ಜಾತ್ಯತೀತ ಮೌಲ್ಯಗಳ ಹಾದಿಯಲ್ಲಿ...

7

ಜಾತ್ಯತೀತ ಮೌಲ್ಯಗಳ ಹಾದಿಯಲ್ಲಿ...

ಕುಲದೀಪ ನಯ್ಯರ್
Published:
Updated:
ಜಾತ್ಯತೀತ ಮೌಲ್ಯಗಳ ಹಾದಿಯಲ್ಲಿ...

ಮುಸ್ಲಿಮರ ಕುರಿತು ಮಾತನಾಡುವಾಗ ಭಾರತೀಯ ಜನತಾ ಪಕ್ಷದವರಲ್ಲಿ ಹಿಂದೆ ಎದ್ದು ಕಾಣುತ್ತಿದ್ದಂತಹ ಭಾವೋನ್ಮಾದ ಈಚೆಗೆ ಕಂಡು ಬರುತ್ತಿಲ್ಲ ಎಂಬುದಂತೂ ನಿಜ. ಇದಕ್ಕೆ ಕಾರಣ ಇಲ್ಲದಿಲ್ಲ. 2014ರ ಸಾರ್ವತ್ರಿಕ ಚುನಾವಣೆಯ ನಂತರದ ರಾಜಕೀಯ ಆಗುಹೋಗುಗಳ ಬಗ್ಗೆ ಈಗಾಗಲೇ ಬಿಜೆಪಿ ಆಲೋಚನೆ ನಡೆಸುತ್ತಿರುವುದು ಅಷ್ಟೇ ಸತ್ಯ. ಆಗ ಬಹುಮತ ಪಡೆಯಲು ಜಾತ್ಯತೀತ ಪಕ್ಷಗಳ ಬೆಂಬಲ ಗಳಿಸಲಿಕ್ಕಾಗಿ ಈಗಿನಿಂದಲೇ ಈ ತೆರನಾದ ತಯಾರಿ ನಡೆದಿದೆ ಎನ್ನಬಹುದು. ಮುಸ್ಲಿಮರ ವಿರುದ್ಧ ತೀರಾ ಪ್ರತಿಕೂಲ ಹೇಳಿಕೆಗಳನ್ನು ನೀಡುವುದರಿಂದ ಮುಂದೆ ನಡೆಯಲಿರುವ ಅಂತಹ ಹೊಂದಾಣಿಕೆಗಳಿಗೆ ತೊಡಕು ಉಂಟಾಗಬಹುದೆಂಬ ದೂರದೃಷ್ಟಿ ಈ ಪಕ್ಷದ್ದಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.ತಮ್ಮ ಪಕ್ಷ ಉಗ್ರ ಹಿಂದುತ್ವವಾದದಿಂದ ಹಿಂದಡಿ ಇಟ್ಟಿದೆ ಎಂಬುದನ್ನು ಹೊರಜಗತ್ತಿಗೆ ತೋರಿಸುತ್ತಾ, ಆ ಮೂಲಕ ಮುಂದಿನ ದಿನಗಳಲ್ಲಿ ಎಡಪಕ್ಷಗಳ ಬೆಂಬಲ ಗಳಿಸಲಿಕ್ಕೂ ಬಿಜೆಪಿ ಕಸರತ್ತು ಶುರು ಮಾಡುತ್ತಿದೆ ಎಂದರೂ ತಪ್ಪಾಗಲಾರದು. ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷವಂತೂ ದಿನೇ ದಿನೇ ತನ್ನ ಜಾತ್ಯತೀತ ವಿಶ್ವಾಸಾರ್ಹತೆಯನ್ನು ಕಳೆದು ಕೊಳ್ಳುತ್ತಾ ಬಂದಿರುವುದನ್ನು ನಾವು ಕಾಣಬಹುದು. ಜಾತ್ಯತೀತ ಎಂಬ ನೆಲೆಯಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಹಿಂದೆ ಒಂದೇ ವೇದಿಕೆಯ ಮೇಲಿರುತ್ತಿದ್ದುದು ಸರ್ವೇಸಾಮಾನ್ಯವಾಗಿತ್ತಲ್ಲ.ಬಿಜೆಪಿಯ ಈ ಹೊಸ ತಂತ್ರಕ್ಕೆ ಈಚೆಗಿನ ಗುಜರಾತ್ ಚುನಾವಣೆಯಲ್ಲಿ ಈ ಪಕ್ಷದ ನಡೆಯೇ ಸ್ಪಷ್ಟ ನಿದರ್ಶನವಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ ಹಿಂದೆ ಮಾಡಿದಂತೆ ಮುಸಲ್ಮಾನರ ವಿರುದ್ಧ ಒಂದಿನಿತೂ ಕಿಡಿ ಕಾರಲಿಲ್ಲ. ಸರಿಯಾಗಿ ಒಂದು ದಶಕದ ಹಿಂದೆ ಗುಜರಾತ್ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸ್ ಪಡೆಯನ್ನು ಬೆನ್ನಿಗೆ ಇಟ್ಟುಕೊಂಡು ನಡೆಸಿದ್ದ ಅಟ್ಟಹಾಸವನ್ನು ಮರೆಯಲು ಸಾಧ್ಯವೇ ಇಲ್ಲ. ಆದರೆ ಕಾಂಗ್ರೆಸ್ ಮುಸಲ್ಮಾನರ ಕಗ್ಗೊಲೆಗಳ ಬಗ್ಗೆಯೇ ಜನರ ಗಮನ ಸೆಳೆಯುತ್ತಾ ಚುನಾವಣೆಯಲ್ಲಿ ತನ್ನ ಬುಟ್ಟಿ ತುಂಬಿಸಿಕೊಳ್ಳಲು ಪ್ರಯತ್ನ ನಡೆಸಿತ್ತು.ಮುಸ್ಲಿಮರೆಲ್ಲರೂ ಅಲ್ಲಿ ಕಾಂಗ್ರೆಸ್ ಪರವೇ ಮತ ಚಲಾಯಿಸಿದ್ದಾರೆನ್ನುವುದರಲ್ಲಿ ಎರಡು ಮಾತೇ ಇಲ್ಲ. ಆದರೂ ಬಿಜೆಪಿ ಬಹುಮತ ಗಳಿಸಿದ್ದನ್ನು ಕಂಡು ದೇಶದಾದ್ಯಂತ ಮುಸಲ್ಮಾನರು ಆತಂಕಗೊಂಡಿರಬಹುದು. ಇಂತಹ ಸಂದಿಗ್ಧದಲ್ಲಿ ಯಾವ ಪಕ್ಷ ಹೆಚ್ಚು ಉದಾರವಾದಿ ಎಂಬ ಬಗ್ಗೆ ಮುಸಲ್ಮಾನ ಸಮುದಾಯ ಇದೀಗ ಆಲೋಚಿಸತೊಡಗಿದೆ. ಜತೆಗೆ ಅವರು ಒಳ್ಳೆಯವರಾ, ಇವರು ಒಳ್ಳೆಯವರಾ ಎಂಬ ಗೊಂದಲದಲ್ಲಿಯೇ ಮುಸಲ್ಮಾನ ಸಮುದಾಯ ಪರದಾಡುವಂತಾಗಿಬಿಟ್ಟಿದೆ. ಮುಸಲ್ಮಾನ ಸಮುದಾಯವೇ ಗಟ್ಟಿಯಾಗಿ ನಿಂತು ರಾಜಕಾರಣದಲ್ಲಿ ತಮ್ಮದೇ ಧ್ವನಿ ಹೆಚ್ಚು ಕೇಳಿಸುವಂತೆ ಮಾಡಲು ಕಷ್ಟ ಎಂಬ ವಾಸ್ತವವೂ ಅವರಿಗೆ ಗೊತ್ತಾಗಿದೆ. ಇನ್ನು ಹಿಂದೂ `ಉಗ್ರವಾದ'ಕ್ಕೆ ಇಸ್ಲಾಂ `ಉಗ್ರವಾದ'  ಸಮರ್ಥನೀಯವಲ್ಲ, ಪರಿಹಾರವೂ ಅಲ್ಲ ಎಂಬ ಸಂಗತಿಯಂತೂ ನಿಚ್ಚಳವಾಗಿದೆ.ಇಂತಹ ಹತಾಶೆ, ಅಸಹಾಯಕತೆಗಳ ತುಮುಲದಲ್ಲಿ ಸಿಲುಕಿ ಕೆಲವು ಮುಸಲ್ಮಾನರು ಹಿಂಸಾವಾದದತ್ತ ಹೆಜ್ಜೆ ಹಾಕಿರುವುದನ್ನೂ ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ಬಜರಂಗದಳ, ರಾಮಸೇನೆ, ವಿಶ್ವ ಹಿಂದೂ ಪರಿಷತ್‌ನಂತಹ ಹಿಂದೂ ತೀವ್ರವಾದಿ ಸಂಘಟನೆಗಳು ನಡೆದಿರುವುದು ಅದೇ ಹಾದಿಯಲ್ಲಿ ತಾನೆ? ಇಂತಹ ಸಂಘಟನೆಗಳ ಮಂದಿಯ ಹೆಸರೇ ಮಾಲೆಗಾಂವ್, ಅಜ್ಮೀರ್, ಹೈದರಾಬಾದ್‌ಗಳಲ್ಲಿ ನಡೆದಿದ್ದ ಬಾಂಬ್ ಸ್ಫೋಟದಂತಹ ಚಟುವಟಿಕೆಗಳಲ್ಲಿ ಕಂಡು ಬಂದಿದೆಯಲ್ಲಾ. ಆದರೆ ಆರಂಭದಲ್ಲಿ ಎಲ್ಲರೂ ಸಂಶಯದಿಂದ ಬೆಟ್ಟು ಮಾಡಿ ತೋರಿಸಿದ್ದು ಮಾತ್ರ ಮುಸ್ಲಿಮರನ್ನೇ. ಪೊಲೀಸರಂತೂ ಇಂತಹ ಪ್ರಕರಣಗಳು ನಡೆದ ಒಡನೆ ಯಥಾಪ್ರಕಾರ ಕೆಲವು ಮುಸಲ್ಮಾನ ಯುವಕರನ್ನು ಬಂಧಿಸಿ ಕೊಂಡೊಯ್ದು ಬಿಟ್ಟರು. ಹೈದರಾಬಾದಿನಲ್ಲಂತೂ ಪೊಲೀಸರು ಅಂತಹ ಯುವಕರನ್ನು ಮನಸ್ಸಿಗೆ ಬಂದಂತೆ ಬಡಿದಿದ್ದರು.ಆದರೆ ಈ ಬಾಂಬ್ ಸ್ಫೋಟ ಕೃತ್ಯದ ಹಿಂದೆ ಹಿಂದೂ ಸಂಘಟನೆಗಳ ಕೈವಾಡ ಇದೆ ಎಂಬುದು ತನಿಖೆಯ ಕೊನೆಗೆ ಬಯಲುಗೊಂಡಿತ್ತು. ಆಗ ಹಲವಾರು ಮುಸಲ್ಮಾನ ಯುವಕರನ್ನು ಬಂಧಿಸಿ ತನಿಖೆಗೆ ಒಳಪಡಿಸಿದ್ದ ಬಗ್ಗೆ ಆ ಸಮುದಾಯದವರಲ್ಲಿ ತೀವ್ರ ಆತಂಕ ಉಂಟು ಮಾಡಿತ್ತು. ಹೀಗಾಗಿ, ಹಲವು ಹಿಂದೂಗಳನ್ನೂ ಒಳಗೊಂಡ ನಿಯೋಗವೊಂದು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕೆಂದು ಮನವಿ ಸಲ್ಲಿಸಿತ್ತು. ಇಂತಹ ಸಮಸ್ಯೆಗಳು ಬಂದಾಗ ಅದಕ್ಕೆ ಪರಿಹಾರವೇನು ಎಂಬ ಬಗ್ಗೆಯೂ ಆ ಸಮುದಾಯದವರು ಪ್ರಶ್ನಿಸಿದ್ದರು. ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುವಂತೆ ಸೂಚನೆ ನೀಡುತ್ತೇನೆ ಎಂದು ಪ್ರಧಾನಿ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಅನಗತ್ಯವಾಗಿ ಮುಸಲ್ಮಾನ ಯುವಕರನ್ನು ಬಂಧಿಸಲಾಗುತ್ತಿದ್ದ ಪ್ರಕರಣಗಳು ಕಡಿಮೆಯಾಗಿರಬಹುದೇನೊ. ಆದರೆ ಮುಸಲ್ಮಾನ ಸಮುದಾಯಕ್ಕೆ ಇದರಿಂದ ಸಂಪೂರ್ಣ ತೃಪ್ತಿಯಂತೂ ಸಿಕ್ಕಿಲ್ಲ. ಈ ಸಮುದಾಯದ ಅನೇಕ ಮಂದಿ ಯುವಕರು ಇವತ್ತಿಗೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಅವರೆಲ್ಲರೂ ತಮ್ಮ ವಿಚಾರಣೆಯ ದಿನವನ್ನೇ ಕಾಯುತ್ತಾ ಕುಳಿತಿದ್ದಾರೆ. ದಿನಗಳು ಉರುಳುತ್ತಲಿವೆ. ಈ ರೀತಿ ಬಂಧನಕ್ಕೆ ಒಳಗಾಗದೇ ಇದ್ದಿದ್ದರೆ ಅವರು ಉನ್ನತ ಶಿಕ್ಷಣ ಮುಂದುವರಿಸಬಹುದಿತ್ತೇನೋ ಅಥವಾ ಇನ್ನಾವುದೋ ಒಳ್ಳೆಯ ಕೆಲಸ ಮಾಡಲು ಸಾಧ್ಯವಿತ್ತೇನೋ.ಇದೆಲ್ಲದಕ್ಕಿಂತಲೂ ಮುಖ್ಯವಾಗಿ ಇಂತಹ ಘಟನೆಗಳಿಂದ ಈ ನೆಲದ ಹಿಂದೂ ಮತ್ತು ಮುಸಲ್ಮಾನರ ನಡುವಣ ಅಂತರ ಹೆಚ್ಚುತ್ತಾ ಹೋಗುತ್ತಿರುವುದು ನನ್ನನ್ನು ತೀವ್ರವಾಗಿ ಕಾಡತೊಡಗಿದೆ. ಭಾವನಾತ್ಮಕ ಬೆಸುಗೆ ದುರ್ಬಲಗೊಳ್ಳುತ್ತಾ ನಡೆದಿದೆ. ಎರಡೂ ಸಮುದಾಯಗಳ ನಡುವೆ ಸಾಮಾಜಿಕ ಸಂಬಂಧಗಳು ಕಡಿಮೆಯಾಗುತ್ತಾ ನಡೆದಿರುವುದಂತೂ ನಿಜ. ಕೊಟ್ಟು, ಕೊಳ್ಳುವ ಸಂಬಂಧಗಳೂ ಕಡಿಮೆಯಾಗುತ್ತಿವೆ. ಆದರೆ ಗುಜರಾತ್‌ನಲ್ಲಿ ನರಮೇಧ ನಡೆಯಿತಲ್ಲಾ, ಆ ನಂತರ ಈವರೆಗೆ ಅಂತಹ ಘಟನೆಗಳು ನಡೆದಿಲ್ಲ ಎನ್ನುವುದಷ್ಟೇ ಮನಸ್ಸಿಗೆ ಒಂದಿಷ್ಟು ನಿರಾಳ ಎನಿಸುವ ಸಂಗತಿಯಾಗಿದೆ. ಅಂದರೆ ಈ ದೇಶದಲ್ಲಿ ಕೋಮುಗಲಭೆಗಳು ಸಂಪೂರ್ಣ ಕಡಿಮೆಯಾಗಿವೆ ಎಂದೇನಲ್ಲ. ಈಚೆಗೆ ಅಸ್ಸಾಮ್‌ನಲ್ಲಿ ನಡೆದಿದ್ದು ಕೋಮು ಗಲಭೆಯಲ್ಲದೆ ಇನ್ನೇನು ?ಈಚೆಗೆ ನಾನು ಕೇರಳಕ್ಕೆ ಹೋಗಿದ್ದೆ. ಅಲ್ಲಿ ಎಡಪಕ್ಷಗಳೂ ಕಳಂಕಿತರಾಗಿದ್ದಾರೆ. ಆ ರಾಜ್ಯದಲ್ಲಿ ಹಿಂದೂಗಳಂತೆ, ಮುಸಲ್ಮಾನರಂತೆ ಕ್ರೈಸ್ತರೂ ಒಂದು ಶಕ್ತಿಯಾಗಿ ಎದ್ದು ನಿಂತಿದ್ದಾರೆ. ಒಂದು ಕಾಲದಲ್ಲಿ ಆರ್ಥಿಕ ಸಿದ್ಧಾಂತವೊಂದು ರಾಜ್ಯದಾದ್ಯಂತ ಜನಮನ ಮುಟ್ಟಿದ್ದ ರಾಜ್ಯ ಅದು. ಮನುಷ್ಯಮಾತ್ರರೆಲ್ಲರೂ ಸಮಾನ ಎಂಬ ಘೋಷಣೆ ಆ ರಾಜ್ಯದ ಮೂಲೆ ಮೂಲೆಗಳಲ್ಲೂ ಅನುರಣಿಸಿತ್ತು. ಆದರೆ ಇವತ್ತು ಅದೇ ರಾಜ್ಯದಲ್ಲಿ ಧಾರ್ಮಿಕ, ಮತೀಯ `ಶಕ್ತಿ'ಗಳೂ ಪ್ರಭಾವಿ ಎನಿಸಿರುವುದೊಂದು ವಿಪರ್ಯಾಸ.ಉತ್ತರ ಪ್ರದೇಶದಲ್ಲಂತೂ ಅಲ್ಲಲ್ಲಿ ಸಣ್ಣಪುಟ್ಟ ಕೋಮುಗಲಭೆಗಳು ನಡೆಯುತ್ತಲೇ ಇರುತ್ತವೆ. ಅಂತಹ ಘಟನೆಗಳಿಗೆ ಮಾಧ್ಯಮಗಳು ಮಹತ್ವ ಕೊಡುವುದೇ ಇಲ್ಲ. ದೊಡ್ಡಮಟ್ಟದಲ್ಲಿ ನಡೆಯುವ ಕೋಮುಗಲಭೆಗಳ ಬಗ್ಗೆಯಷ್ಟೇ ಮಾಧ್ಯಮಗಳು ಗಮನ ಕೊಡುತ್ತವೆ. ಇವುಗಳೆಲ್ಲದರ ನಡುವೆಯೂ ದೆಹಲಿಯಲ್ಲಿ ಎಲ್ಲಾ ಧರ್ಮ, ಜಾತಿ, ಜನಾಂಗಗಳ ವಿದ್ಯಾರ್ಥಿಗಳೆಲ್ಲರೂ ಒಗ್ಗೂಡಿ ಹೆಜ್ಜೆ ಹಾಕಿದ ಸಂಗತಿ ಒಂದು ಉತ್ತಮ ಬೆಳವಣಿಗೆ. ಈ ವಿದ್ಯಾರ್ಥಿಗಳೆಲ್ಲರೂ ಒಂದೇ ಧ್ವನಿಯಾಗಿ ಅಮಾನವೀಯ ಕೃತ್ಯ ಒಂದರ ವಿರುದ್ಧ ಸಿಡಿದೆದ್ದಿದ್ದರು. ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾದ ಹೆಣ್ಣೊಬ್ಬಳ ಪರವಾಗಿ ಕೇಳಿ ಬಂದ ಮಾನವೀಯತೆಯ ಆ ಧ್ವನಿ ಹೆಚ್ಚು ಕಾಲ ನೆನಪಲ್ಲಿ ಉಳಿಯುವಂತಹದ್ದಾಗಿದೆ.`ಕೋಮುವಾದ ಎನ್ನುವುದು ಬ್ರಿಟಿಷರು ಬಿತ್ತಿದ ವಿಷಬೀಜ, ಅವರು ಹೋದ ಮೇಲೆ ಅದೂ ಹೋಗುತ್ತದೆ' ಎಂಬ ವಾದವನ್ನು ಸ್ವಾತಂತ್ರ್ಯ ಹೋರಾಟಗಾರರಾದ ಅಬ್ದುಲ್ ಕಲಾಂ ಆಜಾದ್ ಮತ್ತು ಖಾನ್ ಅಬ್ದುಲ್ ಗಫಾರ್ ಖಾನ್ ಅವರಂತವರು ದೃಢವಾಗಿ ನಂಬಿದ್ದರು. ನಾನು ಹಿಂದೊಂದು ಕಾಲದಲ್ಲಿ ಅದೇ ವಾದವನ್ನು ಒಪ್ಪುತ್ತಿದ್ದೆ. ಆದರೆ ನನ್ನ ಈ ನಂಬಿಕೆ ಸುಳ್ಳು ಎಂಬುದನ್ನು ಅನುಭವದಿಂದ ಕಂಡುಕೊಂಡಿದ್ದೇನೆ. ಸ್ವಾತಂತ್ರ್ಯಪೂರ್ವದಲ್ಲಿ ಕಂಡು ಬರುತ್ತಿದ್ದಂತಹ ಕೋಮು ಅತಿರೇಕಗಳನ್ನು ಇವತ್ತಿಗೂ ನಾವು ಕಾಣುತ್ತಿದ್ದೇವೆ. ರಾಜಕಾರಣಿಗಳಂತೂ ಕೋಮು ವಿಚಾರಗಳನ್ನು ಚುನಾವಣೆ ಸಂದರ್ಭಗಳಲ್ಲಿ ಅಥವಾ ತಮಗೆ ಅನುಕೂಲವೆನಿಸಿದಾಗಲೆಲ್ಲಾ ಬಳಸಿಕೊಳ್ಳುತ್ತಲೇ ಇದ್ದಾರೆ. ಸ್ವಾತಂತ್ರ್ಯ ಸಿಕ್ಕಿ 65 ವರ್ಷಗಳು ಉರುಳಿವೆ. ಆದರೆ ಜಾತ್ಯತೀತ ಮೌಲ್ಯಗಳು ಈ ನೆಲದಲ್ಲಿ ತಮ್ಮ ಬೇರುಗಳನ್ನು ಆಳವಾಗಿ ಇಳಿಬಿಡಲು ಸಾಧ್ಯವಾಗಿಯೇ ಇಲ್ಲ. ಇನ್ನೊಬ್ಬರನ್ನು ಪ್ರೀತಿಯಿಂದ ಕಾಣುವ, ಗೌರವದಿಂದ ನಡೆಸಿಕೊಳ್ಳುವ ಮನೋಭಾವ ಮತ್ತು ಚಿಂತನೆಯ ಜೀವಜಲ ನಮ್ಮ ನೆಲದಲ್ಲಿ ಬತ್ತುತ್ತಾ ಬಂದಿದೆ.ಜಾತ್ಯತೀತ ಮೌಲ್ಯಗಳಿಗೆ ಧಕ್ಕೆ ತಂದವರೂ ಇವತ್ತು ನಿರಾತಂಕವಾಗಿದ್ದಾರೆ. ಬಾಬ್ರಿ ಮಸೀದಿಯನ್ನು ಬೀಳಿಸಿದವರಿಗೆ ಇನ್ನೂ ಶಿಕ್ಷೆಯಾಗಿಲ್ಲ. ಗುಜರಾತಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮುಸ್ಲಿಮರ ಕಗ್ಗೊಲೆಗೆ ಕಾರಣರಾದವರನ್ನು ಇನ್ನೂ ಮುಟ್ಟಲಾಗಿಲ್ಲ. ಎಲ್ಲೆಡೆ ಅನುಕೂಲಸಿಂಧು ರಾಜಕಾರಣದ್ದೇ ಮೇಲುಗೈ. ಇಂತಹ ಘಟನೆಗಳೆಲ್ಲವೂ ಮುಸಲ್ಮಾನರ ಮನಸ್ಸಿನ ಮೇಲೆ ಅದೆಂತಹ ಪರಿಣಾಮ ಬೀರಿರಲಿಕ್ಕಿಲ್ಲ. 1984ರಲ್ಲಿ ದೆಹಲಿಯಲ್ಲಿ ಸಿಖ್ ಸಮುದಾಯದವರ ಮೇಲೆ ನಡೆದ ದೌರ್ಜನ್ಯ ಮತ್ತು ನರಮೇಧಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ಮುಖಂಡರು ಟೀಕಿಸುತ್ತಲೇ ಇದ್ದಾರೆ. ಕಾಂಗ್ರೆಸ್ ಕೂಡಾ ಅದಕ್ಕೆ ಪ್ರತಿಕ್ರಿಯಿಸುತ್ತಾ ಗುಜರಾತಿನಲ್ಲಿ ನಡೆದಿದ್ದ ನರಮೇಧದ ಬಗ್ಗೆ ಬಿಜೆಪಿ ವಿರುದ್ಧ ಟೀಕಾ ಪ್ರವಾಹವನ್ನೇ ಹರಿಸುತ್ತಿದೆ. ಎರಡೂ ಪಕ್ಷಗಳು ಈ ಸಂಗತಿಗಳನ್ನು ಚರ್ಚಾ ವಿಷಯವಾಗಿ ಸದಾ ಜೀವಂತವಿರಿಸಿಕೊಂಡಿವೆ. ಆದರೆ ಜಾತ್ಯತೀತ ಮೌಲ್ಯಗಳು ಏನಾದವು ಎಂಬ ಅಂಶ ಮಾತ್ರ ನನ್ನನ್ನು ತೀವ್ರವಾಗಿ ಕಾಡುತ್ತಿದೆ.ಇವುಗಳನ್ನೆಲ್ಲಾ ಗಮನಿಸುತ್ತಾ, ಆಲೋಚಿಸುತ್ತಾ ಇರುವ ನನಗೆ ಈ ನಾಡಿನಲ್ಲಿ ಕೋಮುವಾದವೂ ಕಾನೂನು ಸಮ್ಮತಿಯ ಸಂಗತಿಯಾಗಿಬಿಡಬಹುದೇನೋ ಎಂಬ ಭಯಾನಕವಾದ ಆತಂಕ ಕಾಡುತ್ತಿದೆ. ದಿನೇ ದಿನೇ ಹೆಚ್ಚು ಜನರು ಧರ್ಮಾಂಧರಾಗುತ್ತಿದ್ದಾರೆ. ಪೊಲೀಸರು ಮತ್ತು ಇತರ ಭದ್ರತಾ ಸಿಬ್ಬಂದಿ ಕೂಡಾ ಈ ನೆಲೆಯಲ್ಲಿ ಕಳಂಕಿತರಾಗುತ್ತಿದ್ದಾರೆ. ಇಂತಹ ಸಂಗತಿಗಳೇ ತಾರಕಕ್ಕೇರಿದಾಗ ಪ್ರಜಾಸತ್ತೆಯ ಮೌಲ್ಯಗಳ ಗತಿ ಏನು ಎಂಬ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ಪ್ರಜಾಪ್ರಭುತ್ವ ಈ ನೆಲದಲ್ಲಿ ಉಳಿಯಬೇಕಿದ್ದರೆ ಈ ತೆರನಾದ ಮನುಷ್ಯ ದ್ವೇಷ ಮತ್ತು ಪೂರ್ವಗ್ರಹ ಪೀಡಿತ ವಿಚಾರಗಳಿಂದ ನಮ್ಮ ರಾಜಕೀಯ ವ್ಯವಸ್ಥೆಯೂ ಸೇರಿದಂತೆ ಎಲ್ಲವೂ, ಎಲ್ಲರೂ ಮುಕ್ತರಾಗಲೇ ಬೇಕಿದೆ.ಕೋಮುವಾದವೆಂಬ ಜ್ವಾಲೆ ಇನ್ನೂ ಹೊತ್ತಿ ಉರಿಯುವಂತೆ ಮಾಡುವಂತಹ ಉದ್ರೇಕಕಾರಿ ಭಾಷಣ ಮಾಡಲು ಹೈದರಾಬಾದಿನ ಅಕ್ಬರುದ್ದೀನ್ ಒವೈಸಿಗೆ ಧೈರ್ಯ ಬಂದಿದ್ದಾದರೂ ಹೇಗೆ? ಆತನ ಭಾಷಣ ಕೇಳುತ್ತಾ ಚಪ್ಪಾಳೆ ತಟ್ಟುತ್ತಿದ್ದ ಅಷ್ಟೊಂದು ಸಂಖ್ಯೆಯ ಜನರಿದ್ದಾರಲ್ಲಾ ಅವರ ಮನಸ್ಥಿತಿಯ ಬಗ್ಗೆಯೇ ಅಚ್ಚರಿಯಾಗುತ್ತಿದೆ. ನಿಜವಾಗಿ ಹೇಳಬೇಕೆಂದರೆ ಒವೈಸಿಯಂತಹ ಜನರಿಗೆ ಭಾರತದಲ್ಲಿ ಇರುವ ಅರ್ಹತೆಯೇ ಇಲ್ಲ. ಇಂತಹ ಜನರು ಈ ದೇಶದ ಜಾತ್ಯತೀತ ಮೌಲ್ಯಗಳ ಅಡಿಗಲ್ಲುಗಳನ್ನೇ ಅಲ್ಲಾಡಿಸುವಂತವರು.ಅದೇನೇ ಇರಲಿ, ಈ ದೇಶ ಇಂತಹ ಹಲವು ಕೋಮು ಸಂಬಂಧಿ ಗೊಂದಲಗಳ ನಡುವೆಯೂ ಒಟ್ಟಾರೆಯಾಗಿ ಜಾತ್ಯತೀತ ಕನಸುಗಳನ್ನಿಟ್ಟುಕೊಂಡು ಆ ನಿಟ್ಟಿನಲ್ಲಿಯೇ ಹೆಜ್ಜೆ ಹಾಕುತ್ತಿದೆ. ಇವು ದೃಢವಾದ ಹೆಜ್ಜೆಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry