ಬುಧವಾರ, ಮಾರ್ಚ್ 3, 2021
22 °C

ಚಿನ್ನದ ಮೊಟ್ಟೆ ಇಡುವ ಬಿಬಿಎಂಪಿ ಕತ್ತು ಕೊಯ್ಯಬೇಡಿ

ಡಿ. ಮರಳೀಧರ Updated:

ಅಕ್ಷರ ಗಾತ್ರ : | |

ಚಿನ್ನದ ಮೊಟ್ಟೆ ಇಡುವ ಬಿಬಿಎಂಪಿ ಕತ್ತು ಕೊಯ್ಯಬೇಡಿ

ಮೊನ್ನೆಯಷ್ಟೇ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಪ್ರಸಕ್ತ ಹಣಕಾಸು ವರ್ಷದ ಬಜೆಟ್ ಮಂಡನೆ ಮಾಡಲಾಗಿದೆ. ಪಾಲಿಕೆಯಲ್ಲಿ ಆ ಬಗ್ಗೆ ಸಾಕಷ್ಟು ಚರ್ಚೆಯೂ ನಡೆಯುತ್ತಿರುವುದರಿಂದ, ರಾಜಧಾನಿ ಬೆಂಗಳೂರಿನ ಖ್ಯಾತಿ, ನಗರದ ಮೂಲ ಸೌಕರ್ಯಗಳ ಇತಿಮಿತಿ ಮತ್ತು ರಾಜ್ಯ ಸರ್ಕಾರದ ಹೊಣೆಗಾರಿಕೆ  ಬಗ್ಗೆ ಬರೆಯಲು ನಾನು  ಈ ಬಾರಿ  ಇಷ್ಟಪಟ್ಟಿರುವೆ.ಬೆಂಗಳೂರು ನಗರವು `ರಾಜ್ಯದ ಒಟ್ಟು ಆಂತರಿಕ ಉತ್ಪನ್ನ~ಕ್ಕೆ (ಜಿಎಸ್‌ಡಿಪಿ) ಶೇ 50ರಷ್ಟಕ್ಕೂ ಹೆಚ್ಚು ಕೊಡುಗೆ ನೀಡುತ್ತದೆ. ಆರ್ಥಿಕ ಬೆಳವಣಿಗೆಯಲ್ಲಿ ಬೆಂಗಳೂರು ಎರಡು ದಶಕಗಳಿಂದಲೂ ಮುಂಚೂಣಿಯಲ್ಲಿಯೂ ಇದೆ. ಇತ್ತೀಚಿನ ವರ್ಷಗಳಲ್ಲಿ ಅಗಾಧ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿರುವ ವಿಶ್ವದ 10 ಮೊದಲ ಸಾಲಿನ ನಗರಗಳಲ್ಲಿಯೂ ಒಂದಾಗಿದೆ.

 

ನಗರದ `ಜ್ಞಾನ ಆಧಾರಿತ~ (ಐ.ಟಿ) ಉದ್ಯಮ ವಲಯ ಮತ್ತು ಇತರ ಎಲ್ಲ ವಲಯಗಳಲ್ಲಿನ ಎಲ್ಲರಿಗೂ ಅನುಭವವೇದ್ಯವಾದ ಬೆಳವಣಿಗೆಯ ಕಾರಣಕ್ಕೆ ಬೆಂಗಳೂರು ಇಡೀ ವಿಶ್ವದ ಗಮನ ಸೆಳೆಯುತ್ತಿದೆ.ಹಲವಾರು ಕಾರಣಗಳಿಗೆ ವಿಶ್ವದಾದ್ಯಂತ ಸುದ್ದಿ ಮಾಡಿರುವ, ವಿಶ್ವದ ಪ್ರಮುಖ ನಗರಗಳಲ್ಲಿ ತನ್ನದೇ ಆದ ಸ್ಥಾನಮಾನ ಹೊಂದಿರುವ ಬೆಂಗಳೂರು, ಅಭಿವೃದ್ಧಿ, ನಾಗರಿಕ ಮೂಲ ಸೌಕರ್ಯಗಳ ವಿಷಯದಲ್ಲಿ ಮಾತ್ರ ರಾಜ್ಯ ಸರ್ಕಾರದಿಂದ ಉದ್ದಕ್ಕೂ ಅನಾದರಕ್ಕೆ ಒಳಗಾಗುತ್ತಲೇ ಬಂದಿದೆ.ನಗರದ ನಾಗರಿಕ ಸೌಲಭ್ಯಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿಸುತ್ತ ಬಂದಿರುವ ಸರ್ಕಾರವು, ನಗರದ ಬದುಕನ್ನು ನರಕ ಸದೃಶಗೊಳಿಸುತ್ತಿದೆಯೇ ಎನ್ನುವ ಅನುಮಾನವನ್ನೂ ಮೂಡಿಸುತ್ತದೆ.`ಬಿಬಿಎಂಪಿ~ ಮಂಡಿಸಿದ 2012-13ನೇ ಹಣಕಾಸು ವರ್ಷದ ಬಜೆಟ್ ಮೇಲೆ ಕಣ್ಣಾಡಿಸಿದರೆ, ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳು ನಗರದ ಮೂಲ ಸೌಕರ್ಯಗಳ ಬಗ್ಗೆ ಅದೆಷ್ಟು ನಿರ್ದಯತೆಯಿಂದ ವರ್ತಿಸುತ್ತಿದ್ದಾರೆ ಎನ್ನುವುದು ಇದರಿಂದ ವೇದ್ಯವಾಗುತ್ತದೆ.ಮೂರು ತಿಂಗಳಿಗಿಂತ ಹೆಚ್ಚು ತಡವಾಗಿ ಬಜೆಟ್ ಮಂಡಿಸಿರುವುದು ಪುರಸಭೆ ಕಾಯ್ದೆಗೆ ವಿರುದ್ಧವಾಗಿರುವುದು ಮತ್ತು  ಬಜೆಟ್ ಬಗ್ಗೆ ಪಾಲಿಕೆಯ ಆಡಳಿತವು ಗಂಭೀರ ಧೋರಣೆ ತಳೆಯದಿರುವುದೂ ಇದರಿಂದ ಕಂಡು ಬರುತ್ತದೆ.2012-13ನೇ ಹಣಕಾಸು ವರ್ಷದಲ್ಲಿ ರೂ 9288 ಕೋಟಿಗಳಷ್ಟು ವರಮಾನ ಹರಿದು ಬರಲಿದೆ ಎಂದು ನಿರೀಕ್ಷಿಸಲಾಗಿದೆ. 2011-12ನೇ ಸಾಲಿನಲ್ಲಿ ಪಾಲಿಕೆಗೆ ವಾಸ್ತವದಲ್ಲಿ ಹರಿದು ಬಂದ ವರಮಾನದ ಮೊತ್ತವು ಕೇವಲ ರೂ 3,934 ಕೋಟಿಗಳಷ್ಟು ಮಾತ್ರ ಇದೆ.

 

ವಸ್ತುಸ್ಥಿತಿ ಹೀಗಿರುವಾಗ,  ಇಂತಹ ದೋಷಪೂರಿತ ಹೇಳಿಕೆ ನೀಡುವುದು ಲಜ್ಜಾಸ್ಪದವೇ ಸೈ. ಅತಿಶಯೋಕ್ತಿಯಿಂದ ಕೂಡಿರುವ ಸುಳ್ಳು ಹೇಳುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.ಮುಂಬರುವ 9 ತಿಂಗಳಲ್ಲಿ ರೂ 9,498 ಕೋಟಿಗಳನ್ನು ವೆಚ್ಚ ಮಾಡಲಾಗುವುದು ಎಂದೂ ಬಜೆಟ್‌ನಲ್ಲಿ ಹೇಳಿಕೊಳ್ಳಲಾಗಿದೆ. ಹಿಂದಿನ ವರ್ಷ (2011-12) ವಾಸ್ತವವಾಗಿ ಮಾಡಿರುವ ವೆಚ್ಚ ರೂ 3,809 ಕೋಟಿಗಳಷ್ಟು ಮಾತ್ರ ಇದೆ.ಹೋದ ವರ್ಷ ಮಹಾನಗರ ಪಾಲಿಕೆಯು ವೆಚ್ಚ ಮಾಡಿರುವ ವಿವರಗಳು `ಬಿಬಿಎಂಪಿ~ಯ ಅಂತರಜಾಲ ತಾಣದಲ್ಲಿಯೂ ದೊರೆಯುವುದಿಲ್ಲ, ಜತೆಗೆ ವಿವರಗಳನ್ನು ತಿಳಿದುಕೊಳ್ಳುವುದು ಕೂಡ ತುಂಬ ಸಂಕೀರ್ಣಮಯವೂ ಆಗಿದೆ.

 

ಇನ್ನೂ ಕಾರ್ಯಗತಗೊಳ್ಳದ ಯೋಜನೆಗಳ ವಿವರ ಹಾಗೂ ಸಾಂಸ್ಥಿಕ ಮತ್ತು ವರಮಾನ ವೆಚ್ಚಗಳನ್ನು ಆಧರಿಸಿ  ಹೇಳುವುದಾದರೆ, ಸಣ್ಣ ಪುಟ್ಟ ಯೋಜನೆಗಳನ್ನಷ್ಟೇ ಕಾರ್ಯಗತಗೊಳಿಸಿರುವುದು ಕಂಡು ಬರುತ್ತದೆ.  ಈ ವರ್ಷದ ಬಜೆಟ್‌ನಲ್ಲಿ ಉಲ್ಲೇಖಿಸಿರುವ ಯೋಜನೆಗಳೆಲ್ಲ ಹೊಸದೇನಲ್ಲ. ಹಿಂದಿನ ವರ್ಷಗಳ ಯೋಜನೆಗಳನ್ನೇ ಮುಂದುವರೆಸಲಾಗಿದೆ.800 ಚದರ ಕಿ.ಮೀಗಳಷ್ಟು ವಿಶಾಲ ಭೂ ಪ್ರದೇಶದಲ್ಲಿನ ನಾಗರಿಕ ಸೌಲಭ್ಯಗಳನ್ನು ನಿಭಾಯಿಸುವ ಗುರುತರ ಹೊಣೆಗಾರಿಕೆಯನ್ನು, ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯ `ಬಿಬಿಎಂಪಿ~ಗೆ ಇದೆಯೇ ಎನ್ನುವ ಪ್ರಶ್ನೆಯೂ ನನ್ನನ್ನು ನಿರಂತರವಾಗಿ ಕಾಡುತ್ತಲೇ ಇದೆ. ಕೆಲವೇ ವರ್ಷಗಳ ಹಿಂದೆ `ಬಿಬಿಎಂಪಿ~ಯು 200 ಚದರ ಕಿ. ಮೀ ಭೂಪ್ರದೇಶವನ್ನಷ್ಟೇ ನಿರ್ವಹಿಸುತ್ತಿತ್ತು. ಈಗ ಹಠಾತ್ತಾಗಿ ಅದರ ಹೊರೆ ನಾಲ್ಕು ಪಟ್ಟುಗಳಷ್ಟು ಹೆಚ್ಚಾಗಿದೆ.ತನ್ನ ಸೇವೆಗಳ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡ ಪ್ರದೇಶಗಳಿಗೆಲ್ಲ `ಬಿಬಿಎಂಪಿ~ ದಕ್ಷತೆಯಿಂದ ಸೇವೆ ನೀಡಲು ಸಾಧ್ಯವೇ ಎನ್ನುವ ಅನುಮಾನವೂ ಇಲ್ಲಿ ಉದ್ಭವಿಸುತ್ತದೆ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಹಲವಾರು ದೊಡ್ಡ ಮೊತ್ತದ ಯೋಜನೆಗಳೆಲ್ಲ ಬರೀ  ಕಾಗದದ ಮೇಲೆಯೇ ಇವೆ. ವಾಹನಗಳ ದಟ್ಟಣೆ ತಗ್ಗಿಸುವ `ಸಿಗ್ನಲ್ ಮುಕ್ತ~ ಮುಖ್ಯಮಾರ್ಗಗಳ (ಕಾರಿಡಾರ್) ನಿರ್ಮಾಣ ಯೋಜನೆಗಳಿಗೆ ಇದುವರೆಗೂ ಮುಕ್ತಿ ದೊರೆತಿಲ್ಲ. ದಿನೇ ದಿನೇ ಇಂತಹ ಕಾಮಗಾರಿಗಳ ಯೋಜನಾ ವೆಚ್ಚ ಹೆಚ್ಚುತ್ತಲೇ ಸಾಗಿದೆ.ಬೆಂಗಳೂರು ನಗರ ಪ್ರವೇಶಿಸುವ ಯಾವುದೇ ದಿಕ್ಕಿನಲ್ಲಿನ ರಸ್ತೆಗಳಿಗೆ ದಟ್ಟಣೆ ಅವಧಿಯಲ್ಲಿ ಭೇಟಿಕೊಟ್ಟರೆ, `ಬಿಬಿಎಂಪಿ~ಯ ವೈಫಲ್ಯ ಸ್ವಂತ ಅನುಭವಕ್ಕೆ ಬರುತ್ತದೆ. ರಸ್ತೆಗಳಲ್ಲಿ ವಾಹನಗಳು ಸಾಲು ಸಾಲಾಗಿ ನಿಂತು ಬಿಟ್ಟಿರುತ್ತವೆ.

 

ವಾಹನ ಸವಾರರ ಸಹನೆಯ ಕಟ್ಟೆ ಒಡೆದು ಬೇರೆ, ಬೇರೆ ರೂಪಗಳಲ್ಲಿ ಅಭಿವ್ಯಕ್ತಿಗೊಳ್ಳುತ್ತದೆ. ವಾಹನಗಳ ಪಾರ್ಕಿಂಗ್ ಸ್ಥಳದ ಬಗ್ಗೆಯೂ ಇದೇ ಬಗೆಯ ಸಮಸ್ಯೆಗಳ ಸರಮಾಲೆಯೇ ಇದೆ.ವರ್ಷದಿಂದ ವರ್ಷಕ್ಕೆ ಇದೇ ವಿಷಯಗಳು ವಾರ್ಷಿಕ ಬಜೆಟ್‌ನಲ್ಲಿ ಪುನರಾವರ್ತನೆಗೊಳ್ಳುತ್ತಲೇ ಇರುತ್ತವೆ. ಯೋಜನಾ ವಿವರಗಳನ್ನು ಪ್ರತಿ ಬಜೆಟ್‌ನಲ್ಲಿ `ಕತ್ತರಿಸಿ ಅಂಟಿಸುವ~ ಪ್ರವೃತ್ತಿ ಪುನರಾವರ್ತನೆಗೊಳ್ಳುತ್ತಲೇ ಇದೆ.ಯೋಜಿತ ವರಮಾನ ವೃದ್ಧಿ ಕಾರ್ಯಕ್ರಮಗಳ ಬಗ್ಗೆಯೂ ಇದೇ ಮಾತನ್ನು ಹೇಳಬಹುದು. ತೆರಿಗೆ ಸಂಗ್ರಹದ ಬಗ್ಗೆ ಉಪಗ್ರಹ ನೆರವಿನ ನಕ್ಷೆ ಸೌಲಭ್ಯ (ಸ್ಯಾಟಲೈಟ್ ಮ್ಯಾಪಿಂಗ್) ನಮಗೆಲ್ಲ ಗೊತ್ತಿರುವ ಸಂಗತಿ. ಈ ಸೌಲಭ್ಯವನ್ನು ಸಮರ್ಥವಾಗಿ ಬಳಸಿಕೊಳ್ಳದ ಕಾರಣಕ್ಕೆ ಸಾವಿರಾರು ಕೋಟಿಗಳ ವರಮಾನಕ್ಕೂ `ಬಿಬಿಎಂಪಿ~ ಎರವಾಗುತ್ತಿದೆ.ಮಾಹಿತಿ ತಂತ್ರಜ್ಞಾನ (ಐ.ಟಿ) ರಂಗದಲ್ಲಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿ ಇದೆ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಬೆಂಗಳೂರು ನಗರವು, ವರಮಾನ ವೃದ್ಧಿಗೆ ನೆರವಾಗುವ ಇಂತಹ ಸೌಲಭ್ಯ ಬಳಕೆಯಲ್ಲಿ ಹಿಂದೆ ಬಿದ್ದಿರುವುದು ನಿಜಕ್ಕೂ ಕನಿಕರ ಪಡುವ ಸಂಗತಿ.`ಆಪ್ಟಿಕಲ್ ಕೇಬಲ್ ನೆಟ್‌ವರ್ಕ್ಸ್~ಗೆ ಬಾಡಿಗೆ ಸಂಗ್ರಹಿಸುವ ವಿಷಯದಲ್ಲಿಯೂ ವಿಳಂಬ ಮತ್ತು ಮುಂದೂಡಿಕೆ ಧೋರಣೆಯೇ ಪಾಲಿಕೆಯಲ್ಲಿ ಇದೆ. ವರಮಾನ ಸಂಗ್ರಹದ ಇತರ ವಲಯಗಳಲ್ಲಿಯೂ ಇದೇ ಬಗೆಯ ಉದಾಸೀನ ಧೋರಣೆ  ಕಂಡು ಬರುತ್ತದೆ.ನಿರಂತರವಾಗಿ ಚಿನ್ನದ ಮೊಟ್ಟೆಗಳನ್ನು ನೀಡುವ ಕೋಳಿಯನ್ನು ಕೊಲ್ಲುವುದು ಮೂರ್ಖತನ ಎನ್ನುವುದು ಸಾಬೀತಾಗಿದ್ದರೂ, ಬೆಂಗಳೂರು ಮಹಾನಗರ ಪಾಲಿಕೆ    ವಿಷಯದಲ್ಲಿ ರಾಜ್ಯ ಸರ್ಕಾರ, ಪಾಲಿಕೆ ಆಡಳಿತ ಮತ್ತು ಜನಪ್ರತಿನಿಧಿಗಳು ಇಂತಹ ತಪ್ಪನ್ನು ಪ್ರಜ್ಞಾಪೂರ್ವಕವಾಗಿ ಮಾಡುತ್ತಲೇ ಇದ್ದಾರೆ ಎನ್ನುವ ಭಾವನೆ ಮೂಡುತ್ತದೆ.ರಾಜ್ಯ ಸರ್ಕಾರವು ಈಗಲಾದರೂ ಎಚ್ಚೆತ್ತುಕೊಂಡು, ಬೆಂಗಳೂರಿನಲ್ಲಿ ಮೂಲ ಸೌಕರ್ಯಗಳ ಜಾರಿಗೆ ಅಗತ್ಯ ನೆರವನ್ನು `ಬಿಬಿಎಂಪಿ~ಗೆ ನೀಡಬೇಕಾಗಿದೆ.ರಾಜ್ಯದ ಅರ್ಥ ವ್ಯವಸ್ಥೆಯು, ಬೆಂಗಳೂರಿನಲ್ಲಿನ ಆರ್ಥಿಕ ಚಟುವಟಿಕೆಗಳ ಮೇಲೆಯೇ ಹೆಚ್ಚಾಗಿ ಅವಲಂಬಿಸಿದೆ. ಕರ್ನಾಟಕವು `ಆರ್ಥಿಕ ವೃದ್ಧಿ ದರದ (ಜಿಎಸ್‌ಡಿಪಿ) ವಿಷಯದಲ್ಲಿ ಇತರ ಹಲವು ರಾಜ್ಯಗಳಿಗಿಂತ ಹಿಂದೆ ಬಿದ್ದಿದೆ. ವಾಸ್ತವದಲ್ಲಿ ರಾಜ್ಯದ ವೃದ್ಧಿ ದರವು ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆ ಇದೆ.ದುಬಾರಿ ಮತ್ತು ಕಳಪೆ ಮೂಲ ಸೌಕರ್ಯದ ಕಾರಣಕ್ಕೆ ಬೆಂಗಳೂರು, ಜ್ಞಾನಾಧಾರಿತ ವಹಿವಾಟಿನಲ್ಲಿನ ತನ್ನ ಮುಂಚೂಣಿ ಸ್ಥಾನಮಾನಕ್ಕೆ ಕ್ರಮೇಣ ಎರವಾಗುತ್ತಿದೆ. ಉದ್ದಿಮೆ ವಹಿವಾಟಿನ ವಿಷಯದಲ್ಲಿ ವಿಶ್ವ ಬ್ಯಾಂಕ್, 2012ನೇ ಸಾಲಿನಲ್ಲಿ ಬೆಂಗಳೂರಿಗೆ ಅತಿ ಕಡಿಮೆ ಸ್ಥಾನಮಾನ ನಿಗದಿ ಮಾಡಿದೆ.`ಕನಸು, ಉದ್ದೇಶಗಳನ್ನು ಕಾರ್ಯಗತಗೊಳಿಸುವ ವಿಧಾನವೇ ವಿಜೇತರು ಮತ್ತು ಪರಾಜಿತರನ್ನು ಪ್ರತ್ಯೇಕಗೊಳಿಸುತ್ತದೆ~ ಎನ್ನುವ ಲೋಕರೂಢಿ ಮಾತೊಂದು ಇದೆ. `ಬಿಬಿಎಂಪಿ~ಯು ಇದೇ ಕಾರಣಕ್ಕೆ  ಯೋಜನೆಗಳನ್ನು ಕಾರ್ಯಗತಗೊಳಿಸುವುದರಲ್ಲಿ ಸಾಕಷ್ಟು ಹಿಂದೆ ಬಿದ್ದಿರುವುದು ವೇದ್ಯವಾಗುತ್ತದೆ.ಬೆಂಗಳೂರಿನ ಮೂಲ ಸೌಕರ್ಯಗಳನ್ನು ಕಾರ್ಯಗತಗೊಳಿಸಲು ಸದ್ಯಕ್ಕೆ ಇರುವ ವ್ಯವಸ್ಥೆ ಬದಲಿಸುವ ನಿಟ್ಟಿನಲ್ಲಿ ಗಂಭೀರವಾಗಿ ಆಲೋಚಿಸಬೇಕಾಗಿದೆ. ಕಾಮಗಾರಿಗಳನ್ನು ಕಾಲಮಿತಿಯೊಳಗೆ ತ್ವರಿತವಾಗಿ ಪೂರ್ಣಗೊಳಿಸುವ ಪ್ರಕ್ರಿಯೆಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕಾಗಿದೆ.ಮೆಟ್ರೊ ಯೋಜನೆ ಕಾರ್ಯಗತಗೊಳಿಸಲು ರಚಿಸಲಾಗಿರುವ `ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಮಾದರಿಯಲ್ಲಿ, `ಬಿಬಿಎಂಪಿ~ಯ ಬೃಹತ್ ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರತ್ಯೇಕ ನಿಗಮ ರಚಿಸುವುದನ್ನು ಸರ್ಕಾರ ಪರಿಗಣಿಸಬೇಕು.

 

ಇದರಿಂದ `ಬಿಬಿಎಂಪಿ~ಯಲ್ಲಿ ಸದ್ಯಕ್ಕೆ ಲಭ್ಯ ಇರುವ ಸೀಮಿತ ಪ್ರಮಾಣದ ಮಾನವ ಸಂಪನ್ಮೂಲದ ಮೇಲಿನ ಒತ್ತಡ  ಕಡಿಮೆಯಾಗಿ, ವರಮಾನ ಸಂಗ್ರಹದತ್ತ ಹೆಚ್ಚು ಗಮನ ನೀಡಲು ಸಾಧ್ಯವಾಗಲಿದೆ.ಇತರ ಅಭಿವೃದ್ಧಿಶೀಲ ದೇಶಗಳಲ್ಲಿ ಅನುಸರಿಸಲಾಗಿರುವ ಮಾದರಿಗಳನ್ನು ಬೆಂಗಳೂರಿನ ಅಭಿವೃದ್ಧಿ ವಿಷಯದಲ್ಲಿ ಅಳವಡಿಸಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಹೊಸದಾಗಿ ಕಾರ್ಯಪ್ರವೃತ್ತಗೊಳ್ಳುವ ಬದಲಿಗೆ, ವಿಶ್ವದಾದ್ಯಂತ ಯಶಸ್ವಿಯಾಗಿರುವ  ಸಿದ್ಧ ಮಾದರಿಗಳನ್ನು ಅನುಕರಣೆ ಮಾಡುವುದರಲ್ಲಿ ಯಾವುದೇ ಅಪರಾಧ ಇರಲಾರದು.ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ  ಮಹಾನಗರಗಳು ನಿರ್ವಹಿಸುವ ಮಹತ್ವದ ಪಾತ್ರವನ್ನು ಚೀನಾ ಚೆನ್ನಾಗಿ ಗುರುತಿಸಿ, ನಗರಗಳಲ್ಲಿನ ಮೂಲ ಸೌಕರ್ಯಗಳನ್ನು ಹೆಚ್ಚಿಸಲು ಅವುಗಳ ಗುಣಮಟ್ಟ ಕಾಯ್ದುಕೊಳ್ಳಲು ಸಾಕಷ್ಟು ಹಣ ವೆಚ್ಚ ಮಾಡುತ್ತಿದೆ.ನಗರದ ಮೇಲಿನ ಒತ್ತಡಗಳನ್ನು ನಿಭಾಯಿಸುವಲ್ಲಿ ಬಸವಳಿದಿರುವ `ಬಿಬಿಎಂಪಿ~ಯ ಅಸಾಮರ್ಥ್ಯ ದೂರ ಮಾಡಬೇಕಾಗಿದೆ. ಮೂಲ ಸೌಕರ್ಯಗಳಿಗೆ ಸಿಗಬೇಕಾದ ಮಹತ್ವ ನೀಡಿ ಬಲ ತುಂಬಲು ರಾಜ್ಯ ಸರ್ಕಾರ ಮನಸ್ಸು ಮಾಡಿ ಕಾರ್ಯಪ್ರವೃತ್ತವಾಗಲು ಇದು ಅತ್ಯಂತ ಸೂಕ್ತ ಸಮಯ.

ಒಂದು ವೇಳೆ ಸರ್ಕಾರವು ಈ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲವಾದರೆ, ಚಲನಶೀಲ ನಗರವು ನಿಧಾನವಾಗಿ ಅವಸಾನವಾಗುವ ದುರಂತಕ್ಕೆ ನಾವೆಲ್ಲ ಸಾಕ್ಷಿಯಾಗಬೇಕಾಗುತ್ತದೆ.(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.