ಗ್ರಾಹಕರ ಮೇಲೆ ಏರ್‌ಟೆಲ್ ಗೂಢಚರ್ಯೆ

ಶುಕ್ರವಾರ, ಜೂಲೈ 19, 2019
24 °C

ಗ್ರಾಹಕರ ಮೇಲೆ ಏರ್‌ಟೆಲ್ ಗೂಢಚರ್ಯೆ

ಎನ್.ಎ.ಎಂ. ಇಸ್ಮಾಯಿಲ್
Published:
Updated:
ಗ್ರಾಹಕರ ಮೇಲೆ ಏರ್‌ಟೆಲ್ ಗೂಢಚರ್ಯೆ

ಬೆಂಗಳೂರಿನ ತೇಜೇಶ್ ಜಿ.ಎನ್. ಅವರ ವೈಯಕ್ತಿಕ ಜಾಲ ತಾಣ ‘thej.in’ ಬಹಳ ನಿಧಾನವಾಗಿ ತೆರೆದುಕೊಳ್ಳುತ್ತಿತ್ತು. ಸ್ವತಃ ತಂತ್ರಜ್ಞರಾಗಿರುವ ಅವರು ಇದಕ್ಕೇನು ಕಾರಣ ಎಂದು ಹುಡುಕಲು ಹೊರಟರು. ಏರ್‌ಟೆಲ್ 3ಜಿ ಸೇವೆಯನ್ನು ಬಳಸಿದಾಗಲೆಲ್ಲಾ ತಾಣ ನಿಧಾನವಾಗಿ ತೆರೆದುಕೊಳ್ಳುತ್ತಿದೆ ಎಂಬುದು ಅವರಿಗೆ ಅರಿವಾಯಿತು. ತಮ್ಮ ಜಾಲಪುಟದ ಸೋರ್ಸ್ ಕೋಡ್ ಅನ್ನು ಪರಿಶೀಲಿಸಿದರು. ಅದರೊಳಗೆ ಅವರ ತಾಣಕ್ಕೆ ಸಂಬಂಧ ಪಡದ ಕೋಡ್‌ನ ಸಾಲೊಂದು ಕಾಣಿಸುತ್ತಿತ್ತು. ತಂತ್ರಜ್ಞ ಸಹಜ ಕುತೂಹಲದಲ್ಲಿ ಅದೇನು ಎಂಬುದನ್ನು ಕಂಡುಕೊಳ್ಳಲು ಪ್ರಯತ್ನಿಸಿದರು. ಆಗ ಅವರಿಗೆ ತಿಳಿದದ್ದು ಏರ್‌ಟೆಲ್‌ನ ಸರ್ವರ್‌ನಲ್ಲಿ ಕುಳಿತಿದ್ದ ತಂತ್ರಾಂಶವೊಂದು ಟೂಲ್‌ಬಾರ್‌ನಂಥ ಏನೊ ಒಂದನ್ನು ತೇಜೇಶ್ ಅವರು ಸಂದರ್ಶಿಸುತ್ತಿರುವ ಪುಟಕ್ಕೆ ಸೇರಿಸಲು ಪ್ರಯತ್ನಿಸುತ್ತಿತ್ತು.ಜಾವಾ ಸ್ಕ್ರಿಪ್ಟ್ ಬಳಸಿ ರಚಿಸಲಾಗಿದ್ದ ಈ ಕೋಡ್‌ನ ಕೆಲಸವೇನು ಎಂದು ಅರಿಯಲು ನುರಿತ ತಂತ್ರಜ್ಞರಾಗಿರುವ ತೇಜೇಶ್‌ಗೆ ಕಷ್ಟವಾಗಲಿಲ್ಲ. ಬಳಕೆದಾರರು ಸಂದರ್ಶಿಸುವ ಪುಟಗಳಿಗೆ ಜಾಹಿರಾತಿನಂತ ಏನನ್ನೋ ಸೇರಿಸುವುದಕ್ಕೆ ಈ ಸ್ಕ್ರಿಪ್ಟ್ ಪ್ರಯತ್ನಿಸುತ್ತಿತ್ತು. ಜೂನ್ 3ರಂದು ಏರ್‌ಟೆಲ್ 3ಜಿ ಬಳಕೆದಾರರನ್ನು ಕಾಡುವ ಈ ಸ್ಕ್ರಿಪ್ಟ್‌ನ ರಹಸ್ಯವನ್ನು ಬಯಲು ಮಾಡುವ ಬರಹದೊಂದಿಗೆ ಗಿಟ್–ಹಬ್ ತಾಣದಲ್ಲಿ ಸ್ಕ್ರಿಪ್ಟ್‌ನ ಕೋಡ್ ಅನ್ನು ಬಹಿರಂಗ ಪಡಿಸಿದರು.ತೇಜೇಶ್ ಜಿ.ಎನ್. ತಂತ್ರಜ್ಞಾನ ಕ್ಷೇತ್ರದ ಆಸಕ್ತರಿಗೆಲ್ಲಾ ಪರಿಚಿತರು. ಮುಕ್ತ ದತ್ತಾಂಶ ಕ್ಷೇತ್ರದಲ್ಲಿ ಅವರು ವೈಯಕ್ತಿಕ ನೆಲೆಯಲ್ಲಿ ಕೈಗೊಂಡಿರುವ ಕೆಲಸಗಳು ಅನೇಕ. ಅವರ ಓಪನ್ ಬ್ಯಾಂಗಲೋರ್ ಜಾಲತಾಣ (openbangalore.org/) ಸರ್ಕಾರಿ ಇಲಾಖೆಗಳು ತಮ್ಮ ಬಳಿ ಇಟ್ಟುಕೊಂಡಿರುವ ಜನೋಪಯೋಗಿ ದತ್ತಾಂಶಗಳನ್ನು ಜನರಿಗೆ ಒದಗಿಸುವ ಕೆಲಸ ಮಾಡುತ್ತಿದೆ. ಹಾಗೆಯೇ ನಿಮ್ಮ ಸರ್ಕಾರವನ್ನು ಕೇಳಿ (askyourgovt.in/) ಜಾಲ ತಾಣ ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೆಗಳನ್ನು ಸರ್ಕಾರಕ್ಕೆ ಕೇಳುವವರ ಬಳಗವೊಂದನ್ನು ಸೃಷ್ಟಿಸಿದೆ. ಅವರ ವೈಯಕ್ತಿಕ ಜಾಲ ತಾಣ thejeshgn.com ಮುಕ್ತ ದತ್ತಾಂಶ ಆಂದೋಲನಕ್ಕೆ ಸಂಬಂಧಿಸಿದ ಅನೇಕ ವಿವರಗಳನ್ನು ಒದಗಿಸುತ್ತದೆ. ಅಷ್ಟೇ ಅಲ್ಲ ಅವರ ಪ್ರವೃತ್ತಿಯಾದ ಪ್ರವಾಸದ ವಿವರಗಳನ್ನೂ ಇದು ಒದಗಿಸುತ್ತದೆ.ತೇಜೇಶ್ ಅವರು ಬಹಿರಂಗ ಪಡಿಸಿದ ವಿಚಾರ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಯಾಗತೊಡಗಿದ್ದರ ಹಿಂದೆಯೇ ತಾನು ಬಳಕೆದಾರರಿಗೆ ಅನುಕೂಲ ಕಲ್ಪಿಸಲು ಇಂಥದ್ದೊಂದು ಸ್ಕ್ರಿಪ್ಟ್ ಅನ್ನು ಬಳಸುತ್ತಿದ್ದೆ ಎಂದು ಏರ್‌ಟೆಲ್ ಹೇಳಿತು. ಇದು ಬಳಕೆದಾರರ ಮೇಲೆ ನಿಗಾ ಇರಿಸುವ ಕೆಲಸವಲ್ಲ. ಅವರು ಎಷ್ಟು ದತ್ತಾಂಶವನ್ನು ಬಳಸಿದರು ಎಂಬುದನ್ನು ಅವರಿಗೆ ತಿಳಿಸಲು ಮಾಡಿರುವ ವ್ಯವಸ್ಥೆ ಎಂದೆಲ್ಲಾ ಹೇಳಿತು. ಆದರೆ ವಿಷಯ ಅಷ್ಟು ಸರಳವಲ್ಲ ಎಂಬುದು ತಂತ್ರಜ್ಞಾನದ ಕುರಿತ ಅರಿವಿದ್ದ ಎಲ್ಲರಿಗೂ ತಿಳಿದಿತ್ತು. ಏರ್‌ಟೆಲ್ ಈ ಕೋಡ್ ಅನ್ನು ತೆಗೆದು ಹಾಕಿತು. ಆದರೆ ಸಾಮಾಜಿಕ ಜಾಲ ತಾಣಗಳಲ್ಲಿ ಏರ್‌ಟೆಲ್‌ನ ಅನಧಿಕೃತ ಗೂಢಚರ್ಯೆಯ ಕುರಿತ ಚರ್ಚೆ ಆರಂಭವಾಯಿತು. ಇದಾಗಿ ಮೂರು ದಿನಗಳು ಮುಗಿಯುವಷ್ಟರಲ್ಲಿ ತೇಜೇಶ್‌ಗೆ ಮುಂಬೈಯ ಕಾನೂನು ಸಲಹೆಗಾರ ಸಂಸ್ಥೆಯೊಂದರ ವಕೀಲರಿಂದ ನೊಟೀಸ್ ಜಾರಿಯಾಯಿತು. ಇಸ್ರೇಲ್ ಮೂಲಕ ಕಂಪೆನಿಯೊಂದರ ಕಾಪಿರೈಟ್‌ ಅನ್ನು ಉಲ್ಲಂಘಿಸಿರುವ ಆರೋಪ ಅದರಲ್ಲಿತ್ತು.ಏರ್‌ಟೆಲ್ ಇತ್ತೀಚಿಗೆ ಒಂದಲ್ಲಾ ಒಂದು ಕಾರಣಕ್ಕೆ ವಿವಾದದೊಳಕ್ಕೆ ಸಿಕ್ಕಿಬೀಳುತ್ತಿದೆ. ನೆಟ್ ನ್ಯೂಟ್ರಾಲಿಟಿಗೆ ಸಂಬಂಧಿಸಿದ ಚರ್ಚೆಯಲ್ಲೂ ಏರ್‌ಟೆಲ್ ಕೇಂದ್ರ ಬಿಂದುವಾಗಿತ್ತು. ವಾಟ್ಸ್ ಆಪ್ ಅಥವಾ ಆ ಬಗೆಯ ಸೇವೆಗಳನ್ನು ಬಳಸಿ ಸಂದೇಶಗಳನ್ನು ಕಳುಹಿಸಿದರೆ ಅಥವಾ ಮಾತನಾಡಿದರೆ ಅದಕ್ಕೆ ಪ್ರತ್ಯೇಕ ಶುಲ್ಕ ಪಾವತಿಸಬೇಕು ಎಂದು ಮೊದಲು ಹೇಳಿದ್ದೇ ಏರ್‌ಟೆಲ್. ಇದೊಂದು ದೊಡ್ಡ ವಿವಾದವೇ ಆಗಿ ಏರ್‌ಟೆಲ್ ಈ ನಿರ್ಧಾರವನ್ನು ಹಿಂತೆಗೆದುಕೊಂಡಿತ್ತು. ಆಮೇಲೆ ಟ್ರಾಯ್ ಮುಂದಿಟ್ಟ ಪ್ರಶ್ನೆಗಳ ಹಿನ್ನೆಲೆಯಲ್ಲಿ ನೆಟ್ ನ್ಯೂಟ್ರಾಲಿಟಿ ಎಂಬುದು ಜನಸಾಮಾನ್ಯರ ಮಟ್ಟದಲ್ಲಿಯೂ ಚರ್ಚೆಯಾಗುವ ವಿಷಯವಾಯಿತು. ಸರ್ಕಾರ ಕೂಡಾ ನೆಟ್ ನ್ಯೂಟ್ರಾಲಿಟಿಯ ಪರವಾಗಿರುವವರ ವಾದವನ್ನು ಗಂಭೀರವಾಗಿ ಪರಿಗಣಿಸಬೇಕಾದ ಸ್ಥಿತಿ ಉದ್ಭವಿಸಿತು.ತೇಜೇಶ್ ಬಹಿರಂಗ ಪಡಿಸಿರುವ ವಿವರಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಏರ್‌ಟೆಲ್ ಹೇಳದೇ ಇರುವ ಹಾಗೆಯೇ ತೇಜೇಶ್‌ ವಿರುದ್ಧ ಕಾಪಿರೈಟ್ ಉಲ್ಲಂಘನೆ ಆರೋಪ ಮಾಡುತ್ತಿರುವವರು ಮುಚ್ಚಿಡುತ್ತಿರುವ ಅನೇಕ ಸಂಗತಿಗಳು ಬೆಳಕಿಗೆ ಬರುತ್ತವೆ. ಏರ್‌ಟೆಲ್ ತನ್ನ ಬಳಕೆದಾರರಿಗೆ ‘ಅನುಕೂಲ ಕಲ್ಪಿಸುವುದಕ್ಕಾಗಿ’ ಉಪಯೋಗಿಸುತ್ತಿದ್ದ ಸ್ಕ್ರಿಪ್ಟ್ (ಕಿರು ತಂತ್ರಾಂಶ) ರೂಪಿಸಿದ್ದು ಇಸ್ರೇಲ್ ಮೂಲದ ಫ್ಲ್ಯಾಶ್ ನೆಟ್‌ವರ್ಕ್ಸ್ (bit.ly/1B3EYpR). ಇದು ಏರ್‌ಟೆಲ್ ಸಂಸ್ಥೆಗೆ ತಾನು ಒದಗಿಸುವ ಸೇವೆಯ ಭಾಗವಾಗಿಯೇ ಸ್ಕ್ರಿಪ್ಟ್ ಅನ್ನು ರೂಪಿಸಿದೆ. ಈ ಕಂಪೆನಿಯ ಗ್ರಾಹಕರ ಬಳಗದಲ್ಲಿ ವೊಡಾಫೋನ್ ಇತ್ಯಾದಿ ಸಂಸ್ಥೆಗಳೂ ಇವೆ.ಫ್ಲ್ಯಾಶ್ ನೆಟ್‌ವರ್ಕ್ಸ್ ತನ್ನ ಜಾಲ ತಾಣದಲ್ಲಿ ಹೇಳಿಕೊಂಡಿರುವಂತೆ ಇದು ಮಾಡುವ ಕೆಲಸಗಳಲ್ಲಿ ‘ಇಂಟರ್ ನೆಟ್ ಸೇವೆಯ ಬಳಕೆದಾ

ರರ ವರ್ತನೆಯನ್ನು ಅರಿಯುವುದು, ಸೇವಾದಾತ ಕಂಪೆನಿಗಳಿಗೆ ದೊರೆಯುವ ಲಾಭವನ್ನು ಹೆಚ್ಚಿಸುವ ಸೇವೆಗಳನ್ನು ಒದಗಿಸುವುದು’ ಸೇರಿದೆ. ಸೇವಾದಾತ ಕಂಪೆನಿಗಳಿಗೆ ಇದು ಬಳಕೆದಾರರ ‘ಸರ್ಚ್’ ಅಥವಾ ಹುಡುಕಾಟ, ಹೆಚ್ಚುವರಿ ಸೇವೆಗಳು ಮತ್ತು ನಿರ್ದಿಷ್ಟ ವ್ಯಕ್ತಿಗಳನ್ನು ಗುರಿಯಾಗಿಟ್ಟುಕೊಂಡ ಜಾಹೀರಾತುಗಳ ಮೂಲಕ ಇದು ಹೆಚ್ಚುವರಿ ಲಾಭವನ್ನು ತಂದುಕೊಡುತ್ತದೆ.ಇಂಟರ್‌ನೆಟ್ ಸೇವೆಯನ್ನು ಬಳಸುತ್ತಿರುವವರು ಏನನ್ನು ನೋಡುತ್ತಾರೆ, ಏನನ್ನು ಖರೀದಿಸುತ್ತಾರೆ, ಅವರು ಆಸಕ್ತಿಗಳು ಏನೆಲ್ಲಾ ಎಂಬುದನ್ನು ಅರಿತು ಅದಕ್ಕೆ ಸಂಬಂಧಿಸಿದ ಜಾಹೀರಾತುಗಳನ್ನು ಅವರಿಗೆ ತಲುಪಿಸುವುದಕ್ಕೆ ಇಂಟರ್‌ನೆಟ್ ಸೇವಾದಾತ ಕಂಪೆನಿಗಳಿಗೆ ಸಹಾಯ ಮಾಡುತ್ತದೆ. ತೇಜೇಶ್ ಕಂಡುಕೊಂಡ ಸ್ಕ್ರಿಪ್ಟ್ ಏನೆಲ್ಲಾ ಮಾಡುವ ಶಕ್ತಿಯನ್ನು ಹೊಂದಿದೆ ಎಂಬುದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ತಂತ್ರಜ್ಞರು ಬರೆದಿದ್ದಾರೆ.ಇದು ಬಳಕೆದಾರರು ಸಂದರ್ಶಿಸುತ್ತಿರುವ ಜಾಲತಾಣ ಅಥವಾ ಪುಟದಲ್ಲಿ ಇಲ್ಲದೇ ಇರುವ ಜಾಹೀರಾತುಗಳನ್ನೂ ಪ್ರದರ್ಶಿಸುವ ಶಕ್ತಿ ಹೊಂದಿದೆಯಂತೆ. ಉದಾಹರಣೆಗೆ ನೀವು ‘ಪ್ರಜಾವಾಣಿ’ಯ ಜಾಲ ತಾಣದ ಪುಟವೊಂದನ್ನು ತೆರೆದು ಓದುತ್ತಿದ್ದೀರಿ ಅಂದುಕೊಳ್ಳಿ. ಅಲ್ಲಿ ಇದ್ದಕ್ಕಿದ್ದಂತೆಯೇ ನಿಮಗೊಂದು ಅದರ ಮೇಲೆ ನಿಮಗೊಂದು ಜಾಹೀರಾತು ಕಾಣಿಸಬಹುದು. ಈ ಜಾಹೀರಾತಿಗೂ ನೀವು ಓದುತ್ತಿರುವ ಜಾಲ ಪುಟಕ್ಕೆ ಅಥವಾ ಆ ಪುಟವನ್ನು ನಿಮಗೆ ಒದಗಿಸುತ್ತಿರುವ ಸಂಸ್ಥೆಗೂ ಸಂಬಂಧವೇ ಇರುವುದಿಲ್ಲ. ಇದನ್ನು ನಿಮಗೆ ಇಂಟರ್‌ನೆಟ್ ಸೇವೆ ಒದಗಿಸಿರುವ ಕಂಪೆನಿ ಮಧ್ಯೆ ತೂರಿಸಿರುತ್ತದೆ. ಈ ತೂರಿಸುವಿಕೆಯ ಕ್ರಿಯೆಯಲ್ಲಿ ಜಾಲ ಪುಟ ನಿಧಾನವಾಗಿ ತೆರೆದುಕೊಳ್ಳುವುದು ಸಹಜ. ತೇಜೇಶ್ ಅವರ ಶೋಧನೆಗೆ ಕಾರಣವಾದದ್ದೂ ಇದುವೇ.ಈ ಬಗೆಯ ತೂರಿಸುವಿಕೆಯಲ್ಲಿ ಮೂಲ ಜಾಲ ತಾಣದವರಿಗೆ ಆಗುವ ತೊಂದರೆ ಒಂದು. ಬಳಕೆದಾರರ ಜೇಬಿಕೆ ಹೆಚ್ಚುವರಿ ದತ್ತಾಂಶ ಬಳಕೆಯ ಹೊರೆ ಮತ್ತೊಂದು. ಇದನ್ನು ‘ಗ್ರಾಹಕರ ಅನುಕೂಲಕ್ಕಾಗಿ ಮಾಡಲಾಗಿದೆ’ ಎಂಬ ಸಬೂಬನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ. ಈ ಎಲ್ಲಾ ನಷ್ಟಗಳಿಗಿಂತ ದೊಡ್ಡದು ಗ್ರಾಹಕರ ನಂಬಿಕೆಯ ದುರುಪಯೋಗ. ಇದು ಗೂಢಚರ್ಯೆಗೆ ಸಮಾನವಾದ ಕ್ರಿಯೆ. ಒಂದು ವೇಳೆ ಗ್ರಾಹಕರ ಅನುಕೂಲಕ್ಕಾಗಿಯೇ ಇದನ್ನು ಮಾಡುವುದಿದ್ದರೆ ಈ ಕುರಿತಂತೆ ಪಾರದರ್ಶಕ ನೀತಿಯೊಂದನ್ನು ಏರ್‌ಟೆಲ್ ಪಾಲಿಸಬಹುದಿತ್ತು. ತೇಜೇಶ್ ಈ ವಿಷಯವನ್ನು ಬಹಿರಂಗ ಪಡಿಸುವ ತನಕವೂ ಈ ಬಗ್ಗೆ ಏರ್‌ಟೆಲ್ ಏನನ್ನೂ ಹೇಳಿರಲಿಲ್ಲ ಎಂಬುದಿಲ್ಲ ಗಮನಾರ್ಹ.ಇಂಟರ್‌ನೆಟ್ ಸೇವಾದಾತ ಕಂಪೆನಿಯೊಂದರ ಗೂಢಚರ್ಯೆಯನ್ನು ಬಹಿರಂಗ ಪಡಿಸಿದ ತೇಜೇಶ್‌ ಮೇಲೆ ಈಗ ‘ಕಾಪಿ ರೈಟ್’ ಉಲ್ಲಂಘನೆಯ ಆರೋಪ ಹೊರಿಸಲಾಗಿರುವುದು ಮತ್ತೊಂದು ತಮಾಷೆ. ಜೇಬುಗಳ್ಳರು ಹೇಗೆಲ್ಲಾ ನಮ್ಮ ಕಿಸೆಗೆ ಕನ್ನ ಹಾಕುತ್ತಾರೆ ಎಂಬುದನ್ನು ಯಾರಾದರೂ ಬಹಿರಂಗ ಪಡಿಸಿದರೆ ಅವರ ವಿರುದ್ಧ ಜೇಬುಗಳ್ಳರು ‘ತಮ್ಮ ತಂತ್ರದ ಕಾಪಿರೈಟ್ ಉಲ್ಲಂಘನೆಯಾಗಿದೆ’ ಎಂದು ಆರೋಪಿಸಿ ಕೇಸು ದಾಖಲಿಸಿದರೆ ಹೇಗಿರಬಹುದು? ಫ್ಲ್ಯಾಶ್ ನೆಟ್‌ವರ್ಕ್ಸ್ ದಾಖಲಿಸಲು ಹೊರಟಿರುವ ಮೊಕದ್ದಮೆಯೂ ಅಂಥದ್ದೇ.ಇಲ್ಲಿ ಮತ್ತೊಂದು ಅಸಂಗತವೂ ಇದೆ. ಭಾರತೀಯ ಕಂಪೆನಿಯೊಂದರ ಅನೈತಿಕ ವಾಣಿಜ್ಯ ತಂತ್ರವೊಂದನ್ನು ಭಾರತೀಯನೊಬ್ಬ ಬಹಿರಂಗ ಪಡಿಸಿದ್ದಾನೆ. ಆತನನ್ನು ಸದೆ ಬಡಿಯಲು ಇಸ್ರೇಲಿ ಮೂಲದ ಕಂಪೆನಿಯೊಂದು ಭಾರತೀಯ ವಕೀಲರನ್ನು ಬಳಸಿಕೊಳ್ಳುತ್ತಿದೆ. ಇಂಟರ್‌ನೆಟ್ ನಿಜಕ್ಕೂ ಜಗತ್ತನ್ನು ಕಿರಿದಾಗಿಸಿದ್ದಕ್ಕೆ ಇದೊಂದು ರೂಪಕವಾಗುವಂತೆಯೇ ಈ ಕಿರಿದಾದ ಜಗತ್ತಿನ ಕ್ರೌರ್ಯಗಳು ಹೇಗಿರಬಹುದು ಎಂಬುದಕ್ಕೂ ಇದು ಸಾಕ್ಷಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry