ಜೀವನ ತಲುಪಬಹುದಾದ ಮಟ್ಟ

7

ಜೀವನ ತಲುಪಬಹುದಾದ ಮಟ್ಟ

ಗುರುರಾಜ ಕರ್ಜಗಿ
Published:
Updated:

ಮೂರು ತಿಂಗಳು ಮೊದಲು ಒಂದು ಸುದ್ದಿಯನ್ನು ಓದಿದೆ. ಷಿಕಾಗೋದ ಹೊರವಲಯದಲ್ಲಿರುವ ಲೊಯೋಲಾ ವಿಶ್ವವಿದ್ಯಾಲಯಕ್ಕೆ ಮೈಕೆಲ್ ಕ್ವಿನ್‌ಲಾನ್ ಎನ್ನುವ ವ್ಯಕ್ತಿಯೊಬ್ಬ 4 ಕೋಟಿ ಡಾಲರ್‌ನಷ್ಟು ಅಂದರೆ ಸುಮಾರು ಇನ್ನೂರು ಕೋಟಿ ರೂಪಾಯಿ ಹಣವನ್ನು ದಾನ ಮಾಡಿದ್ದಾನೆ.ಇದು ನನಗೆ ಸಂತೋಷ ತಂದದ್ದು ಎರಡು ಕಾರಣಕ್ಕೆ. ಮೊದಲನೆಯದು ಒಂದು ವಿಶ್ವವಿದ್ಯಾಲಯದ ಬೆಳವಣಿಗೆಗೆ ಇಷ್ಟು ಹಣ ದೊರಕಿತಲ್ಲ ಎಂಬುದು. ಎರಡನೆಯದು, ದಾನ ಮಾಡಿದ ಮನುಷ್ಯನ ಜೀವನ ಚರಿತ್ರೆಯನ್ನು ಓದಿದ ನನಗೆ ಅವನ ಸಾಧನೆ ತಂದ ಬೆರಗು.ಮೈಕೆಲ್ ಕ್ವಿನ್‌ಲಾನ್ ತುಂಬ ಬಡತನದಲ್ಲಿ ಬೆಳೆದವನು. ಅಲ್ಲಿ ಇಲ್ಲಿ ಸಹಾಯ ಪಡೆದು ಲೊಯೋಲಾ ಕಾಲೇಜು ಸೇರಿದ. ಆದರೆ ಕಾಲೇಜನ್ನು ಮುಂದುವರೆಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಬಂತು. ಆಗ ಅವನ ಸ್ನೇಹಿತನೊಬ್ಬ ಅವನನ್ನು ಮನೆಗೆ ಕರೆದುಕೊಂಡು ಹೋದ.ಸ್ನೇಹಿತನ ತಾಯಿ ಆಗ ತಾನೇ ಪ್ರಾರಂಭವಾಗಿದ್ದ ಮ್ಯೋಕ್‌ಡೊನಾಲ್ಡ್ ಕಂಪೆನಿಯ ಮ್ಯೋನೇಜಿಂಗ್ ಡೈರೆಕ್ಟರ್ ಆಗಿದ್ದ ರೇ ಕ್ರಾಕ್‌ರವರಿಗೆ ಕಾರ್ಯದರ್ಶಿಯಾಗಿದ್ದಳು. ಈತನ ಮೇಲೆ ಕರುಣೆಯಿಂದ ಆಕೆ ತನ್ನ ಕಂಪೆನಿಯಲ್ಲಿ ಪುಟ್ಟ ಕೆಲಸ ನೀಡಿದಳು.ಅವನಿಗೆ ಸಂಬಳ ಆಗ ಅತ್ಯಂತ ಕನಿಷ್ಠವಾದ ತಾಸಿಗೆ ಎರಡು ಡಾಲರ್‌ಗಳಾಗಿತ್ತು. ಆತ ತನ್ನ ಕಾಲೇಜಿನ ಓದಿನೊಂದಿಗೆ ದಿನಕ್ಕೆ ಕನಿಷ್ಠ ನಾಲ್ಕು ತಾಸು ದುಡಿದು ಹಣ ಸಂಪಾದಿಸಿದ. ರಜೆ ದಿನಗಳಲ್ಲಿ, ದಿನಕ್ಕೆ ಹದಿನೆಂಟು ಗಂಟೆ ಮ್ಯೋಕ್‌ಡೊನಾಲ್ಡ್ ಕಂಪೆನಿಯಲ್ಲಿ ದುಡಿಯುತ್ತಿದ್ದ.ಪ್ರಾಮಾಣಿಕವಾದ ದುಡಿತ ಎಂದೂ ವ್ಯರ್ಥವಾಗುವುದಿಲ್ಲ. ಕಂಪನಿಯ ಅಧಿಕಾರಿಗಳು ಈತನನ್ನು ಮಾರಾಟದ ವಿಭಾಗಕ್ಕೆ ಸೇರಿಸಿಕೊಂಡರು. ನಂತರ ಪ್ರಾರಂಭವಾಯಿತು ಕ್ವಿನ್‌ಲಾನ್‌ನ ಬೆಳವಣಿಗೆ. ಅವನು ಸ್ಟೋರ್ ಮ್ಯೋನೇಜರನಾದ, ನಂತರ ತಯಾರಿಕಾ ಘಟಕದ ಮ್ಯೋನೇಜರನಾದ.ಮುಂದಿನ ಎರಡು ವರ್ಷಗಳಲ್ಲಿ ಕಂಪನಿಯ ಉಪಾಧ್ಯಕ್ಷನಾದ. 1987 ರಲ್ಲಿ ಅದೇ ಕಂಪನಿಯ ಅಧ್ಯಕ್ಷ ಹಾಗೂ ಮುಖ್ಯ ಆಡಳಿತಾಧಿಕಾರಿಯಾಗಿ ಹನ್ನೊಂದು ವರ್ಷ ಕೆಲಸ ಮಾಡಿದ. ಅವನ ಅಧಿಕಾರಾವಧಿಯಲ್ಲಿ ಮ್ಯೋಕ್‌ಡೊನಾಲ್ಡ್ ಕಂಪೆನಿ ಪ್ರಪಂಚದ ಅತ್ಯಂತ ದೊಡ್ಡ ಕಂಪೆನಿಗಳಲ್ಲಿ ಒಂದೆಂಬ ಹೆಸರು ಪಡೆಯಿತು.ಅವನು ಕಲಿತ ಲೊಯೋಲಾ ಕಾಲೇಜಿನ ಆಡಳಿತ ಮಂಡಳಿ ಅವನನ್ನು ತಮ್ಮ ಮಂಡಳಿಯ ನಿರ್ದೇಶಕನಾಗುವಂತೆ ಆಹ್ವಾನ ನೀಡಿತು. ಅದನ್ನು 1983 ರಲ್ಲಿ ಸೇರಿದ ಕ್ವಿನ್‌ಲಾನ್ 1999 ರಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡು ಇನ್ನೂ ಅದೇ ಹುದ್ದೆಯಲ್ಲಿದ್ದಾನೆ.ಆತ ಹೇಳುತ್ತಾನೆ,  `ನನ್ನ ಲೊಯೋಲಾ ಕಾಲೇಜು ನನಗೆ ಡಿಗ್ರಿಯನ್ನು ಮಾತ್ರ ಕೊಡಲಿಲ್ಲ, ಆತ್ಮವಿಶ್ವಾಸವನ್ನು ನೀಡಿತು, ಜೀವನದಲ್ಲಿ ಮೌಲ್ಯಗಳ ಮಹತ್ವವನ್ನು ತಿಳಿಸಿತು, ಎಲ್ಲರನ್ನೂ ಒಂದೇ ಸಮನಾಗಿ ನೋಡುವುದನ್ನು ಕಲಿಸಿತು ಮತ್ತು ಇವೆಲ್ಲಕ್ಕೂ ಮಿಗಿಲಾಗಿ ಹೇಗಾದರೂ ಮಾಡಿ ಸಮಾಜದ ಋಣವನ್ನು ತೀರಿಸುವ ಪಾಠ ನೀಡಿತು.ಇದು ಪ್ರತಿಯೊಂದು ಕಾಲೇಜು, ವಿಶ್ವವಿದ್ಯಾಲಯ ಮಾಡಲೇಬೇಕಾದ ಕೆಲಸವಲ್ಲವೇ?~.

ಈಗ ಕ್ವಿನ್‌ಲಾನ್ ನೀಡಿದ ಇನ್ನೂರು ಕೋಟಿ ರೂಪಾಯಿಗಳಿಂದ ಅವನ ಹೆಸರಿನಲ್ಲೆೀ ಒಂದು ಬೃಹತ್ ಮ್ಯೋನೇಜಮೆಂಟ್ ಸಂಸ್ಥೆ ನಿರ್ಮಾಣವಾಗುತ್ತಿದೆ. ಆದರೂ ಹೇಳುತ್ತಾನೆ `ನನ್ನ ಕಾಲೇಜು ನನಗೆ ಕೊಟ್ಟಿದ್ದನ್ನು ನಾನೆಂದಿಗೂ ಹಣದಿಂದ ಮರಳಿಸಲಾರೆ, ಕೇವಲ ಕೃತಜ್ಞತೆಯನ್ನು ಮಾತ್ರ ಸಲ್ಲಿಸಬಲ್ಲೆ~.ಕ್ವಿನ್‌ಲಾನ್‌ನ ಜೀವನ ನನಗೊಂದು ದೊಡ್ಡ ಪಾಠ ಕಲಿಸಿದೆ. `ನೀವು ಜೀವನವನ್ನು ಎಲ್ಲಿಂದ ಪ್ರಾರಂಭಿಸುತ್ತೀರಿ ಎಂಬುದು ಮುಖ್ಯವಲ್ಲ, ಆದರೆ ಕೊನೆಗೆ ಯಾವ ಮಟ್ಟವನ್ನು ತಲುಪುತ್ತೀರಿ ಎಂಬುದು ಮುಖ್ಯ~.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry