ಜನರ ನಡುವಿನ `ಸಾರ್ವಜನಿಕ ಬುದ್ಧಿಜೀವಿ'

7

ಜನರ ನಡುವಿನ `ಸಾರ್ವಜನಿಕ ಬುದ್ಧಿಜೀವಿ'

Published:
Updated:

 


ಕಾದಂಬರಿಕಾರ, ಗದ್ಯ ಬರಹಗಾರ ಹಾಗೂ  ವಾಗ್ವಾದಗಳನ್ನು ಮಾತು ಬರಹಗಳಲ್ಲಿ ಹುಟ್ಟುಹಾಕಬಲ್ಲಂತಹ ಯು.ಆರ್. ಅನಂತಮೂರ್ತಿಯವರು, ಕಳೆದ ವಾರ ಎಂಬತ್ತನೇ ಹುಟ್ಟುಹಬ್ಬ ಆಚರಿಸಿಕೊಂಡರು. ಅವರ ಬೆಂಗಳೂರಿನ ಮನೆಯ ಹೆಸರು `ಸುರಗಿ'. ಬಾಡಿ, ಒಣಗಿಹೋದರೂ ತನ್ನ ಸುವಾಸನೆಯನ್ನು ಕಾಯ್ದುಕೊಳ್ಳುವ ಹೂವಿನ ಹೆಸರು ಅದು.ಕೆಲವರಿಗೆ ಆ ಹೆಸರು ಆತ್ಮ ಪ್ರಶಂಸೆಯದೆನಿಸಬಹುದು; ಆದರೆ ಅನಂತಮೂರ್ತಿಯವರು ಹೆಚ್ಚು ನಿರ್ಭಿಡೆಯವರು. ಅವರ ಕಾದಂಬರಿಗಳಾದ `ಸಂಸ್ಕಾರ' ಹಾಗೂ `ಭಾರತೀಪುರ', ಆಧುನಿಕ ಭಾರತೀಯ ಸಾಹಿತ್ಯ ಕ್ಷೇತ್ರವನ್ನು ಪುನರ್ವ್ಯಾಖ್ಯಾನಿಸಿದುವು. ಕನ್ನಡದಲ್ಲಿ ಅವರು ಬರೆಯುವ ಪತ್ರಿಕಾ ಲೇಖನಗಳಿಗೆ ವ್ಯಾಪಕ ಓದುಗ ಬಳಗವಿದೆ. ಸಾಗರ ಹಾಗೂ ಮೈಸೂರುಗಳಲ್ಲಿ ಇಂಗ್ಲಿಷ್ ಕಲಿಸಿದಂತಹ ಅಧ್ಯಾಪಕರಾಗಿ ದಂತಕತೆಯಾಗಿರುವ ಅವರು ಲೇಖಕರು ಹಾಗೂ ವಿದ್ವಾಂಸರ ಅನೇಕ ಪೀಳಿಗೆಗಳನ್ನೇ ಬೆಳೆಸಿದ್ದಾರೆ.

 

ಅನಂತಮೂರ್ತಿಯವರ, ಈ ಹಿಂದೆಯೇ ಹೇಳಿದ ಅವರ ಮನೆ `ಸುರಗಿ'ಯಲ್ಲಿ ನಡೆದ ಅವರ 80ನೇ ಹುಟ್ಟುಹಬ್ಬದ ಸಂತೋಷಕೂಟಕ್ಕೆ ಹಾಜರಾಗುವ ಗೌರವ ನನಗೊದಗಿತ್ತು. ಹುಟ್ಟುಹಬ್ಬದ ಸಂಭ್ರಮ ಹಾಗೂ ಗೌರವ ಸಲ್ಲಿಸುವುದಕ್ಕಾಗಿ ಅಲ್ಲಿ ಸೇರಿದ್ದ ಕನ್ನಡ ದೇಶದ ವಿಮರ್ಶಕರು, ಅಧ್ಯಾಪಕರು, ಕವಿಗಳು, ಕಾದಂಬರಿಕಾರರು, ನಾಟಕಕಾರರು, ಚಿತ್ರನಿರ್ದೇಶಕರು, ಛಾಯಾಚಿತ್ರಗ್ರಾಹಕರು ಹಾಗೂ ಗಾಯಕರ ನಡುವೆ ಬಹುಶಃ ನಾನೊಬ್ಬನೇ ಇಂಗ್ಲಿಷ್ ಭಾಷಾ ಲೇಖಕನಾಗಿದ್ದೆ. ಆಕರ್ಷಕ ವ್ಯಕ್ತಿತ್ವ ಹಾಗೂ ಉದಾರಮನದ ಅನಂತಮೂರ್ತಿಯವರಿಗೆ ಅವರ ಬೌದ್ಧಿಕತೆ ಹಾಗೂ ಬರಹಗಳಿಂದಾಗಿ, ಕೆಲವು ಶತ್ರುಗಳಿಗಿಂತ ಹೆಚ್ಚಾಗಿ ಸ್ನೇಹಿತರ ಲೋಕದ ವ್ಯಾಪ್ತಿಯೇ ದೊಡ್ಡದು. ಒಂದು ಗಳಿಗೆ ವಾತ್ಸಲ್ಯ, ಮೃದುತ್ವ ತೋರುವ ಅವರು, ತಮಗೆ ಒಪ್ಪಿತವಾಗದ ಸಾಹಿತ್ಯ ಮೀಮಾಂಸೆ  ಅಥವಾ ವಿಶೇಷವಾಗಿ ರಾಜಕೀಯ ದೃಷ್ಟಿಕೋನಗಳು ಎದುರಾದಲ್ಲಿ ತೀವ್ರ ರೀತಿಯಲ್ಲಿ ಕಟುವಾಗಲೂಬಲ್ಲರು.

 

ನಾನು ಯು. ಆರ್. ಅನಂತಮೂರ್ತಿಯವರನ್ನು ಮೊದಲು ಭೇಟಿಯಾದದ್ದು 1989ರಲ್ಲಿ ಜವಾಹರಲಾಲ್ ನೆಹರೂ ಅವರ ಜನ್ಮಶತಮಾನೋತ್ಸವ ಸಂದರ್ಭಕ್ಕಾಗಿ ದೆಹಲಿಯಲ್ಲಿ ನಡೆದ ಸಮ್ಮೇಳನವೊಂದರಲ್ಲಿ. ನಮ್ಮಿಬ್ಬರಿಗೂ ಪರಸ್ಪರ ಸ್ನೇಹಿತರಾಗಿದ್ದ ಟಿ.ಜಿ. ವೈದ್ಯನಾಥನ್ ಅವರು, ಅನಂತಮೂರ್ತಿಯವರ ಬಳಿ ಹೋಗಿ ನನ್ನನ್ನು ನಾನು ಅವರಿಗೆ ಪರಿಚಯಿಸಿಕೊಳ್ಳಬೇಕೆಂದು ನನಗೆ ಹೇಳಿದರು. ಆ ಹಂತದಲ್ಲಿ ನಾನು ಒಂದಾದರೂ ಪುಸ್ತಕ ಪ್ರಕಟಿಸಿರಲಿಲ್ಲ.ಆದರೆ, ಅಷ್ಟರಲ್ಲಾಗಲೇ ಅನಂತಮೂರ್ತಿಯವರದ್ದು ಸಾಹಿತ್ಯ ಲೋಕದಲ್ಲಿ ಮೇರು ವ್ಯಕ್ತಿತ್ವವಾಗಿತ್ತು. ನಮ್ಮ ಸ್ಥಾನಮಾನದ ಈ ಅಸಮತೆಯಿಂದಾಗಿ ನನಗೆ ಹಿಂಜರಿಕೆ ಇತ್ತು. ಆದರೆ ಅಂದಿನ ದಿನಗಳಲ್ಲಿ ನಾನು ಟಿಜಿವಿ ಮಾತುಗಳು (ಹಾಗೂ ಆಶಯವನ್ನು) ವಿಧೇಯತೆಯಿಂದ ಅನುಸರಿಸುತ್ತಿದ್ದೆ. ನಮ್ಮನ್ನು ಬೆಸೆದ ವ್ಯಕ್ತಿಯ ಕುರಿತಾಗಿ ಹೇಳಿದಾಗ, ಅನಂತಮೂರ್ತಿ ಹೇಳಿದ್ದು `ವೈದ್ಯ' ಎಂದು. ಮತ್ತೆ ಅವರು ನನ್ನ ಕೈಯನ್ನು ತಮ್ಮ ಕೈಯೊಳಗೆ ಹಿಡಿದು ಒತ್ತುತ್ತಾ `ವೈದ್ಯ' ಎಂದರು. ಆ ಧ್ವನಿ ಹಾಗೂ ಭಾವಗಳು ಹೇಗಿದ್ದವೆಂದರೆ, `ಟಿಜಿವಿ'ಯವರ ಯಾರೇ ಸ್ನೇಹಿತ ತಮ್ಮ ಸ್ನೇಹಿತನೂ ಹೌದೆಂಬುದನ್ನು ಸ್ಪಷ್ಟ ಪಡಿಸುವಂತಿತ್ತು.

 

 ಆ ಆರಂಭದ ಭೇಟಿ, ಈ ವ್ಯಕ್ತಿಯ ಸಹಜತೆ ಹಾಗೂ ಬೆಚ್ಚಗಿನ ಸೌಹಾರ್ದ, ಜೊತೆಗೇ ಹೆಸರುಗಳ ಕುರಿತಾಗಿ ಈ ಲೇಖಕರ ರೀತಿನೀತಿಯ ದರ್ಶನವನ್ನೂ ಮಾಡಿಸಿತು. ತಮ್ಮ ಅನುಯಾಯಿಗಳು ಹಾಗೂ ಪ್ರತಿಸ್ಪರ್ಧಿಗಳಿಗೆಲ್ಲಾ ಟಿಜಿವಿ ಎಂದೇ ಹೆಸರಾಗಿದ್ದ ವ್ಯಕ್ತಿ, ಅನಂತಮೂರ್ತಿಯವರ ಪಾಲಿಗೆ `ವೈದ್ಯ'.  ನನ್ನನ್ನು ಎಲ್ಲರೂ ರಾಮ್ ಎಂದು ಕರೆಯುತ್ತಾರೆ. ಆದರೆ ಅನಂತಮೂರ್ತಿಯವರಿಗೆ ಮಾತ್ರ ನಾನು ಯಾವಾಗಲೂ `ಗುಹಾ'. ಸ್ಥಳೀಯ ಸಂದರ್ಭಕ್ಕೆ ಅನುಗುಣವಾಗಿ ಸ್ಥಳ ನಾಮಗಳನ್ನು ಇಡುವ ಸಮರ್ಪಕ ಕಾಳಜಿಯ ಜೊತೆಗೇ,  ಗುಂಪಿನಿಂದ ಬೇರೆಯಾಗುವ ಈ ಅಪೇಕ್ಷೆಯೇ `ಬ್ಯಾಂಗಲೂರ್' ಅನ್ನು `ಬೆಂಗಳೂರು' ಎಂದು ಹೆಸರಿಸುವ  (ಯಶಸ್ವಿಯಾದ) ಜನಾಂದೋಲನದ ನೇತೃತ್ವ ವಹಿಸುವುದಕ್ಕೆ ಅನಂತಮೂರ್ತಿಯವರಿಗೆ ಕಾರಣವಾಗಿರಬೇಕು.

 

ಎಲ್ಲಿ ಮತ್ತು ಹೇಗೆ ಮೊದಲ ಬಾರಿಗೆ ನಾನವರನ್ನು ಭೇಟಿಯಾದೆ ಎಂಬುದನ್ನು ಅನೇಕ ವರ್ಷಗಳ ನಂತರ, ಅನಂತಮೂರ್ತಿಯವರಿಗೆ ನಾನು ನೆನಪಿಸಿದಾಗ, ತಮ್ಮ ಯೌವನದ ದಿನಗಳಲ್ಲಿ ನೆಹರೂ ಅವರನ್ನು ತಾವು ತೀವ್ರವಾಗಿ ದ್ವೇಷಿಸುತ್ತಿದ್ದುದಾಗಿ ಹೇಳಿದರು. ಅವರು ಉಗ್ರ  ಸಮಾಜವಾದಿ ನಾಯಕ ರಾಮ ಮನೋಹರ ಲೋಹಿಯಾ ಅವರ ಪಟ್ಟ `ಶಿಷ್ಯ'ರಾಗಿದ್ದರು. ಮೇಲ್ಜಾತಿಯ, ಆಂಗ್ಲೀಕರಣಗೊಂಡ, ನವ ವಸಾಹತುಶಾಹಿ ವರ್ಗದವರೆಂದು ಭಾರತದ ಮೊದಲ ಪ್ರಧಾನಿ ಕುರಿತಾಗಿ ಭಾವಿಸುತ್ತಿದ್ದ ಲೋಹಿಯಾ, ಭಾರತೀಯ ಸಂಸ್ಕೃತಿ ಅಥವಾ ಭಾರತೀಯರನ್ನು ಪ್ರತಿನಿಧಿಸಲು ನೆಹರೂ ಸಂಪೂರ್ಣ ಅನರ್ಹ ಎಂದೇ ಭಾವಿಸುತ್ತಿದ್ದರು.1967ರಲ್ಲಿ ಲೋಹಿಯಾ ತೀರಿಕೊಂಡರು. ಇಪ್ಪತ್ತು ವರ್ಷಗಳ ನಂತರ, ಅಯೋಧ್ಯಾ ಆಂದೋಲನ ಹಾಗೂ ಅದರ ಅಂಗವಾಗಿ ನಡೆದ ಗಲಭೆಗಳ ನಂತರ, ಧಾರ್ಮಿಕ ಸೌಹಾರ್ದವನ್ನು ಬೆಳೆಸುವಂತಹ ಬಹು ಮುಖ್ಯ ವಿಚಾರದಲ್ಲಿ, ಸ್ವಾತಂತ್ರ್ಯ ಚಳವಳಿಯ ಇತರ ನಾಯಕರಿಗಿಂತ, ಮಹಾತ್ಮರ ಶಿಷ್ಯರಾಗಿ ನೆಹರೂ ಅವರೇ ಹೆಚ್ಚು ವಿಶ್ವಾಸಾರ್ಹ ಎಂಬುದನ್ನು ಲೋಹಿಯಾರ ಈ ಶಿಷ್ಯ ಅರ್ಥ ಮಾಡಿಕೊಂಡರು. ಹೀಗಾಗಿ, ಇಂತಹದೊಂದು ಸಂಕ್ರಮಣ ಕಾಲಘಟ್ಟದಲ್ಲಿ ನಾನು ಅನಂತಮೂರ್ತಿಯವರನ್ನು ಭೇಟಿಯಾಗಿದ್ದೆ. 1969 ಅಥವಾ 1979ರಲ್ಲಿ ನೆಹರೂ ಸ್ಮರಣಾರ್ಥ ಸಮ್ಮೇಳನಗಳಲ್ಲಿ ಅವರು ಪಾಲ್ಗೊಂಡಿಲ್ಲದೆ ಇದ್ದಿರಬಹುದಿತ್ತು. ಆದರೆ 1989ರ ವೇಳೆಗೆ ಅದರಲ್ಲಿ ಪಾಲ್ಗೊಳ್ಳುವುದರಲ್ಲಿ ಅವರಿಗೆ ಒಂದಿಷ್ಟು ಅರ್ಥ ಕಂಡಿತ್ತು.

 

ಹೊಸ ಸಾಕ್ಷ್ಯಗಳ ದೃಷ್ಟಿಯಿಂದ ತಮ್ಮ ನಂಬಿಕೆಗಳು ಹಾಗೂ ಪೂರ್ವಗ್ರಹಗಳನ್ನು ಪುನರ್ವಿಮರ್ಶೆ ಮಾಡಿಕೊಳ್ಳುವ ಇಚ್ಛೆ ಈ ವ್ಯಕ್ತಿಯ ವೈಶಿಷ್ಟ್ಯ. ಪಾಶ್ಚಿಮಾತ್ಯ ರೀತಿಯಲ್ಲಿ, ಬಿಗುಮಾನದಲ್ಲಿ ಹಾಗೂ ಔಪಚಾರಿಕವಾಗಿ ಕೈಗಳನ್ನು ಹೊರಚಾಚುವುದು ಎನ್ನುವುದಕ್ಕಿಂತ, ಅಕ್ಕಪಕ್ಕ ನಿಂತು ಅವರ ಹಸ್ತದೊಳಗೆ ನನ್ನ ಹಸ್ತ ಸೇರಿದಂತೆ, ಭಾರತೀಯ ಶೈಲಿಯ ಆ ಆತ್ಮೀಯಭಾವದ ಮೊದಲ ಕೈಕುಲುವಿಕೆಯಲ್ಲೇ, ಕೊಲ್ಕೊತ್ತ ಹಾಗೂ ದೆಹಲಿಗಳಲ್ಲಿ ನನಗೆ ಗೊತ್ತಿರುವಂತಹ ಬೌದ್ಧಿಕ ಗುರುಗಳಿಗಿಂತ ಅನಂತಮೂರ್ತಿ ಅವರು ವಿಭಿನ್ನರು ಎಂಬುದನ್ನು ನಾನು ಗ್ರಹಿಸಿದ್ದೆ. ಜ್ಞಾನಪೀಠ, ಪದ್ಮಭೂಷಣ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನ, ಹೀಗೆ ಅನೇಕ ಪ್ರಶಸ್ತಿಗಳು ಹಾಗೂ ಮನ್ನಣೆಗಳಿಗೆ ಅವರು ಪಾತ್ರರಾಗಿದ್ದರೂ, ಅವರೆಂದೂ ನಿಮ್ಮ ಜೊತೆ , ನಿಮ್ಮನ್ನು ಕೆಳಮಟ್ಟದಲ್ಲಿರಿಸಿ ಮಾತನಾಡುವುದಿಲ್ಲ;  ತಾವು ಮಾತನಾಡಿದಷ್ಟೇ ಆರಾಮಾಗಿ ನೀವು ಮಾತನಾಡುವುದನ್ನೂ ಕೇಳಿಸಿಕೊಳ್ಳುತ್ತಾರೆ; ತಮಗಿಂತ ಕಿರಿಯರಾದವರಿಂದ ವಾಗ್ವಾದ ಹಾಗೂ ಪ್ರತಿರೋಧವವನ್ನು ಅವರು ಸ್ವಾಗತಿಸುತ್ತಾರೆ.

 

1994ರಲ್ಲಿ ನಾನು ಬೆಂಗಳೂರಿಗೆ ಸ್ಥಳಾಂತರಗೊಂಡೆ. ಇಲ್ಲಿ ನಾನು ಡಿ. ಆರ್. ನಾಗರಾಜ್‌ರಂತಹ ಉತ್ಕೃಷ್ಟ ವಿಮರ್ಶಕನನ್ನು ಭೇಟಿಯಾಗಿ ಸ್ನೇಹ ಸಂಪಾದಿಸಿದೆ. ಡಿ. ಆರ್. ನಾಗರಾಜ್ ತಮ್ಮ ಗುರುವಿನ ಬಗ್ಗೆ ಒಂದು ಕಥೆ ಹೇಳಿದ್ದರು. ಅನಂತಮೂರ್ತಿಯವರಿಂದ ಸುಮಾರು ಹತ್ತು ವರ್ಷಗಳ ಕಾಲ ತೀವ್ರ ಕಲಿಕೆಯ ನಂತರ, ನಾಗರಾಜ್‌ಗೆ ಅನಂತಮೂರ್ತಿಯವರು ಹೀಗೆ ಹೇಳಿದ್ದರು: `ನನಗೆ ಗೊತ್ತಿರುವುದನ್ನೆಲ್ಲಾ ನಿನಗೆ ಕಲಿಸಿದ್ದೇನೆ. ಈಗ ಅಶೀಶ್ ನಂದಿಯಿಂದ ಕಲಿತುಕೊಳ್ಳುವುದಕ್ಕಾಗಿ ನಿನ್ನನ್ನು ನಾನು ದೆಹಲಿಗೆ ಕಳಿಸಬೇಕು'. ಹೀಗಾಗಿ ತಮ್ಮ ಶಿಷ್ಯನಿಗೆ,  ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್‌ನಲ್ಲಿ ಫೆಲೊಷಿಪ್ ಸಿಗುವುದಕ್ಕಾಗಿ ಅನಂತಮೂರ್ತಿ ಏರ್ಪಾಡುಮಾಡಿದರು. ಅಲ್ಲಿ ಡಿ. ಆರ್. ನಾಗರಾಜ್, ತಮ್ಮ ಕೆಲವು ಸೃಜನಾತ್ಮಕ ಹಾಗೂ ಹೆಚ್ಚು ಪರಿಪೂರ್ಣ ವರ್ಷಗಳನ್ನು ಕಳೆದರು.

 

 ನಾನು ಕೂಡ ಬೆಂಗಳೂರಿಗೆ ದೆಹಲಿಯಿಂದಲೇ ಬಂದಿದ್ದು; ಅಶೀಶ್ ನಂದಿ ನನಗೆ ಗೊತ್ತಿದ್ದವರೆ. ಅವರ ಬರವಣಿಗೆಯನ್ನು ನಾನು ಮೆಚ್ಚಿದರೂ, `ನನಗೆ ಗೊತ್ತಿರುವುದನ್ನೆಲ್ಲಾ ನಿನಗೆ ಕಲಿಸಿದ್ದೇನೆ. ಈಗ ಅನಂತಮೂರ್ತಿಯಿಂದ ಕಲಿತುಕೊಳ್ಳುವುದಕ್ಕಾಗಿ ನಾನು ನಿನ್ನನ್ನು ಬೆಂಗಳೂರಿಗೆ ಕಳಿಸಬೇಕು' ಎಂದು ಅವರ ವಿದ್ಯಾರ್ಥಿಯೊಬ್ಬರಿಗೆ ಅಶೀಶ್ ನಂದಿ ಹೇಳುವುದು ಖಂಡಿತ ಸಾಧ್ಯವಿಲ್ಲ ಎಂದು ನನಗೆ ಹೊಳೆಯಿತು. ನ್ಯಾಯವಾಗಿ ಹೇಳಬೇಕೆಂದರೆ, ತಮ್ಮ ವಿದ್ಯಾರ್ಥಿಗಳ ಬಗ್ಗೆ ಅದೇ ಯಜಮಾನಿಕೆಯ ಧೋರಣೆ ಹಾಗೂ ತಮ್ಮ ವಿಚಾರಗಳು ದೋಷಾತೀತವಾದವು ಎಂಬಂಥ ಅದೇ ಭಾವ ಹೊಂದಿದ ನಮ್ಮ ಅಕಾಡೆಮಿಕ್ ದಾದಾಗಳ  ಗುಂಪಿಗೆ ನಂದಿ ಅವರೂ ಹೊರತಾದವರಲ್ಲ.

 

1998ರಲ್ಲಿ ಇನ್ನೂ ನಲವತ್ತರಾಚೆಗಿನ ಚಿಕ್ಕವಯಸ್ಸಿನಲ್ಲೇ ನಾಗರಾಜ್ ತೀರಿಕೊಂಡಾಗ, ಅನಂತಮೂರ್ತಿಯವರು ಅಪಾರ ದುಃಖಿತರಾಗಿದ್ದರು. `ಆತ ನಗೆ ಗುರುವೂ ಆಗಿದ್ದ. ನನ್ನ ಶಿಷ್ಯನೂ ಆಗಿದ್ದ' ಎಂದಿದ್ದರು ಅವರು. ದಲಿತ ಸಾಹಿತ್ಯ ಹಾಗೂ ಹೋರಾಟಗಳಲ್ಲಿನ ಆಸಕ್ತಿಗೆ ನಾಗರಾಜ್, ದೇವನೂರ ಮಹಾದೇವ ಹಾಗೂ ಸಿದ್ದಲಿಂಗಯ್ಯನಂತಹ ಯುವ ಬರಹಗಾರರು ಕಾರಣ ಎಂದಿದ್ದರು.

 

ಜೆಎನ್‌ಯು ನಲ್ಲಿ ನಡೆದ ನಮ್ಮ ಮೊದಲ ಭೇಟಿಯ ನಂತರ,  `ಸುರಗಿ'ಯ ಮಾಲೀಕನನ್ನು ಸುಮಾರು ಇಪ್ಪತ್ತು ಸಂದರ್ಭಗಳಲ್ಲಿ ಬಹುತೇಕ ಬೆಂಗಳೂರಿನಲ್ಲಿ ಹಾಗೂ ಮಣಿಪಾಲ, ಮಾಸ್ಕೊ ಹಾಗೂ ಹೆಗ್ಗೋಡಿನಂಥ ಪುಟ್ಟ ಹಳ್ಳಿಯಲ್ಲೂ ನಾನು ಭೇಟಿಯಾಗಿದ್ದೇನೆ. ಹೆಗ್ಗೋಡಿನಲ್ಲಿ ಅವರ ದಿವಂಗತ ಸ್ನೇಹಿತ ಕೆ ವಿ ಸುಬ್ಬಣ್ಣ ಹುಟ್ಟುಹಾಕಿದ ವಾರ್ಷಿಕ ಸಂಸ್ಕೃತಿ ಶಿಬಿರವನ್ನು ಈಗ  ಸುಬ್ಬಣ್ಣ ಅವರ ಪುತ್ರ ಅಕ್ಷರ ನಡೆಸಿಕೊಂಡು ಹೋಗುತ್ತಿದ್ದಾರೆ. ಅದಕ್ಕೀಗ ಅನಂತಮೂರ್ತಿಯವರದೇ ಅಧಿಪತ್ಯ ಹಾಗೂ ಅವರೇ ಪ್ರತಿಷ್ಠಾಪಿತ ( ತಪ್ಪೆಂದೆನಿಸಬಹುದಾದರೂ) ದೈವ. ಅವರ ಜೊತೆಗಿನ ಬಹಳಷ್ಟು ಮಾತುಕತೆಗಳಲ್ಲಿ ಭಾರತದ ರಾಜಕೀಯ ಹಾಗೂ ಸಾಮಾಜಿಕ ಬದುಕಿನ ಬಗ್ಗೆ ಒಂದಲ್ಲ ಒಂದು ಒಳನೋಟಗಳನ್ನು ನಾನು ಪಡೆದುಕೊಂಡಿದ್ದೇನೆ.ಉದಾಹರಣೆಗೆ, ಭಾರತೀಯ ಲೇಖಕ ಪಾಶ್ಚಿಮಾತ್ಯ ಲೇಖಕನಿಗಿಂತ ಹೆಚ್ಚು ಅದೃಷ್ಟಶಾಲಿ ಎಂಬುದನ್ನು ನಾನು ಕಲಿತಿದ್ದು ಅನಂತಮೂರ್ತಿಯವರಿಂದ. ಏಕೆಂದರೆ ಆತ 12 ಹಾಗೂ 21ನೇ ಶತಮಾನದಲ್ಲಿ ಏಕ ಕಾಲದಲ್ಲಿ ಬದುಕುತ್ತಾನೆ.  ಮತ್ತು ನಡುವಿನ ಎಲ್ಲ ಶತಮಾನಗಳಲ್ಲೂ ಬದುಕುತ್ತಾನೆ. ಜೊತೆಗೆ ಕೇಸರಿಯಂಥ ಚೆಂದದ ಬಣ್ಣವನ್ನು ಬಲಪಂಥೀಯ ಮತಾಂಧರಿಗೆ ನಾವೆಂದೂ ಬಿಟ್ಟುಕೊಡಬಾರದು ಎಂದು ಹೇಳಿದವರೂ ಅನಂತಮೂರ್ತಿಯವರೇ.

 

ಸುಮಾರು ಹತ್ತು ವರ್ಷಗಳ ಹಿಂದೆ ಮಣಿಪಾಲದಲ್ಲಿ ಸಂದರ್ಶಕ ಪ್ರಾಧ್ಯಾಪಕ ಹುದ್ದೆಗಾಗಿ ಅನಂತಮೂರ್ತಿಯವರು ಬೆಂಗಳೂರು ತೊರೆದರು. ಆದರೆ ಅವರು ಪದೇಪದೇ ಹಿಂದಿರುಗಿ ಬರುತ್ತಿದ್ದರು. ಈ ಪ್ರಸಿದ್ಧ ಲೇಖಕ, ಕರಾವಳಿಯಿಂದ ರಾಜಧಾನಿಗೆ  ಎಂದು ಹಿಂದಿರುಗಿ ಬರುತ್ತಾರೆಂಬುದು ನನಗೆ ಯಾವಾಗಲೂ ಗೊತ್ತಿರುತ್ತದೆ ಎಂದು ನನ್ನ ಪತ್ನಿ ಜೊತೆ ತಮಾಷೆ ಮಾಡುತ್ತಿರುತ್ತಿದ್ದೆ. ವೃತ್ತಪತ್ರಿಕೆಗಳು, ಅವರ ಯಾತ್ರೆಯ ದಿನ ನಿತ್ಯದ ಪ್ರಗತಿಯ ವರದಿಗಳಿಂದ ತುಂಬಿರುತ್ತಿತ್ತು. ಮಣಿಪಾಲದಲ್ಲಿ ಒಂದು ಪುಸ್ತಕ ಬಿಡುಗಡೆ, ಬಂಟ್ವಾಳದಲ್ಲಿ ಒಂದು ಭಾಷಣ, ಸಕಲೇಶಪುರದಲ್ಲಿ ಪರಿಸರ ಕಾರ್ಯಕರ್ತರ ಕುರಿತು ಭಾಷಣ, ಹಾಸನದಲ್ಲಿ ಸಾಹಿತ್ಯಕ ಹಬ್ಬದ ಉದ್ಘಾಟನೆ. ಬಹುಶಃ ಅದು ಕಡೆಯ ಸ್ಥಳವಾಗಿರಬಹುದು. ಮೇಲೆ ಹೇಳಿದ ಎಲ್ಲಾ ಸ್ಥಳಗಳಲ್ಲಿ ಅನಂತಮೂರ್ತಿಯವರು ಪ್ರಸ್ತುತವಾದಂತ ಅದ್ಭುತ ಭಾಷಣಗಳನ್ನು ಮಾಡಿದ್ದಿರಬಹುದಾದರೂ, ಕುಣಿಗಲ್‌ನ ಸ್ಟಡ್ ಫಾರ್ಮ್‌ನಲ್ಲಿ ಈ ಹಳೆಯ ಸಮಾಜವಾದಿಗೆ ಸ್ವಾಗತ ಇರಬಹುದೆಂಬುದನ್ನು ನಿಜಕ್ಕೂ ಯಾರೂ ಎಣಿಸಲಾಗದು.

 

ಬೆಂಗಳೂರಿನಲ್ಲಿ, ನನ್ನ ಈ ಗೆಳೆಯರೊಂದಿಗೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದರಿಂದ ನನಗೆ ತಿಳಿದು ಬಂದಿದ್ದೇನೆಂದರೆ, ಕ್ಯಾಮೆರಾ ಎಲ್ಲೆಡೆ ಅವರನ್ನು ಅನುಸರಿಸುತ್ತದೆ. ಅನಂತಮೂರ್ತಿಯವರಿಗೆ ಹತ್ತಿರವಾಗಲು ಯತ್ನಿಸುವ ಜನರ ಪಡೆಯೇ ಇರುತ್ತದೆ. ಯಾಕೆಂದರೆ ಅವರು ಯಾವಾಗಲೂ ಆಕರ್ಷಣೆಯ ಕೇಂದ್ರ. ಹೀಗಾಗಿ ನಾನು ಯಾವಾಗಲೂ ಅವರನ್ನು ಚುಡಾಯಿಸುತ್ತಿರುತ್ತೇನೆ (ಅವರ ಗೈರುಹಾಜರಿಯಲ್ಲಿ). ಆದರೆ ನನ್ನ ಈ ಚುಡಾಯಿಸುವಿಕೆಯಲ್ಲಿ ಮೆಚ್ಚುಗೆ ಇರುತ್ತದೆ, ಜೊತೆಗೆ ಅಸೂಯೆಯೂ.ಯಾಕೆಂದರೆ  `ಸಾರ್ವಜನಿಕ ಬುದ್ಧಿಜೀವಿ' (ಪಬ್ಲಿಕ್ ಇಂಟೆಲೆಕ್ಚುಯಲ್) ಎಂಬ ಮಾತು ಅನಂತಮೂರ್ತಿಯವರಿಗೆ ಹೊಂದಿಕೊಳ್ಳುವಷ್ಟು ಸರಿಯಾಗಿ ಭಾರತದಲ್ಲಿ ಈಗ ಜೀವಂತವಿರುವ ಯಾವ ವ್ಯಕ್ತಿಗೂ, ಅನ್ವಯಿಸಲಾಗದು. ಇದೇ ರೀತಿಯ ಕಾಲಾತೀತ ಹಾಗೂ ಅದಮ್ಯ ಚೇತನವೆಂದು ಪರಿಗಣಿಸಬಹುದಾದಲ್ಲಿ, ಬಹುಶಃ ಅವರು, ಏಕೈಕ ಮಹಿಳೆ ಮಹಾಶ್ವೇತಾದೇವಿ. ಖಂಡಿತವಾಗಿಯೂ ತನ್ನ ಓದುಗರು ಹಾಗೂ ಸಾರ್ವಜನಿಕರೊಂದಿಗೆ ಅನಂತಮೂರ್ತಿಯವರು ಹೊಂದಿರುವಂತಹ ಆಳವಾದ, ಆಜೀವ ಸಂಪರ್ಕದ ಸಾಮಾಜಿಕ ನೆಲೆಯನ್ನು ಭಾರತದ ಬೇರೆ ಯಾರೊಬ್ಬ ಇಂಗ್ಲಿಷ್ ಲೇಖಕರು ಎಲ್ಲೂ ಹೊಂದಿಲ್ಲ.ನನ್ನದೇ ಲೇಖಕ ಬಳಗದ ಯಾರಾದರೂ ತೀರಿಕೊಂಡಲ್ಲಿ, ಅವರ ಅಗಲಿಕೆಯನ್ನು (ಒಂದು ಸಾಧ್ಯತೆ) ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್‌ನ ಬಾರ್‌ನಲ್ಲಿ ಗಮನಕ್ಕೆ ಬಹುಶಃ ತಂದುಕೊಳ್ಳಬಹುದೇನೊ. ಆದರೆ ಅನಂತಮೂರ್ತಿಯವರು ತಮ್ಮ ಸೃಷ್ಟಿಕರ್ತನನ್ನು ಭೇಟಿ ಮಾಡಿದಾಗ, ಅವರ ಬರಹಗಳು ಹಾಗೂ ಪರಂಪರೆ ಕುರಿತಂತೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಚರ್ಚೆ, ಸಂವಾದಗಳು ನಡೆಯುತ್ತವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry