ಜಯರಾಜನ ಮನೆ ಮೇಲೆ ದಾಳಿ ಮಾಡಿದ ಮೇಲೆ...

7

ಜಯರಾಜನ ಮನೆ ಮೇಲೆ ದಾಳಿ ಮಾಡಿದ ಮೇಲೆ...

Published:
Updated:

ಭಾಗ 140

ಜಯರಾಜನ ಅಟ್ಟಹಾಸ ವಿಪರೀತಕ್ಕೆ ಹೋಗಿದ್ದ ಸಂದರ್ಭ. ರಾಜಕಾರಣಿಗಳು, ಪ್ರತಿಷ್ಠಿತ ವಕೀಲರು ಅವನ ಮನೆ ಮುಂದೆ ನೆರೆದಿರುತ್ತಿದ್ದರು. ಕೆಲವು ಮುಗ್ಧ ಜನರೂ ಅವನು ಸಮಸ್ಯೆ ಬಗೆಹರಿಸುತ್ತಾನೆ ಎಂದುಕೊಂಡು ಅಹವಾಲು ಸಲ್ಲಿಸಲು ಮನೆಬಾಗಿಲಲ್ಲಿ ನಿಲ್ಲುತ್ತಿದ್ದರು. ತನ್ನನ್ನು ತಾನೇ ಅವನು ರಾಬಿನ್‌ಹುಡ್ ಎಂದು ನಂಬಿಸಿಕೊಂಡು ಓಡಾಡುತ್ತಿದ್ದ.ಬೆಂಗಳೂರಿನ ಬಿ.ಟಿ.ಎಸ್ ರಸ್ತೆಯಲ್ಲಿ ಅವನು ದೊಡ್ಡದಾಗಿ ಮನೆ ಕಟ್ಟಿದ. ಟಿ.ಜಯಪ್ರಕಾಶ್ ಆಗ ಡಿಸಿಪಿ  ಆಗಿದ್ದರು. ಎಸ್.ಎನ್.ಎಸ್.ಮೂರ್ತಿಯವರು ಕಮಿಷನರ್ ಆಗಿದ್ದರು. ಜಯರಾಜನ ಮನೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ, ಅಲ್ಲಿ ಶಸ್ತ್ರಾಸ್ತ್ರಗಳು ಇವೆ ಎಂದು ಮಾಹಿತಿ ಬಂತು. ರಶೀದ್ ಕೊಲೆ ಪ್ರಕರಣದ ನಂತರದ ಬೆಳವಣಿಗೆಗಳಿಗೆ ಜಯರಾಜನ ಮನೆಯೇ ಹೇಗೆ ಯೋಜನಾ ಕೇಂದ್ರವಾಗಿತ್ತೆಂಬುದನ್ನು ನಾನು ಹಿಂದೆ ವಿವರವಾಗಿ ಬರೆದಿದ್ದೆ.

 

ರಾಜಕಾರಣಿಗಳು, ವಕೀಲರು ಎಲ್ಲರೂ ಅವನ ಮನೆಯಲ್ಲೇ ಸೇರಿ ಆ ಪ್ರಕರಣದ ವಿಷಯದಲ್ಲಿ ಮುಂದೇನು ಮಾಡಬೇಕು ಎಂದು ಯೋಜನೆ ರೂಪಿಸುತ್ತಿದ್ದರು. ನಮಗೆ ಜಯರಾಜನ ಮನೆಯಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳ ಕುರಿತು ಮಾಹಿತಿ ಬಂದದ್ದು ಅದೇ ಕಾಲದಲ್ಲಿ.ಜಯರಾಜ ತನ್ನದೇ ಪತ್ರಿಕೆ ನಡೆಸುತ್ತಿದ್ದ. ಕೆಲವು ಪೊಲೀಸ್ ಅಧಿಕಾರಿಗಳನ್ನು ತೇಜೋವಧೆ ಮಾಡಲು ಆ ಪತ್ರಿಕೆಯನ್ನೇ ಅವನು ಅಸ್ತ್ರವಾಗಿ ಬಳಸುತ್ತಿದ್ದ.

ಮಾಹಿತಿದಾರರು ಯಾರು ಎಂಬುದನ್ನು ಗುಟ್ಟಾಗಿಡುವುದು ಪೊಲೀಸರ ಧರ್ಮ. ಅಂಥ ಮಾಹಿತಿದಾರರ ವಿಶ್ವಾಸಾರ್ಹತೆ ಉಳಿಸಿಕೊಳ್ಳಲು ಅದು ತುಂಬಾ ಮುಖ್ಯ.

 

ನಾನು ಬೆಂಗಳೂರಿನವನೇ ಆಗಿದ್ದರಿಂದ ಅನೇಕ ಮಾಹಿತಿದಾರರು ನನಗೆ ಸಿಕ್ಕಿದ್ದರು. ರೌಡಿಗಳಲ್ಲಿ ಪರಸ್ಪರ ವೈಷಮ್ಯ ಇರುವವರು, ಗ್ಯಾಂಗ್‌ಗಳಲ್ಲಿ ಮೂಡಿದ ಒಡಕಿನಿಂದ ಬೇಸತ್ತವರು ತಮ್ಮ ವಿರೋಧಿಗಳ ಬಗ್ಗೆ ಮಾಹಿತಿ ಕೊಡುತ್ತಿದ್ದರು. ಹಾಗೆ ಮಾಹಿತಿ ಕೊಟ್ಟವರು ಯಾರೆಂಬುದನ್ನು ಹೇಳದೇ ಇರುವುದು ಧರ್ಮ ಹಾಗೂ ಈ ವೃತ್ತಿಯ ಮರ್ಮ. ಅದನ್ನು ಕೆಲವು ಅಧಿಕಾರಿಗಳು ಕೂಡ ನನಗೆ ಮನದಟ್ಟು ಮಾಡಿಸಿದ್ದರು.

ಜಯರಾಜನ ಬಗ್ಗೆ ಬಲವಾದ ಮಾಹಿತಿ ಸಿಕ್ಕಿದ್ದೇ ಅವನ ಮನೆ ಮೇಲೆ ದಾಳಿ ನಡೆಸಲು ಡಿಸಿಪಿ ಜಯಪ್ರಕಾಶ್ ತೀರ್ಮಾನಿಸಿದರು.

 

ಆಗ ಐ.ವಿ. ಪಾಟೀಲ್ ಎಂಬುವರು ಹಲಸೂರು ಗೇಟ್ ಠಾಣೆಯ ಎ.ಸಿ.ಪಿ ಆಗಿದ್ದರು. ಕೆಲವೇ ಕೆಲವು ಅಧಿಕಾರಿಗಳು ಚರ್ಚೆ ನಡೆಸಿ ಒಂದು ಶುಕ್ರವಾರ ಅವನ ಮನೆ ಮೇಲೆ ದಾಳಿ ಇಡುವುದೆಂದು ತೀರ್ಮಾನಿಸಿದರು.ಸಾಮಾನ್ಯವಾಗಿ ಶುಕ್ರವಾರ ಬೆಳಗ್ಗೆ ಪೆರೇಡ್ ಇರುತ್ತದೆ. ಪೆರೇಡ್ ಆದ ನಂತರ ಪೊಲೀಸ್ ಅಧಿಕಾರಿಗಳು ಹತ್ತಿರದ ಹೋಟೆಲ್‌ನಲ್ಲಿ ತಿಂಡಿ ಕೊಡಿಸಿ ಕೆಲವೊಂದು ಯೋಜನೆಗಳ ಬಗ್ಗೆ ಚರ್ಚೆ ಮಾಡುವ ರೂಢಿ ಇತ್ತು. ಆ ಶುಕ್ರವಾರ ಪಾಟೀಲ್ ತಿಂಡಿ ಕೊಡಿಸಿದ ನಂತರ ಅಲ್ಲಿಯೇ ಜಯರಾಜನ ಮನೆ ಮೇಲೆ ದಾಳಿ ನಡೆಸುವ ತೀರ್ಮಾನ ಪ್ರಕಟಿಸಿದರು. ಆಗ ಮೊಬೈಲ್, ಪೇಜರ್ ಏನೂ ಇರಲಿಲ್ಲ.ಒಬ್ಬೊಬ್ಬ ಅಧಿಕಾರಿಗಳ ನೇತೃತ್ವದಲ್ಲಿ ಜೀಪುಗಳು ಹೊರಟು ಜಯರಾಜನ ಮನೆಯನ್ನು ಸುತ್ತುವರಿಯಬೇಕೆಂಬುದು ನಿರ್ಧಾರ. ಎಲ್ಲರೂ ಜೀಪುಗಳನ್ನು ಹತ್ತಿದ್ದಾಯಿತು. ನಮ್ಮ ನಡುವೆಯೇ ಜಯರಾಜನಿಗೆ ಮಾಹಿತಿ ಕೊಡುವ ಪೊಲೀಸರೂ ಇದ್ದರು. ಅವರೆಲ್ಲರಿಗೆ ಏನೂ ಮಾಡಲಾಗುತ್ತಿಲ್ಲವಲ್ಲ ಎಂಬ ತಳಮಳ. ದಾಳಿಯ ಸಣ್ಣ ಸುಳಿವೂ ಜಯರಾಜನಿಗೆ ಸಿಗಕೂಡದೆಂದು ಎಚ್ಚರಿಕೆ ವಹಿಸಿಯೇ ಅಧಿಕಾರಿಗಳು ಅಂಥ ಎಚ್ಚರಿಕೆಯ ನಿರ್ಧಾರ ತೆಗೆದುಕೊಂಡಿದ್ದರು.

 

ಕೆಲವರಿಗೆ ಜಯರಾಜನ ಮನೆಮೇಲೆ ದಾಳಿ ಮಾಡಿ ಅವನ ಶತ್ರುತ್ವ ಕಟ್ಟಿಕೊಂಡರೆ ಏನು ಗತಿ ಎಂಬ ಆತಂಕ. ಅವರು ಅದೇ ಕಾರಣಕ್ಕೆ ಬೆವರತೊಡಗಿದರು. ಇನ್ನು ಕೆಲವರು ಹೇಗಾದರೂ ಮಾಡಿ ಈ ದಾಳಿ ತಪ್ಪಿಹೋಗಲಿ ಎಂದು ಒಳಗೊಳಗೇ ಹಾರೈಸುವ ಭಾವದಲ್ಲಿದ್ದರು. ನಾವು ಕೆಲವರು ಏನೇ ಆದರೂ ದಾಳಿ ಮಾಡಲೇಬೇಕು ಎಂದು ಪಣ ತೊಟ್ಟಿದ್ದೆವು.ಜಯರಾಜನ ಮನೆ ಮೇಲಿನ ದಾಳಿ ಯಶಸ್ವಿಯಾಯಿತು. ಅವನ ಮನೆಯಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು ವಿವಿಧ ಇಲಾಖೆಗಳಿಗೆ ಒಪ್ಪಿಸಿದ್ದಾಯಿತು. ಅಬಕಾರಿ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ, ಆದಾಯ ತೆರಿಗೆ ಕಾಯ್ದೆ ಹೀಗೆ ವಿವಿಧ ಕಾಯ್ದೆಗಳಡಿಯಲ್ಲಿ ಜರುಗಿಸಬೇಕಾದ ಕ್ರಮಗಳನ್ನು ಜರುಗಿಸಿದ್ದೂ ಆಯಿತು. ಮಾಧ್ಯಮಗಳು ಈ ಯಶಸ್ವಿ ದಾಳಿಯ ಬಗ್ಗೆ ವಿವರವಾಗಿ ಬರೆದವು.

 

ಪೊಲೀಸರು ಜಯರಾಜನ ಮನೆ ಮೇಲೆ ಹಠಾತ್ ದಾಳಿ ನಡೆಸಿದ್ದು ಭೂಗತಲೋಕದಲ್ಲಿ ಸಂಚಲನೆ ಸೃಷ್ಟಿಸಿತು. ಪೊಲೀಸರು ಸುಮ್ಮನೆ ಕೂರುವವರಲ್ಲ ಎಂಬುದು ಅನೇಕರಿಗೆ ಮನವರಿಕೆ ಆಯಿತು. ಕೆಲವರು ಸ್ಥಳಾಂತರಗೊಂಡು ಮುಂದೇನು ಮಾಡಬೇಕು ಎಂದು ಚರ್ಚೆ ನಡೆಸಲು ಕೂಡ ಪ್ರಾರಂಭಿಸಿದರು. ಆರ್ಭಟ ಮಾಡುತ್ತಿದ್ದ ರೌಡಿಗಳು, ಹೆದರಿಕೆ ಹುಟ್ಟಿಸುತ್ತಿದ್ದ ಭೂಗತಲೋಕದ ಅನೇಕರ ಚಟುವಟಿಕೆ ಬಿರುಸು ಕಳೆದುಕೊಂಡಿದ್ದರಿಂದ ಬೆಂಗಳೂರು ಶಾಂತವಾಗತೊಡಗಿತು.ಜಯರಾಜನನ್ನು ದಸ್ತಗಿರಿ ಮಾಡಿದ್ದು, ಹೆಸರಾಂತ ವಕೀಲರು ಅವನ ಪರ ವಾದ ಮಾಡಿದ್ದನ್ನು ಈ ಹಿಂದೆ ನಾನು ಬರೆದಿದ್ದೇನೆ. ಕಾನೂನು ಪ್ರಕಾರ ಅವರು ಜಯರಾಜನನ್ನು ಜಾಮೀನಿನ ಮೇಲೆ ಬಿಡಿಸಿಕೊಂಡರು. ಜಯಪ್ರಕಾಶ್ ಸೇರಿದಂತೆ ಕೆಲವು ಅಧಿಕಾರಿಗಳು ಈ ಪ್ರಕರಣದ ನಂತರ ನನ್ನ ಬೆನ್ನುತಟ್ಟಿದರು. ನಾನು ಹಾಗೂ ಕೆಲವು ಸ್ನೇಹಿತರು ಜಯರಾಜನ ಮನೆ ದಾಳಿ ಮಾಡಿದಾಗ ತೋರಿದ ಧೈರ್ಯವನ್ನು ಶ್ಲಾಘಿಸಿದರು.

 

ಒಬ್ಬ ಯಶಸ್ವಿ ಪೊಲೀಸ್ ಆಗಲು ಅಂಥ ಧೈರ್ಯ ಇರಬೇಕು ಎಂದು ಕಿವಿಮಾತನ್ನೂ ಹೇಳಿದರು. ಅವರ ಮಾತುಗಳಿಂದ ನನಗೆ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡುವ ಹುಮ್ಮಸ್ಸು ಬಂತು.  ಈ ಘಟನೆ ನಡೆದ ಕೆಲವು ದಿನಗಳ ನಂತರ ಕಮಿಷನರ್ ಕಚೇರಿಗೆ ಒಮ್ಮೆ ಹೋಗ್ದ್ದಿದೆ. ಅಲ್ಲಿ ಅರ್ಜಿಗಳನ್ನು ಮತ್ತು ದೂರುಗಳನ್ನು ನೋಡುವ ಸಹಾಯಕರೊಬ್ಬರು ನನ್ನ ಜೊತೆ ಏನೋ ಮುಖ್ಯವಾದ, ಗಂಭೀರವಾದ ವಿಚಾರ ಚರ್ಚಿಸಬೇಕು ಎಂದರು.

 

ಅದರಿಂದ ನನಗೆ ಆಪತ್ತು ಕಾದಿದೆ ಎಂಬ ಧಾಟಿಯಲ್ಲಿ ಏನೇನೋ ಹೇಳಿದರು. ನನಗೆ ಆತಂಕ ಶುರುವಾಯಿತು. ಆಗಿನ್ನೂ ಬೆನ್ನುತಟ್ಟಿಸಿಕೊಂಡು ಬೀಗುತ್ತಿದ್ದ ನನಗೆ ಪ್ರಪಾತವೇ ಎದುರಾದ ಭಾವ. ಸಬ್ ಇನ್ಸ್‌ಪೆಕ್ಟರ್ ಆಗಿ ಉತ್ಸಾಹದಿಂದ ಕೆಲಸ ಮಾಡಬೇಕು ಎಂದುಕೊಂಡಿದ್ದ ನನ್ನ ಮನಸ್ಸಿನಲ್ಲಿ ಆ ಸಹಾಯಕರು ಏನೇನೋ ಹೇಳಿ ಭಯದ ಬೀಜ ಬಿತ್ತಿದರು. ಅದೇನು ವಿಷಯ ಎಂದು ಬಿಡಿಸಿ ಹೇಳುವಂತೆ ಅವರಿಗೆ ದುಂಬಾಲುಬಿದ್ದೆ.ತಾವು ಕುಳಿತುಕೊಳ್ಳುತ್ತಿದ್ದ ಜಾಗಕ್ಕೆ ಕರೆದುಕೊಂಡು ಹೋಗಿ ಒಂದು ಕಡತ ತಂದರು. ದೇಶದ ರಾಷ್ಟ್ರಪತಿ, ರಾಜ್ಯದ ರಾಜ್ಯಪಾಲ, ವಿವಿಧ ಇಲಾಖೆಯ ಅಧಿಕಾರಿಗಳಿಗೆ ಜಯರಾಜ ಅರ್ಜಿಗಳನ್ನು ಬರೆದಿದ್ದ. ಪೊಲೀಸ್ ಇಲಾಖೆಗೆ ಬರೆದಿದ್ದ ಅರ್ಜಿ ಆ ಕಡತದಲ್ಲಿತ್ತು. ತನ್ನ ಮನೆಯ ಮೇಲೆ ದಾಳಿ ನಡೆಸಿ ಅಸಭ್ಯವಾಗಿ ವರ್ತಿಸಿದ್ದೇ ಅಲ್ಲದೆ ತನ್ನನ್ನು ಮುಗಿಸುವ ಹುನ್ನಾರ ಆ ಪೊಲೀಸ್ ದಾಳಿಯಲ್ಲಿತ್ತು ಎಂದು ಜಯರಾಜ ಕೆಲವೇ ಕೆಲವು ಪೊಲೀಸರ ಹೆಸರನ್ನು ಉಲ್ಲೇಖಿಸಿದ್ದ.

 

ಅದರಲ್ಲಿ ರಮೇಶ್‌ಚಂದ್ರ, ಅಶೋಕ್‌ಕುಮಾರ್ ಹಾಗೂ ನನ್ನ ಹೆಸರುಗಳೂ ಇದ್ದವು. ದಾಳಿ ನಡೆಸಿದ ಅಧಿಕಾರಿಗಳ ಹೆಸರುಗಳು ಇರಲಿಲ್ಲ. ಯಾರು ಜಯರಾಜನಿಗೆ ಮಾಹಿತಿ ಒದಗಿಸುತ್ತಿದ್ದರೋ ಅವರ ಹೆಸರುಗಳನ್ನೂ ಬರೆದಿರಲಿಲ್ಲ. ಭೂಗತಲೋಕವನ್ನು ಬುಡಸಮೇತ ಕಿತ್ತೊಗೆಯಬೇಕೇಂದು ಸಂಕಲ್ಪ ಮಾಡಿದ್ದ ನನ್ನಂಥ ಕೆಲವರನ್ನು ಮಾತ್ರ ಅವನು ಗುರಿಯಾಗಿಸಿಕೊಂಡಿದ್ದ. ನಮ್ಮ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಅರ್ಜಿಯಲ್ಲಿ ಅವನು ಬರೆದಿದ್ದ.ಅದನ್ನು ಓದಿ ನನಗೆ ಗಾಬರಿಯಾಯಿತು. ತಡೆಯಲಾಗದೆ ನಾನು ಡಿಸಿಪಿ ಜಯಪ್ರಕಾಶ್ ಬಳಿಗೆ ಹೋದೆ. ಹೀಗೊಂದು ಅರ್ಜಿ ಬಂದಿದೆಯಂತೆ ಅಂತ ಕೇಳಿದೆ. `ಯಾವ ಅರ್ಜಿ? ಅಂಥದ್ದೇನೂ ಬಂದಿಲ್ಲವಲ್ಲ~ ಎಂದು ಮೊದಲು ಪ್ರತಿಕ್ರಿಯಿಸಿದರು. ಆಮೇಲೆ ನಾನು ಸಹಾಯಕ ಹೇಳಿದ ಸಂಗತಿಯನ್ನು ಬಿಚ್ಚಿಟ್ಟೆ. ಅವರಿಗೆ ಸಿಟ್ಟುಬಂತು ನನ್ನ ಕಚೇರಿಯ ಇಂಥ ಮಾಹಿತಿ ನಿಮಗೆ ಹೇಗೆ ಬಂತು~ ಎಂದು ದಬಾಯಿಸಿದರು.

 

ಅಂದು ಆ ಸಹಾಯಕ ಇರಲಿಲ್ಲ. ಇದ್ದಿದ್ದರೆ ಅವನಿಗೆ ಬೈಗುಳದ ಸುರಿಮಳೆಯೇ ಆಗುತ್ತಿತ್ತು. `ನಿಮ್ಮ ವಿರುದ್ಧ ದೂರು ಕೊಟ್ಟರೆ ನಾನು ಸುಮ್ಮನಿರುತ್ತೇನೆಯೇ? ದಾಳಿ ನಡೆಸಲು ಹೇಳಿದ ಅಧಿಕಾರಿಗಳಲ್ಲಿ ನಾನೂ ಒಬ್ಬ. ನಿಮ್ಮ ವಿರುದ್ಧ ದೂರು ಕೊಟ್ಟ ಮಾತ್ರಕ್ಕೆ ನಾವು ಸುಮ್ಮನಾಗುತ್ತೇವೆ ಎಂದುಕೊಳ್ಳಬೇಡಿ. ಅದಕ್ಕೂ ನಾನೇ ಉತ್ತರ ಕೊಟ್ಟಿದ್ದೇನೆ.ನಿಮ್ಮಂಥವರೇ ಧೈರ್ಯಗೆಟ್ಟರೆ ನಗರವನ್ನು ಕಾಯುವವರಾರು? ಕುದುರೆಗೆ ಅದರ ಲಾಳವೂ ತುಂಬಾ ಮುಖ್ಯ. ಅದು ಸರಿಯಿದ್ದರಷ್ಟೆ ಕುದುರೆ ಹೆಚ್ಚು ವೇಗವಾಗಿ ಓಡುವುದು. ಕುದುರೆಯ ಲಾಳ ಸರಿಯಿಲ್ಲದಿದ್ದರೆ ಸೈನಿಕ ಸಿಕ್ಕಿಹಾಕಿಕೊಳ್ಳುವ ಅಪಾಯವಿರುತ್ತದೆ. ದಾಳಿ ನಾವೇ ನಡೆಸಿದರೂ ಸುಸಜ್ಜಿತ ಕುದುರೆಗಳನ್ನು ನಡೆಸುವ ನಿಮ್ಮಂಥ ಯೋಧರು ಮುಖ್ಯ.

 

ಜಯರಾಜನ ಅರ್ಜಿಗೆ ನಾನು ಉತ್ತರ ಕೊಟ್ಟುಕೊಳ್ಳುತ್ತೇನೆ. ಈ ವಿಚಾರ ಹೇಳಿ ನಿಮ್ಮ ಆತ್ಮಬಲವನ್ನು ಕಡಿಮೆ ಮಾಡಬಾರದು ಎಂದುಕೊಂಡು ನಾನು ಸುಮ್ಮನಿದ್ದೆ. ಅವನು ಸುಮ್ಮನಿರದೆ ನಿಮ್ಮಲ್ಲಿ ಆ ವಿಷಯ ಹೇಳಿ ಆತಂಕ ಹುಟ್ಟಿಸಿದ. ಮೊದಲು ಅವನನ್ನು ಅಮಾನತು ಮಾಡುತ್ತೇನೆ~ ಎಂದು ಕೋಪದ ದನಿಯಲ್ಲೇ ಹೇಳಿದರು. ನಮ್ಮ ರಕ್ಷಣೆಗೆ ದಕ್ಷ ಅಧಿಕಾರಿ ಇದ್ದಾರಲ್ಲ ಎಂದುಕೊಂಡು ನಾನು ನಿರಾಳವಾದೆ.

ಮುಂದಿನ ವಾರ: ವೃತ್ತಿ ಮಾತ್ಸರ್ಯದ ಇನ್ನಷ್ಟು ಮುಖಗಳು.

ಶಿವರಾಂ ಅವರ ಮೊಬೈಲ್ ಸಂಖ್ಯೆ:9448313066

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry