ಚುನಾವಣೆ ವರದಿಗಾರಿಕೆ, ಮಾಧ್ಯಮ ನೀತಿ ಸಂಹಿತೆ

7

ಚುನಾವಣೆ ವರದಿಗಾರಿಕೆ, ಮಾಧ್ಯಮ ನೀತಿ ಸಂಹಿತೆ

Published:
Updated:
ಚುನಾವಣೆ ವರದಿಗಾರಿಕೆ, ಮಾಧ್ಯಮ ನೀತಿ ಸಂಹಿತೆ

ಸಿದ್ಧಾಂತಗಳು ಅಭಿಪ್ರಾಯಗಳಾಗಿ, ಪೂರ್ವ­ಗ್ರಹಗಳು ವಿಶ್ಲೇಷಣೆಗಳಾಗಿ   ವಿಜೃಂಭಿಸು­ತ್ತಿ­ರು­ವುದನ್ನು ಕೆಲವೊಂದು ಮಾಧ್ಯಮಗಳಲ್ಲಿ  ದೊಡ್ಡದಾಗಿ  ಕಾಣುತ್ತಿರುವ ಕಾಲ ಇದು. ಸಾರ್ವ­­ಜನಿಕ ಹಿತಕ್ಕಿಂತ ಇಲ್ಲಿರುವುದು ಲಾಭ ಗಳಿಸುವ ದೃಷ್ಟಿ.  ನಾಗರಿಕರನ್ನು ಗ್ರಾಹಕರಾಗಿ  ಕಾಣುವ ಪ್ರವೃತ್ತಿ ಇದು. ಸುದ್ದಿ ಹಾಗೂ ರಂಜನೆ­ಯನ್ನು ಮಿಳಿತಗೊಳಿಸಿ  ‘ಇನ್ಫೋಟೇನ್‌ಮೆಂಟ್’  ಎಂಬ ಹೊಸ ಪ್ರಕಾರವನ್ನು ಸೃಷ್ಟಿಸುವ ಧಾವಂತ­ದಲ್ಲಿ ಸುದ್ದಿ ನಿರೂಪಿಸುವವರು ಪತ್ರಕರ್ತರೆನ್ನು­ವು­ದ­ಕ್ಕಿಂತ ಪಾತ್ರಧಾರಿಗಳಾಗಿ ಅಭಿನಯವೇ ಮೇಲುಗೈ ಪಡೆಯುತ್ತಿರುವ ಸಂದರ್ಭ ಇದು. ಇಂತಹ ದೂರುಗಳು ಮಾಧ್ಯಮಲೋಕದ ಕುರಿತಾಗಿ ಇತ್ತೀಚಿನ ವರ್ಷಗಳಲ್ಲಿ ಕೇಳಿ­ಬರು­ತ್ತಿರು­ವುದು ಮಾಮೂಲು.ಇದೇ ಸಂದರ್ಭದಲ್ಲೇ, ಕೆಲವೊಂದು ಸುದ್ದಿ­ವಾಹಿನಿ­ಗಳು  ನರೇಂದ್ರ ಮೋದಿಯವರನ್ನು   ಉದ್ದೇಶ­ಪೂರ್ವಕವಾಗಿ ಬಿಂಬಿಸುತ್ತಿರುವುದರ ಹಿಂದೆ  ರಾಜಕೀಯ ಷಡ್ಯಂತ್ರ ಇದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.  ಎಎಪಿ ಸರ್ಕಾರ ಅಧಿಕಾರಕ್ಕೆ ಬಂದರೆ,  ಈ ವಿಚಾ­ರದ ತನಿಖೆ ನಡೆಸಿ ಮಾಧ್ಯಮ ವ್ಯಕ್ತಿಗಳನ್ನೂ ಜೈಲಿಗೆ ಹಾಕಲಾಗುವುದು ಎಂಬಂತಹ ಕೇಜ್ರಿ­ವಾಲ್ ಅವರ  ಅತಿರೇಕದ ಹೇಳಿಕೆ ವಿವಾದವನ್ನೇ ಸೃಷ್ಟಿಸಿತು. ಈ ಬಗ್ಗೆ ನ್ಯೂಸ್ ಬ್ರಾಡ್ಕಾಸ್ಟರ್ಸ್ ಅಸೋಸಿಯೇಷನ್  (ಎನ್ ಬಿಎ),   ಎಡಿಟರ್ಸ್‌ ಗಿಲ್ಡ್  ಹಾಗೂ ಬ್ರಾಡ್ ಕಾಸ್ಟ್  ಎಡಿಟರ್ಸ್ ಅಸೋಸಿಯೇಷನ್ (ಬಿಇಎ)  ಪ್ರತಿಕ್ರಿಯೆ­ಗಳನ್ನೂ  ನೀಡಿದವು. ಕೇಜ್ರಿವಾಲ್ ಹಾಗೂ ಎಎ­ಪಿ­ಯ ಸುದ್ದಿಗಳನ್ನು ಬಹಿಷ್ಕರಿಸುವುದಾಗಿ ಖಾಸಗಿ ಸಂಘವಾಗಿರುವ  ಎನ್ ಬಿಎ ಬೆದರಿಕೆ ಒಡ್ಡಿತು. ನಂತರ,  ಸುದ್ದಿವಾಹಿನಿಗಳ ವಿರುದ್ಧದ  ಆರೋಪಗಳನ್ನು ಅಲ್ಲಗಳೆದು ವಸ್ತುನಿಷ್ಠತೆ  ಬಗೆ­ಗಿನ ತನ್ನ ಬದ್ಧತೆಯನ್ನು ಪ್ರತಿಪಾದಿಸಿಕೊಳ್ಳಲು ಪ್ರಯತ್ನಿಸಿತು.ಮಾಧ್ಯಮ ಕುರಿತಂತೆ ಕೇಜ್ರಿವಾಲ್ ಅವರ ಬೇಜವಾಬ್ದಾರಿಯುತ ಹೇಳಿಕೆಯನ್ನು ಬಿಇಎ ಸಹ ಖಂಡಿಸಿತು.  ಯಾರೇ ವ್ಯಕ್ತಿ ಅಥವಾ ಪಕ್ಷದ ಪರವಾಗಿ ಪೂರ್ವಗ್ರಹಪೀಡಿತ ಕಾರ್ಯಸೂಚಿ­ಯನ್ನು ಟಿವಿ ಚಾನೆಲ್ ಗಳು ಅನುಸರಿಸುತ್ತಿವೆ ಎಂಬುದು ಸರಿಯಲ್ಲ ಎಂದು  ಬಿಇಎ ಹೇಳಿತು.ಚುನಾವಣೆಗಳು ಸನಿಹದಲ್ಲಿರುವಾಗ ಇಂತಹ ವಾಗ್ದಾಳಿಗಳ ಭರಾಟೆ ಹೆಚ್ಚುವುದು ಸಹಜ. ಈ ಹಿಂದೆ ಮಾಧ್ಯಮಗಳಲ್ಲಿ ಸಾಕಷ್ಟು ಸಕಾರಾತ್ಮಕ ಗಮನ ಸೆಳೆದುಕೊಂಡಿದ್ದ ಕೇಜ್ರಿ­ವಾಲ್ ನಂತರದ ದಿನಗಳಲ್ಲಿ ಟೀಕೆಗಳಿಗೂ ಗುರಿಯಾಗಿದ್ದರು. ಸಾರ್ವಜನಿಕ ವಾಗ್ವಾದಗಳ­ಲ್ಲಿನ ಶಿಷ್ಟಾಚಾರ, ಪ್ರಾಮಾಣಿಕತೆ  ಮತ್ತು ಬದ್ಧತೆ ಕುಸಿಯುತ್ತಿರುವುದರ ಸಂಕೇತ ಇದು. ಯಾವುದೇ ಬಗೆಯ ಸರಳೀಕರಣ ಸತ್ಯದ ಪೂರ್ಣ ಮುಖವನ್ನು ಅನಾವರಣಗೊಳಿಸು­ವುದು ಅಸಾಧ್ಯ. ಸಾರಾಸಗಟಾಗಿ ಮಾಧ್ಯಮ­ಗಳನ್ನು ಅಲ್ಲಗಳೆಯುವುದು ಹೇಗೆ ಸಾಧ್ಯವಿ­ಲ್ಲವೋ  ಹಾಗೆಯೇ ಪೂರ್ಣವಾಗಿ ಎಲ್ಲವೂ ಸರಿ ಇದೆ ಎಂದು ಹೇಳುವ ಸ್ಥಿತಿಯೂ  ಸದ್ಯಕ್ಕೆ ಇಲ್ಲ.  ಹಲವು ಮಾಧ್ಯಮ ಸಂಸ್ಥೆಗಳ ಅದರಲ್ಲೂ ವಿಶೇಷವಾಗಿ ಟೆಲಿವಿಷನ್ ವಾಹಿನಿಗಳ ರಾಜಕೀಯ ಹಾಗೂ ವಾಣಿಜ್ಯ ಹಿತಾಸಕ್ತಿಗಳು  ಎಲ್ಲರಿಗೂ ಗೊತ್ತಿರುವಂತಹದ್ದೇ.16ನೇ ಲೋಕಸಭೆ ಚುನಾವಣೆಗಳಿಗೆ ರಾಷ್ಟ್ರ ಸನ್ನದ್ಧವಾಗುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಚುನಾವಣೆಗಳಿಗೆ ಸಂಬಂಧಿಸಿದ ವರದಿಗಾರಿಕೆ­ಯಲ್ಲಿ ಪೂರ್ವಗ್ರಹಗಳಿಲ್ಲದ ವಸ್ತುನಿಷ್ಠ ವರದಿ­ಗಾರಿಕೆ ಎಷ್ಟರಮಟ್ಟಿಗೆ ಕಂಡು ಬರುತ್ತಿದೆ? ಎಂಬಂತಹ ಪ್ರಶ್ನೆಗಳನ್ನು  ತಜ್ಞರು ಎತ್ತಿದ್ದಾರೆ. ರಾಜ­ಕೀಯ ವಾಗ್ವಾದ  ಎಂಬುದು ಮಾಧ್ಯಮ­ಗಳಲ್ಲಿ ಕೇವಲ ಕಾಂಗ್ರೆಸ್ ನಾಯಕತ್ವದ ಕೊರತೆ ಹಾಗೂ ಗುಜರಾತ್ ಮಾದರಿಯ ಅಭಿವೃದ್ಧಿಗೆ ಸೀಮಿತವಾಗಿ ಬಿಟ್ಟಿರುವುದಕ್ಕೆ ಆಕ್ಷೇಪಗಳು ವ್ಯಕ್ತ­ವಾಗಿವೆ. ಅಮೆರಿಕದ ಸಮಾಜವಿಜ್ಞಾನಿ ನೋಮ್ ಚಾಮ್ ಸ್ಕಿ  ಅವರ  ‘ಒಮ್ಮತವನ್ನು ತಯಾ­­ರಿಸುವುದು’  (ಮ್ಯಾನುಫ್ಯಾಕ್ಚರಿಂಗ್ ಕನ್ ಸೆಂಟ್) ಸಿದ್ಧಾಂತವನ್ನು  ಈ ಸಂದರ್ಭಕ್ಕೆ ಅನ್ವ­ಯಿ­ಸಲಾಗಿದೆ. ವಾಸ್ತವವಾಗಿ ಅಮೆರಿಕದ ಮಾಧ್ಯಮ­ಗಳಿಗೆ ಸಂಬಂಧಿಸಿದಂತೆ  ಈ ಸಿದ್ಧಾಂತ­ವನ್ನು ನೋಮ್ ಚಾಮ್ ಸ್ಕಿ ಅನ್ವಯಿಸಿದ್ದರು.  

                 

‘ಮ್ಯಾನುಫ್ಯಾಕ್ಚರಿಂಗ್ ಕನ್ ಸೆಂಟ್: ದಿ ಪೊಲಿ­ಟಿಕಲ್ ಇಕಾನಮಿ ಆಫ್ ದಿ ಮಾಸ್ ಮೀಡಿಯಾ’ ಪುಸ್ತಕದಲ್ಲಿ ನೋಮ್ ಚಾಮ್ ಸ್ಕಿ ಹಾಗೂ ಎಡ್ವರ್ಡ್ ಎಸ್ ಹರ್ಮನ್ ಅವರು  ಐದು ‘ಫಿಲ್ಟರ್’ಗಳ  (ಜರಡಿ ಅಥವಾ ಶೋಧಕ) ಕುರಿತು ಹೇಳುತ್ತಾರೆ. ಈ  ಜರಡಿ­ಗಳಿಂದ ಹಾದು ಹೊರಬಂದ ನಂತರ, ರಸ ಹೀನ ‘ಹಿಪ್ಪೆ’ಯನ್ನು ಅಮೆರಿಕ ಮಾಧ್ಯಮ ಪ್ರಕಟಿಸು­ತ್ತದೆ ಎಂಬುದು ಚಾಮ್ ಸ್ಕಿ  ಅವರ ವಾದ. ಸುದ್ದಿ ವರದಿಗಾರಿಕೆಗೆ ಅಳವಡಿಸಿ­ಕೊ­ಳ್ಳುವ  ಈ ಐದು ಜರಡಿಗಳಾದರೂ ಯಾವುವು? ಮೊದಲನೆಯದಾಗಿ ಮಾಲೀಕರ ಲಾಭದ ದೃಷ್ಟಿ. ಎರಡನೆಯದು ಜಾಹೀರಾತುದಾರರ ರಾಜ­ಕೀಯ ಹಿತಾಸಕ್ತಿ ಹಾಗೂ ಆರ್ಥಿಕ  ಅಪೇಕ್ಷ­ಗಳಿಗೆ ಪೂರಕವಾಗುವ ಪೂರ್ವಗ್ರಹ. ಮೂರನೆ­ಯದು  ಅಧಿಕಾರಶಾಹಿ ಸುದ್ದಿಮೂಲಗಳ ಜೊತೆಗೆ ವಿಶೇಷ ಸಂಬಂಧ ಕಾಪಾಡಿಕೊಳ್ಳು­ವುದು. ನಾಲ್ಕನೆಯದು, ಜಾಹೀರಾತು ನಷ್ಟ ಅಥವಾ ಕಾನೂನು ಹೋರಾಟದ ಖರ್ಚು ಹೆಚ್ಚಿಸುವ ತೀವ್ರ ಟೀಕೆಗಳು ಬರದಂತೆ ಎಚ್ಚರ ವಹಿಸುವುದು. ಐದನೆಯದು ಕಮ್ಯುನಿಸಂ ವಿರೋಧ.  ಶೀತಲ ಸಮರ ಅಂತ್ಯದ ನಂತರ ಇದು ‘ಭಯೋತ್ಪಾದನೆ ವಿರುದ್ಧದ ಸಮರ’ ಎಂದು ಬದಲಾಗಿದೆ ಎಂದು  ಚಾಮ್ ಸ್ಕಿ ವಾದಿ­ಸು­ತ್ತಾರೆ.ಈ ಐದೂ ಜರಡಿಗಳಲ್ಲಿ  ಸುದ್ದಿ ವರದಿ­ಗಾರಿಕೆಯನ್ನು ಸೋಸಲಾಗುತ್ತದೆ. ಹೀಗಾಗಿ ಮಾರು­ಕಟ್ಟೆ ಶಕ್ತಿಗಳೊಂದಿಗೆ ವ್ಯವಸ್ಥೆಯನ್ನು ಬೆಂಬಲಿಸುವ ಪ್ರಚಾರ ಸಾಧನಗಳಾಗಿವೆ ಅಮೆರಿ­ಕದ ಮುಖ್ಯವಾಹಿನಿ ಮಾಧ್ಯಮಗಳು ಎಂಬುದು ಚಾಮ್ ಸ್ಕಿ ವಾದ. ಈ ಸಿದ್ಧಾಂತವನ್ನು ಈಗಿನ ಚುನಾವಣಾ ಸಂದರ್ಭಕ್ಕೆ ಅನ್ವಯಿಸುವುದು ಸಾಧ್ಯ. ಸರ್ಕಾರದ ವಿರುದ್ಧ ವಿರೋಧವನ್ನು ‘ತಯಾರಿಸಿ’ ನಂತರ ಮೋದಿ ಪರ ಕಾರ್ಪೊ­ರೇಟ್  ಬೆಂಬಲಿತ ಕಾರ್ಯಸೂಚಿ ಪ್ರಚಾರ ಮಾಡು­ವುದು ಸದ್ಯದ ವಿದ್ಯಮಾನವಾಗಿದೆ ಎಂಬಂತಹ ವಿಶ್ಲೇಷಣೆಗಳನ್ನು ಮುಂದಿಡ ಲಾಗಿದೆ.2004ರಲ್ಲಿ ‘ಇಂಡಿಯಾ ಷೈನಿಂಗ್’  ಪ್ರಚಾ­ರಾಂದೋಲನ ಮಾಧ್ಯಮಗಳಲ್ಲಿ ತುಂಬಿತ್ತು. ಆದರೆ ಚುನಾವಣಾ ಫಲಿತಾಂಶಗಳು ಬಂದಾಗ ಕಾಂಗ್ರೆಸ್ ಮುಂಚೂಣಿಯಲ್ಲಿದ್ದು ಯುಪಿಎ ಅಧಿಕಾರಕ್ಕೆ ಬಂತು ಎಂಬುದನ್ನು ಮರೆಯ­ಲಾಗದು. ವರದಿಗಾರಿಕೆಯ  ವಿಶ್ವಾಸಾರ್ಹತೆಯ ಪ್ರಶ್ನೆಗಳನ್ನು   ಈ ವಿದ್ಯಮಾನ ಮುಂದಿಟ್ಟಿತ್ತು.  ವರದಿ­ಗಾರಿಕೆಯ ವಿಶ್ವಾಸಾರ್ಹತೆ, ನೀತಿ ಸಂಹಿತೆ­ಯಂತಹ ವಿಚಾರಗಳು ಮಾಧ್ಯಮ ಲೋಕದಲ್ಲಿ ಆಗಾಗ್ಗೆ ಚರ್ಚೆಗೊಳಪಡುತ್ತಲೇ ಇರುತ್ತವೆ. ರಕ್ಷಣಾ ಇಲಾಖೆಯಲ್ಲಿನ ಅವ್ಯವಹಾರ­ಗಳನ್ನು ‘ತೆಹೆಲ್ಕಾ’ ಪತ್ರಿಕೆ ಬಹಿರಂಗಗೊಳಿಸಿದ ರೀತಿ (ಸ್ಟಿಂಗ್ ಪತ್ರಿಕೋದ್ಯಮ), ತನಿಖಾ ಪತ್ರಿ­ಕೋದ್ಯಮ­ದಲ್ಲಿ ನೀತಿ ಸಂಹಿತೆಯ ಪ್ರಮುಖ ಚರ್ಚೆಯನ್ನು ಹುಟ್ಟು ಹಾಕಿದುದನ್ನು ಮರೆಯು­ವಂತಿಲ್ಲ. ನಂತರದ ದಿನಗಳಲ್ಲಿ  ಹೆಣ್ಣು ಭ್ರೂಣ­ಗಳ ಲಿಂಗ ಪತ್ತೆಗಾಗಿ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಯಂತ್ರಗಳನ್ನು ಬಳಸುವ ವೈದ್ಯರ ಅಕ್ರಮ ದಂಧೆಯನ್ನು ಬಯಲುಗೊಳಿಸಲು, ತಮ್ಮ ಗುರುತು ಮರೆಮಾಚಿ ಮಾಹಿತಿಗಳನ್ನು ಪಡೆಯುವಂತಹ ತಂತ್ರಗಳನ್ನು ಕರ್ನಾಟಕವೂ ಸೇರಿ­ದಂತೆ ಅನೇಕ ರಾಜ್ಯಗಳಲ್ಲಿ ಕೆಲವು  ಪತ್ರ­ಕರ್ತ­ರಷ್ಟೇ ಅಲ್ಲ ಮಹಿಳಾ ಹೋರಾಟಗಾರರೂ ಬಳಸಿಕೊಂಡಿದ್ದರು. ವೈದ್ಯರನ್ನು ತಮ್ಮ ಬಲೆಗೆ ಬೀಳಿಸಲೆಂದೇ ಗರ್ಭಿಣಿ ಮಹಿಳೆ(ಡೀಕಾಯ್) ಯೊಬ್ಬರನ್ನು ಜೊತೆಯಲ್ಲಿ ಕರೆದೊಯ್ದು ಮಾಹಿತಿ­ಯನ್ನು ಪಡೆಯುವ ಪ್ರಯತ್ನ ಇಲ್ಲಿರು­ತ್ತಿತ್ತು.ಕೈಚೀಲಗಳಲ್ಲಿ ಅಡಗಿಸಿಟ್ಟ  ಟೇಪ್ ರೆಕಾ­ರ್ಡರ್ ಹಾಗೂ ಕ್ಯಾಮ್ ಕಾರ್ಡರ್ (ದೃಶ್ಯ–ಶ್ರವ್ಯಗಳನ್ನು ಸೆರೆ ಹಿಡಿಯುವ ಪುಟ್ಟ ಸಾಧನ)­ಗಳಲ್ಲಿ  ಸಂದರ್ಶನದ ವಿವರಗಳನ್ನು  ರೆಕಾರ್ಡ್ ಮಾಡಲಾಗುತ್ತಿತ್ತು.  ವೈದ್ಯರ ಕುಕೃತ್ಯವನ್ನು ಬಯಲಿ­ಗೆಳೆಯಲು ಪತ್ರಕರ್ತರು ಹಾಗೂ ಸಾಮಾ­ಜಿಕ ಕಾರ್ಯಕರ್ತರು ಬಳಸಿದ ಈ  ವಿಧಾನ ಎಷ್ಟರ ಮಟ್ಟಿಗೆ ಸರಿ ಎಂಬ ವಿಚಾರಗಳು ಆಗ ಚರ್ಚೆಯಾಗಿದ್ದವು. ಆದರೆ ಇಂತಹ ರಹಸ್ಯ ಕಾರ್ಯಾಚರಣೆಗೆ ಸಾರ್ವಜನಿಕ ಹಿತವೇ ಪ್ರೇರಣೆ ಎಂಬುದು ಸಂಪಾದಕರಿಗೆ ಮನವರಿಕೆ ಆಗಿರಬೇಕು ಎಂಬುದು ಪ್ರೆಸ್ ಕೌನ್ಸಿಲ್ ಮಾರ್ಗ­ಸೂಚಿಗಳಲ್ಲಿದೆ. ಸುಪ್ರೀಂಕೋರ್ಟ್ ಕೂಡ ಈ ಕ್ರಮಕ್ಕೆ ಮಾನ್ಯತೆ ನೀಡಿದೆ. ಹಾಗೆಯೇ  ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಬೀಳಿಸಲು ಫೋನ್ ನಲ್ಲಿರುವ ಆಡಿಯೊ, ವಿಡಿಯೊ ಬಳಕೆ  ಮಾಡಿಕೊಳ್ಳಬೇಕೆಂದು ದೆಹಲಿ ಮುಖ್ಯಮಂತ್ರಿ­ಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ಅವರೂ ಹೇಳಿದ್ದುದನ್ನು ನೆನಪಿಸಿಕೊಳ್ಳಬಹುದು.‘ತೆಹೆಲ್ಕಾ’ ನಂತರ ರಾಡಿಯಾ ಟೇಪ್ ಗಳ ಹಗರಣ ಮಾಧ್ಯಮದ ನೀತಿ ಸಂಹಿತೆ ಕುರಿತ ಚರ್ಚೆ­ಯನ್ನು ಮತ್ತೊಂದು ಮಜಲಿಗೆ ಒಯ್ದಿತ್ತು. ವಾಣಿಜ್ಯ ಪತ್ರಿಕೋದ್ಯಮದ  ಹುಳು­ಕು­­ಗಳು,   ವೃತ್ತಿಪರತೆ ಹಾಗೂ ನೈತಿಕ ವಿಶ್ವಾಸಾ­ರ್ಹ­ತೆಯ  ಕೊರತೆಯನ್ನು  ಇದು ಬಯಲಿಗೆಳೆದಿತ್ತು.

ತೆಹೆಲ್ಕಾ ‘ಸ್ಟಿಂಗ್’ ಕಾರ್ಯಾಚರಣೆ, ವ್ಯವಸ್ಥೆ­ಯೊಳಗಿನ ಭ್ರಷ್ಟಾಚಾರವನ್ನು ಬಯಲಿಗೆಳೆದಿ­ದ್ದೇನೋ ಸರಿ. ಆದರೆ ಗುರಿ ಸರಿ ಇದ್ದಾಗ  ಅದಕ್ಕಾಗಿ ತುಳಿಯುವ ಯಾವುದೇ ಮಾರ್ಗ ಸರಿಯೆ ಎಂಬಂತಹ  ನೈತಿಕ ಪ್ರಶ್ನೆಗಳನ್ನು ಹುಟ್ಟು ಹಾಕಿದ್ದೂ ನಿಜ. ಏಕೆಂದರೆ  ನಂತರದ  ಕೆಲವು ‘ಸ್ಟಿಂಗ್’ ಕಾರ್ಯಾಚರಣೆಗಳು  ಶಿಕ್ಷಾ ಭಯ­ವಿಲ್ಲದ ಸಂಸ್ಕೃತಿಗೆ ಮಾದರಿಯಾಗಿದ್ದವು.ವೃತ್ತಿ­ಪರ­ತೆಯ ಗುಣಮಟ್ಟವೂ ಪಾತಾಳಕ್ಕಿಳಿದ ನಿದ­ರ್ಶನಗಳಿವೆ. ಶಾಲಾ ವಿದ್ಯಾರ್ಥಿನಿಯರನ್ನು ಲೈಂಗಿಕ ದಾಸ್ಯಕ್ಕೆ ಒದಗಿಸುವ ಜಾಲದ ಭಾಗ­ವಾಗಿ­ದ್ದರೆಂದು  ದೆಹಲಿ ಅಧ್ಯಾಪಕಿ ಉಮಾ ಖುರಾನಾ ಮೇಲೆ ಸುಳ್ಳು ಆರೋಪ ಹೊರಿಸಿದ ಪ್ರಕರಣ ಇದಕ್ಕೆ ಒಂದು ಉದಾಹರಣೆ. ಬ್ರಿಟನ್ ನ ‘ನ್ಯೂಸ್ ಆಫ್ ದಿ ವರ್ಲ್ಡ್’ ಫೋನ್  ಹ್ಯಾಕಿಂಗ್ ಹಗರಣವಂತೂ ಮಾಧ್ಯಮ, ಪೊಲೀಸ್ ಹಾಗೂ ರಾಜಕಾರಣಿಗಳ  ನಡುವಿನ ಅಪವಿತ್ರ ಮೈತ್ರಿಗೆ ದೊಡ್ಡ ಉದಾಹರಣೆ. ಸ್ವಯಂ ನಿಯಂತ್ರಣದ ವ್ಯವಸ್ಥೆಯ ವೈಫಲ್ಯಕ್ಕೂ  ಇದು ದೊಡ್ಡ ಪ್ರತೀಕ.‘ದಿ ಮ್ಯಾಂಚೆಸ್ಟರ್ ಗಾರ್ಡಿಯನ್’ ಪತ್ರಿಕೆಯ ಸಂಸ್ಥಾಪಕ ಸಂಪಾದಕ  ಸಿ. ಪಿ. ಸ್ಕಾಟ್  ಹೇಳಿದ ಮಾತುಗಳಿವು:  ‘ಸುದ್ದಿ  ಎಂಬುದು ಪವಿತ್ರವಾ­ದದ್ದು, ಆದರೆ ಅಭಿಪ್ರಾಯ ಮುಕ್ತವಾದುದು’. ಮುದ್ರಿತ ರೂಪದಲ್ಲಿರುವ ಸುದ್ದಿ ಪರಮ ಸತ್ಯ ಹಾಗೂ ಆಡು ನುಡಿಗಿಂತ ಹೆಚ್ಚು ಶಕ್ತವಾದದ್ದು ಎಂಬ ಭಾವನೆ ಭಾರತದಲ್ಲಿ  ಯಾವಾಗಲೂ ಇತ್ತು. ಆದರೆ ಈಗ  ಅಂತಹ ಸನ್ನಿವೇಶ ಇದೆಯೇ ಎಂಬುದರ ಆತ್ಮಾವಲೋಕನ ಅಗತ್ಯ.ಅಮರ್ತ್ಯ ಸೇನ್ ಅವರಂತೂ ಪದೇ ಪದೇ ಹೇಳಿದ್ದಾರೆ: ‘ಪ್ರಜಾಪ್ರಭುತ್ವದಲ್ಲಿ  ಎಂದೂ ದೊಡ್ಡ ಕ್ಷಾಮ ಉಂಟಾಗುವುದಿಲ್ಲ. ಏಕೆಂದರೆ  ಜಾಗೃತ ಮಾಧ್ಯಮಗಳು ಸರ್ಕಾರದ ಆಡಳಿತ ಯಂತ್ರ ಸದಾ ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುತ್ತವೆ. ಹೀಗಾಗಿ ಕ್ಷಾಮವನ್ನು ತಡೆ­ಗಟ್ಟಲು ಪ್ರಜಾಪ್ರಭುತ್ವವೇ ಅತ್ಯುತ್ತಮ ಮಾರ್ಗ. ಇದನ್ನು ಜೀವಂತವಾಗಿರಿಸುವುದು  ಮುಕ್ತ ಪತ್ರಿಕೋದ್ಯಮ. ಸ್ವಾತಂತ್ರ್ಯಾನಂತರದ  ದಿನಗಳ ಅನುಭವ ಇದನ್ನು ದೃಢ ಪಡಿಸುತ್ತದೆ. ಬ್ರಿಟಿಷ್ ಆಡಳಿತದ ಅವಧಿಯಲ್ಲಿ, ರಾಷ್ಟ್ರಕ್ಕೆ ಸ್ವಾತಂತ್ರ್ಯ ಬರುವವರೆಗೂ ಕ್ಷಾಮ ಎಂಬುದು ಭಾರತವನ್ನು ಕಾಡುತ್ತಲೇ ಇತ್ತು. ಆದರೆ ನಂತರ ಬಹುಪಕ್ಷಗಳ ಪ್ರಜಾಪ್ರಭುತ್ವ  ಹಾಗೂ ಮುಕ್ತ ಪತ್ರಿಕೆಗಳಿಂದ ಇದು ಕಾಣೆಯಾಯಿತು’ ಎಂಬುದು ಅವರ ವಾದ.ಆದರೆ ಇಂದಿನ ಪತ್ರಿಕೋದ್ಯಮ ಎಷ್ಟರ ಮಟ್ಟಿಗೆ ಕ್ರಿಯಾಶೀಲವಾಗಿದೆ? ‘ಬ್ರೇಕಿಂಗ್ ನ್ಯೂಸ್’ನ ಈ ಕಾಲದ ಪತ್ರಿಕೋದ್ಯಮ  ಬರೀ ಘಟನೆಗಳನ್ನಾಧರಿಸಿದ್ದಾಗಿದೆ.  ಪ್ರಕ್ರಿಯೆಯಾಗಿ ಇಡಿ­ಯಾಗಿ ಪರಿಭಾವಿಸುವ ದೃಷ್ಟಿಕೋನವೇ ಮರೆಯಾಗುತ್ತಿರುವುದು ಎದ್ದು ಕಾಣುತ್ತದೆ. ಹೂರಣವಿಲ್ಲದ ಮೇಲ್ಪದರದ ಮಾಹಿತಿಯಲ್ಲಿ ಚಿಕಿತ್ಸಕ ಮನೋಭಾವ, ವಿಮರ್ಶಾತ್ಮಕ ಒಳ­ನೋಟ ಹಾಗೂ ಚಾರಿತ್ರಿಕ ದೃಷ್ಟಿಯ ಕೊರತೆ ಎದ್ದು ಕಾಣಿಸುತ್ತಿರುತ್ತದೆ.  ಫೀಲ್ಡ್ ಗಳಿಗೆ  ವರದಿ­ಗಾರರು ಹೋಗುವುದಕ್ಕಿಂತ ಹೆಚ್ಚಾಗಿ ಟಿವಿ ಸ್ಟುಡಿಯೊಗಳಿಂದಲೇ  ಸುದ್ದಿಗಳ ತಯಾರಿಕೆ ಪ್ರವೃತ್ತಿ ಹೆಚ್ಚಾಗಿದೆ.ಊಹಾಪೋಹಗಳನ್ನೇ ವಾಸ್ತವ­ವೆಂಬಂತೆ ಬಿಂಬಿಸುವ ಅತಿರಂಜಿತ ವರದಿ­ಗಾರಿಕೆ, ಕಾಸಿಗಾಗಿ ಸುದ್ದಿ, ಅವೈಜ್ಞಾನಿಕ ಹಾಗೂ ತಪ್ಪುದಾರಿಗೆಳೆಯುವ ಸಮೀಕ್ಷೆಗ­ಳಂತಹ ಕಪ್ಪು ಚುಕ್ಕೆಗಳು ಮಾಧ್ಯಮಗಳ ವಿಶ್ವಾಸಾರ್ಹತೆಗೆ ಕುಂದಾಗುತ್ತಿವೆ ಎಂಬಂತಹ ಟೀಕೆಗಳನ್ನು ಮಾಧ್ಯಮ­ಲೋಕ ಎದುರಿಸುತ್ತಿದೆ. ಆದರೆ   ಟೀಕೆ­­ಟಿಪ್ಪಣಿ, ವಿಮರ್ಶೆಗಳನ್ನು  ಮಾಧ್ಯಮ­ಲೋಕ ಸರಿಯಾದ ನೆಲೆಗಳಲ್ಲಿ ಗ್ರಹಿಸಿರು­ವಂತಹ ಪರಂಪರೆಯೂ ಭಾರತದಲ್ಲಿದೆ ಎಂಬುದೇ ಸಮಾಧಾನಕರ. ಇಂತಹದೊಂದು ಮುಕ್ತತೆ, ಸರಿಯಾದ ಮಾಹಿತಿಯನ್ನು  ಜನರಿಗೆ ತಲುಪಿಸುವ ಕಾರ್ಯಕ್ಕೆ ಪೂರಕವಾಗು­ವಂತ­ಹದ್ದು. ಮಾಹಿತಿ ಎನ್ನುವುದು ಜನರನ್ನು ಸಶಕ್ತರ­ನ್ನಾಗಿಸುತ್ತದೆ. ಜನರನ್ನು ಸಶಕ್ತರನ್ನಾಗಿಸುವುದೇ ಮಾಧ್ಯಮದ ಬಲ.ಮಾಧ್ಯಮ ಎಂಬುದು ಇತರ ವಾಣಿಜ್ಯ ಉಧ್ಯಮಗಳಂತಲ್ಲ. ಸಮಾಜದ ಪ್ರವರ್ಧನೆಗೆ ಅದು ಪ್ರಶ್ನೆಗಳನ್ನು ಕೇಳುತ್ತಲೇ ಇರಬೇಕು.  ಇದ­ಕ್ಕಾಗಿಯೇ ನಮ್ಮ ಸಂವಿಧಾನ ಹಾಗೂ ವಿಶ್ವದ ಇತರ ರಾಷ್ಟ್ರಗಳಲ್ಲೂ  ಪತ್ರಿಕಾ ಸ್ವಾತಂತ್ರ್ಯ­ವನ್ನು  ನೀಡಲಾಗಿದೆ.  ಆದರೆ ಈ ಸ್ವಾತಂತ್ರ್ಯದ ಬಳಕೆಯಲ್ಲಿ ಸ್ವಯಂ ನಿಯಂತ್ರಣ ಬೇಕು ಎಂಬ ಪಾಠ ಮಾತ್ರ ಮರೆಯಬಾರದು.ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry