ಛಪ್ಪನ್ನಾರು ರಾಷ್ಟ್ರಗಳನ್ನು ಒಂದಾಗಿಸಿದ ದುರಂತ

7

ಛಪ್ಪನ್ನಾರು ರಾಷ್ಟ್ರಗಳನ್ನು ಒಂದಾಗಿಸಿದ ದುರಂತ

Published:
Updated:

ಮಲೇಷ್ಯಾದ ‘ಎಮ್‌ಎಚ್ ೩೭೦’   ವಿಮಾನ ಕಣ್ಮರೆಯಾದ ಹೊಸದ ರಲ್ಲಿ ಎಷ್ಟೊಂದು ಪ್ರಶ್ನೆಗಳು ಎದ್ದಿದ್ದವು. ಎಷ್ಟೊಂದು ಬಗೆಯ ಊಹಾಪೋಹಗಳು ಎದ್ದಿದ್ದವು. ಯಾರೊ ಹೈಜಾಕ್ ಮಾಡಿರಬೇಕು, ಅಥವಾ ಉಗ್ರರು ಸ್ಫೋಟಿಸಿರಬೇಕು, ಅಥವಾ ಚಾಲಕನೇ ತಲೆಕೆಟ್ಟು ವಿಮಾನವನ್ನು ಸಮುದ್ರಕ್ಕೆ ಮುಳುಗಿಸಿರಬೇಕು ಅಥವಾ ತಾನಾಗಿ ಬೆಂಕಿ ಹೊತ್ತಿಕೊಂಡಿರಬೇಕು ಅಥವಾ ವೈರಿ ದೇಶ­ವೊಂದು ರಾಕೆಟ್ ಚಿಮ್ಮಿಸಿ ವಿಮಾನವನ್ನು ಕೆಡ ವಿರ­ಬೇಕು, ಅಥವಾ ಮಿತ್ರದೇಶವೇ ತಪ್ಪುಗ್ರಹಿಕೆ­ಯಿಂದ ಕ್ಷಿಪಣಿ ಉಡಾಯಿಸಿ ಕೆಡವಿರಬೇಕು ಅಥವಾ ಉಲ್ಕೆಯೊಂದು ಅಪ್ಪಳಿಸಿರಬೇಕು ಅಥವಾ ಅನ್ಯಲೋಕದ ಎಂಥದೋ ಜೀವಿಗಳು ಇಡೀ ವಿಮಾನವನ್ನೇ ಅಗೋಚರ ಲೋಕಕ್ಕೆ ಸೆಳೆದಿರಬೇಕು.ಹಿಂದಿನ ಯಾವ ದುರಂತವೂ ಇಷ್ಟೊಂದು ಜನರ ಊಹಾಶಕ್ತಿಯನ್ನು ಕೆಣಕಿರಲಿಲ್ಲ. ಇಷ್ಟೊಂದು ದೀರ್ಘಕಾಲ ಚರ್ಚಿತವಾಗಿರಲಿಲ್ಲ. ಇಷ್ಟೊಂದು ದೇಶಗಳ ಇಷ್ಟೊಂದು ಬಗೆಯ ತಾಂತ್ರಿಕ ಸಾಧನೆಗಳನ್ನು ಏಕತ್ರಗೊಳಿಸಿರಲಿಲ್ಲ.ಪ್ರಶ್ನೆ ಏನೆಂದರೆ ೨೨೭ ಪ್ರಯಾಣಿಕರನ್ನು ಹೊತ್ತ ಜಂಬೊ ಜೆಟ್ ವಿಮಾನ ಯಾವ ಉಪ­ಗ್ರಹದ ಯಾವ ಉಪಕರಣಕ್ಕೂ ಕಾಣದಂತೆ ನಾಪತ್ತೆಯಾಗಲು ಸಾಧ್ಯವೆ? ವಿಮಾನದಲ್ಲೇ ಅಷ್ಟೊಂದು ವಿಧವಾದ ಸಂಪರ್ಕ ಸಾಧನಗಳು, ೧೨ ಸಿಬ್ಬಂದಿ ಇರುವಾಗ ಒಂದೇ ಒಂದು ಸಂಕೇತವೂ ಅಲ್ಲಿಂದ ಬಾರದೇ ವಿಮಾನ ಕಣ್ಮರೆ­ಯಾಗಲು ಹೇಗೆ ಸಾಧ್ಯ? ನಾವು ಮಂಗಳಲೋಕ­ದಲ್ಲಿನ ಮೂರು ಮೊಳ ಉದ್ದದ ಗಾಡಿಯನ್ನು ಇಲ್ಲಿಂದ ನಿಯಂತ್ರಿಸುತ್ತೇವೆ. ತನ್ನ ಚಕ್ರ ಮರಳಲ್ಲಿ ಹೂತಿದೆ ಎಂದು ಆ ಗಾಡಿ ಅಲ್ಲಿಂದ ಸಂಕೇತ ಕಳಿಸಿದರೆ ನಾವು ಇಲ್ಲಿಂದಲೇ ಅದರ ಸಮಸ್ಯೆ­ಯನ್ನು ಬಿಡಿಸಲು ಯತ್ನಿಸುತ್ತೇವೆ. ಅಂತಿದ್ದಾಗ ಈ ವಿಮಾನ ಕಳೆದು ಹೋದದ್ದು ಹೇಗೆ?ಜಗತ್ತಿನ ಎಲ್ಲ ಪ್ರಮುಖ ವಿಮಾನಯಾನ ತಜ್ಞರು, ಪೈಲಟ್‌ಗಳು, ಭಯೋತ್ಪಾತ ತಜ್ಞರು, ಹವಾಗುಣ ತಜ್ಞರು ಎಲ್ಲರೂ ತಂತಮ್ಮ ಚಿಂತನೆಗಳನ್ನು ತರ್ಕಬದ್ಧವಾಗಿ ಮಂಡಿಸುತ್ತಾರೆ. ವಿಮಾನ ಹೊರಟು ಒಂದು ಗಂಟೆಯ ಪಯಣದ ನಂತರ ಹಠಾತ್ತಾಗಿ ತನ್ನ ದಿಕ್ಕನ್ನು ಬದಲಿಸಿದೆ. ಆ ನಂತರ ಯಾವ ಸಂಕೇತವೂ ವಿಮಾನದಿಂದ ಹೊಮ್ಮಿಲ್ಲ. ಆದುದರಿಂದ ಅದು ದುಷ್ಕರ್ಮಿಗಳ ಕೃತ್ಯವೇ ಇರಬೇಕು. ಹಾಗಿದ್ದರೆ ವಿಮಾನ ಎಲ್ಲಿ ಹೋಯಿತು? ಯಾವುದೋ ಅಡವಿಯಲ್ಲಿ ಇಳಿಸಿ ಅಡಗಿಸಿ ಇಡಲು ಸಾಧ್ಯ­ವಿಲ್ಲ. ಸಮುದ್ರಕ್ಕೆ ಬಿದ್ದರೆ ಅವಶೇಷಗಳು ಚೆಲ್ಲಾಪಿಲ್ಲಿ ಬಿದ್ದಿರಬೇಕಿತ್ತು.ಎಲ್ಲರೂ ಹೀಗೆ ತಲೆಬಿಸಿ ಮಾಡಿಕೊಳ್ಳು ತ್ತಿದ್ದಾಗ ಕೆನಡಾದ ಮಾಜಿ ಪೈಲಟ್ ಕ್ರಿಸ್ ಗುಡ್‌ಫೆಲೊ ಎಂಬಾತ ಒಂದು ಸರಳ ತರ್ಕವನ್ನು ಮುಂದಿಟ್ಟ. ಅದೇ ಈಗ ಎಲ್ಲರ ಗಮನ ಸೆಳೆದಿದೆ. ಸತ್ಯ ಇಷ್ಟು ಸರಳ ಇರಲು ಸಾಧ್ಯವೆ ಎಂಬ ಉದ್ಗಾರ ಹೊಮ್ಮುತ್ತದೆ.ಗುಡ್‌ಫೆಲೊ ವಾದ ಇಷ್ಟೆ: ವಿಮಾನ ಕ್ವಾಲಾಲಂಪುರದಿಂದ ಮಧ್ಯರಾತ್ರಿಯಲ್ಲಿ ಹೊರ­ಡು­ತ್ತದೆ. ಹೊರಟ ಒಂದು ಗಂಟೆಯವರೆಗೂ ಎಲ್ಲವೂ ಸರಿ ಇದೆ. ‘ಗುಡ್ ನೈಟ್’ ಎಂದು ಹೇಳಿದ ಪೈಲಟ್ ಕೆಲವೇ ನಿಮಿಷಗಳಲ್ಲಿ ವಿಮಾನವನ್ನು ಎಡಕ್ಕೆ ತಿರುಗಿಸುತ್ತಾನೆ. ನೆಲ­ದೊಂದಿಗಿನ ಎಲ್ಲ ಸಂಪರ್ಕ ಕಳೆದು ಹೋಗು­ತ್ತದೆ. ಆತ ಅನುಭವಸ್ಥ ಪೈಲಟ್. ವಿಮಾನ ಆಕಾಶದಲ್ಲಿ ಚಲಿಸುತ್ತಿದ್ದಷ್ಟು ಕಾಲವೂ ಎಲ್ಲ ಪೈಲಟ್‌ಗಳ ತಲೆಯಲ್ಲೂ ಒಂದೇ ವಿಚಾರ ಸುಳಿಯುತ್ತದೆ. ಅಪಾಯ ಬಂದರೆ ಅತ್ಯಂತ ಸಮೀಪದ ವಿಮಾನ ನಿಲ್ದಾಣ ಯಾವುದು? ಅದು ಸದಾ ಗೊತ್ತಿರಬೇಕು.ತರಬೇತಿಯ ಅವಧಿ­ಯಲ್ಲಿ ಈ ವಿಚಾರವನ್ನು ಪದೇ ಪದೇ ಪೈಲಟ್‌­ಗಳ ತಲೆಯಲ್ಲಿ ತುಂಬಿರುತ್ತಾರೆ. ಸಂಕಟದ ಸಂಕೇತ ಬಂದಾಗ ಸಮೀಪದ ವಿಮಾನ ನಿಲ್ದಾಣ ಯಾವುದೆಂದು ಹುಡುಕುತ್ತ ಸಮಯ ವ್ಯಯಿಸ­ಬಾರದು. ಮೊದಲೇ ಹುಡುಕಿಕೊಂಡಿರ­ಬೇಕು. ಅಪಾಯ ಸುಳಿವು ಸಿಕ್ಕ ತಕ್ಷಣದ ಮೊದಲ ಕೆಲಸ ಏನೆಂದರೆ ವಿಮಾನವನ್ನು ಅತ್ತ ಹೊರಳಿಸಬೇಕು.ಪೈಲಟ್ ತನ್ನ ವಿಮಾನ ತುರ್ತು ಭೂಸ್ಪರ್ಶಕ್ಕೆ ಯಾವ ತಾಣ ಹುಡುಕಿದ ಎಂಬುದನ್ನು ನಾವು ಕೂತಲ್ಲೇ ಅಂದಾಜು ಮಾಡಬಹುದು. ಗೂಗಲ್ ಅರ್ಥ್ ನಕ್ಷೆಯಲ್ಲಿ ನೋಡಿದರೆ ಮಲಾ­ಕ್ಕಾದ ಲಾಂಗ್ಕಾವಿ ಎಂಬ ವಿಮಾನ ನಿಲ್ದಾಣ ಕಾಣುತ್ತದೆ. ೧೩ ಸಾವಿರ ಅಡಿ ಉದ್ದದ ರನ್‌ವೇ ಇರುವ ಇಲ್ಲಿ ಎಂಥ ಬೃಹತ್ ಜಂಬೊ ಜೆಟ್ ವಿಮಾನವಾದರೂ ಇಳಿಯಬಹುದು. ಜಾಣ ಪೈಲಟ್ ತನ್ನ ವಿಮಾನವನ್ನು ಅತ್ತ ತಿರುಗಿಸುತ್ತಾನೆ.ಎಮ್‌ಎಚ್ ೩೭೦ಕ್ಕೆ ಎಂಥದ್ದೊ ಅನಿರೀಕ್ಷಿತ ಅಪಾಯ ಎದುರಾಗಿದೆ. ಅದನ್ನೂ ನಾವು ಊಹಿಸಬಹುದು. ಬಹುಶಃ ನಿಲ್ದಾಣದಿಂದ ಮೇಲಕ್ಕೆ ಏರಲೆಂದು ರನ್‌ವೇಯಲ್ಲಿ ವೇಗದಲ್ಲಿ ಧಾವಿಸುವಾಗ ವಿಮಾನದ ಮುಂದಿನ ಚಕ್ರಕ್ಕೆ ಬೆಂಕಿ ಹೊತ್ತಿಕೊಂಡಿದೆ. ಆದರೆ ಪಂಕ್ಚರ್ ಆಗಿಲ್ಲ. ಅದು ಮೆಲ್ಲಗೆ ಉರಿಯುತ್ತಿದ್ದಂತೆಯೇ ಆಕಾಶಕ್ಕೆ ವಿಮಾನ ಏರಿದೆ. ಹಿಂದೊಮ್ಮೆ ನೈಜೀರಿಯಾದ ಡಕೊಟಾ ವಿಮಾನಕ್ಕೆ ಹೀಗೆ ಬೆಂಕಿ ಬಿದ್ದುದನ್ನು ನೆನಪಿಸಿಕೊಳ್ಳಿ.೧೯೯೧ರಲ್ಲಿ ಜೆಡ್ಡಾದಿಂದ ನೈಜೀರಿಯಾಕ್ಕೆ ಹೊರಟ ವಿಮಾನದ ಚಕ್ರಗಳಲ್ಲಿ ಗಾಳಿ ತುಸು ಕಡಿಮೆ ಇತ್ತು. ಅದೇ ಕಾರಣದಿಂದ ವಿಮಾನ ಹಾರುತ್ತಲೇ ಬೆಂಕಿ ಹೊತ್ತಿಕೊಂಡು ವಿಮಾನದ ತಳಭಾಗದಿಂದ ಪ್ರಯಾಣಿಕರು ಉರಿಯುತ್ತಲೇ ಉದುರಿ ಬಿದ್ದು ಎಲ್ಲ ೨೪೭ ಮಂದಿ ಸಾವನ್ನಪ್ಪಿದ್ದರು. ಇಲ್ಲಿ ಮಲೇಷ್ಯಾ ವಿಮಾನದ ಚಕ್ರದ ರಬ್ಬರ್ ಉರಿಯುತ್ತಲೇ ಮಡಚಿಕೊಂಡು ಎಂದಿನಂತೆ ವಿಮಾನದ ಉದರದೊಳಕ್ಕೆ ಗಪ್‌ಚಿಪ್ ಕೂತಿದೆ. ಅಲ್ಲಿಂದ ವಿದ್ಯುತ್ ತಂತಿಗಳನ್ನು ಸುತ್ತಿದ್ದ ಪ್ಲಾಸ್ಟಿಕ್ ಕೊಳವೆಗಳಿಗೆ ಬೆಂಕಿ ತಗುಲಿದೆ. ಸಹಜವಾಗಿ ಪೈಲಟ್‌ಗಳು ಕೂತಿರುವ ಕಾಕ್‌ಪಿಟ್‌ಗೇ ಬೆಂಕಿಯ ಸುಳಿವು ಮೊದಲು ಸಿಕ್ಕಿದೆ. ಹೊಗೆ ಆವರಿಸತೊಡಗಿದೆ.ವಿಮಾನವನ್ನು ಸುರಕ್ಷಿತ ಇಳಿಸಲೆಂದು ದಿಕ್ಕು ಬದಲಿಸಿದ ಪೈಲಟ್ ಈಗ ತುರ್ತಾಗಿ ಹೊಗೆ ನಿವಾರಣೆಗೆ ಯತ್ನಿಸುತ್ತಾರೆ. ವಿದ್ಯುತ್ ತಂತಿಯ ಶಾರ್ಟ್ ಸರ್ಕ್ಯೂಟ್‌ನಿಂದಲೇ ಹೊಗೆ ಬಂದಿದ್ದರೆ ಯಾವುದೇ ವಿಮಾನದ ಪೈಲಟ್ ಆದರೂ ಮೊದಲು ಮಾಡುವ ಕೆಲಸ ಏನೆಂದರೆ ಎಲ್ಲ ವಿದ್ಯುತ್ ಫ್ಯೂಸ್‌ಗಳನ್ನೂ ತೆಗೆಯುವುದು. ಹತ್ತಾರು ಪ್ರತ್ಯೇಕ ಚಾನೆಲ್‌ಗಳ ಮೂಲಕ ವಿದ್ಯುತ್ ಹರಿಯುತ್ತಿರುತ್ತದೆ. ಎಲ್ಲವನ್ನೂ ಒಮ್ಮೆಗೇ ಆಫ್ ಮಾಡಿ ಒಂದೊಂದೇ ಚಾನೆ ಲ್ಲನ್ನು ಆನ್ ಮಾಡುತ್ತ ಹೋದರೆ ಯಾವ ಚಾನೆಲ್‌ಗೆ ಬೆಂಕಿ ಹೊತ್ತಿಕೊಂಡಿದೆ ಎಂಬುದು ಗೊತ್ತಾಗುತ್ತದೆ. ಅದೊಂದನ್ನೇ ನಿಷ್ಕ್ರಿಯ ಮಾಡಲು ಸಾಧ್ಯವಿದೆ. ಹಾಗೆ ಎಲ್ಲ ವಿದ್ಯುತ್ ಸಂಪರ್ಕವನ್ನೂ ತೆಗೆದು ಹಾಕಿದಾಗ ವಿಮಾನ­ದಿಂದ ಯಾವ ಸಂಕೇತವೂ ಹೊರಡುವುದಿಲ್ಲ. ವಿಮಾನ ಅಕ್ಷರಶಃ ಕತ್ತಲಲ್ಲಿ ಚಲಿಸುತ್ತಿರುತ್ತದೆ.ತುಸು ಹೊತ್ತು ಯಾರಿಗೂ ಗೊತ್ತಾಗದಂತೆ ಚಲಿಸುತ್ತಿದ್ದರೆ ಅದೇನೂ ದೊಡ್ಡ ಸಮಸ್ಯೆಯೇ ಅಲ್ಲ. ಏಕೆಂದರೆ ತುರ್ತು ಸಂಕಟದ ಸಂದರ್ಭ­ದಲ್ಲಿ ಮೂರು ಹಂತಗಳ ಆದ್ಯತಾ ಸೂತ್ರವನ್ನು ಎಲ್ಲ ಪೈಲಟ್‌ಗಳೂ ಪಾಲಿಸಬೇಕಾಗುತ್ತದೆ. ಮೊದಲ ಆದ್ಯತೆ ವಿಮಾನ ಚಲಿಸುತ್ತಲೇ ಇರುವಂತೆ ನೋಡಿಕೊ. ಎರಡನೆ ಆದ್ಯತೆ ಅದು ನಿಗದಿತ ದಿಕ್ಕಿನತ್ತ ಚಲಿಸುವಂತೆ ನೋಡಿಕೊ. ಮೂರನೆಯ ಮತ್ತು ಕೊನೆಯ ಆದ್ಯತೆ ಏನೆಂದರೆ ನೆಲದ ಮೇಲಿದ್ದವರನ್ನು ಸಂಪರ್ಕ ಮಾಡು. ಸುದ್ದಿ ತಿಳಿಸು. ವಿಮಾನ ಹಾರುತ್ತಲೇ ಇರಬೇಕಾದುದು ಮುಖ್ಯವೇ ವಿನಾ ಸುದ್ದಿ ತಿಳಿಸುವುದು ಆದ್ಯತೆ ಅಲ್ಲ.ವಿಮಾನ ತನ್ನಷ್ಟಕ್ಕೆ ಹಾರುತ್ತಿರಲೆಂದು ಅದರ ನಿಯಂತ್ರಣವನ್ನು ಆಟೊ ಪೈಲಟ್ ಯಂತ್ರಕ್ಕೆ ಕೊಟ್ಟು ಇತರ ತುರ್ತು ಅಗ್ನಿಶಾಮಕ ವ್ಯವಸ್ಥೆಗೆ ಪೈಲಟ್ ಗಮನ ಕೊಡುತ್ತಾರೆ. ಅಷ್ಟರಲ್ಲಿ ಪ್ರಾಯಶಃ ಚಾಲಕರ ಕಕ್ಷೆಯಲ್ಲಿ ಹೊಗೆ ಆವರಿಸಿ­ಕೊಂಡಿದೆ. ಹೇಗಾದರೂ ಪ್ರಯಾಣಿಕರನ್ನು ಮತ್ತು ವಿಮಾನವನ್ನು ಬಚಾವು ಮಾಡಲೆಂದು ಕೊನೆಯ ಉಸಿರಿನಲ್ಲೂ ಹೋರಾಡುತ್ತ ಕಾಕ್‌ಪಿಟ್ ಸಿಬ್ಬಂದಿ ಮೂರ್ಛೆ ಹೋಗುತ್ತಾರೆ. ವಿಮಾನ ತಾನು ಸಾಗಬೇಕಿದ್ದ ದಿಕ್ಕಿಗೆ ಲಂಬವಾಗಿ ಯಾರಿಗೂ ಯಾವುದೇ ಸಂಕೇತ ನೀಡದೇ ಕತ್ತ­ಲಲ್ಲಿ ತನ್ನ ಪಾಡಿಗೆ ಉದ್ದಕ್ಕೆ ಸಾಗುತ್ತ ಸ್ಫೋಟಿ­ಸಿದೆ. ಕೊನೆಗೆ ಹಿಂದೂ ಮಹಾಸಾಗರಕ್ಕೆ ಧುಮುಕಿದೆ.ಇದೊಂದು ಊಹೆ ಅಷ್ಟೆ. ಇದು ಅತ್ಯಂತ ತರ್ಕ­ಬದ್ಧ ಊಹೆಯೇ ಇದ್ದೀತು. ಅದನ್ನು ಪುಷ್ಟೀಕರಿಸಬಲ್ಲ ಸಾಕ್ಷ್ಯಗಳು ಸಿಗಬೇಕೆಂದರೆ ವಿಮಾನದೊಳಗಿದ್ದ ಕಪ್ಪು ಪೆಟ್ಟಿಗೆ ಸಿಗಬೇಕು. ಅದು ಒಂದು ತಿಂಗಳು ಕಾಲ ತಾನಿದ್ದಲ್ಲಿಂದ ಸಂಕೇತಗಳನ್ನು ಹೊಮ್ಮಿಸುತ್ತಿರುತ್ತದೆ. ನಂತರ ಅದೂ ಮೌನವಾಗುತ್ತದೆ. ಅದನ್ನು ಹುಡುಕಲು ಏನೆಲ್ಲ ತಾಂತ್ರಿಕ ಸಾಧನಗಳನ್ನು ಬಳಸಲಾಗುತ್ತಿದೆ.ಈ ದುರಂತದಲ್ಲಿ ಸಿಲುಕಿದ ಯಾರೂ ಬದುಕಿ­ರಲು ಸಾಧ್ಯವಿಲ್ಲವೆಂದು ನಿನ್ನೆ ನಿರ್ಧರಿಸಲಾಗಿದೆ. ಆದರೆ ಇಡೀ ಮನುಕುಲವೇ ಹೆಮ್ಮೆ ಪಡು­ವಂತಹ ವಿದ್ಯಮಾನವೊಂದು ಘಟಿಸಿದೆ. ಎಲ್ಲ ದೇಶಗಳೂ ತಂತಮ್ಮ ವೈಷಮ್ಯಗಳನ್ನು ಬದಿಗಿಟ್ಟು, ತಮ್ಮ ಖರ್ಚುವೆಚ್ಚಗಳಿಗೆ ಕ್ಯಾರೇ ಎನ್ನದೆ ಅಕ್ಷರಶಃ ಆಕಾಶ ಪಾತಾಳಗಳನ್ನು ಒಂದು ಮಾಡಿ ಶೋಧಕ್ಕೆ ಇಳಿದಿವೆ. ದುರಂತ ಸಂಭವಿಸಿದ ಮೊದಲ ಮೂರು ದಿನಗಳ ಕಾಲ ಪ್ರತಿಯೊಬ್ಬ ಪ್ರಯಾಣಿಕನ ಚರಿತ್ರೆಯನ್ನು ಜಾಲಾಡಲೆಂದು ಇಂಟರ್‌ಪೋಲ್ ಮೊದ­ಲ್ಗೊಂಡು, ಅಮೆರಿಕದ ಎಫ್‌ಬಿಐ ಸೇರಿದಂತೆ ಏಳು ರಾಷ್ಟ್ರಗಳ ಪೊಲೀಸ್ ಪತ್ತೆದಾರರು ಒಂದಾದರು.ಬ್ರಿಟನ್ ತನ್ನ ‘ಇಮ್ಮರ್‌ಸ್ಯಾಟ್’ ಉಪಗ್ರಹವನ್ನು ವಿಮಾನದ ಚಲನೆಯ ಸಂಕೇತಗಳ ವಿಶ್ಲೇಷಣೆಗೆ ಮೀಸಲಿಟ್ಟಿತು. ಅದರ ಜೊತೆಗೇ ಇತರ ಹನ್ನೊಂದು ರಾಷ್ಟ್ರಗಳು ತಮ್ಮ ಬಾಹ್ಯಾಕಾಶ ತಂತ್ರಜ್ಞಾನಗಳನ್ನೆಲ್ಲ ಏಕತ್ರಗೊಳಿಸಿ ವಿಮಾನವನ್ನು ಹುಡುಕಲು ಯತ್ನಿಸಿವೆ. ಇಪ್ಪತ್ತಕ್ಕೂ ಹೆಚ್ಚು ಉಪಗ್ರಹಗಳು ತಮ್ಮ ನಿತ್ಯದ ಕೆಲಸಗಳನ್ನು ಬದಿಗೊತ್ತಿ ಹುಡುಕಾಟದ ದೀಕ್ಷೆ ವಹಿಸಿವೆ. ಆಸ್ಟ್ರೇಲಿಯಾ, ಚೀನಾ, ಫ್ರಾನ್ಸ್, ಜಪಾನ್, ನ್ಯೂಜಿಲೆಂಡ್ ತಂತಮ್ಮ ರಹಸ್ಯ ಮಿಲಿಟರಿ ವಿಮಾನಗಳನ್ನು ಡ್ರೋನ್‌ಗಳನ್ನು ಶೋಧಕ್ಕೆ ಅಟ್ಟಿವೆ. ‘ಡಿಜಿಟಲ್ ಗ್ಲೋಬ್’ ಎಂಬ ಕಂಪೆನಿ ವಿಶಾಲ ಸಾಗರದ ತಾಜಾ ನಕ್ಷೆಯನ್ನು ಅಂತರ್ಜಾಲದಲ್ಲಿ ಹರಿಬಿಟ್ಟು ಜನರೇ ಮಾರುಮೊಳಗಳ ಅಳತೆಯಲ್ಲಿ ಶೋಧ ನಡೆಸಲು ಅವಕಾಶ ಮಾಡಿಕೊಟ್ಟಿತು.ಇತ್ತ ದಕ್ಷಿಣ ಗೋಲಾರ್ಧದ ಸಾಗರಗಳ ಸ್ಕ್ಯಾನಿಂಗ್, ಇಂಡೊನೇಷ್ಯಾದ ದಟ್ಟ ಕಾಡಿನ ಸ್ಕ್ಯಾನಿಂಗ್, ಕಝಾಕ್‌ಸ್ತಾನದ ಒಣಭೂಮಿಯ ಸ್ಕ್ಯಾನಿಂಗ್ ಅಹೋರಾತ್ರಿ ನಡೆದವು. ಅಲ್ಲೊಂದು ತುಣುಕು ಪತ್ತೆಯಾಯಿತು, ಇಲ್ಲೊಂದು ಚೂರು ಸಿಕ್ಕಿತು ಎಂಬೆಲ್ಲ ಸಂಕೇತ­ಗಳು ಸಿಕ್ಕಲ್ಲೆಲ್ಲ ಹಡಗುಗಳು ವಿಮಾನಗಳು ದೌಡಾಯಿಸಿದವು.ಹೀಗೆ  ಹದಿನೇಳು ರಾಷ್ಟ್ರಗಳು ತಮ್ಮ ಹಡಗುಗಳನ್ನು, ಜಲಾಂತ­ರ್ಗಾ­ಮಿಗಳನ್ನು ಶೋಧಕ್ಕೆ ಕಳಿಸಿವೆ. ಏಳು ರಾಷ್ಟ್ರಗಳ ವಿಮಾನಗಳು ಮತ್ತು ಹಡಗುಗಳು ಭಾರತದ ನೇರ ದಕ್ಷಿಣಕ್ಕೆ ೩೫೦೦ ಕಿ.ಮೀ. ದೂರದ ಅಂಟಾರ್ಕ್ಟಿಕಾ ಬಳಿಯ ಭಾರೀ ಅಪಾಯದ ಸಮುದ್ರದಲ್ಲಿನ ಬಿರುಗಾಳಿ, ದಟ್ಟ ಮಂಜು, ಹಿಮದ ಹಾಸು, ಅತಿಚಳಿಯನ್ನೂ ಲೆಕ್ಕಿಸದೆ ವಿಮಾನದ ಅವಶೇಷಗಳಿಗಾಗಿ ತಡಕಾಡುತ್ತಿವೆ. ಶೋಧನಿರತ ಯಾವ ವಿಮಾನ­ವಾದರೂ ತಮ್ಮ ದೇಶದೊಳಕ್ಕೆ ಹಾರಾಟ ನಡೆಸಬಹುದೆಂದು ಶ್ರೀಲಂಕಾ, ವಿಯೆಟ್ನಾಂ ಸೇರಿದಂತೆ ಎಂಟು ರಾಷ್ಟ್ರಗಳು ಮುಕ್ತ ಅನುಮತಿ ನೀಡಿವೆ. ಇದುವರೆಗೆ ೨೬ ದೇಶಗಳು ಹುಡುಕಾಟಕ್ಕೆ ಸಹಕಾರ ನೀಡಿವೆ.ರಾಷ್ಟ್ರರಕ್ಷಣೆಯ ರಹಸ್ಯಗಳನ್ನು ಕೊಂಚ ಬದಿಗೊತ್ತಿ ಬದ್ಧ ವೈರಿಗಳೂ ತಮ್ಮಲ್ಲಿರುವ ತಾಂತ್ರಿಕ ಸರಂಜಾಮುಗಳನ್ನು ಈ ಶೋಧಕ್ಕೆಂದು ಬಿಚ್ಚಿಟ್ಟಿವೆ. ರಹಸ್ಯ ರಡಾರ್‌ಗಳು, ನಿಗೂಢ ತಾಣಗಳಲ್ಲಿ ಅವಿತಿರುವ ಜಲಾಂತರ್ಗಾಮಿಗಳು ತಂತಮ್ಮ ಇರುನೆಲೆಗಳನ್ನು ತೆರೆದಿಟ್ಟಿವೆ. ಈಗ ಎಲ್ಲವೂ ಮುಗಿದ ಮೇಲೆ ಕಪ್ಪು ಪೆಟ್ಟಿಗೆಯ ಶೋಧಕ್ಕೆ ಅಮೆರಿಕದ ತನ್ನ ಅತ್ಯಾಧುನಿಕ ಪಿಂಗರ್ ಲೊಕೇಟರ್ ಎಂಬ ಸಾಧನವನ್ನು ರವಾನಿಸಿದೆ. ಇನ್ನು ೧೦–-೧೨ ದಿನಗಳಲ್ಲಿ ಅದು ಸಿಗದಿದ್ದರೆ ಇಪ್ಪತ್ತು ಸಾವಿರ ಅಡಿ ಆಳ ಸಾಗರ ವನ್ನು ನಿಧಾನಕ್ಕೆ ಬಾಚಬಲ್ಲ ಸ್ವಯಂ

ಚಾಲಿತ ವಾಹನವೊಂದು ಕತ್ತಲಲೋಕಕ್ಕೆ ಇಳಿಯಲಿದೆ. ಅಂಥ ವಿಶಾಲ ಸಾಗರದಲ್ಲಿ ವಿಮಾನದ ತುಣುಕನ್ನು ಹುಡುಕುವುದೆಂದರೆ ಬಣವೆಯಲ್ಲಿ ಸೂಜಿ ಹುಡುಕಿದಂತೆ ಎಂದು ನಾವು ಹೇಳಬಹುದು. ಆಸ್ಟ್ರೇಲಿಯಾದ ನೌಕಾಪಡೆಯ ಮುಖ್ಯಸ್ಥನ ಪ್ರಕಾರ ಮೊದಲು ಬಣವೆ ಎಲ್ಲಿದೆ ಎಂಬುದನ್ನು ನಿರ್ಧರಿಸಬೇಕಾಗಿದೆ.ನಿಮ್ಮ ಅನಿಸಿಕೆ ತಿಳಿಸಿ:editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry