ಶುಕ್ರವಾರ, ಮಾರ್ಚ್ 5, 2021
17 °C

ಜನತಾ ಪರಿವಾರ ಒಂದಾಗಬೇಕು ಎನ್ನುವ ಹಗಲುಗನಸಿನ ಸುಖ...

ಪದ್ಮರಾಜ ದಂಡಾವತಿ Updated:

ಅಕ್ಷರ ಗಾತ್ರ : | |

ಜನತಾ ಪರಿವಾರ ಒಂದಾಗಬೇಕು ಎನ್ನುವ ಹಗಲುಗನಸಿನ ಸುಖ...

ಇದು ಒಂದು ರೀತಿಯ ಹಳವಂಡ. ಜೊತೆಗೆ ಇರಬೇಕು ಎಂದು ಆಸೆ, ಏಕೆ ಇರಬೇಕು ಎಂದು ಬಿಗುಮಾನ. ಕಷ್ಟಪಟ್ಟು ಜೊತೆಗೆ ಇದ್ದರೂ ಬಹುಕಾಲ ಬಾಳದ ದಾಂಪತ್ಯ ಅದು. ಹರಿದು ಹೋಗುವವರೆಗೆ ಜಗಳವಾಡುವುದು ಅದರ ಹುಟ್ಟುಗುಣ. ಅದಕ್ಕೆ ಜನತಾ ಪರಿವಾರ ಎಂದು ಇನ್ನೊಂದು ಹೆಸರು! ಈಗ ಮತ್ತೆ ಸುದ್ದಿ ಇದೆ, ಅವರು ಒಂದಾಗುತ್ತಾರೆ ಎಂದು. ಬೆಂಗಳೂರಿನಲ್ಲಿ ಒಂದು ಸಣ್ಣ ಸಭೆಯೂ ಆಗಿದೆ.ಅದಕ್ಕೆ ಪ್ರತಿಕ್ರಿಯೆ ಎನ್ನುವಂತೆ ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಮಾತನಾಡುತ್ತಿರುವುದನ್ನು ನೋಡಿದರೆ ಜನತಾ ಪರಿವಾರ ಒಂದಾಗುವುದು ಬಹಳ ಕಷ್ಟ ಎಂದು ಅನಿಸುತ್ತದೆ. ಅದಕ್ಕೆ ಕಾರಣ ಇದೆ: ಒಳಗಡೆ ಎಷ್ಟೇ ಕಚ್ಚಾಟವಿದ್ದರೂ ರಾಜ್ಯದಲ್ಲಿ ಜನತಾದಳ (ಎಸ್‌) ಒಂದು ಪರ್ಯಾಯ ಶಕ್ತಿ, ಬೇಕಾದರೆ ತೃತೀಯ ಪರ್ಯಾಯ ಎನ್ನಬಹುದು. ಅವರು ಮನಸ್ಸು ಮಾಡಿದರೆ ಅಧಿಕಾರದ ಒಂದು ಭಾಗವಾಗಿ ಇರಬಹುದು. ಕರ್ನಾಟಕದ ರಾಜಕಾರಣದಲ್ಲಿ ಆಗೀಗಲಾದರೂ ತಾವು ‘ನಿರ್ಣಾಯಕ’ ಆಗಿರಬೇಕು ಎಂದೇ ದೇವೇಗೌಡರು ಬಯಸುವುದು. ಅವರ ಬಯಕೆ ಕೆಲವು ಸಾರಿ ಕೈಗೂಡುತ್ತದೆ, ಕೆಲವು ಸಾರಿ ಕೈ ಕೊಡುತ್ತದೆ. ಜನತಾ ಪರಿವಾರ ಒಂದು ಮಾಡಬೇಕು ಎನ್ನುವವರಲ್ಲಿ ಇಂಥ ಯಾವ ಶಕ್ತಿಯೂ ಇಲ್ಲ. ಅವರ ಜೊತೆ ಇರುವವರಲ್ಲಿ ಒಬ್ಬರೇ ನೇರವಾಗಿ ಜನರಿಂದ ಚುನಾಯಿತರಾದ ಶಾಸಕ. ಉಳಿದವರ ಜೊತೆಗೆ ಕನಿಷ್ಠ ನಾಲ್ವರೂ ಇಲ್ಲ! ಅಂಥವರನ್ನು ಯಾರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ?

ಜನತಾ ಪರಿವಾರ ಒಂದಾಗಬೇಕು ಎನ್ನುವವರಿಗೆ ಬಿಹಾರ ಚುನಾವಣೆಯಲ್ಲಿ ನಿತೀಶ್‌ಕುಮಾರ್‌ ಮತ್ತು ಲಾಲುಪ್ರಸಾದ್‌ ಅವರ ಮೈತ್ರಿಗೆ ಸಿಕ್ಕ ಯಶಸ್ಸು ಒತ್ತಾಸೆಯಾಗಿ ನಿಂತಿದೆ. ಈಗ ನಿತೀಶ್‌ ರಾಷ್ಟ್ರಮಟ್ಟದ ನಾಯಕ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗಲ್ಲದಿದ್ದರೂ ಮುಂದಿನ ದಿನಗಳಲ್ಲಿ ನಿತೀಶ್‌ ಅವರೇ ಪರ್ಯಾಯ ನಾಯಕ. ನಿತೀಶ್‌ ಮತ್ತು ಲಾಲುಪ್ರಸಾದ್ ಜೊತೆಗೆ ಕಾಂಗ್ರೆಸ್‌ ಕೂಡ ಮೂರನೇ ಪಾಲುದಾರನಾಗಿ ಚುನಾವಣೆ ಎದುರಿಸಿತ್ತು. ಅನೇಕರಿಗೆ ನೆನಪು ಇರಬಹುದು: 1977ರಲ್ಲಿ ಜನತಾ ಪಕ್ಷ ಹುಟ್ಟಿದ್ದು ಕಾಂಗ್ರೆಸ್ಸಿನ ದುರಾಡಳಿತದ ವಿರುದ್ಧವಾಗಿ, ಅದರಲ್ಲಿಯೂ ಆಗಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತುಪರಿಸ್ಥಿತಿಯ ವಿರುದ್ಧವಾಗಿ. ಆಗಿನ ಜನತಾ ಪಕ್ಷದಲ್ಲಿ ಸಂಸ್ಥಾ ಕಾಂಗ್ರೆಸ್‌ ಮಾತ್ರವಲ್ಲದೇ, ಜನಸಂಘ, ಭಾರತೀಯ ಲೋಕದಳದಂಥ ಪಕ್ಷಗಳೂ ವಿಲೀನಗೊಂಡಿದ್ದುವು. ಆ ಮೇಲೆ ಗಂಗೆಯಲ್ಲಿ ನೀರು ಹರಿದು ಹೋದಂತೆ ಆ ಜನತಾ ಪಕ್ಷ ಒಡೆದು, ಒಂದಾಗಿ, ಮತ್ತೆ ಹೋಳಾಗಿ ಛಿನ್ನಾಛಿದ್ರವಾಗಿ ಹೋಗಿದೆ. ಆ ಪಕ್ಷಕ್ಕೆ ಅಮೀಬಾ ಗುಣ. ಅದು ಒಡೆಯುತ್ತಲೇ ಇರಬೇಕು!ಕಾಲ ಹೇಗೆ ಬದಲಾಗುತ್ತದೆ ಎಂಬುದು ನಿಜಕ್ಕೂ ವಿಸ್ಮಯಕಾರಿ. ಬಿಹಾರದಲ್ಲಿ ಜನತಾ ಪರಿವಾರ ಮೈತ್ರಿ ಮಾಡಿಕೊಂಡುದು ಬಿಜೆಪಿ ವಿರುದ್ಧ! ಇಂದಿರಾ ಗಾಂಧಿಯವರು 1977ರಲ್ಲಿ ಎಲ್ಲರೂ ಸೇರಿ ವಿರೋಧಿಸಲೇಬೇಕಾದ ಸರ್ವಾಧಿಕಾರಿ ಎಂದೆನಿಸಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ಅದೇ ಸ್ಥಾನದಲ್ಲಿ ಇದ್ದಾರೆ. ಅವರು ಸರ್ವಾಧಿಕಾರಿಯೇ? ಅಥವಾ ಆ ದಾರಿಯಲ್ಲಿ  ಇದ್ದಾರೆಯೇ? ಬಿಹಾರದ ಪ್ರಯೋಗ ‘ಬಿಜೆಪಿ ವಿರುದ್ಧ ಎಲ್ಲರೂ’ ಅಥವಾ ‘ಮೋದಿ ವಿರುದ್ಧ ಎಲ್ಲರೂ’ ಎನ್ನುವಂಥದು. ಆ ಪ್ರಯೋಗದಲ್ಲಿ ನಿತೀಶ್‌ ಅವರಿಗೆ ಗೆಲುವು ಸಿಕ್ಕಿದೆ. ಕರ್ನಾಟಕದ ಉಳಿದಪಳಿದ ಜನತಾ ನಾಯಕರಿಗೆ ಬಿಹಾರದ ಮಾದರಿ ಅನುಕರಣೀಯ ಎಂದು ಅನಿಸಿದೆ.ರಾಜ್ಯ ರಾಜಕಾರಣದಲ್ಲಿ ಜನತಾದಳ (ಎಸ್‌) ತನ್ನ ಪ್ರಭಾವ ಉಳಿಸಿಕೊಂಡಿದ್ದರೂ ತನ್ನದೇ ನಾಯಕರ ನಿರಂತರ ವಲಸೆಯಿಂದಾಗಿ ಸ್ವತಂತ್ರವಾಗಿ ಸರ್ಕಾರ ರಚಿಸುವಷ್ಟು ಸಮರ್ಥವಾಗಿಲ್ಲ. ಯಾವುದಾದರೂ ಇನ್ನೊಂದು ಪಕ್ಷದ ‘ಮೈನರ್‌’ ಅಥವಾ ‘ಮೇಜರ್’ ಪಾಲುದಾರನಾಗಿ ಮಾತ್ರ ಅದು ಸರ್ಕಾರ ರಚಿಸಲು ಸಾಧ್ಯ. ಅಥವಾ ಹಾಗೆಂದು ಇದುವರೆಗಿನ ಇತಿಹಾಸ ನಮಗೆ ತೋರಿಸಿಕೊಟ್ಟಿದೆ. 2004ರಲ್ಲಿ ಕಾಂಗ್ರೆಸ್‌ ಜೊತೆಗೆ ‘ಮೈನರ್‌’ ಪಾಲುದಾರನಾಗಿ, 2006ರಲ್ಲಿ ಬಿಜೆಪಿ ಜೊತೆ ‘ಮೇಜರ್‌’ ಪಾಲುದಾರನಾಗಿ ಆ ಪಕ್ಷ ಅಧಿಕಾರ ಮಾಡಿದ್ದು ಇದಕ್ಕೆ ನಿದರ್ಶನ. ಈಗಲೂ ಆ ಪಕ್ಷ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ ಜೊತೆಗೆ ‘ಮೈನರ್‌’ ಪಾಲುದಾರ.ತಾನು ಸಮಾನ ದೂರ ಕಾಯ್ದುಕೊಳ್ಳುವುದಾಗಿ ಹೇಳಿದ್ದ ಎರಡೂ ಪಕ್ಷಗಳ ಜೊತೆಗೆ ಸೇರಿ ಸರ್ಕಾರ ಮಾಡಿ ಅಥೋಭ್ರಷ್ಟ, ತಥೋಭ್ರಷ್ಟವಾಗಿದ್ದರೂ ಆ ಪಕ್ಷದ ನಾಯಕರಿಗೆ ಇನ್ನೂ ‘ಸಮಾನ ದೂರ’ದ ರಾಜಕಾರಣ ಮಾಡುವ ಇರಾದೆ. ಆ ಪಕ್ಷದಲ್ಲಿನ ಈಗಿನ ಬಿಕ್ಕಟ್ಟಿಗೆ ‘ವ್ರತ ಕೆಟ್ಟು ತುಪ್ಪ ತಿಂದ ಮೇಲೂ ‘ಮಡಿ’ಯ ಮಾತು ಆಡುತ್ತಿರುವ’ ಈ ದ್ವಂದ್ವ ಕಾರಣ. ಮಂಡ್ಯದಲ್ಲಿ ಚೆಲುವರಾಯಸ್ವಾಮಿ, ಮಾಗಡಿಯಲ್ಲಿ ಎಚ್‌.ಸಿ.ಬಾಲಕೃಷ್ಣ, ಗಂಗಾವತಿಯಲ್ಲಿ ಇಕ್ಬಾಲ್‌ ಅನ್ಸಾರಿ ಆಡುತ್ತಿರುವ ಮಾತುಗಳನ್ನು ಕೇಳಿದರೆ ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಆ ಪಕ್ಷ ಇದೇ ರೀತಿ ಒಂದಾಗಿ ಉಳಿಯುತ್ತದೆಯೇ ಎಂದು ಅನುಮಾನ ಆಗುತ್ತದೆ.ಆದರೂ ದೇವೇಗೌಡರದು ‘ದಣಿವರಿಯದ ಹೋರಾಟ’. ಅವರು ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗೆ  ಈಗಲೇ ಪಂಚೆ ಏರಿಸಿದ್ದಾರೆ, ರಾಜ್ಯದ  ಪ್ರವಾಸ ಮಾಡುತ್ತಿದ್ದಾರೆ. ದೇವೇಗೌಡರ ಸಮಸ್ಯೆ ಏನು ಎಂದರೆ ತಾವು ಮಾಜಿ ಪ್ರಧಾನಿ ಎಂಬುದನ್ನು ಅವರು ಮರೆಯದೇ ಇರುವುದು. ಮೊನ್ನೆ ಅವರು ಯಾವುದೋ ತಾಲ್ಲೂಕಿನ ಪತ್ರಕರ್ತರಿಗೆ, ‘ನಾನು ಮಾಜಿ ಪ್ರಧಾನಿ, ನನಗೆ ಹೇಗೆ  ಪ್ರಶ್ನೆ ಕೇಳಬೇಕು ಎಂದು ನಿಮಗೆ ಗೊತ್ತಿರಲಿ, ಹುಷಾರ್‌’ ಎಂದು ತಾಕೀತು ಮಾಡಿದ್ದಾರೆ. ಈ ಪತ್ರಕರ್ತರೂ ತರಲೆಗಳು! ಅವರು ಮಾಜಿ ಪ್ರಧಾನಿಗೆ ಕಿರಿಕಿರಿ ಮಾಡುವಂಥ ಯಾವ ಎಡವಟ್ಟು ಪ್ರಶ್ನೆ ಕೇಳಿದರೋ ಯಾರಿಗೆ ಗೊತ್ತು?ತಾತ್ಪರ್ಯ ಏನು ಎಂದರೆ ಜನತಾ ಪರಿವಾರ ಒಂದಾಗಬೇಕು ಎನ್ನುವುದಾದರೆ ಅದು ತಮ್ಮ ನೇತೃತ್ವದಲ್ಲಿ ಆಗಲಿ ಎಂದು ಅವರು ಬಯಸುತ್ತಿರಬಹುದು. ಏಕೆಂದರೆ ಜನತಾ ಪರಿವಾರದಲ್ಲಿ ತಾವು ಅತ್ಯಂತ ಹಿರಿಯ ನಾಯಕರು ಮತ್ತು ತಾವು ಮಾಜಿ ಪ್ರಧಾನಿ ಎಂದು ಅವರಿಗೆ ಅನಿಸಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ. ಆದರೆ, ದೇವೇಗೌಡರ ಪ್ರಭಾವ ಸೀಮಿತವಾಗಿರುವುದು ಕರ್ನಾಟಕಕ್ಕೆ ಮಾತ್ರ. ಅವರ ಪಕ್ಷಕ್ಕೆ ಕೇರಳದಲ್ಲಿ ಒಂದಿಷ್ಟು ಪ್ರಭಾವ ಇದೆ. ಅದು ಕೂಡ ಅಲ್ಲಿನ ಸ್ಥಳೀಯ ನಾಯಕರ ಕಾರಣದಿಂದಾಗಿ. ಮುಲಾಯಂ, ಲಾಲು, ನಿತೀಶ್‌ ಮುಂತಾದವರೆಲ್ಲ ಮಧ್ಯ ಭಾರತದ ದೊಡ್ಡ ರಾಜ್ಯಗಳ ದೊಡ್ಡ ನಾಯಕರು. ಅವರಿಗೆ ಅಕ್ಕಪಕ್ಕದ ರಾಜ್ಯಗಳಲ್ಲಿಯೂ ಗಮನಾರ್ಹ ಎನ್ನುವಂಥ ಪ್ರಭಾವ ಇದೆ. ಅವರದೂ ಒಂದು ರೀತಿ ‘ಅಹಿಂದ’ ರಾಜಕಾರಣ. ದೇವೇಗೌಡರಿಗೂ ಅಹಿಂದ ರಾಜಕಾರಣಕ್ಕೂ ತಾಳೆಯಾಗುವುದಿಲ್ಲ!    ಬಿಹಾರದ ವಿಧಾನಸಭೆ ಚುನಾವಣೆಗಿಂತ ಮುಂಚೆ ಇದ್ದ ಜನತಾ ಪರಿವಾರದ ಸ್ಥಿತಿಗೂ ಈಗಿನ ಸ್ಥಿತಿಗೂ ವ್ಯತ್ಯಾಸ ಇದೆ. ಈಗ ಜನತಾದಳ (ಯು) ನಾಯಕ ನಿತೀಶ್‌ಕುಮಾರ್‌ ಅವರ ಕೈ ಮೇಲಾಗಿದೆ. ರಾಷ್ಟ್ರಮಟ್ಟದಲ್ಲಿ ಜನತಾ ಪರಿವಾರ ಒಂದಾಗುವುದಾದರೆ ನಿತೀಶ್‌ ಅವರೇ ನೇತೃತ್ವ ವಹಿಸಬೇಕಾಗುತ್ತದೆ. ಒಂದು ಕಾಲದ ಅವರ ರಾಜಕೀಯ ಕಡುವೈರಿಯಾಗಿದ್ದ ಲಾಲುಪ್ರಸಾದ್‌ ಅವರೇ ನಿತೀಶ್‌ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ. ಪರಿವಾರ ಒಂದಾಗುವುದಕ್ಕೆ ದೇವೇಗೌಡರು ಹಿಂದೇಟು ಹಾಕುತ್ತಿರುವುದಕ್ಕೆ ಇದು ಮುಖ್ಯ ಕಾರಣ ಆಗಿರುವಂತಿದೆ. ಗೌಡರು ತಮಗಿಂತ ಬಹಳ ಕಿರಿಯರಾದ ನಿತೀಶ್‌ ಅವರ ನಾಯಕತ್ವ ಒಪ್ಪಿಕೊಳ್ಳುವುದು ಕಷ್ಟ.ಕರ್ನಾಟಕದಲ್ಲಿ ಜನತಾದಳ ಒಡೆದು (ಯು) ಮತ್ತು (ಎಸ್‌) ಎಂದು ಪ್ರತ್ಯೇಕವಾದುದಕ್ಕೆ 17 ವರ್ಷಗಳ ಹಿಂದೆ ನಡೆದ ಸಾರ್ವತ್ರಿಕ ಚುನಾವಣೆ ಮುನ್ನುಡಿ ಬರೆದಿತ್ತು. ಅದು 1999ನೇ ಇಸವಿ. ಆಗ ರಾಜ್ಯದಲ್ಲಿ ಜೆ.ಎಚ್‌.ಪಟೇಲರು ಮುಖ್ಯಮಂತ್ರಿ. ಲೋಕಸಭೆಗೆ ಚುನಾವಣೆ ಪ್ರಕಟಣೆಯಾಯಿತು. ಜತೆಗೆ ರಾಜ್ಯ ವಿಧಾನಸಭೆಗೂ ಚುನಾವಣೆ ಘೋಷಣೆಯಾಯಿತು. ಆಗ ಎನ್‌ಡಿಎ ಮೈತ್ರಿಕೂಟದಲ್ಲಿ ಇದ್ದ ಸಮತಾ ಪಕ್ಷದ ಅಧ್ಯಕ್ಷ ಜಾರ್ಜ್‌ ಫರ್ನಾಂಡಿಸ್‌ ತಮ್ಮ ಹಳೆಯ ಸಮಾಜವಾದಿ ಗೆಳೆಯ ಪಟೇಲರನ್ನು ಭೇಟಿ ಮಾಡಿ ಎನ್‌ಡಿಎ ಜೊತೆಗೆ ಕೈ ಜೋಡಿಸಲು ಕೇಳಿಕೊಂಡರು. ಆ ವೇಳೆಗಾಗಲೇ ಜನತಾದಳದಿಂದ ಉಚ್ಚಾಟಿತರಾಗಿದ್ದ ರಾಮಕೃಷ್ಣ ಹೆಗಡೆಯವರು ಲೋಕಶಕ್ತಿ ಎಂಬ ಪಕ್ಷ ಕಟ್ಟಿಕೊಂಡು ರಾಜ್ಯದಾದ್ಯಂತ  ಓಡಾಡುತ್ತಿದ್ದರು. ಲೋಕಶಕ್ತಿ, ಸಮತಾ ಮತ್ತು ಜನತಾದಳ ಒಂದಾಗಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆ ಎದುರಿಸುವುದು ಎಂದು ನಿರ್ಧಾರವಾಯಿತು. ದೇವೇಗೌಡರು ಉರಿದು ಬಿದ್ದರು.‘ಕೋಮುವಾದಿ’ ಪಕ್ಷ ಬಿಜೆಪಿ ಜೊತೆಗೆ ಸೇರಲು ತಾವು ಸಿದ್ಧರಿಲ್ಲ ಎಂದು ಘೋಷಿಸಿ ಜನತಾದಳ (ಜಾತ್ಯತೀತ) ಪಕ್ಷವನ್ನು ಹುಟ್ಟು ಹಾಕಿದರು ಹಾಗೂ ಬೆಂಗಳೂರಿನ ರೇಸ್ ಕೋರ್ಸ್‌ ರಸ್ತೆಯಲ್ಲಿನ ಆಗಿನ ಜನತಾದಳ ಕಚೇರಿಯನ್ನು ವಶಕ್ಕೆ ತೆಗೆದುಕೊಂಡರು. ಆಗ ಅವರು ಹೇಳಿದ್ದು ತಮ್ಮ ಪಕ್ಷ, ಕಾಂಗ್ರೆಸ್‌ ಮತ್ತು ಬಿಜೆಪಿ ಜೊತೆಗೆ ಸಮಾನ ದೂರವನ್ನು ಕಾಪಾಡಿಕೊಳ್ಳುತ್ತದೆ ಎಂದು. ಈಗ ಅವರ ಪಕ್ಷದಲ್ಲಿ ಇರುವವರಿಗೆ ಇದು ಒಂದು ದೊಡ್ಡ ಮೋಸ ಮತ್ತು ನಿಷ್ಪ್ರಯೋಜಕ ಘೋಷಣೆಯಂತೆ  ಕಾಣುತ್ತಿದೆ. ಏಕೆಂದರೆ ಈಗಾಗಲೇ ಜನತಾದಳ (ಎಸ್‌) ಕಾಂಗ್ರೆಸ್‌ ಮತ್ತು ಬಿಜೆಪಿಗಳೆರಡರ ಜೊತೆಗೂ ಸೇರಿ ಸರ್ಕಾರ ರಚಿಸಿದೆ. ಕುಮಾರಸ್ವಾಮಿಯವರು ‘ಕೋಮುವಾದ? ಹಾಗೆಂದರೆ ಏನು’ ಎಂದು ಕೇಳಿಯಾಗಿದೆ. ಅವರ ನಿಲುವಿನಲ್ಲಿ ಈಗಲೂ ಅಂಥ ಬದಲಾವಣೆಯಾಗಿದೆ ಎಂದು ಅನಿಸುವುದಿಲ್ಲ.ದೇವೇಗೌಡರ ಪಕ್ಷ ಕಾಂಗ್ರೆಸ್‌ ಮತ್ತು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿರಬಹುದು. ಆದರೆ, ದೇವೇಗೌಡರು ತಾವೇ ಮುಂದೆ ನಿಂತು ಬಿಜೆಪಿ ಜೊತೆಗೆ ಕೈ ಜೋಡಿಸುವುದಿಲ್ಲ. ಅವರಿಗೆ ರಾಷ್ಟ್ರಮಟ್ಟದಲ್ಲಿ ಈಗಲೂ ‘ಜಾತ್ಯತೀತ ಬಿಂಬ’ ಉಳಿಸಿಕೊಳ್ಳಬೇಕು ಎಂಬ ಇಚ್ಛೆ. ಹಾಗೆಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವವರೆಗೆ ಕಾಂಗ್ರೆಸ್‌ ಜೊತೆಗೆ ಸಖ್ಯ ಬೆಳೆಸಲೂ ಅವರಿಗೆ ಇಷ್ಟವಿಲ್ಲ. ದೇವೇಗೌಡರಿಗೆ ಏನು ಮಾಡಿದರೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಜನತಾ ಪರಿವಾರ ಒಂದಾಗಬೇಕು ಎನ್ನುವವರಿಗೆ, ಸಿದ್ದರಾಮಯ್ಯ ಜೊತೆಗೆ ಸೂಕ್ಷ್ಮ ಸಂಬಂಧ ಇದೆ ಎಂದು ಅವರಿಗೆ ಗೊತ್ತಿದೆ!ಜನತಾ ಪರಿವಾರ ಒಂದಾಗಬೇಕು ಎನ್ನುವವರು ಕೂಡ ಬಹುಪಾಲು ಬಿಜೆಪಿ ವಿರೋಧಿಗಳೇ ಹೊರತು ಕಾಂಗ್ರೆಸ್‌ ವಿರೋಧಿಗಳು ಅಲ್ಲ. ‘ಕಾಂಗ್ರೆಸ್‌ ವಿರೋಧ ಅರ್ಥವಿಲ್ಲದ್ದು’ ಎಂದು ಜನತಾಪರಿವಾರದ ಬಹುಪಾಲು ಮಂದಿಗೆ ಈಗ ಅನಿಸತೊಡಗಿದೆ. ಪರಿವಾರದಲ್ಲಿ ಇರುವವರೆಲ್ಲ ಒಂದಿಷ್ಟು ಸಮಾಜವಾದಿ ಹಿನ್ನೆಲೆಯಿಂದ ಬಂದವರು, ಅದು ಸುಳ್ಳುಪಳ್ಳಾದರೂ ಇರಲಿ ‘ಜಾತ್ಯತೀತ’ರು, ಜಗಳ ಮಾಡಲು ಅವಕಾಶ ಇರಬೇಕು ಎನ್ನುವವರು! ಅವರಿಗೆಲ್ಲ ಈಗಿನ ಮೋದಿ ಅವರ ಬಿಜೆಪಿ ಉಸಿರುಕಟ್ಟಿಸುವಂತೆ ಕಾಣುತ್ತಿದೆ.ರಾಜ್ಯ ಬಿಜೆಪಿಯಲ್ಲಿ ಎಷ್ಟೊಂದು ಮಂದಿ ಜನತಾ ಪರಿವಾರದವರು ಇದ್ದಾರೆ! ಅವರೆಲ್ಲ ಮಂತ್ರಿಗಳು ಆಗಿರಬಹುದು. ಅಧಿಕಾರ ಅನುಭವಿಸಿರಬಹುದು. ಒಂದಿಷ್ಟು ರೊಕ್ಕಪಕ್ಕ ಮಾಡಿಕೊಂಡಿರಬಹುದು. ಆದರೆ, ‘ಗರ್ಭಗುಡಿ’ಯ ಹೊರಗೇ ಅವರೆಲ್ಲ ನಿಂತಿದ್ದಾರೆ. ಅವರನ್ನೆಲ್ಲ ತಮ್ಮ ಪಕ್ಷಕ್ಕೆ ಕರೆತಂದು, ಕಾಂಗ್ರೆಸ್ಸಿಗೆ ಪ್ರತಿಯಾಗಿ ತಮ್ಮ ಪಕ್ಷವನ್ನು ಬೆಳೆಸಿ ಅಧಿಕಾರ ಹಿಡಿಯಬಹುದಾದ ಪಕ್ಷ  ತಮ್ಮದು  ಎನ್ನುವಂತೆ ಮಾಡಿದ ಯಡಿಯೂರಪ್ಪನವರಿಗೆ  ಅವರನ್ನೆಲ್ಲ ಗರ್ಭಗುಡಿಯ ಒಳಗೆ ಕರೆದುಕೊಂಡು ಹೋಗಲು ಆಗಲಿಲ್ಲ.ಹಾಗೆಂದು ಅಲ್ಲಿ ಇರುವವರು ಹೊರಗೆ ಬರುತ್ತಾರೆಯೇ? ಬರುವುದಿಲ್ಲ. ಬಿಜೆಪಿಯಲ್ಲಿ ಇದ್ದರೆ ಇಂದಲ್ಲ ನಾಳೆ ಅಧಿಕಾರಕ್ಕೆ ಬರಬಹುದು ಎಂದು ಅವರಿಗೆ ಗೊತ್ತಿದೆ. ಮತ್ತೆ ಅದೇ, ಮಂತ್ರಿಯಾಗಬಹುದು, ಒಂದಿಷ್ಟು ರೊಕ್ಕಪಕ್ಕ ಮಾಡಿಕೊಳ್ಳಬಹುದು ಎಂದೂ ಇರಬಹುದು! ಮುಖ್ಯವಾಗಿ ಅವರೆಲ್ಲ ಕಾಂಗ್ರೆಸ್‌ ವಿರೋಧಿ ರಾಜಕಾರಣ ಮಾಡಿಕೊಂಡು ಬಂದವರು. ಇದ್ದರೆ ಅವರು ಬಿಜೆಪಿಯಲ್ಲಿಯೇ ಇರಬೇಕು! ಸಿದ್ದರಾಮಯ್ಯ ಮತ್ತು ಅವರ ಜೊತೆಗಾರರಾದ ಅನೇಕರು ಜನತಾ ಪರಿವಾರ ತೊರೆದು ಕಾಂಗ್ರೆಸ್‌ ಸೇರಿ ಅಧಿಕಾರ ಅನುಭವಿಸುತ್ತಲಿದ್ದಾರೆ. ಅವರೂ ಕಾಂಗ್ರೆಸ್‌ ತೊರೆದು ಬರುವುದಿಲ್ಲ. ಜನತಾದಳ (ಎಸ್‌)ನಲ್ಲಿ ಇರುವ ಅನೇಕರಿಗೆ ಸಿದ್ದರಾಮಯ್ಯ ಸ್ನೇಹಿತರು. ಅವರೆಲ್ಲ ಕೂಡಿ ಇದ್ದವರು. ಕಷ್ಟಸುಖ ಅನುಭವಿಸಿದವರು. ಈಗ ಅಧಿಕಾರದಲ್ಲಿ ಇದ್ದಾರೆ. ಮತ್ತು ಪೂರ್ಣಾವಧಿ ಅಧಿಕಾರ ಮುಗಿಸುವಂತೆ ಕಾಣುತ್ತಾರೆ! ಅಧಿಕಾರ ಎನ್ನುವುದು ಒಂದು ಅಯಸ್ಕಾಂತ. ಅದರ ಸೆಳೆತದಿಂದ ಪಾರಾಗುವುದು ಬಹಳ ಕಷ್ಟ!ಅಯಸ್ಕಾಂತದ ಸೆಳೆತದಿಂದ ಪಾರಾಗಬೇಕಾದರೆ ವಿರುದ್ಧ ಧ್ರುವದ ಅಯಸ್ಕಾಂತವಾಗಿರಬೇಕು. ಅಥವಾ ಅದರ  ಸೆಳೆತಕ್ಕೆ ಒಳಗಾಗದಷ್ಟು ಶಕ್ತಿ ಇರುವ ಗಟ್ಟಿ ಮತ್ತು ದೊಡ್ಡ  ಲೋಹವಾದರೂ ಆಗಿರಬೇಕು. ಬಿಹಾರದ ಜನತಾಪರಿವಾರ ಒಂದಾಗದೇ ಇದ್ದರೆ ಅದು ಬಿಜೆಪಿಯನ್ನು ಎದುರಿಸುವುದು ಸಾಧ್ಯ ಇರಲಿಲ್ಲ. ಮಾಜಿ ಮುಖ್ಯಮಂತ್ರಿ ಜೀತನ್‌ ರಾಂ ಮಾಂಝಿ ಅವರ ಹಾಗೆ ದೊಡ್ಡ ಪಕ್ಷದ ಸೆಳೆತಕ್ಕೆ ಉಳಿದವರೂ ಸಿಕ್ಕಿಬಿಡಬಹುದಿತ್ತು. ನಿತೀಶ್‌ ಕುಮಾರ್‌ ಮಾಡಿರುವುದು ಎರಡು ಬಲಿಷ್ಠ ಪಕ್ಷಗಳು ಇರಬೇಕು ಎನ್ನುವ ರಾಜಕಾರಣ. ಅದರಲ್ಲಿ ಅವರು ಯಶ ಗಳಿಸಿದ್ದಾರೆ. ಮುಂಬರುವ ಪಶ್ಚಿಮ ಬಂಗಾಳ, ಅಸ್ಸಾಂ, ಪಂಜಾಬ್‌ ವಿಧಾನಸಭೆ ಚುನಾವಣೆಗಳಿಗೆ ಒಂದು ಮಾದರಿಯನ್ನೂ ಅವರು ಹಾಕಿಕೊಟ್ಟಿದ್ದಾರೆ.ಕರ್ನಾಟಕದಲ್ಲಿ ಈಗಾಗಲೇ ಮುಖ್ಯವಾಗಿ ಎರಡು ಪಕ್ಷಗಳ ವ್ಯವಸ್ಥೆ ಇದೆ. ಜನತಾದಳ (ಎಸ್‌) ಮೂರನೇ ಶಕ್ತಿಯಾಗಿದೆ. ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಅದು ಮೂರನೇ ಶಕ್ತಿಯಾಗಿಯಾದರೂ ಉಳಿಯುತ್ತದೆಯೇ? ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದು ದುಸ್ತರ ಎನ್ನುವುದಾದರೆ, ದೇವೇಗೌಡರಂಥ ಛಲವಾದಿ ಮತ್ತು ಕುಮಾರಸ್ವಾಮಿಯವರಂಥ ಜನಪ್ರಿಯ ನಾಯಕರು ಇರುವ ಪಕ್ಷವನ್ನೇ ಒಟ್ಟಾಗಿ ಉಳಿಸಿಕೊಳ್ಳುವುದು ಕಷ್ಟ ಎನಿಸುತ್ತಿರುವಾಗ ಅನಾಯಕತ್ವ ತುಂಬಿರುವ ಜನತಾ ಪರಿವಾರ ಒಂದುಗೂಡುವ ಮಾತು ಎಂಥ ಹಗಲುಗನಸು ಅಲ್ಲವೇ? ಹಗಲುಗನಸು ಕಾಣುವುದರಲ್ಲಿಯೂ ಒಂದು ಸುಖ ಇರುತ್ತದೆಯೋ ಏನೋ!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.