ಚಕ್ಕರ್ ಗಿರಾಕಿಗಳು

7

ಚಕ್ಕರ್ ಗಿರಾಕಿಗಳು

Published:
Updated:
ಚಕ್ಕರ್ ಗಿರಾಕಿಗಳು

ಚಕ್ಕರ್ ಹೊಡೆಯುವ ಮಕ್ಕಳ ಬಗ್ಗೆ ನನಗೆ ಮೊದನಿಂದಲೂ ಬಹಳ ಕುತೂಹಲ. ಅವರೆಲ್ಲಾ ಕ್ಲಾಸಿಗೆ ಏಕೆ ಚಕ್ಕರ್ ಹೊಡೆಯುತ್ತಾರೆ? ಚಕ್ಕರ್ ಹೊಡೆದ ಮೇಲೆ ಅವರು ಏನೆಲ್ಲಾ ಮಾಡುತ್ತಾರೆ? ಇಡೀ ದಿನವನ್ನು ಹೇಗೆ ಕಳೆಯುತ್ತಾರೆ? ಅವರ ದಿನದ ಒಟ್ಟು  ಕಾರ್ಯಕ್ರಮ ಹೇಗಿರುತ್ತವೆ? ಎಂಬ ಅನೇಕ ಪ್ರಶ್ನೆಗಳು ಮೊದಲಿನಿಂದಲೂ ನನಗೆ  ಕಾಡುತ್ತಿದ್ದವು. ಅದಕ್ಕೆ  ಉತ್ತರಗಳು ಒಂದೊಂದಾಗಿ ನಿಧಾನಕ್ಕೆ ಸಿಗತೊಡಗಿದವು.ಕೆಲ ಹುಡುಗರು ದಿನಾ ಕಾಲೇಜಿಗೆ ಬರುತ್ತಾರೆ. ಆದರೆ ಅಪ್ಪಿತಪ್ಪಿಯೂ ಕಾಲೇಜಿನ ಗೇಟನ್ನು ಮಾತ್ರ ದಾಟುವುದಿಲ್ಲ. ಗೇಟ್ ಅವರ ಕೊನೆಯ ಸ್ಟಾಪ್. ದಿನಾ ತಪ್ಪದೆ ಕಾಲೇಜಿನ ಗೇಟಿನ ತನಕ ಬರುವ ಇವರು ಕಾಲೇಜಿಗೆ ಮಕ್ಕಳನ್ನು ಕಳಿಸಲು ಬರುವ ಪೋಷಕರಂತೆ ಬಂದು ನಿಲ್ಲುತ್ತ್ತಾರೆ. ಹಿಡಿಯಲು ಹೋದರೆ ತಪ್ಪಿಸಿಕೊಂಡು ಕಳ್ಳರಂತೆ ಓಡುವ ಇವರನ್ನು ಹಿಡಿಯುವುದೂ ಕಷ್ಟವೇ. ಟ್ರಾಫಿಕ್‌ನಿಂದ ತುಂಬಿ ತುಳುಕಾಡುವ ರಸ್ತೆಯಲ್ಲಿ ನಮಗೆ ಹೆದರಿ ಅಡ್ಡಾದಿಡ್ಡಿಯಾಗಿ ಓಡಿಹೋಗಿ ಏನಾದರೂ ಅನಾಹುತವಾದರೆ ಎಂಬ ಹೆದರಿಕೆ ಬೇರೆ. ಒಂದು ಸಲ ಹೀಗೆ ಅಟ್ಟಾಡಿಸಿ ಹಿಡಿದು ತರಲು ಹೋದ ಹುಡುಗ ಇನ್ನೇನು  ಚಲಿಸುವ ಬಸ್ಸಿಗೆ ಸಿಕ್ಕೇ ಬಿಡುತ್ತಿದ್ದ. ಆ ಘಟನೆ ಆದ ನಂತರ ಇದರ ಸಹವಾಸವೇ ಬೇಡವೆಂದು ಸುಮ್ಮನಾಗಬೇಕಾಯಿತು.ಕಾಲೇಜಿನ ಬೆಲ್ ಬಾರಿಸಿ, ನಾವೆಲ್ಲಾ ಗೂಡು ಸೇರಿದ ಮೇಲೆ ನಿರಾಳವಾಗುವ ಚಕ್ಕರ್ ಗಿರಾಕಿಗಳು ನಂತರದಲ್ಲಿ ಒಂದು ಕಡೆ ಸಭೆ ಸೇರುತ್ತಾರೆ. ಅದರಲ್ಲಿ ಅವರವರ ಹವ್ಯಾಸ, ಅಭ್ಯಾಸ, ದಿನಚರಿಯ ಪ್ರಕಾರ ಹಲವಾರು ಗುಂಪುಗಳು ಆಟೊಮ್ಯಾಟಿಕ್ ಆಗಿ, ಕ್ರಮಬದ್ಧವಾಗಿ ತಯಾರಾಗುತ್ತವೆ. ಗುಂಪು ಒಂದು: ಬಸ್‌ಸ್ಟಾಂಡಿನಲ್ಲೇ ದಿನವಿಡೀ ಕೂರುವ ಕಾಯಕ. ಓಡಾಡುವ ಜನ, ಬಸ್ಸುಗಳನ್ನೇ ದಿನಾ ದುರುಗುಟ್ಟಿಕೊಂಡು ಕೂರುವ ಇವರಿಗೆ ಯಾವತ್ತೂ ಬೇಜಾರಾಗುವುದಿಲ್ಲ. ಒಟ್ಟಿನಲ್ಲಿ ದಿನಾ ಇಲ್ಲೇ ಕೂರುತ್ತಾರೆ. ಸಿಟಿ ಬಸ್‌ ಸ್ಟಾಂಡೇ ಇವರ ಪಾಠಶಾಲೆ. ಇವರು ಹೆಚ್ಚು ಚಲಿಸುವುದಿಲ್ಲ.  ಇವರು ಧ್ಯಾನಕ್ಕೆ ಕೂತ ತಪಸ್ವಿಗಳು.ಗುಂಪು ಎರಡು: ಅಲ್ಲೇ ಇರುವ ಮರದ ನೆರಳಲ್ಲಿ ಮೊಬೈಲ್ ಬಿಡಿಸಿಕೊಳ್ಳುವರು. ಅದರಲ್ಲಿ ಏನೇನೋ ನೋಡುತ್ತಾ, ಹಾಡು ಕೇಳುತ್ತಾ, ಚರ್ಚಿಸುತ್ತಾ  ಸ್ವಲ್ಪ ಸ್ವಲವೇ ಗರಂ ಆಗುವರು.  ಅದರಲ್ಲಿ ಕೆಲವರು ತುಂಬಾ ಸೀರಿಯಸ್ಸಾಗಿ ಮೊಬೈಲನ್ನು ಕಿವಿಗೆ ತುರುಕಿಕೊಂಡು ಅತ್ತಿಂದಿತ್ತ ಪಟಪಟ ತಿರುಗುತ್ತಾ ಯಾರೊಂದಿಗೋ ಗಂಟೆಗಟ್ಟಲೆ ಮಾತಾಡುವರು. ಅವರ ರೀತಿನೀತಿ ಹಾವ ಭಾವ ನೋಡಿದರೆ ಎಲ್ಲೋ ಏನೋ ಅಲ್ಲೋಲ್ಲ ಕಲ್ಲೋಲ್ಲವೇ ಆಗಿರಬೇಕು ಅಂತ ಅನ್ನಿಸದಿರದು. ಆಮೇಲೆ ಅವರ ಬಳಿಗೆ ಒಂದಿಷ್ಟು ಚಿತ್ರವಿಚಿತ್ರದ ಕಟ್ಟಿಂಗಿನ, ನವೀನ ಮಾದರಿಯ ಬಟ್ಟೆ ಉಟ್ಟ ಪಡ್ಡೆ ಹುಡುಗರ ಗುಂಪೊಂದು ಬರುತ್ತದೆ.  ಅಲ್ಲಿಂದ ಮೇಲೆದ್ದು  ಅವರೆಲ್ಲಾ ಬೀದಿಗೆ ಬಿದ್ದರೆ ಇಡೀ ದಿನ ಅವರು ನಗರದ ಬೀದಿ ಬೀದಿಗಳಲ್ಲಿ ಸುತ್ತಿ ಕಲಿಯುವ ಮಕ್ಕಳು. ಇವರಿಗೆ ನಿಗದಿತ ಸ್ಪಷ್ಟ ಕಾರ್ಯಸೂಚಿಯಿಲ್ಲ. ಗಾಳಿಪಟದ ಮಾದರಿಯ ಜನ ಇವರು.ಗುಂಪು ಮೂರು: ಪಕ್ಕಾ ಕ್ರೀಡಾ ಪ್ರೇಮಿಗಳು. ಬರುವಾಗಲೇ ಬ್ಯಾಟು, ವಿಕೆಟ್, ಚೆಂಡು, ಚಿನ್ನಿ ದಾಂಡುಗಳನ್ನು ತುಂಬಿಕೊಂಡು ಬರುತ್ತಾರೆ. ಗೇಟಿನ ಬಳಿ ನಿಂತು ತಮಗೆ ಬೇಕಾದ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆಟದ ಒಂದು ಪೂರ್ಣ ಗ್ಯಾಂಗು ರೆಡಿಯಾದರೆ ಇವರ ಕೆಲಸ ಮುಗಿದ ಹಾಗೆ. ಎಲ್ಲರನ್ನೂ ಎಳೆದುಕೊಂಡು ಖಾಲಿ ಮೈದಾನದ ಕಡೆ ಹೊರಟರೆ ಇವರ ದರ್ಶನ ಮತ್ತೆ ಸಿಗುವುದು ನಾಳೆಯೇ.ಗುಂಪು ನಾಲ್ಕು: ಇದು ಸಿಗರೇಟ್ ಕಂಪನಿ ಗ್ಯಾಂಗು. ಇವರಿಗಾಗಿ ಬಾಯಿ ತೆರೆದು ಕೂತ ಒಂದು ಕ್ಯಾಂಟೀನು, ಒಂದು ಅಂಗಡಿ ಕಾಯಂ ಆಗಿ ಅಲ್ಲಲ್ಲಿ ನಿಗದಿಯಾಗಿರುತ್ತದೆ. ಮನೆಗಳ ಹಿತ್ತಲಿನ ಬೇಲಿಯ ಸಂದಿಗಳು, ಮುಚ್ಚಿದ ಮನೆಗಳ ಜಗಲಿ ಕಟ್ಟೆಗಳು ಇವರ ನೆಲೆ. ನಮ್ಮ ಮುಖ ಅಕಸ್ಮಾತ್ ಆಗಿ ಕಂಡರೆ ನಮಗೆ ಹೆಚ್ಚು ಗೌರವ ಕೊಡುವ ಶಿಷ್ಯರು ಇವರು ಮಾತ್ರ. ಇವರಲ್ಲಿ ಭಯ ಭಕ್ತಿ ಸ್ವಲ್ಪ ಜಾಸ್ತಿ. ಹೀಗಾಗಿ ನಮ್ಮ ಮುಸುಡಿಗಳು ಕಂಡರೆ ದಿಕ್ಕಾಪಾಲಾಗಿ ಓಡಬಲ್ಲ ಧೀರರಿವರು.ಗುಂಪು ಐದು: ಇದು ಸಿನಿಮಾ ಗ್ಯಾಂಗು. ಇವರ ಮುಖ್ಯ ವಿಷಯವೇ ಮನರಂಜನೆ. ನಾಳೆ ಎಲ್ಲಿ ಸೇರಬೇಕು? ಏನು ಮಾಡಬೇಕು ಎಂಬುದೆಲ್ಲಾ ಇವರಲ್ಲಿ ಪೂರ್ವ ನಿರ್ಧರಿತ. ಸಿನಿಮಾಗಾಗಿಯೇ ಬಾಳುವ, ಬದುಕುವ ಇವರು ಸಿನಿಮಾ ಬಿಟ್ಟು ಉಳಿದ ಸಮಯವನ್ನು ವಿಡಿಯೊ ಗೇಮ್‌ನಲ್ಲಿ ಮತ್ತು ಇಂಟರ್‌ನೆಟ್ ಕೆಫೆಗಳಲ್ಲಿ ಕಳೆಯುತ್ತಾರೆ. ಸಿನಿಮಾಗಳ ಕುರಿತು ಪಿಯುಸಿಯವರು ಪರೀಕ್ಷೆ ನಡೆಸಿದರೆ ಒಳ್ಳೇದಿತ್ತು ಎಂಬ ಹಂಬಲ ಇವರದು. ತೀರಾ ಬೇಜಾರಾದರೆ ಇವರೆಲ್ಲಾ ಐಸ್‌ಕ್ರೀಮ್ ಪಾರ್ಲರ್ ಬಳಿ ತಂಪಾಗಿ ಸೇರುತ್ತಾರೆ. ಸಿನಿಮಾ ಹೀರೊ, ಹೀರೋಯಿನ್ ಥರ ನಡೆಯುವ, ನಗುವ, ಮಾತಾಡುವ ಕನಸು ಕಾಣಬಲ್ಲರು.ಗುಂಪು ಆರು: ಇವರು ಪಕ್ಕಾ ಪರಿಸರ ಪ್ರೇಮಿಗಳು. ಹೀಗಾಗಿ, ಪಾರ್ಕಿನ ಗಿಡ ಮರ ಬಳ್ಳಿಗಳ ಬಿಟ್ಟು ಇವರು ಕಿಂಚಿತ್ತೂ ಕದಲುವುದಿಲ್ಲ. ಇಲ್ಲಿ ಹುಡುಗರು ಮಾತ್ರವಲ್ಲದೆ ಕಾಲೇಜಿನ ಹುಡುಗಿಯರೂ ಇರುವುದು ಹೆಚ್ಚು ವಿಶೇಷ. ಸ್ಪಷ್ಟ ವಿಷಯ ಇಲ್ಲದೆಯೂ ಗಂಟೆಗಟ್ಟಲೆ, ದಿನಗಟ್ಟಲೆ, ಇವರು ಮಾತಾಡುತ್ತಾ ಕಲಿಯುವ ಕಲಿಗಳು. ನಗರದ ಕಾಲೇಜಿನ ಎಲ್ಲಾ ಚಕ್ಕರ್ ಗಿರಾಕಿಗಳು ಈ ಪಾರ್ಕಿನಲ್ಲಿ  ಪಕ್ಷಿಗಳಂತೆ ಬಂದು  ದಿನಾ ಸೇರುತ್ತಾರೆ. ತಂಪಾಗಿ, ಹಾಯಾಗಿ ಕಲಿಯುವ ಇವರನ್ನು ನೋಡುವುದೇ ಒಂದು ಸಂಭ್ರಮ, ಪರಮಾನಂದ!ಒಂದು ಸಲ ಏನಾಯಿತೆಂದರೆ; ಚಕ್ಕರ್ ಹೊಡೆದ ನಮ್ಮ ಕಾಲೇಜಿನ ಗಿರಾಕಿಗಳನ್ನಾದರೂ ಹುಡುಕಿಕೊಂಡು ಬರೋಣಾಂತ ಆ ಪಾರ್ಕಿಗೆ ಹೋದೆ. ನೋಡಿದರೆ ಒಮ್ಮೆಗೇ ಆಘಾತವೇ ಆಯಿತು. ಬರೋಬ್ಬರಿ ಒಂದು ಕಾಲೇಜನ್ನು ಅಲ್ಲೇ ಸ್ಥಾಪಿಸಬಹುದಾದಷ್ಟು ಹುಡುಗ ಹುಡುಗಿಯರು ಅಲ್ಲಿ  ಹಾಯಾಗಿ ಬೀಡು ಬಿಟ್ಟಿದ್ದರು. ನನಗೋ, ಒಂದು ಕ್ಷಣ ‘ಅರೆ! ಇಲ್ಲೇ ಒಂದು ಲವ್ ಅಂಡ್ ಲರ್ನಿಂಗ್ ಪಾರ್ಕ್ ಕಾಲೇಜ್’ ಅಂತ ಯಾಕೆ ಶುರು ಮಾಡಬಾರದು ಅಂತನ್ನಿಸಿತು. ಹಾಳಾದವರು ಯಾರು ಹೀಗೆ ಯೋಚಿಸಿಲ್ಲವಲ್ಲ ಎಂದು ವ್ಯಥೆಯೂ ಆಯಿತು. ಅಲ್ಲಿನ ಮಕ್ಕಳ ಆ  ಶ್ರದ್ಧೆ, ತಾಳ್ಮೆ, ಸಮಯ ಪ್ರಜ್ಞೆ, ಯಾವ ಉದ್ವೇಗ, ಹೆದರಿಕೆಗಳೂ ಇಲ್ಲದೆ ಏಕಾಗ್ರತೆಯಿಂದ ಕೂತ ಭಂಗಿ ವಿಸ್ಮಯ ಎನ್ನಿಸಿತು. ಅಷ್ಟರಲ್ಲಿ ನನ್ನ ಕೆಟ್ಟ ಮುಖ ಅಲ್ಲಿ ಕಾಣಿಸಿಕೊಂಡಿತು. ಕೂಡಲೇ ‘ಹಾಳಾದವನು ಇಲ್ಲಿಗೂ ಹುಡುಕಿಕೊಂಡು ಬಂದನಲ್ಲಾ’ ಎಂದು ಗೊಣಗಿಕೊಂಡ ನಮ್ಮ ಕಾಲೇಜಿನ ಕೆಲ ಹುಡುಗರು ತಕ್ಷಣ ಅಲ್ಲಿಂದ ಕಾಲುಕಿತ್ತರು. ಅವರು ತೋರಿದ ಗುರು ಭಕ್ತಿಗೆ ನಾನು ಧನ್ಯನಾದೆ.ಆದರೆ, ನಮ್ಮ ಕಾಲೇಜಿನ ಸಮವಸ್ತ್ರದಲ್ಲಿ ಅಲ್ಲೇ ಇದ್ದ ಒಂದಿಬ್ಬರು ಹುಡುಗರು ಮಾತ್ರ ಒಂಚೂರು ಗುರು ಪ್ರೇಮ ತೋರದೆ, ಸುಮ್ಮನೆ ನಿಂತಿದ್ದರು. ‘ಎಲಾ ಇವನ? ಇವರಿಗೆ ಒಂದಿಷ್ಟಾದರೂ ಗುರುಭಕ್ತಿ ಬೇಡವೇ? ಸಣ್ಣ ಹೆದರಿಕೆಯೂ ತೋರದೆ, ಮಾನ ಮರ್ಯಾದೆಗೂ ಅಂಜದೆ ನಿಂತು ನನ್ನನ್ನೇ ಗುರಾಯಿಸುತ್ತಿದ್ದಾರಲ್ಲ’ ಎಂದು, ನನಗೆ ರೇಗು ಹತ್ತಿತು. ‘ಏನ್ರಯ್ಯ ಕಾಲೇಜಿಗೆ ಚಕ್ಕರ್ ಹೊಡೆದು ಇಲ್ಲೇನು ಮಾಡ್ತಿದ್ದೀರಿ?’ ಎನ್ನುತ್ತಾ ಸಣ್ಣ ಅಧಿಕಾರದ, ಅಷ್ಟೇ ಹೆದರಿಕೆಯ ದನಿಯಲ್ಲಿ ಕೇಳಿದೆ. ‘ಅದೆಲ್ಲಾ ನಿಮಗ್ಯಾಕ್ರಿ ಅಂಕಲ್, ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡ್ಕಳ್ರಿ, ತೊಲಗ್ರಿ ಸಾಕು’ ಎಂದು ಮುಲಾಜಿಲ್ಲದೆ ಅವರಲ್ಲೊಬ್ಬ ನನಗೆ ಧಮಕಿ ಹಾಕಿದನು.ಆಗ ನನಗೆ ಜ್ಞಾನೋದಯವಾಯಿತು!. ‘ಓಹೋ! ಇವರು ನಮ್ಮ ಕಾಲೇಜಿನ ಹುಡುಗರೇ ಆಗಿದ್ದರೂ ಇವರಿಗೆ ನನ್ನ ಪರಿಚಯ ಇದ್ದಂತಿಲ್ಲ. ನಾನು ಅವರ ಕಾಲೇಜಿನ ಉಪನ್ಯಾಸಕ ಅನ್ನೋದು ಇವರೆಲ್ಲಾ ಕಾಲೇಜಿಗೆ ನೆಟ್ಟಗೆ ಬಂದಿದ್ದರೆ ತಾನೇ ಗೊತ್ತಾಗೋದು!?. ಕಾಲೇಜಿಗೆ ಸೇರಿಕೊಂಡವರು ಮತ್ತೆ ಅತ್ತ ಕಡೆ ಯಾವತ್ತೂ ಸುಳಿದೇ ಇಲ್ಲ. ಕ್ಲಾಸಿಗಂತೂ ಮೊದಲೇ ಬಂದಿಲ್ಲ. ಹಿಂಗಾಗಿ ನನಗೆ ಸಾರ್ ಬದಲಿಗೆ ಮುದ್ದು ಮುದ್ದಾಗಿ ಅಂಕಲ್ ಎನ್ನುತ್ತಿದ್ದಾರೆ.  ಇವರಿಗೆ ನಾನು ಯಾರೆಂದು ಗೊತ್ತಾದರೆ ಸರಿ, ಇಲ್ಲದಿದ್ದರೆ ಸರಿಯಾಗಿ ಬೆಂಡೆತ್ತಲೂ ಅವರು ತಯಾರಾಗಿದ್ದಾರೆ. ಅವರ ಪ್ರಕೃತಿ ಓದಿಗೆ ಧಕ್ಕೆ ತಂದ ನನ್ನನ್ನು ಅವರು ಸುಮ್ಮನೆ ಬಿಡುವರೇ? ಈಗಾದರೂ  ಹೇಳುವುದೋ? ಬೇಡವೋ? ಎಂಬ ತಳಮಳ, ಹೆದರಿಕೆ, ನನಗೇ ಒಟ್ಟಿಗೆ ಶುರುವಾದವು.ದನಿಯನ್ನು ಮೆದುಗೊಳಿಸಿ ‘ನಾನು ನಿಮ್ಮ ಕಾಲೇಜಿನ ಲೆಕ್ಚರರ್ ಕಣಪ್ಪ’ ಎಂದು ನಾನೇ ವಿನಮ್ರವಾಗಿ ಪರಿಚಯ ಮಾಡಿಕೊಂಡೆ. ಆಗವನು ‘ನೀವು ಕಾಲೇಜು ಲೆಕ್ಚರ್ ಆಗಿದ್ರೆ, ಕಾಲೇಜಲ್ಲಿ. ಇಲ್ಲಿಗೆಲ್ಲಾ ಬಂದು ಹಿಂಗೆಲ್ಲಾ ಓದೋ ಹುಡುಗರಿಗೆ ತೊಂದರೆ ಕೊಡೋದು ಸರೀನಾ ಅಂಕಲ್’ ಎಂದು ನನಗೇ ಬುದ್ಧಿ ಹೇಳಿದ. ನಾನು ಪಾರ್ಕಿನಲ್ಲಿ ಇಷ್ಟು ಚೆನ್ನಾಗಿ ಓದುವ ಹುಡುಗರಿಗೆ ವಿನಾಕಾರಣ ತೊಂದರೆ ಕೊಟ್ಟ ಪಾಪಕ್ಕೆ ಗುರಿಯಾದೆನಲ್ಲ ಎಂದು ತಕ್ಷಣ ಪಶ್ಚಾತ್ತಾಪ ಪಟ್ಟುಕೊಂಡೆ. ಅವರು ನನ್ನನ್ನು ಸುಟ್ಟು ತಿನ್ನುವಂತೆ ನೋಡಿ ಗುರುವಿಗೇ ‘ಗುರ್’ ಎಂದು ಹೊರಟೇ ಹೋದರು.ಅಲ್ಲಿಂದ, ಚಕ್ಕರ್ ಹೊಡೆದು ಕಾಲೇಜಿನ ಹೊರಗೆ ಸುತ್ತುವ ಹುಡುಗರ ಸಹವಾಸ ಇನ್ನು ಬೇಡಪ್ಪ ಎಂದು ನಾನು ನಿರ್ಧರಿಸಿದೆ. ಇತ್ತ ಕಡೆ ಕಾಲೇಜಿಗೆ ಬಂದು ಚಕ್ಕರ್ ಸುತ್ತುವ ಗಿರಾಕಿಗಳ ಹಿಡಿದು ಸುಧಾರಿಸಲು ಏನಾದರೂ ಮಾಡಬಹುದೇ? ಎಂದು ಯೋಚಿಸಿ ನಾವೊಂದಿಷ್ಟು ಉಪನ್ಯಾಸಕರು ಕಾರ್ಯಾಚರಣೆಗೆ ಸಿದ್ಧರಾದೆವು. ಆಗ ಕಾಲೇಜು ಬೆಳಿಗ್ಗೆ ಎಂಟು ಗಂಟೆಗೆ ಶುರುವಾಗುತ್ತಿತ್ತು. ಹತ್ತು ಗಂಟೆಯ ಎರಡನೆಯ ಬೆಲ್ಲು ಆದ ಮೇಲೆ ಮಕ್ಕಳಿಗೆ ಇಪ್ಪತ್ತು ನಿಮಿಷದ ಬಿಡುವು. ಆ ಬಿಡುವಿನ ಸಮಯದಲ್ಲಿ ಜಿಂಕೆ ಮರಿಗಳಂತೆ ಹಾರಿ ಎಗರಿ ವಿದ್ಯಾರ್ಥಿಗಳು ಕಾಲೇಜಿನಿಂದ ತಪ್ಪಿಸಿಕೊಂಡು ಓಡುತ್ತಿದ್ದರು. ನಮ್ಮ ಅಧ್ಯಾಪಕರ ಬಳಗ ಒಂದು ದಿನ ಕಾದಿದ್ದು ಒಂದಿಷ್ಟು ಹುಡುಗರನ್ನು ಹುಡುಗಿಯರನ್ನು ಹಿಡಿದು ಹಾಕಿದೆವು. ‘ಯಾಕೆ ಹೀಗೆ ತಪ್ಪಿಸಿಕೊಂಡು ಓಡಿ ಹೋಗ್ತೀರಾ? ಎಲ್ಲಿಗೆ ಹೋಗ್ತೀರಾ’ ಎಂದೆಲ್ಲಾ ವಿಚಾರಿಸಿದೆವು.ಅವರು ಹೇಳಿದ ಕಾರಣಗಳು ಕೇಳಿ ನಮ್ಮ ಚಿಂತೆ ಮತ್ತಷ್ಟು ಹೆಚ್ಚಾಯಿತು. ನಮ್ಮೆಲ್ಲರ ಕಣ್ಣಲ್ಲಿ ನೀರೂ ಬಂದಿತು. ಬರೊಬ್ಬರಿ ಹತ್ತು ಗಂಟೆಗೆ ಹೀಗೆ ತಪ್ಪಿಸಿಕೊಂಡು ಓಡುವ ಮಕ್ಕಳೆಲ್ಲಾ ತೀರಾ ಬಡತನದ ಹಿನ್ನೆಲೆಯಿಂದ ಬಂದವರಾಗಿದ್ದರು. ಅವರೆಲ್ಲಾ ತಮ್ಮ ಮನೆಯ ಭಯಾನಕ ಕಷ್ಟಗಳ ಕಾರಣಕ್ಕೆ ಅನಿವಾರ್ಯವಾಗಿ ಎಲ್ಲಾದರೂ ದುಡಿಯಲೇಬೇಕಾಗಿತ್ತು.  ಅವರೆಲ್ಲಾ ಈಗಾಗಲೇ ಬೇರೆ ಬೇರೆ ಅಂಗಡಿಗಳಲ್ಲಿ ಕೆಲಸಕ್ಕೆ ಸೇರಿದ್ದರು. ಹತ್ತು ಗಂಟೆಗೆ ತಪ್ಪಿಸಿಕೊಂಡು ಹೋದರೆ ಅವರಿಗೆಲ್ಲಾ ಒಂದು ದಿನದ ಪೂರ್ಣ ದುಡಿಮೆ ಸಿಗುತ್ತಿತ್ತು.ಗಾರೆ ಕೆಲಸಕ್ಕೆ, ಪೇಟಿಂಗ್‌ಗೆ, ಬಟ್ಟೆ ಅಂಗಡಿಗೆ, ಹೋಟೆಲ್ ಕೆಲಸಕ್ಕೆ, ಕಿರಾಣಿ ಅಂಗಡಿಯ ಕೆಲಸಕ್ಕೆ, ಗ್ಯಾರೇಜಿಗೆ ಕೆಲಸಕ್ಕೆ ಈಗಾಗಲೇ ಸೇರಿಕೊಂಡ ಪಕ್ಕಾ ಕಾರ್ಮಿಕರು ಅವರಾಗಿದ್ದರು. ಮನೆಯನ್ನು ಸಾಕುವ, ತಾಯಿಯ ಅಪರೇಶನ್‌ಗೆ ಹಣ ಹೊಂದಿಸುವ, ಅಕ್ಕನ ಮದುವೆ ಮಾಡುವ, ಅಪ್ಪ ಮಾಡಿದ ಸಾಲ ತೀರಿಸುವ ದೊಡ್ಡದೊಡ್ಡ ಜವಾಬ್ದಾರಿಗಳು ಅವರ ಮೇಲಿದ್ದವು. ‘ದಯಮಾಡಿ ಬಿಡಿ ಸಾರ್ ನಾವು ಬದುಕಬೇಕು’ ಎಂದು ಅವರು ಕಣ್ಣೀರು ಹಾಕುತ್ತಿದ್ದರು.ಛೇ... ಒಂದು ಕಡೆ ತಿಂದುಂಡು ಶೋಕಿ ಮಾಡುವ, ಕಾರಣವಿಲ್ಲದೆ ಮೋಜಿಗೆ ಚಕ್ಕರ್ ಹೊಡೆಯುವ ಹುಡುಗರು. ಮತ್ತೊಂದು ಕಡೆ ಜೀವನದ ಕಷ್ಟಕ್ಕೆ ಉತ್ತರ ಹುಡುಕಲು ತಪ್ಪಿಸಿಕೊಂಡು ಓಡುವ ಮಕ್ಕಳು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry