ಜಿಯೋನೀ ಇಲೈಫ್ ಇ3 ಸಣ್ಣ ದುಡ್ಡಿಗೆ ದೊಡ್ಡ ಸವಲತ್ತು!

7

ಜಿಯೋನೀ ಇಲೈಫ್ ಇ3 ಸಣ್ಣ ದುಡ್ಡಿಗೆ ದೊಡ್ಡ ಸವಲತ್ತು!

ಯು.ಬಿ. ಪವನಜ
Published:
Updated:
ಜಿಯೋನೀ ಇಲೈಫ್ ಇ3 ಸಣ್ಣ ದುಡ್ಡಿಗೆ ದೊಡ್ಡ ಸವಲತ್ತು!

ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಶೇಕಡ 75ರಷ್ಟನ್ನು ಆಂಡ್ರಾಯಿಡ್ ಕಾರ್ಯಾಚರಣ ವ್ಯವಸ್ಥೆಯನ್ನು ಬಳಸುವ ಫೋನ್‌ಗಳು ಕಬಳಿಸವೆ. ಗೂಗ್ಲ್ ಆಂಡ್ರಾಯಿಡ್ ಅನ್ನು ಮುಕ್ತವಾಗಿಟ್ಟಿರುವುದು ಇದಕ್ಕೆ ಒಂದು ಪ್ರಮುಖ ಕಾರಣ. ಆಂಡ್ರಾಯಿಡ್ ಆಧಾರಿತ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರಮುಖವಾಗಿ ಎರಡು ಬಗೆ.

ಮೊದಲನೆಯದಾಗಿ ಹೆಚ್ಚು ಬೆಲೆಬಾಳುವ, ಅಂತೆಯೇ ಅತ್ಯುತ್ತಮ ಗುಣಮಟ್ಟದ ಸ್ಯಾಮ್‌ಸಂಗ್, ಎಚ್‌ಟಿಸಿ, ಎಲ್‌ಜಿ, ಸೋನಿ ಎರಿಕ್ಸನ್, ಇತ್ಯಾದಿ. ಎಲ್ಲರಿಗೂ ಈ ಫೋನ್‌ಗಳು ಕೈಗೆಟುಕುವುದಿಲ್ಲ. ಅಂತಹವರಿಗಾಗಿ ಕಡಿಮೆ ಬೆಲೆಯ ಆಂಡ್ರಾಯಿಡ್ ಆಧರಿತ ಫೋನ್‌ಗಳೂ ಲಭ್ಯವಿವೆ. ಕಾರ್ಬನ್, ಮೈಕ್ರೋಮ್ಯಾಕ್ಸ್, ಲಾವಾ, ಇತ್ಯಾದಿ ಇವುಗಳಲ್ಲಿ ಗಮನಾರ್ಹ ಹೆಸರುಗಳು.

ಇತ್ತೀಚೆಗೆ ಇನ್ನೂ ಹಲವರು ಈ ಮಾರುಕಟ್ಟೆಗೆ ನುಗ್ಗುತ್ತಿದ್ದಾರೆ. ಅಂತಹ ಒಂದು ಕಂಪೆನಿ ಚೀನಾದ ಜಿಯೋನೀ. ಅವರ ಒಂದು ಸ್ಮಾರ್ಟ್‌ಫೋನ್ ಇಲೈಫ್ ಇ3 (Gionee Elife E3) ಈ ವಾರದ ನಮ್ಮ ಅತಿಥಿ.

ಗುಣವೈಶಿಷ್ಟ್ಯಗಳು

1.2 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಪ್ರೊಸೆಸರ್ (Quad core 1.2 GHz Cortex A7) 1+16 ಗಿಗಾಬೈಟ್ ಮೆಮೊರಿ, ಮೆಮೊರಿ ಹೆಚ್ಚಿಸಲು ಮೈಕ್ರೋ ಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ, 1280 X 720 ಪಿಕ್ಸೆಲ್ ರೆಸೊಲೂಶನ್‌ನ 4.7 ಇಂಚು ಗಾತ್ರದ ಐಪಿಎಸ್ ಪರದೆ, 8 ಮೆಗಾಪಿಕ್ಸೆಲ್ ಪ್ರಾಥಮಿಕ ಮತ್ತು 2 ಮೆಗಾಪಿಕ್ಸೆಲ್ ಮುಂದುಗಡೆಯ ಕ್ಯಾಮೆರಾ, ಎಲ್‌ಇಡಿ ಫ್ಲಾಶ್, ಆಂಡ್ರಾಯಿಡ್ 4.2 (ಜೆಲ್ಲಿಬೀನ್) ಕಾರ್ಯಾಚರಣ ವ್ಯವಸ್ಥೆ, ಎಫ್‌ಎಂ ರೇಡಿಯೊ, 2ಜಿ ಮತ್ತು 3ಜಿ ಸಂಪರ್ಕ, ಎರಡು ಸಿಮ್, ಬ್ಲೂಟೂತ್ ಮತ್ತು ವೈಫೈ ಸಂಪರ್ಕ ಸೌಲಭ್ಯ, ಜಿಪಿಎಸ್, ಡಿಟಿಎಸ್, 1,800mAh 137.5 X 68.4 X 7.9 ಮಿ.ಮೀ. ಗಾತ್ರ, ಬ್ಯಾಟರಿ , ಇತ್ಯಾದಿ. ಒಂದು ಮೇಲ್ಮಟ್ಟದ ಸ್ಮಾರ್ಟ್‌ಫೋನಿನ ಎಲ್ಲ ಗುಣವೈಶಿಷ್ಟ್ಯಗಳು ಇದರಲ್ಲಿವೆ.ಇದರ ವಿನ್ಯಾಸ ಮತ್ತು ರಚನೆ ಚೆನ್ನಾಗಿದೆ. ಕೈಯಲ್ಲಿ ಹಿಡಿದಾಗಿನ ಅನುಭವ ಚೆನ್ನಾಗಿದೆ. ನಾಲ್ಕು ಬಣ್ಣಗಳಲ್ಲಿ ಇದು ಲಭ್ಯ. ನನಗೆ ವಿಮರ್ಶೆಗೆ ಬಂದುದು ಕಪ್ಪು ಬಣ್ಣದ್ದು. ನೋಡಲು ಮತ್ತು ಕೈಯಲ್ಲಿ ಹಿಡಿಯಲು ಚೆನ್ನಾಗಿದೆ. ಪರದೆ ಕಡುಕಪ್ಪಾಗಿದೆ. ಎಲ್ಲ ಬಣ್ಣಗಳ ಪುನರುತ್ಪತ್ತಿ ಸರಿಯಾಗಿದೆ. ಪರದೆಗೆ ಸುರಕ್ಷಾ ಹೊದಿಕೆ (screen protector) ನೀಡಿದ್ದಾರೆ. ಹಿಂದಿನ ಕವಚ ತೆಗೆಯಬಹುದು.

ಸಿಮ್ ಕಾರ್ಡ್ ಹಾಕಲು ಮತ್ತು ಮೈಕ್ರೋಎಸ್‌ಡಿ ಕಾರ್ಡ್ ಹಾಕಲು ಅದನ್ನು ತೆಗೆಯಬೇಕು. ಕೆಲವು ಕಂಪೆನಿಗಳು ಸಂಪೂರ್ಣ ಮುಚ್ಚಿರುವ, ಅಂದರೆ ಹಿಂದಿನ ಕವಚ ತೆಗೆಯಲು ಬಾರದ ಫೋನ್ ತಯಾರಿಸುತ್ತಿದ್ದಾರೆ. ಅಂತಹವುಗಳಲ್ಲಿ ಅವರು ಕೊಟ್ಟಷ್ಟೆ ಮೆಮೊರಿಗೆ ತೃಪ್ತರಾಗಬೇಕು. ಇದರಲ್ಲಿ ಹಾಗಲ್ಲ. ನಿಮಗಿಷ್ಟವಾದಷ್ಟು, ಅಂದರೆ 32 ಗಿಗಾಬೈಟ್‌ನ ಒಳಗೆ ಮೆಮೊರಿ ಹೆಚ್ಚಿಸಿಕೊಳ್ಳಬಹುದು.ಇದರ ಪ್ರೊಸೆಸರ್ ಚೆನ್ನಾಗಿದೆ. ವೇಗವಾಗಿ ಕೆಲಸ ಮಾಡುತ್ತದೆ. ಎಲ್ಲೂ ನಿಧಾನ ಅನ್ನಿಸಲಿಲ್ಲ. ಆ್ಯಂಗ್ರಿ ಬರ್ಡ್ಸ್, ಟೆಂಪಲ್ ರನ್, ಇತ್ಯಾದಿ ಆಟಗಳನ್ನು ಆಡುವ ಅನುಭವ ಚೆನ್ನಾಗಿದೆ. ಪರದೆಯಲ್ಲಿ ಐಕಾನ್‌ಗಳನ್ನು ಸರಿಸುವಾಗಿನ ಅನುಭವ ಚೆನ್ನಾಗಿದೆ. ಆದರೆ ಇಲ್ಲೂ ನಿಧಾನ ಅನ್ನಿಸಲಿಲ್ಲ.ಕ್ಯಾಮೆರಾ ಪರವಾಗಿಲ್ಲ. ಆದರೆ ಅದ್ಭುತ ಎನ್ನುವಂತಿಲ್ಲ. ಅತಿ ಹತ್ತಿರದಿಂದಲೂ ಫೋಟೊ ತೆಗೆಯಬಹುದು. ಕಡಿಮೆ ಬೆಳಕಿನಲ್ಲೂ ಫೋಟೊ ತೆಗೆಯಬಹುದು. ಕಡಿಮೆ ಬೆಳಕಿನಲ್ಲೂ ತೆಗೆದ ಫೋಟೊಗಳು ತೃಪ್ತಿಕರವಾಗಿವೆ. ಕತ್ತಲಲ್ಲಿ ಫೋಟೊ ತೆಗೆಯಲು ಎಲ್‌ಇಡಿ ಫ್ಲಾಶ್ ಇದೆ. ಫ್ಲಾಶ್ ಕೂಡ ಪರವಾಗಿಲ್ಲ. ಸುಮಾರಾಗಿ ಶಕ್ತಿಶಾಲಿಯಾಗಿಯೇ ಇದೆ. ಎಚ್‌ಡಿಆರ್ ಮತ್ತು ಪಾನೊರಾಮ ಸೌಲಭ್ಯಗಳಿವೆ. ಹಾಗೆಂದು ಹೇಳಿ ಇದು ನಿಮ್ಮ ಡಿಜಿಟಲ್ ಕ್ಯಾಮೆರಾದ ಬದಲಿಗೆ ಬಳಸುವಷ್ಟು ಉತ್ತಮವಾಗೇನೂ ಇಲ್ಲ.ಇದರ ಆಡಿಯೊ ಎಂಜಿನ್ ತುಂಬ ಚೆನ್ನಾಗಿದೆ. ಇದರ ಜೊತೆ ನೀವು ಉತ್ತಮ ಗುಣಮಟ್ಟದ ಹೆಡ್‌ಫೋನ್ ಅಥವಾ ಆಂಪ್ಲಿಫೈಯರ್ ಬಳಸಿ ತೃಪ್ತಿ ನೀಡಬಲ್ಲ ಸಂಗೀತವನ್ನು ಅನುಭವಿಸಬಹುದು. ಇದರಲ್ಲಿ ಡಿಟಿಎಸ್ (digital theatre systems) ಸೌಲಭ್ಯ ಇದೆ. ಇದು ಮೂರು ಆಯಾಮಗಳ ಧ್ವನಿಯ ಅನುಭವ ನೀಡುತ್ತದೆ. ಸಿನಿಮಾ ನೋಡುವಾಗ ಅಥವಾ ಮೂರು ಆಯಾಮದ ಆಟ ಆಡುವಾಗ ಇದರ ಅನುಭವ ಗೊತ್ತಾಗುತ್ತದೆ.

ಆದರೆ ನನಗೆ ಅಂತಹ ಅದ್ಭುತ ಎಂದೇನೂ ಅನ್ನಿಸಲಿಲ್ಲ. ಬಹುಶಃ ನಾನು ಓಂಕಿಯೋ ಹೈಫೈ ಆಡಿಯೊ ಆಂಪ್ಲಿಫೈಯರ್ ಮತ್ತು ಬೋಸ್ ಸ್ಪೀಕರ್ ಬಳಸುವವನಾದುದರಿಂದ ಇದರ ಅನುಭವ ಅದ್ಭುತ ಎನ್ನಿಸಲಿಲ್ಲ. ಆದರೂ ಇಂತಹ ಚಿಕ್ಕ ಫೋನಿನಲ್ಲಿ ಒಂದು ಮಟ್ಟಿಗೆ ಉತ್ತಮ ಎನ್ನಬಹುದಾದ ಆಡಿಯೊ ನೀಡಿದ್ದಾರೆ ಎಂದು ಹೇಳಬಹುದು.ವೀಡಿಯೊ ನೋಡುವ ಅನುಭವ ಉತ್ತಮವಾಗಿದೆ. ಹೈಡೆಫಿನಿಶನ್ ವೀಡಿಯೊ ಸಲೀಸಾಗಿ ಪ್ಲೇ ಆಯಿತು. ಎಲ್ಲಿಯೂ ತಡೆತಡೆದು ಚಲಿಸಲಿಲ್ಲ (not jerky). ವ್ಯೆಯಿಂಗ್ ಆ್ಯಂಗಲ್ ಕೂಡ ಚೆನ್ನಾಗಿದೆ. ಇವತ್ತು ನಾಲ್ಕು ಜನರಿಗೆ ಒಟ್ಟಿಗೆ ಒಂದು ವೀಡಿಯೊ ತೋರಿಸಿದೆ. ಎಲ್ಲರಿಗೂ ನೋಡಲು ಸಾಧ್ಯವಾಯಿತು.ಮೈಕ್ರೋ ಯುಎಸ್‌ಬಿ ಕಿಂಡಿ ಇದೆ. ಇದರ ಮೂಲಕ ಚಾರ್ಜ್ ಮಾಡಬಹುದು ಮತ್ತು ಗಣಕಕ್ಕೆ ಜೋಡಿಸಬಹುದು. ಜಿಪಿಎಸ್ ಇರುವುದರಿಂದ ಗೂಗ್ಲ್ ಮ್ಯಾಪ್ ಬಳಸಿ ಸ್ಥಳ ತಿಳಿಯಬಹುದು. ಹೋಗಬೇಕಾದ ಜಾಗಕ್ಕೆ ಇದು ದಾರಿ ತೋರಿಸುತ್ತದ. ಇದೇನೋ ವಿಶೇಷವಲ್ಲ. ಜಿಪಿಎಸ್ ಇರುವ ಎಲ್ಲ ಆಂಡ್ರಾಯಿಡ್ ಫೋನ್‌ಗಳು ಇದನ್ನು ಮಾಡುತ್ತವೆ.ಕೆಳಗೆ ಮೂರು ಬಟನ್‌ಗಳಿವೆ. ಆದರೆ ಅವುಗಳಿಗೆ ಸ್ವಂತ ಬೆಳಕಿಲ್ಲ. ಅಂದರೆ ಕತ್ತಲಲ್ಲಿ ಅವುಗಳನ್ನು ಹುಡುಕುವುದು ಸ್ವಲ್ಪ ಕಷ್ಟ. ಜಿಯೋನಿಯವರು ಕೆಲವು ಕಿರುತಂತ್ರಾಂಶಗಳನ್ನು ಮೊದಲೇ ಫೋನಿನಲ್ಲಿ ಸೇರಿಸಿದ್ದಾರೆ. ಇವುಗಳಲ್ಲಿ ಟ್ವಿಟ್ಟರ್, ಫೇಸ್‌ಬುಕ್ ಸೇರಿವೆ. ಅವುಗಳನ್ನು ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ. ಫೋನ್‌ನಲ್ಲಿ ಮಾತನಾಡುವಾಗ ಅದನ್ನು ರೆಕಾರ್ಡ್ ಮಾಡಿಕೊಳ್ಳುವ ಸೌಲಭ್ಯವೂ ಇದೆ.ಆಂಡ್ರಾಯಿಡ್ 4.2 ಆದುದರಿಂದ ಬ್ರೌಸರ್‌ನಲ್ಲಿ ಕನ್ನಡ ಪಠ್ಯದ ರೆಂಡರಿಂಗ್ ಇದೆ. ಕನ್ನಡ ಜಾಲತಾಣಗಳ ವೀಕ್ಷಣೆಯ ಅನುಭವ ತೃಪ್ತಿದಾಯಕವಾಗಿದೆ. ಕನ್ನಡದ ಕೀಲಿಮಣೆ ಹಾಕಿಕೊಂಡರೆ ಕನ್ನಡದಲ್ಲಿ ಬೆರಳಚ್ಚು ಮಾಡಬಹುದು. ಇದರ ಪ್ರಮುಖ ಕೊರತೆ ಎಂದರೆ ಇದರ ಬ್ಯಾಟರಿ. ಇದರ ಶಕ್ತಿ ತುಂಬ ಕಡಿಮೆಯಾಯಿತು.

ತುಂಬ ಶಕ್ತಿಶಾಲಿಯಾದ ಪ್ರೊಸೆಸರ್‌ಗೆ ಸಹಜವಾಗಿಯೇ ಅಧಿಕ ಶಕ್ತಿಯ ಆಕರ ಬೇಕು. ಇಲ್ಲಿ ಜಿಯೋನಿಯವರು ಬಹುದೊಡ್ಡ ತಪ್ಪು ಮಾಡಿದ್ದಾರೆ ಎನ್ನಹುದು. ಜಿಯೋನಿ ಕಂಪೆನಿ ಈ ಕೇತ್ರದಲ್ಲಿ, ಅದರಲ್ಲೂ ಭಾರತದಲ್ಲಿ ಹೊಚ್ಚಹೊಸದು. ಇವರು ತಮ್ಮ ಫೋನ್‌ಗಳಿಗೆ ಎಷ್ಟರ ಮಟ್ಟಿಗೆ ಬೆಂಬಲ ನೀಡುತ್ತಾರೆ ಎಂಬುದು ತಿಳಿದಿಲ್ಲ. ಹೊಸ ಹೊಸ ಆವೃತ್ತಿಯ ಆಂಡ್ರಾಯಿಡ್ ಬಂದಾಗ ಇವರ ಫೋನ್‌ಗಳಿಗೆ ಕೂಡ ನವೀಕರಣದ ಸೌಲಭ್ಯ ನೀಡುತ್ತಾರೋ ಇಲ್ಲವೋ ತಿಳಿದಿಲ್ಲ. ಇದರ ಮುಖಬೆಲೆ ರೂ.15,000.

ಗ್ಯಾಜೆಟ್ ಸಲಹೆ

ಶಿವಪ್ರಸಾದರ  ಪ್ರಶ್ನೆ: ನಿಸ್ತಂತು (ವಯರ್‌ಲೆಸ್) ವಿಧಾನದಲ್ಲಿ ಗಣಕಕ್ಕೆ ಜೋಡಿಸುವ ಕ್ಯಾಮೆರಾ (ವೆಬ್‌ಕಾಮ್) ದೊರೆಯುತ್ತದೆಯೇ?

ಉ: ದೊರೆಯುತ್ತದೆ. ನಾನು ಬಳಸಿಲ್ಲ. ಲಾಜಿಟೆಕ್‌ನವರದ್ದನ್ನು ಕೊಳ್ಳಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry