ಗುರುವಾರ , ನವೆಂಬರ್ 21, 2019
25 °C

ಚಳ್ಳಕೆರೆಯ `ಹಾರುವ ತಟ್ಟೆ'ಯಲ್ಲಿ ಬೇವು, ಬೆಲ್ಲ

Published:
Updated:

ಮಹಾಗಾತ್ರದ, ಥಳಕು ಬೆಳಕಿನ ಹಾರುವ ತಟ್ಟೆಯೊಂದು ಅನ್ಯಲೋಕದಿಂದ ಬಂತೆಂದು ಊಹಿಸಿಕೊಳ್ಳಿ. ಅದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಂಥ ತೀರ ಹಿಂದುಳಿದ ತಾಲ್ಲೂಕಿನ ಮೇಲೆ ಸುತ್ತುತ್ತದೆ. ಸುತ್ತಿ ಸುತ್ತಿ ಖುದಾಪುರ, ಉಳ್ಳರ್ತಿಯಂಥ ಗ್ರಾಮದ ಪಕ್ಕದ ವಿಶಾಲ ಹುಲ್ಲು ಮೈದಾನದಲ್ಲಿ ಇಳಿಯಲು ಸಿದ್ಧತೆ ನಡೆಸುತ್ತದೆ.ಮಿಂಚು ಹೊಡೆವಂಥ ಪ್ರಖರ ಬೆಳಕು, ಬಿಸಿಝಳ, ಸಿಡಿಲ ಸದ್ದು ಮತ್ತು ವಿಕಿರಣದ ಜಂಝಾನಿಲವನ್ನು ಸೃಷ್ಟಿಸಿ ಹಳ್ಳಿಗರನ್ನು ಕಂಗಾಲು ಮಾಡಿ, ಅಲ್ಲಿ ಮೇಯುತ್ತಿದ್ದ ದನಕುರಿಗಳನ್ನು, ಕೃಷ್ಣಮೃಗಗಳನ್ನು, ಮೊಲ, ಮುಳ್ಳಕ್ಕಿ, ಪ್ಯಾಂಗೊಲಿನ್‌ಗಳನ್ನು, ಕೆರೆಯ ಕೆಸರಿನಲ್ಲಿ ಮೀನಿಗಾಗಿ ಕಾಯುತ್ತಿದ್ದ ಬಕ -ಬಸ್ಟಾರ್ಡ್‌ಗಳನ್ನು ದಿಕ್ಕಾಪಾಲಾಗಿ ಓಡಿಸುತ್ತದೆ. ತಾನು ಇಳಿಯುವ ಮೊದಲೇ 30 ಕಿಲೊಮೀಟರ್ ಸುತ್ತಳತೆಯ ಗೋಡೆಯೊಂದನ್ನು ನೆಲದ ಮೇಲೆ ಬಿಚ್ಚಿ, ಭದ್ರತಾ ಗನ್‌ಧಾರಿಗಳನ್ನು ಇಳಿಸುತ್ತದೆ. ಗೋಡೆಯ ಇತ್ತಿನವರು ಇತ್ತ, ಅತ್ತಿನವರು ಅತ್ತ. ಜೀವಲೋಕ ತತ್ತರ. ಘನತೆವೆತ್ತ ವಿಜ್ಞಾನಿಗಳ ವಲಯದಲ್ಲಿ ಮಾತ್ರ ಹರ್ಷದ ಝೇಂಕಾರ.ಈ ಊಹೆ ಇನ್ನೇನು ವಾಸ್ತವವಾಗುವ ಹಂತದಲ್ಲಿದೆ. `ಸೈನ್ಸ್ ಸಿಟಿ' ಹೆಸರಿನಲ್ಲಿ ಚಳ್ಳಕೆರೆ ತಾಲ್ಲೂಕಿನ ಖುದಾಪುರದ ಬಳಿ ಬೃಹತ್ ವಿಜ್ಞಾನ ನಗರವೊಂದು ತಲೆಯೆತ್ತಲಿದೆ. ಅಲ್ಲಿ ನಾನಾ ಬಗೆಯ ಹೈಟೆಕ್ ಸಂಶೋಧನೆಗಳನ್ನು ನಡೆಸುವ ಅನೇಕ ಕಾಂಪ್ಲೆಕ್ಸ್‌ಗಳು ಸೃಷ್ಟಿಯಾಗಲಿವೆ. ರಕ್ಷಣಾ ಇಲಾಖೆಯವರು ಅಲ್ಲಿ ಚಾಲಕ ರಹಿತ ವಿಮಾನ (ಡ್ರೋನ್)ಗಳ ಪರೀಕ್ಷೆ ನಡೆಸುವ ಸಮುಚ್ಚಯ ನಿರ್ಮಿಸಲೆಂದು 4290 ಎಕರೆ ಸರ್ಕಾರಿ ಭೂಮಿಯನ್ನು ಪಡೆದಿದ್ದಾರೆ.ಪರಮಾಣು ಇಲಾಖೆಯವರು ಅಲ್ಲಿ ಯುರೇನಿಯಂ ಸಾಂದ್ರೀಕರಣ ಘಟಕವನ್ನು ಸ್ಥಾಪಿಸಲೆಂದು 1810 ಎಕರೆ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ಕೈಗಾ ಮತ್ತು ಮೈಸೂರಿನ ರಟ್ಣಹಳ್ಳಿಯನ್ನೂ ಮೀರಿಸಿದ ಪರಮಾಣು ಶೋಧನ ಸಮುಚ್ಚಯವನ್ನು ಭಾಭಾ ಅಟಾಮಿಕ್ ರೀಸರ್ಚ್ ಸೆಂಟರ್‌ನವರು ಅಲ್ಲಿ ಸೃಷ್ಟಿಸಲಿದ್ದಾರೆ. ಸಮೀಪದಲ್ಲೇ ಸಗಿಟಾರ್ ವೆಂಚರ್ಸ್ ಹೆಸರಿನ ಖಾಸಗಿ ಕಂಪೆನಿಯೊಂದು ಕರ್ನಾಟಕದಲ್ಲೇ ಅತಿ ದೊಡ್ಡದೆನಿಸುವ 1250 ಎಕರೆಯಲ್ಲಿ ಸೌರ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಆರಂಭಿಸಲಿದೆ. ಬಿಸಿಲನ್ನು ಹೀರಿಕೊಂಡು ಅದು ಮೊದಲ ಹಂತದಲ್ಲಿ 25 ಮೆಗಾವಾಟ್ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲಿದೆ.ಪಟ್ಟಿ ಇಷ್ಟಕ್ಕೇ ಮುಗಿದಿಲ್ಲ. `ಇಸ್ರೊ'  ಬಾಹ್ಯಾಕಾಶ ಸಂಸ್ಥೆ ಅಲ್ಲೇ 573 ಎಕರೆಯ ಯಜಮಾನಿಕೆ ಪಡೆದಿದ್ದು ಅಲ್ಲಿ ವಿವಿಧ ವಿನ್ಯಾಸಗಳ ಬಾಹ್ಯಾಕಾಶ ನೌಕೆಗಳನ್ನು ಪರೀಕ್ಷಿಸಲಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯೂ ಅಲ್ಲಿನ 1500 ಎಕರೆ ವಿಸ್ತೀರ್ಣದಲ್ಲಿ ಇನ್ನೊಂದು ಕ್ಯಾಂಪಸ್ಸನ್ನು ಸೃಷ್ಟಿ ಮಾಡಲಿದೆ. ಅದು ಅಲ್ಲಿ `ಸಿಂಕ್ರೊಟ್ರಾನ್' ಎಂಬ ವೃತ್ತಾಕಾರದ ಯಂತ್ರಸ್ಥಾವರದಲ್ಲಿ ಪರಮಾಣುಗಳನ್ನು ಒಡೆದು ಮರಿಕಣಗಳನ್ನು ವೇಗವಾಗಿ ಸುತ್ತಿಸಿ ನಾನಾ ಪ್ರಯೋಗಗಳನ್ನು ನಡೆಸುವ ಯೋಜನೆಯಿದೆ.ಈ ಎಲ್ಲ ಪ್ರತಿಷ್ಠಿತ ಸಂಸ್ಥೆಗಳಿಗೆ ಬೇಕಾದ ಹತಾರಗಳನ್ನು ಪೂರೈಸಬಲ್ಲ ಚಿಕ್ಕ ಚಿಕ್ಕ ಘಟಕಗಳನ್ನು ಆರಂಭಿಸಲೆಂದು ಕರ್ನಾಟಕ ಚಿಕ್ಕ ಉದ್ಯಮ ಅಭಿವೃದ್ಧಿ ನಿಗಮ ಕೂಡ 250 ಎಕರೆ ಸ್ಥಳವನ್ನು ಪಡೆದಿದೆ. ಈ ಸಂಸ್ಥೆಗಳೆಲ್ಲ ತಂತಮ್ಮ ಕಚೇರಿ, ಸಭಾಂಗಣ, ಕಾರ್ಖಾನೆ, ಹ್ಯಾಂಗರ್, ಪ್ರಯೋಗಶಾಲೆ, ಸೂಪರ್ ಕಂಪ್ಯೂಟರ್, ಸಿಬ್ಬಂದಿಯ ವಸತಿಗೃಹಗಳನ್ನು ನಿರ್ಮಿಸಿಕೊಳ್ಳುತ್ತವಾದರೂ ಬ್ಯಾಂಕು, ಟೆಲಿಸಂಪರ್ಕ, ಸಂಚಾರ ವ್ಯವಸ್ಥೆ, ನೀರು ಪೂರೈಕೆ, ಶಿಕ್ಷಣ, ಮಾರುಕಟ್ಟೆ, ಮನರಂಜನೆಯೇ ಮುಂತಾದ ಹತ್ತಾರು ವೃತ್ತಿಪರ ಸೇವೆಗಳಿಗೆಂದೇ ಬೇರೊಂದು ಪಟ್ಟಣವೂ ಸೃಷ್ಟಿಯಾಗಲಿದೆ. ಅದಕ್ಕೆಂದು ಗೃಹಮಂಡಲಿ ತನಗೂ 50 ಎಕರೆ ಸ್ಥಳವನ್ನು ಪಡೆದಿದೆ. ಅದರ ಸುತ್ತ ವಿಲಾಸಿ ವಿಲ್ಲಾಗಳು, ಪ್ರವಾಸೀ ತಾಣಗಳು, ಧ್ಯಾನ ಮಂದಿರಗಳು, ಪಂಚತಾರಾ ಕಾಂಕ್ಲೇವ್‌ಗಳು, ಕಲಾಗ್ರಾಮಗಳು ಬಂದರೂ ಬರಬಹುದು.ಬೆಂಗಳೂರಿನಲ್ಲೂ ಇಲ್ಲದಂಥ ಹೈಟೆಕ್ ಮಾಯಾ ಲೋಕವೊಂದು ಚಳ್ಳಕೆರೆಯಂಥ ತೀರ ಹಿಂದುಳಿದ ಶುಷ್ಕ ಪ್ರದೇಶದಲ್ಲಿ ಸೃಷ್ಟಿಯಾಗಿ ಅಲ್ಲಿ ಡ್ರೋನ್‌ಗಳು, ಸೆಂಟ್ರಿಫ್ಯೂಜ್‌ಗಳು, ಸ್ಯಾಟೆಲೈಟ್‌ಗಳು ಹಾರುವುದಾದರೆ ಅದು ಅನ್ಯಲೋಕದಿಂದ ಬಂದಿಳಿಯುವ ` ಹಾರುವ ತಟ್ಟೆ' ಪರಿಕಲ್ಪನೆಗೆ ಸರಿ ಹೊಂದುತ್ತದೆ ತಾನೆ? ವಿಜ್ಞಾನ- ತಂತ್ರಜ್ಞಾನ ರಂಗದಲ್ಲಿ ದೇಶದ ಬಜೆಟ್‌ನಲ್ಲಿ ಅತಿ ದೊಡ್ಡ ಪಾಲು ಪಡೆಯುತ್ತಿರುವ ಐದು ಪ್ರಮುಖ ಸಂಶೋಧನ ಸಂಸ್ಥೆಗಳೆಲ್ಲ ಹೀಗೆ ಒಂದೇ ಕಡೆ ಬಂದರೆ  ವಿದೇಶೀ ಗಣ್ಯರೆಲ್ಲ ನೋಡಲೇಬೇಕಾದ ಭಾರತದ ಹೆಮ್ಮೆಯ `ಶೋ ಕೇಸ್'  ಎನ್ನಿಸಬಹುದು.ಸದ್ಯಕ್ಕೇನೊ ಬರ ಪೀಡಿತ ಪ್ರದೇಶದಂತಿರುವ ಈ ತಾಣದಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ ಬಂಡವಾಳದ ಸುರಿಮಳೆಯಾದಾಗ ಅದೇ ಮುಂದೆ ನೊಬೆಲ್ ಪದಕಗಳ ಬರ ನೀಗಿಸಬಹುದಾದ ಚಿಲುಮೆಯಾಗಿ ರೂಪುಗೊಳ್ಳಬಹುದು. ಭವಿಷ್ಯದ ಭವ್ಯ ಭಾರತದ ಟೆಕ್ನೊಶಿಲ್ಪಿಗಳ ನಾಭಿಕೇಂದ್ರ ಇದಾಗಬಹುದು. ದೊರಗಿನ ಕಂಬಳಿಗಳ ನೇಯ್ಗೆಗೆ ಹೆಸರಾದ ಚಳ್ಳಕೆರೆ ಬಳಿ ವೈಭವದ ರತ್ನಗಂಬಳಿ ಹಾಸೀತು.  `ಖುದಾಪುರ'  ಎಂಬುದು ತನ್ನ ಹೆಸರಿಗೆ ತಕ್ಕಂತೆ ದೇವನಗರಿಯೇ ಆದೀತು.ಆದರೆ ನಿಲ್ಲಿ, ಕನಸುಗಳಿಗೆ ತುಸು ನೀರು ಚಿಮುಕಿಸಿಕೊಳ್ಳಿ. ಇಲ್ಲಿ ಕೆಲವು ಸಮಸ್ಯೆಗಳಿವೆ. ತುಸು ಗಂಭೀರ ಎನ್ನಬಹುದಾದ ಎಡವಟ್ಟುಗಳು ಆರಂಭದಲ್ಲೇ ಘಟಿಸಿವೆ. ಭೂಮಿಯನ್ನು ಆಯಾ ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿದೆ ನಿಜ. ತುದಿ ಮೊದಲಿಲ್ಲದಂತೆ ಕಾಣುವ ಗೋಡೆಯೂ ಎದ್ದು ಸುಭದ್ರ ಕಾವಲು ಹಾಕಲಾಗಿದೆ. ಗೂಗಲ್‌ನಲ್ಲಿ `ಚಳ್ಳಕೆರೆ' ಎಂದು ಟಂಕಿಸಿದರೆ ಮೊದಲ ಎಂಟ್ರಿಯಲ್ಲೇ  `ಕರ್ನಾಟಕದ ಭವಿಷ್ಯದ ವಿಜ್ಞಾನ ನಗರಿ ಎಂಬ ಖ್ಯಾತಿ ಪಡೆದ ಊರು' ಎಂದು ನಕ್ಷೆಯ ಸಮೇತ ಮೂಡುತ್ತದೆ.ಅವೆಲ್ಲ ನಿಜ. ಆದರೆ ಭೂಮಿಯನ್ನು ಹಸ್ತಾಂತರ ಮಾಡುವಲ್ಲಿ ಕೆಲವು ಲೋಪಗಳಾಗಿವೆ. ಪರಿಸರದ ದೃಷ್ಟಿಯಿಂದ ಸೂಕ್ಷ್ಮ ತಾಣವೆನಿಸಿದ ಈ ಪ್ರದೇಶದ ಜೀವಜಾಲವನ್ನು ಕಡೆಗಣಿಸಲಾಗಿದೆ. ಮೂಲ ಸೌಲಭ್ಯಗಳಲ್ಲಿ ಎಲ್ಲಕ್ಕಿಂತ ಮುಖ್ಯವೆನಿಸಿದ ನೀರೇ ಇಲ್ಲಿ ಮರೀಚಿಕೆಯಾಗಿದೆ.ಚಳ್ಳಕೆರೆಯ `ಅಮೃತಮಹಲ್ ಕಾವಲು' ಪ್ರದೇಶದಲ್ಲಿ ಈ ಸೈನ್ಸ್ ಸಿಟಿ ತಲೆಯೆತ್ತಲಿದೆ. ಇಲ್ಲಿ ದಟ್ಟ ಅರಣ್ಯ ಇಲ್ಲವಾದರೂ ಈ  `ಕಾವಲು'ಗಳು ಜೀವಜಾಲ ಸಂರಕ್ಷಣೆಯ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮವೆನಿಸಿವೆ. ಮೈಸೂರು ಮಹಾರಾಜರ ಆಡಳಿತದಲ್ಲಿ ಹಾಲು ಮೇವಿಗೆಂದೇ ನಾಲ್ಕು ಲಕ್ಷ ಎಕರೆ ಭೂಮಿಯನ್ನು (ಇಂದಿನ) ಐದು ಜಿಲ್ಲೆಗಳಲ್ಲಿ ಮೀಸಲಿಡಲಾಗಿತ್ತು. ಕೇವಲ ದನಕರುಗಳಷ್ಟೇ ಅಲ್ಲ, ಬಯಲು ಸೀಮೆಯ ಜೀವಸಂಕುಲಗಳ ಉಳಿವಿನ ದೃಷ್ಟಿಯಿಂದ ಮಹತ್ವದ್ದೆನಿಸಿದ ಇಷ್ಟು ವಿಶಾಲ ಸಂರಕ್ಷಿತ ಹುಲ್ಲುಗಾವಲು ದೇಶದಲ್ಲಿ ಬೇರೆಲ್ಲೂ ಇರಲಿಲ್ಲ.ಆದರೆ ಈಚಿನ ವರ್ಷಗಳಲ್ಲಿ ನಾನಾ ಕಾರಣಗಳಿಂದ ಈ ಕಾವಲುಗಳು ಅಭಿವೃದ್ಧಿಯ ಹೆಸರಿನಲ್ಲಿ ಭಗ್ನಗೊಂಡು, ಇಲ್ಲವೆ ಅತಿಕ್ರಮಣಗೊಂಡು ಶೇಕಡಾ 90 ಪಾಲು ಅಳಿಸಿಹೋಗಿ ಈಗ ಬರೀ 45 ಸಾವಿರ ಎಕರೆ ಉಳಿದಿದೆ. ಅದನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂದು ಅರಣ್ಯ ಇಲಾಖೆಗೆ ಅದನ್ನು ಒಪ್ಪಿಸಿ  `ಜಿಲ್ಲಾ ಅರಣ್ಯ' ಎಂದು ಘೋಷಿಸಿಯಾರೂ ಅದನ್ನು ಅತಿಕ್ರಮಿಸದಂತೆ 2002ರಲ್ಲಿ ನ್ಯಾಯಾಂಗದ ಭದ್ರತೆ ಒದಗಿಸಲಾಗಿದೆ.ಚಳ್ಳಕೆರೆ ಸುತ್ತಲಿನ ಈ ಕಾವಲಿನಲ್ಲಿ ಕೃಷ್ಣಮೃಗಗಳು ವಿಹರಿಸುತ್ತಿವೆ. ಏಷ್ಯದಲ್ಲೇ ತೀರ ಅಪರೂಪವೆನಿಸಿದ ಗ್ರೇಟ್ ಇಂಡಿಯನ್ ಬಸ್ಟಾರ್ಡ್ ಹಾಗೂ ಲೆಸ್ಸರ್ ಫ್ರೋರಿಕನ್ ಪಕ್ಷಿಗಳು ಇಲ್ಲಿನ ಹುಲ್ಲುಗಾವಲೇ ಕೊನೆಯ ಆಸರೆಯೆಂಬಂತೆ ಬದುಕುತ್ತಿವೆ. ಅಮೃತ ಮಹಲ್ ತಳಿಯ ಹಸು ಮತ್ತು ಹೋರಿ ಸಂತತಿಗಳು ಈ ಕಾವಲಿನಿಂದಾಗಿಯೇ ತಮ್ಮ ತಳಿಶುದ್ಧತೆಯನ್ನು ಉಳಿಸಿಕೊಂಡಿವೆ. ಇಲ್ಲೇ ವಿಜ್ಞಾನ ನಗರಿಯ ನಿರ್ಮಾಣಕ್ಕೆಂದು 10 ಸಾವಿರ ಎಕರೆಯನ್ನು ಬಿಟ್ಟುಕೊಡುವಾಗ ಕರ್ನಾಟಕ ಸರಕಾರ ಇವನ್ನೆಲ್ಲ ಕಡೆಗಣಿಸಿದ್ದು ಹೇಗೆ? ತನ್ನದೇ ಕಾನೂನುಗಳನ್ನು ಬದಿಗೊತ್ತಿದ್ದು ಹೇಗೆ? ಇಂಥ ಪ್ರತಿಷ್ಠಿತ ಸಂಶೋಧನ ಸಂಕೀರ್ಣಕ್ಕೆ ಬೇಕಾಗುವ ಅಪಾರ ಪ್ರಮಾಣದ ನೀರಿಗಾಗಿ ವಾಣಿವಿಲಾಸ ಸಾಗರದಿಂದಲೊ, ತುಂಗಭದ್ರಾ ಕಾಲುವೆಗಳಿಂದಲೊ ಅಥವಾ ಪಾತಾಳದಿಂದಲೊ ನೀರನ್ನು ಎತ್ತಿದರೆ ಆಸುಪಾಸಿನ ರೈತರ ಸ್ಥಿತಿಗತಿ ಸರ್ಕಾರದ ಅರಿವಿಗೆ ಬಂದಿಲ್ಲ ಹೇಗೆ?ಇಂಥ ದೊಡ್ಡ ಯೋಜನೆ ಆರಂಭಿಸುವ ಮುನ್ನ ಕಾನೂನು ಪ್ರಕಾರ `ಪರಿಸರ ಪರಿಣಾಮ ವರದಿ' ಸಿದ್ಧವಾಗಬೇಕಿತ್ತು. ಸುತ್ತಲಿನ ಜನರೊಂದಿಗೆ ಚರ್ಚಿಸಿ, ಸಾರ್ವಜನಿಕ ಆಕ್ಷೇಪಣೆಗಳಿದ್ದರೆ ದಾಖಲಿಸಬೇಕಾಗಿತ್ತು. ಏನೂ ಮಾಡಿಲ್ಲ. ಯುರೇನಿಯಂ ಸಾಂದ್ರೀಕರಣ ಘಟಕದ ಘಾತುಕ ಪರಿಣಾಮಗಳಿಗೆ ಗಡಿಗೋಡೆ ಎಂಬುದಿಲ್ಲ.ಗಾಳಿ, ನೀರು, ಅಂತರ್ಜಲದ ಮೂಲಕ ತ್ಯಾಜ್ಯದ್ರವ್ಯಗಳು ಎತ್ತ ಬೇಕಾದರೂ ಸಾಗಬಹುದು. ಡ್ರೋನ್‌ಗಳ ಪರೀಕ್ಷಾರ್ಥ ಹಾರಾಟವಾಗಲಿ, ಎಷ್ಟೆಷ್ಟೊ ಬಗೆಯ ಲೋಹ ಮತ್ತು ಇಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ಸೃಷ್ಟಿಸಬಹುದಾದ ಇಸ್ರೊ ಉಪಗ್ರಹ ಕೇಂದ್ರವಾಗಲೀ ದೇಶದ ಗೌರವವನ್ನು ಅದೆಷ್ಟೇ ಎತ್ತರಕ್ಕೆ ಕೊಂಡೊಯ್ಯುವಂತಿದ್ದರೂ ಈ ಜೀವಜಾಲವನ್ನೇ ನಂಬಿದ ಪ್ರಜೆಗಳ ಹಾಗೂ ಜೀವಜಂತುಗಳ ಹಿತಾಸಕ್ತಿಗಳನ್ನು ಮಣ್ಣುಪಾಲು ಮಾಡುವಂತಿಲ್ಲ.ಸ್ಥಳೀಯರಿಗೆ ತಿಳಿಸದೇ ಧುತ್ತೆಂದು ಗೋಡೆ ಕಟ್ಟಿಕೊಂಡು ಪರೀಕ್ಷೆ ಆರಂಭಿಸುವಂತಿಲ್ಲ. ನೆಲದ ಕಾನೂನುಗಳನ್ನು ಮೂಲೆಗೊತ್ತಿ ಹೇಗೆ ಇವಕ್ಕೆಲ್ಲ ಅನುಮತಿ ಕೊಟ್ಟಿರೆಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ ಎರಡು ವರ್ಷಗಳಿಂದ ವಿವಿಧ ಸರ್ಕಾರಿ ಇಲಾಖೆಗಳಿಗೆ ಪತ್ರ ಬರೆದರೂ ಯಾವ ಅಧಿಕಾರಿಯೂ ಉತ್ತರಿಸುವ ಗೋಜಿಗೆ ಹೋಗಲಿಲ್ಲ.ಬೆಂಗಳೂರಿನ  `ಪರಿಸರ ಬೆಂಬಲ ತಂಡ'  (ಇಎಸ್‌ಜಿ) ಹೆಸರಿನ ನಾಗರಿಕ ಸಂಸ್ಥೆಯೊಂದು ಇಂಥ ಅಕ್ರಮಗಳನ್ನೆಲ್ಲ ಪ್ರಶ್ನಿಸಿ `ರಾಷ್ಟ್ರೀಯ ಹಸಿರು ನ್ಯಾಯಮಂಡಲಿ'ಗೆ ಅಹವಾಲು ಸಲ್ಲಿಸಿದೆ. ವಿಷಯ ಗಂಭೀರದ್ದೆಂದು ಪರಿಗಣಿಸಿದ ನ್ಯಾಯಮಂಡಲಿ, ವಸ್ತುಸ್ಥಿತಿ ಪರೀಕ್ಷೆಗೆಂದು ತಜ್ಞರ ನಿಯೋಗವೊಂದನ್ನು ಚಳ್ಳಕೆರೆಗೆ ಕಳುಹಿಸಿದೆ; ಕಾನೂನುಗಳನ್ನೆಲ್ಲ ಧಿಕ್ಕರಿಸಲು ಕಾರಣವೇನೆಂದು ಸ್ಪಷ್ಟೀಕರಣ ನೀಡಲು ಕರ್ನಾಟಕ ಸರ್ಕಾರಕ್ಕೆ ಹಾಗೂ ದಿಲ್ಲಿಯ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಏಪ್ರಿಲ್ 15ರ ಅಂತಿಮ ಗಡುವು ನೀಡಿದೆ. ವಿಜ್ಞಾನ ನಗರಿ ಅಸ್ತಿತ್ವಕ್ಕೆ ಬರಬರುತ್ತಲೇ ವಿವಾದದ ನಗಾರಿ ಬಾರಿಸಿದೆ.ವಿಜ್ಞಾನ-ತಂತ್ರಜ್ಞಾನ, ರಕ್ಷಣಾ ವಿಚಾರಗಳಲ್ಲಿ ಭಾರತ ಮುಂಚೂಣಿಯಲ್ಲಿರಬೇಕು; ಅಂಥ ಸಂಶೋಧನೆಗಳಲ್ಲಿ ಭಾರತೀಯರೇ ಮುಂದಿರಬೇಕು. ಅದಕ್ಕೆ ಬೇಕಿದ್ದ ತಾಂತ್ರಿಕ ಸಂಸ್ಥೆಗಳು ಬೆಂಗಳೂರಿನಂಥ ದಟ್ಟ ಜನವಸತಿಯಿಂದ ದೂರವಾಗಿರಬೇಕು.ವಿಜ್ಞಾನಿಗಳ ಏಕಾಗ್ರತೆಗೆ, ಸೌಲಭ್ಯಗಳಿಗೆ, ಸಹಸ್ಪಂದನಕ್ಕೆ ಎಂದೂ ಅಡಚಣೆ ಉಂಟಾಗದಂತೆ ಅವರದೇ ಒಂದು ನಗರವಿರಬೇಕು -ಅವೆಲ್ಲವೂ ಸರಿ. ಆದರೆ ಅಂಥ ಹೊಸತಾಣವನ್ನು ಸೃಷ್ಟಿಸುವಾಗ ಸ್ಥಳೀಯ ಜೀವಿಗಳ ಬದುಕುವ ಹಕ್ಕುಗಳು ದಮನವಾಗದಂತೆ ನೋಡಿಕೊಳ್ಳಲು ಸಾಧ್ಯವಿಲ್ಲವೆ? ಎಲ್ಲೆಲ್ಲಿಂದಲೊ ನೀರನ್ನು ತಂದು ನಾಳೆ ಅಲ್ಲೊಂದು ಹಸಿರು ದ್ವೀಪವೇ ನಿರ್ಮಾಣವಾದೀತು ಹೌದು. ಆದರೆ ಬಸ್ಟಾರ್ಡ್‌ಗಳು, ಫ್ಲೋರಿಕನ್‌ಗಳು ಅಲ್ಲಿ ಬದುಕಬಲ್ಲವೆ? ಖುದಾಪುರದ ರಂಗಸಜ್ಜಿಕೆಗಳೆಲ್ಲ ಈಗಾಗಲೇ ಅಂತರ್ಜಾಲದಲ್ಲಿ, ಉಪಗ್ರಹ ಚಿತ್ರಗಳಲ್ಲಿ ಪ್ರಪಂಚಕ್ಕೇ ಟಾಮ್‌ಟಾಮ್ ಆಗಿರುವಾಗ, `ರಹಸ್ಯ' ಕಾಪಾಡಲೆಂದು ಸ್ಥಳೀಯರನ್ನು ಮಾತ್ರ ಕತ್ತಲಲ್ಲಿ ಕಂಗಾಲು ಸ್ಥಿತಿಯಲ್ಲಿಟ್ಟಿರುವುದು ಏಕೆ?ಭಾರತ ದೇಶದ ಸಲ್ಲಕ್ಷಣ ಏನೆಂದರೆ, ಎಲ್ಲೇ ಕಾಲಿಟ್ಟರೂ ಅಲ್ಲೊಂದು ವಿಶಿಷ್ಟ ಜೀವಾವಾಸ ನೆಲೆಗೊಂಡಿರುವುದನ್ನು ಕಾಣುತ್ತೇವೆ. ದುರ್ಲಕ್ಷಣ ಏನೆಂದರೆ, ಆಡಳಿತದ ಅಸೀಮ ನಿರ್ಲಕ್ಷ್ಯದಿಂದಾಗಿ ಬಹುಪಾಲು ಸರ್ಕಾರಿ ಭಾರತ ಪರಭಾರೆಯಾಗಿದೆ, ಧ್ವಂಸಗೊಂಡಿದೆ. ಅಳಿದುಳಿದ ಜೀವಿಗಳು ಇದ್ದಬದ್ದ ತುಸ ಇಕ್ಕಟ್ಟಿನಲ್ಲೇ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾಗಿದೆ.ಆ ಇಕ್ಕಟ್ಟಿನಲ್ಲೇ ಹೊಸ ಸರ್ಕಾರಿ ಯೋಜನೆಗಳೂ ಲಗ್ಗೆ ಇಟ್ಟರೆ ಯಾರಲ್ಲಿ ದೂರಬೇಕು? ಯಾರು ದೂರಬೇಕು? ಈಗಿರುವ ಕಾನೂನುಗಳ ಚೌಕಟ್ಟಿನಲ್ಲೇ ವನ್ಯಜೀವ ಸಂತತಿಗಳ ಉಳಿವಿಗಾಗಿ ಅಥವಾ ನಮ್ಮದೇ ಮುಂದಿನ ಪೀಳಿಗೆಯ ಪರವಾಗಿ ವಾದಿಸಲು ಹೋದರೆ  `ಅಭಿವೃದ್ಧಿ ವಿರೋಧಿಗಳು', `ವಿಜ್ಞಾನ ವಿರೋಧಿಗಳು'ಎನ್ನಿಸಿಕೊಳ್ಳಬೇಕಾಗುತ್ತದೆ.ವ್ಯಂಗ್ಯ ಏನು ಗೊತ್ತೆ? ಖುದಾಪುರದ ಸಹಜ ಪರಿಸರವನ್ನು ಹೊಸಕಿ ಹಾಕಿ ಕಟ್ಟಲಾಗುವ ಈ ನಗರಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯವರು ಪರಿಸರ ಸಂರಕ್ಷಣೆ, ಜೀವಸಂಕುಲ ಸಮತೋಲವೇ ಮುಂತಾದ ವಿಷಯ ಕುರಿತ ಸಂಶೋಧನೆಗಳನ್ನೂ ನಡೆಸಲಿದ್ದಾರೆ.

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ಪ್ರತಿಕ್ರಿಯಿಸಿ (+)