ಜಿದ್ದಾಜಿದ್ದಿಯ ಚುನಾವಣಾ ಸಮರ ಸಿದ್ಧತೆ

7

ಜಿದ್ದಾಜಿದ್ದಿಯ ಚುನಾವಣಾ ಸಮರ ಸಿದ್ಧತೆ

ಡಾ. ಸಂದೀಪ್‌ ಶಾಸ್ತ್ರಿ
Published:
Updated:
ಜಿದ್ದಾಜಿದ್ದಿಯ ಚುನಾವಣಾ ಸಮರ ಸಿದ್ಧತೆ

ರಾಜ್ಯ ಘಟಕದ ಅಧ್ಯಕ್ಷರನ್ನು ಮುಂದುವರೆಸಿರುವ ಕಾಂಗ್ರೆಸ್‌, ಮುಖ್ಯಮಂತ್ರಿ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಪ್ರಕಟಿಸಿದೆ. ಫಲಿತಾಂಶ ಅತಂತ್ರವಾದರೆ ಇನ್ನೊಮ್ಮೆ ಕಿಂಗ್‌ಮೇಕರ್‌ ಆಗುವ ನಿರೀಕ್ಷೆಯಲ್ಲಿ ಜೆಡಿಎಸ್‌ ಇದೆ.

ಮುಂದಿನ ವರ್ಷದ ಬೇಸಿಗೆಯಲ್ಲಿ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಎದುರಿಸಲು ಪ್ರಮುಖ ಪಕ್ಷಗಳಲ್ಲಿ ಪೂರ್ವಭಾವಿ ಸಿದ್ಧತೆಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿವೆ.

ಜನರ ನಾಡಿಮಿಡಿತ ಅಂದಾಜಿಸಲು ಮತ್ತು ಚುನಾವಣೆಯಲ್ಲಿ ಗರಿಷ್ಠ ಪ್ರಯೋಜನ ಪಡೆಯಲು ರಾಜಕೀಯ ಕಾರ್ಯತಂತ್ರ ಹೆಣೆಯುವುದರಲ್ಲಿ ರಾಜಕಾರಣಿಗಳು ಮಗ್ನರಾಗಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌, ಪ್ರಮುಖ ಪ್ರತಿಪಕ್ಷ ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷ ಜೆಡಿಎಸ್‌– ಕಠಿಣ ಸ್ವರೂಪದ, ತೀವ್ರ ಪೈಪೋಟಿಯಿಂದ ಕೂಡಿದ ಮತ್ತು ಅಬ್ಬರದ ಪ್ರಚಾರಕ್ಕೆ ಅಣಿಯಾಗುತ್ತಿವೆ.

ತೀವ್ರ ಹಣಾಹಣಿಯಿಂದ ನಡೆಯಲಿರುವ ಚುನಾವಣೆಯಲ್ಲಿನ ಚರ್ಚೆಯು ವ್ಯಕ್ತಿ ಕೇಂದ್ರಿತವಾಗುವುದರ ಬದಲಿಗೆ ನೀತಿ ನಿಯಮಗಳಿಗೆ ಹೆಚ್ಚು ಗಮನ ನೀಡುವಂತಾಗಲಿ, ವಿವಾದಗಳ ಬದಲಿಗೆ ಅರ್ಥಪೂರ್ಣ ಚರ್ಚೆಗಳು ನಡೆಯುವಂತಾಗಲಿ ಎಂದು ಯಾರಾದರೂ ಆಶಿಸಬಹುದು.

ರಾಜ್ಯದಲ್ಲಿ ಈ ಹಿಂದೆ ಕಂಡುಬಂದಿದ್ದ ಎರಡು ಬಗೆಯ ಚುನಾವಣಾ ಅಲೆಯು ಈ ಬಾರಿ ಉಲ್ಟಾ ಆಗಲಿದೆಯೇ? ಎನ್ನುವ ತೀವ್ರ ಕುತೂಹಲಕ್ಕೂ ಈ ಚುನಾವಣೆಯ ಫಲಿತಾಂಶವು ಎಡೆಮಾಡಿಕೊಡಲಿದೆ. 

ಮೊದಲನೆಯದಾಗಿ, ಈ ಹಿಂದಿನ ಆರು ವಿಧಾನಸಭಾ ಚುನಾವಣೆಗಳಲ್ಲಿ ಅಧಿಕಾರದಲ್ಲಿದ್ದ ಪಕ್ಷವು ಮತ್ತೊಮ್ಮೆ ಸ್ಪಷ್ಟ ಜನಾದೇಶ ಪಡೆದು ಅಧಿಕಾರಕ್ಕೆ ಬಂದಿಲ್ಲ. ಅಂತಹ ಅಲೆಯನ್ನು ಈ ಬಾರಿ ತಿರುವು ಮುರುವು ಮಾಡುವುದಾಗಿ ಕಾಂಗ್ರೆಸ್‌ ಪಕ್ಷವು ಭಾರಿ ಆಶಾಭಾವ ಹೊಂದಿದೆ. ಇನ್ನೊಂದೆಡೆ ಬಿಜೆಪಿಯು, ಹಳೆಯ ಸಂಪ್ರದಾಯ ಮರುಕಳಿಸಲಿ ಎಂದು ಬಯಸುತ್ತಿದೆ. ಈ ಎರಡೂ ರಾಷ್ಟ್ರೀಯ ಪಕ್ಷಗಳು ಅಗತ್ಯ ಬಹುಮತ ಪಡೆಯುವುದಿಲ್ಲ. ಅಂತಹ ಸಂದರ್ಭದಲ್ಲಿ ತಾನು ಮತ್ತೊಮ್ಮೆ ಕಿಂಗ್‌ಮೇಕರ್ ಆಗಬೇಕು ಎಂದು ಜೆಡಿಎಸ್‌ ಆಶಿಸುತ್ತಿದೆ.

ಎರಡನೆಯದಾಗಿ, 1989ರಿಂದೀಚೆಗೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಪಕ್ಷದ ಬದಲಾಗಿ ಬೇರೆ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಿದರ್ಶನಗಳಿವೆ. ಈ ವಿದ್ಯಮಾನವು ಈ ಬಾರಿಯೂ ಪುನರಾವರ್ತನೆಯಾಗಲಿ ಎಂದು ಕಾಂಗ್ರೆಸ್ ಬಯಸುತ್ತಿದೆ. ಆದರೆ, ಬಿಜೆಪಿಯು ಇಂತಹ  ಅಲೆಯು ಈ ಬಾರಿ ಬದಲಾಗಲಿ ಎಂದು ಬಯಸುತ್ತಿದೆ. ಈ ಮೇಲಿನ ಎರಡೂ ವಿದ್ಯಮಾನಗಳಿಗೆ ಸಂಬಂಧಿಸಿ ಹೇಳುವುದಾದರೆ  ಎರಡರಲ್ಲಿ ಒಂದಂತೂ ಈ ಬಾರಿ ಸ್ಪಷ್ಟವಾಗಿ ತಿರುವುಮುರುವುಗೊಳ್ಳಲಿದೆ ಎನ್ನುವುದಂತೂ ನಿಶ್ಚಿತ.

ಚುನಾವಣೆ ಸ್ಪರ್ಧೆ ಎದುರಿಸಲು ಮೂರೂ ಪಕ್ಷಗಳು  ಸನ್ನದ್ಧಗೊಳ್ಳುತ್ತಿವೆ. ಬಿಜೆಪಿಯು ಚುನಾವಣಾ ನಾಯಕತ್ವ ಕುರಿತ ಗೊಂದಲಕ್ಕೆ ತೆರೆ ಎಳೆದಿದೆ. ಬಿ.ಎಸ್‌. ಯಡಿಯೂರಪ್ಪ ಅವರನ್ನು ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿ ಈಗಾಗಲೇ ಚುನಾವಣಾ ಅಖಾಡಕ್ಕೆ ಧುಮುಕಿದೆ.

ಇದೊಂದು ಬಿಜೆಪಿಯ ಜಾಣತನದ ನಡೆಯಾಗಿದೆ. ಯಡಿಯೂರಪ್ಪ ಅವರನ್ನು ಚುನಾವಣೆಯ ಮುಂಚೂಣಿಗೆ ತಂದು ನಿಲ್ಲಿಸುವ ಮೂಲಕ ಎರಡು ಗುರಿಗಳನ್ನು ಸಾಧಿಸಲು ಪಕ್ಷ ಉದ್ದೇಶಿಸಿದೆ. ಮೊದಲನೆಯದಾಗಿ, ರಾಜ್ಯಮಟ್ಟದ ನಾಯಕರು ತಮ್ಮ ಆಂತರಿಕ ಜಗಳಕ್ಕೆ ಕೊನೆ ಹಾಡಬೇಕೆಂಬ ಬಗ್ಗೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದೆ.

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ನೇತೃತ್ವದಲ್ಲಿಯೇ ಎಲ್ಲರೂ ಚುನಾವಣೆ ಎದುರಿಸಲು ಮಾನಸಿಕವಾಗಿ ಸಜ್ಜುಗೊಳ್ಳಬೇಕು ಎನ್ನುವ ಸ್ಪಷ್ಟ ಸೂಚನೆಯೂ ಇಲ್ಲಿದೆ. ಮುಖಂಡರ ಮಧ್ಯೆ ಸಾರ್ವಜನಿಕವಾಗಿ ನಡೆಯುವ ಆರೋಪ – ಪ್ರತ್ಯಾರೋಪಗಳು ಪಕ್ಷದ ವರ್ಚಸ್ಸಿಗೆ ಧಕ್ಕೆ ಒದಗಿಸುತ್ತಿರುವುದನ್ನು ಈ ನಾಯಕ ಗಣಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಪಕ್ಷದ ಒಳಗಿನ ಭಿನ್ನಮತವನ್ನು  ಕೇಂದ್ರೀಯ ನಾಯಕತ್ವವು ಹೇಗೆ ನಿಭಾಯಿಸಲಿದೆ ಎನ್ನುವುದು ಹೆಚ್ಚು ಗಮನ ಸೆಳೆದಿತ್ತು.

ಬಿಜೆಪಿಯ ಈ ಕ್ರಮವು ಕಾಂಗ್ರೆಸ್‌ಗೆ ನೇರ ಸವಾಲು ಒಡ್ಡುವ ರೂಪದಲ್ಲಿ ಇದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಕೂಡ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಲಿ  ಎನ್ನುವ ಪಂಥಾಹ್ವಾನ ನೀಡಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ಯಡಿಯೂರಪ್ಪ ಅವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವುದು ಮಹತ್ವದ ರಾಜಕೀಯ ನಡೆಯಾಗಿದೆ.

ಇದೇ ಹೊತ್ತಿಗೆ ಕಾಂಗ್ರೆಸ್‌ ಕೂಡ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನು ಮುಂದುವರೆಸುವುದಾಗಿ ಪ್ರಕಟಿಸಿರುವುದು ಕಾಕತಾಳೀಯವೂ ಇರಬಹುದು. ಯಥಾಸ್ಥಿತಿ ಕಾಯ್ದುಕೊಳ್ಳಲು ಉದ್ದೇಶಿಸಿರುವ ಪಕ್ಷವು, ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆಯಲು ಜಿ. ಪರಮೇಶ್ವರ ಅವರನ್ನು ಕೇಳಿಕೊಂಡಿದೆ. ಇನ್ನೊಂದೆಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಚುನಾವಣೆ ಎದುರಿಸುವುದನ್ನೂ ದೃಢಪಡಿಸಿದೆ.

ಪಕ್ಷದ ಪ್ರಮುಖ ಮುಖಂಡರಿಗೆ ರಾಜಕೀಯವಾಗಿ ಸೂಕ್ತ ಸ್ಥಾನಮಾನ ನೀಡುವ ಮೂಲಕ, ವಿಭಿನ್ನ ಸಾಮಾಜಿಕ ಹಿತಾಸಕ್ತಿಗಳನ್ನು ಸಮಾಧಾನಕರ ರೀತಿಯಲ್ಲಿ  ತೃಪ್ತಿಪಡಿಸಲು ಕಾಂಗ್ರೆಸ್‌ ಹೈಕಮಾಂಡ್‌ ಪ್ರಯತ್ನಿಸಿದೆ.

ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷರು ‘ಅಹಿಂದ’ ಪ್ರತಿನಿಧಿಸಿದರೆ, ಪಕ್ಷದ ಪ್ರಮುಖ ಆಧಾರಸ್ತಂಭವಾಗಿರುವ ಪ್ರಭಾವಿ ಮತ್ತು ಮುಂದುವರೆದ ಜಾತಿಗಳ ಮುಖಂಡರಿಗೆ ಪ್ರಚಾರ ಸಮಿತಿಯ ಹೊಣೆಗಾರಿಕೆ ಮತ್ತು ಕಾರ್ಯಾಧ್ಯಕ್ಷ ಹುದ್ದೆ ದಯಪಾಲಿಸಿದೆ.

ಪ್ರಮುಖ ಸಾಮಾಜಿಕ ಬಣಗಳ ಮುಖಂಡರಿಗೆ ‘ರಾಜಕೀಯ ಆಶ್ರಯ’ ಕಲ್ಪಿಸಿರುವ ಈ ಜಾಣ ಪ್ರಯತ್ನವು, ಚುನಾವಣೆಯ ಸಂದರ್ಭದಲ್ಲಿ ಪಕ್ಷಕ್ಕೆ ಲಾಭದಾಯಕವಾಗಿ ಪರಿಣಮಿಸಲಿದೆಯೇ ? ಎನ್ನುವುದು ಮಹತ್ವದ ಪ್ರಶ್ನೆಯಾಗಿರಲಿದೆ. ಕಾಂಗ್ರೆಸ್‌ ಮತ್ತು ಬಿಜೆಪಿಯ ವರಿಷ್ಠರು ತೆಗೆದುಕೊಂಡಿರುವ ಇಂತಹ ನಿರ್ಧಾರಗಳ ಪರಿಣಾಮಗಳು ಕಾಲ ಕ್ರಮೇಣ ಸ್ಪಷ್ಟಗೊಳ್ಳಲಿವೆ.

ಬಿಜೆಪಿಯು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಸ್ಪಷ್ಟವಾಗಿ ಘೋಷಿಸಿರುವುದರಿಂದ,  ಪಕ್ಷದ ಅಭ್ಯರ್ಥಿಗಳ ಆಯ್ಕೆ ಮತ್ತು ಚುನಾವಣಾ ಪ್ರಚಾರದಲ್ಲಿ ಪಕ್ಷದ ವರಿಷ್ಠರ ಮಾತೇ ನಡೆಯಲಿದೆ ಎನ್ನುವುದರಲ್ಲಿ ಯಾವುದೇ ಸಂದೇಹವೇ ಇಲ್ಲ. ಪಕ್ಷವು ಅನುಸರಿಸಿಕೊಂಡು ಬಂದಿರುವ ಪದ್ಧತಿಯನ್ನು ಚಾಚೂ ತಪ್ಪದೆ ಪಾಲಿಸುವುದು ಮತ್ತು ವಿಭಿನ್ನ ಬಣಗಳನ್ನು ಜತೆಯಾಗಿ ಕರೆದುಕೊಂಡು ಹೋಗುವುದರ ಜತೆಗೆ ಪಕ್ಷದ ರಾಜ್ಯ ಘಟಕದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವುದನ್ನು ಇದು ತೋರಿಸುತ್ತದೆ.

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಸನ್ನಿಹಿತವಾದಂತೆ, ಪಕ್ಷದ ದೆಹಲಿ ಮುಖಂಡರ ಪ್ರಭಾವವೂ ಹೆಚ್ಚಲಿದೆ. ಜತೆಗೆ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿರುವ ಸಂಘಟನೆಯ ಸಲಹೆಗೂ ಸಾಕಷ್ಟು ಮಹತ್ವ ದೊರೆಯಲಿದೆ. ಇದು ರಾಜ್ಯ ಘಟಕದಲ್ಲಿನ ತಳಮಳ ಮತ್ತು ಒಡಕಿನ ದನಿಯನ್ನು ಹತ್ತಿಕ್ಕುವ ಪರಿಣಾಮಕಾರಿ ವಿಧಾನವಾಗಿರಲಿದೆ. ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯ ಕಾರ್ಯವಿಧಾನ ಮತ್ತು ವರ್ತನೆಗಳ ಬಗ್ಗೆ ಪಕ್ಷದ ಕೆಲ ಮುಖಂಡರಲ್ಲಿ ಮಡುಗಟ್ಟಿರುವ ಅಸಮಾಧಾನವನ್ನು ಹತ್ತಿಕ್ಕಲೂ ಇದರಿಂದ ಸಾಧ್ಯವಾಗಲಿದೆ.

ಬಿಜೆಪಿಯು ಕರ್ನಾಟಕದಲ್ಲಿ ಮರಳಿ ಅಧಿಕಾರಕ್ಕೆ ಬಂದರೆ ಮಾತ್ರ, ಪಕ್ಷದ ‘ಕಾಂಗ್ರೆಸ್‌ ಮುಕ್ತ ಭಾರತ’ ಘೋಷಣೆ ನಿಜ ಮಾಡುವ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಇಡಲು ಸಾಧ್ಯವಾಗಲಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನಾಯಕತ್ವದಲ್ಲಿಯೇ ಪಕ್ಷವು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎನ್ನುವುದರ ಬಗ್ಗೆ ಕಾಂಗ್ರೆಸ್‌ ಸ್ಪಷ್ಟ ಸಂದೇಶ ನೀಡಿದೆ. ಪಕ್ಷದ ಒಳಗಿನ ವಿಭಿನ್ನ ಬಣಗಳು ತಮ್ಮೆಲ್ಲ ಭಿನ್ನಾಭಿಪ್ರಾಯ ಮರೆತು ಒಂದು ಬಲಿಷ್ಠ ತಂಡವಾಗಿ ಕಾರ್ಯನಿರ್ವಹಿಸುವ ಬಗ್ಗೆ ಪಕ್ಷದ ಹೈಕಮಾಂಡ್‌ ಕ್ರಮ ಕೈಗೊಳ್ಳುವುದೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಕಳೆದ ಒಂದು ದಶಕದಲ್ಲಿ, ತನ್ನ ಮಾತೇ ನಡೆಯಬೇಕು ಎಂದು ಪಟ್ಟು ಹಿಡಿಯುವ ಪಕ್ಷದ ಹೈಕಮಾಂಡ್‌ ಅನ್ನು ನಾವು ಕಂಡಿಲ್ಲ. ವಾಸ್ತವಿಕ ರಾಜಕೀಯದ ಕಾರಣಕ್ಕೆ ಪಕ್ಷದ ದೆಹಲಿ ಮುಖಂಡರು ಇಂತಹ ನಿಲುವು ತಳೆದಿದ್ದರೇ ಹೊರತು ಅದು ಅವರ ಆಯ್ಕೆಯ ವಿಷಯವೇನೂ ಆಗಿರಲಿಲ್ಲ.  ವಿಭಿನ್ನ ಬಣಗಳ ನಡುವಣ ಭಿನ್ನಾಭಿಪ್ರಾಯಗಳನ್ನು  ನಿಯಂತ್ರಿಸುವ ಅದರ ಸಾಮರ್ಥ್ಯವನ್ನು ಪಕ್ಷದ ಕಾರ್ಯಕರ್ತರು ಕುತೂಹಲದಿಂದ ಗಮನಿಸುತ್ತಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವು ಆಡಳಿತಾರೂಢ ಪಕ್ಷವಾಗಿ ಚುನಾವಣೆ ಎದುರಿಸುವಾಗೊಮ್ಮೆ ಒಂದು ಪ್ರಮುಖ ಸಮಸ್ಯೆಯು ಪಕ್ಷವನ್ನು ಕಾಡುತ್ತಾ ಬಂದಿದೆ.

ರಾಜ್ಯದ ಪ್ರತಿಯೊಬ್ಬ ಮುಖಂಡ ತನ್ನ ವೈಯಕ್ತಿಕ ರಾಜಕೀಯ ನೆಲೆಯನ್ನು ರಕ್ಷಿಸಿಕೊಳ್ಳಲು ಹೆಚ್ಚು ಶ್ರಮ ಪಡುತ್ತಾನೆಯೇ ವಿನಾ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಪಕ್ಷದ ಸಾಧನೆಗಳನ್ನು ಹೇಳಿಕೊಳ್ಳುವುದರ ಹೊಣೆಗಾರಿಕೆಯನ್ನೆಲ್ಲವನ್ನು ಸಂಪೂರ್ಣವಾಗಿ ಮುಖ್ಯಮಂತ್ರಿಯ ತಲೆಗೆ ಕಟ್ಟಿ ಸುಮ್ಮನಾಗುತ್ತಾರೆ.

ಎಲ್ಲ ಬಣಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಿರುವುದು ಮುಖಂಡರನ್ನು ಸಂತೃಪ್ತಿಗೊಳಿಸಿರುವಂತೆ ಕಂಡರೂ ಈ ಹಿಂದಿನ ಅನುಭವ ಆಧರಿಸಿ ಹೇಳುವುದಾದರೆ, ಇಂತಹ ಪ್ರಯತ್ನವು ಪಕ್ಷದಲ್ಲಿ ಒಗ್ಗಟ್ಟು ಮೂಡಿಸುವಲ್ಲಿ ಈ ಹಿಂದೆ ವಿಫಲವಾಗಿತ್ತು. ಪಕ್ಷವು ಆಂತರಿಕವಾಗಿ ಎದುರಿಸುವ ಪ್ರಮುಖ ಸವಾಲು ಇದೇ ಆಗಿದೆ.

ಬಿಜೆಪಿ ವಿರುದ್ಧದ ತನ್ನ ಸತತ ಸೋಲಿನ ಸರಮಾಲೆಗೆ ಕಡಿವಾಣ ಹಾಕಲು ಕರ್ನಾಟಕದಲ್ಲಿ ನಡೆಯಲಿರುವ ಚುನಾವಣೆಯು ಎಷ್ಟು ಮಹತ್ವದ್ದು ಎನ್ನುವುದು ಕಾಂಗ್ರೆಸ್‌ ಪಕ್ಷಕ್ಕೆ ಮನವರಿಕೆಯಾಗಿದೆಯೇ? ಎನ್ನುವ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ. ಪಂಜಾಬ್‌ನಲ್ಲಿನ ಕಾಂಗ್ರೆಸ್‌ ಗೆಲುವು ಅಕಾಲಿ ದಳದ ವಿರುದ್ಧವಾಗಿತ್ತೇ ಹೊರತು ಬಿಜೆಪಿ ವಿರುದ್ಧವಲ್ಲ.

ಬಿಜೆಪಿಯ ಗೆಲುವಿನ ಆಕ್ರಮಣಕಾರಿ ಧೋರಣೆಗೆ ಕಡಿವಾಣ ಹಾಕುವಲ್ಲಿ ಕಾಂಗ್ರೆಸ್‌ ಸಫಲವಾಗುವುದೇ ಎನ್ನುವುದು ಕರ್ನಾಟಕದಲ್ಲಿ ನಿಜವಾಗಿ ನಿಕಷಕ್ಕೆ ಒಳಪಡಲಿದೆ.

ಕರ್ನಾಟಕದ ರಾಜಕೀಯದಲ್ಲಿ ಮೂರನೇ ಶಕ್ತಿಯಾಗಿರುವ ಜೆಡಿಎಸ್‌, ಎರಡು ಪ್ರಮುಖ ಪಕ್ಷಗಳು ಸಂಪೂರ್ಣ ಬಹುಮತ ಪಡೆಯದ ಸಾಧ್ಯತೆಯನ್ನೇ ಬಂಡವಾಳ ಮಾಡಿಕೊಳ್ಳಲು ಉದ್ದೇಶಿಸಿದೆ. ರಾಜ್ಯದಲ್ಲಿ ಹಲವೆಡೆ ಪಕ್ಷದ ಪ್ರಭಾವ ಸಾಕಷ್ಟಿದೆ. ಆದರೆ, ಅಪ್ಪ– ಮಗನ ಪಕ್ಷ ಎನ್ನುವ ಹಣೆಪಟ್ಟಿಯಿಂದ ಹೊರಬರಲು ಅದಕ್ಕಿನ್ನೂ ಸಾಧ್ಯವಾಗಿಲ್ಲ.

ಮುಂಬರುವ ದಿನಗಳಲ್ಲಿ ರಾಜ್ಯದ ಮತದಾರರು ರಾಜಕೀಯ ಕ್ಷೇತ್ರದಲ್ಲಿನ ಬೆಳವಣಿಗೆಗಳನ್ನು ಕುತೂಹಲದಿಂದ ಗಮನಿಸಲಿದ್ದಾರೆ. ಚುನಾವಣಾ ರಣರಂಗದ ಭೂಮಿಕೆಯಂತೂ ಸಜ್ಜುಗೊಂಡಿದೆ. ರಾಜಕೀಯ ಎದುರಾಳಿಗಳು ಪರಸ್ಪರ ತಂತ್ರ – ಪ್ರತಿತಂತ್ರ ಹೆಣೆಯುತ್ತಿದ್ದಾರೆ. ಜಿದ್ದಾಜಿದ್ದಿಯ ಹೋರಾಟವಂತೂ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry