ಭಾನುವಾರ, ಮೇ 9, 2021
20 °C

ಜನರಲ್ ಎಲೆಕ್ಷನ್ಸ್ ಮತ್ತು ಜನರಲ್ಸ್ ಸೆಲೆಕ್ಷನ್

ರಾಮಚಂದ್ರ ಗುಹಾ Updated:

ಅಕ್ಷರ ಗಾತ್ರ : | |

ತೊಂಬತ್ತರ ದಶಕದ ಅಂತ್ಯದಲ್ಲಿ ಜಾರ್ಜ್ ಅದಿತ್ ಜೊಂಡ್ರೊ ಎಂಬ ಇಂಡೊನೇಷ್ಯಾದ ಪ್ರತಿಭಾನ್ವಿತ ಆ್ಯಕ್ಟಿವಿಸ್ಟ್ ಜೊತೆ ವೇದಿಕೆ ಹಂಚಿಕೊಳ್ಳುವ ಅವಕಾಶ ನನಗೆ ಒದಗಿತ್ತು. ಮಿಲಿಟರಿ ಆಡಳಿತಕ್ಕೆ ಮುಜುಗರ ತರುವ ಸಾಮಾಜಿಕ ಚಳವಳಿಗಳಲ್ಲಿ ಪಾಲ್ಗೊಂಡಿದ್ದಕ್ಕಾಗಿ ತನ್ನ ತಾಯ್ನಾಡಿನಿಂದ ಗಡೀಪಾರಾಗಿ ನಿರಾಶ್ರಿತನಂತೆ ಆತ ಬದಕುತ್ತಿದ್ದ.ಜನರಲ್‌ಗಳು ಹಾಗೂ ಗುತ್ತಿಗೆದಾರರಿಗೆ ಕಮಿಷನ್ ರೂಪದಲ್ಲಿ ಲಕ್ಷಾಂತರ ಡಾಲರ್‌ಗಳನ್ನು ಒದಗಿಸಿಕೊಡುವ ಬಹು ದೊಡ್ಡ ಅಣೆಕಟ್ಟಿಗೆ ಸಂಬಂಧಿಸಿದ ಪ್ರಚಾರಾಂದೋಲನವೊಂದರ್ಲ್ಲಲಿ `ಮೆಗಾವ್ಯಾಟ್ ನೊ! ಮೇಘಾವತಿ ಎಸ್!~ (ಮೇಘಾವತಿ ಸುಕಾರ್ನೊ ಪುತ್ರಿ ಆಗ ಪ್ರಜಾಸತ್ತಾತ್ಮಕ ಪ್ರತಿಪಕ್ಷದ ಪ್ರಮುಖ ನಾಯಕಿಯಾಗಿದ್ದರು) ಎಂಬ ಘೋಷಣೆಯೊಂದನ್ನು  ಅದಿತ್ ಜೊಂಡ್ರೊ ಹುಟ್ಟು ಹಾಕಿದ್ದರು.ಅಂದು ಬರ್ಕ್‌ಲಿಯಲ್ಲಿ ಅದಿತ್ ಜೊಂಡ್ರೊ ಹಾಗೂ ನಾನು, ಏಷ್ಯಾದಲ್ಲಿನ ಪರಿಸರ ರಾಜಕಾರಣ ಕುರಿತ ಗೋಷ್ಠಿಯೊಂದರಲ್ಲಿ ಮಾತನಾಡಿದ್ದೆವು. ಆತ ಅವರ ದೇಶವನ್ನು ಕೇಂದ್ರೀಕರಿಸಿ, ಹಾಗೆಯೇ ನಾನು ನನ್ನ ದೇಶವನ್ನು ಕೇಂದ್ರವಾಗಿಟ್ಟುಕೊಂಡು ಮಾತನಾಡಬೇಕಿತ್ತು.

 

ಒಂದು ಹಂತದಲ್ಲಿ ಭಾರತೀಯ ರಾಜಕಾರಣಿಗಳ ಬಗ್ಗೆ  ನಾನು ಕೆಟ್ಟದಾಗಿ ಮಾತನಾಡಿದ್ದೆ. ಅದಿತ್ ಜೊಂಡ್ರೊ ನನ್ನ ಟೀಕೆಗಳ ಶಕ್ತಿಯನ್ನು ಗುರುತಿಸಿದರು. ಆದರೆ, `ಕನಿಷ್ಠ ಭಾರತದಲ್ಲಿ ನಿಮಗೆ ಮುಕ್ತ ಮತ್ತು ನ್ಯಾಯಯುತವಾದ ಸಾರ್ವತ್ರಿಕ ಚುನಾವಣೆಗಳಾದರೂ ಇವೆ. ಇಂಡೊನೇಷ್ಯಾದಲ್ಲಿ  ತೆರೆಮರೆಯಲ್ಲಿ ಮೊದಲೇ  ನಿರ್ವಹಿಸಲಾದ ಜನರಲ್‌ಗಳ ಚುನಾವಣೆಗಳು ಇವೆ~ ಎಂದಿದ್ದರು.ನನಗೆ  ಕೆಲವು ತಿಂಗಳ ಹಿಂದೆ ಆ (ವಿಡಂಬನಾತ್ಮಕ ಮತ್ತು ಬುದ್ಧಿವಂತಿಕೆಯ) ಹೇಳಿಕೆ ನೆನಪಾಯಿತು. ಅಧಿಕೃತ ದಾಖಲೆಯಲ್ಲಿ ತಮ್ಮ ಜನ್ಮ ವರ್ಷವನ್ನು 1950ರಿಂದ 1951ಕ್ಕೆ ಬದಲಾಯಿಸಬೇಕೆಂದು ಜನರಲ್ ವಿ.ಕೆ.ಸಿಂಗ್ ಸಲ್ಲಿಸಿದ ಅಫಿಡವಿಟ್‌ಗೆ ಸಂಬಂಧಿಸಿದಂತೆ ಎಸ್‌ಎಂಎಸ್ ಒಂದು ಬಂದಾಗ ನೆನಪಾಯಿತು ಅದು .

 

ಮಿಲಿಟರಿ ಕ್ಷಿಪ್ರಕ್ರಾಂತಿ ನಡೆಯಬಹುದೆಂಬ ವದಂತಿಗಳಿಗೆ ಪ್ರೇರಕವಾಗುವಂತೆ ಪಾಕಿಸ್ತಾನದ ಅಧ್ಯಕ್ಷ ಜರ್ದಾರಿ ಅವರು ಯಾವುದೇ ವಿವರಣೆಗಳಿಲ್ಲದೆ ದುಬೈಗೆ ಮಾಯವಾದ ಸಂದರ್ಭದಲ್ಲೇ ಜನರಲ್ ಸಿಂಗ್ ಅವರ ಆ ಅರ್ಜಿ ಸಲ್ಲಿಕೆಯಾಗಿತ್ತು. ನನಗೆ ಬಂದ ಎಸ್‌ಎಂಎಸ್‌ನಲ್ಲಿ ಈ ಎರಡು ಘಟನೆಗಳನ್ನು ಹೀಗೆ ಒಂದಕ್ಕೊಂದು ಜೋಡಿಸಿಡಲಾಗಿತ್ತು. `ಭಾರತದಲ್ಲಿ ಸೇನಾ ಮುಖ್ಯಸ್ಥರ ವಯಸ್ಸನ್ನು ಸರ್ಕಾರ ನಿರ್ಧರಿಸುತ್ತದೆ/ ಪಾಕಿಸ್ತಾನದಲ್ಲಿ ಸೇನಾ ಮುಖ್ಯಸ್ಥ, ಸರ್ಕಾರದ ವಯಸ್ಸನ್ನು ನಿರ್ಧರಿಸುತ್ತಾರೆ~. ಮಿಲಿಟರಿಯನ್ನು ನಾಗರಿಕ ಸರ್ಕಾರವೇ ನಿಯಂತ್ರಿಸುವ ಬಗೆಯಿಂದಾಗಿ ಮ್ಯಾನ್ಮಾರ್(ಬರ್ಮಾ), ವಿಯೆಟ್ನಾಂ, ಥಾಯ್ಲೆಂಡ್, ಇಂಡೊನೇಷ್ಯಾ ಹಾಗೂ ಚೀನಾಗಳಿಗಿಂತ ಭಾರತ ಭಿನ್ನವಾಗಿ ನಿಲ್ಲುತ್ತದೆ. ಈ ಈ ರಾಷ್ಟ್ರಗಳಲ್ಲೆಲ್ಲಾ, ಸಮವಸ್ತ್ರಧಾರಿಗಳು ರಾಷ್ಟ್ರ ರಾಜಕಾರಣದಲ್ಲಿ ಮುಖ್ಯವಾದ ಹಾಗೂ ಅನೇಕ ಬಾರಿ ನಿರ್ಣಾಯಕವಾದ ಪಾತ್ರವನ್ನು ನಿರ್ವಹಿಸಿದ್ದಾರೆ.

 

ಆ ರಾಷ್ಟ್ರಗಳ ವಿಮೋಚನಾ ಹೋರಾಟಗಳ ನೇತೃತ್ವ ವಹಿಸಿದ್ದವರು ಸಶಸ್ತ್ರ ರಾಷ್ಟ್ರೀಯವಾದಿಗಳು ಎಂಬ ಅಂಶವೂ ಕೆಲವೆಡೆ ಇದಕ್ಕೆ ಕಾರಣವಾಗಿದೆ. ಭಾರತದಲ್ಲಿ ಸ್ವಾತಂತ್ರ್ಯವನ್ನು ಅಹಿಂಸಾತ್ಮಕ ನೆಲೆಯಲ್ಲಿ ನಡೆಸಿದ ಚಳವಳಿಯಿಂದ ಗೆದ್ದುಕೊಳ್ಳಲಾಗಿದೆ.

ಪಾಕಿಸ್ತಾನದತ್ತ ಕಣ್ಣುಹಾಯಿಸಿದಲ್ಲಿ, ಭಾರತದಲ್ಲಿ ಸೇನೆ ಯಾವಾಗಲೂ ಬ್ಯಾರಕ್‌ನಲ್ಲೇ ಇರುತ್ತದೆ ಎನ್ನಬಹುದು.ಎರಡೂ ರಾಷ್ಟ್ರಗಳೂ ಒಂದೇ ಇತಿಹಾಸ, ಸಂಸ್ಕೃತಿ ಹಾಗೂ ಕಾನೂನು ವ್ಯವಸ್ಥೆ ಹೊಂದಿವೆ. ಹಾಗಿದ್ದಾಗ, ಒಂದು ರಾಷ್ಟ್ರದಲ್ಲಿ ವೃತ್ತಿಪರ ಕರ್ತವ್ಯಗಳಿಗೆ  ಮಾತ್ರ ಮಿಲಿಟರಿ ಸೀಮಿತವಾಗಿದೆ ಏಕೆ? ಆದರೆ ಮತ್ತೊಂದು ರಾಷ್ಟ್ರದಲ್ಲಿನ ರಾಜಕೀಯ ಹಾಗೂ ಆರ್ಥಿಕ ವ್ಯವಸ್ಥೆಯ ಮೇಲೆ ಇದು ಅಂತಹ ಪ್ರಬಲ ಪಾತ್ರ ವಹಿಸಿದೆ ಏಕೆ?ಈ ವೈರುಧ್ಯದ ಬಗ್ಗೆ ಈ ಹಿಂದೆ ನಾನು ಆಗಾಗ್ಗೆ ಆಲೋಚಿಸ್ದ್ದಿದಿದೆ. ಆದರೆ ಸದಾ ಸುದ್ದಿಯಲ್ಲಿರಲು ಬಯಸುವ ಜನರಲ್ ವಿ. ಕೆ. ಸಿಂಗ್ ಅವರ ಪ್ರವೃತ್ತಿಯಿಂದಾಗಿ ಕಡೆಗೂ ಈ ಬಗ್ಗೆ  ನಾನು ಗಂಭೀರವಾಗಿ ಚಿಂತಿಸುವಂತೆ ಮಾಡಿದೆ. ಪಾಕಿಸ್ತಾನದಂತಲ್ಲದೆ, ಭಾರತದ ಮಿಲಿಟರಿ ಜನರಲ್‌ಗಳು ಸರ್ಕಾರಗಳ ಆಡಳಿತ ಹಾಗೂ  ರಾಜಕೀಯ ಬದುಕಿನಿಂದ ಸಾಮಾನ್ಯವಾಗಿ ದೂರವೇ ಇರಲು ಏಕೆ ಬಯಸುತ್ತಾರೆಂಬುದಕ್ಕೆ ಆರು ಕಾರಣಗಳಿವೆ.ಮೊದಲನೆಯದು, ಭಾರತದಲ್ಲಿ ಬಹಳ ಹಳೆಯ ಹಾಗೂ ಬಹಳ ಬಲವಾದ ರಾಜಕೀಯ ಪಕ್ಷಗಳ ಪರಂಪರೆ ಇದೆ. ಕಾಂಗ್ರೆಸ್ ಹುಟ್ಟಿದ್ದು 1885ರಲ್ಲಿ. 1917ರಷ್ಟರೊಳಗೆ ಅದು ನಗರದ ಮಧ್ಯಮ ವರ್ಗದ ಬಹಳಷ್ಟು ಜನರನ್ನು ಆಕರ್ಷಿಸಿತ್ತು. ಗಾಂಧಿಯವರ ನಾಯಕತ್ವದಡಿ ಅದು ಹಳ್ಳಿಹಳ್ಳಿಗಳನ್ನೂ ತಲುಪಿತು.

 

ಕಾಂಗ್ರೆಸ್‌ನ ಸಾಮಾಜಿಕ ವಿವೇಕದ ಗಹನತೆ, ಮುಸ್ಲಿಂ ಲೀಗ್‌ನ ಗಣ್ಯಪ್ರಜ್ಞೆಯ ಜೊತೆಗೆ ತೀವ್ರ ವೈರುಧ್ಯ ಹೊಂದಿತ್ತು. ಮುಸ್ಲಿಂ ಲೀಗ್ ಸ್ಥಾಪನೆಯಾದದ್ದು 1909ರಲ್ಲಿ. ಅನೇಕ ದಶಕಗಳ ನಂತರ, ಪಾಕಿಸ್ತಾನ ಸೃಷ್ಟಿಗೆ ಕಾರಣವಾದ ಮುಖ್ಯ ಸಂಘಟನಾ ಸಾಧನವಾಯಿತು ಅದು. ಬ್ರಿಟಿಷ್ ಇಂಡಿಯಾದ ಕೆಲವು ರಾಜ್ಯಗಳಲ್ಲಿ ಮುಸ್ಲಿಂ ಲೀಗ್ ತನ್ನ ಅಸ್ತಿತ್ವ ಹೊಂದಿತ್ತು.

 

ಅಲ್ಲೆಲ್ಲಾ ಅದು ಇದ್ದದ್ದು ದೊಡ್ಡ ಭೂಮಾಲೀಕರ ಪ್ರಾಬಲ್ಯದಡಿ. ಅಷ್ಟೇ ಅಲ್ಲ, ಕಾಂಗ್ರೆಸ್ ಮಾತ್ರವಲ್ಲದೆ ಹಿಂದೂ ಮಹಾಸಭಾ, ಕಮ್ಯುನಿಸ್ಟರು, ಅಕಾಲಿಗಳು ಹಾಗೂ ದ್ರಾವಿಡ ಕಳಗಂನಂತಹ ಇತರ ಮುಖ್ಯ ಪಕ್ಷಗಳೂ ಭಾರತದಲ್ಲಿದ್ದವು. ಆದರೆ ಪಾಕಿಸ್ತಾನದಲ್ಲಿ, ಮುಸ್ಲಿಂ ಲೀಗ್‌ನ ಸಾಂಸ್ಥಿಕ ಲಘುತ್ವ ಹಾಗೂ ಇತರ ಸಮಬಲದ ಪಕ್ಷಗಳ ಕೊರತೆ ಸೃಷ್ಟಿಸಿದ ಶೂನ್ಯವನ್ನು ತುಂಬಲು ಪಾಕಿಸ್ತಾನದ ಸೇನೆ ಸಿದ್ಧವಾಗಿಯೇ ಇತ್ತು.ಎರಡನೆಯದಾಗಿ, ಎರಡನೇ ವಿಶ್ವ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷ್ ಭಾರತೀಯ ಸೇನೆಗೆ ಪಂಜಾಬಿ ಮುಸ್ಲಿಮರ ವ್ಯಾಪಕ ನೇಮಕಗಳಾಗಿತ್ತು. ಇದು ಅಸ್ತಿತ್ವದಲ್ಲಿದ್ದ ಕದನಕಲೆಯ ಪರಂಪರೆಯನ್ನು ಬಲಗೊಳಿಸಿತು. ಪಂಜಾಬ್, ಪಾಕಿಸ್ತಾನದ ಬಹು ಮುಖ್ಯ ಪ್ರಾಂತ್ಯವಾದಾಗ, ಅದರ ಸೈನಿಕರು ಭಾರತದಲ್ಲಿನ ಸೈನಿಕರಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ತಮ್ಮ ಪ್ರಾಬಲ್ಯ ಸಾಧಿಸುವಂತಹವರಾಗಿದ್ದರು.ಮೂರನೆಯದಾಗಿ, ಪಾಕಿಸ್ತಾನಿ ಗಣ್ಯವರ್ಗಕ್ಕೆ ಭಾರತ ಕುರಿತ ಚಿಂತೆ ಒಂದು ಗೀಳಾಗಿದೆ. ಪಾಕಿಸ್ತಾನದ ಬಗ್ಗೆ ಭಾರತೀಯ ಗಣ್ಯವರ್ಗದಲ್ಲಿ ಈ ಬಗೆಯ ಗೀಳಿಲ್ಲ. (ಬದಲಾಗಿ ಚೀನಾದಿಂದ ವಾಸ್ತವವೋ, ಕಲ್ಪಿತವೋ ಆದ ಬೆದರಿಕೆಯ ಬಗೆಗೇ ಭಾರತಕ್ಕೆ ಹೆಚ್ಚು ಕಾಳಜಿ). ಪಾಕಿಸ್ತಾನ ಅದು ಹುಟ್ಟಿದಾಗಲಿಂದಲೂ ತಾನು `ಭಾರತವಲ್ಲ~ ಎಂಬುದಕ್ಕಿಂತ `ಭಾರತ ವಿರೋಧಿ~ ಎಂಬಂತಹ ಭಾವವನ್ನೇ ಹೊಂದಿದೆ.ಈ ವಿವರಣೆಗಳು ಕಾಶ್ಮೀರದ ಕಣಿವೆಯನ್ನು ಪಡೆದುಕೊಳ್ಳುವಲ್ಲಿನ ವೈಫಲ್ಯ ಹಾಗೂ ಬಾಂಗ್ಲಾದೇಶವನ್ನು ಕಳೆದುಕೊಂಡ ಪರಿಣಾಮವಾಗಿ ಹೆಚ್ಚು ಗಟ್ಟಿಯಾಗಿವೆ. ಈ ಸೋಲುಗಳು ಭಾರತದ ಜೊತೆಗಿನ ಸೆಣಸಾಟಕ್ಕೆ ಗಣ್ಯ ಪಾಕಿಸ್ತಾನೀಯರನ್ನು ಮತ್ತಷ್ಟು ದೃಢಮಾಡಿದೆ. ಈ ಪ್ರಯತ್ನದಲ್ಲಿ ಸಹಜವಾಗಿಯೇ ಮಿಲಿಟರಿ ಪ್ರಮುಖ ಪಾತ್ರ ವಹಿಸಬೇಕಾಗಿದೆ.ನಾಲ್ಕನೆಯದಾಗಿ, ಶೀತಲ ಸಮರದಲ್ಲಿ ಮುಂಚೂಣಿ ರಾಷ್ಟ್ರವಾಗಿದ್ದ ದುರದೃಷ್ಟವೂ ಪಾಕಿಸ್ತಾನದ್ದಾಗಿದೆ. ಅಮೆರಿಕ 1954ರಲ್ಲಿ ಶಸ್ತ್ರಾಸ್ತ್ರ ಒಪ್ಪಂದ ಮಾಡಿಕೊಂಡು, `ಸೆಂಟೊ~ದಂತಹ  ಪಾಶ್ಚಿಮಾತ್ಯ ಪರ ಸಂಘಟನೆಯನ್ನು ಪಾಕಿಸ್ತಾನ ಸೇರುವಂತೆ ಮಾಡುವ ಮೂಲಕ ಅದನ್ನು ಗ್ರಾಹಕ ರಾಷ್ಟ್ರವಾಗಿ ಗುರುತಿಸಿತು.1979ರಲ್ಲಿ  ಆಫ್ಘಾನಿಸ್ತಾನವನ್ನು ಸೋವಿಯೆತ್ ಆಕ್ರಮಿಸಿಕೊಂಡಿತು. ಇದರ ಪರಿಣಾಮವಾಗಿ ಪಾಕಿಸ್ತಾನ ಅಮೆರಿಕಕ್ಕೆ ಮತ್ತೂ ನಿಕಟವಾಯಿತು. ಸೇನೆಯ ಶಸ್ತ್ರಾಸ್ತ್ರ ಮತ್ತು ಸಲಕರಣೆಗಳು ರಾಷ್ಟ್ರದೊಳಗೆ ಸುರಿಮಳೆಯಾದಂತೆ, ಪಾಕಿಸ್ತಾನ ಸಮಾಜದಲ್ಲಿ ಸೇನೆಯ ಸ್ಥಿತಿ ಮತ್ತೂ ಬಲಾಢ್ಯಗೊಂಡಿತು. ಹಾಗೆಯೇ ಪಕ್ಷಗಳು ಹಾಗೂ ರಾಜಕಾರಣಿಗಳು ದುರ್ಬಲರಾದರು.ಐದನೆಯದಾಗಿ, ಸ್ವತಂತ್ರ ಭಾರತದ ರಾಜಕೀಯ ನಾಯಕತ್ವ - ಅದೂ ನಿರ್ದಿಷ್ಟವಾಗಿ ಜವಾಹರಲಾಲ್ ನೆಹರೂ ಹಾಗೂ ವಲ್ಲಭಭಾಯಿ ಪಟೇಲ್ ಅವರು - ವಸಾಹತುಶಾಹಿ ಕಾಲದಲ್ಲಿ ಅನುಭವಿಸಿದ್ದಕ್ಕಿಂತ ತಗ್ಗಿದ ಪ್ರಭಾವದ ಪಾತ್ರ ನಿರ್ವಹಣೆ ಇರುತ್ತದೆಂಬುದನ್ನು ಮಿಲಿಟರಿಗೆ ಸ್ಪಷ್ಟಪಡಿಸಿದ್ದರು.ಭಾರತವನ್ನು ಬ್ರಿಟಿಷರು ಆಳುತ್ತಿದ್ದಾಗ, ವೈಸ್‌ರಾಯ್ ನಂತರ ರಾಷ್ಟ್ರದ ಅತಿ ಮುಖ್ಯ ಅಧಿಕಾರಿ ಎಂದರೆ ಕಮ್ಯಾಂಡರ್ ಇನ್ ಚೀಫ್ (ಹೀಗಾಗಿಯೇ ತೀನ್‌ಮೂರ್ತಿ ಭವನ ನವದೆಹಲಿಯಲ್ಲಿ ಎರಡನೇ ವೈಭವಯುತ ಮನೆ ಆಗಿತ್ತು) ಆಗಿದ್ದರು. ರಾಷ್ಟ್ರಕ್ಕೆ ಸ್ವಾತಂತ್ರ್ಯ ಬಂದ ನಂತರ ಸೇನಾ ಮುಖ್ಯಸ್ಥರು ರಕ್ಷಣಾ ಸಚಿವರಿಗೆ ವರದಿ ಮಾಡಿಕೊಳ್ಳುವಂತೆ ಮಾಡಲಾಯಿತು. ರಕ್ಷಣಾ ಸಚಿವರು ಪ್ರಧಾನಿಗೆ ವರದಿ ಮಾಡಿಕೊಳ್ಳುವುದಲ್ಲದೆ ಚುನಾಯಿತ ಸಂಸತ್ತಿಗೂ ಉತ್ತರದಾಯಿತ್ವ ಹೊಂದುವುದು ಕಡ್ಡಾಯವಾಯಿತು.ಇದೇ ಸಂದರ್ಭದಲ್ಲೇ, ಪುನರ್ವಿಮರ್ಶಿತ ಶ್ರೇಣಿ ವ್ಯವಸ್ಥೆಯ ಪಟ್ಟಿಯಲ್ಲಿ, ಮಿಲಿಟರಿಗೆ ತನ್ನ ಸರಿಯಾದ ಸ್ಥಾನವನ್ನೂ ತೋರಿಸಲಾಯಿತು. ಇಲ್ಲಿ, ರಾಷ್ಟ್ರಪತಿ, ಪ್ರಧಾನಿ, ಸಂಪುಟ ಸಚಿವರು, ರಾಜ್ಯಪಾಲರು, ಹೈಕೋರ್ಟ್‌ಗಳ ಮುಖ್ಯ ನ್ಯಾಯಾಧೀಶರು ಹಾಗೂ ಯೋಜನಾ ಆಯೋಗದ ಸದಸ್ಯರಿಗಿಂತಲೂ ಕೆಳಗೆ 25ನೇ ಸ್ಥಾನಕ್ಕೆ ಸೇನಾ ಮುಖ್ಯಸ್ಥರನ್ನು ಇಳಿಸಲಾಯಿತು.ಆರನೆಯದಾಗಿ, ಪಾಕಿಸ್ತಾನದಲ್ಲಿನ ಸೇನೆ - ಪ್ರತಿಭಾನ್ವಿತ ಹಾಗೂ ಮಹತ್ವಾಕಾಂಕ್ಷೆಯ ವ್ಯಕ್ತಿಗಳಿಗೆ ಮುಖ್ಯಮಾರ್ಗವಾಗಿಯೇ ಉಳಿದಿದೆ. ಆದರೆ ಭಾರತದಲ್ಲಿ, ಹೆಚ್ಚಿನ ಮುಕ್ತ ರಾಜಕೀಯ ವ್ಯವಸ್ಥೆ ಹಾಗೂ ಅದರ ಹೆಚ್ಚಿನ  ಕ್ರಿಯಾತ್ಮಕ ಆರ್ಥಿಕ ವ್ಯವಸ್ಥೆಯಿಂದಾಗಿ, ಮಹತ್ವಾಕಾಂಕ್ಷಿ ಯುವಜನರು ವಕೀಲ, ವೈದ್ಯ, ನಾಗರಿಕ ಸೇವಕ ಅಥವಾ ಉದ್ಯಮಿಯಾಗಬಹುದು.

 

ಕಾಲ ಸರಿದಂತೆ, ಈ ವೃತ್ತಿಗಳು ಸೇನೆಯಲ್ಲಿನ ಕೆರಿಯರ್‌ಗಿಂತ ಹೆಚ್ಚು ಆಕರ್ಷಕವಾಗಿ ಪರಿಣಮಿಸಿವೆ. ಇದರ ಪರಿಣಾಮವಾಗಿ ಸೇನೆಯಲ್ಲಿ ಅಧಿಕಾರಿಗಳ ಕೊರತೆ ಇದೆ. ಬದಲಿಗೆ ಪಾಕಿಸ್ತಾನದಲ್ಲಿ, ಇತ್ತೀಚಿನ ಹಾಗೂ ಅತ್ಯುತ್ತಮ ವಿಮಾನಗಳು, ಬಂದೂಕುಗಳು, ಹಡಗುಗಳು ಮಿಲಿಟರಿಯಲ್ಲಿವೆ; ಜೊತೆಗೆ ರಿಯಲ್ ಎಸ್ಟೇಟ್, ಕಚೇರಿಗಳು, ಹೋಟೆಲುಗಳು, ಷಾಪಿಂಗ್ ಸಮುಚ್ಚಯ ಇವೆಲ್ಲವನ್ನೂ ಸ್ವಾಧೀನಪಡಿಸಿಕೊಂಡು ರಾಷ್ಟ್ರದ ಮೇಲೆ ತಮ್ಮ ಆರ್ಥಿಕ ಹಿಡಿತವನ್ನು ವಿಸ್ತರಿಸುತ್ತಿರುವ ಸೇನೆಗೆ ಸೇರಿಕೊಳ್ಳುವುದು ಅಲ್ಲಿ ಈಗಲೂ ಹೆಚ್ಚು ಆಕರ್ಷಕವಾಗಿದೆ.ಇನ್ನೂ ಅನೇಕ ಕಾರಣಗಳಿರಬಹುದು. ಉದಾಹರಣೆಗೆ, ಭಾರತದಲ್ಲಿ ಅಧಿಕಾರ ಹಿಡಿಯಬೇಕೆಂದರೆ,ಒಂದೇ ಬಾರಿಗೆ ಇಪ್ಪತ್ತೆಂಟು ಚುನಾಯಿತ ರಾಜ್ಯ ಸರ್ಕಾರಗಳನ್ನು  ಸೇನೆ ಪದಚ್ಯುತಗೊಳಿಸಬೇಕಾಗುತ್ತದೆ. ಏನೇ ಆದರೂ, ಸೇನೆಯ ರಾಜಕೀಯೇತರ ಪಾತ್ರ ಹಾಗೂ ಸಮವಸ್ತ್ರಧಾರಿ ಪಡೆಗಿಂತ ನಾಗರಿಕ ಸರ್ಕಾರದ ಮುಂದುವರೆದ ಪಾರಮ್ಯ ಭಾರತ ಪ್ರಜಾತಂತ್ರದ ಅತ್ಯಂತ ದೊಡ್ಡ ಹಾಗೂ ಗಟ್ಟಿಯಾದಂತಹ ಒಂದು ಸಾಧನೆಯಾಗಿದೆ.

 

ಏಷ್ಯಾ, ಆಫ್ರಿಕಾ ಅಷ್ಟೇಕೆ, ಲ್ಯಾಟಿನ್ ಅಮೆರಿಕಾದ ಅನೇಕ ರಾಷ್ಟ್ರಗಳು ಅನುಭವಿಸಿದ ಸುದೀರ್ಘ ಅವಧಿಯ ಸರ್ವಾಧಿಕಾರ ಆಡಳಿತಗಳಿಗೆ ಹೋಲಿಸಿದಲ್ಲಿ, ರಾಷ್ಟ್ರಕ್ಕೆ ಸ್ವಾತಂತ್ರ್ಯ ಬಂದ ನಂತರ, ಎಂದೂ ಸೇನೆ ಒಂದು ಚೂರೂ ರಾಜಕೀಯ ವಲಯಕ್ಕೆ ಅತಿಕ್ರಮಿಸಿಲ್ಲ. ಜನರಲ್ ವಿ.ಕೆ. ಸಿಂಗ್, ಎ.ಕೆ. ಆಂಟನಿ ಹಾಗೂ ಭ್ರಷ್ಟಾಚಾರಗಳಿಗೆ ಸಂಬಂಧಿಸಿದ ವಿವಾದಗಳು ನಿಜವಿರಲಿ, ಅಥವಾ ಆರೋಪಿತವಿರಲಿ, ನಾವೆಲ್ಲಾ ಸಾಮೂಹಿಕವಾಗಿ ಹೆಮ್ಮೆ ಪಡಬಹುದಾದ ಸಾಧನೆ ಇದು.

 

  (ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.