ಜನಾಭಿಪ್ರಾಯದ ಅವಗಣನೆ ಸರಿಯಲ್ಲ

7

ಜನಾಭಿಪ್ರಾಯದ ಅವಗಣನೆ ಸರಿಯಲ್ಲ

ಕುಲದೀಪ ನಯ್ಯರ್
Published:
Updated:
ಜನಾಭಿಪ್ರಾಯದ ಅವಗಣನೆ ಸರಿಯಲ್ಲ

ಮನುಷ್ಯನ ತಾಳ್ಮೆಗೂ ಒಂದು ಮಿತಿ ಎಂಬುದಿದೆಯಲ್ಲಾ, ಹಾಗೆಯೇ ಒಂದು ದೇಶಕ್ಕೆ ಕೂಡಾ. ದೆಹಲಿ ಅಥವಾ ಇನ್ನು ಕೆಲವು ನಗರಗಳ್ಲ್ಲಲಿ ನಡೆದಿರುವ  ಸಾಮೂಹಿಕ ಅತ್ಯಾಚಾರ ಪ್ರಕರಣಗಳ ವಿವರಗಳು ಜನಸಾಮಾನ್ಯರ ಚರ್ಚೆಗೆ ಗ್ರಾಸ ಒದಗಿಸಿವೆ. ಈಗ ದೇಶದಾದ್ಯಂತ ಎಲ್ಲೆಲ್ಲೂ ಇದೇ ಮಾತು. ಇಂತಹ ಘಟನೆಗಳ ಬಗ್ಗೆ ಸುದ್ದಿಪ್ರವಾಹವೇ ಹರಿಯುತ್ತಿದೆ. ಜನರೂ ರೋಸಿ ಹೋಗಿದ್ದಾರೆ. ವಿದ್ಯಾರ್ಥಿಗಳು ಬೀದಿಗಿಳಿದರು.ಈಚೆಗೆ ದೆಹಲಿಯ ಮುಖ್ಯ ಬೀದಿಗಳಲ್ಲಿ ಯುವಜನರ ಪ್ರತಿಭಟನೆ ಎದ್ದು ಕಾಣುತಿತ್ತು. ಒಂದೆರಡು ಕಡೆ ಯುವಜನರು ಮತ್ತು ಪೊಲೀಸರ ನಡುವೆ ಘರ್ಷಣೆಯೂ ನಡೆಯಿತು. ಪೊಲೀಸ್ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದರೆ, ಹಲವು ವಿದ್ಯಾರ್ಥಿಗಳು ಗಾಯಗೊಂಡರು. ಲಾಠಿ ಪ್ರಹಾರ ಮತ್ತು ಜಲ ಫಿರಂಗಿ ಪ್ರಯೋಗವೂ ನಡೆದಿದೆ.ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಕೋಪೋದ್ರಿಕ್ತರಾದ ಯುವಜನರು ಈ ಪ್ರತಿಭಟನೆ ನಡೆಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಹೌದು. ಇದು ಜಡ್ಡುಗಟ್ಟಿದ ವ್ಯವಸ್ಥೆಯ ವಿರುದ್ಧದ ಅಸಮಾಧಾನದ ಸ್ಫೋಟದಂತೆಯೂ ಕಂಡು ಬರುತ್ತದೆ. ಅದಕ್ಷ ಆಡಳಿತದ ವಿರುದ್ಧ ಯುವಜನರ ಮನದಲ್ಲಿರುವ ಅಸಹನೆಯ ಸಂಕೇತದಂತಿದೆ ಈ ಪ್ರತಿಭಟನೆ ಎಂದರೆ ಅತಿಶಯೋಕ್ತಿಯಂತೂ ಅಲ್ಲ.

ದಶಕಗಳ ಹಿಂದೆ ಪ್ರಧಾನಿ ಇಂದಿರಾ ಗಾಂಧಿಯವರು ಈ ತೆರನಾದ ಪ್ರತಿಭಟನೆ, ಅಸಹನೆಗಳನ್ನೆಲ್ಲಾ ಆಡಳಿತದ ಶಕ್ತಿಯನ್ನು ಬಳಸಿ ದಮನ ಮಾಡಿದ್ದರು.

ಪ್ರತಿಭಟನಾಕಾರರ ಧ್ವನಿ ಅಡಗಿಸಿದ್ದರು. ಆದರೂ ಬಡತನ ನಿರ್ಮೂಲನದ ಕಾರ್ಯಕ್ರಮಗಳ ಬಗ್ಗೆ ಘೋಷಣೆಗಳನ್ನು ಮಾಡುತ್ತಲೇ ಚುನಾವಣೆಯಲ್ಲಿ ಗೆದ್ದು ಬರುತ್ತಿದ್ದರು. ಪ್ರಧಾನಿ ಮನಮೋಹನ್ ಸಿಂಗ್ ಅವರು ಆಡಳಿತ ಯಂತ್ರವನ್ನು ಬಳಸಿಕೊಂಡು ದಮನಕಾರಿ ನೀತಿ ಅನುಸರಿಸಿದ್ದಾರೆಂದು ಯಾರೂ ಹೇಳುತ್ತಿಲ್ಲ.ಆದರೆ ಸುಮಾರು ಒಂಬತ್ತು ವರ್ಷಗಳ ಅವರ ಅವಧಿಯಲ್ಲಿ ಅಧಿಕಾರದ “ಕೆಂಪು ಪಟ್ಟಿ”ಯೊಳಗೇ ತಿರುಗಣಿಯಾಗಿರುವಂತೆ ಕಂಡು ಬಂದಿದ್ದಾರೆ. ಯಾವುದೇ ಮಹತ್ತರ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ದಾಪುಗಾಲಿಟ್ಟಿರುವುದು ಅಷ್ಟರಲ್ಲಿಯೇ ಇದೆ. ಅವರು ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದುದು ಕೂಡಾ ನೀರಸವೇ. ಅದರಲ್ಲಿ ಒಡಲಿನೊಳಗಿಂದ ಒತ್ತರಿಸಿ ಬಂದಂತಹ ಭಾವಗಳಿರುತ್ತಿರಲಿಲ್ಲ, ತೀವ್ರತೆ ಕಂಡು ಬರುತ್ತಿರಲಿಲ್ಲ. ಇಂತಹ ಸಂದಿಗ್ಧತೆಯಲ್ಲಿ ಅವರು ದೆಹಲಿ ಮುಖ್ಯಮಂತ್ರಿ, ಅಲ್ಲಿನ ಪೊಲೀಸ್ ಆಯುಕ್ತ, ಕೇಂದ್ರ ಗೃಹ ಸಚಿವರ ಅಸಂಬದ್ಧ ಹೇಳಿಕೆಗಳನ್ನಾದರೂ ತಡೆಯಬಹುದಿತ್ತು.ದೆಹಲಿ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಲ್ಲಿ ಕ್ರೋಧ ತುಂಬಿತ್ತು. ಆದರೆ ಅವರ ಮತ್ತು ಸರ್ಕಾರದ ನಡುವೆ ಸಂವಾದಕ್ಕೆ ಎಡೆಯೇ ಇರಲಿಲ್ಲ. ಪ್ರತಿಭಟನೆ ನಡೆಸುತ್ತಿದ್ದವರಂತೂ ಅಧಿಕಾರದ ಉನ್ನತ ಸ್ಥಾನದಲ್ಲಿರುವವರ ಕುರ್ಚಿಯನ್ನು ಬೀಳಿಸಬೇಕೆಂದೇ ಬಯಸಿದಂತಿತ್ತು. ಅಂತಹ ಸಂದರ್ಭದಲ್ಲಿ ಕೇವಲ ಹೇಳಿಕೆಗಳನ್ನು ನೀಡುವ ಮೂಲಕ ಪ್ರತಿಭಟನಾಕಾರರ ವಿಶ್ವಾಸ ಗಳಿಸಲು ಸಾಧ್ಯವಿಲ್ಲ ಎಂಬುದನ್ನು ಸರ್ಕಾರ ಮನಗಾಣಬೇಕಿತ್ತು.`ಅದೆಂತಹ ಅಪರಾಧ ಎಸಗಿದವರೂ ಈ ವ್ಯವಸ್ಥೆಯೊಳಗೆ ಬಚಾವಾಗಿ ಬಿಡುತ್ತಾರೆ, ಯಾವುದೇ ಶಿಕ್ಷೆಯಾಗುವುದಿಲ್ಲ. ನಿಧಾನಕ್ಕೆ ಎಲ್ಲವೂ ಮರೆತು ಹೋಗುತ್ತದೆ. ಪರಿಸ್ಥಿತಿ ಯಥಾ ಪ್ರಕಾರ ಮುಂದುವರಿಯುತ್ತದಷ್ಟೇ' ಎಂಬ ಸಾಮಾನ್ಯ ಅಭಿಪ್ರಾಯ ಪ್ರತಿಭಟನಾಕಾರರಲ್ಲಿ ಎದ್ದು ಕಾಣುತಿತ್ತು. ಜನಸಾಮಾನ್ಯರಲ್ಲಿಯೂ ಅದೇ ಅನಿಸಿಕೆ ವ್ಯಾಪಕವಾಗಿದೆ. ಸರ್ಕಾರ ಪ್ರತಿಭಟನೆಯ ಸೊಲ್ಲಿನ ಆಳದಲ್ಲಿರುವ ಇಂತಹ ಸೂಕ್ಷ್ಮವನ್ನು ಗ್ರಹಿಸಿ ತಕ್ಷಣವೇ ಪೊಲೀಸ್ ಆಯುಕ್ತ ನೀರಜ್ ಕುಮಾರ್ ಅವರನ್ನು ವರ್ಗಾವಣೆ ಮಾಡಬೇಕಿತ್ತು.ಪೊಲೀಸ್ ಪಡೆ ತನ್ನ ದೌರ್ಬಲ್ಯವನ್ನು ಮುಚ್ಚಿಕೊಳ್ಳುವ ದಿಸೆಯಲ್ಲಿ ಮಾಡಿದ್ದಂತಹ ಸಮರ್ಥನೆಗಳೂ ದುರ್ಬಲವಾಗಿದ್ದವು. ಪೊಲೀಸ್ ಪಡೆಯಲ್ಲಿ ಯಾರನ್ನೂ ದೂಷಿಸುವಂತಿಲ್ಲ ಎನ್ನುವುದಾದರೆ ಎಡವಿರುವುದಾದರೂ ಎಲ್ಲಿ ಎಂಬ ಪ್ರಶ್ನೆ ಕಾಡುತ್ತದಲ್ಲ. ದೆಹಲಿಯಲ್ಲಿ ಕಾನೂನು ಪರಿಪಾಲನೆ ಮಾಡುವ ನಿಟ್ಟಿನಲ್ಲಿ ಅದೇ ಹಳೆಯ ಕಾಲದ ಪೊಲೀಸ್ ತಂತ್ರಗಳಷ್ಟೇ ಸಾಲದು. ಹೊಸ ಪರಿಕಲ್ಪನೆಗಳ ಅಗತ್ಯವಿದೆ ಎಂಬುದಂತೂ ನಿಜ. ಆಡಳಿತಗಾರರಲ್ಲಿ ಮಾನವೀಯ ಸೆಲೆ ಮತ್ತು ವೈಯಕ್ತಿಕ ಸಂಪರ್ಕಗಳ ಕೊರತೆಯಂತೂ ಎದ್ದು ಕಾಣುತ್ತಿದೆ ಎಂಬುದು ಇಂತಹ ಸಂದಿಗ್ಧತೆಯಲ್ಲಿ ಗೊತ್ತಾಗುತ್ತದೆ.ನ್ಯಾಯಾಂಗ ಆಯೋಗದ ನೇಮಕ ಇದೆಯಲ್ಲಾ ಅದು ಹಿಂದಿನ ಅನುಭವಗಳನ್ನು ನೆನಪಿಗೆ ತಂದುಕೊಂಡರೆ ಆ ಕ್ಷಣದ ಕಣ್ಣೊರೆಸುವ ತಂತ್ರದಂತೆ ಭಾಸವಾಗುತ್ತದಷ್ಟೇ. ಮುಂಬೈನಲ್ಲಿ 1993ರಲ್ಲಿ ನಡೆದಿದ್ದ ಕೋಮುಗಲಭೆಗೆ ಸಂಬಂಧಿಸಿದಂತೆ ನೇಮಕಗೊಂಡಿದ್ದ ಶ್ರೀಕೃಷ್ಣ ಆಯೋಗವಾಗಲಿ, ಬಾಬರಿ ಮಸೀದಿ ಕೆಡವಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ರಚಿಸಲಾದ ಎಂ.ಎಸ್.ಲಿಬರಾನ್ ಸಮಿತಿಗಳ ವರದಿಯೇ ಆಗಲಿ ಏನಾದವು ಎಂಬ ಪ್ರಶ್ನೆ ಏಳುವುದು ಸಹಜ. ಆ ಎರಡೂ ಪ್ರಕರಣಗಳಲ್ಲಿ ಆರೋಪಿಗಳು ರಾಜಕೀಯವಾಗಿ ಪ್ರಭಾವಶಾಲಿಗಳು. ಪರಿಸ್ಥಿತಿ ಹೀಗಿರುವಾಗ ದೆಹಲಿಯಲ್ಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ತನಿಖೆಗೆ ನ್ಯಾಯಾಂಗ ಆಯೋಗದ ರಚನೆ ಎಂಬ ಅಂಶದ ಬಗ್ಗೆ ಜನಾಭಿಪ್ರಾಯ ಹೇಗಿರಬಹುದು, ಯೋಚಿಸಿ.ತಮ್ಮ ಮೇಲೆ ಪೊಲೀಸರು ಒತ್ತಡ ಹೇರಿದ್ದರು ಎಂದು ಅತ್ಯಾಚಾರಕ್ಕೆ ಒಳಗಾದ ತರುಣಿಯ ತಾಯಿ ತಮಗೆ ತಿಳಿಸಿದ್ದರು ಎಂದು ಮ್ಯಾಜಿಸ್ಟ್ರೇಟರು ತಮ್ಮ ವರದಿಯಲ್ಲಿ ದಾಖಲಿಸಿದ್ದಾರೆ. ತರುಣಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲು ತಾವು ಹೋಗಿದ್ದಾಗ ತರುಣಿಯ ತಾಯಿ ಈ ಹೇಳಿಕೆ ನೀಡಿದ್ದರು ಎಂದೂ ಅವರು ತಿಳಿಸಿದ್ದಾರೆ. ಈ ಕುರಿತು ತಕ್ಷಣ ಸ್ಪಂದಿಸಿದ ದೆಹಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಗೃಹ ಸಚಿವಾಲಯದಿಂದ ವಿವರಣೆ ಕೇಳಿ ಆದೇಶ ನೀಡಿದ್ದಾರೆ. ಆದರೆ ಪೊಲೀಸರು ಅಂತಹ ಆರೋಪವನ್ನು ನಿರಾಕರಿಸಿದ್ದಾರೆ.ಪ್ರಸಕ್ತ ನ್ಯಾಯಾಂಗ ಪ್ರಕ್ರಿಯೆ ಬಗ್ಗೆಯೇ ಜನಸಮುದಾಯ ನಂಬಿಕೆ ಕಳೆದುಕೊಂಡಂತೆ ಕಂಡು ಬರುತ್ತಿದೆ. ಇಂತಹ ಪ್ರಕರಣಗಳಲ್ಲಿಯೂ ವಿಚಾರಣೆಯು ದೀರ್ಘಕಾಲದ ಪ್ರಕ್ರಿಯೆಗಳಾಗಿರುತ್ತಿದ್ದು, ಅಪರಾಧಿಗೆ ಶಿಕ್ಷೆಯಾಗಲು ಬಹಳ ಸಮಯ ಬೇಕಾಗುತ್ತದೆ. ಇವತ್ತು ಸುಮಾರು 400ಕ್ಕೂ ಹೆಚ್ಚು ಅತ್ಯಾಚಾರದ ಪ್ರಕರಣಗಳ ವಿಚಾರಣೆಗಳು ಕುಂಟುತ್ತಾ ನಡೆದಿವೆ. ದೆಹಲಿಯಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣಗಳ ವಿಚಾರಣೆ ತ್ವರಿತಗತಿ ನ್ಯಾಯಾಲಯದಲ್ಲಿಯೇ ನಡೆದರೂ, ಕಾನೂನು ವ್ಯವಸ್ಥೆಯೊಳಗಿನ ಕೆಲವು ಲೋಪದ ಎಳೆಗಳನ್ನೇ ಬಳಸಿಕೊಂಡು ಮೇಲ್ಮನವಿ ಸಲ್ಲಿಸುತ್ತಾ ಹೋಗುವುದರಿಂದ ಆರೋಪಿಗಳಿಗೆ ಶಿಕ್ಷೆಯಾಗಲು ಒಂದಷ್ಟು ಕಾಲ ತೆಗೆದುಕೊಳ್ಳುವುದಂತೂ ನಿಜ.ಈ ಹಿನ್ನೆಲೆಯಲ್ಲಿ ಕಾನೂನಿನಲ್ಲಿಯೇ ಸಮಗ್ರ ಬದಲಾವಣೆಗಳಾಗಬೇಕಿದೆ. ತಪ್ಪಿತಸ್ತರಿಗೆ ಗಲ್ಲು ಶಿಕ್ಷೆ ನೀಡುವುದರಿಂದಷ್ಟೇ ಅತ್ಯಾಚಾರ ಪ್ರಕರಣಗಳನ್ನು ಸಂಪೂರ್ಣ ತಹಬಂದಿಗೆ ತರಲು ಸಾಧ್ಯವಿಲ್ಲ. ತಪ್ಪಿತಸ್ತರ ಪುರುಷತ್ವಹರಣ ಮಾಡುವುದೂ ಸಮಂಜಸ ಶಿಕ್ಷೆಯೇ ಹೌದು. ಇದೇ ಸರಿಯಾದ ಕ್ರಮ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ.ಈ ನಡುವೆ ಸಂಸದರು ತಮ್ಮ ಇರುವಿಕೆಯನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಪೈಪೋಟಿಗೆ ಇಳಿದು ಬಿಟ್ಟಿದ್ದಾರೆ. ತಕ್ಷಣ ತಪ್ಪಿತಸ್ತರಿಗೆ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಎರಡು ರಾಜಕೀಯ ಪಕ್ಷಗಳ ಸಂಸದರು ದುಂಬಾಲು ಬಿದ್ದರು. ಆಶ್ಚರ್ಯವೆಂದರೆ ತಮ್ಮ ನಡುವೆಯೇ ಕುಳಿತ್ತಿದ್ದ ಕೆಲವು ಸಂಸದರ ಮೇಲೆಯೇ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಆರೋಪವಿದ್ದು, ಅವರ ರಾಜಿನಾಮೆಗೆ ಯಾರೂ ಒತ್ತಾಯಿಸಲೇ ಇಲ್ಲ.ಈ ಬಗ್ಗೆ ಪ್ರಶ್ನಿಸಿದರೆ ಕೆಲವರು ಕೊಡುವ ಉತ್ತರವೇನು ಗೊತ್ತೆ, `ಚುನಾವಣಾ ಆಯೋಗವೇ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಿ...!'. ಇಂತಹ ಗಂಭೀರ ಮತ್ತು ಹೇಯ ಸಂಗತಿಗೆ ಸಂಬಂಧಿಸಿದಂತೆ ಪರಿಹಾರ ಕಂಡು ಕೊಳ್ಳುವಲ್ಲಿ ಚುನಾವಣಾ ಆಯೋಗದತ್ತ ಬೆಟ್ಟು ತೋರಿಸುವುದೇಕೆ? ಲೋಕಸಭೆಯೇ ಒಂದು ತೀರ್ಮಾನ ತೆಗೆದುಕೊಳ್ಳಬಹುದಲ್ಲ. ಈ ಸಂದರ್ಭದಲ್ಲಿ ನನಗೆ ಗುಜರಾತ್ ವಿಧಾನಸಭಾ ಸದಸ್ಯರು ನೆನಪಾಗುತ್ತಾರೆ. ಆ ರಾಜ್ಯದಲ್ಲಿ ಮೂರನೇ ಒಂದರಷ್ಟು ಸಂಖ್ಯೆಯ ಶಾಸಕರ ವಿರುದ್ಧ ಅತ್ಯಾಚಾರ ಪ್ರಕರಣವೂ ಸೇರಿದಂತೆ ಹತ್ತು ಹಲವು ಕ್ರಿಮಿನಲ್ ಪ್ರಕರಣಗಳು ತನಿಖೆಯ ಹಂತದಲ್ಲಿವೆ.ವ್ಯವಸ್ಥೆಯ ಇಂತಹ ಬೇಜವಾಬ್ದಾರಿತನದಿಂದಾಗಿ ಅಸಹನೆ, ಅಸಮಾಧಾನದಿಂದ ಕುದಿಯುತ್ತಿರುವ ಯುವಕರ ಪ್ರಶ್ನೆಗಳಿಗೆ ಈಗಿರುವ ಯಾವುದೇ ಸಿದ್ಧಸಂಸ್ಥೆಗಳು ಸರಿ ಉತ್ತರ ಕೊಡಲು ಸಾಧ್ಯವೇ ಇಲ್ಲ ಎಂಬ ಅಂಶವನ್ನು ಎಲ್ಲಾ ರಾಜಕೀಯ ಪಕ್ಷಗಳು ಅರಿತುಕೊಳ್ಳಬೇಕಿದೆ. ಈ ಮಟ್ಟಿಗಿನ ಬಡತನ ಏಕೆ, ಶ್ರೀಮಂತರು ಮತ್ತು ಬಡವರ ನಡುವಣ ಅಂತರ ದಿನೇ ದಿನೇ ಇಷ್ಟೊಂದು ಹೆಚ್ಚುತ್ತಿರುವುದಾದರೂ ಏಕೆ, ಜಾತಿ-ಜನಾಂಗಗಳ ಸಮಸ್ಯೆ ಅಥವಾ ಬಿಗಿಹಿಡಿತ ಹಿಂದಿಗಿಂತಲೂ ಇಂದು ಹೆಚ್ಚಾಗಿದೆಯಲ್ಲಾ, ಜನಸಾಮಾನ್ಯರ ಆಶಯಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲವೇಕೆ, ಯುವಜನರ ಧ್ವನಿ ಸರ್ಕಾರದ ಕಿವಿ ತಲುಪುತ್ತಿಲ್ಲವೇಕೆ... ಇತ್ಯಾದಿ ಅಸಂಖ್ಯ ಪ್ರಶ್ನೆಗಳು ಇವತ್ತು ಯುವಜನರ ಒಡಲಲ್ಲಿದೆ.ಇಂತಹ ಯುವಜನರ ಜತೆಗೆ ನಿಂತು ಅವರಿಗೆ ಸರಿಯುತ್ತರ ಕೊಡುವ ನಿಟ್ಟಿನಲ್ಲಿ ಕಾಂಗ್ರೆಸ್‌ನ ಯಾವ ನಾಯಕ ಸ್ಪಂದಿಸಿದ್ದಾರೆ. ನೂರೆಂಟು ಪ್ರಶ್ನೆಗಳನ್ನು ಎತ್ತುತ್ತಿರುವ ಯುವಜನರ ಸಮುದಾಯಕ್ಕೆ ಇವತ್ತು ಯಾರೊಬ್ಬರ ನೇತೃತ್ವವೇ ಇಲ್ಲ. ಮುಖಂಡನಿಲ್ಲದ ಇಂತಹ ಸಮುದಾಯ ಎತ್ತೆತ್ತಲೋ ಹೋಗಿ ಬಿಡಬಹುದು. ಇದು ಬಲು ಅಪಾಯಕಾರಿ ಕೂಡಾ. ಕೆಲವು ದುಷ್ಕರ್ಮಿಗಳು ಈ ಸಮುದಾಯದೊಳಗೆ ಸದ್ದಿಲ್ಲದೆ ಸೇರಿಕೊಂಡು ಹಿಂಸಾತ್ಮಕ ಚಟುವಟಿಕೆಗಳಿಗೆ ಕಾರಣವಾಗುವಂತಹ ಕಿಚ್ಚು ಹತ್ತಿಸಲೂ ಬಹುದು. ಈ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲಿಕ್ಕೆ ಪ್ರಯತ್ನ ನಡೆಸಲೂಬಹುದು.ಭಾರತೀಯ ಸಮಾಜದ ಮೇಲೆ ಯಾವುದೇ ಬಿಗಿ ಹಿಡಿತವಿಲ್ಲ. ಯಾರು ಬೇಕಿದ್ದರೂ ಯಾವುದೇ ತೆರನಾದ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಬಹುದು. ಆದರೆ ದೆಹಲಿಯಲ್ಲಿ ನಡೆದಂತಹ ಘಟನೆಗಳನ್ನು ಮಾತ್ರ ಅಷ್ಟೇ ಸರಳವಾಗಿ ತೆಗೆದುಕೊಳ್ಳುವಂತಿಲ್ಲ. ಅವುಗಳೆಲ್ಲವೂ ಒಂದು ರೀತಿಯಲ್ಲಿ ಎಚ್ಚರಿಕೆಯ ಗಂಟೆಗಳಂತಿವೆ.ಇನ್ನಾದರೂ ನಮ್ಮ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಿಕೊಂಡು ಮುನ್ನಡೆಯಬೇಕಿದೆ. ಈ ಸಂದಿಗ್ಧತೆಯಲ್ಲಿ ಚುನಾವಣಾ ಪ್ರಕ್ರಿಯೆ ಬಗ್ಗೆಯೂ ಒಂದು ಕಣ್ಣಿಡಲೇ ಬೇಕಿದೆ. ಅಲ್ಲಿಯೂ ಹಣ ಮತ್ತು ಗೂಂಡಾಗಳ ಕೈ ಮೇಲಾಗಿ ಚುನಾವಣೆಯೇ ಕಪಟ ಎನಿಸತೊಡಗಿದೆ. ಕೆಲವು ರಾಜ್ಯಗಳಲ್ಲಿ ಪೊಲೀಸ್ ಪಡೆಯೇ ಅಲ್ಲಿನ ಮುಖ್ಯಮಂತ್ರಿಗಳ ಖಾಸಗಿ ಸೇನೆಯಂತಾಗಿರುವಂತೆನಿಸುತ್ತಿದೆ.ಇಷ್ಟೆಲ್ಲದರ ನಡುವೆಯೂ ಈ ದೇಶದಲ್ಲಿ ಶಾಂತಿ ಇದೆ. ಇದರ ಅರ್ಥ ಜನಸಾಮಾನ್ಯರು ನಿಷ್ಪ್ರಯೋಜಕರು ಎಂದಲ್ಲ. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಕಾಲ ಕಾಲಕ್ಕೆ ಆಡಳಿತಗಾರರನ್ನು ಬದಲಾಯಿಸುವ ಶಕ್ತಿ ತಮ್ಮಲ್ಲಿದೆ ಎಂಬ ದೃಢ ನಂಬಿಕೆಯೇ ಜನರನ್ನು ಸುಮ್ಮನಿರಿಸಿದೆ. ಆದರೆ ಕಡು ಬಡವರು ಕೊರೆಯುವ ಚಳಿಗೆ ಸಿಲುಕಿ ತತ್ತರಿಸುತ್ತಿದ್ದಾರೆ, ಹಸಿವು ಅವರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಭವಿಷ್ಯದ ಬಗ್ಗೆ ಕನಸುಗಳನ್ನೇ ಕಾಣಲಾಗದಂತಾಗಿದ್ದಾರೆ.ಈ ದೇಶ ಸ್ವತಂತ್ರಗೊಂಡು 64ವರ್ಷಗಳುರುಳಿವೆ. ಇನ್ನೂ ಅಷ್ಟೇ ವರ್ಷಗಳು ಉರುಳಿದರೂ ಇದೇ ಪರಿಸ್ಥಿತಿ ಮುಂದುವರಿಯಬಹುದೇ ಎಂಬ ಆತಂಕವೂ ಕಾಡುತ್ತಿದೆ. ಇವುಗಳೆಲ್ಲದರ ನಡುವೆಯೂ ಕೆಳಸ್ತರದ ಈ ಜನರು ಸುಂದರ ಬದುಕಿನ ಕನಸು ಕಾಣುತ್ತಿದ್ದಾರೆ. ಇನ್ನೊಂದು ಕಡೆ, ಅತ್ಯಾಚಾರಕ್ಕೆ ಬಲಿಯಾದ ತರುಣಿಯೂ `ನಾನು ಬದುಕಲೇಬೇಕು' ಎನ್ನುತ್ತಿದ್ದಳು.  ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry