದರು. ಉದ್ಯಾನ ನಿರ್ಮಿಸಿದರು.

ಹೂ ಬೆಳೆಸಿದರು. ವಿಜಾಪುರಕ್ಕೆ ದುಡ್ಡು ಬಂದರೂ ಅತಿಕ್ರಮಣ ಕೆಡವಿ ಹೊಸದನ್ನು ಕಟ್ಟಬೇಕು ಎಂದು ಅವರಿಗೆ ಅನಿಸಲಿಲ್ಲ. ಬೀದರ್ ದೂರವಾಯಿತು. ಬಾಗಲಕೋಟೆಗೆ ಹೋಗಿ ನೊಡಿದರೂ ವಿಜಾಪುರದ ಮಂದಿಗೆ ಸಾಕಷ್ಟು ಮಾದರಿಗಳು ಸಿಗುತ್ತಿದ್ದವು. ಕೆಲವೇ ವರ್ಷಗಳ ಹಿಂದೆ ತನ್ನ ಭಾಗವಾಗಿಯೇ ಇದ್ದ ಬಾಗಲಕೋಟೆ ಜಿಲ್ಲೆ ಅಷ್ಟು ಮುಂದೆ ಹೋಗಲು ಸಾಧ್ಯವಾದರೆ ತಮಗೇಕೆ ಸಾಧ್ಯವಿಲ್ಲ ಎಂದು ವಿಜಾಪುರದ ಮಂದಿ ಯೋಚಿಸಬೇಕಿತ್ತು.ಪ್ರಾಗೈತಿಹಾಸದ ದೃಷ್ಟಿಯಿಂದ ವಿಜಾಪುರದ ಮುಂದೆ ಬೀದರ್ ಏನೂ ಅಲ್ಲ. ಆದರೆ, ವಿಜಾಪುರದ ನಾಯಕರಿಗೆ ತಮ್ಮ ಊರಿನಲ್ಲಿ ಇರುವುದರ ಕಡೆಗೆ ಹೊರಗಿನವರನ್ನು ಆಕರ್ಷಿಸಲು ಒಂದಿಷ್ಟು ಸವಲತ್ತುಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದು ಗೊತ್ತಾಗಲಿಲ್ಲ.ಎಲ್ಲರೂ ಹಾಗೆಯೇ. ನಮ್ಮ ಬಳಿ ಇರುವುದು ನಮಗೆ ಗೊತ್ತಿರುವುದಿಲ್ಲ; ಅದರ ಮಹತ್ವ ತಿಳಿದಿರುವುದಿಲ್ಲ. ಗೊತ್ತಿದ್ದವರು ಅದನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗಲು ಆಗುವುದಿಲ್ಲ. ಗೋಲಗುಮ್ಮಟ ವಿಶ್ವದ ಒಂದು ವಿಸ್ಮಯ. ಮೇಲಿನ ಗುಮ್ಮಟದಲ್ಲಿ ಇದ್ದವರನ್ನೆಲ್ಲ ಹೊರಗೆ ಹಾಕಿ 250 ಅಡಿ ಆಚೆ ನಿಂತು ಪಿಸುಗುಟ್ಟಿದರೆ ಈಚೆಗೆ ಸ್ಪಷ್ಟವಾಗಿ ಕೇಳುತ್ತದೆ. ಆಚೆ ನಿಂತು ಕಾಗದ ಹರಿದರೆ ಈಚೆಯೇ ಹರಿದಂತೆ ಕೇಳುತ್ತದೆ. ದೇಶದಲ್ಲಿ ಅಂಥ ಇನ್ನೊಂದು ಗುಮ್ಮಟ ಇಲ್ಲ. ಅಂಥ ಒಂದು ಗುಮ್ಮಟ ನಮ್ಮ ಜಿಲ್ಲೆಯಲ್ಲಿ ಇದೆ ಎಂದು ವಿಜಾಪುರ ಜಿಲ್ಲೆಯ ಜನ ಹೊರಗಿನ ಜಗತ್ತಿಗೆ ಹೇಳುವ ರೀತಿ ಇದಲ್ಲ.ಅವರ ಊರಿಗೆ ಈ ಸರ್ಕಾರದ ಹಿಂದಿನ ಪ್ರವಾಸೋದ್ಯಮ ಸಚಿವರು ಬರಲೇ ಇಲ್ಲ. ಅವರನ್ನು ಕರೆಸಬೇಕು ಎಂದು ಜಿಲ್ಲೆಯ ನಾಯಕರಿಗೆ ತಿಳಿಯಲೂ ಇಲ್ಲ. ಈಗ ಸಾಹಿತ್ಯ ಸಮ್ಮೇಳನದ ನೆಪದಲ್ಲಿ ಬರುವ ಸಾವಿರಾರು ಜನರಿಗೆ ತೋರಿಸುವ ಸ್ಥಿತಿಯಲ್ಲಿ ಗುಮ್ಮಟ ಇರಬಹುದು. ಆದರೆ, ಊರು ಇಲ್ಲ. ಜನರು ಊರಿನ ರಸ್ತೆಗಳ ಮೂಲಕವೇ ಗುಮ್ಮಟ ನೋಡಲು ಬರಬೇಕಲ್ಲ? ತಮ್ಮ ಊರಿನ ಸಾಂಸ್ಕೃತಿಕ, ಪ್ರಾಗೈತಿಹಾಸಿಕ ಶ್ರೀಮಂತಿಕೆ ತೋರಿಸಲು ವಿಜಾಪುರದ ಮಂದಿಗೆ ಇದಕ್ಕಿಂತ ದೊಡ್ಡ ಅವಕಾಶ ಮತ್ತೆ ಬೇಗ ಬರಲಿಕ್ಕಿಲ್ಲ. ಅಷ್ಟು ಮಂದಿ ಮತ್ತೆ ಆ ಊರಿಗೆ ಯಾವಾಗ ಬರಬೇಕು? ಊರಿಗೆ ಬಂದವರು ಒಳ್ಳೆಯ ನೆನಪುಗಳನ್ನು ಹೊತ್ತುಕೊಂಡು ಹೋಗಬೇಕು. ಅಲ್ಲಿಗೆ ಹೋಗಿ ನೋಡಿಕೊಂಡು ಬನ್ನಿ ಎಂದು ತಮಗೆ ಸಿಕ್ಕವರಿಗೆ ಹೇಳಬೇಕು. ಸಾಹಿತ್ಯ ಸಮ್ಮೇಳನಕ್ಕೆ ಬಂದವರು ತಮ್ಮ ಊರಿಗೆ ಹೋಗಿ ಬೇರೆಯವರಿಗೂ ವಿಜಾಪುರಕ್ಕೆ ಹೋಗಿ ಎಂದು ಹೇಳುತ್ತಾರೆ ಎನ್ನುವ ಖಾತ್ರಿ ನನಗೇನೂ ಇಲ್ಲ.ಊರಿನ ಅಭಿವೃದ್ಧಿಗೆ ಹಣ ಬಂದಿಲ್ಲವೆಂದಲ್ಲ. ಬಂದ ಹಣದಲ್ಲಿ ಯೋಜನೆ ರೂಪಿಸುವ ತಲೆ ಅಧಿಕಾರಿಗಳಿಗೆ ಇಲ್ಲ. ಅವರಿಗೆ ಹೇಳಿ ಮಾಡಿಸುವ ಆಸಕ್ತಿ ಜನಪ್ರತಿನಿಧಿಗಳಿಗೆ ಇಲ್ಲ. `ನಗರೋತ್ಥಾನ' ಯೋಜನೆ ಅಡಿಯಲ್ಲಿ ಮೂರು ವರ್ಷಕ್ಕೆ ನೂರು ಕೋಟಿ ಕೊಡುತ್ತೇವೆ ಎಂದು ಸರ್ಕಾರ ಕಳೆದ ವರ್ಷದ ಏಪ್ರಿಲ್‌ನಲ್ಲಿಯೇ ಹೇಳಿದೆ. ವರ್ಷಕ್ಕೆ 33 ಕೊಟಿ ರೂಪಾಯಿ ಖರ್ಚು ಮಾಡಬೇಕು. ಒಂದು ವರ್ಷದಲ್ಲಿ 33 ಕೋಟಿ ರೂಪಾಯಿ ಖರ್ಚು ಮಾಡುವುದು ಎಂದರೆ ಸಾಮಾನ್ಯವೇ? ಎಷ್ಟೊಂದು ಕೆಲಸ ಮಾಡಬಹುದಲ್ಲ? ಆ ಹಣದಲ್ಲಿ ಏನು ಮಾಡುತ್ತೇವೆ ಎಂದು ಹೇಳುವುದಕ್ಕೇ ವಿಜಾಪುರದ ಅಧಿಕಾರಿಗಳಿಗೆ ನಾಲ್ಕು ತಿಂಗಳು ಬೇಕಾಯಿತು. ಸರ್ಕಾರ ಅದಕ್ಕೆ ಮಂಜೂರಾತಿ ಕೊಟ್ಟು ಐದು ತಿಂಗಳಾಯಿತು. ಇನ್ನೂ ಒಂದು ಪೈಸೆ ಖರ್ಚು ಮಾಡಿದ ಲಕ್ಷಣ ಊರಿನಲ್ಲಿ ಕಾಣುತ್ತಿಲ್ಲ.`ನಮ್ಮ ಊರಿನ ಅಭಿವೃದ್ಧಿಗೆ ಬಂದ ಹಣದಲ್ಲಿ ಎಷ್ಟಾದರೂ ತಿನ್ನಿ ಸ್ವಲ್ಪವಾದರೂ ಕೆಲಸ ಮಾಡಿ' ಎಂದು ಊರಿನ ಜನರು ಒಬ್ಬ ಅಧಿಕಾರಿಯ ಕಾಲರ್ ಹಿಡಿದು ಕೇಳಿದ್ದರೆ ಎಷ್ಟು ಚೆನ್ನಾಗಿತ್ತು? ಅಂಥ ಒಬ್ಬ ಅಭಿಮಾನಿ ಹೆಣ್ಣುಮಗಳು ಆ ಊರಿನಲ್ಲಿ ಇರಲಾರಳೇ?

ಈಗ ಫೆಬ್ರುವರಿಯಲ್ಲಿ ಸಾಹಿತ್ಯ ಸಮ್ಮೇಳನ ಬಂದಿದೆ. ಮಾರ್ಚ್‌ನಲ್ಲಿ ಬಜೆಟ್ ಅವಧಿ ಮುಗಿಯುತ್ತದೆ. ಏಪ್ರಿಲ್‌ನಲ್ಲಿ ಚುನಾವಣೆ ಬರುತ್ತದೆ. ಅಭಿವೃದ್ಧಿಗೆ ಬರುವ ಹಣವನ್ನು ಖರ್ಚು ಮಾಡಲು ಇದಕ್ಕಿಂತ ಪ್ರಶಸ್ತ ಅವಧಿ ಇನ್ನಾವುದು ಇರಲು ಸಾಧ್ಯ?ಸಾಹಿತ್ಯ ಸಮ್ಮೇಳನ ಬಂತು ಎಂದೋ, ಇದ್ದಬದ್ದ ಊರಿನ ಮಾನ ಹೋಗುತ್ತದೋ ಎಂದೋ ಹಂಚಿನ ಮೇಲೆ ಬೇಯುವ ರೊಟ್ಟಿಗೆ ನೀರು ಹಚ್ಚಿದ ಹಾಗೆ ರಸ್ತೆಗಳಿಗೆ ಡಾಂಬರು ಮಾಡುವ ಕೆಲಸ ಇನ್ನು ನಡೆಯಬಹುದು. ಆ ಊರಿನಲ್ಲಿ ಯಾವಾಗಲೂ ರೊಟ್ಟಿಗೆ ನೀರು ಹಚ್ಚಿದ ಹಾಗೆಯೇ ಡಾಂಬರು ಕೆಲಸ ಮಾಡುತ್ತಾರಂತೆ! ಅತ್ತ ಸಮ್ಮೇಳನ ಮುಗಿಯುತ್ತಿದ್ದಂತೆಯೇ ಇತ್ತ ಡಾಂಬರು ಕಿತ್ತು ಹೋಗುತ್ತದೆ.ಇಲ್ಲವಾದರೆ ಮಳೆಗಾಲದಲ್ಲಿ ಬರೀ ಡಾಂಬರು ಅಲ್ಲ ರಸ್ತೆಗಳೇ ಕಿತ್ತುಕೊಂಡು ಹೋಗುತ್ತವೆಯಂತೆ. ಎಂದಿನ ಹಾಗೆ ವಿಜಾಪುರದ ಮಂದಿ ದೂಳಿನ ರಸ್ತೆಯಲ್ಲಿ ಅಡ್ಡಾಡುತ್ತಾರೆ. ಅವರಿಗೆ ಅದೇ ಸುಖಕರವಾಗಿದ್ದರೆ ಯಾರೇನು ಮಾಡಲು ಸಾಧ್ಯ? ದೇವರು ಅವರಿಗೆ ಅಷ್ಟು ಸಹನೆ ಕೊಟ್ಟಿದ್ದಾನೆಯೇ? ಅಥವಾ ಅವರಿಗೆ ಅದು ರೂಢಿಯಾಗಿಬಿಟ್ಟಿದೆಯೇ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry