ಜಾಕ್ ಕಾಲಿಸ್ ಆಟದ ಮೌಲ್ಯಮಾಪನ

7

ಜಾಕ್ ಕಾಲಿಸ್ ಆಟದ ಮೌಲ್ಯಮಾಪನ

ರಾಮಚಂದ್ರ ಗುಹಾ
Published:
Updated:

1997ರಲ್ಲಿ ದಕ್ಷಿಣ ಆಫ್ರಿಕಾಗೆ ಮೊದಲ ಸಲ ಪ್ರವಾಸ ಹೋಗಿದ್ದೆ. ಕೆಲವು ಸ್ನೇಹಿತರ ಜೊತೆ ಕೇಪ್‌ಟೌನ್‌ನಿಂದ ಪೋರ್ಟ್ ಎಲೆಜಬೆತ್ ಕಡೆಗೆ ಪ್ರಯಾಣ ಬೆಳೆಸಿದ್ದೆವು. ಗಾರ್ಡನ್ ಮಾರ್ಗದಲ್ಲಿ ಕಣ್ಣಿಗೆ ತಂಪು ನೀಡಿದ ಪಯಣ ಅದು. ನಮ್ಮ ಗೈಡ್ ಕೂಡ ಆಗಿದ್ದ ಕಾರಿನ ಚಾಲಕ ನಾವು ಒಪ್ಪಿದರೆ ನೂರಾರು ಕಿ.ಮೀ.ನಷ್ಟು ದೂರದಲ್ಲಿ ಇದ್ದ ಆಫ್ರಿಕಾದ ದಕ್ಷಿಣ ಭಾಗದ ತುಟ್ಟತುದಿ ಕೇಪ್ ಅಗುಲ್ಹಾಸ್‌ಗೆ ಕರೆದುಕೊಂಡು ಹೋಗುವುದಾಗಿ ಹೇಳಿದ.

ಇದು (ಕೆಲವರು ತಪ್ಪಾಗಿ ಕೇಪ್ ಹೋಪ್ ಎಂದು ಭಾವಿಸುತ್ತಾರೆ. ಈ ಸ್ಥಳ ಅದಲ್ಲ) ಹಿಂದೂ ಮಹಾಸಾಗರ ಹಾಗೂ ಅಟ್ಲಾಂಟಿಕ್ ಸಾಗರಗಳು ಸಂಧಿಸುವ ಸ್ಥಳ .ನಾವು ಒಪ್ಪಿದ್ದೇ ಚಾಲಕ ಹೆದ್ದಾರಿಯಿಂದ ಕಾಡುದಾರಿಗೆ ಕಾರನ್ನು ತಿರುಗಿಸಿದ. ಮಾರ್ಗಮಧ್ಯೆ ಮನಸ್ಸಿಗೆ ಮುದನೀಡುವಂಥ ಪ್ರಕೃತಿ ಸೌಂದರ್ಯ.

ಆಮೇಲೆ ಕಂಡದ್ದು ಸಾಗರ. ನೀಲಿ ಬಣ್ಣದ ನೀರು. ಕಡಲತಟದಲ್ಲಿ ನಾವು ಮೌನವಾಗಿ ಸಾಗರ ನೋಡುತ್ತಾ ನಿಂತೆವು. ಹಡಗೊಂದು ನಮ್ಮತ್ತ ಬರುವಂತೆ ಕಂಡಿತು. ಆಮೇಲೆ ಅದು ಬಂದಷ್ಟೇ ವೇಗವಾಗಿ ಇನ್ನೊಂದು ದಿಕ್ಕಿನತ್ತ ತಿರುಗಿ, ಮಾಯವಾಯಿತು.ಕಾರ್ ಹತ್ತುವಾಗ, `ದಿ ಸದರ್ನ್‌ಮೋಸ್ಟ್ ಕೆಫೆ ಇನ್ ಆಫ್ರಿಕಾ' (ಆಫ್ರಿಕಾದ ದಕ್ಷಿಣ ದಿಕ್ಕಿನ ಅಂಚಿನ ಕೆಫೆ) ಎಂಬ ಒಂದು ಫಲಕ ಕಾಣಿಸಿತು. ತನ್ನದೇ ವಿಶೇಷತೆಯ ಸ್ಥಳ ಎಂದೂ ಆ ಬೋರ್ಡ್‌ನಲ್ಲಿ ಬರೆದಿದ್ದರಿಂದ ಥಟ್ಟನೆ ನಮ್ಮ ಗಮನ ಸೆಳೆಯಿತು. ಗಂಟೆಗಟ್ಟಲೆ ಪ್ರಯಾಣ ಮಾಡಿ ದಣಿದಿದ್ದ ನಮಗೆ ತಿಂದು, ಕುಡಿಯಲು ಏನಾದರೂ ಬೇಕಿತ್ತು. ನಾವಿದ್ದ ಕಾರ್ ಕೆಫೆ ತಲುಪಿತು.

ದಷ್ಟಪುಷ್ಟವಾಗಿದ್ದ ಮೂವರು ಪುರುಷರು ಮುಖದ ತುಂಬಾ ನಗು ತುಳುಕಿಸುತ್ತಾ ಬಂದರು. ರಸ್ತೆ ಮೇಲೆ ನಡೆದು ಬರುತ್ತಿದ್ದ ಅವರ ದೇಹ ತುಂಬಾ ಅಗಲವಿತ್ತು. ಮೈಗಂಟಿದ ಟೀ-ಶರ್ಟ್‌ನಿಂದ ಅವರ ದೇಹದ ಗಟ್ಟಿ ಸ್ನಾಯುಗಳ ಆಕಾರ ಸ್ಪಷ್ಟವಾಗಿ ಕಾಣುತ್ತಿತ್ತು. ಹೊಂಬಣ್ಣದಿಂದ ಕಂಗೊಳಿಸುತ್ತಿದ್ದ ಅವರು ಶಾರ್ಟ್ಸ್ ತೊಟ್ಟಿದ್ದರು. ಮುಖದ ಮೇಲೆ ಕಾಣುತ್ತಿದ್ದ ನಗುವಿನಲ್ಲಿ ಆಗಷ್ಟೇ ಹೊಟ್ಟೆತುಂಬಾ ರುಚಿಕಟ್ಟಾದ ಊಟ ಹೊಡೆದ ಭಾವ ಬೆರೆತಿತ್ತು.ಆದರೆ ಅಲ್ಲಿಗೆ ಹೋದಮೇಲೆ ನಮ್ಮ ಚಾಲಕ ಕಮ್ ಗೈಡ್ ಮಾತ್ರ ಹೊಟ್ಟೆತುಂಬಾ ಊಟ ಮಾಡಲು ಸಾಧ್ಯವಾಗಿದ್ದು. ಉಳಿದ ನಾವೆಲ್ಲಾ ಸಸ್ಯಾಹಾರಿಗಳು. ದಕ್ಷಿಣ ಆಫ್ರಿಕಾದಲ್ಲಿ ದನ, ಹಂದಿ, ಎಮ್ಮೆ ಮಾಂಸದ ಖಾದ್ಯಗಳಿಗೆ ಬೇಡಿಕೆ. ಸಸ್ಯಾಹಾರಿಗಳಿಗೆ ಅಲ್ಲಿ ಆಹಾರದ ಆಯ್ಕೆ ಕಡಿಮೆ. ನಮ್ಮಂಥ ಮದ್ರಾಸಿ ಶಾಖಾಹಾರಿಗಳಿಗೆ ಬ್ರೆಡ್, ಚಿಪ್ಸ್, ಕೋಲ್ಡ್ ಕೋಕ್ ಅಷ್ಟೇ ಗತಿ.ಜಾಕ್ ಕಾಲಿಸ್ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದಾಗಲೆಲ್ಲಾ ಕೇಪ್ ಅಗುಲ್ಹಾಸ್‌ನ ಆ ನಮ್ಮ ಪ್ರವಾಸ ನೆನಪಾಗುತ್ತದೆ. ಅಲ್ಲಿನ ಕೆಫೆಯ ಹೊರಗೆ ಕಂಡ ಮೂವರು ಪುರುಷರಂತೆಯೇ ಕಾಲಿಸ್. ದೊಡ್ಡ ದೇಹ, ಮುಖದಲ್ಲಿ ಅವರಿಗಿದ್ದಂಥದ್ದೇ ನಗು. ಮೌನದಿಂದ ತನ್ನ ಪಾಡಿಗೆ ತಾನು ಆಡುವ ಕಾಲಿಸ್ ಎಂದೂ ಎದುರಾಳಿಯನ್ನು ಕೆಣಕುವುದಿಲ್ಲ. ಅಂಪೈರ್ ತೀರ್ಪನ್ನು ಪ್ರಶ್ನಿಸುವುದಿಲ್ಲ. ಸಹ ಆಟಗಾರರ ಮೇಲೆ ಹರಿಹಾಯುವುದಿಲ್ಲ. ಈಗಿನ ಕ್ರಿಕೆಟ್ ಶ್ರೇಷ್ಠರಲ್ಲಿ ಕಾಲಿಸ್ ಒಬ್ಬರಲ್ಲ ಎಂದು ವಾದಿಸಬಹುದು. ಆದರೆ ಸಜ್ಜನರ ಸಾಲಿನಿಂದ ಅವರನ್ನು ಹೊರಗಿಡುವುದು ಸಾಧ್ಯವೇ ಇಲ್ಲ.ತಮ್ಮ ಪುಸ್ತಕ `ಮಾಸ್ಟರ್ಸ್‌ ಆಫ್ ಕ್ರಿಕೆಟ್'ನಲ್ಲಿ ಜಾಕ್ ಫಿಂಗಲ್‌ಟನ್ ಬರೆದಿದ್ದಾರೆ: “ನಾನು ಎಷ್ಟು ಕಾಲ ಬದುಕುತ್ತೇನೋ ಅಷ್ಟೂ ರಾಷ್ಟ್ರಪ್ರಜ್ಞೆ ಕಡಿಮೆಯಾಗುತ್ತದೆ. ಪಂದ್ಯದ ಫಲಿತಾಂಶ ಆಸಕ್ತಿಕರವೇನೋ ಹೌದು. ಆದರೆ ಕಾಲದ ಮಾನದಂಡದಲ್ಲಿ ಎಂಥ ಅದ್ಭುತ ಕ್ಷಣವೂ ಮುಖ್ಯವಲ್ಲ. ನಿರ್ದಿಷ್ಟ ಸ್ಪರ್ಧೆಯೊಂದು ಸವಾಲೊಡ್ಡಬೇಕು. ಅದನ್ನು ಸ್ವೀಕರಿಸಿ ಗೆಲ್ಲಬೇಕು.

ಅದೇ ಮುಖ್ಯ. ಅದರಲ್ಲೂ ಕ್ಲಾಸಿಕಲ್ ತಂತ್ರಗಳ ಮೂಲಕ ಬ್ಯಾಟಿಂಗ್ ಮಾಡಿ ಅಥವಾ ಪಂದ್ಯದ ಘನತೆ ಹೆಚ್ಚಿಸುವಂತೆ ಬೌಲಿಂಗ್ ಮಾಡಿ ಗೆಲ್ಲಬೇಕು. ಅದನ್ನು ಕಂಡು ವರ್ಷಗಳ ಕಾಲ ಪ್ರೇಕ್ಷಕ, `ನಾನು ಅದ್ಭುತ ಆಟ ನೋಡಿದೆ' ಎಂದು ಹೇಳುತ್ತಿರಬೇಕು”.ನಾನೊಬ್ಬ ಹಿಂದು. ಸಣ್ಣವನಿದ್ದಾಗ ನನ್ನ ದೇವರುಗಳು ಫರಂಗಿಗಳು ಹಾಗೂ ದೇಸಿಗಳಾಗಿದ್ದರು. ಕ್ರಿಕೆಟ್ ವೀಕ್ಷಕನಾಗಿ ನನಗಿರುವ ಕೆಲವೇ ಕೆಲವು ಕೊರಗುಗಳಲ್ಲಿ ದಕ್ಷಿಣ ಆಫ್ರಿಕಾ ತಂಡದ ಟೆಸ್ಟ್ ಪಂದ್ಯವನ್ನು ಕ್ರೀಡಾಂಗಣದಲ್ಲಿ ಕೂತು ಇಡಿಯಾಗಿ ನೋಡಲು ಇನ್ನೂ ಆಗದಿರುವುದು ಕೂಡ ಒಂದು.

ವಸೀಂ, ವಕಾರ್, ಇಮ್ರಾನ್, ಮಿಯಾಂದಾದ್, ಇಂಜಮಾಮ್; ಲಾಯ್ಡ, ಕಾಲಿಚರಣ್, ರಿಚರ್ಡ್ಸ್, ಗ್ರೀನಿಜ್, ರಾಬರ್ಟ್ಸ್, ಹೋಲ್ಡಿಂಗ್, ಮಾರ್ಷಲ್, ಲಾರಾ; ಬಾಥಮ್, ನಾಟ್, ಗೂಚ್; ಪಾಂಟಿಂಗ್, ವಾರ್ನ್, ಸ್ಟೀವ್ ವಾ, ಬಾರ್ಡರ್, ಮೆಕ್‌ಗ್ರಾ, ಗಿಲ್‌ಕ್ರಿಸ್ಟ್; ಮಾರ್ಟಿನ್ ಕ್ರೋ; ಆಂಡಿ ಫ್ಲವರ್ ಹೀಗೆ ಆಧುನಿಕ ಕ್ರಿಕೆಟ್‌ನ ಅನೇಕ ಘಟಾನುಘಟಿಗಳ ಆಟವನ್ನು ನಾನು ಕ್ರೀಡಾಂಗಣದಲ್ಲಿ ನೋಡಿದ್ದೇನೆ.

ಆದರೆ ಅಲನ್ ಡೊನಾಲ್ಡ್ ಹಾಗೂ ಜಾಕ್ ಕಾಲಿಸ್ ಬೌಲಿಂಗ್ ಅಥವಾ ಬ್ಯಾಟಿಂಗ್ ನೋಡಲು ಆಗಿಲ್ಲ. ಕ್ಯಾಮೆರಾಮನ್‌ಗಳ ಅದ್ಭುತವಾದ ಕೆಲಸದಿಂದಾಗಿ ಅವರ ಆಟವನ್ನು ಕುಳಿತಲ್ಲಿಯೇ ನೋಡುವ ಭಾಗ್ಯ ನನ್ನದಾಗಿದೆಯಷ್ಟೆ.ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಾಗ ಕಾಲಿಸ್ ತಾತ್ವಿಕವಾಗಿ ಆಫ್‌ಸೈಡ್ ಆಟಗಾರ. ಮೊದಲ ಏಕದಿನ ಪಂದ್ಯಗಳ ಸರಣಿಯ ಒಂದು ಪಂದ್ಯ ಇನ್ನೂ ನೆನಪಿದೆ. ಕಾಲಿಸ್ ಆಡಲು ಬಂದಾಗ ನಾಲ್ಕೈದು ವಿಕೆಟ್‌ಗಳು ಹೋಗಿದ್ದವು. ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲ್ಲಲು ಎಂಟು ಓವರ್‌ಗಳಲ್ಲಿ ಸುಮಾರು ನಲವತ್ತು ರನ್‌ಗಳು ಬೇಕಿದ್ದವು.

ಪಾಯಿಂಟ್ ಫೀಲ್ಡರನ್ನು ವಂಚಿಸುವಂಥ ಬ್ಯಾಕ್‌ಫುಟ್ ಡ್ರೈವ್‌ಗಳನ್ನು ಒಂದಾದ ಮೇಲೆ ಒಂದರಂತೆ ಮಾಡಿದ ಕಾಲಿಸ್ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಕೆಲವು ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಅವರು ಇನ್ನೂ ಆಕ್ರಮಣಕಾರಿಯಾಗಿ ಆಡಿದ್ದರು.

ಬಾಂಗ್ಲಾದೇಶದಲ್ಲಿ ನಡೆದ ಟೂರ್ನಿ ಅದು. ಹಂದಿ ಮಾಂಸ ತಿಂದು ಪೊಗದಸ್ತಾಗಿ ಸ್ನಾಯುಗಳನ್ನು ಬೆಳೆಸಿಕೊಂಡಿದ್ದ ಕಾಲಿಸ್, ಮುತ್ತಯ್ಯ ಮುರಳೀಧರನ್ ಮಾಡಿದ ಒಂದು ಓವರ್‌ನ ಐದು ಎಸೆತಗಳನ್ನು ಮಿಡ್‌ವಿಕೆಟ್ ಕಡೆಗೆ ಸಿಕ್ಸರ್‌ಗಳಿಗೆ ಅಟ್ಟಿದ ನೆನಪು.ಇತ್ತೀಚಿನ ವರ್ಷಗಳಲ್ಲಿ ಪಾಯಿಂಟ್ ಕಡೆಗೆ ಹಾಗೂ ಲೆಗ್‌ಸೈಡ್‌ನತ್ತ ಮೊದಲಿನಷ್ಟು ಅವರು ಚೆಂಡನ್ನು ಹೊಡೆಯುತ್ತಿಲ್ಲ. ಆರಂಭದಲ್ಲಿ ಇನಿಂಗ್ಸ್ ಕಟ್ಟುವ ಹೊಣೆಗಾರಿಕೆ ಅವರ ಮೇಲಿರುವುದರಿಂದ ಲೆಗ್‌ಗ್ಲಾನ್ಸ್‌ಗಳು, ಆಫ್‌ಡ್ರೈವ್‌ಗಳನ್ನು ಹೆಚ್ಚು ನೆಚ್ಚಿಕೊಳ್ಳುತ್ತಿದ್ದಾರೆ. ಅವರೀಗ ಹೊಣೆಯರಿತ, ಸಮೃದ್ಧ ಫಲ ಕಾಣುತ್ತಿರುವ ಬ್ಯಾಟ್ಸ್‌ಮನ್. ಟೆಸ್ಟ್ ಕ್ರಿಕೆಟ್‌ನಲ್ಲಿ ತೆಂಡೂಲ್ಕರ್ ಹೆಸರಲ್ಲಿ ಇರುವ ಅತಿ ಹೆಚ್ಚು ಶತಕದ ದಾಖಲೆಯನ್ನು ದಾಟಬಲ್ಲ ಸದ್ಯದ ಏಕೈಕ ಬ್ಯಾಟ್ಸ್‌ಮನ್ ಅವರು.ಮನೆಯಲ್ಲಿ ಕ್ರಿಕೆಟ್ ನೋಡುವಾಗ ನನ್ನ ಮಗನೂ ಜೊತೆಯಲ್ಲಿದ್ದರೆ, ಕಾಲಿಸ್ ಆಡಲು ಬಂದಾಗ ನಮ್ಮಿಬ್ಬರಲ್ಲಿ ಒಬ್ಬರು: `ಇದೋ ಎಂವಿಪಿ ಬಂದ' ಎನ್ನುತ್ತೇವೆ. ಎಂವಿಪಿ ಎಂದರೆ, `ಮೋಸ್ಟ್ ವ್ಯಾಲ್ಯುಬಲ್ ಪ್ಲೇಯರ್' (ಅತಿ ಮೌಲ್ಯಯುತ ಆಟಗಾರ). ಬೇಸ್‌ಬಾಲ್ ಆಟದಲ್ಲಿ ಚೆನ್ನಾಗಿ ಆಡುವವರನ್ನು ಹಾಗೆ ಕರೆಯುತ್ತಾರೆ. ಆ ಗುಣವಿಶೇಷಣವನ್ನು ನಾವು ಕಾಲಿಸ್‌ಗೆ ಇಟ್ಟಿದ್ದೇವೆ.

ಗ್ಯಾರಿ ಸೋಬರ್ಸ್‌ಗೂ ಈ ಹೆಸರು ಅನ್ವಯವಾಗುತ್ತಿತ್ತು. ಕಳೆದ ಹತ್ತು ವರ್ಷಗಳಿಂದ ಮೊನಚು ಉಳಿಸಿಕೊಂಡಿರುವ ಮೂರ‌್ನಾಲ್ಕು ಬ್ಯಾಟ್ಸ್‌ಮನ್‌ಗಳಲ್ಲಿ ಕ್ಯಾಲಿಸ್ ಕೂಡ ಒಬ್ಬರು. ಟೆಸ್ಟ್ ಕ್ರಿಕೆಟ್‌ನಲ್ಲಿ ಸುಮಾರು 13,000 ರನ್ ಗಳಿಸಿರುವ ಅವರ ಖಾತೆಯಲ್ಲೆಗ 40 ಶತಕಗಳಿವೆ. ಅದಷ್ಟೇ ಅಲ್ಲ, ಈ ಅಂಕಣ ಬರೆಯುವ ಹೊತ್ತಿಗೆ 282 ವಿಕೆಟ್‌ಗಳು ಹಾಗೂ 192 ಕ್ಯಾಚ್‌ಗಳು ಕೂಡ ಅವರ ವೈಯಕ್ತಿಕ ವಿವರದ ಪಟ್ಟಿಯಲ್ಲಿವೆ.

ಜಾಕ್ ಹೆನ್ರಿ ಕಾಲಿಸ್ ಪ್ರಶ್ನಾತೀತವಾಗಿ ಇಂದಿನ ವಿಶ್ವ ಕ್ರಿಕೆಟ್‌ನ ಅತಿ ಮೌಲ್ಯಯುತ ಆಟಗಾರ.

ಕ್ರಿಕೆಟ್ ವೃತ್ತಿ ಆರಂಭಿಸಿದಾಗ ಕಾಲಿಸ್ ಚೆಂಡನ್ನು ಎರಡೂ ದಿಕ್ಕಿಗೆ ಸ್ವಿಂಗ್ ಮಾಡಬಲ್ಲವರಾಗಿದ್ದರು. ಇಂಗ್ಲೆಂಡ್ ವಿರುದ್ಧದ ಸರಣಿಯೊಂದು ನನಗಿನ್ನೂ ನೆನಪಿದೆ. ಮೊದಲು ಪಡೆದ ಹೊಸ ಚೆಂಡಿನಲ್ಲಿ ಅಲನ್ ಡೊನಾಲ್ಡ್ ಜೊತೆ ಬೌಲಿಂಗ್ ಮಾಡುವ ಅವಕಾಶ ಆಗ ಕಾಲಿಸ್‌ಗೆ ಸಿಕ್ಕಿತು.

ಒಂದೆರಡು ವಿಕೆಟ್‌ಗಳನ್ನೂ ಅವರು ಪಡೆದಿದ್ದರು. ವಯಸ್ಸಾದಂತೆ ಅವರ ಬೌಲಿಂಗ್‌ನ ವೇಗ ಕಡಿಮೆಯಾಯಿತು. ಚೆಂಡನ್ನು ಕೊನೆಯ ಕ್ಷಣದಲ್ಲಿ ಸ್ವಿಂಗ್ ಮಾಡಬಲ್ಲ ಚಾಕಚಕ್ಯತೆಯೂ ಈಗ ಅವರಲ್ಲಿ ಇಲ್ಲ. ಆದರೂ ಅವರ ಬೌಲಿಂಗ್ ಪರಿಣಾಮಕಾರಿಯೇ ಇದೆ. ರನ್‌ಗಳನ್ನು ನಿಯಂತ್ರಿಸುವ ಮಾಂತ್ರಿಕರಾದ ಅವರು ಜೊತೆಯಾಟವನ್ನು ಮುರಿಯಲೂ ಬಲ್ಲರು. ಕಾಲಿಸ್ ಒಬ್ಬ ಅದ್ಭುತ ಫೀಲ್ಡರ್. ಸಾಮಾನ್ಯವಾಗಿ ಎರಡನೇ ಸ್ಲಿಪ್‌ನಲ್ಲಿ ಅವರು ಫೀಲ್ಡಿಂಗ್ ಮಾಡುತ್ತಾರೆ. ಬ್ಯಾಟ್‌ನ ಅಂಚಿಗೆ ತಾಕಿ ಹೊಮ್ಮುವ ಚೆಂಡು ಕ್ಷಣಾರ್ಧದಲ್ಲೇ ಹತ್ತಿರ ಬರುವುದರಿಂದ ಹಿಡಿಯಲು ಚುರುಕಾಗಿರಬೇಕು.

ಅದರಲ್ಲೂ ಡೊನಾಲ್ಡ್, ಎಂಟಿನಿ, ಸ್ಟೇನ್ ತರಹದ ವೇಗದ ಬೌಲರ್‌ಗಳ ಎಸೆತಗಳು ಬ್ಯಾಟ್‌ನ ಅಂಚಿಗೆ ತಾಕಿ ಬಂದರಂತೂ ಹಿಡಿಯುವುದು ಇನ್ನೂ ಕಷ್ಟ. ನಿಂತ ಸ್ಥಳದಲ್ಲೇ ಸ್ವಲ್ಪ ಹಿಂದಕ್ಕೆ ಬಾಗುತ್ತಾ, ಮೊದಲೇ ನಗು ತುಂಬಿದ ಮುಖವನ್ನು ಮೊರದಗಲ ಮಾಡಿಕೊಂಡು ಅವರು ಸ್ಲಿಪ್‌ನಲ್ಲಿ ಕ್ಯಾಚ್ ಹಿಡಿದ ಅದೆಷ್ಟು ಕ್ಷಣಗಳನ್ನು ನಾವು, ನೀವು ನೋಡಿಲ್ಲ. ಗುಂಡಗಿನ ಬಿಳಿ ಟೋಪಿ ಅವರ ತಲೆಮೇಲೆ ಸದಾ ಇರುತ್ತದೆ.1999ರಲ್ಲಿ ದಕ್ಷಿಣ ಆಫ್ರಿಕಾ ನನ್ನ ನೆಲದಲ್ಲಿ ಟೆಸ್ಟ್ ಪಂದ್ಯ ಆಡಿತ್ತು. ಆ ದಿನ ನಾನು ಕೆಲಸಕ್ಕೆ ಹೋಗಿದ್ದೆ. ಇತ್ತೀಚಿನ ವರ್ಷಗಳಲ್ಲಿ ಜಾಕ್ ಕಾಲಿಸ್ ಒಂದೆರಡು ಋತುಗಳಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್‌ ಪರವಾಗಿಯೂ ಆಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ರಸ್ತೆಯಲ್ಲಿ ಕೆಳನಡೆದು ಹೋದರೆ ನನ್ನ ಮನೆ. ಅಷ್ಟು ಹತ್ತಿರದಲ್ಲಿದ್ದರೂ 20-20 ಕ್ರಿಕೆಟ್ ನೋಡಲು ಯಾಕೋ ನನಗೆ ಮನಸ್ಸಿಲ್ಲ. ಅದಕ್ಕೇ ಅಲ್ಲೂ ಕಾಲಿಸ್ ಆಡಿದ್ದನ್ನು ನಾನು ಪ್ರತ್ಯಕ್ಷವಾಗಿ ನೋಡಲೇ ಇಲ್ಲ.ಕಳೆದ ಎರಡು ದಶಕಗಳಿಂದ ತೆಂಡೂಲ್ಕರ್ ಆಟ ಕಂಡಿದ್ದೇನೆ. ಈಗ ಅವರಿಗೆ ವಯಸ್ಸಾಗಿದೆ. ಟೆಸ್ಟ್ ಅಥವಾ ಏಕದಿನ ಪಂದ್ಯಕ್ಕೆ ಅವರು ಕೆಲವೇ ನಿಮಿಷಗಳಲ್ಲಿ ಒಗ್ಗಿಕೊಳ್ಳುವ ರೀತಿ, ವಿಶೇಷವೂ ಅದ್ವಿತೀಯವೂ ಆದ ಶೈಲಿ, ದೇಶಕ್ಕಾಗಿ ಆಡಬೇಕೆಂಬ ಧೋರಣೆ ಎಲ್ಲದರಿಂದ ಈಗಲೂ ಅವರು ಸಮಕಾಲೀನ ಕ್ರಿಕೆಟಿಗರಲ್ಲಿ ಶ್ರೇಷ್ಠರು. ಆದರೆ ಕಾಲಿಸ್ ನನ್ನ ಪ್ರಕಾರ ಸದ್ಯದ ಮೌಲ್ಯಯುತ ಆಟಗಾರ.ಡಾನ್ ಬ್ರಾಡ್ಮನ್ ಇದ್ದಾಗ ವಿಲ್ಲಿ ಹ್ಯಾಮಂಡ್ ಇದ್ದರು. ತೆಂಡೂಲ್ಕರ್ ಇರುವಾಗ ಕಾಲಿಸ್ ಇದ್ದಾರೆ. ಹ್ಯಾಮಂಡ್ ಕೂಡ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಬಲ್ಲವರಾಗಿದ್ದರು. ಆ ಕಾಲದಲ್ಲಿ ಬ್ರಾಡ್ಮನ್‌ಗಿಂತ ಅವರು ಮೌಲ್ಯಯುತ ಆಟಗಾರ. ಬ್ಯಾಟ್ಸ್‌ಮನ್ ಅಷ್ಟೇ ಅಲ್ಲದೆ ಸ್ಲಿಪ್ ಫೀಲ್ಡರ್ ಆಗಿ ಹಾಗೂ ಮಧ್ಯಮ ವೇಗದ ಬೌಲರ್ ಆಗಿ ಅವರು ಆಡುತ್ತಿದ್ದರು.ಹ್ಯಾಮಂಡ್‌ಗೆ ಇದ್ದ ಕ್ರಿಕೆಟ್ ವರದಾನಗಳೆಲ್ಲವೂ ಕಾಲಿಸ್‌ಗೆ ಇವೆ. ಅವರಿಗಿಂತ ಇವರು ಉತ್ತಮ ಎನ್ನಲೂ ಕಾರಣಗಳಿವೆ. ಈ ವಯಸ್ಸಿನಲ್ಲೂ ನನಗೆ ಬದುಕಿನಲ್ಲಿ, ಅದರಲ್ಲೂ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಕೆಲವು ಬಯಕೆಗಳಿವೆ. ಅವುಗಳಲ್ಲಿ ಒಂದು- ಬೆಂಗಳೂರಿನಲ್ಲಿ ಜಾಕ್ ಕಾಲಿಸ್ ಟೆಸ್ಟ್ ಪಂದ್ಯ ಆಡುವುದನ್ನು ಒಮ್ಮೆಯಾದರೂ ನೋಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry