ಭಾನುವಾರ, ಜನವರಿ 19, 2020
24 °C

ಜಿಡಿಪಿ ಕುಸಿತ: ನೀರಸ ವಹಿವಾಟು

ಕೆ. ಜಿ. ಕೃಪಾಲ್ Updated:

ಅಕ್ಷರ ಗಾತ್ರ : | |

ಮುಂಬೈ ಷೇರು ವಿನಿಮಯ ಕೇಂದ್ರದ ಎಸ್‌ಅಂಡ್ ಪಿಬಿಎಸ್‌ಇ ಸಂವೇದಿ ಸೂಚ್ಯಂಕವು ಕಳೆದ ಗುರುವಾರದವರೆಗೂ 20 ಸಾವಿರದ ಗಡಿ ದಾಟಿ ವಹಿವಾಟು ನಡೆಸಿತ್ತು. ಆದರೆ,  ಶುಕ್ರವಾರದಂದು ಹಿಂದಿನ ದಿನದ 20,215 ಅಂಶಗಳಿಂದ 455 ಅಂಶಗಳಷ್ಟು ಏಕಮುಖ ಇಳಿಕೆ ಕಂಡು 19,760 ರಲ್ಲಿ ಅಂತ್ಯ ಕಂಡಿತು.ಇದಕ್ಕೆ ಜೊತೆಯಾಗಿ `ನಿಫ್ಟಿ' ಸಹ 5,985.95 ರಲ್ಲಿ ಅಂತ್ಯಗೊಂಡು 138 ಅಂಶಗಳಷ್ಟು ಇಳಿಕೆ ಪಡೆಯಿತು. ಅಂತರರಾಷ್ಟ್ರೀಯ ಕಂಪೆನಿಗಳಾದ ಗ್ಲಾಕ್ಸೊಸ್ಮಿತ್ ಕ್ಲೈನ್ ಕನ್ಸೂಮರ್ಸ್ ಈ ವಾರ ಶೇ 18ಕ್ಕೂ ಹೆಚ್ಚಿನ ಏರಿಕೆ ಪಡೆದರೆ ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮ ಶೇ 10ಕ್ಕೂ ಹೆಚ್ಚಿನ ಮುನ್ನಡೆ ಕಂಡಿದೆ. ಈ ಕಂಪೆನಿಯ ಆಡಳಿತ ಮಂಡಳಿ ಸಾರ್ವಜನಿಕರಿಂದ ಷೇರು ಕೊಳ್ಳಲು ತೆರೆದ ಕರೆ ನೀಡುವುದೆಂಬ ನಿರೀಕ್ಷೆ ಈ ಪ್ರಮಾಣದ ಏರಿಕೆಗೆ ಕಾರಣವಾಗಿದೆ.ಬಿಸ್ಕತ್ ತಯಾರಿಕಾ ಕಂಪೆನಿಯು ಪ್ರಕಟಿಸಿದ ಅತ್ಯುತ್ತಮ ಫಲಿತಾಂಶವು ಹೂಡಿಕೆದಾರರ ಆಸಕ್ತಿ ಕೆರಳಿಸಿದ್ದು, ಕೊಳ್ಳುವಿಕೆಯ ಕಾರಣ ಷೇರಿನ ಬೆಲೆಯು ರೂ727ನ್ನು ತಲುಪಿ ವಾರ್ಷಿಕ ಗರಿಷ್ಠದ ದಾಖಲೆ ನಿರ್ಮಿಸಿ ರೂ 723 ರಲ್ಲಿ ಅಂತ್ಯಗೊಂಡು ಸುಮಾರು ಶೇ 28 ರಷ್ಟು ಏರಿಕೆ ಕಂಡಿದೆ. ಕಂಪೆನಿಯ ಫಲಿತಾಂಶ ಉತ್ತಮವಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿಲ್ಲವೆಂದು ಮಾರಾಟದ ಒತ್ತಡಕ್ಕೆ ಸಿಲುಕಿ ಕುಸಿದಿದ್ದ ಅಮರರಾಜ ಬ್ಯಾಟರೀಸ್ ಹಿಂದಿನ ಶುಕ್ರವಾರದ ರೂ258ರ ಹಂತದಿಂದ ರೂ282 ರವರೆಗೂ ವಾರದ ಮಧ್ಯೆ ಜಿಗಿದು ರೂ266.75 ರಲ್ಲಿ ವಾರಾಂತ್ಯ ಕಂಡಿದೆ. ಉಳಿದಂತೆ ರಿಯಲ್ ಎಸ್ಟೇಟ್ ವಲಯದ ಹೌಸಿಂಗ್ ಡೆವೆಲಪ್‌ಮೆಂಟ್ ಇನ್‌ಫ್ರಾ, ಯೂನಿಟೆಕ್, ಡಿಎಲ್‌ಎಫ್, ಇಂಡಿಯಾ ಬುಲ್ ರಿಯಲ್ ಎಸ್ಟೇಟ್‌ಗಳು ಫಲಿತಾಂಶಗಳು ಉತ್ತಮವಾಗಿಲ್ಲವೆಂಬ ಕಾರಣಕ್ಕಾಗಿ ವಲಯದ ಒತ್ತಡದಿಂದ ಕುಸಿದವು.ರಾನಬಾಕ್ಸಿ ಲ್ಯಾಬ್, ಸಿಪ್ಲಾ, ಕಂಪೆನಿಗಳಿಗೆ ಬೆಂಬಲ ದೊರೆಯದೆ ಮಾರಾಟದ ಒತ್ತಡಕ್ಕೊಳಗಾದವು. ಬ್ಯಾಂಕಿಂಗ್ ವಲಯ, ಎಂಜಿನಿಯರಿಂಗ್ ವಲಯದ ಕಂಪೆನಿಗಳು 2013ರ `ಜಿಡಿಪಿ' ಬೆಳವಣಿಗೆಯು ತೃಪ್ತಿಯಾಗಿಲ್ಲವೆಂಬ ಕಾರಣ ಮತ್ತು ರೂಪಾಯಿಯ ಬೆಲೆ ಕುಸಿತದ ಕಾರಣ ಇತರೆ ಕಂಪೆನಿಗಳ ಕುಸಿತಕ್ಕೆ ಜೊತೆ ನೀಡಿದವು. ಕೆಲವು ಕಂಪೆನಿಗಳು ಉತ್ತಮವಾದ ಸಾಧನೆ ಮತ್ತು ಲಾಭಾಂಶ ಪ್ರಕಟಿಸಿದರೂ ಅಂತ್ಯದಲ್ಲಿ ಮಾರಾಟಕ್ಕೆ ಬಲಿಯಾದವು.ಈ ವಾರದಲ್ಲಿನ ಪ್ರಮುಖ ಬೆಳವಣಿಗೆ ಎಂದರೆ ಬಹಳ ಕಂಪೆನಿಗಳ ಪ್ರವರ್ತಕರು ತಮ್ಮ ಕಂಪೆನಿಯಲ್ಲಿ ಸಾರ್ವಜನಿಕ ಭಾಗಿತ್ವ ಹೆಚ್ಚಿಸಲು ಮುಂದಾಗಿ ಮಾರಾಟದ ಕರೆ ಮೂಲಕ ಪ್ರಯತ್ನಿಸಿವೆ. ಈ ಆಫರ್ ಫಾರ್ ಸೇಲ್ ಗವಾಕ್ಷಿಯು ಉತ್ತಮವಾಗಿದ್ದು ಕಡಿಮೆ ಸಮಯ ಮತ್ತು ಹಣದ ಉಳಿತಾಯದಿಂದ ಸಾರ್ವಜನಿಕರಿಗೆ ಷೇರು ಹಂಚುವ ಕ್ರಮವಾಗಿದೆ. ಇದನ್ನು ಸಣ್ಣ ಹೂಡಿಕೆದಾರರ ಸ್ನೇಹಿಯಾಗಿ ಪರಿವರ್ತಿಸಿದಲ್ಲಿ ಉತ್ತಮ ವಾತಾವರಣಕ್ಕೆ ದಾರಿಯಾಗುವುದು.ಈ ವಾರ ಸಂವೇದಿ ಸೂಚ್ಯಂಕವು ಒಟ್ಟು 55 ಅಂಶಗಳಷ್ಟು ಏರಿಕೆ ಕಂಡಿದೆ. ಮಧ್ಯಮ ಶ್ರೇಣಿ ಸೂಚ್ಯಂಕವು ಕೇವಲ 2 ಅಂಶಗಳಷ್ಟು ಏರಿಕೆ ಕಂಡರೆ ಕೆಳಮಧ್ಯಮ ಶ್ರೇಣಿ ಸೂಚ್ಯಂಕ 49 ಅಂಶಗಳಷ್ಟು ಇಳಿಕೆಗೆ ಗುರಿಯಾಯಿತು. ವಿದೇಶಿ ವಿತ್ತೀಯ ಸಂಸ್ಥೆಗಳು ಗುರುವಾರದವರೆಗೂ ಖರೀದಿ ಮಾಡಿ ಶುಕ್ರವಾರ ಈ ಹಿಂದಿನ ವಾರದಂತೆ ಸುಮಾರು ರೂ 504 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿ ಒಟ್ಟು ರೂ2,044 ಕೋಟಿ ವಾರದಲ್ಲಿ ಹೂಡಿಕೆ ಮಾಡಿವೆ. ಸ್ಥಳೀಯ ವಿತ್ತೀಯ ಸಂಸ್ಥೆಗಳು ರೂ1,444 ಕೋಟಿ ಮೌಲ್ಯದ ಷೇರನ್ನು ಮಾರಾಟ ಮಾಡಿವೆ. ಪೇಟೆಯ ಬಂಡವಾಳ ಮೌಲ್ಯವು ಹಿಂದಿನ ವಾರದ ರೂ66.70 ಲಕ್ಷ ಕೋಟಿಯಿಂದ ರೂ 66.87 ಲಕ್ಷ ಕೋಟಿಗೆ ಏರಿತ್ತು.ಲಾಭಾಂಶ ವಿಚಾರ

ಷೇರುಗಳ ದರಗಳ ಏರಿಳಿತದ ವೇಗಕ್ಕೆ ಲಾಭಾಂಶವೂ ಪ್ರಮುಖ ಕಾರಣವಾಗಿದೆ. ಕಂಪೆನಿಗಳು ಲಾಭ ಗಳಿಸಿದ ಪ್ರಮಾಣವನ್ನಾಧರಿಸಿ ಲಾಭಾಂಶ ಪ್ರಕಟಿಸುವುದು ಸಾಮಾನ್ಯವಾದರೂ ಇತ್ತೀಚೆಗೆ ಕೆಲವು ಕಂಪೆನಿಗಳು ನಿರೀಕ್ಷಿತ ಲಾಭ ಗಳಿಸದೇ ಇದ್ದರೂ ಲಾಭಾಂಶದಿಂದ ಷೇರುದಾರರನ್ನು ತೃಪ್ತಿಗೊಳಿಸಲು ಮುಂದಾಗಿವೆ ಟಾಟಾ ಕೆಮಿಕಲ್ಸ್ ಪ್ರತಿ ಷೇರಿಗೆ ರೂ 10 ರಂತೆ ಲಾಭಾಂಶ ಪ್ರಕಟಿಸಿದೆ.ಹೆಚ್ಚಿನ ಕಂಪೆನಿಗಳು ಆಕರ್ಷಕ ಲಾಭಾಂಶ ಪ್ರಕಟಿಸಿವೆ ಮತ್ತೆ ಕೆಲವು ಹೆಸರಿಗೆ ಲಾಭಾಂಶವೆಂಬಂತೆ ಪ್ರಕಟಿಸಿವೆ. ಕಂಪೆನಿಗಳಾದ ಕ್ರೊಮಾಟಿಕ್ ಇಂಡಿಯಾ ಪ್ರತಿ ರೂ 10ರ ಮುಖಬೆಲೆ ಷೇರಿಗೆ ಎರಡು ಪೈಸೆಯಂತೆ, ಸಹ್ ಪೆಟ್ರೋಲಿಯಂ ಕಂಪೆನಿಯು ಪ್ರತಿ ರೂ5ರ ಮುಖಬೆಲೆಯ ಷೇರಿಗೆ ಒಂದು ಪೈಸೆಯಂತೆ ಲಾಭಾಂಶ ಪ್ರಕಟಿಸಿರುವುದು ದಾಖಲೆಗಾಗಿ ಮಾತ್ರ ಪ್ರಕಟಿಸಿದಂತಿದೆ.ಇದೇ ರೀತಿ ಅತ್ಯಲ್ಪ ಪ್ರಮಾಣದ ಲಾಭಾಂಶ ಪ್ರಕಟಿಸಿರುವ ಕಂಪೆನಿಗಳು ಹಲವಾರು ಇವೆ. ಈ ಪ್ರಮಾಣದ ಲಾಭಾಂಶವನ್ನು ವಿತರಿಸುವ ಕಾರ್ಯದ ಮತ್ತು ಷೇರುದಾರರ ಸೇವೆಗಳಿಗೆ ಪೂರ್ಣ ಪ್ರಮಾಣದ ನ್ಯಾಯ ಸಮ್ಮತವಲ್ಲ. ಇಂತಹ ಬೆಳವಣಿಗೆಗಳನ್ನು, ತಡೆಗಟ್ಟಿ ನ್ಯಾಯಯುತವಾದ ರೀತಿಯ ಲಾಭಾಂಶ ವಿತರಣೆಗೆ ಅನುವು ಮಾಡಿಕೊಡಲು ನಿಯಂತ್ರಕರು, ಲಾಭಾಂಶ ನೀಡುವುದಿದ್ದರೆ ಕನಿಷ್ಠ ಮಟ್ಟದ ಅಂದರೆ ಶೇ 15ಕ್ಕೂ ಹೆಚ್ಚಿನ ಪ್ರಮಾಣದ ಲಾಭಾಂಶದ ಮಿತಿ ಕಡ್ಡಾಯಗೊಳಿಸಬೇಕು. ಲಾಭಾಂಶ ವಿತರಣೆಯಲ್ಲಿ ಕೆಲವು ಕಂಪೆನಿಗಳು ಹಿಂದಿನ ವರ್ಷಕ್ಕಿಂತ ಕಡಿಮೆ ಪ್ರಮಾಣದ ಲಾಭಾಂಶ ಪ್ರಕಟಿಸಿದ್ದು ಮಾರಾಟದ ಒತ್ತಡಕ್ಕೆ ಕಾರಣವಾಗಿದೆ.ಕಾಸ್ಮೊ ಫಿಲ್ಮ್ ಕಂಪೆನಿಯು ಸತತವಾಗಿ ರೂ5 ರಂತೆ ಪ್ರತಿ ಷೇರಿಗೆ ಲಾಭಾಂಶ ವಿತರಿಸುತ್ತಿತ್ತು. ಆದರೆ ಈ ವರ್ಷ ಶೇ 50 ರಷ್ಟು ಕಡಿತಗೊಳಿಸಿದ್ದು ಷೇರಿನ ಬೆಲೆಯನ್ನು ವರ್ಷದ ಕನಿಷ್ಠಮಟ್ಟದ ಸಮೀಪಕ್ಕೆ ಕುಸಿಯಿತು. ಟಾಟಾ ಮೋಟಾರ್ಸ್‌ ಕಂಪೆನಿಯು ಹಿಂದಿನ ವರ್ಷದ ಲಾಭಾಂಶದಲ್ಲಿ ಶೇ 50 ರಷ್ಟು ಕಡಿತಗೊಳಿಸಿದ್ದು, ಆದರೂ ಷೇರಿನ ಬೆಲೆ ಏರಿಕೆ ಕಂಡ ಕಾರಣ ಮೂಲಾಧಾರಿತ ಪೇಟೆಯಲ್ಲಿನ ಚುಕ್ತಾವಾರವಾದುದಾಗಿದೆ. ಫಾರ್ಮಾ ವಲಯದಲ್ಲಿ ಕ್ಯಾಡಿಲ್ಲಾ ಹೆಲ್ತ್ ಪ್ರತಿ ಷೇರಿಗೆ ರೂ7.50 ಯಂತೆ ಟೊರೆಂಟ್ ಫಾರ್ಮಾ ಪ್ರತಿ ಷೇರಿಗೆ ರೂ17 ರಂತೆ, ಸನ್ ಫಾರ್ಮ ಪ್ರತಿ ಷೇರಿಗೆ ರೂ5 ರಂತೆ, ವೊಕಾರ್ಡ್ ಕಂಪೆನಿಯು ಪ್ರತಿ ಷೇರಿಗೆ ರೂ5 ರಂತೆ ಲಾಭಾಂಶ ಪ್ರಕಟಿಸಿವೆ. ಸಾರ್ವಜನಿಕ ವಲಯದ ಕಂಪೆನಿಗಳಲ್ಲಿ ಎಂಜಿನಿಯರ್ಸ್ ಇಂಡಿಯಾ ಪ್ರತಿ ಷೇರಿಗೆ ರೂ 3 ರಂತೆ, ಗುಜರಾತ್ ಮಿನರಲ್ ಡೆವೆಲಪ್‌ಮೆಂಟ್ ಪ್ರತಿ ಷೇರಿಗೆ ರೂ3 ರಂತೆ, ಹಿಂದೂಸ್ತಾನ್ ಪೆಟ್ರೋಲಿಯಂ ಪ್ರತಿ ಷೇರಿಗೆ ರೂ8.50 ರಂತೆ, ಎನ್‌ಎಂಡಿಸಿ ಪ್ರತಿ ಷೇರಿಗೆ ರೂ4 ರಂತೆ, ಭಾರತ್ ಪೆಟ್ರೋಲಿಯಂ ಪ್ರತಿ ಷೇರಿಗೆ ರೂ11 ರಂತೆ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರತಿ ಷೇರಿಗೆ ರೂ6.20 ರಂತೆ ಲಾಭಾಂಶ ಪ್ರಕಟಿಸಿವೆ.ಬೋನಸ್ ಷೇರಿನ ವಿಚಾರ

ಫಾರ್ಮಾವಲಯದ ಕಂಪೆನಿಗಳಾದ ಸನ್‌ಫಾರ್ಮಾ ಸ್ಯುಟಿಕಲ್ಸ್ ಮತ್ತು ಟೊರೆಂಟ್ ಫಾರ್ಮಾ 1:1ರ ಅನುಪಾತದ ಹಾಗೂ ಶಿಲ್ಪಾ ಮೆಡಿಕೇರ್ 1:2ರ ಅನುಪಾತದ ಬೋನಸ್ ಷೇರು ಪ್ರಕಟಿಸಿವೆ. ಯು.ಪಿ. ಹೋಟೆಲ್ಸ್ 13:20 ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.ಅಸ್ಟ್ರಾಜೆನಿಕಾ ಫಾರ್ಮಾ ಇಂಡಿಯಾ ಲಿ. ಈ ಕಂಪೆನಿಯು ಅತ್ಯಂತ ಹೆಚ್ಚಿನ ಏರಿಳಿತವನ್ನು ಪ್ರದರ್ಶಿಸಿದೆ. ಕಂಪೆನಿಯ ಪ್ರವರ್ತಕರಾದ ಸ್ವೀಡನ್ನಿನ ಅಸ್ಟ್ರಾಜೆನಿಕಾ ಫಾರ್ಮಸ್ಯುಟಿಕಲ್ಸ್ ಕಂಪೆನಿಯಲ್ಲಿ ಶೇ 90ರ ಭಾಗಿತ್ವವನ್ನು ಹೊಂದಿದ್ದು 28 ರಂದು ಷೇರು ವಿನಿಮಯ ಕೇಂದ್ರದ ಆಫರ್ ಫಾರ್ ಸೇಲ್ ಗವಾಕ್ಷಿಯ ಮೂಲಕ 37,49,950 ಷೇರುಗಳನ್ನು ರೂ490ರ ಬೆಲೆಯಲ್ಲಿ ಮಾರಾಟ ಮಾಡಿದುದೇ ಇಂತಹ ಅಗಾದವಾದ ಅಂದರೆ ಸೋಮವಾರ ರೂ650ರ ಹಂತದಿಂದ ರೂ 8ರ ವರೆಗೂ ಏರಿಳಿತ ಕಂಡು ರೂ 798.65 ರಲ್ಲಿ ಅಂತ್ಯಕಂಡಿತು.ಮಂಗಳವಾರದ ಚಟುವಟಿಕೆ ಆರಂಭವಾಗುವ ವೇಳೆಗೆ ಷೇರು ವಿನಿಮಯ ಕನಿಷ್ಠ ಬೆಲೆ ರೂ490 ಎಂದು ಪ್ರಕಟವಾಗಿದ್ದ ಕಾರಣ ಅಂದು ದಿನದ ಗರಿಷ್ಠ ರೂ724.80ನ್ನು ತಲುಪಿ ಅಲ್ಲಿಂದ ರೂ646.60ರ ವರೆಗೂ ಇಳಿದು ರೂ667.90 ರಲ್ಲಿ ಅಂತ್ಯಗೊಂಡಿತು. ಸಾಮಾನ್ಯವಾಗಿ ಒಂದು ಲಕ್ಷ ಇಪ್ಪತ್ತು ಸಾವಿರದಷ್ಟು ಷೇರುಗಳು ವಹಿವಾಟಾಗುತ್ತಿದ್ದ ಕಂಪೆನಿ ಮಂಗಳವಾರ 7 ಲಕ್ಷ ಷೇರಿನ ವಹಿವಾಟು ದಾಖಲಿಸಿದೆ.ಬುಧವಾರದಂದು ಷೇರು ವಿತರಣೆಗೆ ದೊರೆತ ಅಭೂತಪೂರ್ವ ಸ್ಪಂದನಕ್ಕೆ ಪೇಟೆಯು ಶೇ 20 ರಷ್ಟರ ಏರಿಕೆಯನ್ನು ಪ್ರದರ್ಶಿಸಿ ರೂ800ನ್ನು ಮತ್ತೊಮ್ಮೆ ದಾಟಿತು. ಗುರುವಾರ ತನ್ನ ಏರಿಕೆ ಮುಂದುವರೆಸಿ ರೂ892ರ ವರೆಗೂ ಮುನ್ನುಗ್ಗಿತು. ರೂ870ರ ಹಂತದಲ್ಲಿ ಅಂತ್ಯಗೊಂಡಿತು.ಇಂತಹ ಬೃಹತ್ ಮುನ್ನಡೆಯ ಹಿಂದೆ ಅಡಕವಾಗಿರುವ ಪ್ರಮುಖ ಅಂಶವೊಂದಿದೆ. ಅದೆಂದರೆ ಈ ರಭಸದ ಏರಿಳಿತಗಳ ನಡುವೆ ಗುರುವಾರದಂದು ಸುಮಾರು 1.40 ಲಕ್ಷ ಷೇರುಗಳು ನ್ಯಾಶನಲ್ಸ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ `ಆಕ್ಷನ್'ನಲ್ಲಿದ್ದು ಅಂದು ಕೊಳ್ಳುವ ಪ್ರಕ್ರಿಯೆ ನಡೆಯುವುದಾಗಿದೆ. ಅಂದು `ಆಕ್ಷನ್' ನಲ್ಲಿ ರೂ932 ರಂತೆ ಕೊಳ್ಳಲಾಯಿತು.ಇದು ಪೇಟೆಯ ದರಕ್ಕೆ ಪ್ರತಿ ಷೇರಿಗೆ ಸುಮಾರು ರೂ100 ರಂತೆ ಹೆಚ್ಚಾಗಿದ್ದುದು ಗಮನಾರ್ಹ. ಇದು ಪೇಟೆಯಲ್ಲಿನ ಪರಿಸ್ಥಿತಿಯನ್ನು ಸದ್ಬಳಕೆಯೋ ಅಥವಾ ದುರುಪಯೋಗವೊ ನಿರ್ಧರಿಸುವುದು ಕಷ್ಟ. ಆದರೆ ದಿನಂಪ್ರತಿ ಅತ್ಯಂತ ಹೆಚ್ಚಿನ ಏರಿಳಿತ ಪ್ರದರ್ಶಿಸಿದ ಕಡಿಮೆ ಬೆಲೆಯಲ್ಲಿ ವಿತರಿಸಲು ಸಿದ್ದರಿದ್ದರೂ ಪೇಟೆ ಅದಕ್ಕೆ ಉತ್ತ ಸ್ಪಂದನದ ಮೂಲಕ ರೂ620ಕ್ಕೆ ಸ್ಪಂದಿಸಿದ್ದು ವಿಶೇಷ.ಆಫರ್ ಫಾರ್ ಸೇಲ್

ಈ ವಾರ ಅಸ್ಟ್ರಾಜೆನಿಕಾ ಫಾರ್ಮದೊಂದಿಗೆ ಮತ್ತೊಂದು ಸ್ವೀಡನ್ ಕಂಪೆನಿ ನೋವಾರ್ಟಿಸ್ ಇಂಡಿಯಾ ರೂ375 ರಂತೆ 4.54 ಲಕ್ಷ ಷೇರನ್ನು, ಮಾಧ್ಯಮ ಕಂಪೆನಿ ಸನ್ ಟಿವಿ ನೆಟ್‌ವರ್ಕ್, 75.81 ಲಕ್ಷ ಷೇರನ್ನು ರೂ403 ರಂತೆ, ಜೆ.ಪಿ.ಇನ್‌ಫ್ರಾಟೆಕ್ ಕಂಪೆನಿಯು ರೂ 35 ರಂತೆ 16 ಕೋಟಿ ಷೇರನ್ನು, ಜೆಟ್ ಏರ್‌ವೇಸ್ 43.17 ಲಕ್ಷ ಷೇರನ್ನು ರೂ510 ರಂತೆ, ಅದಾನಿ ಎಂಟರ್ ಪ್ರೈಸಸ್ 1.60 ಕೋಟಿ ಷೇರನ್ನು ರೂ227 ರಂತೆ, ಈ ಗವಾಕ್ಷಿಯ ಮೂಲಕ ಮಾರಾಟ ಮಾಡಿವೆ. ಮೊದಲೆರಡು ಕಂಪೆನಿಗಳು ಪೇಟೆಯ ದರಕ್ಕಿಂತ ಕಡಿಮೆ ದರದಲ್ಲಿ ವಿತರಿಸಲು ಪ್ರಯತ್ನಿಸಿದ್ದಕ್ಕೆ ಹೆಚ್ಚಿನ ಬೆಲೆಯ ಸ್ಪಂದನ ದೊರೆಯಿತು.ಅದಾನಿ ಎಂಟರ್‌ಪ್ರೈಸಸ್ ಹಿಂದೆ ಫೆಬ್ರುವರಿಯ ರೀತಿ ಈ ಭಾರಿಯೂ ಪೇಟೆಯ ದರಕ್ಕಿಂತ ಹೆಚ್ಚಿನ ದರದಲ್ಲಿ ವಿತರಿಸಿದ ನಂತರ ಪೇಟೆಯ ಬೆಲೆ ಕುಸಿಯಿತು. ಒಟ್ಟು 22 ಕಂಪೆನಿಗಳು ಈ ಗವಾಕ್ಷಿಯ ಮೂಲಕ ಷೇರು ವಿತರಿಸಿದರೆ, ಸೋಮವಾರದಂದು ಬಿಜಿಆರ್ ಎನರ್ಜಿಯ ಪ್ರವರ್ತಕರಲ್ಲದೆ ಇತರೆ ನಾಲ್ಕು ಕಂಪೆನಿಗಳ ಪ್ರವರ್ತಕರು ಷೇರು ಮಾರಾಟ ಮಾಡುವರು.

98863-13380

(ಮಧ್ಯಾಹ್ನ 4.30ರ ನಂತರ)

ಪ್ರತಿಕ್ರಿಯಿಸಿ (+)