ಜನ ಮರುಳೊ ಕ್ರಿಕೆಟ್ ಮರುಳೊ

7

ಜನ ಮರುಳೊ ಕ್ರಿಕೆಟ್ ಮರುಳೊ

ಗೋಪಾಲ ಹೆಗಡೆ
Published:
Updated:
ಜನ ಮರುಳೊ ಕ್ರಿಕೆಟ್ ಮರುಳೊ

ಒಂದು ಕೆಟ್ಟ ಸಿನಿಮಾ ಅಥವಾ ಟಿವಿಯ ಅಳುಬುರುಕ ಧಾರಾವಾಹಿಯನ್ನು ಯಾರು ನೋಡುತ್ತಾರೆ? ಆ ಸಿನಿಮಾದಲ್ಲಿ ಗುಣಮಟ್ಟದ ಯಾವ ಅಂಶವೂ ಇಲ್ಲದೇ ಕೀಳುಮಟ್ಟದ ಮನರಂಜನೆ ಇದೆ ಎಂದು ಗೊತ್ತಾದ ಮೇಲೂ ಅದನ್ನು ಪದೇಪದೇ ನೋಡುವ ಪ್ರೇಕ್ಷಕನ ಚಪಲಕ್ಕೆ ಏನನ್ನಬಹುದು?-ಕ್ರಿಕೆಟ್‌ಪ್ರೇಮಿ. ಅದೂ ಐಪಿಎಲ್ ಕ್ರಿಕೆಟ್‌ಪ್ರೇಮಿ. ಜನ ಮರುಳೋ ಕ್ರಿಕೆಟ್ ಮರುಳೋ ಗೊತ್ತಾಗುತ್ತಿಲ್ಲ.ವರ್ಷಗಟ್ಟಲೆ ನಡೆಯುವ ಧಾರಾವಾಹಿಗಳನ್ನು ಜನ ನೋಡುವುದು ಚಟವಾಗಿರುವಂತೆಯೇ ಈ ಚುಟುಕು ಕ್ರಿಕೆಟ್ ನೋಡುವುದೂ ಕೂಡ ಒಂದು ಚಟವೇ ಆಗಿ ಪರಿಣಮಿಸಿರುವಂತೆ ಕಂಡುಬರುತ್ತಿದೆ. ಐಪಿಎಲ್ ಕ್ರಿಕೆಟ್ ಪಂದ್ಯಗಳ ಬಗ್ಗೆ ಜನರ ಉತ್ಸಾಹ ನೋಡಿದರೆ ಅವರ ಕ್ರಿಕೆಟ್ ಹಸಿವು ವಿಶ್ವ ಕಪ್ ನಂತರವೂ ಕಡಿಮೆಯಾಗಲಿಲ್ಲವೇ ಎಂಬ ಅನುಮಾನ ಮೂಡುತ್ತಿದೆ. ಒಂದು ವೇಳೆ ಭಾರತ ವಿಶ್ವ ಕಪ್ ಗೆದ್ದಿರದಿದ್ದರೆ ಜನ ಇದೇ ರೀತಿ ಐಪಿಎಲ್ ಪಂದ್ಯಗಳನ್ನು ನೋಡುತ್ತಿದ್ದರೇ ಎಂಬ ಸಂಶಯವೂ ಕಾಡುತ್ತದೆ.ಭ್ರಷ್ಟ ರಾಜಕಾರಣಿಗಳನ್ನು, ಅಧಿಕಾರಿಗಳನ್ನು ಕಂಡರೆ ಉರಿದುಬೀಳುವ, ಬೈಗುಳಗಳ ಸಹಸ್ರನಾಮ ಉದುರಿಸುವ ನನ್ನ ಸ್ನೇಹಿತನೊಬ್ಬ, ಭಾರತ ವಿಶ್ವ ಕಪ್ ಗೆದ್ದ ಮೇಲೆ ನಡೆದ ಸಂಭ್ರಮಾಚರಣೆಗಳ ಬಗ್ಗೆ ಒಂದು ಮಾತು ಹೇಳಿದ- ‘ಭ್ರಷ್ಟಾಚಾರದ ವಿರುದ್ಧ ಇಡೀ ದೇಶದಲ್ಲಿ ಮೊಟ್ಟಮೊದಲ ಬಾರಿ ಸಂಚಲನ ಮೂಡಿಸಿದ ಅಣ್ಣಾ ಹಜಾರೆ, ಭಾರತ ವಿಶ್ವ ಕಪ್ ಪಂದ್ಯ ಆಡುವ ದಿನ ಉಪವಾಸ ಆರಂಭಿಸಿದ್ದರೆ ಏನಾಗಬಹುದಿತ್ತು? ಒಬ್ಬನೇ ಒಬ್ಬ ಅವರ ಬಳಿ ಇರುತ್ತಿರಲಿಲ್ಲ.

 

ಮರುದಿನ ಪತ್ರಿಕೆಗಳಲ್ಲೂ ಅಣ್ಣಾ ಹಜಾರೆ ಬಗ್ಗೆ ಒಂದು ಅಕ್ಷರವೂ ಪ್ರಕಟವಾಗುತ್ತಿರಲಿಲ್ಲ! ಈ ದೇಶದ ಪುಣ್ಯ, ಅಣ್ಣಾ ಹಜಾರೆ ವಿಶ್ವ ಕಪ್ ಮುಗಿದ ಮೇಲೆ ತಮ್ಮ ಯುದ್ಧ ಆರಂಭಿಸಿದರು!’ ವಿಶ್ವ ಕಪ್ ಪಂದ್ಯಗಳಿಗೆ ಮುಗಿಬಿದ್ದಂತೆಯೇ ಐಪಿಎಲ್ ಪಂದ್ಯಗಳಿಗೂ ಜನರು ಹೋಗುತ್ತಿರುವುದನ್ನು ನೋಡಿದರೆ ‘ಇದೆಂಥಾ ಕ್ರಿಕೆಟ್‌ಪ್ರೇಮ’ ಎಂದು ಆಶ್ಚರ್ಯವಾಗುತ್ತದೆ.ಪಾಕಿಸ್ತಾನವೊಂದನ್ನು ಬಿಟ್ಟು, ವಿಶ್ವ ಕಪ್‌ನಲ್ಲಿ ಆಡಿದ ಹಲವು ಮಂದಿ ಆಟಗಾರರು ಈ ನಾಲ್ಕನೇ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಆರು ವಾರಗಳ ಕಾಲ ನಡೆದ ವಿಶ್ವ ಕಪ್ ಕ್ರಿಕೆಟ್‌ನಿಂದ ದಣಿವಾಗಿದೆ ಎಂದೇ ಎಲ್ಲರೂ ಹೇಳಿದ್ದರು. ಆದರೂ ಆಡಲು ಬಂದಿದ್ದಾರೆ. ಈಗ ಎಲ್ಲರೂ ವೃತ್ತಿಪರ ಆಟಗಾರರಾಗಿರುವುದರಿಂದ, ಎಲ್ಲಿ ಹಣ ದೊರೆಯುತ್ತದೆಯೋ ಅಲ್ಲಿ ಆಟಗಾರರು ಆಡುವುದರಲ್ಲಿ ಯಾವ ತಪ್ಪೂ ಇಲ್ಲ.

ಅಲ್ಲದೇ ಈ ಐಪಿಎಲ್‌ನಲ್ಲಿ ತಂಡಗಳ ಮಾಲೀಕರು ಹರಾಜಿನಲ್ಲಿ ಎಲ್ಲ ಆಟಗಾರರನ್ನು ಕೊಂಡಿದ್ದಾರೆ. ಅದಕ್ಕಾಗಿ ಅವರು ಬರಲೇಬೇಕು, ಆಡಲೇಬೇಕು. ಸರ್ಕಸ್ ಸಿಂಹಗಳನ್ನು ಕುಣಿಸುವ ‘ರಿಂಗ್‌ಮಾಸ್ಟರ್‌ನ ಚಾಟಿಯಲ್ಲಿ ಹಸಿವಿದೆ, ಹಣವಿದೆ, ಅದೃಷ್ಟವೂ ಇದೆ’ ಎಂದು ರಾಜಕಪೂರ್ ‘ಮೇರಾ ನಾಮ್ ಜೋಕರ್’ನಲ್ಲಿ ಹಾಡಿದ ಹಾಡು ನೆನಪಾಗುತ್ತದೆ. ಸರ್ಕಸ್‌ನಲ್ಲಿ ಹೀರೋ ಕೂಡ ಜೋಕರ್ ಆಗಬೇಕಾಗುತ್ತದೆ ಎಂಬಂತೆ ಐಪಿಎಲ್‌ನಲ್ಲಿ ಎಲ್ಲ ವಿಶ್ವ ಕಪ್ ಹೀರೋಗಳೂ ಜೋಕರುಗಳಂತೆಯೇ ಕುಣಿಯುತ್ತಿದ್ದಾರೆ.ಟ್ವೆಂಟಿ-20 ಕ್ರಿಕೆಟ್ ಬೌಂಡರಿ, ಸಿಕ್ಸರುಗಳ ಸುರಿಮಳೆಯೊಂದಿಗೆ ಮನರಂಜಿಸುವುದು ನಿಜವೇ ಆದರೂ ಆಟದಲ್ಲಿ ವೈವಿಧ್ಯ ಅಥವಾ ಕೌಶಲ ಕಾಣುವುದಿಲ್ಲ. ಆಟಗಾರರಂತೆಯೇ ದೊಡ್ಡ ಸಂಭಾವನೆ ಪಡೆಯುವ ಟಿವಿ ವೀಕ್ಷಕ ವಿವರಣೆಗಾರರು ಎಲ್ಲ ರೀತಿಯ ಆಡಂಬರದ ಶಬ್ದಗಳನ್ನು ಉಪಯೋಗಿಸಿ ಆಟಕ್ಕೆ ಬಣ್ಣ ಹಚ್ಚುತ್ತಿದ್ದಾರೆಯೇ ವಿನಾ ಹೊಸತೇನೂ ಕಾಣುತ್ತಿಲ್ಲ. ವೀಕ್ಷಕ ವಿವರಣೆಗಾರರು ಮಾಜಿ ಆಟಗಾರರೇ ಆಗಿದ್ದಾರೆ.

 

ಅವರ್ಯಾರೂ ಐಪಿಎಲ್‌ನಲ್ಲಿರುವ ನಕಾರಾತ್ಮಕ ಅಂಶಗಳ ಬಗ್ಗೆ ಬಾಯಿಬಿಡುವುದಿಲ್ಲ. ಲಲಿತ್ ಮೋದಿಯಂಥ ದೊಡ್ಡ ಮೋಸಗಾರನ ಕೈಕೆಳಗೇ ಇವರೆಲ್ಲ ಕೆಲಸ ಮಾಡಿದವರು. ಭಾರತದ ಕ್ರಿಕೆಟ್ ಮೇಲೆ ಈ ಐಪಿಎಲ್ ಯಾವ ರೀತಿಯ ಪರಿಣಾಮ ಬೀರುತ್ತಿದೆ ಎಂದು ಯಾರೂ ಇದುವರೆಗೆ ಹೇಳಿಲ್ಲ. ಹೇಳುವುದೂ ಇಲ್ಲ. ...ಮದುವೆಯಲ್ಲಿ ಉಂಡವನೇ ಜಾಣ!ಭಾರತ ಕ್ರಿಕೆಟ್ ತಂಡ ಐಪಿಎಲ್ ಮುಗಿದ ಕೂಡಲೇ ವೆಸ್ಟ್‌ಇಂಡೀಸ್ ಪ್ರವಾಸ ಕೈಕೊಳ್ಳಲಿದೆ. ಅದು ಮುಗಿದ ಮೇಲೆ ಇಂಗ್ಲೆಂಡ್ ಪ್ರವಾಸ. ವರ್ಷದ ಕೊನೆಗೆ ಆಸ್ಟ್ರೇಲಿಯದಲ್ಲಿ ಸರಣಿ. ಆಟಗಾರರು ಸುಸ್ತಾಗಿ ಹೋಗುವುದು ಖಂಡಿತ. ಸರಣಿಗಳನ್ನು ಸೋತಾಗ ಅದಕ್ಕೆ ಐಪಿಎಲ್ ಕಾರಣ ಎಂದು ದೋನಿ ಹೇಳಿದರೆ ಅವರ ಧೈರ್ಯವನ್ನು  ಮೆಚ್ಚಬೇಕಾಗುತ್ತದೆ. ವೃತ್ತಿಪರ ಕ್ರೀಡಾಪಟುಗಳ ಕೆಲಸ ಆಡುವುದೇ ಆದರೂ ಅದಕ್ಕೊಂದು ಶಿಸ್ತು, ಸಮಯ ಇದ್ದೇ ಇರುತ್ತದೆ.ಸಚಿನ್ ತೆಂಡೂಲ್ಕರ್ ಅಂಥ ಒಂದು ಶಿಸ್ತನ್ನು ಪಾಲಿಸಿದ್ದರಿಂದಲೇ 22 ವರ್ಷಗಳಿಂದ ಆಡುತ್ತಲೇ ಇರಲು ಸಾಧ್ಯವಾಗಿದೆ. ಈಗ ಭಾರತ ತಂಡದಲ್ಲಿರುವ ಆಟಗಾರರಲ್ಲಿ ಯಾರೂ ಅಷ್ಟು ವರ್ಷ ಆಡುವ ಲಕ್ಷಣಗಳು ಇಲ್ಲ. ಒಬ್ಬ ವೃತ್ತಿಪರ ಕ್ರೀಡಾಪಟು ತನ್ನ ದೈಹಿಕ ಅರ್ಹತೆಯನ್ನು ಬಹಳ ಎಚ್ಚರಿಕೆಯಿಂದ ಕಾಯ್ದುಕೊಳ್ಳಬೇಕಾಗುತ್ತದೆ. ಐಪಿಎಲ್‌ನಲ್ಲಿ ಆಡುತ್ತಿರುವ ಶ್ರೀಲಂಕಾದ ಹನ್ನೊಂದು ಮಂದಿ ಆಟಗಾರರು ವಾಪಸ್ಸು ಬರುವಂತೆ ಅಲ್ಲಿಯ ಕ್ರಿಕೆಟ್ ಮಂಡಳಿ ತಿಳಿಸಿದೆ. ಶ್ರೀಲಂಕಾ ಸದ್ಯದಲ್ಲೇ ಇಂಗ್ಲೆಂಡ್ ಪ್ರವಾಸ ಕೈಕೊಳ್ಳಲಿದೆ.ಗಾಯಾಳುಗಳ ಸಮಸ್ಯೆ ಎದುರಾಗಬಾರದೆಂದು ಶ್ರೀಲಂಕಾ ಮಂಡಳಿ ಈ ಕ್ರಮ ತೆಗೆದುಕೊಂಡಿದೆ.ಪಂದ್ಯಗಳ ಸಮಯದಲ್ಲಿ ವಿವಿಧ ಕ್ಷೇತ್ರಗಳ ಶ್ರೀಮಂತರು ಕ್ರೀಡಾಂಗಣಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಟಿವಿ ಕ್ಯಾಮೆರಾಗಳು ಅವರನ್ನು ತೋರಿಸುತ್ತವೆ. ಇವರೆಲ್ಲರ ರಕ್ತದ ಕಣಕಣಗಳಲ್ಲೂ ಕ್ರಿಕೆಟ್ ತುಂಬಿರುವಂತೆ ಮಾತನಾಡುತ್ತಾರೆ. ಜಾತ್ರೆಗಳಲ್ಲಿ ಜಾನುವಾರಗಳ ಕೋಡುಗಳಿಗೆ ಬಣ್ಣ ಬಳಿದು ಅಲಂಕಾರ ಮಾಡಿರುತ್ತಾರೆ. ಕ್ರಿಕೆಟ್ ಆಟಗಾರರು ಈಗ ತಲೆ ಕೂದಲಿಗೆ ವಿವಿಧ ಬಣ್ಣಗಳನ್ನು ಬಳಿದುಕೊಂಡು ಬೌಲ್ ಮಾಡಿದಾಗ ಲಲನೆಯರ ಕಣ್ಣಿಗೆ ಅವರು ಸುಂದರಾಂಗನಂತೆ ಕಾಣುತ್ತಾರೆ. ಹಾಗೆಂದು ಕ್ಯಾಮೆರಾ ಮುಂದೆ ಅವರು ಹೇಳುತ್ತಾರೆ. ಐಪಿಎಲ್ ಜಿಂದಾಬಾದ್!ಜನರ ಕ್ರಿಕೆಟ್‌ಪ್ರೇಮ ಎಷ್ಟು ವಿಚಿತ್ರ ಎಂಬುದು ಬೆಂಗಳೂರಿನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದಲ್ಲಿ ಕಂಡುಬಂತು. ವಿಜಯ್ ಮಲ್ಯ ಮಾಲೀಕತ್ವದ ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಕಳೆದ ವರ್ಷ ಆಡಿದ್ದ ರಾಹುಲ್ ದ್ರಾವಿಡ್, ರಾಬಿನ್ ಉತ್ತಪ್ಪ, ವಿನಯ್‌ಕುಮಾರ್ ಈ ಸಲ ಬೇರೆ ತಂಡದಲ್ಲಿ ಆಡುತ್ತಿದ್ದಾರೆ. ಕರ್ನಾಟಕದ ಕೆಲವು ಮಂದಿ ಆಟಗಾರರು ಈ ವರ್ಷ ಚಾಲೆಂಜರ್ಸ್ ತಂಡದಲ್ಲಿದ್ದರೂ, ನಾಯಕನಿಂದ ಹಿಡಿದು ಎಲ್ಲ ಪ್ರಮುಖ ಆಟಗಾರರೂ ಹೊರಗಿನವರೇ ಆಗಿದ್ದಾರೆ.ಇದು ಬೆಂಗಳೂರಿನ ಪ್ರೇಕ್ಷಕರಿಗೆ ಹಿಡಿಸಿದಂತಿಲ್ಲ. ಬಹಳಷ್ಟು ಜನ ಚಾಲೆಂಜರ್ಸ್ ಬದಲು ಮುಂಬೈ ತಂಡವನ್ನೇ ಬೆಂಬಲಿಸಿದ್ದು ಕಂಡುಬಂತು. (ಹಾಗೆಂದು ಒಬ್ಬ ಪ್ರೇಕ್ಷಕ ಬಾಯಿಬಿಟ್ಟು ಹೇಳಿದರೆಂದು ಮಾಜಿ ಆಟಗಾರರೊಬ್ಬರು ಫೋನ್ ಮಾಡಿ ಹೇಳಿದರು.) ಸ್ಥಳೀಯರಿಗೆ ತಮ್ಮ ತಂಡ ಗೆಲ್ಲಬೇಕೆಂಬ ಭಾವನೆ ಸಹಜವೇ ಆಗಿದ್ದರೂ, ಒಬ್ಬ ನಿಜವಾದ ಕ್ರಿಕೆಟ್‌ಪ್ರೇಮಿ ಉತ್ತಮ ಆಟವನ್ನು ಆನಂದಿಸಬೇಕು, ಅಭಿನಂದಿಸಬೇಕು. ಚೆನ್ನಾಗಿ ಆಡುವ ತಂಡ ಗೆಲ್ಲಲಿ ಎಂಬ ಮನೋಭಾವವೂ ಇರಬೇಕು. ಆದರೆ ಬಾಜಿ ಕಟ್ಟುವವನಿಗೆ ಗೆದ್ದ ಕುದುರೆ ಹೊರಗಿನದಾದರೂ ಅದೇ ಪ್ರಿಯವಾಗುತ್ತದೆ.ಜನರಿಗೆ ಇವೆಲ್ಲ ಗೊತ್ತಿಲ್ಲ ಎಂದಲ್ಲ. ಆದರೂ ಅವರು ಕೆಲಸ ಬಿಟ್ಟು ಟಿವಿಯಲ್ಲಿ ಈ ಪಂದ್ಯಗಳನ್ನು ನೋಡುತ್ತಾರೆಂಬುದೇ ಬಹಳ ಆಶ್ಚರ್ಯದ ವಿಷಯ. (ನನಗೂ ಕೂಡ ಈ ಕ್ರಿಕೆಟ್ ಇಷ್ಟವಾದ ಆಟವೇ ಆದರೂ, ಈ ಐಪಿಎಲ್  ಯಾಕೋ ಬೋರು ಹೊಡೆಸುತ್ತಿದೆ.) ಇದು ಅವರ ವೈಯಕ್ತಿಕ ಬೇಕು-ಬೇಡಗಳ ವಿಷಯವಾಗಿರುವುದರಿಂದ ಅದು ತಪ್ಪೆಂದು ಹೇಳುತ್ತಿಲ್ಲ. ಆದರೆ ಇಂಥ ಸಮೂಹಸನ್ನಿಯಾಗಿ ಕಂಡುಬರುವ ಉನ್ಮಾದ ಅಥವಾ ಆವೇಶ, ಆಂದೋಲನದ ರೂಪದಲ್ಲಿ ಅಣ್ಣಾ ಹಜಾರೆ ಅವರ ಹೋರಾಟವನ್ನು ಬೆಂಬಲಿಸುವುದರಲ್ಲೂ ಕಂಡುಬಂದರೆ ಅದು ಇಡೀ ದೇಶಕ್ಕೆ ಕಲ್ಯಾಣಕಾರಿಯಾಗುವುದೆಂಬ ಆಶಾಭಾವನೆ ಅಷ್ಟೇ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry