ಛಾಲೆಂಜ್ ಬಸಿಯಾ

7

ಛಾಲೆಂಜ್ ಬಸಿಯಾ

Published:
Updated:

ಗೆಳೆಯ ಬಸವರಾಜ ಬಲು ಬುದ್ಧಿವಂತ. ತರಗತಿಯಲ್ಲಿ ಕೇಳುವ ಪಾಠಗಳನ್ನು ಆತ ಒಂದೇ ಸಲಕ್ಕೆ ತನ್ನ ನೆನಪಿನ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ. ನಮ್ಮಷ್ಟು ಶ್ರಮ ಹಾಕಿ ಆತ ಎಂದೂ ಓದುತ್ತಿರಲಿಲ್ಲ. ತುಂಬಾ ಆರಾಮಾಗಿರುತ್ತಿದ್ದ. ಅವನು ಯಾವಾಗ ಓದ್ತಾನೆ ಅನ್ನೋದೆ ಗೊತ್ತಾಗುತ್ತಿರಲಿಲ್ಲ. ನಾವೆಲ್ಲಾ ವಿರಹಿಗಳ ಥರ ಯಾರ್ರಾಬಿರ್ರಿ ಗಡ್ಡ ಮೀಸೆ ಇಳಿಬಿಟ್ಟುಕೊಂಡು ಓದುತ್ತಿದ್ದೆವು.ನಮ್ಮ ವಿಪರೀತದ ಪರಿಸ್ಥಿತಿ ನೋಡಿ ಅವನು ವ್ಯಂಗ್ಯ ಮಾಡುತ್ತಿದ್ದ. ಪರಿಹಾಸ್ಯ ಮಾಡಿ ನಗುತ್ತಿದ್ದ. ಅಂತಿಮ ಎಂ.ಎ ಪರೀಕ್ಷೆಗಳು ಹತ್ತಿರ ಬಂದವೆಂದು ನಾವು ನರನಾಡಿ ಹರಿದುಕೊಂಡು ಓದುವಾಗ ಇವನು ಬಂದು ಕೂತು ಹರಟೆ ಕೊಚ್ಚುತ್ತಿದ್ದ. ‘ಏಯ್ ದಡ್ಡ ನನ್ಮಕ್ಕಳಾ, ಅಷ್ಟೊಂದು ಸಿರಿಯಸ್ಸಾಗಿ ಓದ್ಬಾರ್ದು ಕಂಡ್ರಲೆ! ವಿದ್ಯೆ ತಲೆಗೆ ಹತ್ತಲ್ಲ. ಜಾಸ್ತಿ ಟೆನ್ಷನ್ ಮಾಡ್ಕೊಂಡು ಯಾಕ್ ಸಾಯ್ತಿರಾ. ನನ್ ಥರ ಜಾಲಿಯಾಗಿ ಇರ್ರಲೇ’ ಎಂದು ಬಿಟ್ಟಿ ಉಪದೇಶ ಒಗೆಯುತ್ತಿದ್ದ.ನಮ್ಮ ವಿಭಾಗದ ಪರೀಕ್ಷೆಗಳು ಬೇಗ ಮುಗಿದು ನಾವು ನಿರಾಳರಾಗಿ ಬಿಟ್ಟೆವು. ಆ ಹೊತ್ತಿಗೆ ಬಸವರಾಜನ ಮುಖ್ಯ ಪರೀಕ್ಷೆಗಳು ನಡೆಯುವುದು ಇನ್ನೂ ಬಾಕಿ ಇದ್ದವು. ರಾಜ್ಯಶಾಸ್ತ್ರ ವಿಭಾಗದ ನಿರೀಕ್ಷಿತ ರ್‍್ಯಾಂಕ್ ಲಿಸ್ಟ್‌ನಲ್ಲಿ ಬಸವರಾಜ ಮೊದಲಿಗನಾಗಿದ್ದ. ನಾವು ಓದುವಾಗ ಈ ಬಡ್ಡೀಮಗ ಬಲು ಕಾಟ ಕೊಟ್ಟಿದ್ದಾನೆ ಕಂಡ್ರೋ. ಇವನಿಗೆ ಈಗ ಬಿಡಬಾರದು. ಇದು ಇವನ ಪರೀಕ್ಷೆ ಟೈಮು. ನಾವೂ ಕಾಟ ಕೊಟ್ಟು ಸರಿಯಾಗಿ ಸೇಡು ತೀರಿಸಿಕೊಳ್ಳಬೇಕು ಎಂದು ಮಲ್ಲಿಕ ಐಡಿಯಾ ಕೊಟ್ಟನು. ಉಳಿದವರು ‘ಅಯ್ಯೋ ಹೋಗಲಿ ಬಿಡೋ ಮಲ್ಲಿ. ಆ ನನ್ಮಗ ಫಸ್ಟ್ ರ್‍್ಯಾಂಕ್ ಲಿಸ್ಟ್‌ನಲ್ಲಿದ್ದಾನೆ.ಅವನು ಅಕಸಲಾಟಕ್ಕೆ ಏನೋ ಮಾಡ್ದ ಅಂತ ನಾವೂ ಹಂಗೆ ಮಾಡೋದು ಸರಿ ಇರುತ್ತಾ? ಎಂದು ಎಷ್ಟು ಬುದ್ಧಿ ಹೇಳಿದರೂ ಮಲ್ಲಿಕ ತನ್ನ ಹಟ ಬಿಡಲಿಲ್ಲ. ಅವನಿಗೆ ಬುದ್ಧಿ ಕಲಿಸಿಯೇ ಬಿಡಬೇಕೆಂದು ತೀರ್ಮಾನಿಸಿದ. ಅದರಂತೆ ಬಸವರಾಜನ ಕರೆದು  ಶರತ್ತಿಗೆ ಆಹ್ವಾನಿಸಿದ. ಮಾತು ಮಾತಿಗೂ ಛಾಲೆಂಜ್‌ಗೆ ಇಳಿಯೋದು, ಬೆಟ್ಸ್ ಕಟ್ಟೋದು, ಹಟಕ್ಕೆ ಬಿದ್ದು ಶರತ್ತುಗಳಿಗೆ ಕಟ್ಟು ಬೀಳುವುದು ಬಸವರಾಜನಿಗೆ ಇದ್ದ ದೊಡ್ಡ ವೀಕ್‌ನೆಸ್ ಆಗಿತ್ತು. ಈ ವೀಕ್ ಪಾಯಿಂಟನ್ನು ಟಚ್ ಮಾಡಿದ ಮಲ್ಲಿ ಬಸವರಾಜನಿಗೆ ಇಸ್ಪೀಟ್ ಆಟಕ್ಕೆ ಆಹ್ವಾನಿಸಿದ. ಬಸವರಾಜ ಹಿಂದೆ ಮುಂದೆ ಯೋಚಿಸದೆ ಒಪ್ಪಿಕೊಂಡ.ಮಲ್ಲಿಕ ಹೇಳಿದ ‘ನೋಡ್ಲೇ ಬಸಿಯಾ, ಶರತ್ತು ಏನಪ್ಪಾ ಅಂದ್ರೆ. ನಾಳೆ ನಿನ್ ಪರೀಕ್ಷೆ ಇರುತ್ತೆ ಅಂತ ಇಟ್ಕೋ. ಅವತ್ತಿನ ಹಿಂದಿನ ದಿನ ರಾತ್ರಿ ನೀನು ಪೂರಾ ನಿದ್ದೆಗೆಟ್ಟು ನನ್ನ ಜೊತೆ ಕಾರ್ಡ್ಸ್ ಆಡಬೇಕು. ಬೆಳಗಾಗ ತಂಕ ಒಂದು ಹನಿ ನಿದ್ದೆ ಮಾಡೋ ಹಂಗಿಲ್ಲ. ನಿದ್ದೆ ಇಲ್ಲದಂಗೆ ಹೋಗಿ ನೀನು ಎಕ್ಸಾಮ್ ಬರೀತಿಯೇನ್ಲೇ ಗಂಡಸಾದ್ರೆ. ಈ ಛಾಲೆಂಜಲ್ಲಿ ನೀನು ಗೆದ್ದರೆ ಎಲ್ಲಾ ಸೇರಿ ಐನೂರು ರೂಪಾಯಿ ಬಹುಮಾನ ಕೊಟ್ಟು ಮೇಲೊಂದು ಪಾರ್ಟಿ ಕೊಡ್ತೀವಿ ಕಣೋ, ಒಪ್ಕೋತೀಯಾ’ ಎಂದು ಶರತ್ತು ಜಡಿದ.ಹುಂಬ ಬಸವರಾಜ ಆಗಲಿ ಎಂದು ಒಪ್ಪಿಕೊಂಡೇ ಬಿಟ್ಟ. ಉಳಿದ ನಾವೆಲ್ಲಾ ‘ಇಂಥ ಕೆಟ್ಟ ಛಾಲೆಂಜ್ ಬ್ಯಾಡ ಕಂಡ್ರಲೆ. ಅವನು ರ್‍್ಯಾಂಕ್ ಲಿಸ್ಟ್‌ನಲ್ಲಿದ್ದಾನೆ. ಹೋಗಲಿ ಬಿಟ್ಬಿಡೋ ಮಲ್ಲಿಕ’ ಎಂದರೆ ಬಸವರಾಜನೇ ಈ ಮಾತಿಗೆ ವಿರೋಧ ವ್ಯಕ್ತಪಡಿಸಿದ. ಹೀಗಾಗಿ ಪಂಥ ಫಿಕ್ಸ್ ಆಗಿ ಹೋಯಿತು. ಆಶ್ಚರ್ಯವೆಂದರೆ ಆ ಛಾಲೆಂಜಲ್ಲಿ ಬಸಿಯ ಗೆದ್ದೂ ಬಿಟ್ಟ. ಜೊತೆಗೆ ರ್‍ಯಾಂಕನ್ನೂ ಗಿಟ್ಟಿಸಿಕೊಂಡ. ಅವರಿಬ್ಬರ ತೆವಲಿನ ಇಸ್ಪೀಟ್‌ ಮ್ಯಾಚನ್ನು ರಾತ್ರಿಯಿಡಿ ನಾವೂ ಕೂತು ನೋಡಿದೆವು. ಅಂಥ ಧೀರತೆಯ ಅಡ್ನಾಡಿ ಮನುಷ್ಯನಾಗಿದ್ದ ನಮ್ಮ ಬೆಟ್ಸ್ ಬಸಿಯ.   ಎಂ.ಎ ಓದುವಾಗೊಮ್ಮೆ ‘ನಮ್ಮೂರಿಗೆ ಹೋಗನ ಬಾರಲೇ’ ಎಂದು ನನಗೆ ಕರೆದುಕೊಂಡು ಹೋಗಿದ್ದ. ಅಂಥ ಕುಗ್ರಾಮವನ್ನು ನಾನೆಂದೂ ನೋಡಿರಲೇ ಇಲ್ಲ. ಅಲ್ಲಿಗೆ ಹೋಗುವ ದಾರಿ ದುರ್ಗಮವಾಗಿತ್ತು. ಬಸ್ಸಿರಲಿ, ಲಾರಿಗಳೂ ಅಲ್ಲಿ ಕಾಲಿಡಲು ಸಾಧ್ಯವಾಗಿರಲಿಲ್ಲ. ಕಲ್ಲು ಬಂಡೆಗಳ ಭಾರಿ ಗುಂಡಿ ಗೊಟರೆಗಳ ಆ ಕಠಿಣ ದಾರಿಯಲ್ಲಿ ಎತ್ತಿನ ಗಾಡಿಗಳು ಮಾತ್ರ ಕಷ್ಟಬಿದ್ದು ಓಡಾಡುತ್ತಿದ್ದವು. ಒಂದಿಷ್ಟು ಜನ ಸೈಕಲ್ಲು ಇಟ್ಟುಕೊಂಡಿದ್ದರು. ಗೇಟಿನಲ್ಲಿ ಬಸ್ಸಿಳಿದ ಮೇಲೆ ಎಂಟು ಮೈಲಿ ಆ ಹಳ್ಳಿಗೆ ನಡೆದೇ ಹೋಗಬೇಕಿತ್ತು. ರಣರಣ ಬಿಸಿಲಿನಲ್ಲಿ ರಗರಗವೆಂದು ಉರಿಯುವ ಆ ಕಲ್ಲುಗುಡ್ಡದ ಹಳ್ಳಿಗೆ ಹೋಗುವಷ್ಟರಲ್ಲಿ ನನ್ನ ಹೆಣವೇ ಬಿದ್ದಂತಾಗಿತ್ತು.ನಮ್ಮ ತಲೆ ಮತ್ತು ಹೆಗಲಲ್ಲಿ ಕೂತಿದ್ದ ಭಾರದ ಲಗೇಜ್ ಚೀಲಗಳು ನಮ್ಮ ಜೀವಕ್ಕೆ ಜೋತು ಬಿದ್ದ ರಾಕ್ಷಸರಾಗಿದ್ದವು. ದಾರಿಯಿಲ್ಲದ, ನೆರಳಿಲ್ಲದ, ನೆಟ್ಟಗೆ ನೀರೂ ಸಿಗದ ಅಂತಹ ಕುಗ್ರಾಮದಿಂದ ಬಸವರಾಜ ಪುಟಿದೆದ್ದು ಬಂದಿದ್ದ. ‘ನಾನೆಷ್ಟು ಕಷ್ಟಪಟ್ಟು ಕಲಿತು ಇಲ್ಲೀ ತನಕ ಬಂದಿದ್ದೀನಿ ಅನ್ನೋದು ನಿನಗೆ ಗೊತ್ತಾಗಬೇಕಾದ್ರೆ ನೀನು ನನ್ನೂರಿಗೆ ಬರಲೇ ಬೇಕು ಗೆಳೆಯ’ ಎಂದು ಅವನು ನನಗೆ ಹೇಳಿದ್ದು ನಿಜವೆನಿಸಿತು. ನಾಗರಿಕ ಸೌಲಭ್ಯಗಳಿಲ್ಲದ ಆ ಹಳ್ಳಿ ಸಾವಿರ ವರ್ಷದ ಹಿಂದಕ್ಕೆ ಸರಿದು ನಿಂತಿತ್ತು.ಕರೆಂಟಿಲ್ಲದ ಆ ಊರಿಗೆ ರಾತ್ರಿ ನಕ್ಷತ್ರಗಳೇ ಬೀದಿ ದೀಪಗಳಾಗಿದ್ದವು. ಬಸವರಾಜನ ಮನೆಯ ಬಡತನ ಮನಃ ಕಲಕುವಂತಿತ್ತು. ಆ ಪುಟ್ಟ ಹಳ್ಳಿಯಿಂದ ಓದಲು ನಗರಕ್ಕೆ ಬಂದ ಮೊದಲಿಗ ಈ ಬಸವರಾಜನಾಗಿದ್ದ. ಎಂ.ಎ ಮುಗಿದ ಮೇಲೆ ನಾವೆಲ್ಲಾ ದಿಕ್ಕು ದಿಕ್ಕಿಗೆ ಕೆಲಸ ಹುಡುಕುತ್ತಾ ಹಾರಿ ಹೋದೆವು. ಬಸಿಯ ಅವನ ಹಳ್ಳಿಗೆ ಸಮೀಪದ ಒಂದು ಊರಿನಲ್ಲಿದ್ದ ಪ್ರೈವೇಟ್ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕನಾಗಿ ಸೇರಿಕೊಂಡ. ಅಲ್ಲಿಂದ ಅವನ ಜೀವನದ ಎಲ್ಲಾ ಕಷ್ಟಗಳು ಶುರುವಾಗಿ ಹೋದವು.ನಾನೊಮ್ಮೆ ಸಿಕ್ಕಾಗ ‘ಮುನ್ನೂರು ರೂಪಾಯಿ ಸಂಬಳ ಕೊಡ್ತಾರೆ ಕಣೋ, ತಿಂಡಿ, ಊಟಕ್ಕೂ ಸಾಕಾಗಲ್ಲ. ಆ ದುಡ್ಡನ್ನೂ ಹಲ್ಕ ನನ್ಮಕ್ಕಳು ಇನ್‌ಟೈಮಿಗೆ ಕೊಡಲ್ಲ. ಹಿಂಗಾಗಿ ರಜಾ ಇದ್ದಾಗ ಇಲ್ಲೇ ಎಲ್ಲಾದರೂ ಕೂಲಿ ಕೆಲಸಕ್ಕೆ ಹೋಗ್ತೀನಿ. ನಮ್ಮ ಹಳ್ಳಿ ಜನ ನನಗೆ ಕೂಲಿ ಕೆಲ್ಸಾನೇ ಕೊಡಲ್ಲ ಅಂತಾರೆ. ಇಷ್ಟೊಂದು ಓದಿರೋ ನೀನು ಆಫೀಸರ್ ಥರ ಇರು. ನಮ್ಮ ಕಷ್ಟ ನಿನಗ್ಯಾಕಪ್ಪಾ ಅಂತಾರೆ. ನನ್ನ ಸಂಕಟ ಅವರಿಗೆ ಹೆಂಗೆ ಅರ್ಥವಾಗುತ್ತೆ ಹೇಳು.ಕಾಲೇಜಿನವರು ಕೊಡೋದು ಮೂರು ಕಾಸಾದ್ರೂ ದಿನಾ ಇಸ್ತ್ರಿ ಇಕ್ಕಿದ ಬಟ್ಟೇನೇ ಸಿಗಸ್ಕೊಂಡು ಬರ್ರಿ ಅಂತಾರೆ. ದುಡಿಮೇನೆ ಇಲ್ಲ ಅಂದಮೇಲೆ ಆಫೀಸರ್ ಥರ ಬಟ್ಟೆ ಎಲ್ಲಿಂದ ಇಕ್ಕೊಳೋದು ನೀನೆ ಹೇಳಪ್ಪ? ನನ್ನ ಬಾಯಿಗೆ ಒಂದೊಂದು ಕೆಟ್ ಮಾತು ಬರ್‍್ತಾವೆ. ಆದ್ರೆ ಏನ್ ಮಾಡ್ತಿಯಾ ಗೆಳೆಯ. ಹಲ್ಲು ಕಚ್ಕೊಂಡು ಸುಮ್ಕಿದ್ದೀನಿ. ಇತ್ತ ಒದರಂಗಿಲ್ಲ ಅತ್ತ ಬಿಡಂಗಿಲ್ಲ. ಎಂಥ ನಾಯಿ ಜೀವನ ಆಯ್ತು ನೋಡು. ಪಿಜಿ ಮಾಡಿದ್ದೇ ತಪ್ಪಾಯಿತು ಕಣೋ. ಈ ಬೇವರ್ಸಿ ಲೆಕ್ಚರರ್ ದಂಧೇನೆ ಸರಿಯಿಲ್ಲ ಮಾರಾಯ.ಏನೋ ಕಾಲೇಜಲ್ಲಿ ಮಕ್ಕಳು ‘ನಮಸ್ಕಾರ ಸಾರ್’ ಅಂತ ಕೊಡೋ ಮರ್ಯಾದೀನೆ ದೊಡ್ಡ ಆಸ್ತಿ ತಿಳ್ಕೊಂಡು ಬದುಕ್ತಾ ಇದ್ದೀನಿ. ಆದ್ರೆ ಹಿಂಗೇ ಎಷ್ಟು ದಿನ ಸುಳ್ಳುಸುಳ್ಳೇ ನಗುನಗುತ್ತಾ ಇರ್‍್ಲಿ ಹೇಳು. ನನ್ನ ಬದುಕಿನ ದಾರೀನೆ ಮೂರಾಬಟ್ಟೆ ಆಗಿದೆ. ಅಂಥದ್ರಲ್ಲಿ ಮಕ್ಕಳಿಗೆ ಏನು ಪಾಠ ಹೇಳ್ಲಿ, ಅವರಿಗೆ ಬದುಕಿನ ಯಾವ ದಾರಿ ತೋರ್‍್ಸಿ ಸರಿ ಅಂತ ಹೇಳ್ಲಿ ನೀನೆ ಹೇಳು. ಹೊಟ್ಟೆಗಿಲ್ಲದ, ನೆಮ್ಮದಿಯಿಲ್ಲದ, ಮನುಷ್ಯನೇ ನಗುನಗುತ್ತಾ ಇರಬೇಕು. ಸಹನೆಯಿಂದ ವರ್ತಿಸಬೇಕು.ಜೀ ಹುಜುರ್ ಅಂತ ಡೊಗ್ಗು ಸಲಾಮು ಕುಟ್ಟಬೇಕು ಅಂತ ನಿರೀಕ್ಷೆ ಮಾಡೋ ಈ ಹಲ್ಕಾ ಸಮಾಜಕ್ಕೆ ಬೆಂಕಿ ಇಡಬೇಕಲ್ಲವೇ? ಲೈಫಿನ ಛಾಲೆಂಜ್ ಎದುರು ನಾನು ನಿಜಕ್ಕೂ ಸೋಲ್ತಾ ಇದ್ದೀನಿ ಮಾರಾಯ. ಬಡತನ ನನ್ನ ಹಿಂಡಿ ಹಾಕಿದೆ. ನಮ್ಮವ್ವ ಸಾಯಂಗಿದ್ದೀನಿ ಊರು ಬಿಟ್ಟು ದೂರ ಹೋಗಬ್ಯಾಡ ಅಂತಾಳೆ. ಈ ದರಿದ್ರ ಊರಲ್ಲಿ ಅನ್ನವೂ ಹುಟ್ತಿಲ್ಲ. ಹಳ್ಳಿಗೆ ಹೋಗಿ ಗೈಯ್ದು ಬದುಕೋಣ ಅಂದ್ರೆ ಹೊಲವೂ ಇಲ್ಲ’ ಎಂದು ಕಣ್ಣೀರು ಹಾಕಿದನು.   

   

ನಾನು ಮೂಕನಾಗಿ ನಿಂತಿದ್ದೆ. ‘ಖರ್ಚಿಗೆ ಕಾಸಿಲ್ಲ ಏನಾದ್ರು ಇದ್ರೆ ವಸಿ ಕೊಟ್ಟಿರು. ನಾನು ತಿರುಗಿ ಕೊಡ್ತೀನಿ ಅನ್ನೋ ಉಮೇದು ಮಾತ್ರ ಇಟ್ಕೊಬ್ಯಾಡ’ ಎಂದು ಧೀನನಾಗಿ ಕೇಳಿದನು. ಅವನ ಸ್ಥಿತಿ ನೋಡಿ ನನಗೆ ದುಃಖ ಉಮ್ಮಳಿಸಿ ಬಂತು. ಎಲ್ಲವನ್ನೂ ಛಾಲೆಂಜಾಗಿ ತಗೋತ್ತಿದ್ದ ಬಸವರಾಜನನ್ನು ಜೀವನ ಎಷ್ಟೊಂದು ಹೊಸಕಿ ಹಾಕಿದೆಯಲ್ಲ ಎಂದೆನಿಸಿತು. ನನ್ನ ಕೈಲಾದಷ್ಟು ರೊಕ್ಕ ತೆಗೆದುಕೊಟ್ಟೆ. ಖುಷಿಯಾದ ಬಸಿಯಾ ‘ಬಾ ತೋಯ್ಸಿದ ಮಂಡಕ್ಕಿ ಕೊಡುಸ್ತೀನಿ’ ಎಂದು ಒಂದು ಗುಡಿಸಲ ಚಹಾ ಅಂಗಡಿಗೆ ಎಳೆದುಕೊಂಡು ಹೋದ.ಆ ಕೊಂಪೆಯ ಚಾ ಅಂಗಡಿಯ ಮಾಲೀಕನಿಗೆ ತೋರಿಸಿ ‘ಇವರೇ ಕಣಪ್ಪ. ನಮ್ಮ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು. ನಮಗೆ ಹಂಗಾಮಿ ಸಂಬಳ ಕೊಡೋ ಮಾಲೀಕರು’ ಎಂದು ಪರಿಚಯ ಮಾಡಿಕೊಟ್ಟನು. ಆ ಮನುಷ್ಯ ಒಳಗೆ ಹೋದ ಮೇಲೆ ನನ್ನ ಕಿವಿ ಹತ್ತಿರ ಬಂದ ಬಸಿಯಾ ‘ಇವನು ಕಮ್ಮಿ ಆಸಾಮಿ ಅಲ್ಲಾ ಕಣೋ. ಪಕ್ಕಾ ಹಗಲದರೋಡೆ ನನ್ಮಗ. ನನ್ನ ಸಂಬಳದ ಅರ್ಧ ದುಡ್ಡನ್ನ ಟೀ, ಕಾಫಿ, ನಾಸ್ಟಾದ ಹಳೆ ಲೆಕ್ಕಾಂತ ಇಲ್ಲೇ ಮುರ್‍ಕೊಂಡು ಕೊಡ್ತಾನೆ.ಮೊದಲಿಗೆ  ಈ ಬೇವರ್ಸಿ ನನ್ಮಗ ತಿಂಡಿ, ಚಾ ಎಲ್ಲಾ ಪ್ರೀತಿಯಿಂದ ಕರೆಕರೆದು ಕೊಡ್ತಿದ್ದ. ನಾನು ಮೇಷ್ಟ್ರು ಅನ್ನೋ ಮರ್ಯಾದಿಗೆ ಭಕ್ಷೀಶಾಗಿ ಕೊಡ್ತಿದ್ದಾನೆ ಅಂತ ಖುಷಿಯಾಗಿದ್ದೆ. ಸಂಬಳ ಬಂದಾಗ ಭರ್ಜರಿ ಬಿಲ್ಲು ಜಡಿದ ನೋಡು. ಆಗ್ಲೇ ಈ ಕಿರಾತಕನ ಅಸ್ಲಿ ಬಣ್ಣ ಗೊತ್ತಾಗಿದ್ದು. ನೋಡು ಲೆನಿನ್, ಸ್ಟಾಲಿನ್, ಮಾರ್ಕ್ಸ್, ಪ್ರಕಾರ ಇವ್ನೂ ಶೋಷಕನೇ ಕಣೋ ಎಂದು ವಿಷಾದದಿಂದ ನಕ್ಕ.‘ಯೂನಿವರ್ಸಿಟಿಯೋರು ಕೊಟ್ಟಿರೋ ಗೋಲ್ಡ್ ಮೆಡಲ್ ಮಾರೋಣಾಂತ ಹೋಗಿದ್ದೆ ಕಣೋ. ಅವ್ರು ಎಂಥ ಮೋಸಗಾರ್ರು ಅಂತಿಯಾ. ನಮಗೆಲ್ಲಾ ಸರಿಯಾದ ಪಂಗನಾಮ ಹಾಕಿದ್ದಾರೆ. ಅದು ಅಸಲಿ ಗೋಲ್ಡ್ ಮೆಡಲ್ಲೇ ಅಲ್ಲವಂತೆ ಕಣೋ. ತಾಮ್ರಕ್ಕೆ ಬಣ್ಣದ ನೀರು ಕುಡ್ಸಿದ್ದಾವಂತೆ. ಇದಕ್ಕೆ ಎಂಟಾಣೆನೂ ಹುಟ್ಟಲ್ಲ ಅಂತ ಅಕ್ಕಸಾಲಿ ಹೇಳಿದ. ಅವತ್ತೇ ತೆಗೆದು ತಿಪ್ಪೆ ಗುಂಡಿಗೆ ಎಸೆದು ಬಿಟ್ಟೆ ಕಣೋ. ಅಂತ ವೇಸ್ಟ್ ಬಾಡೀನ ಇಟ್ಕೊಂಡು ಏನ್ ಮಾಡ್ತೀಯಾ? ಎಂದು ಮುಖ ಸಣ್ಣಗೆ ಮಾಡಿಕೊಂಡ.ನಾನು ಮತ್ತೊಮ್ಮೆ ಹೋಗಿ ಕೇಳುವಾಗ ಬಸವರಾಜ ಇರಲೇ ಇಲ್ಲ. ಕಾಯಿಲೆ ಬಂದು ಸತ್ತೇ ಹೋಗಿದ್ದ. ಅಷ್ಟೊಂದು ಬುದ್ಧಿವಂತನೂ, ಶ್ರಮ ಜೀವಿಯೂ ಆದ ಬಸವರಾಜ ತನ್ನ ಉಡಾಫೆಯ ದೆಸೆಯಿಂದಲೇ ಹಾಳಾಗಿ ಹೋದ ಎಂದು ಕೆಲವರು ದೂರಿದರು. ಅವನಿಗೆ ಜೀವನದಲ್ಲಿ ಶಿಸ್ತೆಂಬುದೇ ಇರಲಿಲ್ಲ. ಗಟ್ಟಿ ಕೆಲಸ ಹುಡುಕಿಕೊಂಡು ಬೇರೆ ಕಡೆ ಹೋಗಲಿಲ್ಲ. ಜೀವನದಲ್ಲಿ ಒಳ್ಳೇ ಉಪನ್ಯಾಸಕನಾಗೇ ಇರಬೇಕೆಂದು ಹಟ ಹಿಡಿದು ಅದೇ ಊರಲ್ಲಿದ್ದು, ಹಾಳಾಗಿ ಹೋದ ಎಂದೂ ಬೈದರು.ಜೀವನ ಚಕ್ರದಲ್ಲಿ ಯಾರ್‍್ಯಾರು ಏನೇನಾಗುತ್ತಾರೆ ಅಂತ ಊಹಿಸೋದು ಎಷ್ಟು ಕಷ್ಟವಲ್ಲವೇ? ಬಸವರಾಜನಂತೆ ದಿನಾ ಕಳೆದು ಹೋಗುವ ಅದೆಷ್ಟೋ ಮಳೆ ಬೀಜಗಳನ್ನು ಹಿಡಿದು ಸಂತೈಸುವವರಾದರೂ ಯಾರು ಹೇಳಿ? ನನಗೆ ಮಾತ್ರ ಅವನೊಂದು ನೆನಪಿನ ಕಂಬನಿ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry