ಚಿತ್ರನಗರಿ ಯಾರಿಗೆ?

7

ಚಿತ್ರನಗರಿ ಯಾರಿಗೆ?

ಗಂಗಾಧರ ಮೊದಲಿಯಾರ್
Published:
Updated:

ಚಿತ್ರರಂಗಕ್ಕೆ ಈಗ ಬಂದೆರಗಿರುವುದು ಡಬ್ಬಿಂಗ್ ಭೂತವಲ್ಲ, ಪರಭಾಷಾ ಚಿತ್ರಗಳ ಹಾವಳಿಯಲ್ಲ... ಚಿತ್ರರಂಗಕ್ಕೆಂದೇ ಮೀಸಲಾದ ಬೃಹತ್ ಜಾಗವೊಂದು ಚಿತ್ರರಂಗದ ಕೈ ತಪ್ಪುತ್ತಿರುವುದು.

ಚಿತ್ರರಂಗದಲ್ಲಿ ಒಂದು ತಿಂಗಳಿಂದ ನಡೆಯುತ್ತಿದ್ದ ಕಾದಾಟಗಳಿಗೆಲ್ಲಾ ತೆರೆಬಿದ್ದಿದೆ. ಚಿಂತಿಸಬೇಕಾದ ಮಹತ್ವದ ವಿಷಯಗಳನ್ನು ಬಿಟ್ಟು ಕೆಲವು ಅನವಶ್ಯಕ ವಿವಾದಗಳು ಚಿತ್ರರಂಗದಲ್ಲಿ ಮೆರೆದಾಡಿದವು. ಚಲನಚಿತ್ರ ಪ್ರಶಸ್ತಿಗಳ ವಿಷಯದಲ್ಲಿ ಮಾತ್ರ ಇದುವರೆಗೆ ತಲೆದೋರುತ್ತಿದ್ದ ವಿವಾದ ಈಗ ಸಬ್ಸಿಡಿ ವಿಷಯದ್ಲ್ಲಲಿ ಬೀದಿರಂಪವಾಗಿದೆ.ಭ್ರಷ್ಟಾಚಾರದ ವಿರುದ್ಧ ಅಣ್ಣಾಹಜಾರೆ ಅವರು ದೇಶದಾದ್ಯಂತ ಹೋರಾಟ ನಡೆಸುತ್ತಿರುವ ಸಮಯದಲ್ಲೇ ಸಬ್ಸಿಡಿ ದಯಪಾಲಿಸಲು ಲಂಚ ಪಡೆದ ಸಹಾಯಧನ ಸಮಿತಿ ಸದಸ್ಯರ ಹೆಸರು, ಅವರ ವಿರುದ್ಧ ಆರೋಪ ಬೀದಿಗೆ ಬಿತ್ತು. ಸಬ್ಸಿಡಿ ಸಮಿತಿ ಅಧ್ಯಕ್ಷರ ವಿರುದ್ಧವೂ ಆರೋಪಗಳು ಕೇಳಿಬಂದವು. ಚಿತ್ರರಂಗಕ್ಕೆ ಇದು ಘನತೆ ತರುವ ವಿಷಯವೇ ಅಲ್ಲ. ಸಬ್ಸಿಡಿ ಪಟ್ಟಿಗೆ ಅಂತಿಮವಾಗಿ ಹೈಕೋರ್ಟ್ ತಡೆ ನೀಡುವುದರೊಂದಿಗೆ ಉತ್ಸಾಹಿ ನಿರ್ಮಾಪಕರ ಚಟುವಟಿಕೆಗೆ ಮಂಕು ಬಡಿದಂತಾಯಿತು.ಚಿತ್ರ ಬಿಡುಗಡೆ ವಿವಾದ ಕೂಡ ಪ್ರಹಸನೋಪಾದಿಯಲ್ಲಿ ನಡೆದುಹೋದದ್ದು ವಿಚಿತ್ರ. ಇಂತಹ ಕಿತ್ತಾಟ ಹಿಂದೆ ಎಂದೂ ನಡೆದಿರಲಿಲ್ಲ. `ಅಣ್ಣಾಬಾಂಡ್~ ಚಿತ್ರದ ಬಿಡುಗಡೆಯ ದಿನವೇ `ಕಠಾರಿವೀರ ಸುರಸುಂದರಾಂಗಿ~ ಚಿತ್ರವನ್ನು ಬಿಡುಗಡೆ ಮಾಡಿಯೇ ತೀರುತ್ತೇನೆ ಎಂದು ನಿರ್ಮಾಪಕ ಮುನಿರತ್ನಂ ಹಠ ಹಿಡಿದದ್ದು, ನಂತರದ ಬೆಳವಣಿಗೆ ಎಲ್ಲರಿಗೂ ಗೊತ್ತಿರುವುದೇ.

 

ಈ ನಡುವೆ `ಗಾಡ್‌ಫಾದರ್~ ಚಿತ್ರವೇ ಮೊದಲು ಬಿಡುಗಡೆಯಾಗಬೇಕು ಎಂದು ನಿರ್ಮಾಪಕ ಮಂಜು ವಿವಾದಕ್ಕೆ ಮತ್ತಷ್ಟು ಮಸಾಲೆ ಬೆರೆಸಿದರು. `ಕಠಾರಿವೀರ~ ಕತೆ ನನ್ನದು ಎಂದು ಲೇಖಕರೊಬ್ಬರು ನಡುವೆ ತೂರಿ ಮತ್ತಷ್ಟು ವಿವಾದ ಬೆಳೆಸಿದರು. ಈ ವಿವಾದಗಳು ಒಂದು  ಮಿತಿಯಲ್ಲಿದ್ದರೆ ಎಲ್ಲವೂ ಕುತೂಹಲಕಾರಿಯಾಗಿಯೇ ಇರುತ್ತದೆ.

 

ಆದರೆ ಈ ವಿವಾದ ಎಲ್ಲಿಯವರೆಗೆ ಬೆಳೆಯಿತೆಂದರೆ, ಇದು ಪುಕ್ಕಟೆ ಪ್ರಚಾರಕ್ಕಾಗಿ ನಿರ್ಮಾಪಕರು ಸೇರಿ ನಾಟಕವಾಡುತ್ತಿದ್ದಾರೇನೋ ಎನ್ನುವ ಸಂಶಯ ಜನರಲ್ಲಿ ಮೂಡಲು ಕಾರಣವಾಯಿತು. ಕನ್ನಡ ಟೀವಿ ಚಾನಲ್‌ಗಳು ಇಂತಹ ವಿವಾದಗಳನ್ನು ಇಷ್ಟಪಡುತ್ತವೆ. ಅವುಗಳನ್ನು ಬೆಳೆಸಿ ಗಂಟೆಗಟ್ಟಳೆ ಚರ್ಚೆ ನಡೆಸುತ್ತವೆ.

 

ವಾರಗಟ್ಟಳೆ ಟೀವಿ ಚಾನಲ್‌ಗಳಿಗೆ ಇದು ಆಹಾರವಾಗುತ್ತದೆ. ಬಿಸಿಬಿಸಿ ಬ್ರೇಕಿಂಗ್ ಸುದ್ದಿಗಳಿಗಾಗಿಯೇ ತಹತಹಿಸುವ ಸುದ್ದಿ ವಾಹಿನಿಗಳ ಮನೋಭಾವವನ್ನು ಈ ರೀತಿ ವಿವಾದದ ನಾಟಕ ಸೃಷ್ಟಿಸುವ ಮೂಲಕ ಪ್ರಚಾರತಂತ್ರವಾಗಿ ಬಳಸಿಕೊಂಡರೇನೋ ಎನ್ನುವ ಸಂಶಯ ಅತಿರೇಕದ ವಿವಾದ ಕಂಡಾಗ ಅನಿಸಲಾರಂಭಿಸತೊಡಗಿತು. ಕೆಲವೊಮ್ಮೆ ಅತಿರೇಕದ ಪ್ರಚಾರ, ಅತಿಯಾದ ಕುತೂಹಲಕ್ಕೆ ಕಾರಣವಾಗಿ ಪ್ರೇಕ್ಷಕರನ್ನು ನಿರಾಶೆಯ ಮಡುವಿಗೆ ತಳ್ಳಿದ ಉದಾಹರಣೆಗಳೂ ಇವೆ.ಈ ನಡುವೆ ತೆಲುಗು ಚಿತ್ರ `ದಮ್ಮು~ 170 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಇದುವರೆಗೆ ಇಷ್ಟೊಂದು ಚಿತ್ರಮಂದಿರಗಳಲ್ಲಿ ಪರಭಾಷಾ ಚಿತ್ರ ಬಿಡುಗಡೆಯಾಗುವುದರ ಬಗ್ಗೆ ಆಕ್ಷೇಪ ತೆಗೆಯುತ್ತಿದ್ದವರು ಬಾಯಿ ತೆಗೆಯಲೇ ಇಲ್ಲ. ವಿವಾದದ ನಡುವೆ ಸದ್ದಿಲ್ಲದೆ ಹಣ ಮಾಡಿಕೊಂಡಿತು `ದಮ್ಮು~.ಮತ್ತೆ ಡಬ್ಬಿಂಗ್ ವಿವಾದವನ್ನು ಮುಂದೊಡ್ಡಿ ಚರ್ಚೆ ಆರಂಭಿಸಿರುವುದು ಚಿತ್ರರಂಗದಲ್ಲಿ ಎರಡು ಬಣಗಳ ರಚನೆಗೆ ಕಾರಣವಾಯಿತು. ಈ ವಿವಾದಗಳ ಗೊಂದಲದಿಂದಾಗಿ ಪೈರಸಿ ಕೂಗು ಮರೆಯಾಗಿಯೇ ಇದೆ.ಇಷ್ಟೆಲ್ಲಾ ಒಣ ಪ್ರಚಾರಗಳ ಹಿಂದೆ ಬಿದ್ದು, ಚಿತ್ರರಂಗ ಗಳಿಸಿಕೊಂಡದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು. ಈ ವಿವಾದಗಳ ಗದ್ದಲದ ಭರಾಟೆಯಲ್ಲಿ ರಾಜ್ಯ ಸರ್ಕಾರ ಕೈಗೊಂಡ ನಿರ್ಧಾರವೊಂದು ಚಿತ್ರರಂಗದ ಗಮನಕ್ಕೆ ಬಾರದೆ ಹೋಯಿತು. ಬೆಂಗಳೂರಿನ ಹೆಸರಘಟ್ಟದ 302 ಎಕರೆ ಪ್ರದೇಶದಲ್ಲಿ ಚಿತ್ರನಗರವೊಂದನ್ನು ನಿರ್ಮಿಸುವ ಪ್ರಸ್ತಾವಕ್ಕೆ ರಾಜ್ಯ ಸಚಿವ ಸಂಪುಟ ಅನುಮತಿ ನೀಡಿತು.ಹೆಸರಘಟ್ಟದಲ್ಲಿರುವ 302 ಎಕರೆ ಜಾಗದಲ್ಲಿ ಚಿತ್ರನಗರವನ್ನು ಖಾಸಗಿ ಸಹಭಾಗಿತ್ವದಲ್ಲಿ ನಡೆಸಲು ಸರ್ಕಾರ ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಆಸಕ್ತರಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ. ಅಲ್ಲದೆ ಈ ಪ್ರದೇಶದಲ್ಲಿ ಚಿತ್ರನಗರದ ಜೊತೆಗೆ ಥೀಮ್ ಪಾರ್ಕ್ ಮತ್ತು ಗಾಲ್ಫ್ ರೆಸಾರ್ಟ್ ಕೂಡ ಒಳಗೊಳ್ಳಲಿದೆ. ಜೂನ್‌ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಈ ಸ್ಥಳ `ಪರಭಾರೆ~ ಆಗಲಿದೆ.ಕನ್ನಡ ಚಿತ್ರರಂಗದ ಚಟುವಟಿಕೆಗಳಿಗೆಂದೇ ಮೀಸಲಾಗಿಟ್ಟಿದ್ದ ಹೆಸರಘಟ್ಟದ ಜಾಗವನ್ನು `ಚಿತ್ರನಗರ~ವನ್ನಾಗಿ ಪರಿವರ್ತಿಸಲಾಗುತ್ತದೆ ಎಂದು ರಾಜ್ಯ ಸಂಪುಟ ಸಭೆ ಹೇಳುತ್ತಿರುವುದೇ ಹಾಸ್ಯಾಸ್ಪದವಾಗಿದೆ. 37 ವರ್ಷಗಳ ಹಿಂದೆಯೇ ಈ ಜಾಗವನ್ನು ಚಿತ್ರನಗರಕ್ಕೆಂದೇ ಮೀಸಲಿಡಲಾಗಿದೆ. ಸರ್ಕಾರಕ್ಕೆ ಈ ವಿಷಯ ಗೊತ್ತಿಲ್ಲವೇ? ಈ ಪ್ರದೇಶದಲ್ಲಿ 302 ಎಕರೆಯಲ್ಲಿ ಚಿತ್ರನಗರ ಮೂಡಲಿದೆ ಎನ್ನುವುದೂ ತಪ್ಪು ಮಾಹಿತಿ.ಈ ಪ್ರದೇಶದ 25 ಎಕರೆ ಜಾಗವನ್ನು ಆದರ್ಶ ಫಿಲಂ ಇನ್‌ಸ್ಟಿಟ್ಯೂಟ್‌ಗೆ ನೀಡಲಾಗಿದೆ. ಹತ್ತು ಎಕರೆಯನ್ನು ಕಲಾಗ್ರಾಮಕ್ಕೆ ನೀಡಲಾಗಿದೆ. ಉಳಿದಿರುವುದು 267 ಎಕರೆ ಮಾತ್ರ. ಇಲ್ಲಿ ಗಾಲ್ಫ್ ರೆಸಾರ್ಟ್, ಥೀಮ್ ಪಾರ್ಕ್ ಹಾಗೂ ಚಿತ್ರನಗರ ನಿರ್ಮಿಸುವುದೆಂದರೆ ಇದನ್ನು ರಿಯಲ್ ಎಸ್ಟೇಟ್‌ನವರಿಗೆ ಮಾರುವುದು ಎಂತಲೇ ಅರ್ಥ.ಇನ್ನದು ನಮ್ಮ ಚಿತ್ರರಂಗದವರ ಕೈತಪ್ಪಿತು ಎನ್ನುವುದರಲ್ಲಿ ಯಾವುದೇ ಅನುಮಾನ ಉಳಿಯುವುದಿಲ್ಲ.ಇನೊವೇಟಿವ್ ಫಿಲಂ ಸಿಟಿ ಎನ್ನುವುದೊಂದು ಬೆಂಗಳೂರಿನಲ್ಲಿದೆ. ಚಿತ್ರರಂಗಕ್ಕೂ ಈ ಫಿಲಂಸಿಟಿಗೂ ಏನಾದರೂ ಸಂಬಂಧವಿದೆಯಾ? ಅದೇ ರೀತಿ ಹೆಸರಘಟ್ಟದ ಚಿತ್ರನಗರ ಕೂಡ ಟಿಕೆಟ್ ಕೊಟ್ಟು ಪ್ರವೇಶಿಸಿ, ಮನೋರಂಜನೆ ಪಡೆದು ಹಿಂತಿರುಗುವ ಪ್ರವಾಸಿ ತಾಣವಾಗುವ ಎಲ್ಲ ಮುನ್ಸೂಚನೆಯೂ ಇದೆ.ಚಿತ್ರರಂಗ ತನ್ನ ಕೈಯಳತೆಯಲ್ಲಿರುವ ಜಾಗವನ್ನು ಉದಾಸೀನ ಧೋರಣೆಯಿಂದಾಗಿಯೇ ಕಳೆದುಕೊಳ್ಳುವ ಎಲ್ಲ ಅಪಾಯವೂ ಇದೆ. ಚಿತ್ರರಂಗಕ್ಕೆ ಈಗ ಬಂದೆರಗಿರುವುದು ಡಬ್ಬಿಂಗ್ ಭೂತವಲ್ಲ, ಪರಭಾಷಾ ಚಿತ್ರಗಳ ಹಾವಳಿಯಲ್ಲ, ಯಾವ ಚಿತ್ರ ಮೊದಲು ಬಿಡುಗಡೆಯಾಗಬೇಕು ಎಂಬ ವಿವಾದವಲ್ಲ, ನಟರ ದುಬಾರಿ ಸಂಭಾವನೆಯಲ್ಲ, ಲಂಚ ಕೊಟ್ಟು ಸಬ್ಸಿಡಿ ತೆಗೆದುಕೊಳ್ಳಬೇಕೋ, ಬೇಡವೋ, ತೆಗೆದುಕೊಂಡರೋ, ತೆಗೆದುಕೊಳ್ಳಲಿಲ್ಲವೊ ಎನ್ನುವ ಚರ್ಚೆಯೂ ಅಲ್ಲ.

 

ಚಿತ್ರರಂಗಕ್ಕೆಂದೇ ಮೀಸಲಾದ ಬೃಹತ್ ಜಾಗವೊಂದು ಚಿತ್ರರಂಗದ ಕೈ ತಪ್ಪುತ್ತಿರುವುದು ಇಂದಿನ ಸಂದರ್ಭದಲ್ಲಿ ಮುಖ್ಯವಾದ ವಿಷಯವಾಗಿದೆ. ಇದನ್ನು ಚಿತ್ರರಂಗಕ್ಕೇ ಉಳಿಸಿಕೊಳ್ಳುವ ಹೋರಾಟ ಮಾಡದಿದ್ದರೆ ನಮ್ಮಷ್ಟು ಪೆದ್ದರು ಮತ್ತೊಬ್ಬರು ಸಿಗಲಾರರು.

ಪಶುಸಂಗೋಪನಾ ಇಲಾಖೆಗೆ ಸೇರಿದ ಈ ಪ್ರದೇಶವನ್ನು 37 ವರ್ಷಗಳ ಹಿಂದೆಯೇ ಚಿತ್ರನಗರಕ್ಕೆಂದೇ  ಕಾಯ್ದಿರಿಸಲಾಗಿತ್ತು.ಕರ್ನಾಟಕ ಚಲನಚಿತ್ರ ಅಭಿವೃದ್ಧಿ ನಿಗಮದ ಜೊತೆ ಆಗಿದ್ದ ಒಪ್ಪಂದದ ಪ್ರಕಾರ ಚಿತ್ರನಗರ ಕಾರ್ಯರೂಪಕ್ಕೆ ಬರಲೇ ಇಲ್ಲ. ಚಿತ್ರನಗರಕ್ಕೆ ಸಂಬಂಧಿಸಿದಂತೆ ಹಲವಾರು ಯೋಜನೆಗಳನ್ನು ಚಿತ್ರೋದ್ಯಮಿಗಳು ಸರ್ಕಾರಕ್ಕೆ ಸಲ್ಲಿದಿದ್ದರೂ, ಗುತ್ತಿಗೆ ಅವಧಿಗೆ ಸಂಬಂಧಿಸಿದಂತೆ ಕಠಿಣ ನಿಯಮಾವಳಿಗಳಿಂದಾಗಿ ಯಾವುದೂ ಕೈಗೂಡಲಿಲ್ಲ, ಸರ್ಕಾರವೂ ತನ್ನ ನಿಯಮಾವಳಿಗಳನ್ನು ಸಡಿಲಿಸಲಿಲ್ಲ.ಈ ನಡುವೆ ಈ ಪ್ರದೇಶದ ಗುತ್ತಿಗೆ ಅವಧಿ ಮುಗಿದಿದೆ. ನಿಗದಿತ ಅವಧಿಯಲ್ಲಿ ಭೂಮಿಯನ್ನು ಬಳಸಿಕೊಳ್ಳದಿರುವುದರಿಂದ ಈ ಜಾಗವನ್ನು ಇಲಾಖೆಗೆ ಮರಳಿಸಬೇಕಾಗುತ್ತದೆ. ಈಗಾಗಲೇ ಪಶು ಸಂಗೋಪನಾ ಇಲಾಖೆ ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದು, ಈ ಜಾಗವನ್ನು ವಶಕ್ಕೆ ಪಡೆಯಲು ಉತ್ಸುಕವಾಗಿದೆ.ಮತ್ತೆ ಇದನ್ನು ಮರಳಿ ಪಡೆಯಲು ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ ಎನ್ನುವುದು ಗೊತ್ತಿಲ್ಲ. ಆದರೆ ಈಗ ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ಇದನ್ನು ಅಭಿವೃದ್ಧಿಪಡಿಸುವ ಬಗ್ಗೆ ಹೇಳುತ್ತಿರುವುದನ್ನು ನೋಡಿದರೆ, ಈ ಪ್ರದೇಶ ಚಿತ್ರರಂಗದವರ ಕೈತಪ್ಪಿ ವ್ಯಾಪಾರಿಗಳ ಪಾಲಾಗುವ ಎಲ್ಲ ಲಕ್ಷಣಗಳೂ ಇದೆ. ಚಿತ್ರನಗರಿಯ ಹೆಸರಿನಲ್ಲಿ ಮತ್ತೊಂದು ವಂಡರ್‌ಲಾ, ಇನ್ನೋವೇಟಿವ್ ಫಿಲಂಸಿಟಿಗಳನ್ನು ನೀಡಿದರೆ ಚಿತ್ರರಂಗಕ್ಕೆ ಅದರಿಂದಾಗುವ ಪ್ರಯೋಜನವೇನು?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry