ಚೇತನ ನವಚೇತನ

7

ಚೇತನ ನವಚೇತನ

ಡಾ. ಆಶಾ ಬೆನಕಪ್ಪ
Published:
Updated:
ಚೇತನ ನವಚೇತನ

2007ನೇ ಇಸವಿ. ಡಾ. ಅನಿಲ್ ಎಂ.ಯು. ಅಸಾಧಾರಣ ಪ್ರತಿಭೆಯ, ಶಿಶು ವೈದ್ಯಕೀಯ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ ನನ್ನ ಯುನಿಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಆ ಸಮಯದಲ್ಲಿ ನನ್ನ ವಾರ್ಡ್‌ನಲ್ಲಿ ದೀರ್ಘಕಾಲೀನ ಕಾಯಿಲೆಗೆ ಒಳಗಾಗಿದ್ದ ಮೂವರು ರೋಗಿಗಳಿದ್ದರು.

 

ದೀರ್ಘಕಾಲೀನ ಎಂದರೆ ಮೂರು ವಾರದಿಂದ ಮೂರು ತಿಂಗಳವರೆಗೆ, ಕಣ್ಮರೆಯಾಗಿ ಮತ್ತೆ ಕಾಣಿಸಿಕೊಳ್ಳುವ ರೋಗಗಳು. ಚೇತನ್ ಕೂಡ ಅಂತಹದೇ ಸಮಸ್ಯೆಯಿಂದ ನರಳುತ್ತಿದ್ದ ರೋಗಿ.ಚೇತನ್ ನಾಗಮಂಗಲದ ಹುಡುಗ. ಮೂರು ವರ್ಷಗಳಿಂದ ನಿರಂತರ ಕಾಯಿಲೆಗೆ ತುತ್ತಾಗಿದ್ದ. ಮಾಟ ಮಂತ್ರದ ಪ್ರಯೋಗದಿಂದ ಹಿಡಿದು ಔಷಧೀಯ ಪದ್ಧತಿಯ ಎಲ್ಲಾ ಬಗೆಯ ಚಿಕಿತ್ಸೆಗಳನ್ನೂ ಆತನಿಗೆ ನೀಡಲಾಗಿತ್ತು.

 

ಆತನಿಗಿದ್ದ ರೋಗವನ್ನು ತಪ್ಪಾಗಿ ನಿರ್ಧರಿಸಲಾಗಿತ್ತು. ಅಲ್ಲದೆ ನೀಡಲಾಗುತ್ತಿದ್ದ ಔಷಧಗಳು ಹಾಗೂ ಚುಚ್ಚುಮದ್ದುಗಳು ಸಹ ತಪ್ಪಾಗಿದ್ದವು. ಆತನಿಗೆ ಮೆಟ್ಟಿಕೊಂಡಿದ್ದ `ಭೂತ~ದಿಂದ ಮುಕ್ತಿಗೊಳಿಸಲು ಅವನ ಪೋಷಕರು ಹರಸಾಹಸ ಪಟ್ಟಿದ್ದರು.ಆಸ್ಪತ್ರೆಯಲ್ಲಿದ್ದಷ್ಟೂ ಕಾಲ ಚುಚ್ಚುಮದ್ದನ್ನು ನೀಡುವಾಗ ಚೇತನ್ ಅದಕ್ಕೆ ಪ್ರತಿಸ್ಪಂದಿಸಲೂ ಇಲ್ಲ, ಬೆದರಲೂ ಇಲ್ಲ. ವೈದ್ಯರು, ತಂದೆ ತಾಯಿಗಳು ಅಥವಾ ಮತ್ತೊಬ್ಬರತ್ತ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಪ್ರಯತ್ನವನ್ನೇ ಮಾಡುತ್ತಿರಲಿಲ್ಲ. ತನ್ನನ್ನು ಪ್ರಪಂಚದಿಂದ ಬೇರ್ಪಡಿಸಿಕೊಂಡವನಂತೆ ಆತ ಕಾಣುತ್ತಿದ್ದ.ಆತನ ರೋಗದ ಬಗ್ಗೆ ಪದೇ ಪದೇ ವಿಚಾರಣೆ ಮಾಡಿದಾಗ ನಿಶ್ಶಕ್ತಿ, ತಲೆನೋವು, ಕಣ್ಣುಗಳಲ್ಲಿ ನೋವು ಮತ್ತು ತೀವ್ರ ಎದೆನೋವು (ಜಯದೇವ ಹೃದ್ರೋಗ ಆಸ್ಪತ್ರೆಯ ಸಲಹೆಯನ್ನು ಅಡಕ ಮಾಡಲಾಗಿತ್ತು) ಇದೆ ಎಂಬುದನ್ನು ಹೇಳಿಕೊಂಡ.ಹಾಸಿಗೆ ಮೇಲೆ ಕುಳಿತುಕೊಂಡಿರುತ್ತಿದ್ದ ಚೇತನ್ ಮಲಗಿ ನಿದ್ರೆ ಮಾಡದೆ ಹಗಲಿರುಳೂ ತನ್ನ ಕಣ್ಣುಗಳನ್ನು ಅಗಲವಾಗಿ ತೆರೆದುಕೊಂಡು ಎಚ್ಚರದಿಂದಲೇ ಇರುತ್ತಿದ್ದ. ಅತೀವ ದುಃಖಿತನಾಗಿ, ನಿದ್ರಾಹೀನನಾಗಿ, ಆಟ ಮತ್ತು ಊಟದ ಬಗ್ಗೆ ಆಸಕ್ತಿಯಿಲ್ಲದ ಬದುಕನ್ನು ಕಳೆಯುತ್ತಿದ್ದ.ಆ ಬಾಲಕನೊಂದಿಗೆ ಅನೇಕ ಸಮಯ ಕಳೆದ ಡಾ. ಅನಿಲ್ ನನ್ನ ಬಳಿ ಬಂದು, `ಮೇಡಂ, ಈ ಮಗುವಿಗೆ ಬೇರೆ ಏನೋ ಗಂಭೀರ ಸಮಸ್ಯೆಯಿದೆ~ ಎಂದರು. ಆತನಿಗಿರುವ ನಿಜವಾದ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಮಾಹಿತಿ ಪಡೆಯಲು ನಾವು ವಾರಗಟ್ಟಲೆ ಪ್ರಯತ್ನಿಸಿದೆವು. ಆದರೆ ಚೇತನ್‌ನ ಪೋಷಕರಿಂದ ಯಾವುದೇ ಪ್ರಯೋಜನವಾಗಲಿಲ್ಲ.ಚೇತನ್ 10ನೇ ತರಗತಿಯಲ್ಲಿ ಓದುತ್ತಿದ್ದ, ಪ್ರತಿಭಾವಂತ ವಿದ್ಯಾರ್ಥಿ ಎನ್ನಿಸಿಕೊಂಡಿದ್ದ. ಯಾವುದೇ ಕಾರಣವಿಲ್ಲದೆ, ಇದ್ದಕ್ಕಿದ್ದಂತೆ ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುವುದು ಹಾಗೂ ಏಕಾಏಕಿ ಅನೇಕ ರೋಗಲಕ್ಷಣಗಳು ಆತನ ಶರೀರದಲ್ಲಿ ಕಾಣಿಸಿಕೊಳ್ಳುವುದು ತೀರಾ ಅಸ್ಪಷ್ಟವಾದ ಮತ್ತು ಸುಲಭಕ್ಕೆ ಗ್ರಹಿಸಲು ಕಷ್ಟವಾದ ಸಂಗತಿಯಾಗಿತ್ತು. ಅಲ್ಲದೆ ಆತನಲ್ಲಿ ಆತ್ಮಹತ್ಯೆಯ ಕಲ್ಪನೆಯೂ ಹುಟ್ಟಿಕೊಂಡಿತ್ತು.

 

ಆತನಲ್ಲಿ ಹತಾಶೆ ಮತ್ತು ತಾನು ನಿಷ್ಪ್ರಯೋಜಕನೆಂಬ ಭಾವನೆ ದಿನೇ ದಿನೇ ಉತ್ಕಟವಾಗುತ್ತ ಬಲವಾಗಿ ಬೇರೂರತೊಡಗಿತ್ತು. ಹದಿನೈದು ವರ್ಷದ ಬಾಲಕ ಚೇತನ್ `ಆಂತರಿಕ ಖಿನ್ನತೆ~ (ಎಂಡೋಜೆನಸ್ ಡಿಪ್ರೆಷನ್)ಯ ಅಪರೂಪದ ಸಮಸ್ಯೆಯಿಂದ ತೀವ್ರವಾಗಿ ಬಳಲುತ್ತಿದ್ದುದು ಕೊನೆಗೂ ಸ್ಪಷ್ಟವಾಯಿತು.ಕಡು ಬಡತನದ ಕುಟುಂಬದಿಂದ ಬಂದ ಚೇತನ್, ದರ್ಜಿ ವೃತ್ತಿ ಮಾಡುವ ತಂದೆಗೆ ಎರಡನೇ ಮಗ. ತಾಯಿ ಗೃಹಿಣಿ. ಚೇತನ್ ತಂದೆಗೆ ಸುಮಾರು 25 ವರ್ಷದಿಂದಲೂ ಕುಡಿತ ಮತ್ತು ಬೀಡಿ ಸೇದುವ ಚಟವಿತ್ತು. ಮನೆಯಲ್ಲಿ ಕಿತ್ತುತಿನ್ನುವ ಬಡತನದ ಮಧ್ಯೆಯೂ ಆತನ ತಂದೆ ವ್ಯಸನಗಳ ಗೀಳುಹಿಡಿಸಿಕೊಂಡಿದ್ದ.ಅವರೊಂದಿಗೆ ವಾಸಿಸುತ್ತಿದ್ದ ಆತನ 70 ವರ್ಷದ ಅಜ್ಜಿ ಕೂಲಿ ಮಾಡಿ ಬರುತ್ತಿದ್ದ ಅಲ್ಪ ಆದಾಯದಿಂದ ತನ್ನ ಮತ್ತು ಮನೆಯವರ ಹೊಟ್ಟೆಹೊರೆಯುತ್ತಿದ್ದಳು. ಐದು ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದ ಆತನ ಅಜ್ಜ ಬಳಿಕ ಪತ್ತೆಯಾಗಿರಲಿಲ್ಲ. ಚಿಕಿತ್ಸೆಗೆ ಸ್ವಲ್ಪಮಟ್ಟಿಗೆ ಪ್ರತಿಸ್ಪಂದಿಸಲು ಪ್ರಾರಂಭಿಸಿದ ಬಳಿಕ ಚೇತನ್ ಮನೆಯಲ್ಲಿನ ಈ ಸಮಸ್ಯೆಗಳಿಂದ ತಾನು ತೀವ್ರವಾಗಿ ನೊಂದಿರುವುದಾಗಿ ಹೇಳಿಕೊಂಡ.ಆಸ್ಪತ್ರೆಯಲ್ಲಿದ್ದ ದೀರ್ಘಕಾಲೀನ ರೋಗ ಪೀಡಿತ ಮಕ್ಕಳಾದ ಚೇತನ್, ಗೌತಮ್ ಮತ್ತು ರಾಮ್‌ರಕ್ಷಿತ್ ಅಲ್ಲಿನ ಪರಿಸರದಲ್ಲಿ ತೀರಾ ಬೇಸರದಲ್ಲಿದ್ದಂತೆ ತೋರುತ್ತಿತ್ತು. ಹೀಗಾಗಿ ನನ್ನ ಮನೆಯಿಂದ ಕೇರಂಬೋರ್ಡ್ ಅನ್ನು ತಂದು ಕೊಟ್ಟೆ.

 

ಈ ಮಕ್ಕಳಿಗೆ ಒಳಾಂಗಣ ಆಟ ಆಡಲು ಅನುಕೂಲವಾಗಲಿ ಎನ್ನುವುದು ನನ್ನ ಹಂಬಲವಾಗಿತ್ತು. ಆದರೆ, ವಿಲಕ್ಷಣ ಸ್ವಭಾವದ ಚೇತನ್ ಈ ಗುಂಪಿನೊಂದಿಗೆ ಬೆರೆಯಲೇ ಇಲ್ಲ. ಆತನನ್ನು ಮನವೊಲಿಸುವ ಮತ್ತು ಒತ್ತಡ ಹೇರುವ ಪ್ರಯತ್ನಗಳು ಫಲಪ್ರದವಾಗಲಿಲ್ಲ.ಒಮ್ಮೆ ನಾವು ಚಿಕಿತ್ಸೆಯನ್ನು ಮುಂದುವರೆಸುತ್ತಿದ್ದಾಗ ನಾನು ಮತ್ತು ಅನಿಲ್ ಆತನಿಗೆ ನೀಡುತ್ತಿದ್ದ ಎಲ್ಲಾ ಔಷಧಗಳನ್ನೂ ನಿಲ್ಲಿಸಿ ನನ್ನ ಸಹೋದ್ಯೋಗಿ, ವಿಕ್ಟೋರಿಯಾ ಆಸ್ಪತ್ರೆಯ ಮನೋವೈದ್ಯ ಡಾ.ಎಚ್.ಚಂದ್ರಶೇಖರ್ ಹಾಗೂ ಮತ್ತಿತ್ತರರ ಸಲಹೆ ಪಡೆಯಲು ನಿರ್ಧರಿಸಿ ಸಾಂಘಿಕ ಪ್ರಯತ್ನಕ್ಕೆ ಮುಂದಾದೆವು.

 

ಶಿಶು ಖಿನ್ನತೆಯ ರೋಗಿಯಾಗಿ ಚೇತನ್‌ಗೆ ಚಿಕಿತ್ಸೆ ನೀಡಲಾಯಿತು. ಆತ್ಮಹತ್ಯೆಯಿಂದ ನಾವು ಕಳೆದುಕೊಳ್ಳಬಹುದಾಗಿದ್ದ ಈ ಮಗುವನ್ನು ಕೇವಲ ವಿವೇಕದ ಚಿಕಿತ್ಸೆಯಿಂದ ಉಳಿಸಿಕೊಳ್ಳಲು ಸಾಧ್ಯವಾಯಿತು.ಈಗ ಚೇತನ್‌ಗೆ 18 ವರ್ಷ. ಸಿದ್ಧಲಘಟ್ಟದಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ಅಭ್ಯಾಸ ಮಾಡುತ್ತಿದ್ದಾನೆ. ಎಂದಿನಂತೆ ಲವಲವಿಕೆಯಿಂದ ಬದುಕುತ್ತಿದ್ದಾನೆ. ತಪಾಸಣೆಗೆಂದು ಆಸ್ಪತ್ರೆಗೆ ಬಂದಾಗ ನನ್ನನ್ನು ಭೇಟಿ ಮಾಡಿ ಹಲೋ ಹೇಳುತ್ತಾನೆ. ಹೀಗೊಮ್ಮೆ ಭೇಟಿಯಾದಾಗ, ಆತನಿಗೆ, `ನಿನ್ನ ಕಥೆ ಬರೆಯಬೇಕು.

 

ಹೀಗಾಗಿ ಮುಂದಿನ ಸಲ ಬಂದಾಗ ನನ್ನನ್ನು ಭೇಟಿ ಮಾಡು~ ಎಂದಿದ್ದೆ. ನನ್ನೊಡನೆ ಊಟ ಮಾಡಿದ ಚೇತನ್ ಅತ್ಯಂತ ಸಂವಹನಕಾರಿಯಾಗಿ ಮತ್ತು ಉದ್ವೇಗದಿಂದ ತನ್ನ ಬದುಕಿನ ಇನ್ನೊಂದು ಮುಖದ ಕಥೆಯನ್ನು ಮನಬಿಚ್ಚಿ ನಿಧಾನವಾಗಿ ತೆರೆದಿಡತೊಡಗಿದ.ಚೇತನ್ ಓದುತ್ತಿದ್ದ ಸಿದ್ಧಲಘಟ್ಟದಲ್ಲಿರುವ ಕಾಲೇಜಿಗೆ ನಿತ್ಯದ ಬಸ್‌ಚಾರ್ಜ್ 20 ರೂಪಾಯಿ. ಕಡು ಬಡತನದ ಬೇಗೆಯಲ್ಲಿ ಒದ್ದಾಡುತ್ತಿದ್ದ ಆತನ ಕುಟುಂಬಕ್ಕೆ ನಿತ್ಯವೂ ಅಷ್ಟು ಹಣ ಸಂಪಾದಿಸುವುದು ಸಾಧ್ಯವಿರಲಿಲ್ಲ. ಹೀಗಾಗಿ ಹಣವಿಲ್ಲದಿದ್ದಾಗ ಆತ ಕಾಲೇಜಿಗೆ ಹೋಗುತ್ತಿರಲಿಲ್ಲ. ಇದು ಆತನ ಜೀವನದ ಪ್ರಮುಖ ಗುರಿಯಾದ ಅಧ್ಯಯನ ಮತ್ತು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಲು ಬೇಕಾದ ಹಣವನ್ನು ಸಂಪಾದಿಸುವ ಆಸೆಯನ್ನು ಹತ್ತಿಕ್ಕತೊಡಗಿತ್ತು.ಮಾಡುತ್ತಿದ್ದ ಕೆಲಸವನ್ನೂ ತೊರೆದಿದ್ದ ಆತನ ತಂದೆ ಕುಡಿತದಿಂದ ಉಂಟಾಗುವ ಯಕೃತ್ತಿನ ರೋಗ (ಸಿರೋಸಿಸ್ ಆಫ್ ಲಿವರ್) ಮತ್ತು ಮೇದೋಜೀರಕ ಗ್ರಂಥಿಯ ಸಮಸ್ಯೆಗಳಂತಹ ಹಲವು ರೋಗಗಳಿಗೆ ತುತ್ತಾಗಿದ್ದರು. ದುಶ್ಚಟಗಳಿಗೆ ಬಲಿಯಾಗಿದ್ದ ಅವರ ಪರಿಸ್ಥಿತಿ ವಿಷಮಿಸಿತ್ತು. ಅಪ್ಪನ ಬಗ್ಗೆ ಚೇತನ್ ಹೆಚ್ಚು ಮಾತನಾಡಲು ಬಯಸಲಿಲ್ಲ. ನಂತರದ ದಿನಗಳಲ್ಲಿ ಚೇತನ್ ತನ್ನ ಜೊತೆ ತಂದೆಯನ್ನೂ ಚಿಕಿತ್ಸೆಗಾಗಿ ನಿರಂತರವಾಗಿ ಕರೆತರಲಾರಂಭಿಸಿದ.ಒಂದು ವರ್ಷದ ಹಿಂದೆ, ತೀವ್ರ ಉದ್ವೇಗಕ್ಕೊಳಗಾಗಿದ್ದ ಚೇತನ್ ನನಗೆ ಫೋನ್ ಮಾಡಿದ. ತನ್ನ ತಾಯಿ ಗಂಭೀರವಾಗಿ ಅಸ್ವಸ್ಥಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿರುವುದಾಗಿ ಹೇಳಿದ.ನಾನು ಅವರನ್ನು ನೋಡಲು ಅಲ್ಲಿಗೆ ತೆರಳಿ, ಅಲ್ಲಿನ ವೈದ್ಯರೊಂದಿಗೆ ಸಮಾಲೋಚನೆ ನಡೆಸುವಂತೆ ನನ್ನನ್ನು ಭೇಟಿ ಮಾಡಿ ಕೋರಿಕೊಂಡ. (ಮೆದುಳಿಗೆ ತಗುಲಿದ್ದ ಕ್ಷಯದಿಂದ ಆಕೆ ಗಮನಾರ್ಹವಾಗಿ ಚೇತರಿಸಿಕೊಳ್ಳುತ್ತಿದ್ದರು).

ಚೇತನ್‌ನ ತಂದೆ ತಮ್ಮ ಎರಡು ಎಕರೆ ಅನುತ್ಪಾದಕ ಜಮೀನನ್ನು ಆತನ ಚಿಕ್ಕಪ್ಪನೊಂದಿಗೆ ಹಂಚಿಕೊಂಡಿದ್ದರು.

 

ವಿವಿಧ ಕೆಲಸಗಳನ್ನು ಮಾಡುತ್ತಿದ್ದ ಆತನ ಇಪ್ಪತ್ತು ವರ್ಷದ ಪದವೀಧರ ಅಣ್ಣ ತನ್ನ ಐವರು ಸದಸ್ಯರ ಮತ್ತು ಮೂವರು ದೀರ್ಘಕಾಲದ ಕಾಯಿಲೆಗೆ ತುತ್ತಾದ ರೋಗಿಗಳಿರುವ ಸಂಸಾರದ ನಿರ್ವಹಣೆಯ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದ. ನಾನು ಆತನಿಗೆ, `ಯಶಸ್ವಿನಿ ಕಾರ್ಡ್~ ಬಗ್ಗೆ ಹೇಳಿದೆ.ಆತ, ತಾನು ಬೆಂಗಳೂರಿಗೆ ಪ್ರಯಾಣಿಸುವ ವೇಳೆಯಲ್ಲಿ ಬಸ್‌ನಲ್ಲಿ ಕಳೆದುಕೊಂಡಿದ್ದಾಗಿ, ಅದನ್ನು ಮತ್ತೆ ಮರಳಿ ಪಡೆಯುವ ಪ್ರಯತ್ನ ಇನ್ನೂ ಕಷ್ಟಕರವಾಗಿದೆ ಎಂದು ಹೇಳಿದ. ಬಳಿಕ ಆತ ನನ್ನನ್ನೇ ಸಮಾಧಾನ ಪಡಿಸುತ್ತಾ, `ಯೋಚಿಸಬೇಡಿ ಮೇಡಂ, ಚಿಕಿತ್ಸೆಯೇನೋ ಉಚಿತ, ಆದರೆ ಬಸ್ ಚಾರ್ಜ್?~ ಎಂದಿದ್ದ.ಈಗ ಚೇತನ್ ಮನಬಿಚ್ಚಿ ಮಾತನಾಡುತ್ತಾನೆ, ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾನೆ. ಮಾತ್ರವಲ್ಲ, ಕಾಯಿಲೆಗೆ ತುತ್ತಾದ ತನ್ನೂರಿನ ಜನರಿಗೆ ಸಹಾಯ ಮಾಡುತ್ತಾನೆ. ಆತ ನಮ್ಮ `ಬ್ರಾಂಡ್ ಅಂಬಾಸೆಡರ್~.ಒಂದು ದಿನ ಆತ ಫೋನ್ ಮಾಡಿ ತನ್ನ ಹಳ್ಳಿಯ ಗರ್ಭಿಣಿ ಮಹಿಳೆಯೊಬ್ಬರನ್ನು ಆಸ್ಪತ್ರೆಯಲ್ಲಿ ತಕ್ಷಣಕ್ಕೆ ದಾಖಲು ಮಾಡಿಕೊಳ್ಳುತ್ತಿಲ್ಲ ಎಂಬ ವಿಚಾರವನ್ನು ತಿಳಿಸಿದ್ದ. ನನ್ನೊಂದಿಗಿನ ಮಾತು ಮುಗಿಯುವ ಮೊದಲೇ ಆ ಮಹಿಳೆಗೆ ಮೊದಲ ಆದ್ಯತೆ ನೀಡಿದ್ದನ್ನು ಸ್ಮರಿಸಿದ. ನಾನು ಆತನ ಪಾಲಿಗೆ ಅತಿ ದೊಡ್ಡ ಪ್ರಭಾವಿ ವ್ಯಕ್ತಿಯಾದೆ.ಒಮ್ಮೆ ನನ್ನೊಂದಿಗಿನ ಭೇಟಿ, ಊಟದ ನಂತರ ಚೇತನ್ ಹೊರಡಲನುವಾದ. ಬಡವರಿಗೆ ಚಳಿ ವಾತಾವರಣದಲ್ಲಿ ಹಂಚಲೆಂದು ಸಂಗ್ರಹಿಸಿದ್ದ ಬಟ್ಟೆಗಳ ಚೀಲ ಅವನ ಕಣ್ಣಿಗೆ ಬಿತ್ತು. `ಮೇಡಂ ನಾನು ಅವುಗಳನ್ನು ತೆಗೆದುಕೊಂಡು ಹೋಗಬಹುದೇ~ ಎಂದು ಕೇಳಿದ. ಆಗ ನಾನು, `ಇವು ನನ್ನ ನೆರೆಯವನಾದ ಸನತ್ ಕೌಶಿಕ್ ಎಂಬಾತನಿಗೆ ಕೊಡಬೇಕಿರುವುದು. ನೀನು 18 ವರ್ಷದವನು. ಅವನು 11 ವರ್ಷದವನು.ನಿನಗೆ ಚಿಕ್ಕದಾಗುತ್ತವೆ~ ಎಂದು ವಿವರಿಸಿದೆ. ಆದರೆ ಅದನ್ನು ಧರಿಸಲು ಪ್ರಯತ್ನಿಸುವುದಾಗಿ ಆತ ಹಟ ಮಾಡಿದ. ಅವೆಲ್ಲವೂ ಚೇತನ್‌ಗೆ ಸರಿಯಾಗಿ ಹೊಂದಿಕೆಯಾದವು. ಬಡತನದ ಬೇಗೆ ಆತನನ್ನು ಬೇಡುವಂತೆ ಮತ್ತು ಕಟ್ಟಿಹಾಕುವಂತೆ ಮಾಡಿತ್ತು. ನನಗೆ ಇದರಿಂದ ಅತೀವ ದುಃಖವಾಯಿತು.

 

ಆತನ ಬಳಿ ಬಟ್ಟೆಗಳು ಇಲ್ಲವೆಂಬುದು ತಿಳಿದಿರಲಿಲ್ಲ ಎಂದು ಚೇತನ್‌ಗೆ ಹೇಳಿದೆ. ನನ್ನನ್ನು ನೋಡಲು ಬಂದಾಗಲೆಲ್ಲಾ ಆತನ ಬಳಿ ಇದ್ದ ಒಂದೇ ಒಂದು ಒಳ್ಳೆಯ ಜೊತೆ ಬಟ್ಟೆಯನ್ನೇ ಧರಿಸಿ ಬರುತ್ತಿದ್ದನು. ಆತನ ಉಳಿದ ಹರಿದ ಬಟ್ಟೆಗಳಿಗೆ ಆತನ ಟೈಲರ್ ತಂದೆ ತೇಪೆ ಹಾಕುತ್ತಿದ್ದರೆಂಬ ಸತ್ಯವನ್ನು ಆಗ ಹೇಳಿಕೊಂಡ.ನಮಗೆ ಮನೆಯಲ್ಲಿದ್ದಾಗ ಎಲ್ಲಾ ಹೊದಿಕೆಗಳನ್ನು ಹೊದ್ದುಕೊಂಡಿದ್ದಾಗಲೂ ಮೈ ಉಡುಗಿಸುವ ಚಳಿಯನ್ನು ಸಹಿಸಲು ಸಾಧ್ಯವಾಗದಿರುವಾಗ, ಬೀದಿ ಬದಿಗಳಲ್ಲಿ ಮಲಗುವ ಮಕ್ಕಳ ಪರಿಸ್ಥಿತಿಯನ್ನು ನೆನೆದು ಸ್ನೇಹಿತರ ಸಹಾಯದಿಂದ ಬಟ್ಟೆಗಳನ್ನು ಸಂಗ್ರಹಿಸಿದ್ದೆ. ಚೇತನ್ ಅದನ್ನು ಪಡೆದ ಮೊದಲ ಫಲಾನುಭವಿ.

 

ನನ್ನ ಹೆಚ್ಚಿನ ಸ್ನೇಹಿತರು ಅವುಗಳನ್ನು ಆಶ್ರಮಗಳಿಗೆ ದಾನ ಮಾಡುವುದಾಗಿ ಹೇಳಿದ್ದರು. ಆಶ್ರಮಗಳಲ್ಲಿರುವ ಮಕ್ಕಳಿಗೆ ಆಹಾರ, ವಸತಿ ಮತ್ತು ಬಟ್ಟೆಗಳು ದೊರಕುತ್ತವೆ. ಆದರೆ `ಆಶ್ರಮದ ಆಶ್ರಯ~ದಿಂದ ಹೊರಗಿರುವ ಮಕ್ಕಳಿಗೆ? ನನ್ನ ಅತ್ಯಂತ ಶ್ರೀಮಂತ ಸ್ನೇಹಿತೆಯೊಬ್ಬರು ಅವರ ಬಳಿಯಿರುವ 4011ನೇ ಕಂಚೀ ಸೀರೆಯನ್ನು ಇಡಲು ತಮ್ಮ ಮನೆಯ ನೆಲ ಅಂತಸ್ತಿನಲ್ಲಿ ವಾರ್ಡ್‌ರೋಬ್ ಕಟ್ಟಿಸಿರುವುದಾಗಿ ಹೇಳಿದ್ದರು!ಚೇತನ್ ಹೊರಡುವ ಮುನ್ನ ಇಬ್ಬರೂ ಒಟ್ಟಿಗೆ ಫೋಟೊ ತೆಗೆಸಿಕೊಂಡೆವು. ತನ್ನ ಜೊತೆ ಇದ್ದ ಗೌತಮ್ ಮತ್ತು ರಾಮ್‌ರಕ್ಷಿತ್ ಬಗ್ಗೆ ಆತ ವಿಚಾರಿಸಿದನು. (ರಾಮ್‌ರಕ್ಷಿತ್ ಬದುಕಿಲ್ಲವೆಂಬ ಸತ್ಯ ಹೇಳಿಬಿಡಲು ನನಗೆ ಧೈರ್ಯ ಬರಲಿಲ್ಲ). ಈ ಬಾರಿ ಆತನಿಗೆ ನನ್ನ ಕರ್ತವ್ಯವೆಂಬಂತೆ ಬಸ್ ಚಾರ್ಜ್ ಹಣವನ್ನು ನೀಡಲು ಹೋದೆ.

 

ನಾನು ಒತ್ತಾಯಿಸಿದರೂ ಚೇತನ್ ಹಣ ಪಡೆಯಲು ನಿರಾಕರಿಸಿದ. ಆತನ ಸ್ವಾಭಿಮಾನ ಮತ್ತು ಆತ್ಮಗೌರವಕ್ಕೆ ನಾನು ತಲೆಬಾಗಿದೆ. ವೈದ್ಯರೆಡೆಗಿನ ಅವರ ಕೃತಜ್ಞತಾ ಭಾವವನ್ನು ಅಳೆಯಲು ಸಾಧ್ಯವಿಲ್ಲ.ಯಾವುದೇ ಸಮಯದಲ್ಲಿ ಬೇಕಾದರೂ ನನಗೆ ಫೋನ್ ಮಾಡಿ ಮಾತನಾಡುವ ಅವಕಾಶ ಹೊಂದಿರುವವರಲ್ಲಿ ಚೇತನ್ ಕೂಡ ಒಬ್ಬ. ಈ ಮುಂಚೆ ಸಾರ್ವಜನಿಕ ಟೆಲಿಫೋನ್ ಬೂತ್‌ನಿಂದ ಫೋನ್ ಮಾಡುತ್ತಿದ್ದ. ಈಗ ಆ ಕುಟುಂಬದ ಬಳಿ ಒಂದು ಮೊಬೈಲ್ ಫೋನ್ ಇದೆ.ಆತ ಹೊರಟು ತಿರುಗಿ ನಿಂತಾಗ ಅವನ ಪ್ಯಾಂಟ್‌ನಲ್ಲಿದ್ದ ತೇಪೆಯೊಂದು ನನ್ನ ಕಣ್ಣಿಗೆ ಬಿದ್ದಂತಾಯಿತು ಅಥವಾ ಅದನ್ನು ನನ್ನ ಕಲ್ಪನೆಯೊಳಗೆ ತಂದುಕೊಂಡೆ.ಅಂದಹಾಗೆ, ಖಿನ್ನತೆ ರೋಗದ ಅಸ್ತಿತ್ವ ಮತ್ತು ಅದರ ಮಟ್ಟವನ್ನು ವೈಜ್ಞಾನಿಕವಾಗಿ ತಿಳಿದುಕೊಂಡು, ಈ ಸಮಸ್ಯೆಗಳಿಗೆ ಆರಂಭದಲ್ಲಿಯೇ ಚಿಕಿತ್ಸೆ ನೀಡಿದರೆ ಮಕ್ಕಳು ಆತ್ಮಹತ್ಯೆಗೆ ಮುಂದಾಗುವುದನ್ನು ತಪ್ಪಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry